ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಪುಟ್ಟ ಹಕ್ಕಿ ಕಲಿಸಿದ ದೊಡ್ಡ ಪಾಠ

Last Updated 7 ಅಕ್ಟೋಬರ್ 2018, 5:41 IST
ಅಕ್ಷರ ಗಾತ್ರ

ಎಷ್ಟೋ ಸಲ ನಮ್ಮ ಸ್ಫೂರ್ತಿ ಎಲ್ಲಿಂದ ಚಿಮ್ಮುತ್ತದೆ ಅನ್ನುವುದೇ ಗೊತ್ತಾಗುವುದಿಲ್ಲ. ಒಂದು ಸಿನಿಮಾ ನೋಡಿದಾಗ ಅದರಲ್ಲಿ ನಿನಗೇನಿಷ್ಟವಾಯಿತು ಅಂತ ಕೇಳುತ್ತಾರೆ. ನಾನು ಇಡೀ ಸಿನಿಮಾ ಅಂತಲೇ ಹೇಳುತ್ತೇನೆ. ಸಿನಿಮಾವನ್ನು ಕತ್ತರಿಸಿ ತುಂಡು ತುಂಡು ಮಾಡಿ, ‘ಈ ಚೂರು ನನಗಿಷ್ಟ’ ಅಂತ ಹೇಳುವುದು ನನಗೆ ಗೊತ್ತಿಲ್ಲ.

ಸಿನಿಮಾ ಒಂದು ಭಾಷೆ. ಹೊಸ ಭಾಷೆ. ಅದಕ್ಕಿರುವುದು ಒಂದೂವರೆ ಶತಮಾನಕ್ಕಿಂತ ಕಡಿಮೆ ಇತಿಹಾಸ. ಹೀಗೆ ಮೊನ್ನೆ ಮೊನ್ನೆ ಹುಟ್ಟಿಕೊಂಡ ಭಾಷೆಯೊಂದು ಎಲ್ಲ ಕಲೆಗಳನ್ನೂ ಒಳಗೊಳ್ಳುತ್ತದೆ ಎಂದು ಅನೇಕರು ಮಾತಾಡುತ್ತಾರೆ. ಆದರೆ ನಾನು ಬೇರೆಯೇ ರೀತಿಯಲ್ಲಿ ಯೋಚಿಸುತ್ತೇನೆ. ಹೊಸ ಭಾಷೆಯೊಂದು ಹುಟ್ಟಿದಾಗ, ಮಿಕ್ಕೆಲ್ಲ ಕಲೆಗಳೂ ಅದರಲ್ಲಿ ತಮಗೂ ಜಾಗ ಸಿಗಲಿ ಎಂದು ಆಶಿಸುತ್ತವೆ. ಅದೇ ಕಾರಣಕ್ಕೆ ಸಿನಿಮಾದೊಳಗೆ ತಾನೆಲ್ಲಿದ್ದೇನೆ ಅಂತ ಕಲಾವಿಭಾಗ ನೋಡುತ್ತದೆ. ನೃತ್ಯ, ಸಂಗೀತ, ಮಾತು, ಮೌನ, ಅಭಿನಯ, ಸಂಕಲನ, ಛಾಯಾಗ್ರಹಣ, ಬೆಳಕಿನ ವಿನ್ಯಾಸ, ಮುಗುಳುನಗೆ, ಮರುಜೋಡಣೆ, ಬರಹ, ನಡಿಗೆ, ಭಾವಭಂಗಿ- ಎಲ್ಲವೂ ಅದರೊಳಗೆ ಸೇರಿಕೊಂಡು ಆ ಭಾಷೆಯೊಳಗೆ ಬೆರೆಯಲು ಹವಣಿಸುತ್ತವೆ.

ಸಿನಿಮಾವನ್ನು ಒಂದು ಮಾಧ್ಯಮ ಅಂತ ನೋಡುವವರು, ಅದನ್ನೊಂದು ಹೊಸ ಭಾಷೆಯೆಂದೇ ನೋಡಬೇಕು. ಇನ್ನೂ ಪೂರ್ಣವಾಗಿ ಅರಳಿಕೊಳ್ಳದ, ತನ್ನ ಸತ್ವವನ್ನಿನ್ನೂ ಬಿಟ್ಟುಕೊಳ್ಳದ ಭಾಷೆ ಅದು. ಆ ಭಾಷೆಯಲ್ಲಿ ಹೇಗೆ ಮಾತಾಡಬೇಕು ಅನ್ನುವುದು ನಮಗಿನ್ನೂ ಪೂರ್ತಿಯಾಗಿ ಗೊತ್ತಿಲ್ಲ. ತನ್ನಿಂದಾಗಿ ಆ ಭಾಷೆಗೆ ಬಲ ಬಂದಿದೆ ಎಂದು ಮಿಕ್ಕೆಲ್ಲ ಕಲೆಗಳೂ ಹೇಳುತ್ತಿದ್ದರೆ, ಸಿನಿಮಾ ಅದನ್ನೆಲ್ಲ ನಿರಾಕರಿಸುತ್ತಾ ತಾನು ಅವೆಲ್ಲವನ್ನೂ ಮೀರಿದ್ದು ಎಂದು ಮತ್ತೆ ಮತ್ತೆ ಹೇಳುತ್ತಲೇ ಇರುತ್ತದೆ. ಸಂಗೀತದಿಂದಲೇ ಸಿನಿಮಾಗೆಲ್ಲುವುದು ಅಂತ ಯಾರಾದರೂ ಮಾತಾಡುತ್ತಿರುವ ಹೊತ್ತಿಗೇ ಹಾಡುಗಳೇ ಇಲ್ಲದ ಸಿನಿಮಾವೊಂದು ಮನಗೆದ್ದಿರುತ್ತದೆ. ಸಂಭಾಷಣೆಯೇ ಸಿನಿಮಾದ ಶಕ್ತಿ ಅಂತ ಯಾರಾದರೂ ವಾದಿಸಿದರೆ, ಮೂಕಿ ಚಿತ್ರವೊಂದು ಮುಗುಳುನಗುತ್ತಾ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಛಾಯಾಗ್ರಹಣವೇ ಸಿನಿಮಾದ ಸರ್ವಸ್ವ ಅಂತ ಹೇಳಿದರೆ, ಕ್ಯಾಂಡಿಡ್ ಕೆಮರಾದಲ್ಲಿ ಶೂಟ್ ಮಾಡಿದ ಸಿನಿಮಾಗಳು ನಮಗೆ ಎದುರಾಗುತ್ತವೆ. ಹೀಗೆ ನಾವು ವ್ಯಾಖ್ಯಾನಿಸಲು ಹೋದಹಾಗೆ, ಎಲ್ಲಾ ವಾದಗಳನ್ನೂ ಧಿಕ್ಕರಿಸುತ್ತಲೇ ಸಿನಿಮಾ ತನ್ನನ್ನು ತಾನು ಕಂಡುಕೊಳ್ಳಲು ನೋಡುತ್ತದೆ.

ಮೊನ್ನೆ ಮೊನ್ನೆ ನಾನು ಮಣಿರತ್ನಂ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಿದೆ. ಈಗ ಯಶಸ್ವಿಯಾಗಿ ಓಡುತ್ತಿರುವ ಆ ಚಿತ್ರದ ಹೆಸರು ‘ಚೆಕ್ಕ ಚಿವಂತ ವಾನಮ್’. ಹಾಗಂದರೆ ಕೆಂಪು ಬಳಿದ ಆಕಾಶ. ಇದರ ಕತೆ, ಮಣಿರತ್ನಂ ಸೂಕ್ಷ್ಮತೆ ಎಲ್ಲವನ್ನೂ ಮೆಚ್ಚಿಕೊಳ್ಳುತ್ತಾ ನೋಡುತ್ತಿದ್ದರೆ, ಇದ್ದಕ್ಕಿದ್ದಂತೆ ಎದುರಾದ ಒಂದು ಹಾಡು ನನ್ನನ್ನು ಹಿಡಿದಿಟ್ಟಿತು. ಆ ಹಾಡಿನಲ್ಲಿ ಬರುವ ಚಿತ್ರ ಇದು. ಒಬ್ಬಾತ ಸುತ್ತಾಡುತ್ತಾ ಕಾಡಿನೊಳಗೆ ಕಾಲಿಟ್ಟಿದ್ದಾನೆ. ದಟ್ಟವಾದ ಹಸಿರು ಹಸಿರು ಕಾಡು. ಅಲ್ಲೊಂದು ಹಳೆಯ ಮರ. ಆ ಮರದ ಮೇಲೊಂದು ಹಕ್ಕಿ ಕೂತಿದೆ. ಅವನು ಹಕ್ಕಿಯನ್ನು ನೋಡುತ್ತಾನೆ. ಹಕ್ಕಿ ಅವನನ್ನು ನೋಡುತ್ತದೆ. ಇಬ್ಬರ ನಡುವೆಯೂ ಒಂದು ಮೌನ ಸಂವಾದ ನಡೆಯುತ್ತದೆ. ಹಕ್ಕಿ ತನಗೇನೋ ಹೇಳಿದೆ ಎಂದು ಅವನಿಗೆ ಭಾಸವಾಗುತ್ತದೆ. ತಾನೂ ಹಕ್ಕಿಗೇನೋ ಹೇಳಿದೆ ಅಂತ ಅವನೂ ಅಂದುಕೊಳ್ಳುತ್ತಾನೆ. ಇಬ್ಬರೂ ತಮಗೆ ಅರಿವಿಲ್ಲದೆಯೇ ಮಾತಾಡಿಕೊಳ್ಳುತ್ತಿದ್ದೇವೆ ಎಂದು ಯಾಕೋ ಅವನಿಗೆ ಅನ್ನಿಸತೊಡಗುತ್ತದೆ. ಹಕ್ಕಿ ಸಿಳ್ಳೆ ಹಾಕುತ್ತದೆ, ಅವನು ಅದನ್ನು ಮರಳಿಸುತ್ತಾನೆ. ಹಕ್ಕಿ ಅವನ ಪಕ್ಕ ಬಂದು ಕಣ್ಣಾಮುಚ್ಚಾಲೆ ಆಡುತ್ತದೆ. ಅವನು ಹಕ್ಕಿಯನ್ನು ಹಿಡಿಯಲು ಹೋಗುತ್ತಾನೆ. ಅದು ಇನ್ನೇನು ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡು ಹೋಗಿ ಮರದ ಮೇಲೆ ಕೂತು ಕಣ್ಣುಹೊಡೆಯುತ್ತದೆ. ಹೀಗೊಂದು ಸಲಿಗೆ, ತುಂಟಾಟ ಮತ್ತು ಅನೂಹ್ಯ ಒಡನಾಟ ಅವರಿಬ್ಬರ ನಡುವೆ ಬೆಳೆಯುತ್ತಿರುವ ಹೊತ್ತಿಗೇ ದಟ್ಟವಾದ ಮೋಡ ಕವಿಯುತ್ತದೆ. ಭೋರೆಂದು ಮಳೆ ಸುರಿಯಲಾರಂಭಿಸುತ್ತದೆ. ಅವನು ಕಾಡಿನ ಅಂಚಿನಿಂದ ಓಡಿ ಬಂದು ಮನೆ ಸೇರಿಕೊಳ್ಳುತ್ತಾನೆ. ಬೆಚ್ಚಗೆ ಕೂರುತ್ತಾನೆ.

ಆಗ ಅವನಿಗೆ ಹಕ್ಕಿಯ ನೆನಪಾಗುತ್ತದೆ. ಇಷ್ಟು ಹೊತ್ತು ತನ್ನ ಗೆಳೆಯನ ಹಾಗಿದ್ದ ಹಕ್ಕಿಯನ್ನು ಅಲ್ಲೇ ಬಿಟ್ಟು ಬಂದುಬಿಟ್ಟೆನಲ್ಲ. ಅದು ಹೇಗಿದೆಯೋ ಏನೋ? ಈ ಮಳೆಗೆ ಅದರ ಗತಿ ಏನಾಗಿರಬೇಡ. ಹೋಗಿ ನೋಡಲೇ? ಹೋಗುವಂತಿಲ್ಲ, ಮಳೆ ಸುರಿಯುತ್ತಿದೆ. ಮನಸ್ಸಿನೊಳಗೆ ಹಕ್ಕಿ ಗೂಡು ಕಟ್ಟಿದೆ. ಅದರ ಚಿಂತೆ ಶುರುವಾಗಿದೆ. ತಾನು ಅದನ್ನು ಬಿಟ್ಟು ಬಂದದ್ದು ತಪ್ಪು ಅನ್ನುವ ಸಣ್ಣದೊಂದು ಪಾಪಪ್ರಜ್ಞೆ ಆತನಲ್ಲಿ ಶುರುವಾಗಿದೆ.

ಅಲ್ಲಿಂದ ಹಾಡು ಹಕ್ಕಿಯತ್ತ ಹೊರಳುತ್ತದೆ. ಹಕ್ಕಿ ಮಳೆಯ ಹೊಡೆತ ತಾಳಲಾರದೇ ಆ ಮರದ ದೊಡ್ಡದೊಂದು ಟೊಂಗೆಯ ಬುಡದಲ್ಲಿ ಮೈ ಮುದುರಿಕೊಂಡು ಕುಳಿತಿದೆ. ಇನ್ನೇನು ಮಳೆ ನಿಲ್ಲುತ್ತಿದ್ದಂತೆ ಅದು ಅಲ್ಲಿಂದ ಜಿಗಿದು ಬಂದು ಟೊಂಗೆಯ ಮೇಲೆ ಕೂರುತ್ತದೆ. ಇದ್ದಕ್ಕಿದ್ದಂತೆ ಒಮ್ಮೆ ಜೋರಾಗಿ ಮೈ ಕೊಡವಿಕೊಳ್ಳುತ್ತದೆ. ಶೂನ್ಯವನ್ನು ಸೀಳಿಕೊಂಡು ಆಕಾಶಕ್ಕೆ ಹಾರುತ್ತದೆ.

ಹಾಗೆ ಹಾರುತ್ತಿರುವ ಅದು ಯೋಚಿಸುವುದು ಹೀಗೆ: ಇಲ್ಲೊಬ್ಬ ಮನುಷ್ಯನಿದ್ದನಲ್ಲ; ಮಳೆ ಬಂದ ತಕ್ಷಣ ಅವನೇಕೆ ಹೆದರಿ ಓಡಿ ಹೋದ? ಈ ಪ್ರಕೃತಿಯಲ್ಲಿ ಒಂದಾಗಬೇಕು ಅಂತ ಅವನಿಗೇಕೆ ಅನ್ನಿಸಲಿಲ್ಲ? ಮಳೆಯನ್ನು ಎದುರಿಸುವ ಧೈರ್ಯ ಅವನಿಗೇಕೆ ಇಲ್ಲದೇ ಹೋಯಿತು? ಮನೆಯೊಳಗೆ ಮುದುರಿ ಕುಳಿತುಕೊಂಡು ಅವನು ಎಷ್ಟೊಂದನ್ನು ಕಳೆದುಕೊಂಡು ಬಿಟ್ಟ. ಈ ಸ್ವಾತಂತ್ರ್ಯ ಸೌಂದರ್ಯ ಅವನ ಪಾಲಿಗೆ ಇಲ್ಲದೇ ಹೋಯಿತೇ!

ಮನುಷ್ಯ ಅಸಹಾಯಕನಂತೆ ಯೋಚಿಸುತ್ತಾನೆ. ತನ್ನ ದೌರ್ಬಲ್ಯಗಳನ್ನು ನೆನೆಯುತ್ತಾನೆ. ನೆರವು, ಪಾಪಪ್ರಜ್ಞೆ ಮುಂತಾದ ಭಾವನೆಗಳು ಅವನನ್ನು ಕಾಡುತ್ತವೆ. ಮೂಲತಃ ಮತ್ತೊಬ್ಬರ ನೆರವು ಸಿಗಲಿ ಎಂದು ಆಶಿಸುವವನು ಅವನು. ಹೀಗಾಗಿ ತಾನು ಬೇರೆಯವರಿಗೆ ಹೇಗೆ ನೆರವಾಗಬಹುದು ಅನ್ನುವುದನ್ನಷ್ಟೇ ಅವನು ಯೋಚಿಸಬಲ್ಲ. ಆದರೆ ಹಕ್ಕಿ ಯಾವತ್ತೂ ನೆರವಿಗೆ ಆಶಿಸಿದ್ದೇ ಇಲ್ಲ. ಅದಕ್ಕೆ ಎದುರಿಸುವುದು ಗೊತ್ತು. ತನ್ನನ್ನು ತಾನು ಕಾಪಾಡಿಕೊಳ್ಳುವುದು ಗೊತ್ತು. ಹಕ್ಕಿಯನ್ನು ಮನುಷ್ಯ ಪಂಜರದಲ್ಲಿಡಬಲ್ಲ. ಹೊಡೆದು ಸಾಯಿಸಬಲ್ಲ, ಕೊಂದು ತಿನ್ನಬಲ್ಲ. ಆದರೆ ಹಕ್ಕಿಯ ಆತ್ಮವಿಶ್ವಾಸವನ್ನು ಅವನೆಂದೂ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅದು ಕಲಿಕೆಯಿಂದಲೋ ತಿಳಿವಳಿಕೆಯಿಂದಲೋ ಬಂದಿದ್ದಲ್ಲ. ಅದು ಬೇಸಿಕ್ ಇನ್‌ಸ್ಟಿಂಕ್ಟ್.

ಆದರೆ ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಕೂಡ ಅವನ ಜವಾಬ್ದಾರಿ. ತಾನು ಪಡಕೊಂಡದ್ದನ್ನು ಮರಳಿಸುವುದು ಅವನ ಕರ್ತವ್ಯ ಮಾತ್ರವಲ್ಲ; ಸಜ್ಜನಿಕೆ ಕೂಡ. ಇಲ್ಲಿ ಬರುವ ಹಕ್ಕಿಯ ಕತೆಯನ್ನು ನಾವು ಭಾವುಕವಾಗಿ ನೋಡಬೇಕಾಗಿಲ್ಲ. ರೋಮ್ಯಾಂಟಿಕ್ ಆಗಿ ಪರಿಭಾವಿಸಬೇಕಿಲ್ಲ. ಅದು ಮಾನವೀಯತೆಯ ಮೂಲಭೂತ ಪಾಠ ಹೇಳುತ್ತದೆ. ನೆರೆ ಬಂದಾಗ ಬೆಚ್ಚನೆಯ ಗೂಡು ಸೇರಿಕೊಳ್ಳುವುದು ಸ್ವಂತ, ಎಲ್ಲರೂ ಬೆಚ್ಚನೆಯ ಗೂಡು ಸೇರಿಕೊಳ್ಳುವಂತೆ ಮಾಡುವುದು ಕೂಡ ಸ್ವಂತವೇ. ಅದು ಮತ್ತೊಬ್ಬರಿಗೆ ಮಾಡುವ ಉಪಕಾರ ಅಲ್ಲ, ನಮ್ಮನ್ನು ನಾವು ಗಟ್ಟಿಮಾಡಿಕೊಳ್ಳುವ ಉಪಾಯ. ನಮ್ಮನ್ನು ನಾವು ಹಿಡಿದಿಟ್ಟುಕೊಳ್ಳುವ ಕ್ರಮ.

ಇದನ್ನು ಯೋಚಿಸುತ್ತಿದ್ದಾಗಲೇ ಮನಸ್ಸು ಮರ್ಲನ್ ಬ್ರಾಂಡೋನತ್ತ ಚಲಿಸಿತು. ಅವನು ಬರೆದ ಪುಸ್ತಕವನ್ನು ಯಾವತ್ತೋ ಓದಿದ ನೆನಪು. ನಮ್ಮಮ್ಮ ನನಗೆ ಕಲಿಸಿದ ಹಾಡು- The songs my mother taught me- ಪುಸ್ತಕದಲ್ಲಿ ಅವನು ತನ್ನ ಬಾಲ್ಯದ ಬಗ್ಗೆ ಬರೆದುಕೊಂಡಿದ್ದಾನೆ. ಅವನನ್ನು ಬಾಲ್ಯ ಬೆನ್ನಟ್ಟಿಕೊಂಡು ಬರುತ್ತದೆ. ಹಸಿಹಸಿ ನೆನಪುಗಳಿಂದ ಪಾರಾಗಲು ಹವಣಿಸಿದಷ್ಟೂ ಅದು ಅವನನ್ನು ಹಿಂಬಾಲಿಸುತ್ತಲೇ ಇರುತ್ತದೆ. ತನ್ನ ತಂದೆ ತನ್ನ ತಾಯಿಯನ್ನು ಹಿಂಸಿಸಿದ್ದು, ತಾಯಿ ನರಳಿದ್ದು ಇವೆಲ್ಲವನ್ನೂ ಅವನು ಎದುರಿಸಲು ಬೇಕಾದ ಧೈರ್ಯವನ್ನು ಪಡೆದುಕೊಂಡದ್ದೇ ಒಂದು ಕತೆ. ತನಗೆ ಆಸ್ಕರ್ ಪ್ರಶಸ್ತಿ ಬಂದಾಗ ಆತ ಪ್ರಶಸ್ತಿ ಸ್ವೀಕರಿಸಲು ಹೋಗುವುದಿಲ್ಲ, ಮತ್ಯಾರನ್ನೋ ಕಳಿಸುತ್ತಾನೆ. ಅವನು ಹಾಗೆ ಅದನ್ನು ಧಿಕ್ಕರಿಸುವುದಕ್ಕೆ ಕಾರಣ ರೆಡ್ ಇಂಡಿಯನ್ನರ ಮೇಲೆ ಅಮೆರಿಕ ನಡೆಸುತ್ತಿರುವ ದೌರ್ಜನ್ಯ. ಬಾಲ್ಯದಲ್ಲೇ ನೋವುಂಡವನಿಗೆ ದೌರ್ಜನ್ಯ ಅಂದರೇನು ಅನ್ನುವುದು ಗೊತ್ತು. ಇನ್ನೊಬ್ಬರ ನೋವು ಅರ್ಥವಾಗುತ್ತದೆ. ತುಳಿಸಿಕೊಳ್ಳುವುದು ಎನ್ನುವುದರ ಅರ್ಥ ಎಲ್ಲರಿಗಿಂತ ಹೆಚ್ಚೇ ತಿಳಿಯುತ್ತದೆ. ದೊಡ್ಡ ರಾಷ್ಟ್ರವೊಂದರ ಧಿಮಾಕನ್ನು ಅವನು ನಿರಾಕರಣೆಯ ಮೂಲಕ ಪ್ರತಿಭಟಿಸುವುದು, ಹಾಗೆ ಮಾಡುವುದು ತನ್ನ ಕರ್ತವ್ಯ ಎಂದು ಭಾವಿಸುವುದು ಕೂಡ ಅವನ ಪ್ರತಿಭೆಯ ಒಂದು ಭಾಗ.

ಇಂಥ ಮರ್ಲನ್ ಬ್ರಾಂಡೋ ಇದ್ದಕ್ಕಿದ್ದಂತೆ ನಟಿಸುವುದನ್ನು ಬಿಟ್ಟು ಹೊಸ ನಿರ್ದೇಶಕರಿಂದ ಸಿನಿಮಾ ಮಾಡಿಸುತ್ತಾನೆ. ಅವರಿಗೋಸ್ಕರ ಹಣ ಖರ್ಚು ಮಾಡುತ್ತಾನೆ. ಅದನ್ನು ಅಪ್ಪ ವಿರೋಧಿಸಿದಾಗ, ‘ನನ್ನನ್ನು ಹೇಳುವ ಹಕ್ಕನ್ನು ನೀನು ಯಾವತ್ತೋ ಕಳೆದುಕೊಂಡಿದ್ದೀಯ. ನನ್ನ ಅಮ್ಮನ ಮೈ ಮುಟ್ಟಿದ ದಿನವೇ ಆ ನೈತಿಕತೆ ನಾಶವಾಯಿತು. ನನಗೆ ಬುದ್ಧಿ ಹೇಳಲು ಬರಬೇಡ’ ಎನ್ನುತ್ತಾನೆ. ‘ಇನ್ನೊಂದು ಸಲ ನನ್ನಮ್ಮನ ಮೈ ಮುಟ್ಟಿದರೆ ನಿನ್ನನ್ನು ಕೊಂದುಬಿಡುತ್ತೇನೆ’ ಅನ್ನುತ್ತಾನೆ.

ಘಾಸಿಗೊಂಡ ಮನಸ್ಸು ಒಂದು ಕಡೆ, ಸೃಜನಶೀಲತೆಯ ತುಡಿತ ಮತ್ತೊಂದು ಕಡೆ. ಇವೆರಡರ ನಡುವೆ ತುಯ್ದಾಡುವ ಮರ್ಲನ್ ಬ್ರಾಂಡೋ ಅಮ್ಮ ಹೇಳಿಕೊಟ್ಟ ಹಾಡುಗಳ ಕುರಿತು ಮಾತಾಡುತ್ತಾನೆ. ನಮ್ಮ ಸ್ಫೂರ್ತಿಗಳು, ಜೀವಿಸಲು ಬೇಕಾದ ಸ್ಥೈರ್ಯ ಎಲ್ಲಿಂದ ಹುಟ್ಟುತ್ತದೋ ಹೇಳುವುದು ಕಷ್ಟ. ಅದನ್ನು ಒಂದು ಹಕ್ಕಿ, ಮತ್ತೊಂದು ಆತ್ಮಚರಿತ್ರೆ, ಯಾರದೋ ಬದುಕಿನ ಪುಟ್ಟ ಘಟನೆ ಕಲಿಸಿಕೊಡಬಹುದು.

ಸುಮ್ಮನೆ ಯೋಚಿಸಿ. ಈ ಹಕ್ಕಿ, ಭಾಷೆ, ಪ್ರಕೃತಿ ಎಲ್ಲವೂ ಮೂಲದಲ್ಲಿ ಒಂದೇ. ಮಾನವೀಯ ಹಾಡನ್ನೇ ಆ ಹಕ್ಕಿಯೂ ಹಾಡುತ್ತಿರುತ್ತದೆ. ಪ್ರಕೃತಿಯೂ ನೀಡುತ್ತಿರುತ್ತದೆ, ಭಾಷೆಯೂ ಕೊಡುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT