ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುಕೊಳ್ಳುವಿಕೆಯ ಷರತ್ತು, ಮುಗಿಯದ ಹಗ್ಗಜಗ್ಗಾಟ

ಮಹಿಳಾ ಮೀಸಲು ಮಸೂದೆಯ 22 ವರ್ಷಗಳ ದೀರ್ಘ ಪಯಣ ಪೂರ್ಣಗೊಳ್ಳುವುದು ಎಂದಿಗೆ?
Last Updated 24 ಜುಲೈ 2018, 20:19 IST
ಅಕ್ಷರ ಗಾತ್ರ

ಕಳೆದ ವಾರ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಮಹಿಳಾ ಮೀಸಲು ಮಸೂದೆ ಮತ್ತೊಮ್ಮೆ ಸದ್ದು ಮಾಡಿದೆ. ಪ್ರತಿ ಬಾರಿ ಸಂಸತ್ ಅಧಿವೇಶನ ಆರಂಭವಾದಾಗಲೆಲ್ಲಾ ಮಹಿಳಾ ಮೀಸಲು ಮಸೂದೆಯ ಬಗ್ಗೆ ಮಾತುಗಳನ್ನಾಡುವುದು ಒಂದು ವಿಧ್ಯುಕ್ತ ಕ್ರಿಯೆ ಎಂಬಂತೆ ನಡೆದುಬರುತ್ತಿದೆ.

ಅದರಾಚೆಗೆ ಕ್ರಿಯೆಯಲ್ಲಿ ಏನೂ ಆಗುತ್ತಿಲ್ಲ ಎಂಬುದು ಗೊತ್ತಿರುವಂತಹದ್ದೇ! ಈ ಬಾರಿಯೂ ಮುಂಗಾರು ಅಧಿವೇಶನದ ಆರಂಭಕ್ಕೆ ಎರಡು ದಿನಗಳ ಮುಂಚೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಸಂಸತ್‌ನಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜುಲೈ 18ರಂದು ಆರಂಭವಾಗಿರುವ ಸಂಸತ್‍ನ ಮುಂಗಾರು ಅಧಿವೇಶನ ಆಗಸ್ಟ್ 10ಕ್ಕೆ ಮುಕ್ತಾಯವಾಗಲಿದೆ.

‘2010ರ ಮಾರ್ಚ್ 9ರಂದು ಮಹಿಳಾ ಮೀಸಲು ಮಸೂದೆ, ಬಿಜೆಪಿ ಬೆಂಬಲದಿಂದ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಆಗಿನ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಅವರು, ಮಸೂದೆಯ ಅಂಗೀಕಾರ ಐತಿಹಾಸಿಕ ಎಂದಿದ್ದರು. ಆದರೆ, ಆ ನಂತರ ಎಂಟು ವರ್ಷಗಳಿಗೂ ಹೆಚ್ಚು ಕಾಲದಿಂದ ಒಂದಲ್ಲ ಒಂದು ನೆಪದ ಮೂಲಕ ಲೋಕಸಭೆಯಲ್ಲಿ ಮಸೂದೆ ಮಂಡನೆಯನ್ನು ತಡೆಹಿಡಿಯಲಾಗಿದೆ. ಮಸೂದೆಗೆ ಕಾಂಗ್ರೆಸ್‌ ಬೆಂಬಲ ಅಚಲವಾಗಿಯೇ ಇದೆ. ಅದೇ ಬದ್ಧತೆಯನ್ನು ಬಿಜೆಪಿ ತೋರುತ್ತಿಲ್ಲ’ ಎಂದು ರಾಹುಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮಹಿಳಾ ಮೀಸಲು ಮಸೂದೆಯ ಇತಿಹಾಸ ಸುದೀರ್ಘವಾದದ್ದು. 22 ವರ್ಷಗಳಷ್ಟು ಹಿಂದೆ, 1996ರಲ್ಲಿ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಮಸೂದೆಯನ್ನು ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆ ನಂತರ 2010ರಲ್ಲಿ ರಾಜ್ಯಸಭೆಯಲ್ಲಿನ ಐತಿಹಾಸಿಕ ಕ್ಷಣಕ್ಕೆ ಈ ಮಸೂದೆ ಸಾಕ್ಷಿಯಾಗಿತ್ತು. ಇದಕ್ಕೆ ಕಾರಣ, ಆಗ ಪ್ರತಿಸ್ಪರ್ಧಿ ಪಕ್ಷಗಳ ಮೂವರು ಮಹಿಳೆಯರು– ಸೋನಿಯಾ ಗಾಂಧಿ, ಬೃಂದಾ ಕಾರಟ್ ಹಾಗೂ ಸುಷ್ಮಾ ಸ್ವರಾಜ್ ಅವರು ಮಸೂದೆಯ ಪರ ಒಗ್ಗಟ್ಟಾಗಿ ಎದ್ದುನಿಂತಿದ್ದರು.

ಈಗ ರಾಹುಲ್ ಗಾಂಧಿಯವರ ಪತ್ರಕ್ಕೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಸ್ಪಂದಿಸಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿರುವ ಅಂಶಗಳು, ಮತ್ತೊಂದು ಚರ್ಚೆಗೆ ನಾಂದಿಯಾಗಿದೆ. ಸಂಸತ್ ಹಾಗೂ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಮೀಸಲಿಡುವ ಮಹಿಳಾ ಮೀಸಲು ಮಸೂದೆ ಬೆಂಬಲಿಸುವ ರಾಹುಲ್‍ ಅವರ ಉಪಕ್ರಮವನ್ನು ರವಿಶಂಕರ ಪ್ರಸಾದ್ ಸ್ವಾಗತಿಸಿದ್ದಾರೆ. ಆದರೆ, ಮಹಿಳಾ ಮೀಸಲು ಮಸೂದೆ ಜೊತೆಗೆ ತ್ರಿವಳಿ ತಲಾಖ್ ಹಾಗೂ ನಿಖಾ ಹಲಾಲ ನಿಷೇಧಿಸುವ ಮತ್ತೆರಡು ಮಸೂದೆಗಳಿಗೂ ಕಾಂಗ್ರೆಸ್ ಬೆಂಬಲ ನೀಡಬೇಕು ಎಂದು ರವಿಶಂಕರ ಪ್ರಸಾದ್ ಕೋರಿದ್ದಾರೆ.

ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿಕೊಂಡ ಮುಸ್ಲಿಮರ ಪಕ್ಷ ಕಾಂಗ್ರೆಸ್ ಎಂಬಂತಹ ವಿಚಾರ ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ಈ ಷರತ್ತನ್ನು ಬಿಜೆಪಿ ಏಕೆ ಹಾಕಿದೆ ಎಂಬುದನ್ನು ವ್ಯಾಖ್ಯಾನಿಸಬೇಕಿಲ್ಲ. ಈ ಮೂರು ಮಸೂದೆಗಳಷ್ಟೇ ಅಲ್ಲ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು (ಎನ್‌ಸಿಬಿಸಿ) ಪುನರ್‌ರಚಿಸುವ ಉದ್ದೇಶಿತ ಉಪಕ್ರಮಕ್ಕೂ ಕಾಂಗ್ರೆಸ್ ಬೆಂಬಲ ನೀಡಬೇಕಿದೆ. ಮಹಿಳಾ ಸಬಲೀಕರಣದ ವಿಚಾರ ರಾಜಕೀಯ ಪಕ್ಷಗಳ ನಡುವಿನ ಕೊಡುಕೊಳ್ಳುವಿಕೆಯ ರಾಜಕೀಯ ವ್ಯವಹಾರದ ಮಟ್ಟಕ್ಕೆ ಇಳಿದಿರುವುದು ವಿಪರ್ಯಾಸ.

ಈ ವಿಚಾರದಲ್ಲಿ ಕಾಂಗ್ರೆಸ್ ಒಪ್ಪಂದಕ್ಕೆ ಬರಬೇಕೆಂದು ಬಿಜೆಪಿ ಏಕೆ ನಿರೀಕ್ಷಿಸುತ್ತಿದೆ? ಮಹಿಳಾ ಮೀಸಲು ಮಸೂದೆಗೆ ಈಗಾಗಲೇ ಕಾಂಗ್ರೆಸ್ ಹಾಗೂ ಅನೇಕ ಪ್ರತಿಪಕ್ಷಗಳ ಬೆಂಬಲ ಇದೆ ಎಂಬುದು ಗೊತ್ತಿರುವ ಸಂಗತಿ. ಹೀಗಿರುವಾಗ, ಮಸೂದೆ ಮಂಡನೆಯಾದಾಗ ಅನುಮೋದನೆಯಾಗುವುದಿಲ್ಲ ಎಂಬಂಥ ಅಪಾಯವೇ ಇಲ್ಲ. ಜೊತೆಗೆ ಮಹಿಳಾ ಮೀಸಲಾತಿ ಎಂಬುದು ಬರೀ ಕಾಂಗ್ರೆಸ್‌ ವಿಚಾರಧಾರೆಯೇ? ಅದು, ಬಿಜೆಪಿಗೆ 2014ರ ಚುನಾವಣಾ ಪ್ರಣಾಳಿಕೆಯ ಭಾಗವೇ ಆಗಿದೆಯಲ್ಲವೇ? ಹೀಗಿರುವಾಗ, ‘ನೀನೂ ಕೊಡು ನಾವೂ ಕೊಡುತ್ತೇವೆ’ ಎನ್ನುವಂತಹ ವ್ಯವಹಾರ ಕುದುರಿಸುವ ರೀತಿಯ ಮಾತುಗಳೇಕೆ? ಸಂವಿಧಾನಬದ್ಧವಾದ ಸಮಾನತೆ ಹಾಗೂ ಸಮಾನ ಪ್ರಾತಿನಿಧ್ಯಕ್ಕಾಗಿ ಇಬ್ಬರು ರಾಜಕೀಯ ನಾಯಕರ ನಡುವೆ ವ್ಯವಹಾರ ಏರ್ಪಡಬೇಕೆಂಬುದು ಸಲ್ಲದ ಮಾತು.

ತ್ರಿವಳಿ ತಲಾಖ್ ಹಾಗೂ ನಿಖಾ ಹಲಾಲ ನಿಷೇಧದ ಜೊತೆಗೆ ಮಹಿಳಾ ಮೀಸಲು ಮಸೂದೆಯ ಭವಿಷ್ಯವನ್ನು ತಳಕು ಹಾಕಲು ಬಿಜೆಪಿ ಏಕೆ ಯತ್ನಿಸುತ್ತಿದೆ? ತ್ರಿವಳಿ ತಲಾಖ್ ಹಾಗೂ ನಿಖಾ ಹಲಾಲಗಳಂತಹ ಕಂದಾಚಾರಗಳು, ಮಹಿಳೆಯನ್ನು ಶೋಷಿಸುವಂತಹ ಆಚರಣೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಕ್ರೂರ ಆಚರಣೆಗಳಿಗೆ ನಾಗರಿಕ ಸಮಾನತೆಯ ಸಮಾಜದಲ್ಲಿ ಅವಕಾಶ ಇರಬಾರದು ಎಂಬುದೂ ನಿಜ. ತ್ರಿವಳಿ ತಲಾಖ್ ಅಕ್ರಮವಾದುದು ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್ ಕೂಡ ಘೋಷಿಸಿದೆ. ನಿಖಾ ಹಲಾಲ ಸಹ ಈ ವರ್ಷ ಸುಪ್ರೀಂ ಕೋರ್ಟ್‌ನಿಂದ ಇತ್ಯರ್ಥಗೊಳ್ಳುವ ಪ್ರಕ್ರಿಯೆಯಲ್ಲಿದೆ.

ತ್ರಿವಳಿ ತಲಾಖ್ ನಿಷೇಧಿಸುವ ಮಾತನ್ನಷ್ಟೇ ಸಚಿವ ಪ್ರಸಾದ್ ಅವರು ಹೇಳುತ್ತಿಲ್ಲ. ಅದನ್ನು ಕ್ರಿಮಿನಲ್ ಅಪರಾಧವಾಗಿಸಬೇಕು ಎಂದೂ ಅವರು ಒತ್ತಿಹೇಳುತ್ತಿದ್ದಾರೆ.

ಇದನ್ನು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಕಡಿಮೆ ಎಂಬುದೂ ಸಚಿವರಿಗೆ ಗೊತ್ತಿದೆ. ಕಳೆದ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆಗೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಅಡ್ಡಿಪಡಿಸಿದ್ದಕ್ಕೆ ಮಸೂದೆಯಲ್ಲಿ ಪ್ರಸ್ತಾಪಿತವಾಗಿರುವ ಈ ಅಪರಾಧೀಕರಣದ ಅಂಶವೇ ಕಾರಣವಾಗಿತ್ತು. ಜೀವನಾಂಶ ಖಾತರಿ, ಮಕ್ಕಳ ಪೋಷಕತ್ವ ಹಕ್ಕುಗಳು ಹಾಗೂ ಪತ್ನಿಗೆ ಎಲ್ಲಾ ಬಗೆಯ ರಕ್ಷಣೆ ನೀಡುವಂತಹ ತ್ರಿವಳಿ ತಲಾಖ್ ಕುರಿತಾದ ಸಿವಿಲ್ ಕಾನೂನಿಗೆ ಯಾವುದೇ ರಾಜಕೀಯ ಪಕ್ಷದಿಂದಲೂ ವಿರೋಧ ಬರುವುದು ಸಾಧ್ಯವಿಲ್ಲ. ಅದನ್ನು ಕ್ರಿಮಿನಲ್ ಅಪರಾಧವಾಗಿಸಿ ಅದೂ ಮೂರು ವರ್ಷಗಳ ತನಕ ಜೈಲು ಶಿಕ್ಷೆ ನೀಡುವಂತಹ ಶಿಕ್ಷಾರ್ಹ ಅಪರಾಧವಾಗಿಸುವುದು ವಿವಾದದ ಅಂಶವಾಗಿದೆ.

ಹೀಗಾಗಿ, ಮುಸ್ಲಿಂ ಮಹಿಳೆ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ 2017 ಕರಡನ್ನು ಆತುರಾತುರವಾಗಿ ಸಿದ್ಧಪಡಿಸಲಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ. ಇದಕ್ಕಾಗಿಯೇ ಈ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಕಳಿಸಬೇಕೆಂದು ಲೋಕಸಭೆಯಲ್ಲಿ ಚರ್ಚೆಯ ವೇಳೆ ಕಾಂಗ್ರೆಸ್ ಕೇಳಿತ್ತು. ಹೀಗಿದ್ದೂ ಮಸೂದೆ ಪರವೇ ಕಾಂಗ್ರೆಸ್ ಮತ ಹಾಕಿತ್ತು. ಈ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಇನ್ನೂ ಅನುಮೋದನೆ ಪಡೆದುಕೊಳ್ಳಬೇಕಾಗಿದೆ.

ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ವಿಧಾನಸಭೆ ಚುನಾವಣೆಗಳಲ್ಲದೆ ಸಾರ್ವತ್ರಿಕ ಚುನಾವಣೆಗಳೂ ಸನಿಹದಲ್ಲಿವೆ. ಹೀಗಾಗಿ ಈ ಅಧಿವೇಶನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ತ್ರಿವಳಿ ತಲಾಖ್, ನಿಖಾ ಹಲಾಲ, ಮಹಿಳಾ ಮೀಸಲು ಸೇರಿದಂತೆ ಪ್ರಮುಖ ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆದರೆ ಅದು ತಂದುಕೊಡಬಹುದಾದ ರಾಜಕೀಯ ಲಾಭಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಸರ್ಕಾರ ಹೊಂದಿರುವುದು ಸ್ಪಷ್ಟ.

ಇಂತಹ ಸನ್ನಿವೇಶದಲ್ಲಿ, ಸಂಸತ್ ಅಧಿವೇಶನ ಆರಂಭವಾಗುವ ಎರಡು ದಿನಗಳ ಮುಂಚೆಯೇ ಮಹಿಳಾ ಮಸೂದೆಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆಯುವ ಮೂಲಕ ಮಹಿಳಾ ಪರ ಕಾಳಜಿಗೆ ಸಕಾಲದಲ್ಲಿ ಸ್ಪಂದಿಸಿದಂತಾಗಿದೆ ಎಂದು ರಾಹುಲ್ ಗಾಂಧಿ ಭಾವಿಸಿಕೊಂಡಿದ್ದಿರಬಹುದು. ಆದರೆ ಇತರ ಎರಡು ಮಹಿಳಾ ನಿರ್ದಿಷ್ಟ ಮಸೂದೆಗಳನ್ನು ಇದರ ಜೊತೆಗೆ ಒಟ್ಟುಗೂಡಿಸುವ ಬಿಜೆಪಿ ಪ್ರತಿಕ್ರಿಯೆಯ ಕಾರಣದಿಂದಾಗಿ ಕಾಂಗ್ರೆಸ್‍ ಸಿಕ್ಕಿಸಿಕೊಂಡ ಗರಿಯನ್ನು ಕಿತ್ತು ಹಾಕಿದಂತಾಗಿದೆ. ಮಹಿಳಾ ಮಸೂದೆ ಬಗ್ಗೆ ನೈತಿಕ ನೆಲೆ ಸಾಧಿಸುವ ಕಾಂಗ್ರೆಸ್ ಯತ್ನಕ್ಕೆ ತಣ್ಣೀರೆರಚಿದಂತೆ ಆಗಿದೆ.

ಅಷ್ಟೇ ಅಲ್ಲ, ಪ್ರಧಾನಿಗೆ ಪತ್ರ ಬರೆದ ನಂತರ ರಚಿಸಲಾದ 51 ಸದಸ್ಯ ಬಲದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯುಸಿ) ರಾಹುಲ್ ತಾಯಿ ಸೋನಿಯಾ ಗಾಂಧಿ ಸೇರಿದಂತೆ ಇರುವುದು ಕೇವಲ 7 ಮಂದಿ ಮಹಿಳೆಯರು. ಮಹಿಳಾ ಮೀಸಲು ಮಸೂದೆಗೆ ಆಗ್ರಹಿಸುತ್ತಿರುವ ಸಂದರ್ಭದಲ್ಲಿ, ತಮ್ಮದೇ ಪಕ್ಷದ, ನಿರ್ಣಯಗಳನ್ನು ಕೈಗೊಳ್ಳುವ ಉನ್ನತಾಧಿಕಾರ ಸಮಿತಿಗೆ ನೇಮಕಗೊಂಡವರು ಕೇವಲ ಶೇ 13ರಷ್ಟು ಮಹಿಳೆಯರು. ಸಹಜವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿಗೆ ಇದು ಪ್ರೇರಕವಾಯಿತು.

ಇಂತಹ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ‘ಮಹಿಳಾ ಮೀಸಲು ಮಸೂದೆ ಬಗ್ಗೆ ಸದ್ದು ಕೇಳಿಬರುತ್ತದೆ. ಲೋಕಸಭೆ ಎಂಪಿಗಳ ಪೈಕಿ ಶೇ 33ರಷ್ಟು ಮಂದಿ ಮಹಿಳೆಯರನ್ನು ಹೊಂದಿರುವ ರಾಜಕೀಯ ಪಕ್ಷದ ಕಾರ್ಯಕರ್ತನಾಗಿರುವುದು ನನಗೆ ಹೆಮ್ಮೆ’ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಎಂಪಿ ಡೆರೆಕ್ ಒ ಬ್ರೀನ್ ಅವರು ಟ್ವೀಟ್‍ ಸಂದೇಶದಲ್ಲಿ ತಮ್ಮ ಪಕ್ಷದ ಬಗ್ಗೆ ಬಡಾಯಿ ಕೊಚ್ಚಿಕೊಂಡರು.

ಇದಕ್ಕೆ ಕಾರಣವಿದೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಕೆಯಂತಹ ಆರಂಭದ ಹಂತದಲ್ಲೇ ರಾಜಕೀಯ ಪಕ್ಷಗಳು ಮಾಡುವ ತಾರತಮ್ಯ ಎದ್ದುಕಾಣಿಸುವಂತಹದ್ದು. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ 45 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್, 15 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ಮಮತಾ ಅವರ ಪಕ್ಷ ನಿರ್ದಿಷ್ಟವಾಗಿ ಶೇ 33ರಷ್ಟು ಟಿಕೆಟ್‍ ನೀಡಿದ್ದು ವಿಶೇಷ. ಮಹಿಳಾ ಮೀಸಲು ತತ್ವವನ್ನು ಅನುಷ್ಠಾನಕ್ಕೆ ತಂದ ರಾಜಕೀಯ ಪಕ್ಷವಾಗಿ ಅದು ಎದ್ದು ಕಂಡಿದೆ.

ಮಹಿಳಾ ಮೀಸಲು ಬಗ್ಗೆ ನಮ್ಮ ರಾಜಕಾರಣಿಗಳು ಈವರೆಗೆ ನೀಡಿರುವ ಕುಪ್ರಸಿದ್ಧ ಹೇಳಿಕೆಗಳಲ್ಲಿ ವ್ಯಕ್ತವಾಗಿರುವ ಪೂರ್ವಗ್ರಹಗಳು ಈಗಲೂ ಬದಲಾಗಿಲ್ಲ ಎಂಬುದೇ ಸದ್ಯದ ದುರಂತ. ಮೂವರು ಹಿರಿಯ ಯಾದವ ನಾಯಕರು ನುಡಿದ ಮಾತುಗಳು ಈಗಲೂ ಅನುರಣಿಸುತ್ತವೆ. ‘ಈ ಕತ್ತರಿಸಿದ ಕೂದಲಿನ ವಿಮೋಚಿತ ಮಹಿಳೆಯರು ನಮ್ಮ ಗ್ರಾಮೀಣ ಮಹಿಳೆಯರ ಪರವಾಗಿ ಮಾತನಾಡಬಲ್ಲರು ಎಂದು ನೀವು ಭಾವಿಸುತ್ತೀರಾ?’ ಎಂದಿದ್ದರು ಸಂಯುಕ್ತ ಜನತಾದಳದ ನಾಯಕ ಶರದ್ ಯಾದವ್.

‘ಮಹಿಳಾ ಮೀಸಲಿನಿಂದ ಆಯ್ಕೆಯಾಗುವವರು ಅಧಿಕಾರಿಗಳು ಹಾಗೂ ವಾಣಿಜ್ಯೋದ್ಯಮಿಗಳ ಪತ್ನಿಯರು ಹಾಗೂ ಹೆಣ್ಣು ಮಕ್ಕಳು; ಶಿಳ್ಳೆ ಹೊಡೆಸಿಕೊಳ್ಳುವ ಮಹಿಳೆಯರಿವರು’ ಎಂದಿದ್ದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಬಡಬಡಿಕೆ ಅಷ್ಟಕ್ಕೇ ನಿಂತಿರಲಿಲ್ಲ. ‘ನಮ್ಮ ಹಳ್ಳಿ ಮಹಿಳೆಯರು ಎಂಪಿಗಳಾಗಿ ಆಯ್ಕೆಯಾಗುವುದು ಸಾಧ್ಯಹೇಳಿದ್ದ ಮಾತುಗಳಿವು: ‘ಈಗಿನ ಸ್ವರೂಪದಲ್ಲಿ ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ನನ್ನ ಹೆಣದ ಮೇಲೆ ಮಾತ್ರ ಅಂಗೀಕಾರವಾಗಬಹುದು. ಮೀಸಲಿನಲ್ಲಿ ಮೀಸಲು ಬೇಕು ನಮಗೆ.

ಮುಸ್ಲಿಂ ಮಹಿಳೆಯರು, ಹಿಂದುಳಿದ ವರ್ಗಗಳ ಮಹಿಳೆಯರು ಹಾಗೂ ದಲಿತರನ್ನು ಈ ಮಸೂದೆ ಒಳಗೊಳ್ಳಬೇಕು’. ಈ ಬಗೆಯ ಸಂಕುಚಿತ ವಾಗ್ವಾದಗಳ ನಂತರ ಮಹಿಳಾ ಮೀಸಲು ಮಸೂದೆ ಬಗ್ಗೆ ರಾಜಕಾರಣಿಗಳಿಂದ ಸಿಗುತ್ತಿರುವುದು ಬಾಯಿಮಾತಿನ ಆಶ್ವಾಸನೆಗಳಷ್ಟೇ. ಸಹಜವಾಗಿಯೇ ಮಹಿಳಾ ರಾಜಕಾರಣಿಗಳ ಸಂಖ್ಯೆ ಅತ್ಯಂತ ಕಡಿಮೆ ಇರುವ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.

ಭಾರತೀಯ ಮಹಿಳೆಯರನ್ನು ಬದುಕಿನ ಎಲ್ಲಾ ರಂಗಗಳಲ್ಲಿ ಹತ್ತಿಕ್ಕಲಾಗುತ್ತಿದೆ ಎಂಬ ಭಾವನೆ ಜಾಗತಿಕವಾಗಿ ಮೊಳೆಯುತ್ತಿರುವಂತಹ ಸಂದರ್ಭ ಇದು.‘ಎಕನಾಮಿಸ್ಟ್’ ನಿಯತಕಾಲಿಕೆ ಇತ್ತೀಚೆಗೆ ತನ್ನ ಮುಖಪುಟದಲ್ಲಿ ‘ಹೌ ಇಂಡಿಯಾ ಫೇಲ್ಸ್ ಇಟ್ಸ್ ವಿಮೆನ್’ (ಮಹಿಳೆಯರ ಕಾಳಜಿನಿರ್ವಹಿಸುವಲ್ಲಿ ಭಾರತದ ವೈಫಲ್ಯ) ಎಂಬ ಶೀರ್ಷಿಕೆಯೊಂದಿಗೆ ಮಹಿಳೆಯನ್ನು ಪುರುಷನ ಹೆಬ್ಬೆರಳು ಕೆಳಕ್ಕೆ ತಳ್ಳುತ್ತಿರುವಂತಹ ಸಶಕ್ತ ಚಿತ್ರವನ್ನು ಪ್ರಕಟಿಸಿತ್ತು. ಉದ್ಯೋಗ ರಂಗದಲ್ಲೂ ಕುಸಿಯುತ್ತಿರುವ ಮಹಿಳೆಯ ಪ್ರಮಾಣವನ್ನು ಕುರಿತಾದ ವರದಿಯನ್ನು ಈ ನಿಯತಕಾಲಿಕೆ ಪ್ರಕಟಿಸಿದೆ. ಆದರೆ, ಮಹಿಳಾ ನೇತೃತ್ವದ ಅಭಿವೃದ್ಧಿಯ ಆಶಯದ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಲೇ ಬಂದಿದ್ದಾರೆ.

ಸದ್ಯಕ್ಕೆ ಆಫ್ರಿಕಾ ದೇಶಗಳಲ್ಲಿ ಪ್ರವಾಸ ಮಾಡುತ್ತಿರುವ ನಮ್ಮ ಪ್ರಧಾನಿ ರುವಾಂಡಾಗೂ ಭೇಟಿ ನೀಡಿದ್ದಾರೆ. ಮಹಿಳೆಯರ ರಾಜಕೀಯ ಪ್ರಾತಿನಿಧ್ಯದಲ್ಲಿ ಆ ಪುಟ್ಟ ಆಫ್ರಿಕನ್ ದೇಶ ಮಾಡಿರುವ ಸಾಧನೆ ಅತ್ಯಂತ ದೊಡ್ಡದು. ಇದು ನಮ್ಮ ದೇಶದ ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಲು ನಮ್ಮ ಪ್ರಧಾನಿಗೆ ಪ್ರೇರಣೆಯಾಗುವುದೇ? ನನೆಗುದಿಗೆ ಸಿಲುಕಿರುವ ಮಹಿಳಾ ಮೀಸಲು ಮಸೂದೆಗೆ ನಿಜಕ್ಕೂ ಚಾಲನೆ ಸಿಗುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT