ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಾಗಲೀ, ಊರಾಗಲೀ ವಿಶ್ವಾಸವೇ ಬದುಕು

Last Updated 17 ಸೆಪ್ಟೆಂಬರ್ 2018, 9:47 IST
ಅಕ್ಷರ ಗಾತ್ರ

ಈ ತರಬೇತಿಯನ್ನು ನೀಡುವ ಪ್ರಕ್ರಿಯೆ ಮುಂದಿನ ಆರು ತಿಂಗಳ ತನಕವೂ ನಡೆಯಿತು. ತಿನ್ನು, ಬದುಕು, ತರಬೇತಿ ಪಡೆ ಮತ್ತು ಈ ಅತ್ಯಂತ ಕಠಿಣ ಸೈನಿಕರ ಜೊತೆ ನೀನು ನಿನ್ನ ಸಾಮರ್ಥ್ಯವನ್ನು ಸದಾ ಕಾಲ ಒರೆಗಿಡು ಎಂಬ ಸ್ಥಿತಿ ಈ ಆರೂ ತಿಂಗಳ ಕಾಲ! ಈ ಎಲ್ಲವನ್ನೂ ನಿಭಾಯಿಸ ಬೇಕೆಂದರೆ ಅವರ ಗೌರವ, ಪ್ರೀತಿ, ಸಂಪಾದಿಸಿಕೊಳ್ಳುವ ನಾಯಕತ್ವದ ಗುಣ ಅವಶ್ಯ.

ಅದೃಷ್ಟವಶಾತ್ ನಾನು ಇದನ್ನೆಲ್ಲಾ ಗಳಿಸಿ, ಉಳಿಸಿಕೊಂಡೆ. ಇವರಿಗೆಲ್ಲಾ ನಾಯಕನಾಗಿ ನಾನೆಷ್ಟು ಸಮರ್ಥ ಎಂಬುದನ್ನು ಅವರೆಲ್ಲರೂ ಅವರವರ ಕೋಣೆಗಳಲ್ಲಿ, ಮೆಸ್‍ಗಳಲ್ಲಿ ಮಾತಾಡಿಕೊಳ್ಳುತ್ತಿರುತ್ತಾರೆ. ಮುಂದೆ ಅವಕಾಶ ಸಿಕ್ಕಾಗೆಲ್ಲಾ ಬೇರೆ ಬೇರೆ ಬೆಟಾಲಿಯನ್‍ಗಳನ್ನು ನಮ್ಮಂತಹ ಬೆಟಾಲಿಯನ್ ಕಮಾಂಡರ್‌ಗಳ ಬಗ್ಗೆ ಹೋಲಿಕೆಯೂ, ತಮಾಷೆಯೂ ನಡೆಯುತ್ತಿರುತ್ತದೆ. ಒಟ್ಟಾರೆಯಾಗಿ ನಾನು ನನ್ನ ಬೆಟಾಲಿಯನ್‍ನ ಎಲ್ಲಾ ಸೈನಿಕರ ವಿಶ್ವಾಸವನ್ನು ಗಳಿಸಕೊಂಡೆ. ಈ ರೀತಿಯ ವಿಶ್ವಾಸ ಗಳಿಕೆ ಅಷ್ಟು ಸುಲಭ ಸಾಧ್ಯವಂತೂ ಅಲ್ಲವೇ ಅಲ್ಲ. ಅವರೊಂದಿಗೆ ನಡೆಯುವ ಪ್ರತೀ ಹಂತದ ಚಟುವಟಿಕೆಗಳಲ್ಲಿ, ಕೊನೆಗೆ ಆಟೋಟ ಸ್ಪರ್ಧೆಯಲ್ಲೂ, ನನ್ನ ಪರೀಕ್ಷೆಯೂ ಒಳಗೊಂಡಿರುತ್ತದೆ. ಯಾವುದೇ ಹಂತದಲ್ಲಿ ನನ್ನ ಸೋಲು, ಇಡೀ ಬೆಟಾಲಿಯನ್ ದೃಷ್ಟಿಯಲ್ಲಿ ಅವರ ಸೋಲಾಗುವ ಅಪಾಯದ ಹೊಣೆಗಾರಿಕೆ ಇರುತ್ತದೆ ಎಂದರೆ ಬಹುಶ ಒಬ್ಬ ಕಮಾಂಡರ್ ಎಷ್ಟು ಮುಖ್ಯನಾಗಿರುತ್ತಾನೆ ಎಂದು ಅರ್ಥೈಸಿಕೊಳ್ಳಬಹುದು.

ಇದೇ ಸಂದರ್ಭದಲ್ಲಿ ತಮ್ಮ ಮನೆ, ಸಂಸಾರಗಳನ್ನೆಲ್ಲಾ ಬಿಟ್ಟು ಬಂದು, ದೇಶಕ್ಕಾಗಿ ಸೈನ್ಯದೊಳಗಿನ ಶಿಸ್ತು ಮತ್ತು ದೇಶ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಪ್ರತೀ ಸೈನಿಕನ ಆಗು ಹೋಗುಗಳನ್ನೂ ನಾವೇ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಊರಿನಲ್ಲಿರುವ ತಮ್ಮ ಮನೆ-ಬಂಧು-ಕುಟುಂಬದ ಸಮಸ್ಯೆಗಳನ್ನು ಅರಿತು, ಅಲ್ಲಿನ ಸಂಬಂಧಿಸಿದವರೊಡನೆ ವ್ಯವಹರಿಸಿ, ಸಮಸ್ಯೆ ಬಗೆ ಹರಿಸುವುದು, ಯಾವುದೋ ಸಂಕಷ್ಟದ ಸಮಯದಲ್ಲಿ ಆ ಸೈನಿಕನ ಕುಟುಂಬವನ್ನು ಸಂಪರ್ಕಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು, ಇಂತಹ ಜವಾಬ್ದಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ನಮಗಿರುತ್ತದೆ. ಅದನ್ನು ನಾವು ಅಕ್ಕರೆಯಿಂದ, ಕಾಳಜಿಯಿಂದ ನಿರ್ವಹಿಸಿದಾಗ ಸೈನಿಕರಿಗೂ ನಮ್ಮ ಮೇಲೆ ವಿಶ್ವಾಸ ಮೂಡುತ್ತದೆ. ಒಮ್ಮೆ ಅವರಿಗೆ ನಮ್ಮ ಬಗ್ಗೆ ವಿಶ್ವಾಸ ಬಂತೆಂದರೆ, ಮತ್ತೆಂದೂ ಅವರು ಅಗೌರವ ತೋರುವುದಿಲ್ಲ-ಇದು ಸೈನ್ಯದ ಮಟ್ಟಿಗೆ ಬಹಳ ಮುಖ್ಯವಾದದ್ದು. ಇದೆಲ್ಲವನ್ನೂ ನಾವು ಸೈನಿಕರ ಹಿತ ದೃಷ್ಟಿ ಮತ್ತು ಆತ್ಮೀಯತೆಯಿಂದ ಮಾಡಿದಾಗ ಮಾತ್ರ ಸಾಧ್ಯ. ಆಗ ಅವರು ನಮ್ಮನ್ನು ಓರ್ವ ನೈಜ ನಾಯಕನೆಂಬಂತೆ ಗೌರವಿಸುತ್ತಾರೆ . ನಾನು ಆ ಗೌರವ ಪಡೆದ ಬಗ್ಗೆ ನನಗೆ ಹೆಮ್ಮೆಯೂ ಇದೆ.

1970ರ ಡಿಸೆಂಬರ್ ಕೊನೆಯಲ್ಲಿ ಮತ್ತೆ ಇಬ್ಬರು ಯಂಗ್ ಆಫೀಸರ್ ನಮ್ಮ ಬೆಟಾಲಿಯನ್‌ಗೆ ಬಂದರು. ಆಗ ನಾನು ಅವರಿಗಿಂತ ಸೀನಿಯರ್ ಆದೆ. ನನಗೆ ಅವರಿಬ್ಬರ ಸಹಾಯ ಸಿಗಲಾರಂಭವಾಯ್ತು. ಅವರಲ್ಲೊಬ್ಬ ಆರ್ಹತೆಯ ಮೇರೆಗೆ ಕಮಾಂಡೋ ತುಕಡಿಯ ಕಮಾಂಡರ್ ಆಗಿಯೂ ನೇಮಕಗೊಂಡರು.

ಸೈನ್ಯಕ್ಕೆ ಸೇರಿದರೆ ಅಲ್ಲಿಗೆ ಅಕಾಡೆಮಿಕ್ ಶಿಕ್ಷಣ ಮುಗಿಯಿತು ಎಂಬ ತಪ್ಪು ಭಾವನೆ ಇರುತ್ತದೆ. ಆದರೆ ಸೈನ್ಯದಲ್ಲಿಯೂ ದೈಹಿಕ ಸಾಮರ್ಥ್ಯಕ್ಕೆ ಸಿಗುವ ತರಬೇತಿಯಷ್ಟೇ ಬೌದ್ಧಿಕ ಜ್ಞಾನವೃದ್ಧಿಗೆ ಅವಕಾಶವಿದೆ. ಅಗತ್ಯವಾದ ಕೋರ್ಸ್‌ಗಳಿಗೂ ಅವಕಾಶವಿರುತ್ತದೆ. ನಾನು ಈ ಸಂದರ್ಭದಲ್ಲಿ ಪುಣೆ, ಮಧ್ಯಪ್ರದೇಶಗಳಲ್ಲಿ ನಡೆದ ಕೆಲವು ಕೋರ್ಸ್‍ಗಳಿಗೂ ಸೇರಿಕೊಂಡು ಕೆಲ ವಿಶೇಷ ಕ್ಷೇತ್ರಗಳಲ್ಲಿ ತಜ್ಞನೆಂದೂ ಗುರುತಿಸಿಕೊಂಡೆ.

ಮುಂದೆ 1971ರಲ್ಲಿ ನಾನು 120 ಜನ ಸೈನಿಕರಿರುವ ಒಂದು ರೈಫಲ್ ಕಂಪೆನಿಗೆ ಸೆಕೆಂಡ್ ಇನ್ ಕಮಾಂಡರ್ ಆಗಿ ಪದೋನ್ನತಿ ಹೊಂದಿದೆ. ಇಲ್ಲಿ ಓರ್ವ ಮೇಜರ್ ನಮ್ಮ ಕಂಪೆನಿಯ ಕಮಾಂಡರ್ ಆಗಿದ್ದರೆ, ಕಂಪೆನಿಯನ್ನು ಚಾರ್ಲಿ ಕಂಪೆನಿ ಎಂದು ಕರೆಯಲಾಗುತ್ತಿತ್ತು. ಇಲ್ಲಿಯೂ ನನ್ನ ಕಾರ್ಯಕ್ಷೇತ್ರ ತೀರಾ ಭಿನ್ನವಾಗಿಲ್ಲವಾದರೂ, ತರಬೇತಿಯೇ ಪ್ರಮುಖವಾಗಿತ್ತಾದರೂ, ತಂಡದಲ್ಲಿನ ಒಗ್ಗಟ್ಟು ಮತ್ತು ಸ್ಫೂರ್ತಿಯನ್ನು ಹೆಚ್ಚಿಸುವುದು, ಶಿಸ್ತಿಗೆ ಹೆಚ್ಚು ಆದ್ಯತೆ ನೀಡುವುದು ಇತ್ಯಾದಿಗಳನ್ನು ನಿರ್ವಹಿಸಬೇಕಿತ್ತು. ಯಾವುದೇ ಸಂದರ್ಭದಲ್ಲಿ ಎದುರಾಗುವ ಯುದ್ಧ ಸನ್ನಿವೇಶಗಳನ್ನು ಎ‌ದುರಿಸಲು ಅವರನ್ನು ಅಣಿಗೊಳಿಸುವ ಮಹತ್ತರ ಕರ್ತವ್ಯ ನಮ್ಮದಾಗಿತ್ತು.

ಈ ರೀತಿಯ ಕಾಲು ದಳದಲ್ಲಿ ಪ್ರತೀ ನಾಯಕನೂ ತನ್ನ ತಂಡಲ್ಲಿರುವ ಪ್ರತೀ ಸದಸ್ಯನ ಬಗ್ಗೆಯೂ ತಿಳಿದಿರಬೇಕಾಗುತ್ತದೆ. ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಆರ್ಹನನ್ನು ಆಯ್ಕೆ ಮಾಡುವ ಜವಾಬ್ದಾರಿ ನಾಯಕನದ್ದು. ಪರಸ್ಪರ ವಿಶ್ವಾಸ ಮತ್ತು ವಿಧೇಯತೆಯನ್ನು ಬೆಳೆಸಿಕೊಳ್ಳಬೇಕಾಗಿರುತ್ತದೆ. ನನ್ನ ಅದೃಷ್ಟಕ್ಕೆ ನಾನಿದೆಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದೆ. ಓರ್ವ ನಾಯಕನ ಒಂದೇ ಮಾತು ನೂರಾರು-ಸಾವಿರಾರು ಸೈನಿಕರು, ದೇಶ ಮತ್ತು ಒಟ್ಟಾರೆ ವ್ಯವಸ್ಥೆ, ಸೈನಿಕರ ಅಸಂಖ್ಯ ಕುಟುಂಬಿಕರು – ಹೀಗೆ ಎಲ್ಲರ ಭವಿಷ್ಯವನ್ನೂ ನಿರ್ಣಯಿಸುವ ಮಟ್ಟದಲ್ಲಿರುತ್ತದೆ. ಇದನ್ನು ಸಂಪೂರ್ಣ ಅರಿತು ಮುನ್ನಡೆಯುವ ಅನಿವಾರ್ಯತೆ ನಾಯಕನಾದವನಿಗಿರುತ್ತದೆ. ನಾನು ಸಿಖ್ ಲೈಟ್‌ ಇನ್ಫೆಂಟರಿಯಲ್ಲಿದ್ದೆ. ಅಲ್ಲಿ ಎಲ್ಲಾ ಸರದಾರಜೀಗಳೂ ತಮ್ಮ ನಾಯಕನನ್ನು ಸಾಹೇಬ್ ಬಹಾದ್ದೂರ್ ಎಂದೇ ಸಂಬೋಧಿಸುತ್ತಾರೆ.

ಆದರೆ ಈ ಸಂಬೋಧನೆ ಅಷ್ಟು ಸುಲಭವಾಗಿ ಬರುವುದಿಲ್ಲ. ನನ್ನನ್ನು ನಾಯಕನೆಂದು ಅವರು ಎಲ್ಲಾ ವಿಧದಲ್ಲೂ ವಿಶ್ವಾಸ ಗಳಿಸಿದ ಮೇಲೆ ಮಾತ್ರ ಹೀಗೆ ಕರೆಯುತ್ತಾರೆ. ನಾನು ಆ ಮಟ್ಟದಲ್ಲಿ ಇವರ ಗೌರವಕ್ಕೆ ಪಾತ್ರನಾದೆ. ಒಮ್ಮೆ ಅವರು ನಮ್ಮನ್ನು ಹೀಗೆ ಸ್ವೀಕರಿಸಿದ ನಂತರ ನಮ್ಮನ್ನೇ ದೇವರೆಂಬಂತೆ ಕಾಣುತ್ತಾರೆ. ಉದಾಹರಣೆಗೆ ಒಮ್ಮೆ ಒಂದು ತರಬೇತಿಯ ವೇಳೆಯಲ್ಲಿ, ಎಲ್ಲರೂ ತುಂಬಾ ಬಳಲಿದಾಗ ಪುಟ್ಟ ವಿಶ್ರಾಂತಿಯನ್ನು ಸಾರಲಾಯಿತು. ಸಹಜವಾಗಿಯೇ ಅಲ್ಲಲ್ಲೇ ಎಲ್ಲರೂ ಒರಗಿದ್ದರು. ನನಗೆ ಸಣ್ಣ ನಿದ್ದೆ ಬಂದಂತಾಗಿದ್ದು, ಒಮ್ಮೆ ಎಚ್ಚರವಾಯಿತು, ಆಗ ಇಬ್ಬರು ಸರದಾರ್ಜೀಗಳು ನನ್ನ ಶೂ ತೆಗೆದು, ಸಾಕ್ಸ್‌ನ್ನೂ ತೆಗೆದು, ನನ್ನ ಪಾದವನ್ನು ಉಜ್ಜುತ್ತಾ ನನಗೆ ರಿಲ್ಯಾಕ್ಸ್ ಆಗುವಂತೆ ಮಾಡುತ್ತಿದ್ದರು!. ಈ ರೀತಿಯ ಆರೈಕೆ ನನಗೆ ವಯಕ್ತಿಕವಾಗಿ ಅಷ್ಟು ಇಷ್ಟ ಅನಿಸದಿದ್ದರೂ, ಅದನ್ನು ಅವರು ತಮ್ಮ ಸಾಹೇಬ್ ಬಹಾದ್ದೂರ್‌ಗೆ ನೀಡುವ ಗೌರವ ಎಂಬಂತೆ ಮಾಡುತ್ತಾರೆ. ಕೆಲವೊಮ್ಮೆ ಅನಿವಾರ್ಯವಾಗಿ ಸ್ವೀಕರಿಸಬೇಕಾಗುತ್ತದೆ! ಮುಂದೆ ಶ್ರೀಲಂಕಾದಲ್ಲಿ ನಾವು ಕಾರ್ಯಾಚರಣೆಯಲ್ಲಿದ್ದಾಗಲೂ ಇಂತಾದ್ದೇ ಅನುಭವಾವಾಗಿತ್ತು, ಅದರ ಬಗ್ಗೆ ಮುಂದೆ ಹೇಳುತ್ತೇನೆ.

ಎಲ್ಲಿಯ ತನಕ ನಮ್ಮ ನಮ್ಮೊಳಗೆ ಒಂದು ಆತ್ಮೀಯತೆ ಬೆಳೆದಿತ್ತೆಂದರೆ, ನಾನು ಕೇವಲ ಅಷ್ಟೂ ಸೈನಿಕರನ್ನು ಕತ್ತಲೆಯಲ್ಲಿ ಬೇಕಿದ್ದರೂ ಅವರ ಸ್ವರ ಮಾತ್ರದಿಂದಲೇ ಹೆಸರು ಹಿಡಿದು ಕೂಗುವಷ್ಟೂ ಎಲ್ಲರೂ ಪರಿಚಿತರಾಗಿದ್ದರು. ಎಲ್ಲರ ಹೆಸರುಗಳು ಇಂದಿಗೂ ನನ್ನ ಮನಪಟಲದಲ್ಲಿ ಹಾದು ಹೋಗುತ್ತಿರುತ್ತವೆ. ಆ ಕ್ಷಣಗಳಲ್ಲೆಲ್ಲಾ ನಾನು ಭಾವೋದ್ವೇಗಕ್ಕೊಳಗಾಗುತ್ತೇನೆ. ಅವೆರಲ್ಲ ನನ್ನ ಸಹವರ್ತಿಗಳಲ್ಲವೇ.

ನಿರೂಪಣೆ: ಅರೆಹೊಳೆ ಸದಾಶಿವ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT