ವಾಷಿಂಗ್ಟನ್: ಇಡೀ ಜಗತ್ತಿನ ಕುತೂಹಲ ಕೆರಳಿಸಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪೂರ್ಣ ಫಲಿತಾಂಶ ಇನ್ನೂ ಪ್ರಟಕವಾಗಿಲ್ಲ.ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಡೆಮಾಕ್ರಟ್ ಪಕ್ಷದ ಜೋ ಬೈಡನ್ ಅವರು ಗೆಲುವಿನ ಸನಿಹ ತಲುಪಿದ್ದರೂ ಇನ್ನೂ ಕೆಲವು ರಾಜ್ಯಗಳ ಮತ ಎಣಿಕೆ ಪೂರ್ಣಗೊಳ್ಳಬೇಕಾಗಿದೆ. ಈ ರಾಜ್ಯಗಳ ಫಲಿತಾಂಶವೇ ಗೆಲುವಿನಲ್ಲಿ ನಿರ್ಣಾಯಕ ಎನಿಸಲಿದೆ.
538 ಪ್ರತಿನಿಧಿಗಳ ಪೈಕಿ 270 ಸದಸ್ಯರ ಬೆಂಬಲ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಬೈಡನ್ ಪರವಾಗಿ ರುವ 253 ಪ್ರತಿನಿಧಿಗಳು ಗೆಲುವು ಸಾಧಿಸಿದ್ದಾರೆ. ಅರಿಜೋನಾದಲ್ಲಿ ಬೈಡನ್ ಅವರಿಗೆ ಮುನ್ನಡೆ ಇದೆ. ಅಲ್ಲಿನ ಪ್ರತಿನಿಧಿ ಗಳ ಸಂಖ್ಯೆ 11. ಇದನ್ನೂ ಸೇರಿಸಿ
ಕೊಂಡರೆ ಬೈಡನ್ ಅವರಿಗೆ 264 ಸದಸ್ಯರ ಬೆಂಬಲ ಸಿಕ್ಕಂತಾಗುತ್ತದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ರುವ 213 ಮಂದಿ ಆಯ್ಕೆಯಾಗಿದ್ದಾರೆ.
ಜಾರ್ಜಿಯಾ, ಪೆನ್ಸಿಲ್ವೇನಿಯಾ, ನಾರ್ಥ್ ಕೆರೊಲಿನಾ ಮತ್ತು ನೆವಾಡಾ ರಾಜ್ಯಗಳ ಫಲಿತಾಂಶ ಇನ್ನೂ ಪ್ರಕಟ ಆಗಿಲ್ಲ. ಟ್ರಂಪ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಆಗಬೇಕಿದ್ದರೆ ಈ ಎಲ್ಲ ರಾಜ್ಯಗಳಲ್ಲಿಯೂ ಗೆಲುವು ಸಾಧಿಸಬೇಕು. ಬೈಡನ್ ಅವರು ನೆವಾಡಾ ರಾಜ್ಯದಲ್ಲಿ ಗೆದ್ದರೆ ಸಾಕು. ಇಲ್ಲಿನ ಪ್ರತಿನಿಧಿಗಳ ಸಂಖ್ಯೆ ಆರು. ಈ ರಾಜ್ಯದಲ್ಲಿ ಬೈಡನ್ ಅವರು ಅಲ್ಪ ಮುನ್ನಡೆ ಹೊಂದಿದ್ದಾರೆ.
ಅಂಚೆ ಮತಗಳ ಎಣಿಕೆ ಆರಂಭ ವಾದ ಬಳಿಕ, ಟ್ರಂಪ್ ಅವರಿಗೆ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿ ಯಾದಲ್ಲಿ ಇದ್ದ ಮುನ್ನಡೆಯ ಅಂತರ ಕಡಿಮೆಯಾಗಿದೆ. ನಾರ್ಥ್ ಕೆರೊಲಿನಾದಲ್ಲಿ ಟ್ರಂಪ್ ಅವರಿಗೆ ಅಲ್ಪ ಮುನ್ನಡೆ ಮಾತ್ರ ಇದೆ.
2016ರ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾದಲ್ಲಿ ಟ್ರಂಪ್ ಅವರು ಗೆಲುವು ಸಾಧಿಸಿದ್ದರು. 2016ರಲ್ಲಿ ಟ್ರಂಪ್ ಅವರ ಪ್ರತಿಸ್ಪರ್ಧಿಯಾಗಿದ್ದ ಹಿಲರಿ ಕ್ಲಿಂಟನ್ ಅವರಿಗೆ ನೆವಾಡಾದಲ್ಲಿ ಗೆಲುವು ದೊರೆತಿತ್ತು. ಈ ರಾಜ್ಯವು ಡೆಮಾಕ್ರಟ್ ಪಕ್ಷದ ಪರವಾಗಿ ವಾಲುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ. ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಟ್ರಂಪ್ ಅವರು ಹೇಳಿದ್ದಾರೆ. ಟ್ರಂಪ್ ಪರ ಮತ್ತು ವಿರುದ್ಧ ಪ್ರತಿಭಟನೆ
ಗಳು ಆರಂಭವಾಗಿವೆ. ಮತ ಎಣಿಕೆ ನಡೆಯುತ್ತಿಲ್ಲ ಎಂಬ ವದಂತಿಗಳಿಂದ ಕೆರಳಿದ್ದ ಟ್ರಂಪ್ ಅವರ ಬೆಂಬಲಿಗರು ಅರಿಜೋನಾದ ಫೀನಿಕ್ಸ್ ಮತ ಎಣಿಕೆ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 200 ಮಂದಿಯ ಗುಂಪಿನಲ್ಲಿದ್ದ ಕೆಲವರಲ್ಲಿ ಬಂದೂಕುಗಳೂ ಇದ್ದವು.
ಇತರ ಕೆಲವು ನಗರಗಳಲ್ಲಿ ಟ್ರಂಪ್ ವಿರೋಧಿಗಳು ಪ್ರತಿಭಟನೆ ನಡೆಸಿದ್ದಾರೆ. ನ್ಯೂಯಾರ್ಕ್ ಮತ್ತು ಪೋರ್ಟ್‌ಲ್ಯಾಂಡ್ ನಲ್ಲಿ ಪ್ರತಿಭಟನೆ ನಡೆಸಿದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಇಂತಹ ನೂರಕ್ಕೂ ಹೆಚ್ಚು ಪ್ರತಿಭಟನೆಗಳನ್ನು ನಡೆಸಲು ಯೋಜಿಸಲಾಗಿದೆ.
ಪ್ರಮೀಳಾ ಗೆಲುವಿನ ಸಂಭ್ರಮ
ಭಾರತ ಮೂಲದ ಪ್ರಮೀಳಾ ಜಯಪಾಲ್ ಅವರು ವಾಷಿಂಗ್ಟನ್ ರಾಜ್ಯದಿಂದ ಅಮೆರಿಕದ ಸೆನೆಟ್‌ಗೆ ಭಾರಿ ಬಹುಮತದಿಂದ ಮರು ಆಯ್ಕೆಯಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿರುವ ಅವರ ಅಪ್ಪ–ಅಮ್ಮನ ಮನೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಡೆಮಾಕ್ರಟ್ ಪಕ್ಷದ ಪ್ರಮೀಳಾ ಅವರು ವಾಷಿಂಗ್ಟನ್ ರಾಜ್ಯದಲ್ಲಿ ರಿಪಬ್ಲಿಕನ್ ಪಕ್ಷದ ಕ್ರೆಗ್ ಕೆಲ್ಲರ್ ವಿರುದ್ಧ ಜಯಗಳಿಸಿದ್ದಾರೆ.
ಥಾಣೇದಾರಗೆ ವಿಜಯ
ಅಮೆರಿಕದ ಪ್ರತಿನಿಧಿಗಳ ಸಭೆಗೆ ಮಿಷಿಗನ್ ಕ್ಷೇತ್ರದಿಂದ ಶ್ರೀ ಥಾಣೇದಾರ ಆಯ್ಕೆ ಆಗಿದ್ದಾರೆ. ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಇವರು ವಿಜ್ಞಾನಿ ಮತ್ತು ಉದ್ಯಮಿ. 65 ವರ್ಷದ ಅವರು ಈ ಹಿಂದೆ ಅಮೆರಿಕದಲ್ಲಿ ರಾಜ್ಯಪಾಲರ ಹುದ್ದೆಗೂ ಸ್ಪರ್ಧಿಸಿದ್ದರು.
***
ಪ್ರಜಾಪ್ರಭುತ್ವವನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಈಗ ಮತ್ತು ಎಂದೆಂದೂ ಇದು ಸಾಧ್ಯವಾಗದು
- ಬೈಡನ್, ಡೆಮಾಕ್ರಟ್ ಅಭ್ಯರ್ಥಿ
***
ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಷಿಗನ್ ಎಲ್ಲೆಡೆಯೂ ಅವರು ಬೈಡನ್ ಪರವಾದ ಮತಗಳನ್ನು ಹುಡುಕುತ್ತಿದ್ದಾರೆ. ಇದು ನಮ್ಮ ದೇಶಕ್ಕೆ ಒಳ್ಳೆಯದಲ್ಲ
- ಡೊನಾಲ್ಡ್ ಟ್ರಂಪ್, ರಿಪಬ್ಲಿಕನ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.