ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ಪರಿಸರ ಮತ್ತು ಜನರ ಲೂಟಿ

Last Updated 21 ಜುಲೈ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ತಿಂಗಳಲ್ಲಿ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಸುದ್ದಿಯಲ್ಲಿದ್ದವು. ಎರಡೂ ರಾಜ್ಯಗಳಲ್ಲಿನ ಚುನಾಯಿತ ಕಾಂಗ್ರೆಸ್ ಸರ್ಕಾರಗಳನ್ನು ಕೇಂದ್ರದಲ್ಲಿ ಆಡಳಿತದಲ್ಲಿದ್ದ ಪಕ್ಷ ಅಸ್ಥಿರಗೊಳಿಸಿತು ಮತ್ತು ನಂತರ ಅಲ್ಲಿನ ರಾಜ್ಯಪಾಲರು ಕಾನೂನುಬಾಹಿರವಾಗಿ ಈ ಸರ್ಕಾರಗಳನ್ನು ವಜಾಗೊಳಿಸಿದರು.

ಎರಡೂ ರಾಜ್ಯಗಳಲ್ಲಿ ನ್ಯಾಯಾಲಯಗಳಿಂದ ನೆರವು ಪಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಯಿತು. ಆದರೆ ಇಲ್ಲಿ ಪುನರ್‌ಸ್ಥಾಪಿತ ಸರ್ಕಾರಗಳು ಎಷ್ಟು ದಿನ ಬಾಳಿಕೆ ಬರಬಲ್ಲವು ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ.

ಬಿಜೆಪಿ ಮತ್ತು ಅದರ ಅಧ್ಯಕ್ಷರ ತಂತ್ರಗಾರಿಕೆ ಉತ್ತರಾಖಂಡ ಮತ್ತು ಅರುಣಾಚಲದ ಬಿಕ್ಕಟ್ಟುಗಳಿಗೆ ಕಾರಣ. ಹಾಗಿದ್ದರೂ ಕಾಂಗ್ರೆಸ್ ಇದನ್ನು ಘನತೆಯಿಂದ ಎದುರಿಸಲಿಲ್ಲ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಆಡಳಿತ ಅದಕ್ಷವಾಗಿತ್ತು ಮತ್ತು ಭ್ರಷ್ಟವಾಗಿತ್ತು. ಪಕ್ಷದಲ್ಲಿಯೇ ಉಳಿಯಲು ಅಥವಾ ಪಕ್ಷಕ್ಕೆ ಮರಳಲು ಶಾಸಕರಿಗೆ ಕಾಂಗ್ರೆಸ್ ಒಡ್ಡಿರುವ ಪ್ರಲೋಭನೆ ನೈತಿಕವಾದುದಲ್ಲ, ಬದಲಿಗೆ ಭೌತಿಕವಾದುದಾಗಿರುವ ಸಂಭವವೇ ಹೆಚ್ಚು.

ಅರುಣಾಚಲ ಪ್ರದೇಶ 1987ರಲ್ಲಿ ರೂಪುಗೊಂಡರೆ ಉತ್ತರಾಖಂಡ 2000ದಲ್ಲಿ ರಚನೆಯಾಯಿತು. ನಮ್ಮ ಗಣರಾಜ್ಯದ ತುಲನಾತ್ಮಕವಾಗಿ ಯುವ ರಾಜ್ಯಗಳಲ್ಲಿ ಅನಾವರಣಗೊಂಡ ಭಾರತದ ಸ್ಪರ್ಧಾತ್ಮಕ ಪಕ್ಷ ರಾಜಕಾರಣದ ಕರಾಳ ಮತ್ತು ಕೊಳಕು ಮುಖಗಳು ಖಿನ್ನತೆ ಮೂಡಿಸುತ್ತಿವೆ. ಇದು ನಮ್ಮಲ್ಲಿ ಚಿಂತೆಗೆ ಕಾರಣವಾಗಬೇಕು. ಆದರೆ ಭಾರತದ ಆರ್ಥಿಕ ‘ಅಭಿವೃದ್ಧಿ ಮಾದರಿ’ಯ ಕರಾಳ ಮತ್ತು ಕೊಳಕು ಆಯಾಮಕ್ಕೆ ಅರುಣಾಚಲ ಮತ್ತು ಉತ್ತರಾಖಂಡ ಬಲಿ ಬೀಳುತ್ತಿರುವುದು ನಮ್ಮಲ್ಲಿ ಇನ್ನೂ ಹೆಚ್ಚು ಚಿಂತೆಗೆ ಕಾರಣವಾಗಬೇಕು.

ಉತ್ತರಾಖಂಡ ಮತ್ತು ಅಲ್ಲಿನ ಜನರ ನೋವು ಹೃದಯೇಶ್ ಜೋಷಿ ಅವರ ಇತ್ತೀಚಿನ ಪುಸ್ತಕ ‘ರೇಜ್ ಆಫ್ ದ ರಿವರ್: ದ ಅನ್‌ಟೋಲ್ಡ್ ಸ್ಟೋರಿ ಆಫ್‌  ದ ಕೇದಾರನಾಥ ಡಿಸಾಸ್ಟರ್’ನಲ್ಲಿ ಉತ್ತಮವಾಗಿ ದಾಖಲಾಗಿದೆ. ಇದು ಹಿಂದಿಯಲ್ಲಿ ಪ್ರಕಟವಾದ ಪುಸ್ತಕದ ಇಂಗ್ಲಿಷ್ ಅನುವಾದ. ‘ತುಮ್ ಚುಪ್ ಕ್ಯೋಂ ರಹೇ ಕೇದಾರ್’ ಎಂಬುದು (ಹೆಚ್ಚು ಪರಿಣಾಮಕಾರಿ) ಮೂಲ ಹೆಸರು.

ಉತ್ತರಾಖಂಡದವರೇ ಆದ ಜೋಷಿ ಅನುಭವಿ ಮತ್ತು ಚೈತನ್ಯ ತುಳುಕುವ ಪತ್ರಕರ್ತ. ಶ್ರೇಷ್ಠ ತೀರ್ಥಯಾತ್ರಾ ಕೇಂದ್ರವಾದ ಕೇದಾರನಾಥ ಮತ್ತು ಅದರ ಪರಿಸರ 2013ರ ಜೂನ್‌ನಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದಾಗ ಅಲ್ಲಿ ತಲುಪಿದ ಮೊದಲ ಪತ್ರಕರ್ತ ಅವರು. ಚಾರಣ, ಮೋಜು ಅಥವಾ ರಾಜ್ಯದ ಅಸಂಖ್ಯ ದೇವಾಲಯಗಳಿಗೆ ಭೇಟಿ ನೀಡಲು ರಾಜ್ಯಕ್ಕೆ ಸಾವಿರಾರು ಪ್ರವಾಸಿಗರು ಬಂದಿಳಿಯುವ ಪ್ರವಾಸದ ಉಚ್ಛ್ರಾಯ ಋತುವಿನಲ್ಲಿ ಈ ದುರಂತ ಸಂಭವಿಸಿತ್ತು.

ಕೇದಾರನಾಥ ದುರಂತ ಮತ್ತು ಅದರ ನಂತರದ ಪರಿಸ್ಥಿತಿಯ ಬಗ್ಗೆ ಜೋಷಿ ಅವರು ಬರೆದ ವರದಿಗಳನ್ನು ಆಧರಿಸಿ ಈ ಪುಸ್ತಕ ರಚಿಸಲಾಗಿದೆ. ಈ ಪುಸ್ತಕದಲ್ಲಿ ಸತ್ತವರ, ಬದುಕುಳಿದವರ ಮತ್ತು ಅಷ್ಟೇ ಮುಖ್ಯವಾಗಿ ಜೀವಗಳನ್ನು ರಕ್ಷಿಸಿದವರ ಕತೆಗಳಿವೆ. ಪ್ರವಾಹಕ್ಕೆ ಸಿಲುಕಿಕೊಂಡಿದ್ದ ಸಾವಿರಾರು ಪ್ರವಾಸಿಗರು ಮತ್ತು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದ ಹೆಲಿಕಾಪ್ಟರ್ ಪೈಲಟ್‌ಗಳು, ವೃತ್ತಿಪರ ಪರ್ವತಾರೋಹಿಗಳು ಈ ಪುಸ್ತಕದ ಹೀರೊಗಳು.

‘ಇಡೀ ದುರಂತದ ಅತ್ಯಂತ ದೊಡ್ಡ ಭ್ರಮನಿರಸನಕಾರಿ ಅಂಶವೆಂದರೆ ಆ ನೆರವಿನ ಅಗತ್ಯದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ಇರಲೇ ಇಲ್ಲ ಅಥವಾ ಸಂಪೂರ್ಣ ಅದಕ್ಷವೆಂದು ತೋರಿಸಿಕೊಟ್ಟಿತು’ ಎಂದು ಜೋಷಿ ಬರೆಯುತ್ತಾರೆ.

ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ವಿಜಯ ಬಹುಗುಣ ಅವರ ವರ್ತನೆಯೂ ಅತ್ಯಂತ ಹೇಯವಾದುದು. ದುರಂತದ ಸ್ಥಳಕ್ಕೆ ಧಾವಿಸುವ ಬದಲಿಗೆ ಅವರು ದೆಹಲಿಗೆ ಹಾರಿ ಅಲ್ಲಿ ತನ್ನ ಸರ್ಕಾರದ ‘ಸಾಧನೆ’ಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಪತ್ರಿಕಾಗೋಷ್ಠಿ ನಡೆಸಿದರು.

ನೈಸರ್ಗಿಕ ವಿಕೋಪಗಳನ್ನು ತಡೆಯುವುದು ಅಸಾಧ್ಯ, ಆದರೆ ಅದರ ಪರಿಣಾಮಗಳನ್ನು ಮಿತಿಗೊಳಿಸಬಹುದು. ವಾಣಿಜ್ಯ ಉದ್ದೇಶಕ್ಕಾಗಿ ಮರ ಕಡಿತ, ಮೇಲ್ಮೈ ಗಣಿಗಾರಿಕೆ, ಅಣೆಕಟ್ಟೆಗಳ ನಿರ್ಮಾಣಗಳನ್ನು ತಡೆದಿದ್ದರೆ ಗುಡ್ಡಗಳು ಬೋಳಾಗುತ್ತಿರಲಿಲ್ಲ ಮತ್ತು ಅಪಾರ ಪ್ರಮಾಣದ ಮಣ್ಣು ಕೊರೆದು ಹೋಗಿ ಪ್ರವಾಹ ಉಂಟಾಗುತ್ತಿರಲಿಲ್ಲ.

ಇದನ್ನೆಲ್ಲ ತಡೆದಿದ್ದರೆ 2013ರ ಜೂನ್‌ನಲ್ಲಿ ಘರ್ವಾಲ್ ಹಿಮಾಲಯದಲ್ಲಿ ಉಂಟಾದ ಮೇಘಸ್ಫೋಟಕ್ಕೆ ಅಷ್ಟೊಂದು ಜನರು ಪ್ರಾಣ ತೆರುವುದನ್ನು ತಪ್ಪಿಸಬಹುದಿತ್ತು. ಪರಿಸರ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ನದಿ ದಂಡೆಯಲ್ಲಿ ಹೋಟೆಲುಗಳನ್ನು ನಿರ್ಮಿಸಿದ್ದು ಸಾವಿನ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿತು.

ಹೊರಗಿನ ಜನರ ವಾಣಿಜ್ಯ ಹಿತಾಸಕ್ತಿ ಉತ್ತರಾಖಂಡದ ಹಲವು ಜನರು ಜೀವ ಕಳೆದುಕೊಳ್ಳಲು ಕಾರಣವಾದ ಮನಕಲಕುವ ಒಂದು ಅಂಶವನ್ನು ಜೋಷಿ ದಾಖಲಿಸಿದ್ದಾರೆ. 2013ರ ಜೂನ್ 13ರಂದು ವಿಷ್ಣುಪ್ರಯಾಗ ಅಣೆಕಟ್ಟೆಯ ನೀರಿನ ಮಟ್ಟ ಏರತೊಡಗಿತ್ತು. ಯೋಜನೆಯ ಮಾಲೀಕತ್ವ ಹೊಂದಿರುವ ಕಂಪೆನಿ ಜೇಪೀ ಸಮೂಹದ ಅಧಿಕಾರಿಗಳಿಗೆ ಗ್ರಾಮಸ್ಥರು ಈ ವಿಚಾರ ತಿಳಿಸಿದ್ದರು.

ಹೆಚ್ಚುವರಿ ನೀರು ಸುರಕ್ಷಿತವಾಗಿ ಕೆಳಗೆ ಹರಿದು ಹೋಗುವಂತೆ ಅಣೆಕಟ್ಟೆ ಗೇಟುಗಳನ್ನು ತೆರೆಯುವಂತೆ ಅವರು ಕೋರಿದ್ದರು. ಆದರೆ ಇನ್ನಷ್ಟು ವಿದ್ಯುತ್ ಉತ್ಪಾದಿಸುವ ಅತ್ಯಾಸೆಯಿಂದ ಅಧಿಕಾರಿಗಳು ಈ ಸಲಹೆಯನ್ನು ನಿರ್ಲಕ್ಷಿಸಿದರು. ಅಣೆಕಟ್ಟೆಯ ಒಂದು ಗೋಡೆ ಕುಸಿಯುವವರೆಗೆ ನೀರು ಏರುತ್ತಲೇ ಹೋಯಿತು. ಪ್ರವಾಹದ ನೀರು ಭೋರ್ಗರೆದು ಹರಿದು ತನ್ನ ದಾರಿಯಲ್ಲಿ ಸಿಕ್ಕ ಗ್ರಾಮಗಳು ಮತ್ತು ಗ್ರಾಮಸ್ಥರನ್ನು ಕೊಚ್ಚಿಕೊಂಡು ಸಾಗಿತು.

ದುರಂತದ ಮೊದಲು ಮತ್ತು ದುರಂತದ ನಂತರ ಈ ಪ್ರದೇಶಕ್ಕೆ ನೀಡಿದ ಭೇಟಿಯನ್ನು ಹೋಲಿಸುತ್ತಾ ಉತ್ತರಾಖಂಡದ ತನ್ನ ಸಹಜೀವಿಗಳು ಕಳೆದ ವರ್ಷಗಳಲ್ಲಿ ಅನುಭವಿಸಿದ್ದನ್ನು ಜೋಷಿ ವಿವರಿಸಿದ್ದಾರೆ: ‘ಒಂದರ ನಂತರ ಒಂದರಂತೆ ನಡೆದ ದುರಂತಗಳಿಗೆ ಸಾಕ್ಷಿಯಾಗುತ್ತಾ ಅಸಹಾಯಕ ಜನರು ತಮ್ಮ ವಿಧಿಗೆ ಶರಣಾದರು; ಪ್ರಭಾವಿ ಹೋಟೆಲ್ ಮತ್ತು ನಿರ್ಮಾಣ ಲಾಬಿಯ ಅಕ್ರಮ ಒತ್ತುವರಿ, ನದಿ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿದ ಅಸಂಖ್ಯ ಅಣೆಕಟ್ಟೆ ನಿರ್ಮಾಣ, ಅರಣ್ಯ ನಾಶದ ಬಗ್ಗೆ ಬಡ ಜನರು ನಡೆಸಿದ ಪ್ರತಿಭಟನೆಯ ಧ್ವನಿ ಬಹುಪಾಲು ಯಾರ ಕಿವಿಯನ್ನೂ ಮುಟ್ಟಲಿಲ್ಲ’.

ಇದು ಉತ್ತರಾಖಂಡದಲ್ಲಿ ನಿರಂತರವಾಗಿ ನಡೆಯುತ್ತಿರುವ ವಿನಾಶದ ಕತೆ. ಅರುಣಾಚಲ ಪ್ರದೇಶದಲ್ಲಿಯೂ ಬಿಚ್ಚಿಕೊಳ್ಳುತ್ತಿರುವ ಇದೇ ರೀತಿಯ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ನಾನು ಇತ್ತೀಚೆಗೆ ಪ್ರಕಟವಾದ ಅಂಕುಶ್ ಸೈಕಿಯಾ ಅವರ ‘ಅರುಣಾಚಲ್ಸ್ ಗ್ರೇಟ್ ಹೈಡ್ರೊ ಗೇಮ್’ ಎಂಬ ಪ್ರಬಂಧವನ್ನು ಓದಿದೆ. ನೆರೆಯ ಅಸ್ಸಾಂನವರಾದ ಸೈಕಿಯಾ, ತಳಮಟ್ಟದ ಅನುಭವಗಳು ಮತ್ತು ಅತ್ಯುತ್ತಮ ಸಂಶೋಧನೆಯ ಮೂಲಕ ಅರುಣಾಚಲದಲ್ಲಿ ಭಾರಿ ಅಣೆಕಟ್ಟೆಗಳನ್ನು ನಿರ್ಮಿಸಲು ನಡೆಯುತ್ತಿರುವ ಉನ್ಮಾದಗ್ರಸ್ತ ಧಾವಂತವನ್ನು ವಿಶ್ಲೇಷಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ದಿಗ್ಭ್ರಮೆಗೊಳಿಸುವಂತೆ 156 ಅಣೆಕಟ್ಟೆ ಯೋಜನೆಗಳ ಪ್ರಸ್ತಾವ ಇದೆ. ಇದರಲ್ಲಿ ಭಾಗಿಯಾಗಿರುವ ಕಂಪೆನಿಗಳು ಮಾಮೂಲಿ ಶಂಕಿತರೇ ಆಗಿರುವ ಜೇಪೀ, ರಿಲಯನ್ಸ್, ಜಿವಿಕೆ, ಜಿಂದಾಲ್ ಇತ್ಯಾದಿ. ಈ ಕಂಪೆನಿಗಳ ಜನರು ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅವರ ಜತೆಗೇ ಇರುವವರು. ಯಾವುದೇ ಚರ್ಚೆ ಅಥವಾ ಸಂವಾದ ಇಲ್ಲದೆ ಈ ಯೋಜನೆಗಳನ್ನು ಅಂತಿಮಗೊಳಿಸಲಾಗಿದೆ.

ರಾಜ್ಯದ ರಾಜಕಾರಣಿಗಳು ಲಾಭದ ತಮ್ಮ ಪಾಲನ್ನು ಮೊದಲೇ ಪಡೆದುಕೊಂಡು ಯೋಜನೆಗಳಿಗೆ ಸಹಿ ಮಾಡಿದ್ದಾರೆ. ಸೈಕಿಯಾ ಅವರು ಮಾತನಾಡಿಸಿದ ಒಬ್ಬ ಅಧಿಕಾರಿ, ಸ್ವತಃ ಅಣೆಕಟ್ಟೆ ನಿರ್ಮಾಣದ ಪರವಾಗಿದ್ದರೂ ಸಮಾಲೋಚನೆಯೇ ಇಲ್ಲದೆ ಇವುಗಳು ನಿರ್ಮಾಣ ಆಗುತ್ತಿರುವ ಬಗ್ಗೆ ದಿಗಿಲು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೊದಲಿಗೆ ಗ್ರಾಮಗಳ ಜನರ ಜತೆ ಚರ್ಚಿಸಬೇಕಿತ್ತು ಮತ್ತು ನಂತರ ಒಂದು ಅಥವಾ ಎರಡು ಅಣೆಕಟ್ಟೆ ನಿರ್ಮಿಸಿ ಅವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೋಡಬೇಕಿತ್ತು ಎಂದು ಈ ಅಧಿಕಾರಿ ಅಭಿಪ್ರಾಯಪಡುತ್ತಾರೆ.

ಆದರೆ ಹಾಗೆ ಆಗಿಲ್ಲ. ಬದಲಿಗೆ, ರಾಜ್ಯದ ನದಿಗಳ ಹಕ್ಕನ್ನು ದೊಡ್ಡ ಪ್ರಮಾಣದಲ್ಲಿ ಖಾಸಗಿ ಕಂಪೆನಿಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ಅರುಣಾಚಲ ಅಥವಾ ಅಲ್ಲಿನ ಜನರಿಗೆ ದೀರ್ಘಾವಧಿ ಹಕ್ಕಾಗಲಿ, ಹಿತಾಸಕ್ತಿಯಾಗಲಿ ಇಲ್ಲ.

ಅಣೆಕಟ್ಟೆ ನಿರ್ಮಾಣದ ವಿರುದ್ಧ ಇರುವವರು ಮತ್ತು  ಅದರ ಪರವಾಗಿರುವವರ ನಿಲುವುಗಳನ್ನು ಸೈಕಿಯಾ ತಮ್ಮ ಪ್ರಬಂಧದಲ್ಲಿ ವಿವರಿಸಿದ್ದಾರೆ. ಆದರೆ ಅವರು ಒದಗಿಸುವ ಸಾಕ್ಷ್ಯಗಳನ್ನು ನೋಡಿದರೆ ಇದು ಉತ್ತಮವಾಗಿ ಪರ್ಯವಸಾನಗೊಳ್ಳಬಹುದು ಎಂಬುದನ್ನು ನಂಬುವುದು ಕಷ್ಟ. 

ಇಂತಹ ಭಾರಿ ಅಣೆಕಟ್ಟೆಗಳು ಎಲ್ಲಿಯೇ ನಿರ್ಮಾಣವಾದರೂ ಅರಣ್ಯ ಮತ್ತು ಜೀವ ವೈವಿಧ್ಯವನ್ನು ನಾಶ ಮಾಡುತ್ತವೆ, ಮಣ್ಣು ಕೊರೆತ ಹೆಚ್ಚಿಸುತ್ತವೆ, ಬುಡಕಟ್ಟು ಜನರನ್ನು ನಿರ್ವಸಿತರನ್ನಾಗಿಸುತ್ತವೆ, ಸ್ಥಳೀಯರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳವಂತೆ ಮಾಡುತ್ತವೆ ಮತ್ತು ಒಟ್ಟಿನಲ್ಲಿ ಅರುಣಾಚಲದ ಜನರ ಜೀವನ ದೇಶದಲ್ಲಿ ಇನ್ನಷ್ಟು ಮೂಲೆಗುಂಪಾಗುವಂತೆ ಮಾಡುತ್ತವೆ.

ನೈಸರ್ಗಿಕ ಸೌಂದರ್ಯಕ್ಕೆ ಅರುಣಾಚಲ ಪ್ರದೇಶ ಪ್ರಸಿದ್ಧ. ಪ್ರಮುಖ ಬಂಡಾಯ ಚಟುವಟಿಕೆಗಳು ಇಲ್ಲದೆ ಈಶಾನ್ಯ ರಾಜ್ಯಗಳಲ್ಲಿಯೇ ಇದು ವಿಶಿಷ್ಟ. ಆದರೆ ನಮ್ಮ ಆಡಳಿತಗಾರರು ವಿನ್ಯಾಸಗೊಳಿಸಿದ ಭವಿಷ್ಯದಲ್ಲಿ, ಬೃಹತ್ ಅಣೆಕಟ್ಟೆಗಳು ಮತ್ತು ಭಾರಿ ಜಲಾಶಯಗಳ ಮೂಲಕ ಈ ಪ್ರದೇಶದ ಪರಿಸರ ಪರಂಪರೆ ಮತ್ತು ಸಾಮಾಜಿಕ ಸ್ಥಿರತೆ ನಾಶವಾಗದಿದ್ದರೂ ಮುಳುಗಡೆಯಂತೂ ಆಗಲಿದೆ.

ಚೆನ್ನೈ ಮೂಲದ ನಿಯತಕಾಲಿಕ ‘ಫೌಂಟನ್ ಇಂಕ್’ನ ಫೆಬ್ರುವರಿ ತಿಂಗಳ ಸಂಚಿಕೆಯಲ್ಲಿ ಸೈಕಿಯಾ ಅವರ ಪ್ರಬಂಧ ಪ್ರಕಟವಾಯಿತು. ಎರಡು ತಿಂಗಳ ನಂತರ, ಅಣೆಕಟ್ಟೆ ಯೋಜನೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಬೌದ್ಧ ಭಿಕ್ಷು ಲಾಮಾ ಲೊಬ್ಸಾಂಗ್ ಗ್ಯಾಟ್ಸೊ ಅವರನ್ನು ತವಾಂಗ್‌ನಲ್ಲಿ ಪೊಲೀಸರು ಬಂಧಿಸಿದರು. ಲಾಮಾ ಅವರ ಅಭಿಮಾನಿಗಳು ಬಂಧನವನ್ನು ವಿರೋಧಿಸಿ ನಡೆಸಿದ ಪ್ರತಿಭಟನಾ ರ್‍ಯಾಲಿಯ ಮೇಲೆ ಪೊಲೀಸರು ಗುಂಡು ಹಾರಿಸಿದರು.

ಒಬ್ಬ ಭಿಕ್ಷು ಸೇರಿ ಇಬ್ಬರು ಬಲಿಯಾದರು. ‘ರಾಷ್ಟ್ರೀಯ’ ಮಾಧ್ಯಮದಲ್ಲಿ ಈ ಸುದ್ದಿ ಪ್ರಕಟವಾಗಲಿಲ್ಲ (ನಾನು ಇದನ್ನು ಕೋಲ್ಕತ್ತದ ಕಡಿಮೆ ಪ್ರಸಾರದ ‘ಫ್ರಾಂಟಿಯರ್’ ಎಂಬ ಪತ್ರಿಕೆಯಲ್ಲಿ ಓದಿದೆ). ಈ ಘಟನೆ ಅರುಣಾಚಲದ ಜನರಲ್ಲಿ ಉಂಟು ಮಾಡಿರುವ ಗಾಯ ಮಾಯುವುದು ಕಷ್ಟ.

ಬೃಹತ್ ಅಣೆಕಟ್ಟೆಗಳ ನಿರ್ಮಾಣ ಹಿಮಾಲಯದಲ್ಲಿ ಪರಿಸರ ಮತ್ತು ಸಮಾಜದ ಮೇಲೆ ಅಪಾರ ಹಾನಿ ಉಂಟು ಮಾಡುತ್ತದೆ. ಈ ಎಲ್ಲ ರೀತಿಯಲ್ಲಿ ತೆರಬೇಕಾದ ಬೆಲೆಯನ್ನು ಸರಿಯಾಗಿ ಲೆಕ್ಕ ಹಾಕಿದರೆ ಅತ್ಯಂತ ಸಂಕುಚಿತ ಆರ್ಥಿಕ ಲೆಕ್ಕಾಚಾರದಲ್ಲಿಯೂ ಈ ಯೋಜನೆಗಳು ಕಾರ್ಯಸಾಧುವಲ್ಲ.

ಅದೂ ಅಲ್ಲದೆ, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳೆರಡೂ ಸದಾ ಭೂಕಂಪದ ಅಪಾಯವನ್ನು ಹೊತ್ತಿರುವ ಪ್ರದೇಶಗಳು. (ಭೂ ವಿಜ್ಞಾನಿಗಳು ಅಂದಾಜಿಸಿರುವಂತೆ) ಇಲ್ಲಿ ದೊಡ್ಡ ಭೂಕಂಪ ಸಂಭವಿಸಿದರೆ ಕೆಲವು ಅಣೆಕಟ್ಟೆಗಳು ಬಿರುಕಾಗಲಿವೆ. ಹಾಗೇನಾದರೂ ಆದರೆ 2013ರ ಪ್ರವಾಹದಲ್ಲಿ ಸಂಭವಿಸಿದ ಹಾನಿ ಕ್ಷುಲ್ಲಕ ಅನಿಸುವಷ್ಟು ಪ್ರಮಾಣದ ನಷ್ಟ ಸಂಭವಿಸಬಹುದು.

ಭಾರತದ ಕೇಂದ್ರಭಾಗದ ಪ್ರಭಾವಿ ಜನರು ಕೆಲವು ದಶಕಗಳಿಂದ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದ ಜನರು ಮತ್ತು ಸಂಪನ್ಮೂಲಗಳನ್ನು ಬಳಕೆ ಮತ್ತು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೋಷಿ ಅವರ ಪುಸ್ತಕಕ್ಕೆ 1950ರ ದಶಕದ ಕೊನೆಯ ಭಾಗದಿಂದಲೇ ಉತ್ತರಾಖಂಡದಲ್ಲಿ ನೆಲೆಸಿರುವ ಲೇಖಕ ಬಿಲ್ ಏಟ್‌ಕೆನ್ ಮುನ್ನಡಿ ಬರೆದಿದ್ದಾರೆ.

ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಹಿಮಾಲಯದಲ್ಲಿ ಬಿಚ್ಚಿಕೊಂಡಿರುವ ಅಭಿವೃದ್ಧಿ ಅಥವಾ ಹೆಚ್ಚು ನಿಖರವಾಗಿ ಹೇಳಬೇಕಾದರೆ ಅನಭಿವೃದ್ಧಿ ಪ್ರಕ್ರಿಯೆಯನ್ನು ಏಟ್‌ಕೆನ್ ಹೀಗೆ ವಿವರಿಸುತ್ತಾರೆ: ‘ಉತ್ತರಾಖಂಡದಲ್ಲಿ ಜೀವಿಸಿ, ಅರ್ಥಪೂರ್ಣ ಪರಿಸರಕ್ಕಾಗಿ ತಮ್ಮ ಸಮಯವನ್ನು ಸಮರ್ಪಿಸಿದ ಸುಂದರಲಾಲ್ ಬಹುಗುಣ ಮತ್ತು ಚಂಡಿಪ್ರಸಾದ್ ಭಟ್ ಅವರ ಧ್ವನಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ.

ಗುತ್ತಿಗೆದಾರರ ಆಧಿಪತ್ಯದಲ್ಲಿ ಹಿಮಾಲಯದ ಅಸ್ಥಿರ ಇಳಿಜಾರುಗಳಲ್ಲಿ ಅಗೆಯುವಿಕೆ, ಗಣಿಗಾರಿಕೆ ಮತ್ತು ರಸ ಹೀರುವಿಕೆಯೇ ನಿಯಮವಾಯಿತು. ಜಗತ್ತಿನ ಅತಿ ಎತ್ತರದ ಮತ್ತು ನಿಧಾನವಾಗಿ ಏರುತ್ತಲೇ ಇರುವ ಪ್ರದೇಶದ ವಿವೇಕಯುತ ಅಭಿವೃದ್ಧಿಗೆ ಬದಲು ಸಮೀಪ ದೃಷ್ಟಿಯ ಅಸ್ಥಿರ ಅಭಿವೃದ್ಧಿಯನ್ನು ಅಪ್ಪಿಕೊಳ್ಳಲಾಯಿತು’.

‘ಗುಡ್ಡಗಾಡು ಪ್ರದೇಶದ ಜನರ ನೈಸರ್ಗಿಕ ಸೊತ್ತುಗಳ ಬೆಲೆಯಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆಯಲು ಹಾತೊರೆಯುತ್ತಿರುವ ಬಯಲು ಪ್ರದೇಶದ ಬಹುಸಂಖ್ಯಾತರ ಭೌತಿಕ ಅಗತ್ಯಗಳನ್ನು ತೃಪ್ತಿಪಡಿಸಲು ಹಿಮಾಲಯದ ರಾಜ್ಯಗಳು ಮತ್ತು ಅಲ್ಲಿನ ಸಣ್ಣ ಸಂಖ್ಯೆಯ ಜನಸಮುದಾಯಗಳು ಸರಿಯಾದ ಬೇಟೆ ಎಂದೇ ಸರ್ಕಾರಿ ನೀತಿಗಳು ಭಾವಿಸಿವೆ’ ಎಂದು ಏಟ್‌ಕೆನ್ ಹೇಳುತ್ತಾರೆ.

ಬಯಲು ಪ್ರದೇಶದ ನಾವು ಉರುವಲು, ಮರ, ರಾಳ, ಔಷಧ ಸಸ್ಯಗಳು, ಖನಿಜಗಳು, ಕುಡಿಯುವ ನೀರು ಮತ್ತು ಜಲ ವಿದ್ಯುತ್‌ಗಾಗಿ ಉತ್ತರಾಖಂಡ ಮತ್ತು ಅರುಣಾಚಲಕ್ಕೆ ಲಗ್ಗೆ ಇಟ್ಟು ಅಲ್ಲಿ ಸೃಷ್ಟಿಸಿರುವ ವಿನಾಶವನ್ನು ಗುಡ್ಡಗಾಡಿನ ಜನರು ಎಷ್ಟು ಸಾಧ್ಯವೋ ಅಷ್ಟು ದಿಟ್ಟವಾಗಿ ಎದುರಿಸಲು ಬಿಟ್ಟಿದ್ದೇವೆ. ನಾವು ಹಿಮಾಲಯದ ಈ ರಾಜ್ಯಗಳಿಗೆ ಪ್ರವಾಸಿಗರಾಗಿ ಅಥವಾ ತೀರ್ಥಯಾತ್ರಿಕರಾಗಿ ಹೋದಾಗಲೂ ಅಲ್ಲಿನ ಜನರು ಮತ್ತು ಪರಂಪರೆಯನ್ನು ಬಳಸಬಹುದಾದ ಸಂಪನ್ಮೂಲ ಎಂದಷ್ಟೇ ನೋಡುತ್ತೇವೆ.

ಉತ್ತರಾಖಂಡ ಮತ್ತು ಅರುಣಾಚಲದ ಜನರಿಗೆ ಉತ್ತಮ ಗುಣಮಟ್ಟದ ಜೀವನ ಬೇಕು ಎಂಬುದು ಸತ್ಯ. ಆದರೆ ಇದು ನಾವು ಅವರನ್ನು ತಳ್ಳಿರುವ ದುರಾಸೆಯ ಅಭಿವೃದ್ಧಿಯಿಂದ ಬರುವುದಿಲ್ಲ. ಬದಲಿಗೆ, ಇತರ ಅಂಶಗಳ ಜತೆಗೆ, ಇದು ನೈತಿಕವಾಗಿ ಮತ್ತು ಪಾರಿಸರಿಕವಾಗಿ ಜವಾಬ್ದಾರಿಯುತ ರೂಪದ ಪ್ರವಾಸೋದ್ಯಮದಿಂದ ಬರಬೇಕು; ಗ್ರಾಮೀಣ ಜೀವನೋಪಾಯ ಅರಣ್ಯ ನಿರ್ವಹಣೆಯ ಜತೆಗೆ ಮರು ಸಂಯೋಜನೆಗೊಳ್ಳಬೇಕು; ಸಣ್ಣ ಜಲ ವಿದ್ಯುತ್ ಯೋಜನೆಗಳು, ಹರಿಯುವ ನೀರಲ್ಲೇ ವಿದ್ಯುತ್ ಉತ್ಪಾದನೆ ಯೋಜನೆಗಳು ರೂಪುಗೊಂಡು ಅವು ಸ್ಥಳೀಯ ಗ್ರಾಮಸ್ಥರು ಮತ್ತು ‘ರಾಷ್ಟ್ರೀಯ ಗ್ರಿಡ್’ನ ಅಗತ್ಯ ಪೂರೈಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ, ಡೆಹ್ರಾಡೂನ್ ಅಥವಾ ಇಟಾನಗರ ಅಥವಾ ನವದೆಹಲಿಯಲ್ಲಿ ಕುಳಿತಿರುವ ಈ ಪ್ರದೇಶದ ಮಿಡಿತವೇ ಗೊತ್ತಿಲ್ಲದ, ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿರ್ದೇಶಿಸುವ ಅಭಿವೃದ್ಧಿಯ ಬದಲಿಗೆ, ಪ್ರತಿಯೊಂದು ಗ್ರಾಮ, ಪ್ರತಿ ಕಣಿವೆ, ಪ್ರತಿ ಜಲಾನಯನ ಪ್ರದೇಶಗಳು ನೈಸರ್ಗಿಕ ಕೊಡುಗೆಯನ್ನು ಸುಸ್ಥಿರ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ನಿಜವಾದ ಸಹಭಾಗಿ ಅಭಿವೃದ್ಧಿ ರೂಪುಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT