ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಪಾಲಿಗೆ ಮಾತು ವರ ಮತ್ತು ಶಾಪ

Last Updated 19 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಟ್ರಂಪ್ ಉದ್ಯಮಿಯಾಗಿ ಹೆಸರು ಮಾಡಿದ್ದರೂ, ಅತಿಹೆಚ್ಚು ಜನರ ಗಮನ ಸೆಳೆದದ್ದು ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ. ಚುನಾವಣೆಗೆ ಧುಮುಕಿದ ಮೇಲಷ್ಟೇ ಅಲ್ಲ, ಟ್ರಂಪ್ ಹಿಂದೆಯೂ ನಾಲಿಗೆಯನ್ನು ಅಡ್ಡಾದಿಡ್ಡಿ ಬಳಸಿದ್ದರು. 1992ರಲ್ಲಿ ಮೈಕ್ ಟೈಸನ್, ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದ ಸಂದರ್ಭದಲ್ಲಿ ಟೈಸನ್ ಪರ ಹೇಳಿಕೆ ನೀಡಿದ್ದರು. ಅತ್ಯಾಚಾರವನ್ನು ಕೀಳು ಮಾತಿನಲ್ಲಿ ಸಮರ್ಥಿಸಿಕೊಂಡಿದ್ದರು. 2004ರಲ್ಲಿ ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಕಂಪನಿ (NBC), ‘ದಿ ಅಪ್ರೆಂಟಿಸ್’ ಎನ್ನುವ ರಿಯಾಲಿಟಿ ಶೋ ಆರಂಭಿಸಿತು. ಉದ್ಯಮಿ ಆಗಬಯಸುವವರ ವ್ಯವಹಾರ ಕೌಶಲವನ್ನು ಒರೆಗೆ ಹಚ್ಚುವ ಕಾರ್ಯಕ್ರಮ ಅದು. ಅದರ ನಿರೂಪಕನಾಗಿ ಟ್ರಂಪ್ ಕಾರ್ಯ ನಿರ್ವಹಿಸಿದ್ದರು. ಟ್ರಂಪ್ ಆಕ್ರೋಶದ, ಅತಿರೇಕದ ಮಾತು ಆ ಕಾರ್ಯಕ್ರಮಕ್ಕೆ ಟಿಆರ್‌ಪಿ ತಂದುಕೊಡುತ್ತಿತ್ತು.

ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾದಾಗ ತಮ್ಮ ಮಾತನ್ನೇ ಬಂಡವಾಳವಾಗಿಸಿಕೊಂಡರು. ಉದ್ರೇಕಕಾರಿ ಮಾತನ್ನು ಲೀಲಾಜಾಲವಾಗಿ ಬಳಸಿದರು. ಅಮೆರಿಕ ಇಂದು ತೀವ್ರ ಸಂಕಷ್ಟದಲ್ಲಿದೆ. ಜಾಗತಿಕವಾಗಿ ನಾವು ದುರ್ಬಲ ರಾಷ್ಟ್ರವಾಗಿದ್ದೇವೆ. ಅದಕ್ಕೆ ನಮ್ಮ ರಾಜಕಾರಣಿಗಳೇ ಕಾರಣ ಎನ್ನುವುದನ್ನು ಒತ್ತಿಹೇಳಿದರು. ಮುಖ್ಯವಾಗಿ ಅಮೆರಿಕನ್ನರ ಕಳವಳ ಇರುವುದು ಉದ್ಯೋಗದ ಬಗ್ಗೆ. 2011ರಲ್ಲಿ ‘ಆಕ್ಯುಪಯ್ ವಾಲ್ ಸ್ಟ್ರೀಟ್’ ಎಂಬ ಹೆಸರಿನ ದೊಡ್ಡ ಚಳವಳಿಯೊಂದು ಅಮೆರಿಕದಲ್ಲಿ ಸಂಘಟಿತವಾಗಿತ್ತು. ಕೆಲಸ ಕಳೆದುಕೊಂಡವರು, ಅರೆಕಾಲಿಕ ಹುದ್ದೆಗಳಲ್ಲಿ ದುಡಿಯುತ್ತಿರುವವರು, ಸೋಷಿಯಲ್ ಸೆಕ್ಯುರಿಟಿ ಹಣವನ್ನೇ ನಂಬಿ ಬದುಕು ದೂಡುತ್ತಿರುವವರು ರಸ್ತೆಗೆ ಧುಮುಕಿ, ತಮ್ಮ ತಮ್ಮ ನಗರಗಳ ಪಾರ್ಕುಗಳಲ್ಲಿ ಹಗಲು ರಾತ್ರಿ ಬೀಡುಬಿಟ್ಟು, ಸರ್ಕಾರದ ನೀತಿಯ ವಿರುದ್ಧ ಪ್ರತಿಭಟಿಸಿದ್ದರು. ಸರ್ಕಾರ ವಲಸೆ ಕುರಿತ ಕಾನೂನನ್ನು ಬಿಗಿಗೊಳಿಸಬೇಕು ಎಂದು ಆಗ್ರಹಿಸಿದ್ದರು.

ಟ್ರಂಪ್ ಅಮೆರಿಕನ್ನರ ಉದ್ಯೋಗ ಅಭದ್ರತೆಯನ್ನು ಚೆನ್ನಾಗಿ ಬಳಸಿಕೊಂಡರು. ಕುಸಿಯುತ್ತಿರುವ ಆದಾಯ ಮಟ್ಟ ಹಾಗೂ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದ ಜನರನ್ನು ಓಲೈಸುವ ಕೆಲಸಕ್ಕೆ ಮುಂದಾದರು. ಉದ್ಯೋಗ ನಷ್ಟಕ್ಕೆ ಕಾರಣ ಮೆಕ್ಸಿಕೊ ಎಂದು ಕಿಡಿ ಕಾರಿದರು. ಅಕ್ರಮ ವಲಸಿಗರು ಪ್ರತಿದಿನ ಅಮೆರಿಕ ಪ್ರವೇಶಿಸುತ್ತಿದ್ದಾರೆ. ಜೊತೆಗೆ ಮಾದಕ ವಸ್ತುಗಳನ್ನೂ ತರುತ್ತಿದ್ದಾರೆ. ಅಮೆರಿಕನ್ನರ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ. ನಾನು ಅಧ್ಯಕ್ಷನಾದರೆ, ಅಮೆರಿಕದ ಗಡಿಯನ್ನು ಭದ್ರಪಡಿಸುವುದು ಮುಖ್ಯ ಆದ್ಯತೆ ಎಂದು ಟ್ರಂಪ್ ಮಾತಿನಲ್ಲೇ ಗೋಡೆಕಟ್ಟಿದರು! ಜೊತೆಯಲ್ಲಿ ತೆರಿಗೆ ಇಳಿಸಿ, ಸಣ್ಣ ಉದ್ದಿಮೆ ಪ್ರೋತ್ಸಾಹಿಸುವ ಮಾತನಾಡಿದರು. ಟ್ರಂಪ್ ಮಾತಿನಲ್ಲಿ ಹುರುಪಿತ್ತು, ಆಕ್ರೋಶವಿತ್ತು. ಇದರಿಂದಾಗಿ ಸಾಂಪ್ರದಾಯಿಕವಾಗಿ ಡೆಮಾಕ್ರಟಿಕ್ ಪಕ್ಷದ ಮತ ಬ್ಯಾಂಕ್ ಆಗಿದ್ದ ಕಾಲೇಜು ಪದವೀಧರರು, ಕಾಖಾ೯ನೆಗಳ ಕೆಲಸಗಾರರು ಹಾಗೂ ಕಡಿಮೆ ಸ೦ಬಳಕ್ಕೆ ದುಡಿಯುತ್ತಿರುವ ನೌಕರರು ಟ್ರ೦ಪ್ ಅವರತ್ತ ನೋಡುವಂತಾಯಿತು.

ಜೊತೆಗೆ 9/11 ಪ್ರಕರಣದ ನಂತರ ಜಾಗತಿಕ ಭಯೋತ್ಪಾದನೆ, ಅಮೆರಿಕದ ಚುನಾವಣಾ ವಿಷಯವಾಗಿ ಸೇರ್ಪಡೆಗೊಂಡಿದೆ. ಭದ್ರತೆ ಅಮೆರಿಕನ್ನರ ಪ್ರಥಮ ಆದ್ಯತೆಯಾಗಿದೆ. ತಾವೇ ಬೆಳೆಯಲು ಬಿಟ್ಟ ಐಎಸ್ ಸಂಘಟನೆ ಇಂದು ಅಮೆರಿಕನ್ನರ ನಿದ್ರೆ ಕಸಿದಿದೆ. ಟ್ರಂಪ್, ಭದ್ರತೆಯ ವಿಷಯದ ಬಗ್ಗೆ ಹೆಚ್ಚು ಮಾತನಾಡಿದರು. ‘ಐಎಸ್ ದಮನ ಮಾಡಲು ರಷ್ಯಾ ಜೊತೆ ಕೈಜೋಡಿಸುವುದು ಅಗತ್ಯ. ರಾಜಕೀಯ ಇಚ್ಛಾಶಕ್ತಿ ತೋರಿದ್ದರೆ, ಐಎಸ್ ಚಿಗುರುವ ಹಂತದಲ್ಲೇ ಚಿವುಟಬಹುದಿತ್ತು. ಒಬಾಮ ಮತ್ತು ಹಿಲರಿ ಆ ನಿಟ್ಟಿನಲ್ಲಿ ವಿಫಲರಾದರು. ಅಮೆರಿಕದ ಒಳಗೂ ಹಲವು ಭಯೋತ್ಪಾದಕ ಕೃತ್ಯಗಳು ಜರುಗುತ್ತಿವೆ. ಸ್ಫೋಟ ಸಾಮಾನ್ಯ ಎಂಬಂತಾಗಿದೆ. ರಾಜಕೀಯವಾಗಿ ಓಲೈಸುವ ಮಾತನಾಡದೇ ಸಮಸ್ಯೆಯ ಮೂಲ ಹುಡುಕಬೇಕು. ಇಸ್ಲಾಂ ತೀರ್ವಗಾಮಿಗಳು ಜಗತ್ತಿನ ಶಾಂತಿ ಕದಡುತ್ತಿದ್ದಾರೆ ಎಂದು ಧೈರ್ಯವಾಗಿ ಹೇಳಬೇಕು’ ಎಂದು ಆಗ್ರಹಿಸಿದರು. ಅಮೆರಿಕದ ಸ್ಯಾನ್ ಬರ್ನಾಡಿನೊದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯಿಸುತ್ತಾ ‘ವಿಷಯ ಇತ್ಯರ್ಥ ಆಗುವವರೆಗೆ ಮುಸ್ಲಿಮರಿಗೆ ವೀಸಾ ನೀಡುವುದನ್ನು ನಿಲ್ಲಿಸಬೇಕು’ ಎಂದು ಆಕ್ರೋಶದಲ್ಲೇ ನುಡಿದರು. ಈ ಮಾತನ್ನು ಮಾಧ್ಯಮಗಳು ಟೀಕಿಸಿದರೂ, ಅಮೆರಿಕದ ಜನಸಾಮಾನ್ಯರು ಸ್ವಾಗತಿಸಿದರು. ಟ್ರಂಪ್ ಮಾತು ಮತವಾಗಿ ಬದಲಾಯಿತು. ತಮ್ಮದೇ ಪಕ್ಷದ ಇತರ ಅಭ್ಯರ್ಥಿಗಳನ್ನು ಹಿಂದಿಕ್ಕಿ ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾದರು.

ಕೇವಲ ಅಮೆರಿಕವನ್ನು ಬಾಧಿಸುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ಟ್ರಂಪ್ ಮಾತಿನ ಕಾಠಿಣ್ಯ ತೋರಿದ್ದರೆ, ಅದು ಅವರಿಗೆ ಲಾಭವಾಗಿ ಪರಿಣಮಿಸುತ್ತಿತ್ತು. ಒರಟು ಮಾತನ್ನು ಜನ ಸಹಿಸಿಕೊಳ್ಳುತ್ತಿದ್ದರು. ಆದರೆ ಟ್ರಂಪ್ ತಮ್ಮನ್ನು ವಿರೋಧಿಸಿದವರ ಮೇಲೆ, ವೈಯಕ್ತಿಕ ಟೀಕೆಗೆ ಇಳಿದರು. ರಿಪಬ್ಲಿಕನ್ ಪಕ್ಷದ ಮತ್ತೊಬ್ಬ ಸ್ಪರ್ಧಿ ಮಾಜಿ ಗವರ್ನರ್ ಜೆಬ್ ಬುಷ್ ಅವರನ್ನು ಅಶಕ್ತ, ಸೋಲಿನ ಸರದಾರ ಎಂದು ಕರೆದರು. ಪ್ರತಿಸ್ಪರ್ಧಿ ಟೆಡ್ ಕ್ರೂಸ್ ಅವರನ್ನು ಸುಳ್ಳುಗಾರ ಎಂದು ಮೂದಲಿಸಿದರು. ಟೆಡ್ ಕ್ರೂಸ್ ಅವರ ತಂದೆಯನ್ನು ವಲಸಿಗ ಎಂದು ಜರಿದರು. ಕೆನಡಿಯವರ ಹತ್ಯೆಯಲ್ಲಿ ಟೆಡ್ ಕ್ರೂಸ್ ಅವರ ತಂದೆಯ ಪಾತ್ರವಿದೆ ಎಂದು ಆರೋಪಿಸುವುದಕ್ಕೂ ಟ್ರಂಪ್ ಹಿಂದೆ–ಮುಂದೆ ನೋಡಲಿಲ್ಲ. ಜೊತೆಗೆ ತಮ್ಮ ಮತ್ತು ಟೆಡ್ ಕ್ರೂಸ್ ಅವರ ಪತ್ನಿಯನ್ನು ಹೋಲಿಸಿ, ಕ್ರೂಸ್ ಪತ್ನಿ ಕುರೂಪಿ ಮತ್ತು ದಡ್ಡಿ ಎಂಬ ಅತಿರೇಕದ ಮಾತುಗಳನ್ನಾಡಿದರು. ಈ ಕಾರಣದಿಂದಲೇ ರಿಪಬ್ಲಿಕನ್ ಪಕ್ಷದ ಇತರ ನಾಯಕರು ಟ್ರಂಪ್ ಅವರಿಂದ ದೂರ ಉಳಿದರು.

ಜೊತೆಗೆ ಟ್ರಂಪ್ ಅವರಿಗೆ ‘ಮಹಿಳಾ ವಿರೋಧಿ’ ಎಂಬ ಹಣೆಪಟ್ಟಿ ಅಂಟಿಕೊಂಡದ್ದು ಅವರು ಮಹಿಳೆಯರ ಬಗ್ಗೆ ಆಡಿದ ಹಗುರ ಮಾತುಗಳಿಂದ. ಟ್ರಂಪ್ ಮತ್ತು ಮಹಿಳೆಯರು ಎಂದು ಗೂಗಲ್‌ನಲ್ಲಿ ತಡಕಿದರೆ, ಕಳೆದ ಮೂರು ದಶಕಗಳಲ್ಲಿ ಟ್ರಂಪ್ ಮಹಿಳೆಯರ ಬಗ್ಗೆ ಆಡಿರುವ ಅಸಭ್ಯ ಮಾತುಗಳ ಪಟ್ಟಿಯೇ ಸಿಗುತ್ತದೆ. ತಮ್ಮ ಪ್ರತಿಸ್ಪರ್ಧಿ ಹಿಲರಿ ಅವರನ್ನು, ಅಶಕ್ತೆ ಎಂದು ಟ್ರಂಪ್ ಅಣಕಿಸಿದ್ದರು. ಅದಕ್ಕೆ ಉತ್ತರವಾಗಿ ಹಿಲರಿ, ತಾವು ವಿದೇಶಾಂಗ ಕಾರ್ಯದರ್ಶಿಯಾಗಿ ಕೈಗೊಂಡ ವಿದೇಶ ಪ್ರವಾಸ, ಮಾಡಿಕೊಂಡ ಒಡಂಬಡಿಕೆಗಳ ಪಟ್ಟಿಕೊಟ್ಟು, ‘ಇಷ್ಟು ಮಾಡಿಯೂ ನನ್ನ ಸಾಮರ್ಥ್ಯದ ಬಗ್ಗೆ ಟ್ರಂಪ್ ಮಾತನಾಡುತ್ತಾರೆ ಎಂದರೆ, ಮಹಿಳೆಯೊಬ್ಬರು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದನ್ನು ಒಪ್ಪದ ಮನಸ್ಥಿತಿಯಲ್ಲಿ ಟ್ರಂಪ್ ಇದ್ದಾರೆ ಎಂದರ್ಥ’ ಎಂದು ತಿರುಗೇಟು ನೀಡಿದ್ದರು. ಮಾಜಿ ವಿಶ್ವಸುಂದರಿ ಅಲಿಸಿಯಾ ಮ್ಯಚಾಡೋ ತೂಕ ಹೆಚ್ಚಿಸಿಕೊಂಡ ಬಗ್ಗೆ ಟ್ರಂಪ್ ಕೊಂಕು ನುಡಿದಿದ್ದನ್ನು ಹಿಲರಿ, ಟ್ರಂಪ್ ಸಮ್ಮುಖದಲ್ಲೇ ಪ್ರಸ್ತಾಪಿಸಿ ಅವರಿಗೆ ಮುಜುಗರ ಉಂಟುಮಾಡಿದ್ದರು.

ಇಷ್ಟು ಸಾಲದು ಎಂಬಂತೆ, ಟ್ರಂಪ್ ಲೈಂಗಿಕ ದೌರ್ಜನ್ಯದ ಬಗ್ಗೆ ಇದೀಗ ಹಲವು ಮಹಿಳೆಯರು ಧ್ವನಿ ಎತ್ತುತ್ತಿದ್ದಾರೆ. ಮೊನ್ನೆಯಷ್ಟೇ, 74 ವರ್ಷದ ಜೆಸ್ಸಿಕಾ ಲೀಡ್ಸ್, ತಾವು ಟ್ರಂಪ್ ಅವರ ಜೊತೆ ವಿಮಾನದಲ್ಲಿ ಪ್ರಯಾಣಿಸುವಾಗ, ಟ್ರಂಪ್ ತಮ್ಮನ್ನು ಬೇಕೆಂದೇ ಸ್ಪರ್ಶಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ರಾಚೆಲ್ ಕ್ರೂಕ್ಸ್, ಟ್ರಂಪ್ ಟವರಿನ ಲಿಫ್ಟಿನಲ್ಲಿ ತಮ್ಮನ್ನು ಬಲವಂತವಾಗಿ ಚುಂಬಿಸಿದ್ದರು ಎಂಬ ಹೇಳಿಕೆ ನೀಡಿದ್ದಾರೆ. ‘ಸುಂದರ ತರುಣಿಯರನ್ನು ಕಂಡರೆ ನಾನು ತಡ ಮಾಡುವುದಿಲ್ಲ. ಅವರು ಆಯಾಸ್ಕಾಂತವಿದ್ದಂತೆ. ನಾನು ನೋಡಿದಾಕ್ಷಣ ಚುಂಬಿಸಲು ಆರಂಭಿಸುತ್ತೇನೆ’ ಎಂದು 2005ರಲ್ಲಿ ಟ್ರಂಪ್ ಆಡಿದ್ದ ಮಾತು ಅವರನ್ನು ಇದೀಗ ಇರಿಯುತ್ತಿದೆ.  ಮತದಾರರನ್ನು ಧ್ರುವೀಕರಿಸಿ, ಟ್ರಂಪ್ ಮತಪೆಟ್ಟಿಗೆಯನ್ನು ಭದ್ರಗೊಳಿಸುತ್ತಿದೆ ಎಂದುಕೊಳ್ಳುವ ಹೊತ್ತಿಗೆ, ಎಂದೋ ಆಡಿದ್ದ ಮಾತು ಮುನ್ನಲೆಗೆ ಬಂದು, ಟ್ರಂಪ್ ಅವರಿಗೆ ಮುಳುವಾಗುತ್ತಿದೆ.

ಬಿಡಿ, ಚುನಾವಣಾ ಸಂದರ್ಭದಲ್ಲಿ ಮುಖ್ಯ ವಿಷಯ ಬದಿಗೆ ಸರಿದು, ಇತರ ವಿಷಯಗಳು ಆದ್ಯತೆ ಪಡೆದುಕೊಳ್ಳುವುದು ಅಪರೂಪವೇನಲ್ಲ. 1964ರ ಚುನಾವಣೆಯಲ್ಲಿ ಹೆರಿಗೆಯ ಸುದ್ದಿ, ಅಭ್ಯರ್ಥಿಯ ಉಮೇದುವಾರಿಕೆಯನ್ನೇ ಪ್ರಶ್ನಿಸುವಷ್ಟು ಹಿರಿದಾಗಿ ಬೆಳೆದಿತ್ತು. ಆ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ನೆಲ್ಸನ್ ರಾಕ್ಫೆಲ್ಲರ್ ಉತ್ಸುಕರಾಗಿದ್ದರು. ಆದರೆ ಗೋಲ್ಡ್ ವಾಟರ್ ಅವರೊಂದಿಗೆ ತೀವ್ರ ಸ್ಪರ್ಧೆ ಇತ್ತು. ರಾಕ್ಫೆಲ್ಲರ್, ಪೋರ್ಡ್ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಐಸೆನ್ ಹೋವರ್ ಮತ್ತು ಫ್ರಾಂಕ್ಲಿನ್ ರೂಸ್ವೆಲ್ಟ್ ಆಡಳಿತದಲ್ಲೂ ಕೆಲಸ ಮಾಡಿದ್ದರು. ಪ್ರಾಥಮಿಕ ಚುನಾವಣೆಗೆ ಕೆಲವು ದಿನಗಳ ಮುಂಚೆಯಷ್ಟೇ ರಾಕ್ಫೆಲ್ಲರ್ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಅದು ಸುದ್ದಿಯಾದಾಗ, ಮಗುವಿಗೆ ಜನ್ಮ ನೀಡಿದವರು ಎರಡನೇ ಪತ್ನಿ, ಈತ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದ ಎಂಬುದನ್ನೂ ಸೇರಿಸಲಾಯಿತು. ‘ಮ್ಯಾಂಚೆಸ್ಟರ್ ಯೂನಿಯನ್’ ಪತ್ರಿಕೆ, ‘Wife Swapper' ಎಂದು ರಾಕ್ಫೆಲ್ಲರ್ ಅವರನ್ನು ಹೀಯಾಳಿಸಿತು. ‘Do you want a Leader or a Lover in the White House?' ಎಂದು ಓದುಗರನ್ನು ಪ್ರಶ್ನಿಸಿತ್ತು. ಟ್ರಂಪ್ ವಿಷಯದಲ್ಲಿ ಆ ಪ್ರಶ್ನೆ ಮತ್ತೊಮ್ಮೆ ಪುಟಿದೆದ್ದರೆ ಅಚ್ಚರಿಯೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT