ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೀಯ ಸ್ಪರ್ಧೆಗೆ ಟ್ರಂಪ್‌ ಅನರ್ಹ: ಕೊಲೊರಾಡೊ ಸುಪ್ರೀಂ ಕೋರ್ಟ್‌ ತೀರ್ಪು

Published 20 ಡಿಸೆಂಬರ್ 2023, 12:48 IST
Last Updated 20 ಡಿಸೆಂಬರ್ 2023, 12:48 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ ಡೆನ್ವರ್‌: ಅಮೆರಿಕದ ಕ್ಯಾಪಿಟಲ್‌ (ಸಂಸತ್‌) ಮೇಲೆ 2021ರಲ್ಲಿ ನಡೆದ ದಾಳಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪಾತ್ರವಿರುವ ಕಾರಣ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸಲು ಟ್ರಂಪ್‌ ಅನರ್ಹರು ಎಂದು ಕೊಲೊರಾಡೊ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 

ಅಲ್ಲದೆ ರಿಪಬ್ಲಿಕನ್‌ ಅಧ್ಯಕ್ಷೀಯ ಪ್ರಾಥಮಿಕ ಮತದಾನದಿಂದ ಟ್ರಂಪ್‌ ಹೆಸರನ್ನು ಹೊರಗಿಡಲು ನ್ಯಾಯಾಲಯ ಆದೇಶಿಸಿದೆ.

ಮಾಜಿ ಅಧ್ಯಕ್ಷರ ಅನರ್ಹತೆಯು ಸಂವಿಧಾನದ 14ನೇ ತಿದ್ದುಪಡಿಯನ್ನು ಆಧರಿಸಿದೆ. ಅಮೆರಿಕದ ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸುವ ಅಧಿಕಾರಿಗಳು ‘ದಂಗೆಯಲ್ಲಿ ತೊಡಗಿದ್ದರೆ’, ಭವಿಷ್ಯದಲ್ಲಿ ಈ ಕಚೇರಿಯ ಪ್ರವೇಶವನ್ನು ತಿದ್ದುಪಡಿ ನಿಷೇಧಿಸುತ್ತದೆ.

ಮುಂದಿನ ವರ್ಷದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಲ್ಲಿ ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ 77 ವರ್ಷದ ಟ್ರಂಪ್ ಮುಂಚೂಣಿಯಲ್ಲಿದ್ದಾರೆ. ಕೊಲೊರಾಡೊ ಸುಪ್ರೀಂ ಕೋರ್ಟ್‌ ತೀರ್ಪು ಟ್ರಂಪ್‌ಗೆ ವ್ಯತಿರಿಕ್ತವಾಗಿರುವ ಕಾರಣ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಟ್ರಂಪ್‌ ಪರ ವಕೀಲರು ನಿರ್ಧರಿಸಿದ್ದಾರೆ.

2021ರ ಜನವರಿ 6ರಂದು ನಡೆದ ದಂಗೆಯಲ್ಲಿ ಟ್ರಂಪ್‌ ತೊಡಗಿಸಿಕೊಂಡಿದ್ದರು ಎಂಬ ವಿಚಾರಣಾ ನ್ಯಾಯಾಧೀಶರ ನಿರ್ಧಾರವನ್ನು ಕೊಲೊರಾಡೊ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಆದರೆ ನಿಷೇಧವು ಅಧ್ಯಕ್ಷ ಸ್ಥಾನದ ಚುನಾವಣೆಗೆ ಅನ್ವಯಿಸುವುದಿಲ್ಲ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು.

ನಾಗರಿಕ ಯುದ್ಧ ಯುಗದ ನಿಬಂಧನೆಗಳ ಅಡಿಯಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿರುವ ಕೋರ್ಟ್‌, ಈ ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ ಎಂದು ಹೇಳಿದೆ. 

ಕೊಲೊರಾಡೊ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು 4– 3 ನಿರ್ಧಾರದಡಿ ಈ ತೀರ್ಪು ಪ್ರಕಟಿಸಿದೆ. ರಾಜ್ಯದ ಹೊರಗೆ ಈ ತೀರ್ಪು ಅನ್ವಯಿಸುವುದಿಲ್ಲ. ಆದರೆ ಇತರ ರಾಜ್ಯಗಳಲ್ಲಿನ ನ್ಯಾಯಾಲಯಗಳು ಇದೇ ಹಾದಿಯಲ್ಲಿ ಮುನ್ನಡೆದರೆ ಟ್ರಂಪ್‌ಗೆ ಸಂಕಷ್ಟ ಎದುರಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕೊಲೊರಾಡೊ ಕೋರ್ಟ್‌ನ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಲಾಗುವುದು. ಅಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಟ್ರಂಪ್‌ ವಕ್ತಾರ ಸ್ಟೀವನ್‌ ಚೆಯುಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT