ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಪಡೆ ಸುಧಾರಣೆ: ಕೈಚೆಲ್ಲಿದ ಅವಕಾಶ

Last Updated 14 ಜುಲೈ 2018, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬರೂ ಸಹಜವಾಗಿ ಕೆಲ ತಪ್ಪುಗಳನ್ನು ಎಸಗುವುದರಿಂದ ಅವುಗಳು ಕ್ಷಮೆಗೆ ಅರ್ಹವಾಗಿರುತ್ತವೆ. ಆದರೆ, ಉದ್ದೇಶಪೂರ್ವಕ ಕರ್ತವ್ಯಲೋಪಕ್ಕೆ ಈ ಮಾತು ಅನ್ವಯವಾಗುವುದಿಲ್ಲ. ಅವಕಾಶ ಕಳೆದುಕೊಂಡಿರುವುದು ಸಮರ್ಥನೀಯವೂ ಎನಿಸುವುದಿಲ್ಲ. ದಡ್ಡತನದಿಂದ ಎಸಗಿದ ಪ್ರಮಾದ ಅದಾಗಿರುತ್ತದೆ. ದೇಶದ ಸೇನಾ ವ್ಯವಸ್ಥೆ ಮತ್ತು ರಕ್ಷಣಾ ಸ್ವರೂಪದಲ್ಲಿ ಮೂಲಭೂತ ಸುಧಾರಣೆಗಳನ್ನು ತರುವ ಸದವಕಾಶವನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಕಳೆದುಕೊಂಡಿದೆ. ಮೂವತ್ತು ವರ್ಷಗಳ ನಂತರ ಸಂಪೂರ್ಣ ಬಹುಮತ ಪಡೆದ ಸರ್ಕಾರವೊಂದು ಅಪೂರ್ವ ಅವಕಾಶವೊಂದನ್ನು ಹಾಳು ಮಾಡಿದೆ. ಸಮರ್ಥ ನಾಯಕನ ನೇತೃತ್ವ ಮತ್ತು ‘ಸೇನಾ ಸ್ನೇಹಿ’ ವ್ಯಕ್ತಿತ್ವದ ಪ್ರಧಾನಿಯು ಅಧಿಕಾರದಲ್ಲಿ ಇರುವುದು ಸೇನೆಯ ಸುಧಾರಣೆಗೆ ದೊರೆತ ಅಪೂರ್ವ ಅವಕಾಶವಾಗಿತ್ತು. ದಶಕಗಳಿಂದ ವಿಳಂಬವಾಗಿರುವ ಸುಧಾರಣೆಯನ್ನು ಜಾರಿಗೆ ತರುವುದು ತುಂಬ ಅನಿವಾರ್ಯವೂ ಆಗಿತ್ತು.

ಇಂತಹ ಸುಧಾರಣೆಗಳನ್ನು ಜಾರಿಗೆ ತರದಿರುವುದಕ್ಕೆಹಿಂದಿನ ಸರ್ಕಾರಗಳನ್ನು ದೂರುವುದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ. ಆ ಸರ್ಕಾರಗಳಿಗೆ ಸಂಪೂರ್ಣ ಬಹುಮತ, ಸಮಯ ಮತ್ತು ರಾಜಕೀಯ ವಿಶ್ವಾಸಾರ್ಹತೆ ಇದ್ದಿರಲಿಲ್ಲ. ಹಿಂದಿನ 30 ವರ್ಷಗಳಲ್ಲಿ ಇವು ಮೂರು ಏಕ ಕಾಲದಲ್ಲಿ ಲಭ್ಯ ಇರಲಿಲ್ಲ. ಈ ಕಾರಣಕ್ಕೆ ಮೋದಿ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿತ್ತು. ಆದರೆ, ರಕ್ಷಣಾ ಕ್ಷೇತ್ರದ ಸುಧಾರಣೆಗಳ ಜಾರಿ ವಿಷಯದಲ್ಲಿ ಎನ್‌ಡಿಎ ಸರ್ಕಾರದ ಸಾಧನೆ ನಿರಾಶಾದಾಯಕವಾಗಿದೆ.

ವಿಶ್ವದ ನಾಲ್ಕನೇ ಅತಿದೊಡ್ಡ ಸೇನಾಪಡೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಅವಕಾಶವನ್ನು ಈ ಸರ್ಕಾರ ಕೈಚೆಲ್ಲಿದೆ. ಸೇನಾ ಪಡೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ, ಹೊಸ ಪಥದಲ್ಲಿ ಸಾಗುವಂತೆ ಮಾಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಈ ಸರ್ಕಾರವು ಐದು ವರ್ಷಗಳ ತನ್ನ ಅಧಿಕಾರಾವಧಿಯ ಕೊನೆಯವರ್ಷಕ್ಕೆ ಕಾಲಿಟ್ಟಿದೆ. ಸೇನಾಪಡೆಗಳಿಗೆ ಅಗತ್ಯವಾದ ರೈಫಲ್‌ ಮತ್ತು ಸೈನಿಕರಿಗೆ ಸೂಕ್ತವಾದ ಬೂಟುಗಳನ್ನು ಒದಗಿಸಲು ಈಗಲೂ ಕಸರತ್ತು ಮಾಡುತ್ತಿದೆ. ವಾಯುಪಡೆಗೆ 40 ವರ್ಷಗಳ ನಂತರ ನವೀಕರಿಸಿದ ಜಾಗ್ವಾರ್‌ ಯುದ್ಧ ವಿಮಾನಗಳನ್ನು ಸೇರ್ಪಡೆ ಮಾಡುವಲ್ಲಿ ಸಫಲವಾಗಿದೆಯಷ್ಟೆ.

ಸೇನಾಪಡೆಗಳಿಗೆ ಕಾಲಕ್ಕೆ ತಕ್ಕಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನುಒದಗಿಸುವುದೂ ಮುಖ್ಯವಾಗಿರುತ್ತದೆ. ಒಟ್ಟಾರೆ ಸ್ವರೂಪ ಸುಧಾರಣೆಗೆ ಮುಂದಾಗದಿರುವುದು ಅತಿದೊಡ್ಡ ನಷ್ಟವಾಗಿದೆ. ನೆರೆಯ ಚೀನಾದ ಸೇನಾ ಸ್ವರೂಪಕ್ಕೆ ಹೋಲಿಸಿದರೆ ನಮ್ಮ ಸೇನಾ ವ್ಯವಸ್ಥೆ ಅದೆಷ್ಟರ ಮಟ್ಟಿಗೆ ಗೊಂದಲದ ಗೂಡಾಗಿದೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ. ಭಾರತದ ಗಡಿಗೆ ಸಂಬಂಧಿಸಿದ ಚೀನಾದ ನಾಲ್ಕುಮುಂಚೂಣಿ ನೆಲೆಗಳ ಸೇನಾ ಪಡೆಗಳಿಗೆಲ್ಲ ಒಬ್ಬರೇ (ಕಮಾಂಡರ್‌) ಮುಖ್ಯಸ್ಥರಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಹಾಟ್‌ಲೈನ್ ಮೂಲಕ ಅವರೊಬ್ಬರನ್ನೇ ಸಂಪರ್ಕಿಸಿ ಸಲಹೆ ಪಡೆಯುವ ವ್ಯವಸ್ಥೆ ಅಲ್ಲಿದೆ. ಇದಕ್ಕೆ ಪ್ರತಿಯಾಗಿ ಭಾರತದ ಸೇನಾ ವ್ಯವಸ್ಥೆ ಬೇರೆಯೇ ಆದ ವಿಲಕ್ಷಣ ಸ್ವರೂಪದ ಕತೆ ಹೇಳುತ್ತದೆ. 21ನೇ ಶತಮಾನದಲ್ಲಿ ಸೇನಾಪಡೆಗಳ ಪಾಲಿಗೆ ಇದೊಂದು ತುಂಬ ಮುಜುಗರದ ಸಂಗತಿಯಾಗಿದೆ.

ಅರುಣಾಚಲ ಪ್ರದೇಶ, ಸಿಕ್ಕಿಂ– ಭೂತಾನ್‌ ಪ್ರದೇಶವು ಈಸ್ಟರ್ನ್‌ ಆರ್ಮಿ ಕಮಾಂಡರ್‌ನ ಉಸ್ತುವಾರಿಯಲ್ಲಿ ಇದೆ. ಉತ್ತರಾಖಂಡ (ಸೆಂಟ್ರಲ್‌) ವಲಯವು, ಸೆಂಟ್ರಲ್‌ ಆರ್ಮಿ ಕಮಾಂಡರ್‌, ಹಿಮಾಚಲ ಪ್ರದೇಶ– ಟಿಬೆಟ್‌ ಗಡಿಭಾಗವು ವೆಸ್ಟರ್ನ್‌ ಆರ್ಮಿ ಕಮಾಂಡರ್‌, ಕಾಶ್ಮೀರ ಮತ್ತು ಲಡಾಖ್‌ ಪ್ರದೇಶವು ನಾರ್ದನ್‌ ಆರ್ಮಿಯ ನಿಯಂತ್ರಣಕ್ಕೆ ಒಳಪಟ್ಟಿವೆ. ವಾಯುಪಡೆಯೂ ಇದಕ್ಕೆ ಹೊರತಾಗಿಲ್ಲ. ಅದು ಕೂಡ ಈಸ್ಟರ್ನ್‌, ಸೆಂಟ್ರಲ್‌ ಮತ್ತು ವೆಸ್ಟರ್ನ್‌ ಕಮಾಂಡ್ಸ್‌ಗಳನ್ನು ಹೊಂದಿದೆ. ನೌಕಾಪಡೆಯೂ ಇದೇ ಬಗೆಯ ವ್ಯವಸ್ಥೆ ಹೊಂದಿದೆ.

ಭಾರತದ ಕನಿಷ್ಠ ಎಂಟು ಮಂದಿ ತ್ರೀಸ್ಟಾರ್‌ ಕಮಾಂಡರ್‌ಗಳು ಸೇರಿಕೊಂಡು ಚೀನಾದ ಒಬ್ಬ ಕಮಾಂಡರ್‌ನ ವಿರುದ್ಧ ಸೇನಾ ಕಾರ್ಯಚರಣೆಯ ವ್ಯೂಹ ರಚಿಸುವ ವ್ಯವಸ್ಥೆ ನಮ್ಮಲ್ಲಿದೆ. 21ನೇ ಶತಮಾನದಲ್ಲಿ ಅತ್ಯಾಧುನಿಕಗೊಂಡಿರುವ ನಾಪಡೆಗಳನ್ನು ನಿರ್ವಹಿಸುವ ವಿಧಾನ ಇದಲ್ಲ. ಆಧುನಿಕ ಸೇನೆಯ ಪಾಲಿಗೆ 1962ರ ಗೊಂದಲಮಯ ವ್ಯವಸ್ಥೆಯೇ ಈಗಲೂ ಮುಂದುವರೆದಿದೆ.

ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಧ್ಯೆ ತಕ್ಷಣಕ್ಕೆ ಸಂಪರ್ಕ ಕಲ್ಪಿಸುವ ಹಾಟ್‌ಲೈನ್‌ ವ್ಯವಸ್ಥೆಯು, ಶಿಷ್ಟಾಚಾರ ಸಂಬಂಧಿ ವಿಷಯಗಳಲ್ಲಿ ಸಿಲುಕಿಕೊಂಡಿರುವುದನ್ನು, ‘ದಿ ಪ್ರಿಂಟ್‌’ನಸುಜನ ದತ್ತಾ ಅವರು ಮೊನ್ನೆ ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದನ್ನು ಕಂಡಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಚೀನಾಕ್ಕೆ ಹೊಂದಿಕೊಂಡಿರುವ 3,488 ಕಿ. ಮೀ ಉದ್ದಕ್ಕೂ ಗಡಿ ತಂಟೆಗಳು ಉದ್ಭವಿಸಿದಾಗಲ್ಲೆಲ್ಲ ಚೀನಾದ ಕಮಾಂಡರ್‌ಗಳ ಜತೆ ಯಾರು ಮಾತನಾಡಬೇಕು ಎನ್ನುವುದೇ ಭಾರತದ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಭಾರತದ ಸೇನಾ ಪ್ರಧಾನ ಕಚೇರಿಯಲ್ಲಿನ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರು, ಚೀನಾದ ಕಮಾಂಡರ್‌ ಜತೆ ಮಾತನಾಡುವ ಸಂದರ್ಭ ಉದ್ಭವಿಸಿದರೆ ಸಹಜವಾಗಿಯೇ ಶಿಷ್ಟಾಚಾರದ ಸಮಸ್ಯೆ ಎದುರಾಗುತ್ತದೆ.

ಇದು ಬರೀ ಶಿಷ್ಟಾಚಾರದ ಸಮಸ್ಯೆಯಲ್ಲ, ತಮಾಷೆಯ ಸಂಗತಿಯೂ ಅಲ್ಲ. ಆಧುನಿಕ ಯುದ್ಧಗಳಲ್ಲಿ ಕ್ಷಿಪ್ರ ಸೇನಾ ಚಲನೆ, ವೇಗದ ಕಾರ್ಯಾಚರಣೆ, ತ್ವರಿತ ದಾಳಿ, ಭಾರಿ ವಿನಾಶ ತಂದೊಡ್ಡುವ ಸಮನ್ವಯದ ದಾಳಿ ನಡೆಸಲಾಗುತ್ತಿದೆ. ನಮ್ಮ ಸೇನಾ ಪಡೆಗಳ ಸ್ವರೂಪದಲ್ಲಿ ಈಗಲೂ ಬ್ರಿಟಿಷರ ಮಾದರಿಯನ್ನೇ ಅನುಸರಿಸಲಾಗುತ್ತಿದೆ. ಹಲವಾರು ಪ್ರತಿಕೂಲತೆಗಳ ಹೊರತಾಗಿಯೂ ಪ್ರಾದೇಶಿಕ ಸೇನಾ ಪ್ರಧಾನ ಕಚೇರಿಗಳ ಅಸ್ತಿತ್ವ ಮುಂದುವರೆಸಿಕೊಂಡು ಬರಲಾಗಿರುವುದೇ ಇದಕ್ಕೆ ನಿದರ್ಶನವಾಗಿದೆ.

ನೌಕಾಪಡೆಯ ಮಾಜಿ ಮುಖ್ಯಸ್ಥ ಆಡ್ಮಿರಲ್‌ ಅರುಣ್‌ ಪ್ರಕಾಶ್‌ ಅವರ ಜತೆ ಮಾತನಾಡಲು ನನಗೆ ಇತ್ತೀಚೆಗೆ ಅವಕಾಶ ಒದಗಿತ್ತು. ‘ದೋಕಲಾದಲ್ಲಿ ಈ ಮೊದಲೇ ನಿರೀಕ್ಷಿಸಿದಂತೆ ಚೀನಾ, ತನ್ನ ಸೇನಾ ಕಾರ್ಯಾಚರಣೆ ಆರಂಭಿಸಿದ್ದರೆ, ಭಾರತದ ಐದು ಬೇರೆ, ಬೇರೆ ಸೇನಾ ಕಮಾಂಡ್‌ಗಳು ಇದಕ್ಕೆ ಪ್ರತ್ಯುತ್ತರ ನೀಡಲುಸನ್ನದ್ಧಗೊಳ್ಳಲಿಕ್ಕೇನೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಸೇನಾ ಕಾರ್ಯಚರಣೆಗೆ ಸಂಬಂಧಿಸಿದಂತೆ ಸಂವಹನ ಮತ್ತು ಸಮನ್ವಯತೆ ಸಾಧಿಸುವುದರಲ್ಲಿಯೇ ನಮ್ಮ ಅಮೂಲ್ಯ ಸಮಯ ವ್ಯರ್ಥವಾಗುತ್ತಿತ್ತು. ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿ (ಪಿಎಲ್‌ಎ), ಒಂದು ಸೇನಾ ನೆಲೆಯಿಂದ ಒಬ್ಬ ಕಮಾಂಡರ್‌ನ ಆದೇಶ ಪಾಲಿಸಿ ತಕ್ಷಣಕ್ಕೆ ಮುನ್ನುಗ್ಗಿದ್ದರೆ ಅದನ್ನು ಎದುರಿಸಲು ಭಾರತ ಸೇನಾಪಡೆಗೆ ಸಮಯಾವಕಾಶವೇ ಇರುತ್ತಿರಲಿಲ್ಲ. ಯುದ್ಧಗಳು ತೀಕ್ಷ್ಣ ಸ್ವರೂಪದಲ್ಲಿ ನಡೆದು ಅಲ್ಪಾವಧಿಯಲ್ಲಿ ಕೊನೆಗೊಳ್ಳುವ ಈಗಿನ ದಿನಗಳಲ್ಲಿ ನಮ್ಮ ಕಾರ್ಯಾಚರಣೆಗೆ ಸಂಬಂಧಿಸಿದ ನಮ್ಮೆಲ್ಲ ಗೊಂದಲಗಳು ದುಬಾರಿಯಾಗಿ ಪರಿಣಮಿಸಲಿವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಭಾರತದ ಸೇನಾ ಪಡೆಗಳನ್ನು ಸದ್ಯಕ್ಕೆ 19 ವಿಭಿನ್ನ ಕಮಾಂಡ್ಸ್‌ಗಳಾಗಿ ವಿಭಜಿಸಲಾಗಿದೆ. ಈ ತರ್ಕರಹಿತ ವ್ಯವಸ್ಥೆಯು ತುಂಬ ಗೊಂದಲಕಾರಿಯಾಗಿದೆ. ಈ ಬಗ್ಗೆ ಇನ್ನಷ್ಟು ವಿವರಗಳೂ ಇವೆ. ಚೀನಾ, ಬಾಂಗ್ಲಾದೇಶ, ಭೂತಾನ್‌ ಮತ್ತು ಮ್ಯಾನ್ಮಾರ್‌ನ ಮುಂಚೂಣಿ ನೆಲೆಗಳ ಮೇಲೆ ನಿಗಾ ಇರಿಸಿರುವ ಮತ್ತು ಈಶಾನ್ಯಭಾರತದಲ್ಲಿನ ಬಂಡುಕೋರರ ಚಟುವಟಿಕೆಗಳನ್ನು ಹತ್ತಿಕ್ಕುವ ಉದ್ದೇಶ ಹೊಂದಿದ ಈಸ್ಟರ್ನ್‌ ಆರ್ಮಿ ಕಮಾಂಡ್‌, ಕೋಲ್ಕತ್ತದಲ್ಲಿ ಕಚೇರಿ ಹೊಂದಿದೆ. ಈ ಆರ್ಮಿ ಕಮಾಂಡ್‌ ಜತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾದ ಈಸ್ಟರ್ನ್‌ ಏರ್‌ ಕಮಾಂಡ್‌, ಸುಂದರ ಹಸಿರು ಗಿರಿ ಕಣಿವೆಗಳ ಷಿಲ್ಲಾಂಗ್‌ನಲ್ಲಿದೆ. ಕೋಲ್ಕತ್ತ ಮತ್ತು ಷಿಲ್ಲಾಂಗ್‌ ಮಧ್ಯೆ ಸೇನಾಧಿಕಾರಿಗಳು ತುರ್ತಾಗಿ ಪ್ರಯಾಣ ಮಾಡಬೇಕೆಂದರೂ ಬಾಂಗ್ಲಾದೇಶದ ವಾಯು ಪ್ರದೇಶ ಬಳಸಬೇಕಾಗುತ್ತದೆ. ವಾಯುಪಡೆಯ ಈ ಕಮಾಂಡ್‌ ಕೋಲ್ಕತ್ತದಲ್ಲಿಯೇ ಈಸ್ಟರ್ನ್‌ ಆರ್ಮಿ ಕಮಾಂಡ್‌ನ ಜತೆಯಲ್ಲಿಯೇ ಇರಬಹುದಾಗಿತ್ತು. ಬ್ರಿಟಿಷರು ಮಾಡಿದ್ದ ಈ ವ್ಯವಸ್ಥೆಯನ್ನು ಇದುವರೆಗೂ ಬದಲಿಸಲಾಗಿಲ್ಲ. ಈಸ್ಟರ್ನ್‌ ನೌಕಾಪಡೆ ಕಮಾಂಡ್, ದಕ್ಷಿಣದ ವಿಶಾಖಪಟ್ಟಣಂದಲ್ಲಿ ಇದೆ.

ಸೇನೆಯ ಪೂರ್ವ ವಲಯದಲ್ಲಷ್ಟೇ ಈ ಅಸಮಂಜಸತೆ ಇಲ್ಲ. ವೆಸ್ಟರ್ನ್‌ ಆರ್ಮಿ ಕಮಾಂಡ್‌, ಚಂಡೀಗಡದ ಹೊರ ವಲಯದ ಚಂಡಿಮಂದಿರದಲ್ಲಿ ಇದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ವೆಸ್ಟರ್ನ್‌ ಏರ್‌ ಕಮಾಂಡ್‌ ದೆಹಲಿಯಲ್ಲಿ ಇದೆ. ಭೂ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಕಮಾಂಡರುಗಳು ಸಂಪೂರ್ಣ ಸಮನ್ವಯತೆಯಿಂದ ಕೆಲಸ ಮಾಡುವ ಪೂರಕ ವಾತಾವರಣವೇ ನಮ್ಮಲ್ಲಿ ಇದುವರೆಗೂ ನಿರ್ಮಾಣವಾಗಿಲ್ಲ.

ಇಂತಹ ಹಲವಾರು ನಿದರ್ಶನಗಳಿದ್ದು, ಅವೆಲ್ಲವುಗಳನ್ನುಒಂದೊಂದಾಗಿ ಪರಿಗಣಿಸುವ ಅಗತ್ಯವೂ ಇಲ್ಲ. ಎಲ್ಲೆಡೆ ಇದೇ ಬಗೆಯ ಗೊಂದಲವೇ ಕಂಡು ಬರುತ್ತದೆ. ಸದರ್ನ್‌ ಆರ್ಮಿ ಕಮಾಂಡ್‌ನ ಪ್ರಧಾನ ಕಾರ್ಯಾಲಯ ಪುಣೆಯಲ್ಲಿದೆ. ಅದರ ಕಾರ್ಯನಿರ್ವಹಣಾ ಪ್ರದೇಶವು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಗುಜರಾತ್‌– ರಾಜಸ್ಥಾನ ಮರಳು ಭೂಮಿಗೆ ಸಂಬಂಧಿಸಿದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ಸೌತ್‌ ವೆಸ್ಟರ್ನ್ ವಾಯುಪಡೆಯ ಕಮಾಂಡ್‌ ಗಾಂಧಿನಗರದಲ್ಲಿ ಇದೆ.

ವಾಯುಪಡೆಯ ದಕ್ಷಿಣ ಕಮಾಂಡ್‌ ತಿರುವನಂತಪುರದಲ್ಲಿದೆ. ಅದರ ಕಾರ್ಯನಿರ್ವಹಣೆಯ ವ್ಯಾಪ್ತಿ ಪ್ರದೇಶವು ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿದೆ. ಸೇನೆಯ ಸೌತ್‌ ವೆಸ್ಟರ್ನ್‌ ಕಮಾಂಡ್‌ ಜೈಪುರದಲ್ಲಿ ಇದೆ. ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ವಾಯು ಪಡೆಯ ಕೇಂದ್ರ ಕಚೇರಿಗಳು ದೆಹಲಿ (ವೆಸ್ಟರ್ನ್‌), ಗಾಂಧಿನಗರ (ಸೌತ್‌ ವೆಸ್ಟ್‌) ಮತ್ತು ಅಲಹಾಬಾದ್‌ನಲ್ಲಿ (ಸೆಂಟ್ರಲ್‌) ಇವೆ.

ಇಡೀ ಪಟ್ಟಿಯನ್ನು ನೋಡಿದಾಗ, ಒಂದೇ ಪ್ರದೇಶದ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ ಎರಡು ಕಮಾಂಡ್‌ಗಳು ಒಂದೇ ಸ್ಥಳದಲ್ಲಿ ಇರುವುದು ಕಂಡು ಬರುವುದೇ ಇಲ್ಲ. ಅಂಡಮಾನ್‌ನಲ್ಲಿ ಮಾತ್ರ ಮೂರು ಸೇನಾಪಡೆಗಳ ಕಚೇರಿಗಳು ಒಂದೆಡೆಯೇ ಇವೆ.

ಸೇನೆಯ ವಿವಿಧ ಕಮಾಂಡ್‌ಗಳ ಮಧ್ಯೆ ಈ ಬಗೆಯಲ್ಲಿ ಸಮನ್ವಯತೆ ಕಂಡು ಬರದಿರುವ ಮಧ್ಯೆಯೇ, ಈಸ್ಟರ್ನ್‌ ಆರ್ಮಿ ಕಮಾಂಡ್‌ನಲ್ಲಿ ಪರ್ವತ ದಾಳಿ ಸೇನಾ ತುಕಡಿ ರಚಿಸಲು ಉದ್ದೇಶಿಸಲಾಗಿತ್ತು. ಈ ನಿರ್ಧಾರವನ್ನೂ ಈಗ ತಡೆ ಹಿಡಿಯಲಾಗಿದೆ. ‘ದಿ ಪ್ರಿಂಟ್‌’ನಲ್ಲಿ ಸುಜನ್‌ ದತ್ತಾ ಅವರ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವುದನ್ನು ಸೇನೆಯ ವಿವೇಚನೆಗೆ ಬಿಡಲಾಗಿದೆ. ವಿವೇಚನೆ ಇಲ್ಲದ ವಿಸ್ತರಣೆ ಬದಲಿಗೆ ಸೇನಾ ಪಡೆಗಳನ್ನು ಬಲಗೊಳಿಸಲು ಆದ್ಯತೆ ನೀಡಲು ಸೇನಾ ಮುಖ್ಯಸ್ಥರು ನಿರ್ಧರಿಸಿರುವುದು ಅವರ ಧೈರ್ಯ ಮತ್ತು ಬುದ್ಧಿವಂತಿಕೆಯ ನಿಲುವಿಗೆ ನಿದರ್ಶನವಾಗಿದೆ. ಸೇನೆಯ ಮೂಲ ಸಂಘಟನಾತ್ಮಕ ವಿಷಯಗಳ ಬಗ್ಗೆ ಸಚಿವೆ ವಾಸ್ತವಿಕ ನೆಲೆಯಲ್ಲಿ ಸ್ಪಂದಿಸಿರುವುದೂ ಮುಖ್ಯವಾಗಿದೆ.

ಸೇನಾ ಕಮಾಂಡ್ಸ್‌ಗಳ ಮಧ್ಯೆ ಸಮನ್ವಯತೆ ಸಾಧಿಸುವ ಬಗ್ಗೆ ಸರ್ಕಾರ ಒಲವು ಹೊಂದಿದೆ ಎಂದೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದಕ್ಕೂ ಮುಂಚೆ ನಾವು ಇಂತಹ ಮಾತು ಕೇಳಿರಲೇ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಇದುವರೆಗೂ ಆಲೋಚನೆಯನ್ನೇ ಮಾಡಿರಲಿಲ್ಲ. ರಾಜಕೀಯ ಒಲವನ್ನೂ ತೋರಿರಲಿಲ್ಲ. ಈ ಬಗೆಯ ಆಲೋಚನೆ ಕಾರ್ಯಗತಗೊಳಿಸಲು ಮೋದಿ ಅವರು ನಾಲ್ಕು ವರ್ಷಗಳಿಂದ ಯಾವುದೇ ಕಾರ್ಯಕ್ರಮವನ್ನೇ ಹಮ್ಮಿಕೊಂಡಿರಲಿಲ್ಲ.

ಸೇನಾ ಕಮಾಂಡ್‌ಗಳನ್ನು ಪುನರ್‌ರಚಿಸುವುದು, ಜಂಟಿ ಕಾರ್ಯಾಚರಣೆಗೆ ಪೂರಕ ವಾತಾವರಣ ನಿರ್ಮಿಸುವುದು ಪ್ರಧಾನಿ ಮೋದಿ ಅವರಿಗೆ ಹೆಚ್ಚು ಇಷ್ಟವಾಗಿರುವ ಸಂಗತಿಯಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಅವರೂ ಈಗ ಆ ನಿಟ್ಟಿನಲ್ಲಿಯೇ ಆಲೋಚಿಸುತ್ತಿರುವುದು ಅದ್ಭುತ ಸಂಗತಿಯಾಗಿದೆ. ಆದರೆ, ಎನ್‌ಡಿಎ ಸರ್ಕಾರದ ಇದುವರೆಗಿನ ಅಧಿಕಾರಾವಧಿಯಲ್ಲಿ ಇಷ್ಟು ಸಮಯದವರೆಗೆ ಇದನ್ನು ನಿರ್ಲಕ್ಷಿಸಬಾರದಿತ್ತು.

ಸೇನಾ ಪಡೆಗಳ ಸುಧಾರಣಾ ಕ್ರಮವು ಮೇಲಿನಿಂದ ಆರಂಭಗೊಳ್ಳದೆ, ಕೆಳ ಹಂತದಿಂದ ನಡೆಯಬೇಕು ಎನ್ನುವುದು ಸರ್ಕಾರದ ಧೋರಣೆಯಾಗಿರುವುದರಿಂದ ಇದಕ್ಕೆ ಕೆಲ ಸಮಯ ಬೇಕಾಗುತ್ತದೆ. ನಾಲ್ಕು ವರ್ಷಗಳ ಹಿಂದೆಯೇ ಈ ಬಗ್ಗೆ ‘ಚಿಂತರಕ ಚಾವಡಿ’ ರಚಿಸಬೇಕಾಗಿತ್ತು. ಇದನ್ನು ಕಾರ್ಯಗತಗೊಳಿಸುವ ಉದ್ದೇಶಕ್ಕೆಂದೇ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕಾಗಿತ್ತು. ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳದ ಸಮಸ್ಯೆಗಳಿಗೆ ಭಾರತದ ಸೇನಾ‍ಪಡೆಗಳಿಗೂ ಹೊರತಾಗಿಲ್ಲದಿರುವುದು ಇದರಿಂದ ವೇದ್ಯಗೊಳ್ಳುತ್ತದೆ.

ಮೋದಿ ಸರ್ಕಾರವು ಸಾಕಷ್ಟು ಭರವಸೆಗಳನ್ನು ನೀಡಿದ್ದರೂ, ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಅವಕಾಶಗಳನ್ನೆಲ್ಲ ಕೈಚೆಲ್ಲಿದೆ ಎಂದು ಬಿಜೆಪಿಯ ಪ್ರತಿಸ್ಪರ್ಧಿಗಳು ಟೀಕಿಸುತ್ತ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ. ಕ್ರಿಕೆಟ್‌ ತಂಡವೊಂದು ಸೀಮಿತ ಓವರುಗಳ ಪಂದ್ಯದಲ್ಲಿ ಪವರ್‌ಪ್ಲೇ ಓವರ್‌ಗಳ ಅವಕಾಶಗಳನ್ನು ಕೈಚೆಲ್ಲಿ, ಕೊನೆಯ ಹಂತದಲ್ಲಿ ತಲ್ಲಣಗೊಂಡು ಚಡಪಡಿಸುವ ರೀತಿಯಲ್ಲಿ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯ ಅವಧಿಯಲ್ಲಿ ಭರವಸೆಗಳನ್ನು ಕಾರ್ಯಗತಗೊಳಿಸಲು ಅವಸರ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಆಡಳಿತವೂ ಅಂತಿಮವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯದಂತೆಯೇ ಇರಲಿದೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT