ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮದ ಒಳಿತಿಗೆ ಪೇಟೆಂಟ್‌ಗಳ ಉಚಿತ ಹಂಚಿಕೆ

Last Updated 1 ಜುಲೈ 2014, 19:30 IST
ಅಕ್ಷರ ಗಾತ್ರ

ಸಾಂಪ್ರದಾಯಿಕ ಉದ್ದಿಮೆ ವಹಿ­ವಾಟು ಚಿಂತ­ನೆಯು ಕೆಲ ಸಂದರ್ಭ­ಗಳಲ್ಲಿ ಅವಿವೇ­ಕತನದ್ದು ಎಂದು ಭಾಸವಾಗಿ ಅದಕ್ಕೆ ಎಳ್ಳುನೀರು ಬಿಡಲಾಗುತ್ತದೆ. ಜಾಗತಿಕ ಉದ್ಯಮ ರಂಗದಲ್ಲಿ ಈಗ ಹೊಸದೊಂದು ಚಿಂತನೆ ಮೊಳಕೆ­ಯೊಡೆದಿದೆ. ಹಣ ಖರ್ಚು ಮಾಡಿ ಸಂಶೋಧನೆ ನಡೆಸಿ ಪಡೆದು­ಕೊಂಡಿದ್ದ ಪೇಟೆಂಟ್‌­ಗಳನ್ನು ಉದ್ಯಮದ ಒಳಿತಿಗೆ ಉಚಿತ­ವಾಗಿ ಹಂಚಿಕೆ ಮಾಡುವ ಆಲೋಚನೆಯೊಂದು ವಾಹನ ತಯಾ­ರಿಕಾ ರಂಗದಲ್ಲಿ ಜಾರಿಗೆ ಬಂದಿದೆ.

ಜಾಗತಿಕ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬ­ರಾಗಿ­ರುವ  ಇಲೊನ್ ಮಸ್ಕ್ ತಮ್ಮೆಲ್ಲ  ಸಂಶೋಧನೆ­ಗಳನ್ನು ಇಡೀ ಜಗತ್ತಿಗೆ ಉಚಿತವಾಗಿ ನೀಡಲು ಮುಂದಾ­ಗಿ  ಅಚ್ಚರಿ ಮೂಡಿಸಿದ್ದಾರೆ. ತಾವು ಪಡೆ­ದುಕೊಂಡಿದ್ದ ಪೇಟೆಂಟ್‌ಗಳನ್ನು ತಮ್ಮ ಉದ್ಯಮ ಪ್ರತಿಸ್ಪರ್ಧಿ ಸಂಸ್ಥೆಗಳೂ ಸೇರಿದಂತೆ ಯಾರು ಬೇಕಾ­ದರೂ ಬಳಸಿಕೊಳ್ಳ­ಬಹುದು ಎಂದೂ ಘೋಷಿಸಿದ್ದಾರೆ.

ಮಸ್ಕ್ ಅವರು, ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಮತ್ತು ಸದಾ ಹೊಸತನಕ್ಕೆ ತುಡಿಯುವ ಉದ್ಯಮಿಯಾಗಿದ್ದಾರೆ. ಇವರನ್ನು ಮೈಕ್ರೊಸಾಫ್ಟ್‌ನ ಬಿಲ್ ಗೇಟ್ಸ್, ಆ್ಯಪಲ್‌ನ   ದಿವಂಗತ ಸ್ಟೀವ್ ಜಾಬ್ಸ್ ಅವರ ಸಾಲಿಗೆ ಸೇರಿ­ಸಲಾ­ಗುತ್ತಿದೆ.  ಮಸ್ಕ್ ಅವರ ತಂತ್ರಜ್ಞಾನ ಆಧಾ­ರಿತ ವೈವಿಧ್ಯಮಯ ಆಸಕ್ತಿಗಳು ಮತ್ತು  ಅಸಾ­ಧಾರಣ ಸಾಮರ್ಥ್ಯವು ವಿಶ್ವದಾ­ದ್ಯಂತ ಕೈಗಾರಿ­ಕೋದ್ಯಮಿಗಳ ಮತ್ತು ಆರ್ಥಿಕ ತಜ್ಞರ ಗಮನ ಸೆಳೆದಿವೆ. ಹೊಸದಾಗಿ ಆರಂಭಿಸಲಾದ ಯಶಸ್ವಿ ಉದ್ಯಮಗಳನ್ನು ಖರೀದಿಸಿ ಅವುಗಳನ್ನು ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಿಸು­ವುದು ಮಸ್ಕ್ ಅವರಿಗೆ ಕರತಲಾಮಲಕವಾಗಿದೆ.

ವಿದ್ಯುನ್ಮಾನ ವಾಹನ ತಯಾರಿಕೆಯ ಅವರ ಉದ್ದಿಮೆಯು ಭಾಗಶಃ ಯಶಸ್ವಿಯಾಗಿದೆ. ವಿಶ್ವದ ವಾಹನ ತಯಾರಿಕಾ ರಂಗದಲ್ಲಿ ಇನ್ನಷ್ಟು ಹೊಸತನ ತರುವ ಅವರ ಕನಸಿಗೆ ಇದು ತಣ್ಣೀರು ಎರಚಿದೆ. ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಉತ್ತೇಜಿಸುವ ಅವರ ಹೆಬ್ಬಯಕೆಗೆ ನಿರೀಕ್ಷಿತ ರೀತಿ­ಯಲ್ಲಿ ಯಶಸ್ಸು ದೊರೆತಿಲ್ಲ. ಇವರ ಟೆಲ್ಸಾ ಮೋಟಾ­ರ್ಸ್‌ನ ಎಲೆಕ್ಟ್ರಾನಿಕ್ ವಾಹನ­ಗಳ ಮಾರಾಟ ನಿರೀಕ್ಷಿತ ಮಟ್ಟದಲ್ಲ್ಲಿ ಇಲ್ಲ.

ಕಳೆದ ವರ್ಷ ಅಮೆರಿಕದಲ್ಲಿ  ಟೆಲ್ಸಾ ಮೋಟಾರ್ಸ್‌ನ ಕೇವಲ 30 ಸಾವಿರ ವಾಹನಗಳು ಮಾರಾಟ­ವಾಗಿವೆ. ಪ್ರತಿಯೊಂದು ವಾಹನಕ್ಕೆ 70 ಸಾವಿರ ಡಾಲರ್ ಬೆಲೆ (₨ 42 ಲಕ್ಷ) ನಿಗದಿಯಾಗಿ­ರು­ವುದೂ ಮಾರಾಟ ಕಡಿಮೆಯಾಗಿರಲು ಕಾರ­ಣ­ವಾಗಿ­ರಬಹುದು. ಈ ಎಲ್ಲ ಪ್ರತಿ­ಕೂ­ಲತೆ­ಗಳ ಮಧ್ಯೆ, ಅವರು  ವಾಹನ ತಯಾರಿಕೆ ಉದ್ಯಮಕ್ಕೆ ಚೇತ­ರಿಕೆ ನೀಡ­ಬೇಕೆಂಬ ಉತ್ಸಾಹ ಕಳೆದು­ಕೊಂಡಿಲ್ಲ.

ವಾಹನದ ಬ್ಯಾಟರಿ ವಿನ್ಯಾಸದ ನೂರಕ್ಕೂ ಹೆಚ್ಚು ಪೇಟೆಂಟ್ ಸೇರಿದಂತೆ  ಮಸ್ಕ್  ಅವರ  ಕಂಪೆ­ನಿಯು 2 ಸಾವಿರಕ್ಕೂ ಹೆಚ್ಚು ಪೇಟೆಂಟ್‌­ಗಳನ್ನು ಇತರರ ಬಳಕೆಗೆ ಉಚಿತವಾಗಿ ಬಿಟ್ಟು­ಕೊಟ್ಟಿದೆ.

ಎಲೆಕ್ಟ್ರಿಕಲ್ ವಾಹನಗಳ ದಕ್ಷತೆ ಕಡಿಮೆ­ಯಾ­ಗಲು ಅವುಗಳ ಬ್ಯಾಟರಿಯ ಕಳಪೆ ಕಾರ್ಯ­ಕ್ಷಮ­ತೆಯೇ ಕಾರಣ ಎಂದು ಗುರುತಿಸಿರುವ  ಮಸ್ಕ್, ಬ್ಯಾಟರಿಯ ತೂಕ, ಜೀವಿತಾ­ವಧಿ, ಉಪಯುಕ್ತತೆ ಹೆಚ್ಚಳಕ್ಕೆ ಸಂಬಂಧಿಸಿದ ರಂಗದಲ್ಲಿ ಸಂಶೋಧನೆ ನಡೆಸಲು ಅಪಾರ ಪ್ರಮಾಣದಲ್ಲಿ ಹಣ ತೊಡ­ಗಿ­ಸಿದ್ದಾರೆ. ಇಂತಹ ಸಂಶೋಧನಾ ಕಾರ್ಯಕ್ರಮ­ಗಳಿಂದ ಅವರ ಸಂಸ್ಥೆಗೆ ಲಾಭ ದೊರೆಯುವುದು ನಿಜವಾ­ಗಿದ್ದರೂ, ಆರಂಭಿಕ ಯಶಸ್ಸು ಸೀಮಿತ­ವಾಗಿತ್ತು. ಇದು ಅವರು ಹೊಸ ರೀತಿಯಲ್ಲಿ ಚಿಂತನೆ ನಡೆಸಲು ಪ್ರೇರಣೆ ನೀಡಿದೆ.

ಎಲೆಕ್ಟ್ರಿಕಲ್ ವಾಹನ ತಯಾರಿಕಾ ರಂಗದಲ್ಲಿ ಮಾರಾಟ ಹೆಚ್ಚಳಗೊಳ್ಳಲು ಈ ವಲಯದಲ್ಲಿನ ಎಲ್ಲ ಉದ್ದಿಮೆ ಸಂಸ್ಥೆಗಳ ಸಹಕಾರ ತುಂಬ ಅಗತ್ಯ ಎಂದು ಮನಗಂಡಿರುವ  ಮಸ್ಕ್, ಸಾಂಪ್ರ­ದಾ­ಯಿಕ  ಇಂಧನ ಚಾಲಿತ ವಾಹನಗಳ ಸ್ಪರ್ಧೆ­ಯನ್ನು ಸಮರ್ಥವಾಗಿ ಎದುರಿಸಲು ಜಂಟಿ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಬಲವಾಗಿ ನಂಬಿದ್ದಾರೆ. ವರ್ಷಗಳ ಕಾಲ ನಡೆಸಿರುವ ಸಂಶೋಧನೆಗಳನ್ನು ಮತ್ತು ಖರೀದಿಸಿರುವ ಪೇಟೆಂಟ್‌ಗಳನ್ನು ತಮ್ಮ ಪ್ರತಿಸ್ಪರ್ಧಿಗಳ ಜತೆ ಹಂಚಿಕೊಳ್ಳಲು ಮುಂದಾಗುವ ಮೂಲಕ ಅವರು ವಾಹನ ತಯಾರಿಕಾ ಪ್ರಪಂಚದಲ್ಲಿ ತಮ್ಮ ಉದ್ದಿಮೆ ಸಂಸ್ಥೆಯ ಭವಿಷ್ಯವನ್ನೇ ಒತ್ತೆ ಇಟ್ಟಂತಾಗಿದೆ.

ಮಹೇಂದ್ರಾ ರೇವಾ ಎಲೆಕ್ಟ್ರಾನಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯ­ನಿರ್ವ­ಹಣಾ ಅಧಿಕಾರಿ­ಯಾಗಿರುವ (ಸಿಇಒ) ಚೇತನ್ ಮೈನಿ ಅವರು, ಈ ಐತಿಹಾಸಿಕ ಬೆಳವಣಿಗೆ­ಯನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಈ ಬದಲಾವಣೆಯು ಭವಿಷ್ಯದಲ್ಲಿ ವಾಹನ ತಯಾರಿಕಾ ರಂಗದ ಚಿತ್ರಣ­ವನ್ನೇ ಬದಲಿಸಲಿ-­ದೆಯೇ? ಎನ್ನುವ ಅನುಮಾನಗಳೂ ಈ ಸಂದ­ರ್ಭ­ದಲ್ಲಿ ಕಾಡುತ್ತಿವೆ. ಉದ್ದಿಮೆ ಸಂಸ್ಥೆಗಳು ಸಂಶೋ­ಧನಾ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆದು­ಕೊಳ್ಳುತ್ತವೆ. ಆನಂತರ ಈ ಉದ್ದಿಮೆ ಸಂಸ್ಥೆಗಳು ಪರಿಣತರು ಮತ್ತು ವೃತ್ತಿ­ನಿರತರ ಸೇವೆ ಪಡೆದುಕೊಂಡು ತಾವು ಪಡೆದು­ಕೊಂಡಿದ್ದ ಪೇಟೆಂಟ್‌ಗಳನ್ನು ಜೋಪಾನ­ದಿಂದ ಕಾಯ್ದು­ಕೊಂಡಿ­ರುತ್ತವೆ.

ಕೆಲ ಪ್ರಕರಣಗಳಲ್ಲಿ ಪೇಟೆಂಟ್‌­ಗಳ ಸಣ್ಣಪುಟ್ಟ ದುರ್ಬಳಕೆಗೆ ಸಂಬಂಧಿಸಿದ ಪ್ರಕ­ರಣಗಳು ದೊಡ್ಡ ವಿವಾದ­ಗಳಾಗಿ ಸುದ್ದಿ ಮಾಡು­ತ್ತವೆ. ಇನ್ನೂ ಕೆಲ ಸಂದ­ರ್ಭ­ಗಳಲ್ಲಿ ಇಂತಹ ವಿವಾ­ದ­ಗಳು   ರಾಜತಾಂತ್ರಿಕ ಮಟ್ಟದ­ವರೆಗೂ ಹೋಗಿ­ರು­ತ್ತವೆ. ಪೇಟೆಂಟ್‌ಗಳ ಕಾನೂನುಬದ್ಧ ಜೀವಿ­ತಾವಧಿ ಪೂರ್ಣಗೊಳ್ಳುವ ಮೊದಲೇ ಅವು­ಗಳನ್ನು ಬಳಸಿ­ಕೊಳ್ಳಲು ಪ್ರತಿಸ್ಪರ್ಧಿಗಳಿಗೆ ಮುಕ್ತ ಅವಕಾಶ ನೀಡುವುದು ತುಂಬ ವಿರಳ.

ಇಲೊನ್ ಮಸ್ಕ್ ಅವರು ಚಾಲನೆ ನೀಡಿರುವ ಪೇಟೆಂಟ್‌ಗಳ ಉಚಿತ ಬಳಕೆ ಅವಕಾಶಕ್ಕೆ ಇತರ ತಯಾರಕರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ತಮ್ಮ ಜ್ಞಾನವನ್ನು ಉಚಿತವಾಗಿ ಬಳಸಿಕೊಳ್ಳಲು ಅವ­ಕಾಶ ಮಾಡಿಕೊಟ್ಟರೆ ಜ್ಞಾನ  ಹಂಚಿಕೆಗೆ ಎಣೆಯೇ ಇರದು. ಇಂತಹ ತ್ವರಿತಗತಿಯ ಬದಲಾವ­ಣೆಯು ಅಂತಿಮ­ವಾಗಿ ಒಟ್ಟಾರೆ ವಾಹನ ತಯಾ­ರಿಕಾ ರಂಗಕ್ಕೆ ಒಳಿತನ್ನುಂಟು ಮಾಡಲಿದೆ. ಸಾಂಪ್ರ­ದಾ­ಯಿಕ ಇಂಧನ ಚಾಲಿತ ವಾಹನಗಳಿಗೆ ಪರ್ಯಾ­ಯ­ವಾಗಿ ದಕ್ಷ ಮತ್ತು ಉತ್ತಮ ಗುಣ­ಮಟ್ಟದ ಎಲೆಕ್ಟ್ರಾನಿಕ್ ವಾಹನಗಳನ್ನು ಅಭಿವೃದ್ಧಿಪಡಿಸಿ, ತಯಾರಿಸಲು ಕೂಡ  ಪೇಟೆಂಟ್‌ಗಳ ಉಚಿತ ವಿನಿಮಯವು ನೆರವಾಗಲಿದೆ. ಇದರಿಂದ ಪಳೆ­ಯುಳಿಕೆ ಇಂಧನಗಳ ಬಳಕೆ ಮತ್ತು ಅದ­ರಿಂದಾ­ಗುವ ಮಾಲಿನ್ಯ ತಡೆಗಟ್ಟುವ ಪ್ರಯತ್ನಗಳ ಮೇಲೆ ಸಕಾರಾತ್ಮಕ ಪರಿಣಾಮ ಕಂಡು ಬರಲಿದೆ.

ಜ್ಞಾನದ ಹಂಚಿಕೆಗೆ ಅವಕಾಶ ಮಾಡಿ­ಕೊಟ್ಟಿರುವ ಅಪರೂಪದ  ಮತ್ತು ಧೈರ್ಯದ ನಿರ್ಧಾರ ಕೈಗೊಂಡ  ಮಸ್ಕ್  ಅವರ ನಿಲುವನ್ನು ಎಲ್ಲರೂ ಶ್ಲಾಘಿಸಬೇಕಾಗಿದೆ. ಇತರ ಉದ್ದಿಮೆ­ದಾರರೂ  ಮಸ್ಕ್ ನಿರ್ಧಾರದಿಂದ ಸ್ಫೂರ್ತಿ ಪಡೆಯುವರೇ? ಕಾದು ನೋಡಬೇಕು.
ಇದೇ ಬಗೆಯಲ್ಲಿ ಅಮೆರಿಕ ಸರ್ಕಾರವು ಕೈಗೊಂಡ ಇನ್ನೊಂದು ಮಹತ್ವದ ನಿರ್ಧಾರ­ವೊಂದು ಜಾಗತಿಕ ಆರ್ಥಿಕ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಶುದ್ಧೀಕರಿಸದ ಕಚ್ಚಾ ತೈಲವನ್ನು ರಫ್ತು ಮಾಡಲು ಅಮೆರಿಕವು ಇತ್ತೀಚೆಗೆ ಎರಡು ಸಣ್ಣ ಉದ್ದಿಮೆ ಸಂಸ್ಥೆಗಳಿಗೆ ಅನುಮತಿ ನೀಡಿ ವಿಶ್ವದ ಉದ್ಯಮ ರಂಗದ ಗಮನ ಸೆಳೆದಿದೆ. ಸಂಸ್ಕರಣೆ ಮಾಡದ ಷೇಲ್ ತೈಲಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು, ಈ ತೈಲದ ರಫ್ತು ಅವ­ಕಾಶವನ್ನು ತಮಗೇ  ನೀಡಬೇಕೆಂದು ಹಲವಾರು ತೈಲ ಮಾರಾಟ ಸಂಸ್ಥೆಗಳು ಅಮೆರಿಕ ಸರ್ಕಾರದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದವು.

ನಾಲ್ಕು ದಶಕಗಳ ನಂತರ ಅಮೆರಿಕದ ಧೋರ­ಣೆಯಲ್ಲಿ ಆಗಿರುವ ಈ ಮಹತ್ವದ ಬದ­ಲಾವ­ಣೆ ಜಾಗತಿಕ ತೈಲ ಮಾರು­ಕಟ್ಟೆ­ಯಲ್ಲಿ ವ್ಯಾಪಕ ಪರಿ­ಣಾಮಗಳನ್ನು ಬೀರುವ ನಿರೀಕ್ಷೆ ಇದೆ. ಸದ್ಯಕ್ಕೆ ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆ­ಯಲ್ಲಿ ತೈಲದ ಬೆಲೆಯನ್ನು ಪೆಟ್ರೋಲ್ ರಫ್ತು ದೇಶಗಳ ಸಂಘಟನೆ (ಒಪಿ­ಇಸಿ) ನಿರ್ಧರಿಸುವಾಗ ಇಡೀ ವಿಶ್ವವೇ ಅದನ್ನು ಅಸಹಾಯಕತೆಯಿಂದ ನೋಡು­ತ್ತಿದೆ. ಕಚ್ಚಾ ತೈಲ ಆಮದು ಮಾಡಿ­ಕೊಳ್ಳ­ವಲ್ಲಿ ಅಮೆರಿಕವು ಮುಂಚೂಣಿಯಲ್ಲಿ ಇದೆ. ಹೀಗಾಗಿ ತೈಲದ ಪೂರೈಕೆ ಮತ್ತು ಬೆಲೆ ಪರಿ­ಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅಮೆರಿಕವು ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ.

ದಶಕದ ಹಿಂದೆ ಅಮೆರಿಕದಲ್ಲಿ ತೀರ ಕಡಿಮೆ ಪ್ರಮಾದಲ್ಲಿ ಆರಂಭಗೊಂಡಿದ್ದ ಷೇಲ್  ತೈಲದ ಉತ್ಪಾದನೆಯು ಈಗ ಭಾರಿ ಪ್ರಮಾಣದಲ್ಲಿ ಏರಿಕೆ­ಯಾಗಿದ್ದು, 2020ರ ಹೊತ್ತಿಗೆ ಅಮೆರಿಕವು ತೈಲ ಸ್ವಾವಲಂಬನೆ ಸಾಧಿಸುವುದರ ಜತೆಗೆ ತೈಲ ರಫ್ತು ಮಾಡಲೂ ಮುಂದಾಗಲಿದೆ.

ಸದ್ಯದ ಕಚ್ಚಾ ತೈಲದ ಬೆಲೆಯು ಅಮೆರಿಕ­ದಲ್ಲಿ ಷೇಲ್ ತೈಲದ ನಿರಂತರ ಶೋಧ ಮತ್ತು ಉತ್ಪಾದನೆಗೆ ಪುಷ್ಟಿ ನೀಡುತ್ತಿದೆ. ಒಂದೊಮ್ಮೆ ಅಮೆರಿಕವು ತೈಲದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದಂತೆ ಅದು ಜಾಗತಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಮೇಲೆ ವ್ಯಾಪಕ ಪರಿ­ಣಾಮ ಬೀರಲಿದೆ. ಅದರ ಲಕ್ಷಣಗಳು ಈಗಾ­ಗಲೇ ಕಂಡು ಬರುತ್ತಿವೆ. ಅಮೆರಿಕವು ತೈಲ ಸ್ವಾವ­ಲಂಬನೆ ಸಾಧಿಸುತ್ತಿದ್ದಂತೆ ತೈಲ ಸಮೃದ್ಧ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ ಕಾಯ್ದು­ಕೊಳ್ಳುವ ಬಗ್ಗೆ ಅಷ್ಟಾಗಿ ತಲೆಕೆಡಿಸಿ­ಕೊಳ್ಳುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಕಚ್ಚಾ ತೈಲದ ಪೂರೈಕೆಗೆ ಅಡ್ಡಿ­ಪಡಿ­ಸುವಂತಹ ಅಶಾಂತ ಪರಿಸ್ಥಿತಿ ನಿರ್ಮಾಣ­ವಾ­ದರೂ ಬಿಕ್ಕಟ್ಟು ಬಗೆಹರಿಸಲು ಅಮೆರಿಕವೂ ಯಾವುದೇ ಗಂಭೀರ ಪ್ರಯತ್ನ ಮಾಡಲಾರದೂ ಎಂದೇ ಭಾವಿಸಲಾಗಿದೆ.

ಭಾರತವೂ ಗಮನಾರ್ಹ ಪ್ರಮಾಣ­ದಲ್ಲಿ ಕಚ್ಚಾ­ತೈಲ ಆಮದು ಮಾಡಿ­ಕೊಳ್ಳುತ್ತಿದೆ. ತೈಲ ರಫ್ತು ದೇಶಗಳಲ್ಲಿ ಉದ್ಭವಿಸುವ ಅರಾಜಕತೆ ಮತ್ತು ಈ ಸಮಸ್ಯೆಯಿಂದ ದೂರ ಉಳಿಯಲು ಬಯಸುವ ಅಮೆರಿಕದ ಧೋರಣೆ­ಯಿಂದ  ಭಾರ­ತದ ಅರ್ಥ ವ್ಯವಸ್ಥೆ ಮೇಲೂ ಭವಿಷ್ಯದಲ್ಲಿ ಪ್ರತಿ­ಕೂಲ ಪರಿಣಾಮಗಳು ಕಂಡು ಬರಬಹುದು. ಇಂತಹ ಸಂದರ್ಭಗಳಲ್ಲಿ ಭಾರತವು ಪರಿಸ್ಥಿತಿ­ಯನ್ನು ಎಚ್ಚರಿಕೆಯಿಂದ ಅವ­ಲೋ­ಕಿ­ಸುತ್ತ, ತ್ವರಿತ­ವಾಗಿ ಕಾರ್ಯೋ­ನ್ಮುಖವಾಗಿ ತನ್ನ ಹಿತಾಸಕ್ತಿ­ಗಳನ್ನು ರಕ್ಷಿಸಿ­ಕೊಳ್ಳಲು ಮುಂದಾಗ­ಬೇಕಾಗು­ತ್ತದೆ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT