465 ಸದಸ್ಯ ಬಲದ ಜಪಾನ್ ಸಂಸತ್‌ನ ಕೆಳಮನೆ ‘ಹೌಸ್ ಆಫ್ ರಿಪ್ರಸಂಟೇಟಿವ್ಸ್’ನಲ್ಲಿ ಎಲ್‌ಡಿಪಿ 258 ಸ್ಥಾನಗಳನ್ನು ಹೊಂದಿದೆ. 38 ಸ್ಥಾನಗಳನ್ನು ಹೊಂದಿರುವ ಕೊಮಿಯಿಟೊ ಪಕ್ಷದ ಜತೆ ಸರ್ಕಾರ ನಡೆಸುತ್ತದೆ.
ಇತ್ತೀಚೆಗೆ ಜಪಾನ್‌ನಲ್ಲಿ ಎಲ್‌ಡಿಪಿಯ ಜನಪ್ರಿಯತೆಯ ರ್‍ಯಾಂಕಿಂಗ್ ಕುಸಿಯುತ್ತಿದೆ ಎಂಬುದನ್ನು ಮನಗಂಡು ಹಾಗೂ ಸರ್ಕಾರದ ಮಟ್ಟದಲ್ಲಿ ಹಲವು ಹಗರಣಗಳು ಕೇಳಿ ಬಂದಿದ್ದರಿಂದ ಎಲ್‌ಡಿಪಿ ನಾಯಕ, ಪ್ರಧಾನಿ ಪುಮಿಯೊ ಕಿಶಿಡಾ ಅವರು ನಾಯಕತ್ವ ತ್ಯಜಿಸುವುದಾಗಿ ಆಗಸ್ಟ್‌ನಲ್ಲಿ ಘೋಷಣೆ ಮಾಡಿದ್ದರು.
ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಂಡಿರುವ ಇಶಿಬಾ ಅವರು ತಮ್ಮ ಪಕ್ಷದ ಸದಸ್ಯರ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಕಳೆದ ಐದು ಬಾರಿ ಎಲ್‌ಡಿಪಿ ನಾಯಕನ ಆಯ್ಕೆಯ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಅವರು ಇದು ಕೊನೆಯ ಚುನಾವಣೆ, ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.
ಜಪಾನ್‌ನಲ್ಲಿ ರಾಜಪ್ರಭುತ್ವ ಜಾರಿಯಲ್ಲಿದೆ. ಸಂಸತ್ತಿನ (ಡಯಟ್) ಕೆಳಮನೆಯಾದ ಹೌಸ್ ಆಫ್ ರಿಪ್ರಸಂಟೇಟಿವ್ಸ್‌ನಲ್ಲಿ ಬಹುಮತ ಪಡೆದಿರುವ ಪಕ್ಷದ ನಾಯಕನನ್ನು ಪ್ರಧಾನ ಮಂತ್ರಿಯನ್ನಾಗಿ ಅಲ್ಲಿನ ರಾಜ ನೇಮಿಸುತ್ತಾರೆ. ರೈವಾ ರಾಜಮನೆತನದ ನುರುಹಿಟೊ ಅವರು ಜಪಾನ್‌ನ ರಾಜರಾಗಿದ್ದಾರೆ.
ಪ್ರಸ್ತುತ ಹೌಸ್ ಆಫ್ ರಿಪ್ರಸಂಟೇಟಿವ್ಸ್‌ಗೆ 2025ರ ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ (ನಾಲ್ಕು ವರ್ಷದ ಅವಧಿ) ನಡೆಯಲಿದೆ. ಅಲ್ಲಿ ಮತ್ತೆ ಎಲ್‌ಡಿಪಿ ವಿಜಯ ಸಾಧಿಸಿದರೆ ಇಶಿಬಾ ಅವರು ಪ್ರಧಾನಿಯಾಗಿ ಮುಂದುವರೆಯುವ ಸಾಧ್ಯತೆ ಇದೆ.
ಎಲ್‌ಡಿಪಿಯ ಜನಪ್ರಿಯ ನಾಯಕರಾಗಿದ್ದ ದಿವಂಗತ ಮಾಜಿ ಪ್ರಧಾನಿ ಶಿಂಜೊ ಅಭೆ ಅವರನ್ನು 2022ರ ಜುಲೈ 28 ರಂದು ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದ. ಅವರ ನಿಧನದ ನಂತರ ಎಲ್‌ಡಿಪಿ ನಾಯಕತ್ವದಲ್ಲಿ ಬಿಕ್ಕಟ್ಟುಗಳು ಸಂಭವಿಸುತ್ತಲೇ ಇವೆ.