ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವುದಿಲ್ಲ ನಾನು ಅದೃಷ್ಟವನು, ಅಧಿಕಾರವನ್ನು...

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಆಕೆಯೊಬ್ಬ ಅಪೂರ್ವ ಸುಂದರಿ. ಅವಳ ಹೊರ ಮತ್ತು ಒಳ ಸೌಂದರ್ಯಗಳು ಅವಳ ವ್ಯಕ್ತಿತ್ವಕ್ಕೆ ಲೋಕೋತ್ತರವೆನಿಸುವ ಘನತೆಯನ್ನು, ಶೋಭೆಯನ್ನು ತಂದಿದ್ದವು. ಈ ಗುಣಗಳಿಗೆ ಮುಕುಟವೆನಿಸುವಂತೆ ಅವಳಲ್ಲಿ ಕವಿಪ್ರತಿಭೆಯೂ ಇತ್ತು. ಅದನ್ನು ಲೋಕ ಮೆಚ್ಚಲಿ ಎನ್ನುವ ಸಹಜ ಬಯಕೆಯೂ ಇತ್ತು. ಅವಳ ಅಪ್ಪನೋ ಶುದ್ಧ ಅಥವಾ ಕರ್ಮಟ ಎನ್ನುವುದೇ ವಾಸಿಯೇನೋ ಎನ್ನುವಷ್ಟು ಧಾರ್ಮಿಕ ವ್ಯಕ್ತಿ.

ಎಷ್ಟರ ಮಟ್ಟಿಗೆಂದರೆ, ಅಂದಿನ ಅನ್ನ ಉಣ್ಣಲು ಬೇಕಾದಷ್ಟು ಕಾಯಕ ತಾನು ಮಾಡಿಯೇ ತೀರಬೇಕು ಎನ್ನುವಷ್ಟು. ಇದು ವಿಲಕ್ಷಣ ಎನಿಸುವುದಕ್ಕೆ ಕಾರಣ, ಅವನೊಬ್ಬ ಚಕ್ರವರ್ತಿಯಾಗಿದ್ದ. ಧರ್ಮಾಂಧ ಎಂದು ಕರೆಯಬಹುದಾದಷ್ಟು ಅತಿರೇಕದ ಧೋರಣೆಯ ಈ ಚಕ್ರವರ್ತಿಗೆ ತನ್ನ ಇಂಥ ಪ್ರತಿಭಾವಂತ ಮಗಳ ಮೇಲೆ ಮೋಹ, ಅಕ್ಕರೆ ಎಲ್ಲವೂ ಇದ್ದವು, ಆದರೆ ಅವನೊಳಗೊಬ್ಬ ಅಪ್ಪ, ಗಂಡಸು ಸದಾ ಜೀವಂತವಾಗಿ ಈ ಪ್ರತಿಭೆಯ ಖನಿಯನ್ನು ಎಚ್ಚರದ ಕಣ್ಣುಗಳಿಂದ (ಕಾವಲಿನ ಕಣ್ಣುಗಳು ಎನ್ನುವುದು ಹೆಚ್ಚು ಸಹಜ!) ಗಮನಿಸುತ್ತಲೇ ಇದ್ದ.

ಒಂದಾನೊಂದು ದಿನ ಸಂಜೆ ಈ ಕವಯಿತ್ರಿ ಹೂದೋಟದಲ್ಲಿ, ತನ್ನ ಲಹರಿಯಲ್ಲಿ ಕವಿತೆ ಕಟ್ಟುತ್ತಾ ಹಾಡುತ್ತಾ ಇದ್ದಳು.
ಬದುಕು ಧನ್ಯವೆನಿಸಲು
ಇರಲಿ ನಾಲ್ಕು ಸುಖಗಳು ಸದಾ
ಮದಿರೆ, ಹೂವುಗಳು, ಬೀಸುವ ತಂಗಾಳಿ ಹಾಗೂ ನನ್ನ ನಲ್ಲ


ಸಂಜೆಯ ಸ್ಫೂರ್ತಿಯೋ, ಉತ್ಸಾಹದ ಮನಸ್ಥಿತಿಯೋ ಅವಳು ಈ ಸಾಲುಗಳನ್ನು ಮತ್ತೆ ಮತ್ತೆ ಹಾಡುತ್ತಲೇ ಇದ್ದಳು. ಕಣ್ಣೆತ್ತಿ ನೋಡಿದರೆ ಆ ಹೂದೋಟದ ಅಂಚಿನಲ್ಲಿನ ಕಾಲುದಾರಿಯಲ್ಲಿ ಅಪ್ಪ ಇವಳನ್ನೇ ಗಮನಿಸುತ್ತಿದ್ದಾನೆ. ಇವಳೂ ಅದೇ ದಿಕ್ಕಿನತ್ತ ಸಾಗುತ್ತಿದ್ದಾಳೆ. ಇವಳ ಕವಿ ಪ್ರತಿಭೆ ಪ್ರಜ್ವಲಿಸಿ, ಪ್ರತ್ಯುತ್ಪನ್ನ ಮತಿ ಜಾಗೃತವಾಗಿ ಅವಳ ಕವಿತೆಯೇ ಬದಲಾಗಿ ಬಿಟ್ಟಿತು.

ಬದುಕು ಧನ್ಯವೆನಿಸಲು
ಇರಲಿ ನಾಲ್ಕು ಸಂಗತಿಗಳು ಸದಾ
ಪ್ರಾರ್ಥನೆ, ಉಪವಾಸ, ಕಣ್ಣೀರು ಹಾಗೂ ಪಶ್ಚಾತ್ತಾಪ


ತನ್ನ ಕವಿತೆಯಲ್ಲಿ ಹೀಗೆ ಭೂಮಿ ಆಕಾಶಗಳ ವ್ಯತ್ಯಾಸ ಮಾಡಿದರೂ ತನ್ನ ಮುಖಭಾವದಲ್ಲಾಗಲೀ, ದೇಹಭಾಷೆಯಲ್ಲಾಗಲೀ ವ್ಯತ್ಯಾಸವಾಗದಂತೆ ತನ್ನನ್ನು ತಾನು ಈಕೆ ಸಂಭಾಳಿಸಿಕೊಂಡಳು..

ಇದು ಆಕೆಯ ಲೌಕಿಕ ಜಾಣತನವನ್ನು ಹೇಳುತ್ತದೋ ಅವಳಿದ್ದ ಸಾಮಾಜಿಕ ಪರಿಸ್ಥಿತಿಯನ್ನು ತಿಳಿಸುತ್ತದೋ ಎನ್ನುವುದು ಮುಖ್ಯವಲ್ಲ. ಹೆಣ್ಣಿನ ವ್ಯಕ್ತಿತ್ವದಲ್ಲಿರುವ ಧಾರಣ ಶಕ್ತಿಗೊಂದು ಪ್ರತಿಮೆಯಾಗಿದೆ ಎನ್ನುವುದೇ ಮುಖ್ಯ. ಅವಳ ಒಳಗೆ ಸದಾ ಇರುವ ಸೃಷ್ಟಿಶೀಲತೆಯ ನೆಲೆಯನ್ನು ಇದು ಸಂಕೇತಿಸುತ್ತದೆ.

ಸೃಷ್ಟಿಶೀಲತೆಗೂ ಕಲೆಗೂ ಇರುವ ಅವಿನಾ ಸಂಬಂಧವೇ ಹೆಣ್ಣು ಹಾಗೂ ಕಲೆಯ ನಡುವೆ ಇರುವುದು. ಅದನ್ನು ನಿಯಂತ್ರಿಸುವ, ನಿರ್ದೇಶಿಸುವ ಮೌಲ್ಯವ್ಯವಸ್ಥೆಯನ್ನು ತನ್ನ ಇಂಥ ಸೃಷ್ಟಿಶೀಲತೆಯಿಂದಲೂ ಹೆಣ್ಣು ವಿರೋಧಿಸುತ್ತಾ ಬಂದಿದ್ದಾಳೆ. ಆದ್ದರಿಂದಲೇ ಅದು ಕಲಾಮೀಮಾಂಸೆಯೆಷ್ಟೋ ಅಷ್ಟೇ ಹೋರಾಟದ ದಾರಿಯೂ ಹೌದು.

ಸ್ತ್ರೀವಾದದ ಬಗ್ಗೆ ಅದೊಂದು ಆಮದಾದ, ಹೊರಗಿನ ತಾತ್ವಿಕತೆ ಎಂದು ಅಜ್ಞಾನದಿಂದಲೂ ಜಾಣ ಕುರುಡಿನಿಂದಲೂ ಮಾತನಾಡುವವರು ಭಾರತದ ಮುಖ್ಯ ಸ್ತ್ರೀಪಾತ್ರಗಳನ್ನು, ವ್ಯಕ್ತಿತ್ವಗಳನ್ನು ಮನುಷ್ಯ ದೃಷ್ಟಿಯಲ್ಲಿ ನೋಡಿದರೆ ಸತ್ಯದ ದರ್ಶನವಾಗುತ್ತದೆ.

ಮನುಷ್ಯ ದೃಷ್ಟಿ ಎನ್ನುತ್ತಿರುವಾಗ ಇಲ್ಲಾ ಹೆಣ್ಣನ್ನು ವಸ್ತು ವಿಶೇಷವಾಗಿ, ಇಲ್ಲವೇ ತನ್ನ ಅಧಿಕಾರ ವಲಯದ ಸಾಮಂತ ಪ್ರಜೆಯಾಗಿ ಮಾತ್ರ ನೋಡುವ ಮನಸ್ಥಿತಿಯು ಪ್ರಮಾಣ, ಸ್ವರೂಪದ ವ್ಯತ್ಯಾಸದೊಂದಿಗೆ ಸರಿ ಸುಮಾರು ಎಲ್ಲ ಗಂಡಸರಲ್ಲೂ ಇದ್ದೇ ಇರುತ್ತದೆ. ಈ ದೃಷ್ಟಿಕೋನದ ಹಾಜರಿ ಮತ್ತು ಗೈರುಹಾಜರಿ ಗಂಡಸಿನ ವ್ಯಕ್ತಿತ್ವದ ಅಧಿಕೃತತೆಯನ್ನೇ ಪ್ರಶ್ನಿಸಿಬಿಡುವಷ್ಟು ಶಕ್ತಿಶಾಲಿಯಾಗಿರುವುದೂ ಇದೇ ಕಾರಣಕ್ಕೆ.

ಜನಪದ ಕಥೆಯೊಂದರಲ್ಲಿ ಮದುವೆಯಾಗಿ ಗಂಡನ ಮನೆಯಲ್ಲಿದ್ದ ಮಗಳನ್ನು ನೋಡಲು ಅಪ್ಪ ಹೋಗುತ್ತಾನೆ. ‘‘ಹೇಗಿದ್ದೀ ಮಗಳೆ?’’ ಎನ್ನುತ್ತಾನೆ. ‘‘ಇದ್ದೀನಪ್ಪಾ ಮೊಳಕೈಗೆ ಚಿಲುಕ ಬಡಿದ ಹಾಗೆ’’ ಎನ್ನುವ ಉತ್ತರ ಮಗಳದ್ದು. ತಂದೆಗೆ ಈ ಉತ್ತರದಿಂದ ಮಗಳು ಸುಖವಾಗಿದ್ದಾಳೋ ಕಷ್ಟದಲ್ಲಿದ್ದಾಳೋ ಎನ್ನುವುದೂ ತಿಳಿಯುವುದಿಲ್ಲ. ಮನೆಗೆ ಬಂದಾಗ ಹೆಂಡತಿ ಹೇಳುತ್ತಾಳೆ, ‘‘ಅಯ್ಯೋ ಮಗಳು ಸುಖವಾಗಿಲ್ಲರೀ’’ ಅಂತ.

ಸಣ್ಣವಳಾಗಿದ್ದಾಗ ‘ಚಂದಮಾಮ’ದಲ್ಲಿ ಓದಿದ ಈ ಕಥೆ ಮನಸ್ಸಿನಲ್ಲಿ ಉಳಿದಿದೆ. ಗಂಡಸಿಗೆ ಹೆಣ್ಣಿನ ಕಷ್ಟ ತಿಳಿಯುವುದಿಲ್ಲ ಎಂದೆ? ತಿಳಿಯಬೇಕಾಗಿಲ್ಲ ಎಂದೆ? ತಿಳಿದೂ ಏನೂ ಆಗುವುದಿಲ್ಲ ಎಂದೆ? ಹೆಣ್ಣಿನ ಕಷ್ಟವೇ ಬೇರೆ ಎಂದೆ? ನಾವು ಈ ಎಲ್ಲ ಪ್ರಶ್ನೆಗಳಿಗೂ ಕಂಡುಕೊಳ್ಳಬಹುದಾದ ತಾರ್ಕಿಕ ಉತ್ತರಗಳ ಜೊತೆಯಲ್ಲೂ ಈ ಉದಾಹರಣೆ, ಕ್ರೌರ್ಯವನ್ನು, ಉದಾಸೀನತೆಯನ್ನಂತೂ ಖಂಡಿತ ಹೇಳುತ್ತದೆ.

ಅದೆಷ್ಟೇ ಪೂಜ್ಯತೆಯ, ಗೌರವದ, ಸ್ಥಾನಮಾನದ ವೇಷಗಳನ್ನು ಹಾಕಿದರೂ ತನ್ನ ಅಧೀನತೆಯ ಅರಿವು ಹೆಣ್ಣಿಗೆ ಇರುವುದಿಲ್ಲ ಎಂದಾಗಲೀ ಅದನ್ನು ಪಾಶ್ಚಾತ್ಯ ತಾತ್ವಿಕತೆ ನಮ್ಮ ಹೆಣ್ಣುಮಕ್ಕಳ ಮೇಲೆ ಹೇರಿರುವುದು ಎಂದಾಗಲೀ ಹೇಳುವುದು ಧೂರ್ತತನಕ್ಕೆ ಹಿಡಿಯುವ ಕನ್ನಡಿಯಾಗುತ್ತದೆ.
***

ಆ ಕವಯಿತ್ರಿ ಜೇಬುನ್ನೀಸಾ, ಆ ಚಕ್ರವರ್ತಿ ಅಪ್ಪ ಔರಂಗಜೇಬ್. ತನ್ನ ಬದುಕು, ವ್ಯಕ್ತಿತ್ವ, ಪ್ರತಿಭೆ ಎಲ್ಲದರಲ್ಲೂ ಅಸಾಧಾರಣಳೇ ಆದವಳು ಜೇಬುನ್ನೀಸಾ. ತನ್ನ ಕಾವ್ಯದಷ್ಟೇ ಸ್ವಂತಿಕೆಯನ್ನು ತನ್ನ ಬದುಕಿನಲ್ಲೂ ಉಳಿಸಿಕೊಳ್ಳಲು ಕೊನೆಯವರೆಗೂ ಪ್ರಯತ್ನಿಸಿದವಳು ಈಕೆ.

ಇವಳ ಕಾವ್ಯವನ್ನು ಓದುತ್ತಿದ್ದರೆ, ಬದುಕಿನ ಸಮೃದ್ಧತೆಯನ್ನು, ಚಲನಶೀಲತೆಯನ್ನು, ಅನಂತತೆಯನ್ನು ಮೋಹಿಸಿದ, ಅದನ್ನು ಪಡೆಯಲು ಬೇಕಾದ ಸ್ವಾತಂತ್ರ್ಯಕ್ಕಾಗಿ ಕೊನೆಯವರೆಗೂ ಹೋರಾಡಿದ ಧೀರ ಚೇತನವೊಂದನ್ನು ಭೇಟಿಯಾದ ಅನುಭವವಾಗುತ್ತದೆ. ಈ ದಾರಿಯಲ್ಲಿ ಎದುರಾಗುವ ಯಾವ ತೊಡರನ್ನೂ ಎದುರಿಸಬಲ್ಲ ಚೈತನ್ಯವೊಂದು ಹಲವೊಮ್ಮೆ ತನ್ನ ವಿಷಾದದ ಸೊಲ್ಲಿನಲ್ಲೂ ದೂರದ ಬೆಳಕನ್ನು ಹಂಬಲಿಸುತ್ತಿರುವಂತೆ ನಮಗೆ ಕಾಣಿಸುತ್ತದೆ.

ಪ್ರೀತಿಯ ದಾರಿಯನ್ನು ಹಿಡಿ ಓ ಹೃದಯವೇ
ಅದು ಸುದೀರ್ಘ ದಾರಿ ನಿಜ, ಆದರೆ ಓ ಮಕ್ಫಿ ಹಿಂತಿರುಗಿ ನೋಡಬೇಡ, ನಡೆ ಒಂದೇ ಸಮನೆ
ಎನ್ನುವ ಇವಳದೇ ಕವಿತೆಯ ಸಾಲುಗಳು ಇವಳ ಬದುಕು ಕಾವ್ಯದ ಕೇಂದ್ರ ಎರಡನ್ನೂ ಧ್ವನಿಸುತ್ತವೆ.

ಬಾಲ್ಯದಲ್ಲೇ ಕುರಾನ್ ಅನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದವಳು ಜೇಬುನ್ನೀಸಾ. ತನ್ನ ಹಿರಿಮಗಳ ಈ ಅಸಾಧಾರಣ ಶಕ್ತಿಯ ಕಾರಣಕ್ಕೇ ಔರಂಗಜೇಬ್ ಇವಳಿಗೆ ಗುರುವನ್ನೂ ಒದಗಿಸಿದ. ಗಣಿತ ಮತ್ತು ಅಸ್ಟ್ರಾನಮಿ ಇವಳ ಮೆಚ್ಚಿನ ವಿಷಯಗಳಾಗಿದ್ದವು. ಅರಾಬಿಕ್‌ನಲ್ಲಿ ಇವಳು ಅದೆಂಥ ಪಾರಮ್ಯವನ್ನು ಪಡೆದಳೆಂದರೆ, ಇವಳ ಕಾವ್ಯವನ್ನು ಓದಿದ ಪಂಡಿತರೊಬ್ಬರು, ಈ ಕಾವ್ಯದಲ್ಲಿ ಭಾರತೀಯ ಪ್ರತಿಮೆಗಳಿವೆ ಎನ್ನುವುದು ನಿಜ, ಆದರೆ ಈಕೆಯ ಅರಾಬಿಕ್ ಪಾಂಡಿತ್ಯ ಮಾತ್ರ ಬಲು ಅಪರೂಪದ್ದು ಎಂದು ಹೃತ್ಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.

ಜೇಬುನ್ನಿಸಾಳ ಸೂಫಿ ಕವಿ, ಆದ್ದರಿಂದಲೇ ಇವಳ ಕಾವ್ಯದ ಪ್ರೀತಿಯು ಬತ್ತದ ಒರತೆ. ಜಗತ್ತಿನ ಎಲ್ಲ ಎಲ್ಲ ಸಮಸ್ಯೆಗಳಿಗೂ ಪರಿಹಾರ ಪ್ರೀತಿ ಎಂದು ನಂಬುವ ಸೂಫಿ ಪಂಥದ ಅತ್ಯುತ್ತಮ ಪ್ರತಿನಿಧಿ ಈಕೆ. ಯಾತನೆಯನ್ನೂ ಪ್ರೀತಿಯ ದಿವ್ಯಕ್ಕೆ ಒಡ್ಡುವ ಅನುಭವ ಸೂಫಿಗಳಿಗೆ ಬಲು ಪ್ರಿಯವಾದುದು. ಯಾತನೆಯೂ ಪ್ರೀತಿಯ ದಾರಿಗಳಲ್ಲೊಂದು. ಆ ಅನುಭವವು ಮನುಷ್ಯನನ್ನು ಶುದ್ಧಗೊಳಿಸುತ್ತಾ, ಮಾನವೀಯಗೊಳಿಸುತ್ತಾ ದೈವದ ಜೊತೆಗಿನ ಸಖ್ಯಕ್ಕೆ ಅಣಿ ಮಾಡುತ್ತಾ ಹೋಗುತ್ತದೆ ಎನ್ನುವ ನಂಬಿಕೆಯಿಂದ ಹೊರಟ ಕಾವ್ಯ ಇದು.

ಜೇಬುನ್ನೀಸಾಳ ಬದುಕು ಪ್ರತಿ ಘಟ್ಟದಲ್ಲೂ ನೋವು, ಅವಮಾನ, ಸೋಲು, ಪಾರತಂತ್ರ್ಯಗಳ ಚಕ್ರವ್ಯೂಹ. ಬಯಸಿದ್ದು ಸಿಕ್ಕಿತು ಎನ್ನುವಷ್ಟರಲ್ಲಿ ಅದು ಅವಳಿಂದ ದೂರ. ಬಾಲ್ಯದಲ್ಲಿ ಅಪ್ಪನ ಮುದ್ದಿನ ಮಗಳಾಗಿ ಬೆಳೆದವಳು, ಚಕ್ರವರ್ತಿಯ ಮಗಳಾಗಿ ಬದುಕನ್ನು ತನ್ನಿಚ್ಛೆಯಂತೆ ಬದುಕುವ ಅಪರೂಪದ ಅವಕಾಶ ಹೆಣ್ಣಾಗಿಯೂ ತನಗೆ ದೊರೆತೀತು ಎಂದು ಕನಸಿದವಳು.

ಪಕ್ಕಾ ಸಂಪ್ರದಾಯಸ್ಥನಾದ ಅಪ್ಪ, ಮಗಳ ಗುರು ಹೇಳಿದನೆಂದು ಇವಳ ಕಾವ್ಯವನ್ನು ವಿದೇಶಗಳಿಗೂ ಕಳಿಸಿದ, ಅಲ್ಲಿಂದ ಪ್ರತಿಕ್ರಿಯೆಯಾಗಿ ಇವಳ ಕಾವ್ಯ ಅಪಾರ ಮೆಚ್ಚುಗೆ ಪಡೆಯಿತು. ಅಲ್ಲಿಂದ ಮುಷಾಯಿರಗಳನ್ನು ಇವಳ ಸಲುವಾಗಿ ಆಯೋಜಿಸಲಾಯಿತು. ಕಾವ್ಯ, ತತ್ವಶಾಸ್ತ್ರ... ಅನೇಕ ವಿಷಯಗಳಲ್ಲಿ ಪಂಡಿತರೊಂದಿಗೆ ಚರ್ಚೆ ನಡೆಸಿ ತನ್ನ ಬೌದ್ಧಿಕತೆಯನ್ನು ಜೇಬುನ್ನೀಸಾ ಹರಿತ ಮಾಡಿಕೊಂಡಳು. ಅಪ್ಪ ಇವಳಿಗೆ ಮದುವೆ ಮಾಡಬೇಕೆಂದರೆ ಹುಡುಗ ತನಗೆ ಸರಿಸಮಾನನಾದವನಿರಬೇಕು, ಅವನನ್ನು ತಾನು ಮೊದಲು ನೋಡಬೇಕು ಎಂದು ಕರಾರು ಹಾಕಿದಳು.

ಸಂತೋಷದ, ಸುಲಭದ ದಾರಿ ನನ್ನದಲ್ಲ ಬಿಡು,
ನಾನು ಸಂತೋಷದಿಂದಲೇ ಅವಮಾನದ, ಹುಚ್ಚಿನ ದಾರಿಯನ್ನು ಆಯ್ದಿದ್ದೇನೆ
ಎಂದು ಘೋಷಿಸಿದವಳು ತನ್ನ ಈ ಆಯ್ಕೆಯ ಕಾರಣಕ್ಕಾಗಿ ಉದ್ದಕ್ಕೂ ನೋಯುತ್ತಲೇ ನಲಿದಳು.


ಕುಟುಂಬದ ಜೊತೆ ಲಾಹೋರ್‌ಗೆ ಹೋದಾಗ, ಇವಳನ್ನು ಕಂಡು ಮೋಹಿತನಾದವನಿಗೆ ‘ನೀನು ಗಾಳಿಯಾಗಿಯೂ ನನ್ನನ್ನು ಸೋಕಬಾರದು’ ಎಂದು ಕವಿತೆಯಲ್ಲಿ ಉತ್ತರ ಕೊಟ್ಟವಳು. ತಾನು ನಿಜವಾಗಿ ಪ್ರೀತಿಸಿದವನು ಹೇಡಿಯಂತೆ ವರ್ತಿಸಿದಾಗ ನೊಂದು, ‘ನೊಂದು ಮಾಗಲಿ ಜೀವ’ ಎಂದು ಅದನ್ನೇ ಹಾಸಿ ಹೊದ್ದವಳು ಜೇಬುನ್ನೀಸಾ.

ಸಾಮಾನ್ಯವಾಗಿ ಮುಸ್ಲಿಂ ಹುುಗಿಯರು ಪಡೆಯದ ಅವಕಾಶ, ಸ್ವಾತಂತ್ರ್ಯವನ್ನು ಪಡೆದೂ ಅದನ್ನು ಬದುಕಿನ ದಾರಿಯಾಗಿಸುವಲ್ಲಿ ಇವಳಿಗೆ ಯಶಸ್ಸು ಸಿಗಲಿಲ್ಲ. ತನ್ನ ಬಟ್ಟೆಗಳನ್ನು ತಾನೇ ವಿನ್ಯಾಸ ಮಾಡಿ ಧರಿಸುವಷ್ಟು ಸ್ವಂತಿಕೆಯ ಈ ಕವಯಿತ್ರಿ ತಾನು ಬಯಸಿದವನನ್ನು ಮದುವೆಯಾಗಲಿಲ್ಲ. ಮಾತ್ರವಲ್ಲ, ಈ ಬಯಕೆಗೆ ಪ್ರತಿಯಾಗಿ ಅವಳು ಅಪ್ಪನಿಂದ ಪಡೆದದ್ದು ಸೆರೆವಾಸವನ್ನು.

ಇಲ್ಲಿಂದಲೇ ಜೇಬುನ್ನೀಸಾಳ ವ್ಯಕ್ತಿತ್ವದ ನಿಜವಾದ ಪರಿಚಯ ನಮಗಾಗುವುದು. ತನ್ನನ್ನು ಸೋಲಿಸಿದೆ ಎಂದು ಬೀಗಲು ಅಪ್ಪನಿಗಾಗಲೀ ವ್ಯವಸ್ಥೆಗಾಗಲೀ ಅವಳು ಒಂದೇ ಒಂದು ಅವಕಾಶವನ್ನೂ ಕೊಡಲಿಲ್ಲ. ಬದಲಿಗೆ ಅವಳು ತನ್ನ ಕಾವ್ಯವನ್ನೇ ಆಯುಧವಾಗಿಸಿ ಯುದ್ಧ ಮಾಡಿದಳು ಅವರೊಂದಿಗೆ ಮತ್ತು ಗೆದ್ದಳು ಕೂಡ.

ನೋಡು ಇಲ್ಲಿ,
ನನ್ನ ಗಾಯಗಳಿಂದ ಒಂದೇ ಸಮನೆ ರಕ್ತ ಪ್ರವಾಹದಂತೆ ಹರಿಯುತ್ತಿದೆ
ಆದರೆ, ಈ ನನ್ನ ರಕ್ತದಿಂದ ಪರಿಮಳದ ಹೂವುಗಳು ಅರಳುತ್ತಿವೆ
ನನ್ನ ಚಲಿಸುವ ಕಾಲುಗಳಿಗೆ
ತಾಗಿದ ಮುಳ್ಳುಗಳೆಲ್ಲಾ ಗುಲಾಬಿಗಳಾಗುತ್ತಿವೆ

ಅರ್ನಾಲ್ಡನ ಕವಿತೆ ಇದಕ್ಕೆ ತದ್ವಿರುದ್ಧ ಎನ್ನುವ ನೆಲೆಯಲ್ಲಿ ಪ್ರೀತಿಯ ನೆಲೆಯನ್ನು ಗುರುತಿಸುತ್ತದೆ.

love will do the deed
for with love stoney hearts will bleed


ಅದು ಇತರರನ್ನು ಒಳಗೊಳ್ಳುವ, ಅವರಲ್ಲಿ ತರಬಹುದಾದ  ಪ್ರೀತಿಯ ಶಕ್ತಿಯನ್ನು ಕುರಿತದ್ದು. ಜೇಬುನ್ನೀಸಾಳೂ ಸೇರಿದಂತೆ ಸೂಫಿ ಕವಿಗಳಿಗೆ ಪ್ರೀತಿಯು ಮೋಕ್ಷದ, ದೈವ ಸಾಕ್ಷಾತ್ಕಾರದ ಹಾದಿ.

ಕೆಲವು ಬ್ರಾಹ್ಮಣರು ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ
ಕೆಲವು ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ
ಆದರೆ ಮಕ್ಫಿ ನಿನ್ನ ರಹಸ್ಯ ಸಂತೋಷ ನೋಡು,
ನಿನ್ನ ಹೃದಯದಲ್ಲೇ ಸದಾ ಅವನಿದ್ದಾನೆ


ಜೇಬುನ್ನೀಸಾಳ ಕಾವ್ಯನಾಮ ಅಥವಾ ಇದನ್ನು ಇಷ್ಟದೈವ ಎಂದು ಕರೆದರೂ ನಡೆದೀತು, ಅದು ಮಕ್ಫಿ. ಇದಕ್ಕೆ ವೇಷಾಂತರ, ಮುಸುಕು, ಮರೆಮಾಚಿದ ವ್ಯಕ್ತಿತ್ವ ಹೀಗೆಲ್ಲಾ ವಾಚ್ಯಾರ್ಥಗಳನ್ನು ಕೊಡುತ್ತಾ ಹೋಗಬಹುದು. ಆದರೆ ಜೇಬುನ್ನೀಸಾಳೂ ಸೇರಿದಂತೆ ಹೆಣ್ಣಿನ ಅಭಿವ್ಯಕ್ತಿಗೆ ಇದು ಈ ವಾಚ್ಯಾರ್ಥಗಳನ್ನೂ ಮೀರಿದ್ದೇನನ್ನೋ ಧ್ವನಿಸುತ್ತದೆ. ಯಾವುದು ಅವಳ ವೇಷಾಂತರ? ಗಂಡಿನ ಕಣ್ಣಿಗೆ ಬೇಕಾದಂತೆ ಕಾಣಿಸಿಕೊಳ್ಳುತ್ತಾ ತನ್ನ ನಿಜವನ್ನು ಮುಚ್ಚಿಟ್ಟುಕೊಳ್ಳುವುದೋ ಮುಚ್ಚಿಟ್ಟಿದ್ದನ್ನು ಕಾವ್ಯದ ವೇಷದಲ್ಲಿ ತೋರಿಸುವುದೊ? ಆದ್ದರಿಂದಲೇ ಈ ಕಾವ್ಯನಾಮವೂ ಹಲವು ಅರ್ಥಪದರಗಳನ್ನು ಒಳಗೊಳ್ಳುತ್ತಾ ಹೆಣ್ಣಿನ ಮಟ್ಟಿಗೆ ನಡೆಯುವ ದಾರಿಯೂ, ನಡೆಯ ಬೇಕಾದ ದಾರಿಯೂ ಆಗಿದೆ.

ಈ ಕಡುಕಷ್ಟದ ದಾರಿಯ ತನ್ನ ಪ್ರಯಾಣವನ್ನು ಕುರಿತ ಅನೇಕ ಉತ್ಕಟ ಕವಿತೆಗಳನ್ನು ಜೇಬುನ್ನೀಸಾ ರಚಿಸಿದ್ದಾಳೆ.
ನನ್ನ ಅದೃಷ್ಟಹೀನ ಹೃದಯವನ್ನು ಹಿಡಿದುಕೋ
ಅದು ಭಗ್ನಗೊಂಡಿದೆ, ನೋವಿನಿಂದ ವಿವರ್ಣವಾಗಿದೆ
ನನ್ನ ಕಣ್ಣರೆಪ್ಪೆಗಳ ನಡಿವಿಂದ ಅದು
ಕಣ್ಣೀರಾಗಿ ಹರಿಯುತ್ತಿದೆ
ಆದರೆ ಹೀಗಿದ್ದೂ ನಾನು ಅದನ್ನು ಬಿಟ್ಟು ಬಿಡಲಿ ಹೇಗೆ?
ಅದು ಸುಟ್ಟು ಬೂದಿಯಾಗುವವರೆಗೆ ಕಾಯುತ್ತೇನೆ ನಾನು

ನಾನು ಸ್ವರ್ಗದ ಅಧಿಪತಿಯಲ್ಲಿ ಅದೃಷ್ಟ ಕೊಡು ಎಂದು ಕೇಳುವುದಿಲ್ಲ
ಅಧಿಕಾರ ಕೊಡು ಎಂದೂ ಕೇಳುವುದಿಲ್ಲ
ನಾನು ಕೇಳುವುದು ಒಂದು ದಿವ್ಯವಾದ ತೋಟವನ್ನು ಮಾತ್ರ
ನಾವಿಲ್ಲಿ ಬದುಕಬೇಕಾದ ನಶ್ವರ ಘಳಿಗೆಯನ್ನು
ಆನಂದದಿಂದ ಕಳೆಯುವ ಒಂದು ತೋಟವನ್ನು ಕರುಣಿಸಿದರೆ ಸಾಕು.

ಈ ಕವಿತೆಗಳು ಏಕಕಾಲಕ್ಕೆ ಇಹ ಪರಗಳೆರಡನ್ನೂ ಉದ್ದೇಶಿಸಿರುವಂತೆ ಕಾಣಿಸುತ್ತವೆ. ಇಲ್ಲಿದ್ದೇ ಪರವನ್ನೂ ಅವಾಹಿಸಿಕೊಳ್ಳುವ ಮಹತ್ವಾಕಾಂಕ್ಷೆಯ ಉದ್ದೇಶ ಇಲ್ಲಿದೆ. ರೂಢಿಗತ ಬದುಕಿನ ಕ್ರಮವನ್ನು ಮುರಿದು, ಅದರ ಮಿತಿಗಳನ್ನು ಸೀಮೋಲ್ಲಂಘನ ಮಾಡುತ್ತಲೇ ಪರಕ್ಕೆ ಚಿಮ್ಮಿ ಬಿಡುವ ಉನ್ಮಾದದಂತೆಯೂ ಇವಳ ಕವಿತೆಗಳು ಕಾಣಿಸುತ್ತವೆ. ಇಹ ಪರಗಳೆರಡರ ಸಾಕ್ಷಾತ್ಕಾರದ ಕ್ಷಿತಿಜವನ್ನು, ಸಮಾಗಮದ ಬಿಂದುವನ್ನು ಈ ಕವಿತೆಗಳು ತೀವ್ರ ಅನುರಕ್ತಿಯಲ್ಲಿ ಹುಡುಕುತ್ತವೆ.

ದೇವರು, ಸಖ ಬೇರೆಯಲ್ಲದ ಅಖಂಡತೆಯಲ್ಲಿ ಈ ಬಿಂದುವನ್ನು ದರ್ಶಿಸುವ ಪ್ರಯತ್ನಗಳು ಇವಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಇದು ಭಕ್ತಿಯುಗದ ಸಾಮಾನ್ಯ ಮಾದರಿ. ಅಲ್ಲಿನಂತೆಯೇ ಇವಳಲ್ಲೂ ಪ್ರಕೃತಿ ಒಂದು ಮೂಲ ಆಕರ. ಹೆಣ್ಣಿನ ಮಟ್ಟಿಗಂತೂ ಪ್ರಕೃತಿ ಮೂಲ ಮಾತೃಕೆ ಎನ್ನುವುದನ್ನು ಜೇಬುನ್ನೀಸಾ ಕೂಡಾ ಅನುಮೋದಿಸುತ್ತಾಳೆ. ಪ್ರಕೃತಿಯ ಅನಂತತೆಯಲ್ಲಿ, ನಿತ್ಯಸೃಷ್ಟಿಶೀಲತೆಯಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ಹೊಂದಿಸಿ ನೋಡುವ ಮೂಲಕವೇ ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಈ ಪ್ರಯತ್ನಗಳಿಗೆ ಭಾರತದ ಮಧ್ಯಯುಗೀನ ಮಹಿಳಾ ಕಾವ್ಯದಲ್ಲಿ ಮಾತ್ರ ಆಧಾರವಿದೆ ಎಂದಲ್ಲ. ಫ್ರೆಂಚ್ ಅನುಭಾವಿ ಸಾಹಿತ್ಯ ಮತ್ತು ಸೂಫಿ ಸಾಹಿತ್ಯದಲ್ಲೂ ಸ್ಪಷ್ಟ ಆಧಾರಗಳಿವೆ.

ಆರೋಪ ಹೊರಿಸದಿರು,
ದೇವರು ನಿನಗೆ ಪವಿತ್ರ ಸ್ಥಳದಲ್ಲಿರುವ ಅವಕಾಶ ನೀಡಲಿಲ್ಲವೆಂದು
ಅದಕ್ಕಿಂತ ಪವಿತ್ರವಾದ ಸ್ಥಳವಿದೆ ನಿನಗೆ
ನಿನ್ನ ನಲ್ಲನ ಮುಖ, ಕಣ್ಣುಗಳನ್ನು ದಿಟ್ಟಿಸಿ ನೋಡು
ಆ ಕಣ್ಣುಗಳಲ್ಲಿ ಕಾಬಾದ ಗೇಟುಗಳನ್ನು ಮೀರಿದ್ದು ನಿನಗೆ ಕಂಡೀತು
ನಿನ್ನ ಹೃದಯವೇ ಕಮಾನಿನಂತೆ ಬಾಗುತ್ತದೆ
ಸಖನನ್ನು ಸ್ವಾಗತಿಸಲು


ಜೇಬುನ್ನೀಸಾಳ ಕಾವ್ಯದ ಒಂದು ಮೂಲಗುಣವೆಂದರೆ, ಅದು ಹೆಣ್ಣಿನ ಬದುಕಿನ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಅವಳ ಪ್ರಾಕೃತಿಕ ಹಕ್ಕು ಎನ್ನುವ ಸ್ಪಷ್ಟತೆಯಲ್ಲಿ ಮಂಡಿಸುವುದು.

ನಾನು ಬಡವಳಂತೆ ಕಾಣುತ್ತಿದಿರಬಹುದು
ಬೇಡ ನನಗೆ ಯಾರ ಕರುಣೆ
ನಾ ಹಿಡಿದ ದಾರಿಯಲ್ಲಿ ಸಾಗುವ ಧೈರ್ಯವಿದೆ ನನಗೆ


ಅಪ್ಪನನ್ನು ಎದುರು ಹಾಕಿಕೊಂಡದ್ದಕ್ಕಾಗಿ ಸೆರೆವಾಸ ಅನುಭವಿಸುತ್ತಿರುವಾಗಲೂ ಅವಳ ಕಾವ್ಯದಲ್ಲಿ ಅಸಹಾಯಕತೆಯ ಸುಳಿವಿಲ್ಲ. ದ್ವೇಷವಿಲ್ಲ, ಕಹಿಯಿಲ್ಲ. ಇರುವುದೆಲ್ಲ ಬದುಕಿನ ತೋಟದ, ವಸಂತದ, ಸುಂದರ ಹೂವಿನ ಬಯಕೆ ಮಾತ್ರ. ಏನೆಲ್ಲವನ್ನೂ ಕಳೆದುಕೊಂಡೂ ಬದುಕಿನ ಬಗೆಗಿನ ನಂಬಿಕೆ ಮತ್ತು ಪ್ರೀತಿಯನ್ನು ಕಳೆದುಕೊಳ್ಳದ ಜೇಬುನ್ನೀಸಾ ಹೆಣ್ಣಿನ ಆದಿಶಕ್ತಿಯ ಪ್ರತೀಕ.

ಓ ಎಲ್ಲ ಗುಲಾಬಿಗಳ ದೊರೆಯೇ
ನನ್ನ ಬಗ್ಗೆ ಕರುಣೆಯಿರಲಿ
ಈ ಬುಲ್ ಬುಲ್ ಎಂದೂ ತನ್ನ ಹಾಡು ನಿಲ್ಲಿಸುವುದಿಲ್ಲ
ರಥದಲ್ಲಿ ಹೋಗುತ್ತಿರುವ ಅರಸರೂ ಕೂಡ
ಕ್ಷಣ ಇಲ್ಲಿ ತಂಗುತ್ತಾರೆ
ಈ ಮಕ್ಫಿ ಅದೃಷ್ಟವಂತಳು, ದೇವರು ಅವಳಿಗೆ
ನುಡಿಯ ಮುತ್ತುಗಳನ್ನು ಕೊಟ್ಟು ಹರಸಿದ್ದಾನೆ
ಗೀತಮಾಲೆಯ ದಿವ್ಯ ಒಡವೆಯನ್ನು ಕೊಟ್ಟಿದ್ದಾನೆ
ಸಮುದ್ರದ ಬೆಳ್ನೊರೆಗಿಂತ ಬೆಳ್ಳಗೆ ನನ್ನ ಹಾಡು

ನಾವೂ ಅಷ್ಟೇ ಅದೃಷ್ಟವಂತರು ಜೇಬುನ್ನೀಸಾಳ ಕಾವ್ಯದ ಓದುಗರಾಗಲು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT