ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ: ಖಾಸಗಿ ಸೇನಾ ಪಡೆ ಕಟ್ಟಿ ಪುಟಿನ್ ವಿರುದ್ಧ ತಿರುಗಿ ಬಿದ್ದ ಪ್ರಿಗೊಝಿನ್‌ ಯಾರು?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ತಲೆನೋವು ತಂದ ಪಿಎಂಸಿ ವ್ಯಾಗ್ನರ್ ಗ್ರೂಪ್‌ನ ಯೆವ್ಗೆನಿ ಪ್ರಿಗೊಝಿನ್‌
Published 24 ಜೂನ್ 2023, 11:45 IST
Last Updated 24 ಜೂನ್ 2023, 11:45 IST
ಅಕ್ಷರ ಗಾತ್ರ

ಬೆಂಗಳೂರು: ರಷ್ಯಾ ಸೇನಾ ನಾಯಕತ್ವ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ತೊಡೆ ತಟ್ಟಿರುವ ಖಾಸಗಿ ಮಿಲಿಟರಿ ಪಡೆ ‘ಪಿಎಂಸಿ ವ್ಯಾಗ್ನರ್ ಗ್ರೂಪ್’ ರಷ್ಯಾದಲ್ಲಿ ಕೋಲಾಹಲ ಎಬ್ಬಿಸಿದೆ.

ರಣರಾಕ್ಷಸರ ಪಡೆಯಾಗಿರುವ ಈ ವ್ಯಾಗ್ನರ್ ಗ್ರೂಪ್ ಅನ್ನು ಉಕ್ರೇನ್ ವಿರುದ್ಧ ಕದನಕ್ಕೆ ಹಾಗೂ ಸ್ವದೇಶದಲ್ಲಿ ತನ್ನ ವಿರುದ್ಧ ಸಂಚು ಮಾಡುವವರನ್ನು ಮುಗಿಸಲು ಸ್ವತಃ ಪುಟಿನ್ ಅವರೇ ಪೋಷಿಸಿದ್ದರು.

25 ಸಾವಿರಕ್ಕೂ ಹೆಚ್ಚು ಬಲಿಷ್ಠ ಹೋರಾಟಗಾರರನ್ನು ಹೊಂದಿರುವ ಪಡೆಯನ್ನು ಹುಟ್ಟಿಹಾಕಿದ್ದು ಪುಟಿನ್ ಪರಮಾಪ್ತ ಎಂದು ಗುರುತಿಸಿಕೊಂಡಿದ್ದ ರಷ್ಯಾದ 64 ವರ್ಷದ ಯೆವ್ಗೆನಿ ಪ್ರಿಗೊಝಿನ್‌.

ಸದ್ಯ ಈ ಪ್ರಿಗೊಝಿನ್‌ ಯಾರು? ಆತನ ಇತಿಹಾಸ ಏನು? ಎಂಬುದು ಕುತೂಹಲ ಮೂಡಿಸಿದೆ.

ಬಾಲ್ಯದಿಂದಲೂ ಅಕ್ರಮಣಕಾರಿ ಸ್ವಭಾವದ ವ್ಯಕ್ತಿ

1961 ರಲ್ಲಿ ಸೋವಿಯತ್ ಯೂನಿಯನ್‌ನ ಲೆನಿನ್‌ಗಾರ್ಡ್‌ನಲ್ಲಿ (ಈಗಿನ ಸೇಂಟ್‌ಪೀಟರ್ಸ್‌ಬರ್ಗ್) ಜನಿಸಿದ್ದ ಪ್ರಿಗೊಝಿನ್‌ ಬಾಲ್ಯದಿಂದಲೂ ತುಂಬಾ ಆಕ್ರಮಣಕಾರಿಯಾಗಿ ಬೆಳೆದವ. ಹುಡುಗನಾಗಿದ್ದಾಗಲೇ ಸ್ಥಳೀಯ ಮಾಫಿಯಾದವರ ಜೊತೆ ಸೇರಿ ಭಾರಿ ಪ್ರಮಾಣದ ಹಣ ದರೋಡೆ ಮಾಡಿದ್ದ. ಈ ಅಪರಾಧಕ್ಕಾಗಿ ಆತನನ್ನು 9 ವರ್ಷ ಬಾಲ ಮಂದಿರದಲ್ಲಿ ಇರಿಸಲಾಗಿತ್ತು.

ಅಲ್ಲಿಂದ ಬಿಡುಗಡೆಯಾಗಿ ಬಂದ ನಂತರ ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಪ್ರಿಗೊಝಿನ್‌ ಕೆಲವೇ ದಿನಗಳಲ್ಲಿ ಆ ಊರಲ್ಲಿ ಹೋಟೆಲ್ ಉದ್ಯಮಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ. 2004 ರಿಂದ ಮಿಲಿಟರಿ ಸಿಬ್ಬಂದಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ, ಕಚೇರಿಗಳಿಗೆ ಆಹಾರ ಪೂರೈಕೆ ಮಾಡುವ ಕಾಂಟ್ರಾಕ್ಟ್‌ ಅನ್ನು (ಕೇಟರಿಂಗ್ ಉದ್ಯಮ) ಶುರು ಮಾಡಿದ.

ಅಲ್ಲಿಂದ ಪುಟಿನ್ ಸಾಂಗತ್ಯ ಬೆಳೆಸಿಕೊಂಡು ಪ್ರಿಗೊಝಿನ್‌ ಕ್ರಮೇಣ ಅವರಿಗೆ ಆಪ್ತ ಆಗುತ್ತಾ ಬಂದಿದ್ದ. 2014 ರಲ್ಲಿ ಪುಟಿನ್ ರನ್ನು ಪುಸಲಾಯಿಸಿ ಪಿಎಂಸಿ ವ್ಯಾಗ್ನರ್ ಗ್ರೂಪ್ ಎಂಬ ಖಾಸಗಿ ಸೇನಾಪಡೆಯನ್ನು ಅಸ್ತಿತ್ವಕ್ಕೆ ತಂದ. ಪ್ರಿಗೊಝಿನ್‌ನಲ್ಲಿದ್ದ ಆಕ್ರಮಣಕಾರಿ ಗುಣವನ್ನು ಕಂಡಿದ್ದ ಪುಟಿನ್ ಅದಕ್ಕೆ ಬೆಂಬಲ ನೀಡುತ್ತಾ ಬಂದರು.

ಪುಟಿನ್ ಬೆಂಬಲದಿಂದ ಸೇಂಟ್‌ಪೀಟರ್ಸ್‌ಬರ್ಗ್ ಮೇಯರ್ ಆಗಿದ್ದ ಪ್ರಿಗೊಝಿನ್‌ ಹಣಕಾಸು ದೃಷ್ಟಿಯಿಂದಲೂ ಸಾಕಷ್ಟು ಪ್ರಭಾವಶಾಲಿಯಾಗಿ ಬೆಳೆದ. 

2022 ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾದ ದಾಳಿಗೆ ಉಕ್ರೇನ್ ಜಗ್ಗಲಿಲ್ಲ. ಇದರಿಂದ ಬೆದರಿದ ಪುಟಿನ್, ರಷ್ಯಾದಲ್ಲಿದ್ದುಕೊಂಡು ಉಕ್ರೇನ್ ಬೆಂಬಲಿಸುವರನ್ನು ಬಗ್ಗುಬಡಿಯಲು ಹಾಗೂ ಉಕ್ರೇನ್‌ ಹೋರಾಟದಲ್ಲಿ ಸೇನೆಗೆ ಸಹಾಯ ಮಾಡಲು ಈ ವ್ಯಾಗ್ನರ್ ಗ್ರೂಪ್‌ಗೆ ಹಸಿರು ನಿಶಾನೆ ತೋರಿದರು.

ಈ ನಡುವೆ ರಷ್ಯಾ ಅಧ್ಯಕ್ಷರ ವಿರೋಧಿಗಳನ್ನು, ಸರ್ಕಾರದ ವಿರೋಧಿಗಳನ್ನು ಹಾಗೂ ಅಮೆರಿಕವನ್ನು ಕಟುವಾಗಿ ಟ್ರೋಲ್ ಮಾಡಲು ಇಂಟರ್‌ನೆಟ್ ರಿಸರ್ಚ್ ಏಜನ್ಸಿ (ಐಆರ್‌ಎ) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ.

ಬಲಶಾಲಿ ಯುವಕರಿಗೆ ಬಲೆ

ವ್ಯಾಗ್ನರ್‌ ಪಡೆಗೆ ಕೆಲಸ ಮಾಡಲು ಪ್ರಿಗೊಝಿನ್‌, ಬಲಶಾಲಿ ಯುವಕರಿಗೆ ಭಾರಿ ವೇತನ, ಯುವತಿಯರ ಆಮಿಷ ತೋರಿಸಿ ಅವರಿಗೆ ಕಠಿಣ ತರಬೇತಿ ನೀಡಿ ದಾಳಿಗಿಳಿಸುತ್ತಿದ್ದ.

ಈ ಹಿಂದೆ ಈ ವ್ಯಾಗ್ನರ್ ಗ್ರೂಪ್, ಅಶ್ಲೀಲ ವಿಡಿಯೊಗಳ ತಾಣವಾದ ಪೋರ್ನ್ ಹಬ್‌ನಲ್ಲಿ ‘ಯುದ್ಧಕ್ಕೆ ಯುವಕರು ಬೇಕಾಗಿದ್ದಾರೆ’ ಎಂದು ಜಾಹೀರಾತು ಕೊಟ್ಟಿದ್ದು ಸುದ್ದಿಯಾಗಿತ್ತು.

ಕ್ರೂರತೆಗೆ ಹೆಸರು

ಪಿಎಂಸಿ ವ್ಯಾಗ್ನರ್ ಗ್ರೂಪ್ ಭಾರಿ ಕ್ರೂರತೆಗೆ ಹೆಸರಾಗಿದೆ. ಇದರ ಚಿನ್ಹೆಯನ್ನು ಭಯಾನಕವಾಗಿ ರೂಪಿಸಲಾಗಿದೆ. ಸಿರಿಯಾ, ಲಿಬಿಯಾ ಆಂತರಿಕ ಸಂಘರ್ಷಗಳಲ್ಲಿ ಈ ಪಡೆ ಖಾಸಗಿಯಾಗಿ ಕೆಲಸ ಮಾಡಿ ಕ್ರೂರತೆ ಮೆರೆದಿದೆ.

ಪ್ರಿಗೊಝಿನ್‌ ಉಕ್ರೇನ್ ಸೈನಿಕರನ್ನು ಅತ್ಯಂತ ಭೀಕರವಾಗಿ ಹತ್ಯೆಗೈಯಲು ಆದೇಶಿಸುತ್ತಿದ್ದ. ಮಹಿಳೆಯರು, ಮಕ್ಕಳ ಮೇಲೆ ದಯೆ ತೋರದೇ ದಾಳಿಗೆ ಮುಂದಾಗುತ್ತಿದ್ದ.

ಬಂಡಾಯಕ್ಕೆ ಕಾರಣ ಏನು?

ಏತನ್ಮಧ್ಯೆ ಪ್ರಿಗೊಝಿನ್‌ ಈ ಬಂಡಾಯದ ನಡೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಸೇನೆಯಲ್ಲಿರುವ ಪುಟಿನ್ ವಿರೋಧಿಗಳು ಪ್ರಿಗೊಝಿನ್‌ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದಾರೆ ಎಂದು ವರದಿಗಳು ಬಂದಿವೆ. ಕೆಲವು ತಿಂಗಳುಗಳ ಹಿಂದೆ ಪುಟಿನ್ ಮತ್ತು ಪ್ರಿಗೊಝಿನ್‌ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದ ಅವರನ್ನು ಪುಟಿನ್ ಅಧ್ಯಕ್ಷರ ಕಚೇರಿಯಿಂದ ದೂರ ಇಟ್ಟಿದ್ದರು ಎಂಬ ವರದಿಗಳು ಕೇಳಿ ಬಂದಿದ್ದವು.

'ನಾವು ಸೇನಾ ಪ್ರಧಾನ ಕಚೇರಿಯ ಒಳಗೆ ಇದ್ದೇನೆ. ನಮ್ಮ ಯೋಧರು ಸೇನಾ ಸೌಕರ್ಯಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ನಮ್ಮ ಬಲಿಷ್ಠ ಪಡೆಯು ರಷ್ಯಾ ಸೇನಾ ನಾಯಕತ್ವ ಉರುಳಿಸುವ ಸಲುವಾಗಿ ಸಾಯುವುದಕ್ಕೂ ಸಿದ್ಧವಾಗಿದೆ ಎಂದು ಪ್ರಿಗೊಝಿನ್‌ ಹೇಳಿದ್ದಾರೆ.

ವ್ಯಾಗ್ನರ್‌ ಗುಂಪು ವೊರೊನೆಝ್‌ ನಗರದಲ್ಲಿರುವ ಸೇನಾ ಸೌಕರ್ಯಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ದಕ್ಷಿಣ ಮಾಸ್ಕೊದ 500 ಕಿ.ಮೀ ಪ್ರದೇಶವನ್ನು ವಶದಲ್ಲಿರಿಸಿಕೊಂಡಿದೆ

ಇನ್ನೊಂದೆಡೆ ಈ ದಂಗೆ ಕಂಡು ದಂಗಾಗಿರುವ ಪುಟಿನ್ 'ವ್ಯಾಗ್ನರ್‌ ಗುಂಪು ಬೆನ್ನಿಗೆ ಚೂರಿ ಹಾಕಿದೆ, ಅದರ ಮುಖ್ಯಸ್ಥ ಪ್ರಿಗೊಝಿನ್‌ ದೇಶಕ್ಕೆ ಮೋಸ ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಆಂತರಿಕ ವಿಚಾರ

ರಷ್ಯಾದ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಯುರೋಪಿಯನ್ ಕೌನ್ಸಿಲ್, ಇದೊಂದು ಸಂಪೂರ್ಣವಾಗಿ ರಷ್ಯಾದ ಆಂತರಿಕ ವಿಚಾರ ಎಂದು ಹೇಳಿದೆ.

***

ಆಧಾರ: ಎಎಫ್‌ಪಿ, ರಾಯಿಟರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT