ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ಗೆ 75 ವರ್ಷಗಳು: ಸಂಸ್ಥಾಪಕರ ನೆನಪಿನ ಹೊನಲು

Last Updated 18 ಅಕ್ಟೋಬರ್ 2022, 9:14 IST
ಅಕ್ಷರ ಗಾತ್ರ

ತಮ್ಮ ಅಜ್ಜ, ‘ಡೆಕ್ಕನ್‌ ಹೆರಾಲ್ಡ್‌’, ‘ಪ್ರಜಾವಾಣಿ‌’ ದಿನಪತ್ರಿಕೆಗಳ ಸ್ಥಾಪಕ ಕೆ.ಎನ್‌. ಗುರುಸ್ವಾಮಿ ಮತ್ತು ಅಜ್ಜಿ ಕದಿರಮ್ಮ ಅವರ ಕುರಿತು ಮೊಮ್ಮಗ ಕೆ.ಎನ್‌. ಹರಿಕುಮಾರ್‌ ಅವರ ಆಪ್ತ ನೆನಪುಗಳು. 1948ರಲ್ಲಿ ಎರಡೂ ಪತ್ರಿಕೆಗಳನ್ನು ಆರಂಭಿಸುವಾಗಿನ ಆ ಕ್ಷಣಗಳನ್ನೂ ಅವರು ಇಲ್ಲಿ ಮೆಲುಕು ಹಾಕಿದ್ದಾರೆ...

ನನ್ನ ಅಜ್ಜ–ಅಜ್ಜಿಯ ವಿಶಾಲವಾದ ಹಾಸಿಗೆಯಲ್ಲಿ, ಅವರ ನಡುವೆ, ರಾತ್ರಿ ಮಲಗುತ್ತಿದ್ದುದು (ನಾನು, ನನ್ನ ತಂದೆ–ತಾಯಿಯ ಜತೆ ಮಲಗುತ್ತಲೇ ಇರಲಿಲ್ಲ. ಅವರೊಂದಿಗೆ ನನ್ನ ತಮ್ಮ ತಿಲಕ್‌ ಮಲಗುತ್ತಿದ್ದ) ನನ್ನ ಬಾಲ್ಯದ ಮೊದಲ ನೆನಪುಗಳಲ್ಲಿ ಒಂದು. ನನ್ನ ಅಜ್ಜಿಯಂತೂ ತಾವು ಬಯಸಿದ್ದನ್ನು ಪಡೆಯುವುದಕ್ಕಾಗಿ, ಅದೂ ಆ ಸಂದರ್ಭದಲ್ಲಿ ತಾವು ಆರಾಧಿಸುತ್ತಿದ್ದ ಹಿಂದೂ–ಮುಸ್ಲಿಂ ಭಾವೈಕ್ಯ ಸಂತ ಮತ್ತು ಅವರ ಪಂಥದ ಅನುಯಾಯಿಗಳಿಗೆ ಆಶ್ರಮವೊಂದನ್ನು ನಿರ್ಮಾಣ ಮಾಡುವುದಕ್ಕಾಗಿ, ಅಜ್ಜನನ್ನು ತುಂಬಾ ಪೀಡಿಸುತ್ತಿದ್ದುದು ಹಾಗೂ ಅದಕ್ಕೆ ಒಪ್ಪಿಗೆ ಪಡೆಯುವತನಕ ಅವರಿಗೆ ನಿದ್ರೆ ಮಾಡಲೂ ಬಿಡದೆ ಪಟ್ಟು ಹಿಡಿದುದ್ದುದು ಕೂಡ ನನಗೆ ಅಸ್ಪಷ್ಟ ನೆನಪು. ನನ್ನ ಅಜ್ಜ–ಅಜ್ಜಿ ಬಾಲ್ಯದಲ್ಲಿ ನನ್ನನ್ನು ಎಷ್ಟೊಂದು ಆವರಿಸಿದ್ದರೆಂದರೆ ಆಗ ನನ್ನ ಅಪ್ಪ–ಅಮ್ಮ ಸಹ ಮಸುಕಾಗಿ ಹೋಗಿದ್ದರು.

ಕೆ.ಎನ್‌. ಗುರುಸ್ವಾಮಿ
ಕೆ.ಎನ್‌. ಗುರುಸ್ವಾಮಿ

ನನ್ನಜ್ಜ ಕೆ.ಎನ್‌. ಗುರುಸ್ವಾಮಿಯವರದು ತುಂಬಾ ಗಟ್ಟಿಮುಟ್ಟಾದ ಮೈಕಟ್ಟು. ಕುಳ್ಳಗಿದ್ದರೂ ವಿಶಾಲವಾದ ಭುಜ ಹಾಗೂ ಬಲಶಾಲಿ ಸ್ನಾಯುಗಳಿಂದ ಮೈದುಂಬಿಕೊಂಡಿದ್ದ ಮನುಷ್ಯ. ಕುಸ್ತಿ ಪೈಲ್ವಾನ ಇಲ್ಲವೆ ದೇಹದಾರ್ಢ್ಯ ಪಟುವಿನಂತೆ ಅವರ ಅಂಗಸೌಷ್ಟವ ಕಂಗೊಳಿಸುತ್ತಿತ್ತು. ಸದಾ ಹೊರಜಗತ್ತಿನಲ್ಲಿ ಕ್ರಿಯಾಶೀಲವಾಗಿರುತ್ತಿದ್ದ ಈ ಬೇಟೆಗಾರ, ಕುದುರೆ ಸವಾರ, ಮನೆಯೊಳಗೆ ತಮ್ಮ ಕೋಣೆಗಳಲ್ಲಿ ವಿವಿಧ ವ್ಯಾಯಾಮ ಸಾಧನಗಳನ್ನೂ ಇಟ್ಟುಕೊಂಡಿದ್ದರು. ಅಜ್ಜನಿಗೆ ಅವರ ಸ್ವಂತ ಸೇವಕ ರಾಮಯ್ಯನೇ ನಿತ್ಯ ಅಭ್ಯಂಜನ ಮಾಡಿಸುತ್ತಿದ್ದ. ಪ್ರತೀ ಶನಿವಾರ ಅಜ್ಜನೊಂದಿಗೆ ನಾನು ಮತ್ತು ನನ್ನ ತಮ್ಮ ತಪ್ಪದೇ ಎಣ್ಣೆಸ್ನಾನವನ್ನು ಮಾಡಬೇಕಿತ್ತು.

ನಾನು, ನನ್ನಜ್ಜಿ ಕದಿರಮ್ಮ ಅವರಿಗೆ ಆತುಕೊಂಡು ಬೆಳೆದೆ. ವಿದ್ಯಾವಂತ ಹಾಗೂ ನಗರ ಸಮಾಜಕ್ಕೆ ಹೊರತಾದ ವಾತಾವರಣದಲ್ಲಿ ಬೆಳೆದಿದ್ದ ಅವರು, ಸ್ವತಂತ್ರ ಮನೋಭಾವದ, ಪ್ರಬಲ ಇಚ್ಛಾಶಕ್ತಿಯುಳ್ಳ, ಸಮರ್ಥ ಮಹಿಳೆಯಾಗಿದ್ದರು. ಆದರೆ, ಹಳ್ಳಿಯಿಂದ ಬಂದಿದ್ದ ಅವರು ಅನಕ್ಷರಸ್ಥರಾಗಿದ್ದರು ಹಾಗೂ ಅವರಲ್ಲಿ ನಗರಗಳಲ್ಲಿನ ಸುಶಿಕ್ಷಿತರ ನಯ ನಾಜೂಕುತನ ಇರಲಿಲ್ಲ. ಮನೆಯ ಮುಂದಿನ ಚಿಕ್ಕದಾದ ತ್ರಿಕೋನಾಕಾರದ ಕೋಣೆಯ ನೆಲಹಾಸಿನ ಮೇಲೆ ತಂಬಾಕು ಜಗಿಯುತ್ತಾ, ಸುತ್ತಲೂ ನೆರೆದಿರುತ್ತಿದ್ದ ಪರಿವಾರದ ಮಧ್ಯೆ ದರ್ಬಾರ್‌ ನಡೆಸುತ್ತಾ ನನ್ನಜ್ಜಿ ಕುಳಿತಿರುತ್ತಿದ್ದಾಗ ಅವರ ತೊಡೆಯ ಮೇಲೆ ನಾನು ತಲೆಯಿಟ್ಟು ಮಲಗಿರುತ್ತಿದ್ದೆ. ನನ್ನ ತಾಯಿಯ ತೀವ್ರ ಕ್ರೋಧದಿಂದ ನನ್ನನ್ನು ರಕ್ಷಿಸಲು ಅವರು ಸದಾ ನನ್ನ ಪಕ್ಷವನ್ನೇ ವಹಿಸಿಕೊಂಡು ನಿಲ್ಲುತ್ತಿದ್ದರು. ಅಂತಹ ಎಲ್ಲ ಯತ್ನಗಳಲ್ಲಿ ಅಜ್ಜಿ ಯಶಸ್ವಿ ಆಗಿಬಿಡುತ್ತಿದ್ದರು ಎಂದೇನಿರಲಿಲ್ಲ. ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ಅಜ್ಜಿ ಆಶ್ರಮವನ್ನು ಕಟ್ಟಿಸಿಕೊಳ್ಳುವಲ್ಲಿ ಯಶ ಕಂಡಿದ್ದರು (ಆಗ ಬೆಂಗಳೂರಿನ ಹೊರವಲಯದಲ್ಲಿ ಅಜ್ಜ ಖರೀದಿಸಿಕೊಟ್ಟಿದ್ದ ನಾಲ್ಕೂವರೆ ಎಕರೆಯಷ್ಟು ಭೂಮಿಯಲ್ಲಿ, ಆಶ್ರಮವನ್ನು ನಿರ್ಮಿಸಲಾಯಿತು). ಆ ಆಶ್ರಮಕ್ಕೆ ಅಜ್ಜಿ ಆಗಾಗ ತಮ್ಮ ಚಿಕ್ಕ, ಕಪ್ಪುಬಣ್ಣದ ವುಲ್ಸ್‌ಲೇ ಕಾರಿನಲ್ಲಿ ಹೋಗುತ್ತಿದ್ದರು. ಕೃಷ್ಣ ರೆಡ್ಡಿ ಎಂಬಾತ ಆ ಕಾರಿನ ಚಾಲಕನಾಗಿದ್ದ. ಆಶ್ರಮದ ದೈನಂದಿನ ಚಟುವಟಿಕೆಗಳಲ್ಲದೆ ಅಲ್ಲಿ ಭಕ್ತಾದಿಗಳಿಗಾಗಿ ನಡೆಯುತ್ತಿದ್ದ ವಾರ್ಷಿಕ ಆರಾಧನೆಯ ಉಸ್ತುವಾರಿಯೂ ಅಜ್ಜಿಯದೇ ಆಗಿತ್ತು. ನಾನು ಹದಿಹರೆಯದ ಹುಡುಗನಾಗಿದ್ದಾಗ, 1965ರಲ್ಲಿ, ಅಜ್ಜಿ ತೀರಿಕೊಂಡರು. ಕುಟುಂಬದ ಸ್ಮಶಾನದ ಬದಲು (ನನ್ನಜ್ಜ, ಅಲ್ಲಿ ತಮ್ಮತಂದೆ–ತಾಯಿಯ ಸಮಾಧಿಯ ಮೇಲೆ ಭವ್ಯ ಛತ್ರಿ ಕಟ್ಟಿಸಿದ್ದರು), ಅಜ್ಜಿಯ ಇಚ್ಛೆಯಂತೆ ಆಶ್ರಮದ ಆವರಣದಲ್ಲೇ ಅವರ ಪಾರ್ಥಿವ ಶರೀರವನ್ನು ಹೂಳಲಾಯಿತು. ಮುಂದೆ, ಇಪ್ಪತ್ತೈದು ವರ್ಷಗಳ ಬಳಿಕ ಅಜ್ಜನೂ ತೀರಿಹೋದಾಗ ಅವರ ಕೊನೆಗಾಲದ ಇಚ್ಛೆಯಂತೆ ಅಜ್ಜಿಯ ಸಮಾಧಿ ಪಕ್ಕವೇ ಅವರ ಪಾರ್ಥಿವ ಶರೀರವನ್ನು ಹೂಳಲಾಯಿತೇ ಹೊರತು ಅವರ ಮೊದಲಿನ ಬಯಕೆಯಂತೆ ಕುಟುಂಬದ ಸ್ಮಶಾನದಲ್ಲಿದ್ದ ಅವರ ತಂದೆ–ತಾಯಿಗಳ ಸಮಾಧಿಯ ಪಕ್ಕದಲ್ಲಿ ಅಲ್ಲ.

ರಾವ್‌ ಸಾಹೇಬ್‌ ನೆಟ್ಟಕಲ್ಲಪ್ಪ,ಕೆ.ಎನ್‌. ಗುರುಸ್ವಾಮಿ ಅವರ ತಂದೆ
ರಾವ್‌ ಸಾಹೇಬ್‌ ನೆಟ್ಟಕಲ್ಲಪ್ಪ,
ಕೆ.ಎನ್‌. ಗುರುಸ್ವಾಮಿ ಅವರ ತಂದೆ

ನನ್ನಜ್ಜ, ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಮಕ್ಕಳೂ ಅಜ್ಜನನ್ನು ಅಷ್ಟೇ ಉತ್ಕಟವಾಗಿ ಪ್ರೀತಿಸುತ್ತಿದ್ದರು. ಮಕ್ಕಳೊಂದಿಗೆ ಆಡುವಾಗ ಅಜ್ಜ ಮಗುವೇ ಆಗಿಬಿಡುತ್ತಿದ್ದರು. ಸಂತಾನ ಇಲ್ಲದಿದ್ದರಿಂದ ಅವರು ತಮ್ಮ ಕಿರಿಯ ಸಹೋದರನ ಮಗನನ್ನು (ನನ್ನ ತಂದೆ) ದತ್ತು ಪಡೆದಿದ್ದರು. ನನ್ನ ತಂದೆ ಪುಟ್ಟ ಮಗುವಾಗಿದ್ದಾಗಲೇ ಅವರ ತಾಯಿ ಕ್ಷಯರೋಗಕ್ಕೆ ತುತ್ತಾಗಿದ್ದರು. ನನ್ನ ತಂದೆಯನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ನನ್ನಜ್ಜ ಬೆಳೆಸಿದರು. ಹೈದರಾಬಾದ್‌ ಮತ್ತು ನಿಜಾಮಾಬಾದ್‌ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದು ಹೆಸರಾಗಿದ್ದ ಮನೆತನದ ಹುಡುಗಿಯನ್ನು (ನನ್ನ ತಾಯಿ) ಹುಡುಕಿ, ನನ್ನ ತಂದೆಯ ಮದುವೆಯನ್ನು ಗೊತ್ತುಮಾಡಿದರು. ‘ನನ್ನದೆಲ್ಲವೂ ಅವನದು’ ಎಂಬ ಅಜ್ಜನ ಘೋಷಣೆ, ನನ್ನ ತಾಯಿಯ ಅಪ್ಪ–ಅಮ್ಮನಿಗೆ ಹಿತಕರವಾಗಿ ಕೇಳಿಸಿ, ಅವರಲ್ಲಿ ಭರವಸೆಯನ್ನು ತುಂಬಿತ್ತು. ಅಷ್ಟೇ ಅಲ್ಲ, ಪತ್ರಿಕಾ ಕಂಪನಿಯಲ್ಲಿ ನನ್ನ ತಂದೆಯನ್ನು ಕಾರ್ಯದರ್ಶಿ ಹುದ್ದೆಗೆ ನೇಮಕವನ್ನೂ ಮಾಡಿದ್ದರು ನನ್ನಜ್ಜ. ಆ ಹುದ್ದೆ ಇಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಸರಿಸುಮಾರು ಸಮಾನ ಎನ್ನಬಹುದು. ಮುಂದೆ, ಅಜ್ಜ ಮತ್ತು ಅಪ್ಪನ ನಡುವೆ ತಪ್ಪು ತಿಳಿವಳಿಕೆಗಳು ಮೂಡಿ, ಇಬ್ಬರ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, 47ರ ಸಣ್ಣ ವಯಸ್ಸಿನಲ್ಲಿಯೇ ನನ್ನ ತಂದೆ ತೀರಿಹೋದಾಗ ಅಜ್ಜ ಅತೀವ ದುಃಖ ಮತ್ತು ಆಘಾತದಲ್ಲಿ ತತ್ತರಿಸಿದರು. ತಮ್ಮ ಕೆಲವು ಕಾರ್ಯಗಳಿಗೆ ಪಶ್ಚಾತ್ತಾಪ ಪಡುತ್ತಾ, ದೀರ್ಘಕಾಲದ ಉದ್ಯಮದ ಪಾಲುದಾರ ವೆಂಕಟಸ್ವಾಮಿ ಅವರ ತೀಕ್ಷ್ಣ ಹಾಗೂ ಬಗ್ಗದ ವಿರೋಧವನ್ನು ಧೈರ್ಯದಿಂದ ನಿರ್ಲಕ್ಷಿಸಿ, ಪತ್ರಿಕಾ ಕಂಪನಿಯ ಷೇರುಗಳನ್ನು ತಮ್ಮ ಮೂವರೂ ಮೊಮ್ಮಕ್ಕಳಿಗೆ ವರ್ಗಾಯಿಸಿದ ಅಜ್ಜ, ಉದ್ಯಮದಲ್ಲಿ ಅವರ ಸುಸೂತ್ರ ಪ್ರವೇಶದ ಮೇಲುಸ್ತುವಾರಿಯನ್ನೂ ತಾವೇ ನೋಡಿಕೊಂಡರು. ತಮ್ಮ ಮರಣಾನಂತರ ತಮ್ಮ ಆಸ್ತಿಯೆಲ್ಲ ಮೂವರೂ ಮೊಮ್ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗುವ ವ್ಯವಸ್ಥೆಯನ್ನು ಸಹ ಅವರು ಮಾಡಿದರು. ಕೊಟ್ಟ ಮಾತಿನಂತೆ ನಡೆಯುವುದು ಅವರ ಬದುಕಿನ ಮುಖ್ಯ ಸಿದ್ಧಾಂತವಾಗಿತ್ತು. ಈ ವಿಷಯದಲ್ಲೂ ಅವರು ಹಾಗೇ ನಡೆದುಕೊಂಡರು.

ವಿಶೇಷ ಬಸ್‌ನಲ್ಲಿ ವನಂ ಪ್ರವಾಸ

ನಾವು ಚಿಕ್ಕವರಿದ್ದಾಗ ನನ್ನನ್ನು ಮತ್ತು ನನ್ನ ತಮ್ಮನನ್ನು ಅಜ್ಜ ‘ವನಂ’ಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಕಳ್ಳು - ಹೆಂಡ ಆಗುವ ರಸವನ್ನು ಇಳಿಸುವ ಹಾಗೂ ಕೆಲಸಗಾರರಿಗೆ ಸಂಬಳ ಹಂಚುವ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಈ ಯಾನಕ್ಕಾಗಿಯೇ ವಿಶೇಷವಾಗಿ ನಿರ್ಮಿಸಿದ ಬಸ್ಸನ್ನು ಅವರು ಹೊಂದಿದ್ದರು. ಆ ಬಸ್ಸನ್ನು ಅವರ ಸ್ವಂತ ಚಾಲಕ ಮುನಿಸ್ವಾಮಿ ಓಡಿಸುತ್ತಿದ್ದ. ‘ವನಂ’ನಲ್ಲಿ ನಾವು ದೊಡ್ಡದೊಂದು ಗುಡಿಸಲಿನಲ್ಲಿ ಉಳಿಯಬೇಕಿತ್ತು. ಮೇಲೆ ಹುಲ್ಲಿನ ಚಾವಣಿಯಿದ್ದರೆ, ಕೆಳಗಿನ ನೆಲವನ್ನು ಸಗಣಿಯಿಂದ ಬಳಿದಿರುತ್ತಿದ್ದರು. ಈ ಗುಡಿಸಲಿನ ಮುಂದಿನ ದೊಡ್ಡ ಅಂಗಳದ ಎರಡೂ ಬದಿಗಳಲ್ಲಿ ಕಳ್ಳು ತೆಗೆಯುವವರ ಪುಟ್ಟ ಪುಟ್ಟ ಗುಡಿಸಲುಗಳ ಸಾಲುಗಳು ಇರುತ್ತಿದ್ದವು. ಅಲ್ಲಿ ತೆಗೆಯುತ್ತಿದ್ದ ಕಳ್ಳಿನ ವಾಸನೆಗೆ ಒಗ್ಗಿಕೊಳ್ಳುವುದು ನನಗಾಗಲಿ, ನನ್ನ ತಮ್ಮನಿಗಾಗಲಿ ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ನಡೆಸುತ್ತಿದ್ದ ಅಬಕಾರಿ ಹರಾಜಿನಲ್ಲಿ ಹೆಂಡವನ್ನು ಮಾರಾಟ ಮಾಡಲು ಅಜ್ಜ ಎಲ್ಲೆಲ್ಲಿ ಲೈಸೆನ್ಸ್‌ ಪಡೆದಿದ್ದರೋ ಅಲ್ಲಲ್ಲಿನ ಅಂಗಡಿಗಳಿಗೆ ದೊಡ್ಡ ಬ್ಯಾರಲ್‌ಗಳಲ್ಲಿ ಹೆಂಡವನ್ನು ತುಂಬಿ ಲಾರಿಗಳಲ್ಲಿ ಕಳಿಸಲಾಗುತ್ತಿತ್ತು.

ಪುಂಡಾನೆ ಎಂದು ಘೋಷಿತವಾದ ಆನೆಯನ್ನು ಕೊಂದಾಗ...
ಪುಂಡಾನೆ ಎಂದು ಘೋಷಿತವಾದ ಆನೆಯನ್ನು ಕೊಂದಾಗ...

ರಾಜಕ್ರೀಡೆ ಎನಿಸಿದ ಬೇಟೆ ಆಡುವುದೂ ಅಜ್ಜನ ‘ವನಂ’ ಪಯಣದ ಉದ್ದೇಶಗಳಲ್ಲಿ ಒಂದಾಗಿರುತ್ತಿತ್ತು. ಬರ್ಮಾದಲ್ಲಿ ಫಾರೆಸ್ಟರ್‌ ಆಗಿ ಅನುಭವವಿದ್ದ ವ್ಯಕ್ತಿಯೊಬ್ಬರು (ರೇಂಜರ್‌ ಎಂದು ಮಾತ್ರ ನಾವು ಅವರನ್ನು ಬಲ್ಲವರಾಗಿದ್ದೆವು) ಅಜ್ಜನ ಜೊತೆಗೂಡುತ್ತಿದ್ದರು. ಬೇಟೆಯಾಡಲು ಅಜ್ಜನ ಬಳಿ ವಿಧ ವಿಧವಾದ ಗನ್‌ಗಳಿದ್ದವು. ಅವುಗಳಲ್ಲಿ ಹೆಚ್ಚಿನ ಮಾನ್ಯತೆಯನ್ನು ಗಿಟ್ಟಿಸಿದ್ದೆಂದರೆ ‘ಡಬಲ್ ಬ್ಯಾರೆಲ್ .375 ಹಾಲೆಂಡ್‌ ಆ್ಯಂಡ್‌ಹಾಲೆಂಡ್ ಮ್ಯಾಗ್ನಮ್ ರೈಫಲ್’. ಅವರಲ್ಲಿ ‘.470 ಬೋರ್ ಡಬಲ್ ಬ್ಯಾರೆಲ್ಡ್ ರೈಫಲ್’ ಸಹ ಇತ್ತು. ಅದರಿಂದ ಅವರು, ಪುಂಡಾನೆ ಎಂದು ಘೋಷಿತವಾದ ಆನೆಯೊಂದನ್ನು ಕೊಂದಿದ್ದರು. ಕೆಲವೊಮ್ಮೆ ಅವರು ಮೋಟರ್‌ಬೋಟ್‌ ಅನ್ನು ಕೆರೆಗಳಲ್ಲಿ ಬಾತುಕೋಳಿ ಬೇಟೆಗೆ ಒಯ್ಯುತ್ತಿದ್ದರು. ಬೆಳವ ಮತ್ತಿತರ ಹಕ್ಕಿಗಳು, ಬಾವಲಿಗಳು, ಕಾಡು ಕುರಿಗಳ ಬೇಟೆಗೆ ನಾವೂ ಸಾಕ್ಷಿಯಾಗಿದ್ದಿದೆ. ಆ ವೇಳೆಗಾಗಲೇ, ಹೆಚ್ಚುತ್ತಿದ್ದ ಅವರ ವಯಸ್ಸು, ಕಡಿಮೆಯಾಗುತ್ತಿದ್ದ ಅರಣ್ಯ ಪ್ರದೇಶ ಹಾಗೂ ಇಳಿಮುಖವಾಗುತ್ತಿದ್ದ ಕಾಡುಪ್ರಾಣಿಗಳ ಸಂಖ್ಯೆಯ ಕಾರಣದಿಂದ ದೊಡ್ಡ ಪ್ರಾಣಿಗಳ ಬೇಟೆಯ ದಿನಗಳು ಹಿಂದಕ್ಕೆ ಸರಿದಿದ್ದವು. ಆದರೆ, ನಮ್ಮ ಮನೆಯಲ್ಲಿ ಹಳೆಯ ಬೇಟೆಯಾತ್ರೆಗಳ ಸಾಕ್ಷಿಯಾಗಿ ಹಲವು ಸ್ಮರಣಿಕೆಗಳು ಕಿಕ್ಕಿರಿದಿದ್ದವು. ಅವುಗಳಲ್ಲಿ ಹುಲಿ, ಚಿರತೆ, ಕಾಡುಕೋಣ, ಕರಡಿ, ಸಾಂಬಾರ್‌ ಹಾಗೂ ಜಿಂಕೆಯ ಚರ್ಮಗಳು, ತಲೆಗಳು, ಕೋಡುಗಳು ಸಹ ಸೇರಿದ್ದವು. ಬಹುದೊಡ್ಡ ಗಾತ್ರದ ಆನೆಯ ದಂತಗಳು (ಮರದ ಚೌಕಟ್ಟಿನ ಮೇಲೆ ಶೋಭಿಸುತ್ತಿದ್ದ ಆ ದಂತಗಳ ನಡುವೆ ನನ್ನ ಮುತ್ತಜ್ಜನ ಭಾವಚಿತ್ರವಿತ್ತು), ಸೊಂಡಿಲು (ವಾಕಿಂಗ್‌ ಸ್ಟಿಕ್‌ ಸ್ಟ್ಯಾಂಡ್‌ ಆಗಿತ್ತು) ಮತ್ತು ಪಾದಗಳು (ಸ್ಟೂಲ್‌ ಆಗಿದ್ದವು) ಇದ್ದವು. ಪಾರಿವಾಳದಂತಹ ಪಕ್ಷಿಗಳಾದ ಬೆಳವಗಳನ್ನು ಹೊಡೆದುರುಳಿಸುತ್ತಿದ್ದ ಅಜ್ಜ, ಅದರ ರಕ್ತಕ್ಕೆ ಮಸಾಲೆ ಸೇರಿಸಿ ಕುಡಿಯುತ್ತಿದ್ದರು. ಆಗ ಹೆಚ್ಚುತ್ತಿದ್ದ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ನಿದ್ರೆಗೆ ಜಾರುತ್ತಿದ್ದರು.

ಅಜ್ಜ ಮತ್ತು ಪಂಚಕಲ್ಯಾಣಿ ಕುದುರೆ

ಅಜ್ಜನಿಗೆ ಕುದುರೆಗಳೆಂದರೆ ತುಂಬಾ ಪ್ರೀತಿ. ಅದು ಕುದುರೆ ಸವಾರಿ ಇರಬಹುದು, ಕುದುರೆ ರೇಸ್‌ ಇರಬಹುದು, ಎರಡನ್ನೂ ಅಷ್ಟೇ ಪ್ರೀತಿಸುತ್ತಿದ್ದರು. ಮನೆಯಲ್ಲಿದ್ದ ‘ಪಂಚಕಲ್ಯಾಣಿ’ ಎಂಬ ಕುದುರೆ ಅವರ ಅಚ್ಚುಮೆಚ್ಚಿನದಾಗಿತ್ತು. ಅದರ ನಾಲ್ಕೂ ಕಾಲುಗಳು ಮತ್ತು ಹಣೆಯ ಮೇಲೆ ಬಿಳಿಬಣ್ಣದ ಪಟ್ಟೆ ಇದ್ದುದರಿಂದ ಸಂಸ್ಕೃತದ ಆ ಹೆಸರನ್ನು ಅದಕ್ಕೆ ಇಟ್ಟಿದ್ದರು. ಮೊದಮೊದಲು ನಮಗೆ ಮನೆಯ ಕಾಂಪೌಂಡ್‌ನಲ್ಲೇ ಕುದುರೆ ಸವಾರಿಯನ್ನು ಮಾಡಿಸುತ್ತಿದ್ದರು. ನಾವು ಸ್ವಲ್ಪ ದೊಡ್ಡವರಾದಂತೆ ಮನೆ ಹೊರಗಿನ ಸುತ್ತಮುತ್ತ ಸವಾರಿ ಮಾಡಲು ನಮ್ಮನ್ನು ಕಳಿಸುತ್ತಿದ್ದರು. ನಾವು ಹುಡುಗರಾಗಿದ್ದಾಗ ನಮ್ಮನ್ನು ಬೆಳಗಿನ ಹೊತ್ತು ರೈಡಿಂಗ್‌ ಕ್ಲಬ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಬೇಲಿ ಹಾಕಿದ್ದ ಕ್ಲಬ್‌ನ ಆವರಣದೊಳಗೆ ಹಾಗೂ ಹೊರಗೆ ಬಯಲು ಜಾಗದಲ್ಲಿ ನಾವು ಕುದುರೆ ಸವಾರಿ ಮಾಡುತ್ತಿದ್ದೆವು. ಹವ್ಯಾಸಿ ಸವಾರರಿಗಿರುವ ಜಿಮ್ಕಾನಾ ರೇಸ್‌ಗಳು ಮಾತ್ರವಲ್ಲದೆ ಒಳ್ಳೆಯ ತಳಿಗಳ ಕುದುರೆ ರೇಸ್‌ಗಳಿಗೂ ನಮ್ಮನ್ನು ಕರೆದೊಯ್ಯುತ್ತಿದ್ದರು. ಸ್ಟ್ಯುವರ್ಡ್ ಹಾಗೂ ಚೇರ್‌ಮನ್‌ ಸೇರಿದಂತೆ ಬೆಂಗಳೂರು ರೇಸ್‌ ಕ್ಲಬ್‌ನ (ಮುಂದೆ ಬೆಂಗಳೂರು ಟರ್ಫ್‌ ಕ್ಲಬ್‌) ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಅಜ್ಜ, ರಾಷ್ಟ್ರದಾದ್ಯಂತ ಇತರ ಟರ್ಫ್ ಕ್ಲಬ್‌ಗಳ ಜೊತೆಗೂ ಸಕ್ರಿಯವಾದ ಸಂಪರ್ಕ ಹೊಂದಿದ್ದರು. ಕುದುರೆ ರೇಸ್‌ ಎಂದರೆ ರಾಜರುಗಳ ಕ್ರೀಡೆ ಎಂದುಕೊಂಡಿದ್ದರು ಅವರು. ಕುದುರೆ ರೇಸ್‌ ಕುರಿತು ಅತ್ಯುತ್ಸಾಹ ತೋರುತ್ತಿದ್ದರೂ ತಾವು ಮಾತ್ರ ಜೀವನದಲ್ಲಿ ಒಮ್ಮೆಯೂ ಬಾಜಿಯನ್ನು ಕಟ್ಟಿಲ್ಲ ಎಂಬ ಹೆಮ್ಮೆ ಅವರಲ್ಲಿತ್ತು.

ಪ್ರೀತಿಯ 'ಪಂಚಕಲ್ಯಾಣಿ' ಕುದುರೆಯೊಂದಿಗೆ
ಪ್ರೀತಿಯ 'ಪಂಚಕಲ್ಯಾಣಿ' ಕುದುರೆಯೊಂದಿಗೆ

ಅಜ್ಜನ ಕಳ್ಳು ಮತ್ತು ಸಾರಾಯಿ ಉದ್ಯಮದ ಕಚೇರಿ ನಮ್ಮ ಮನೆಗೆ ಹೊಂದಿಕೊಂಡ ಕಟ್ಟಡದಲ್ಲಿಯೇ ಇತ್ತು. ಅಲ್ಲಿ ಅವರಿಗೆ ಪ್ರತ್ಯೇಕವಾದ ಕೋಣೆಯಿತ್ತು. ಅವರ ವಿಶ್ವಾಸ ಗಳಿಸಿದ ದೀರ್ಘಕಾಲದ ಸಹಾಯಕರು, ಮ್ಯಾನೇಜರ್‌ಗಳಾದ ಷಣ್ಮುಗಂ, ಆಶೀರ್ವಾದಂ, ಗೋವಿಂದಪ್ಪ, ರಾಮಚಂದ್ರ ರಾವ್‌ ಮತ್ತಿತರರು ಅಕ್ಕಪಕ್ಕದ ಕೋಣೆಗಳಲ್ಲಿ ಕುಳಿತಿರುತ್ತಿದ್ದರು. ನಿರ್ದಿಷ್ಟ ಪ್ರದೇಶಗಳಲ್ಲಿ ಹೆಂಡ ಮತ್ತು ಸಾರಾಯಿ ಮಾರಾಟಕ್ಕಾಗಿ ಲೈಸೆನ್ಸ್‌ ನೀಡಲು ನಡೆಯುತ್ತಿದ್ದ ಅಬಕಾರಿ ಹರಾಜಿನಲ್ಲಿ ಪಾಲ್ಗೊಳ್ಳಲು ಅಜ್ಜ ತಮ್ಮ ಒಡನಾಡಿಗಳೊಂದಿಗೆ, ತುಸು ಬೆಳೆದು ದೊಡ್ಡವರಾದ ಮೇಲೆ, ನಮ್ಮನ್ನೂ ಕರೆದೊಯ್ಯುತ್ತಿದ್ದರು. ನನ್ನಜ್ಜನಿಗೆ ಈ ಕಳ್ಳು ಉದ್ಯಮ, ಅವರ ತಂದೆ ಕೆ. ನೆಟ್ಟಕಲ್ಲಪ್ಪ ಅವರಿಂದ ಪಿತ್ರಾರ್ಜಿತವಾಗಿ ಬಂದಿತ್ತು. ಕಳ್ಳು ಇಳಿಸುವುದು ಸಾಂಪ್ರದಾಯಿಕವಾಗಿ ನಮ್ಮ ಜಾತಿಯನ್ನು ಆಧರಿಸಿದ ವೃತ್ತಿಯಾಗಿತ್ತು. ಅವರ ಉದ್ಯಮದಲ್ಲಿ ಪಾಲುದಾರರಾಗಿದ್ದ ಬಹುತೇಕರು ಅವರ ಹತ್ತಿರದ ಇಲ್ಲವೆ ದೂರದ ಸಂಬಂಧಿಗಳೇ ಆಗಿದ್ದರು. ಸ್ವಜಾತಿಯ ಇತರ ಬಂಧು–ಮಿತ್ರರು ಸಹ ಅದರಲ್ಲಿ ಸೇರಿದ್ದರು. ಈ ಪಾಲುದಾರಿಕೆಯು ಹಲವು ಪೀಳಿಗೆಗಳಿಂದ ಹಾಸುಹೊಕ್ಕಾಗಿ ಬೆಳೆದುಬಂದಿತ್ತು.

ಅಜ್ಜ, ತಮ್ಮೆಲ್ಲ ಉದ್ಯಮದ ಚಟುವಟಿಕೆಗಳಲ್ಲಿ ಕೆ.ವೆಂಕಟಸ್ವಾಮಿ ಅವರನ್ನು ಹೆಚ್ಚಾಗಿ ಅವಲಂಬಿಸಿದ್ದರು. ಕುಟುಂಬದ ಹಿರಿಯರು ಹೇಳುವ ಪ್ರಕಾರ, ಈ ವೆಂಕಟಸ್ವಾಮಿಯವರು ನನ್ನ ಮುತ್ತಜ್ಜನ ಕಳ್ಳು ಉದ್ಯಮದಲ್ಲಿ ಸೂಪರ್‌ವೈಸರ್‌ ಆಗಿದ್ದ ವ್ಯಕ್ತಿಯೊಬ್ಬರ ಮಗ. ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದ ಆ ವ್ಯಕ್ತಿಯು ತಮ್ಮ ಸಮುದಾಯಕ್ಕೇ ಸೇರಿದ್ದ ಮನುಷ್ಯ ಎನ್ನುವ ಕಾರಣಕ್ಕಾಗಿ ನನ್ನ ಮುತ್ತಜ್ಜನೇ ಆತನನ್ನು ರಕ್ಷಿಸಿ, ಆತನಿಗೆ ಸೂಪರ್‌ವೈಸರ್‌ ಕೆಲಸದ ಮೂಲಕ ಪುನರ್ವಸತಿ ಕಲ್ಪಿಸಿದ್ದರಂತೆ. ಎಲ್ಲಿ ಅಡ್ಡದಾರಿ ಹಿಡಿಯುವನೋ ಎಂಬ ಭೀತಿಯಿಂದ ನನ್ನ ಮುತ್ತಜ್ಜ, ವೆಂಕಟಸ್ವಾಮಿ ಅವರನ್ನು ತಮ್ಮ ಕಣ್ಗಾವಲಿನಲ್ಲೇ ಇರುವಂತೆ ನೋಡಿಕೊಂಡಿದ್ದರು. ವೆಂಕಟಸ್ವಾಮಿ ಅವರ ಚುರುಕುತನಕ್ಕೆ ಮಾರುಹೋಗಿ ಅವರ ಬೆಳವಣಿಗೆಗೆ ಪೂರಕವಾದ ಕೆಲವು ಕೆಲಸಗಳನ್ನು ಕೊಡುವ ಮೂಲಕ ಅವರನ್ನು ಪ್ರೋತ್ಸಾಹಿಸಿದ್ದರು ಕೂಡ. ಬಾಲ್ಯದಲ್ಲಿ ಅವರು, ಅಜ್ಜ ಮತ್ತು ಅಜ್ಜನ ಸಹೋದರರ ಜೊತೆಯಲ್ಲೇ ಆಟವಾಡುತ್ತಿದ್ದರು. ಚುರುಕಾದ, ತೀಕ್ಷ್ಣ ಬುದ್ಧಿವಂತಿಕೆಯ, ಚಾಣಕ್ಯ ತಂತ್ರದ, ಪ್ರಬಲ ಇಷ್ಟಾನಿಷ್ಟದ, ತುಂಬಾ ಗಟ್ಟಿಯಾದ ಸಂಕಲ್ಪಶಕ್ತಿಯ ಮತ್ತು ಅಸಾಧ್ಯ ಸಾಮರ್ಥ್ಯದ, ತೆಳ್ಳಗೆನಿಸುವ ಶರೀರದ ಆ ವ್ಯಕ್ತಿ, ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುತ್ತಲೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು. ಸದಾ ಒಂದು ಪುಟ್ಟ ನೋಟ್‌ಬುಕ್‌ ಇಟ್ಟುಕೊಂಡು ಅದರಲ್ಲಿ ಟಿಪ್ಪಣಿ ಬರೆದುಕೊಳ್ಳುತ್ತಾ, ನಿಗದಿಪಡಿಸಿದ ನಿತ್ಯದ ಕಾರ್ಯಗಳನ್ನು ಪೂರ್ಣಗೊಳಿಸಿದ ಮೇಲೆ ಅವನ್ನು ಹೊಡೆದುಹಾಕುತ್ತಾ, ರೋಟರಿ ಡಯಲ್‌ ಲ್ಯಾಂಡ್‌ ಲೈನ್ ಫೋನ್‌ ಮೂಲಕ ನಿರಂತರವಾಗಿ ಫೋನ್‌ ಮಾಡುತ್ತಾ ಅವರು ಕೆಲಸ ಮಾಡುತ್ತಿದ್ದುದನ್ನು ನಾನೂ ನೋಡಿದ್ದು ನೆನಪಿದೆ.

ಅಜ್ಜನಿಗೆ ಅವರು ಸಹಜ ಒಡನಾಡಿಯಾದರು. ಪರಸ್ಪರರಿಗೆ ಅಗತ್ಯವಾಗಿದ್ದ ಗುಣಗಳು, ಭಿನ್ನ ಮನೋಧರ್ಮಗಳು ಇಬ್ಬರಲ್ಲೂ ಪೂರಕವಾಗಿ ಇದ್ದವು. ಅಜ್ಜನಲ್ಲಿ ಕೊರತೆಯಿದ್ದ, ಆದರೆ ಅವರಿಗೆ ಅಗತ್ಯವಾಗಿದ್ದ, ಅನೇಕ ಸಾಮರ್ಥ್ಯಗಳನ್ನು ವೆಂಕಟಸ್ವಾಮಿ ಹೊಂದಿದ್ದರು. ಅವರಿಬ್ಬರು ಚೆನ್ನಾಗಿ ಹೊಂದಿಕೊಂಡರು ಮತ್ತು ದೀರ್ಘಕಾಲದ, ಪರಸ್ಪರ ಫಲಪ್ರದವಾದ ವ್ಯಾಪಾರ ಸಂಬಂಧವನ್ನೂ ಬೆಳೆಸಿಕೊಂಡರು. ಅಜ್ಜನಿಗೆ ವ್ಯವಹಾರದ ನಿತ್ಯದ ಆಗುಹೋಗುಗಳಲ್ಲಿ ಅಷ್ಟಾಗಿ ಆಸಕ್ತಿಯಿರದ ಕಾರಣ ಅವರಿಗೆ ವೆಂಕಟಸ್ವಾಮಿ ಅನಿವಾರ್ಯವಾದರು. ಸರ್ಕಾರದೊಂದಿಗೆ ತಮ್ಮ ಪರವಾಗಿ ಮಾತನಾಡಲು ಮತ್ತು ಲಾಬಿ ನಡೆಸಲು ಸಹ ಅವರನ್ನೇ ಕಳಿಸುತ್ತಿದ್ದರು. ನಂತರದ ದಿನಗಳಲ್ಲಿ ವೆಂಕಟಸ್ವಾಮಿ ಅವರನ್ನು ಅಜ್ಜ ತಮ್ಮ ಸಾರಾಯಿ ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಂಡು, ಒಂದು ಪಾಲನ್ನು ಬಿಟ್ಟುಕೊಟ್ಟರು. ದಿನಗಳು ಉರುಳಿದಂತೆ ಆ ಪಾಲು ಬೆಳೆಯುತ್ತಾ ಹೋಗಿ ವೆಂಕಟಸ್ವಾಮಿ ಅವರ ಕೊನೆಗಾಲದ ವರ್ಷಗಳ ಹೊತ್ತಿಗೆ ವ್ಯವಹಾರದಲ್ಲಿ ಅಜ್ಜನಷ್ಟೇ ಸಮಾನ ಮೊತ್ತದ ಪಾಲನ್ನು ಅವರು ಹೊಂದಿದ್ದರು. ಪತ್ರಿಕಾ ಕಂಪನಿಯಲ್ಲೂ ಅವರನ್ನು ಪಾಲುದಾರರನ್ನಾಗಿ ಮಾಡಿಕೊಂಡ ಅಜ್ಜ, ಆರಂಭದಿಂದಲೇ ಅವರನ್ನೂ ಒಬ್ಬ ನಿರ್ದೇಶಕರನ್ನಾಗಿ ನೇಮಕ ಮಾಡಿ ಆಡಳಿತದಲ್ಲಿ ತೊಡಗಿಸಿಕೊಂಡರು. ವೆಂಕಟಸ್ವಾಮಿ ಅವರಿಗೂ (ಇಂದಿನ ಇಎಸ್‌ಒಪಿ ಮಾದರಿಯಂತೆ) ವ್ಯವಹಾರದಲ್ಲಿ ಪಾಲನ್ನು ನೀಡಿದ್ದು ಅಜ್ಜನ ಉದ್ಯಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು ಎನ್ನುವುದು ನನ್ನ ಊಹೆ.

ಆದರೆ, ಈ ಸಂಬಂಧ, ಕಷ್ಟನಷ್ಟವನ್ನೂ ತಂದಿತ್ತು. ಇದರಿಂದ ತಮ್ಮ ಸಹೋದರರೊಂದಿಗಿನ ಅಜ್ಜನ ಸಂಬಂಧದಲ್ಲಿ ಘರ್ಷಣೆಗಳು ಹೆಚ್ಚಾದವು. ಕೂಡು ಕುಟುಂಬವು ಒಡೆದುಹೋಯಿತು. ಕುಟುಂಬದ ಉದ್ಯಮವನ್ನು ಹಂಚಿಕೊಳ್ಳುವ ಬಗ್ಗೆ ಪರಸ್ಪರ ಆಕ್ಷೇಪಗಳು ಬಂದವು. ಅಬಕಾರಿ ಹರಾಜುಗಳಲ್ಲಿ ಸಹೋದರರೇ ಪರಸ್ಪರ ಎದುರಾಗಿ ನಿಂತು ಸವಾಲು ಕೂಗುವಂತಹ ಸನ್ನಿವೇಶ ಸೃಷ್ಟಿಯಾಯಿತು. ಕೆಲವು ವರ್ಷಗಳ ಬಳಿಕ ಸಹೋದರರ ನಡುವೆ ಸಮನ್ವಯ ಮೂಡಿದರೂ ಅವರ ಬಾಂಧವ್ಯದ ಸ್ವರೂಪ ಮತ್ತೆ ಪೂರ್ತಿಯಾಗಿ ಮುಂಚಿನ ಸ್ಥಿತಿಗೆ ಮರಳಲಿಲ್ಲ. ತುಂಬಾ ನೆಚ್ಚಿನ ಮಗನೊಂದಿಗೆ ಅಜ್ಜ ತಮ್ಮ ಸಂಬಂಧವನ್ನೇ ಕಡಿದುಕೊಳ್ಳುವ ಹಂತ ತಲುಪುವಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗಲೂ ಈ ಸಂಬಂಧ ಕಾರಣವಾಯಿತು. ಈ ಸಮಸ್ಯೆ ತಿಳಿಯಾಗಿದ್ದು ನನ್ನ ತಂದೆಯ ಸಾವಿನ ನಂತರವೇ. ಆದರೆ, ಕದಿರಮ್ಮನ ರೂಪದಲ್ಲಿ ವೆಂಕಟಸ್ವಾಮಿಯವರಿಗೆ ಸಮಾನ ಪ್ರತಿಸ್ಪರ್ಧಿಯೊಬ್ಬರು ಎದುರಾಗಿದ್ದರು. ತಮ್ಮ ಮನೆಯಲ್ಲಿ ಕಾಲಿಡದಂತೆ ಆಕೆ, ಅವರನ್ನು ನಿರ್ಬಂಧಿಸಿದ್ದರು. ವೆಂಕಟಸ್ವಾಮಿ ಅವರ ಸಾವಿನ ನಂತರ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಅವರ ಮಕ್ಕಳು ಪತ್ರಿಕಾ ಕಂಪನಿಯಲ್ಲಿ ತಾವು ಹೊಂದಿದ್ದ ಷೇರುಗಳನ್ನು ಖರೀದಿಸುವಂತೆ ನಮ್ಮನ್ನು ಕೇಳಿಕೊಂಡರು. ಸಾರಾಯಿ ಕಂಪನಿಯಲ್ಲಿ ದೀರ್ಘಕಾಲದ ಪಾಲುದಾರರಾಗಿದ್ದವರು, ‘ಅಷ್ಟೊಂದು ಸಂಪತ್ತು ಎಲ್ಲಿಗೆ ಹೋಯಿತು’ ಎಂದು ಆಶ್ಚರ್ಯಚಕಿತರಾದರು.

ಅಜ್ಜನ ವೈಯಕ್ತಿಕ, ಜಾತಿಯ ಹಾಗೂ ವ್ಯವಹಾರದ ಹಿನ್ನೆಲೆಯನ್ನು ಗಮನಿಸಿದಾಗ ನಾನಾಗಲಿ, ಅವರ ಪರಿಚಯ ಇರುವ ಹಲವರಾಗಲಿ, ಅವರೇ ಪತ್ರಿಕೆಗಳ ಸಂಸ್ಥಾಪಕರಾಗುವುದು ಅಸಂಭವ ಎಂದುಕೊಳ್ಳುವುದು ಸಹಜ. ‘ಡೆಕ್ಕನ್‌ ಹೆರಾಲ್ಡ್‌’ ಮತ್ತು ‘ಪ್ರಜಾವಾಣಿ‌’ ಪತ್ರಿಕೆಗಳನ್ನು ಅಜ್ಜ ಏಕೆ ಮತ್ತು ಹೇಗೆ ಪ್ರಾರಂಭಿಸಲು ನಿರ್ಧರಿಸಿದರು ಎಂದು ನಾನು ಅವರನ್ನು ಕೇಳುವ ಗೋಜಿಗೆ ಹೋಗಲಿಲ್ಲ. ಈ ಕುರಿತು ನನಗಾಗಲಿ ಅಥವಾ ನನಗೆ ತಿಳಿದ ಇತರ ಯಾರಿಗಾಗಲಿ ಅವರು ಕೂಡ ಏನನ್ನೂ ಹೇಳಲಿಲ್ಲ. ಕೆಲವು ವರ್ಷಗಳ ಹಿಂದೆ ಅಜ್ಜನ ಹಳೆಯ ದಾಖಲೆಗಳನ್ನೆಲ್ಲ ಪರಿಶೀಲಿಸುವಾಗ 1938ರ ಡಿಸೆಂಬರ್‌ 8ರಂದು ಅವರಿಗೆ ಬರೆಯಲಾಗಿದ್ದ ಪತ್ರವೊಂದು ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದು ಆ ಕಾಲಕ್ಕೆ ಜನಜನಿತ ವ್ಯಕ್ತಿಯಾಗಿದ್ದ, ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದ ಮತ್ತು ಆಗಿನ ಮೈಸೂರು ಸಂಸ್ಥಾನ ಹಾಗೂ ಬೆಂಗಳೂರಿನ ಪ್ರಮುಖ ಉದ್ಯಮಿಯೂ ಆಗಿದ್ದ ಬಿ.ಕೆ. ಗರುಡಾಚಾರ್‌ ಅವರು ಅಜ್ಜನಿಗೆ ಬರೆದ ಪತ್ರವಾಗಿತ್ತು. ‘ಉದ್ದೇಶಿತ ಕನ್ನಡ ಪತ್ರಿಕೆಗೆ ಸಂಬಂಧಿಸಿದಂತೆ ತಾವು ಕಳುಹಿಸಿದ 2,500 ರೂಪಾಯಿ ತಲುಪಿದ್ದನ್ನು ದೃಢೀಕರಿಸುವ ಸಲುವಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಮುಂದಿನ ತಾತ್ಕಾಲಿಕ ಸಮಿತಿ ಸಭೆಗೆ ತಾವು ಹಾಜರಿದ್ದು ಸಹಕಾರವನ್ನು ಮುಂದುವರಿಸಿದರೆ ನನಗೆ ಅತೀವ ಸಂತೋಷವಾಗುತ್ತದೆ’ ಎಂದು ಆ ಪತ್ರದಲ್ಲಿ ಅವರು ಬರೆದಿದ್ದರು.

ನನ್ನ ತಂದೆಯ ವಿರುದ್ಧದ ವೈಷಮ್ಯದಲ್ಲಿ ಸಂಪೂರ್ಣ ವಿಜಯ ಘೋಷಿಸುವುದಕ್ಕಾಗಿ ವೆಂಕಟಸ್ವಾಮಿ ಅವರು 1975ರಲ್ಲಿ ‘ದಿ ಸ್ಟೋರಿ ಆಫ್‌ ಡೆಕ್ಕನ್‌ ಹೆರಾಲ್ಡ್‌’ ಎಂಬ ಸ್ವಯಂ ಉತ್ಪ್ರೇಕ್ಷಿತ ವಿವರಗಳ ಕಿರುಹೊತ್ತಿಗೆಯೊಂದನ್ನು ಹೊರತಂದಿದ್ದರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಆರ್ಕಾಟ್‌ ರಾಮಸ್ವಾಮಿ ಮೊದಲಿಯಾರ್‌ ಅವರ ಸಲಹೆಯಂತೆ 1948ರಲ್ಲಿ ಪತ್ರಿಕೆ ಶುರುವಾಗಲು ತಾವೇ ಕಾರಣ ಎಂದೂ ಅವರು ಬರೆದುಕೊಂಡಿದ್ದರು. ‘ನನ್ನ ಬಾಲ್ಯದ ಗೆಳೆಯ ಮತ್ತು ಉದ್ಯಮದ ಪಾಲುದಾರ ಕೆ.ಎನ್‌. ಗುರುಸ್ವಾಮಿ ಬಳಿ ಹೋಗಿ 50:50 ಪಾಲುದಾರಿಕೆಯಲ್ಲಿ ಪತ್ರಿಕೆ ಆರಂಭಿಸುವ ಪ್ರಸ್ತಾಪ ಮಾಡಿದೆ’ ಎಂಬುದಾಗಿಯೂ ಆ ಕೃತಿಯಲ್ಲಿ ಹೇಳಿಕೊಂಡಿದ್ದರು. ಅವರ ಪ್ರಕಾರ, ‘ಮಾತೃಭೂಮಿ’ ಎಂಬ ಕನ್ನಡ ಪತ್ರಿಕೆಯನ್ನು ಪ್ರಕಟಿಸಲು ಹೋಗಿ ಸಾಕಷ್ಟು ಹಣ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದ ಅಜ್ಜ, ‘ನೀನು, ನನಗಾಗಿಯಷ್ಟೇ ಈ ಪತ್ರಿಕೆಯನ್ನು ಶುರು ಮಾಡಬೇಕು’ ಎಂದೂ ಮನವಿ ಮಾಡಿದ್ದರಂತೆ. ಹೀಗಾಗಿ ನನ್ನಜ್ಜನ ಮನವಿಯನ್ನು ತಾವು ಪುರಸ್ಕರಿಸಿದ್ದಾಗಿಯೂ ಅವರು ಬರೆದಿದ್ದಾರೆ.

ಪತ್ರಿಕೆ ಆರಂಭಿಸುವ ಸಂಬಂಧ ಹಣ ಸ್ವೀಕರಿಸಿದ್ದಕ್ಕೆ1938ರಲ್ಲಿ ಬಿ.ಕೆ. ಗರುಡಾಚಾರ್‌ ಅವರು ಬರೆದ ಪತ್ರ
ಪತ್ರಿಕೆ ಆರಂಭಿಸುವ ಸಂಬಂಧ ಹಣ ಸ್ವೀಕರಿಸಿದ್ದಕ್ಕೆ
1938ರಲ್ಲಿ ಬಿ.ಕೆ. ಗರುಡಾಚಾರ್‌ ಅವರು ಬರೆದ ಪತ್ರ

‘ಡೆಕ್ಕನ್‌ ಹೆರಾಲ್ಡ್‌’ನ ಮೊದಲ ಸುದ್ದಿ ಸಂಪಾದಕ, ಬೆಂಗಳೂರಿನವರೇ ಆಗಿದ್ದ ಇ.ವಿ. ಸ್ಕಾಟ್‌, 1996ರಲ್ಲಿ ‘ಡೆಕ್ಕನ್‌ ಹೆರಾಲ್ಡ್‌– ದಿ ಫಸ್ಟ್‌ ಫೈವ್‌ ಇಯರ್ಸ್’ ಎಂಬ ಕೃತಿಯಲ್ಲಿ ತಮ್ಮ ನೆನಪುಗಳನ್ನು ದಾಖಲಿಸಿದ್ದಾರೆ. ‘ಸಿಜಿಕೆ ರೆಡ್ಡಿ ಅವರಿಲ್ಲದಿದ್ದರೆ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಎಂದಿಗೂ ಪ್ರಕಾಶನದ ಭಾಗ್ಯವನ್ನೇ ಕಾಣುತ್ತಿರಲಿಲ್ಲ.

ಎಲ್ಲ ನಿರ್ದೇಶಕರ ಹಿಂದಿನ ಪ್ರೇರಕಶಕ್ತಿಯಾಗಿದ್ದ ಕೆ.ಎನ್‌. ಗುರುಸ್ವಾಮಿ ಅವರಿಗೆ ಇಂಗ್ಲಿಷ್‌ ಪತ್ರಿಕೆಯೂ ಯಶಸ್ವಿಯಾಗಬಹುದೆಂದು ಮನವರಿಕೆ ಮಾಡಿಕೊಡುವಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ, ನನ್ನ ನಂಬಿಕಸ್ಥರಾಗಿ ರೆಡ್ಡಿ ಅವರು ತುಂಬಾ ನಿರ್ಣಾಯಕ ಪಾತ್ರ ವಹಿಸಿದರು’ ಎಂದು ಅವರು ಸ್ಮರಿಸಿದ್ದರು. ‘ಇಂಡಿಯನ್‌ ಎಕ್ಸ್‌ಪ್ರೆಸ್‌ನ ಮಾಲೀಕರಾದ ರಾಮನಾಥ್‌ ಗೋಯಂಕಾ ಅವರ ವಿಷಯವಾಗಿ ‘ಅವರು’ (ಮುಂದೆ ಡೆಕ್ಕನ್ ಹೆರಾಲ್ಡ್ ಸಂಪಾದಕರಾಗಿ ನೇಮಕಗೊಂಡ ಪೋಥನ್‌ ಜೋಸೆಫ್‌) ಅತೃಪ್ತಿಯನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ಸಿಜಿಕೆಗೆ ಗೊತ್ತಿದ್ದರಿಂದ ಅವರಿಗೆ ಸೂಚನೆ ಕಳಿಸಲಾಯಿತು… ಇದರಿಂದಾಗಿ ಪೋಥನ್ ಜೋಸೆಫ್ ಅವರನ್ನು ಡೆಕ್ಕನ್ ಹೆರಾಲ್ಡ್ ಸಂಪಾದಕರಾಗಲು ಒಪ್ಪಿಸುವುದಕ್ಕಾಗಿ ಹೆಚ್ಚಿನ ಮನವೊಲಿಕೆ ಮಾಡಬೇಕಾದ ಅಗತ್ಯ ಸಿಜಿಕೆ ಅವರಿಗೆ ಬರಲಿಲ್ಲ’ ಎಂದೂ ಸ್ಕಾಟ್‌ ಬರೆದಿದ್ದರು. ರಾಮಸ್ವಾಮಿ ಮೊದಲಿಯಾರ್‌ ಕುರಿತು ಸ್ಕಾಟ್ ಅವರು ಅಪ್ಪಿತಪ್ಪಿಯೂ ಉಲ್ಲೇಖ ಮಾಡಿರಲಿಲ್ಲ.

ವೆಂಕಟಸ್ವಾಮಿ ಅವರ ಕಿರುಹೊತ್ತಿಗೆಗೆ ಮುನ್ನುಡಿಯನ್ನು ಬರೆದಿದ್ದ ನಿವೃತ್ತ ಐಸಿಎಸ್‌ ಅಧಿಕಾರಿ ಒ.ಪುಲ್ಲರೆಡ್ಡಿ, ವೆಂಕಟಸ್ವಾಮಿ ಮತ್ತು ನನ್ನಜ್ಜನ ಜೊತೆಗಿನ ದಶಕಗಳ ತಮ್ಮ ಸುದೀರ್ಘ ಸ್ನೇಹಸಂಬಂಧವನ್ನು ಮೆಲುಕು ಹಾಕಿದ್ದರು. ‘ನಾನು ಹಿಂದಿನ ಮೈಸೂರು ಸರ್ಕಾರದಲ್ಲಿ 1944–46ರ ಅವಧಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾಗ ರಾಜ್ಯದ ಸಾರ್ವಜನಿಕ ಜೀವನದಲ್ಲಿ ಒಂದು ಮಹತ್ವದ ಕೊರತೆಯನ್ನು ಗಮನಿಸಿದ್ದೆ. ಹೀಗಾಗಿ ಬೆಂಗಳೂರಿನಲ್ಲಿ ಒಂದು ಶ್ರೇಷ್ಠ ಇಂಗ್ಲಿಷ್‌ ಪತ್ರಿಕೆಯನ್ನು ಆರಂಭಿಸುವಂತೆ ನನ್ನ ಸ್ನೇಹಿತರಿಗೆ ಹೇಳಿದ್ದೆ. ಆದರೆ, ತಮಗೆ ಸಂಪೂರ್ಣ ಅಪರಿಚಿತವಾಗಿದ್ದ ಕ್ಷೇತ್ರಕ್ಕೆ ಧುಮುಕಲು ನನ್ನ ಇಬ್ಬರೂ ಸ್ನೇಹಿತರು ಹೆದರುತ್ತಿದ್ದರು. ಕೊನೆಗೆ ಪತ್ರಿಕೆ ಆರಂಭಿಸುವ ಪರಿಕಲ್ಪನೆ ಸರ್‌ ಎ.ಆರ್‌. ಮೊದಲಿಯಾರ್‌ ಅವರ ಕ್ರಿಯಾಶೀಲ ಮಾರ್ಗದರ್ಶನದಲ್ಲಿ ಸ್ಪಷ್ಟರೂಪವನ್ನು ಪಡೆದುಕೊಂಡಿತು’ ಎಂದು ಬರೆದಿದ್ದರು. ಈ ಭಿನ್ನ ಪ್ರತಿಪಾದನೆಗಳು ‘ಯಶಸ್ಸಿಗೆ ಹಲವು ಅಪ್ಪಂದಿರು, ಸೋಲು ಅನಾಥ’ ಎಂಬ ಗಾದೆಯನ್ನು ನನಗೆ ನೆನಪಿಸುತ್ತವೆ.

ವೆಂಕಟಸ್ವಾಮಿ ಅವರ ಕಿರುಹೊತ್ತಿಗೆಗೆ ಅಜ್ಜನ ಮುನ್ನುಡಿಯೂ ಇದೆ. ‘ನಾನು ಇಲ್ಲಿನ ವಿವರಗಳನ್ನು ಗಮನವಿಟ್ಟು ಓದಿದ್ದೇನೆ. ಈ ಕಿರುಹೊತ್ತಿಗೆಯು ಆಸಕ್ತಿದಾಯಕವಾಗಿದೆ’ ಎಂದು ಅವರು ಬರೆದಿದ್ದಾರೆ. ವೆಂಕಟಸ್ವಾಮಿ ಮತ್ತು ತಾವು ‘ಜೀವಮಾನದ ಗೆಳೆಯರು’ ಎಂದೂ ಅಜ್ಜ ಹೇಳಿದ್ದಾರೆ. ಮುಂದುವರಿದು, ‘ಬೆಂಗಳೂರಿನಲ್ಲಿ ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸುವ ಆಲೋಚನೆಯು ಹರಳುಗಟ್ಟಿದಾಗ, ಅದನ್ನು ಹೇಗೆ ರೂಪಿಸಬೇಕು ಮತ್ತು ಪರಿಣಾಮಕಾರಿಯಾಗಿ ನಡೆಸಬೇಕು ಎಂಬುದನ್ನು ಆತ ಮತ್ತು ನಾನು ಕೂಡಿ ನಿರ್ಧರಿಸಿದೆವು’ ಎಂದು ವಿವರಿಸಿದ್ದಾರೆ. ಮತ್ತೂ ಮುಂದುವರಿದು, ‘ಪತ್ರಿಕೆಗಳು ಆರ್ಥಿಕ ಸಂಕಷ್ಟ ಹಾಗೂ ಇತರ ಸಮಸ್ಯೆಗಳನ್ನು ಎದುರಿಸಿದ್ದ 1950ರ ಸೆಪ್ಟೆಂಬರ್‌ನ ಆ ಕರಾಳ ದಿನಗಳಿಂದಲೂ ಶ್ರೀ ವೆಂಕಟಸ್ವಾಮಿ, ನಿರ್ದೇಶಕನ ಹುದ್ದೆ ಹಾಗೂ ನಿರ್ವಹಣೆಯ ಹೊಣೆ ಹೊತ್ತು ಸಂಸ್ಥೆಯೊಂದಿಗೆ ಕ್ರಿಯಾಶೀಲವಾಗಿ ತೊಡಗಿಕೊಳ್ಳಲು ಸಿದ್ಧವಾಗಿ ನಿಂತಿದ್ದನ್ನು ಕೃತಜ್ಞತೆಯಿಂದ ಸ್ಮರಿಸುವೆ’ ಎಂದೂ ಬರೆದಿದ್ದಾರೆ. ‘ಡೆಕ್ಕನ್‌ ಹೆರಾಲ್ಡ್‌’ನ ಸಂಸ್ಥಾಪನೆಯಿಂದ ಹಿಡಿದು 1975ರವರೆಗೆ ಅದರ ಕ್ರಿಯಾತ್ಮಕ ಶಕ್ತಿ ತಾವೇ ಎಂದು ವೆಂಕಟಸ್ವಾಮಿಯವರು ಬಿಂಬಿಸಿಕೊಂಡಿದ್ದನ್ನು, ಅದೊಂದು ಜಂಟಿ ನಿರ್ಧಾರ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ, ಅಜ್ಜ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಈ ಹೊತ್ತಿಗೆಗೆ ಮುನ್ನುಡಿಗಳನ್ನು ಬರೆದ ಇತರ ಐವರು ವೆಂಕಟಸ್ವಾಮಿಯವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರೆ, ಅಜ್ಜ ಮಾತ್ರ ಅವರನ್ನು ಅನುಸರಿಸಲು ಹೋಗಿಲ್ಲ.

ಹೌದು, ಎ.ರಾಮಸ್ವಾಮಿ ಮೊದಲಿಯಾರ್‌ ಅವರ ಉಲ್ಲೇಖವನ್ನು ಅಜ್ಜ ಎಲ್ಲಿಯೂ ಮಾಡುವುದಿಲ್ಲ. ದುರದೃಷ್ಟವಶಾತ್‌, ಪತ್ರಿಕೆ ಆರಂಭಿಸುವ ಯೋಚನೆ ಹೇಗೆ ಹರಳುಗಟ್ಟಿತು ಎಂಬುದನ್ನು ವಿವರಿಸುವ ಗೋಜಿಗೂ ಅವರು ಹೋಗಿಲ್ಲ. ಅದು ಸರಿಯಾದ ಸಂದರ್ಭ ಅಲ್ಲ ಎನ್ನುವುದು ಇದಕ್ಕೆ ಕಾರಣವಾಗಿರಬಹುದು.

ಅಲ್ಲಿ ಇನ್ನೂ ಹಲವು ಮೌನಗಳು ಇವೆ. ಕಿರುಹೊತ್ತಿಗೆಗೆ ಮುನ್ನುಡಿ ಬರೆದ ಎ. ರಾಮಸ್ವಾಮಿ ಮೊದಲಿಯಾರ್‌ ಮತ್ತು ಬಿ.ವಿ. ನಾರಾಯಣ ರೆಡ್ಡಿ ಇಬ್ಬರೂ ವೆಂಕಟಸ್ವಾಮಿ ಅವರ ನಿರೂಪಣೆಯನ್ನೇ ಅನುಮೋದಿಸಿದ್ದಾರೆ.

1967ರ ಏಪ್ರಿಲ್‌ 22ರ ಶನಿವಾರದಂದು, ಆರ್ಯ ಈಡಿಗರ ಸಂಘದಿಂದ ವೆಂಕಟಸ್ವಾಮಿ ಹಾಗೂ ಅಜ್ಜನನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವೆಂಕಟಸ್ವಾಮಿ ಅವರು, ‘ಡೆಕ್ಕನ್‌ ಹೆರಾಲ್ಡ್ ಪತ್ರಿಕೆ ಶುರುಮಾಡುವಲ್ಲಿ ನಿರ್ಣಾಯಕ ನೆರವು ನೀಡಿದ್ದಕ್ಕಾಗಿ’ ರಾಮಸ್ವಾಮಿ ಮೊದಲಿಯಾರ್‌ ಅವರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದರು. ರಾಮಸ್ವಾಮಿ ಹಾಗೂ ರೆಡ್ಡಿ ಅವರ ಭಾಷಣಗಳೂ ‘ಡೆಕ್ಕನ್‌ ಹೆರಾಲ್ಡ್‌’ ಮತ್ತು ‘ಪ್ರಜಾವಾಣಿ‌’ಯಲ್ಲಿ ವರದಿಯಾಗಿವೆ. ಆದರೆ, ವೆಂಕಟಸ್ವಾಮಿ ಅವರ ಮಾತಿಗೆ ಇವರಿಬ್ಬರಿಂದ ಯಾವುದೇ ಪ್ರತಿಕ್ರಿಯೆ ಅದರಲ್ಲಿಲ್ಲ.

ಹಲವು ಪ್ರಶ್ನೆಗಳಿಗೆ ಮೌನವೇ ಉತ್ತರ

ವಾಸ್ತವವಾಗಿ ರಾಮಸ್ವಾಮಿ ಮೊದಲಿಯಾರ್‌ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ನಡುವಿನ ಸಂಬಂಧದ ಕುರಿತು ಪತ್ರಿಕಾ ವರದಿಗಳೂ ಮೌನ ವಹಿಸಿವೆ. 1972ರ ನವೆಂಬರ್‌ 3ರಂದು, ಶುಕ್ರವಾರ, ಪೋಥನ್‌ ಜೋಸೆಫ್‌ ಅವರು ತೀರಿಕೊಂಡಾಗ ‘ಡೆಕ್ಕನ್‌ ಹೆರಾಲ್ಡ್‌’ ವರದಿಯಲ್ಲಿ ಹೀಗೆ ಬರೆಯಲಾಗಿದೆ: ‘ಸ್ವಾತಂತ್ರ್ಯದ ನಂತರ ಜೋಸೆಫ್‌ ಅವರಿಗೆ ‘ಡೆಕ್ಕನ್‌ ಹೆರಾಲ್ಡ್‌’ನ ಸಂಪಾದಕತ್ವವನ್ನು ವಹಿಸಿಕೊಡಲಾಯಿತು. ಆ ಕೆಲಸವನ್ನು ಅವರು ಉತ್ಸಾಹದಿಂದ ಕೈಗೆತ್ತಿಕೊಂಡರು’.

ಡೆಕ್ಕನ್‌ ಹೆರಾಲ್ಡ್‌ನ ಮೊದಲ ಸಂಪಾದಕ ಪೋಥನ್‌ ಜೋಸೆಫ್‌ಅವರೊಂದಿಗೆ ಕೆ.ಎನ್‌. ಗುರುಸ್ವಾಮಿ
ಡೆಕ್ಕನ್‌ ಹೆರಾಲ್ಡ್‌ನ ಮೊದಲ ಸಂಪಾದಕ ಪೋಥನ್‌ ಜೋಸೆಫ್‌
ಅವರೊಂದಿಗೆ ಕೆ.ಎನ್‌. ಗುರುಸ್ವಾಮಿ

ಟಿಜೆಎಸ್‌ ಜಾರ್ಜ್‌ ಅವರು 1992ರಲ್ಲಿ ಬರೆದಿರುವ ಪೋಥನ್‌ ಜೋಸೆಫ್‌ ಅವರ ಜೀವನಚರಿತ್ರೆಯಲ್ಲಿ ಪೋಥನ್‌ ಅವರ ಮಾತುಗಳು, ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರಿಗೆ ಅವರು ಬರೆದ ಪತ್ರಗಳು ಮತ್ತು ಬರಹಗಳನ್ನು ಹೇರಳವಾಗಿ ಉಲ್ಲೇಖಿಸಿದ್ದಾರೆ. ಆದರೆ, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಹೇಗೆ ಸ್ಥಾಪನೆಯಾಯಿತು ಇಲ್ಲವೆ ಪತ್ರಿಕೆಗೆ ಪೋಥನ್‌ ಹೇಗೆ ಬಂದರು ಎಂಬ ವಿಷಯವಾಗಿ ಪೋಥನ್ ಅವರ ಒಂದೇ ಒಂದು ಹೇಳಿಕೆಯನ್ನೂ ಉಲ್ಲೇಖಿಸಿಲ್ಲ. ಈ ವಿಷಯದಲ್ಲಿ ಜಾರ್ಜ್‌ ಅವರು ಯಾರನ್ನೂ ಉಲ್ಲೇಖಿಸದೆ ಕೊಡುವ ವಿವರವೂ ವೆಂಕಟಸ್ವಾಮಿ ಅವರ ನಿರೂಪಣೆಯನ್ನೇ ಹೋಲುತ್ತದೆ.

ಮೈಸೂರು ರಾಜ್ಯದ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದ ಟಿ. ಸಿದ್ದಲಿಂಗಯ್ಯ ಅವರ ಸಂದೇಶದ ಪ್ರತಿಯನ್ನು 1948ರ ಜೂನ್‌ 17ರಂದು ಪ್ರಕಟವಾದ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯ ಮೊತ್ತಮೊದಲ ಸಂಚಿಕೆಯ ಮುಖಪುಟದ ಮೇಲ್ಭಾಗದಲ್ಲೇ ಯಥಾವತ್ತಾಗಿ ಪ್ರಕಟಿಸಲಾಗಿದೆ. ಪತ್ರಿಕೆಯ ಬಿಡುಗಡೆ ಸಮಾರಂಭದ ವರದಿಯನ್ನು ಅದೇ ಸಂಚಿಕೆಯ ಐದನೇ ಪುಟದ ಮೇಲ್ಭಾಗದಲ್ಲಿ ಹಾಕಲಾಗಿದೆ. ಮೈಸೂರು ಸಂಸ್ಥಾನದ ದಿವಾನರು ಸೇರಿದಂತೆ ಹಲವು ಗಣ್ಯರು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ, ನಿರ್ದೇಶಕರ ಪರವಾಗಿ ಮಾತನಾಡಿದ ವೆಂಕಟಸ್ವಾಮಿ ಅವರ ಭಾಷಣದಲ್ಲಾಗಲಿ (ಅದು ತುಂಬಾ ದೀರ್ಘವಾಗಿ ವರದಿಯಾಗಿದೆ), “Ourselves” ಎಂಬ ಅಂದಿನ ಸಂಪಾದಕೀಯದಲ್ಲಾಗಲಿ, ಪೋಥನ್‌ ಜೋಸೆಫ್‌ ಅವರ “Over a cup of tea” ಅಂಕಣದಲ್ಲಾಗಲಿ ಅಥವಾ ಪತ್ರಿಕೆ ಬಿಡುಗಡೆಗೆ ಸಂಬಂಧಿಸಿದ ಬೇರೆ ಎಲ್ಲಿಯೇ ಆಗಲಿ ಎ.ರಾಮಸ್ವಾಮಿ ಮೊದಲಿಯಾರ್‌ ಅವರ ಹೆಸರು ಪ್ರಸ್ತಾಪವಾಗಿಲ್ಲ.

ಅಂತಿಮವಾಗಿ, ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು ಬ್ರಾಹ್ಮಣೇತರ ಜಸ್ಟಿಸ್ ಪಾರ್ಟಿಯ ಪ್ರಮುಖ ನಾಯಕರಾಗಿದ್ದರು. ಆ ಪಕ್ಷವು ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯ ತಮಿಳು ಮಾತನಾಡುವ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಅನುಯಾಯಿಗಳನ್ನು ಹೊಂದಿತ್ತು. ಏಕೀಕೃತ, ಸ್ವತಂತ್ರ ಭಾರತದಲ್ಲಿ ಸಂಭಾವ್ಯ ಬ್ರಾಹ್ಮಣ ಪ್ರಾಬಲ್ಯಕ್ಕೆ ಹೆದರಿ, ಬ್ರಿಟಿಷ್‌ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ (ದಕ್ಷಿಣ ಭಾರತದ ದ್ರಾವಿಡ ಭಾಷೆಗಳನ್ನು ಮಾತನಾಡುವ ಪ್ರದೇಶಗಳನ್ನು ಒಳಗೊಂಡ) ಪ್ರತ್ಯೇಕ ಹಾಗೂ ಸಾರ್ವಭೌಮ ‘ದ್ರಾವಿಡ ನಾಡು’ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡುತ್ತಿದ್ದ ಪಕ್ಷ ಅದಾಗಿತ್ತು. ಸ್ವಾತಂತ್ರ್ಯದ ಆ ಕಾಲಘಟ್ಟದಲ್ಲಿ ರಾಮಸ್ವಾಮಿ ಮೊದಲಿಯಾರ್ ಅವರು ಮೈಸೂರು ಮಹಾರಾಜರಿಗೆ ಭಾರತೀಯ ಒಕ್ಕೂಟವನ್ನು ಸೇರಿಕೊಳ್ಳದಂತೆ ಸಲಹೆ ನೀಡಿದ್ದರು ಎಂದು ಬಹುವಾಗಿ ನಂಬಲಾಗಿದೆ. ಅದು ನಿಜವಾಗಿದ್ದರೆ, ಅವರ ಆ ಸಲಹೆ, ಅವರ ಬದ್ಧತೆಗೆ ಅನುಗುಣವಾಗಿಯೇ ಇದೆ. ಆದರೆ, ಬ್ರಾಹ್ಮಣೇತರ ಹಾಗೂ ದ್ರಾವಿಡ ಭಾಷೆ ಮಾತನಾಡುವ ವ್ಯಕ್ತಿಯಾಗಿದ್ದೂ ಮೈಸೂರು ರಾಜ್ಯದ ಬಹುತೇಕರಂತೆ ಅವರು ರಾಜಕೀಯ ಸಿದ್ಧಾಂತ ಹಾಗೂ ಕಾರ್ಯಸೂಚಿಯನ್ನು ಹೊಂದಿರದ ವ್ಯಕ್ತಿಗೆ ಇಂಗ್ಲಿಷ್ ದಿನಪತ್ರಿಕೆ ಆರಂಭಿಸುವಂತೆ ಸಲಹೆ ನೀಡುವಲ್ಲಿ ಅವರಿಗಿದ್ದ ಹಿತಾಸಕ್ತಿಯಾದರೂ ಏನೆಂಬುದು ಸ್ಪಷ್ಟವಿಲ್ಲ. ವಾಸ್ತವವಾಗಿ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕಾಲಘಟ್ಟದ ಬ್ರಾಹ್ಮಣೇತರ ಮತ್ತು ಹಿಂದುಳಿದ ವರ್ಗಗಳ ರಾಜಕೀಯದ ಕುರಿತು ವೆಂಕಟಸ್ವಾಮಿ ಹಾಗೂ ನನ್ನಜ್ಜ ಹೊಂದಿದ್ದ ಉದಾಸೀನತೆ ಹಾಗೂ ಏಕೀಕೃತ ಭಾರತ ದೇಶ ಮತ್ತು ಸರ್ಕಾರದ ಬಗೆಗೆ ಹೊಂದಿದ್ದ ಬದ್ಧತೆಯನ್ನು ಪರಿಗಣಿಸಿದಲ್ಲಿ, ಸಾರ್ವಜನಿಕ ಒಳಿತು ಹಾಗೂ ಸೇವೆಯ ಕುರಿತಾಗಿ ರಾಮಸ್ವಾಮಿ ಮೊದಲಿಯಾರ್‌ ಅವರ ಸಿದ್ಧಾಂತಕ್ಕೂ ವೆಂಕಟಸ್ವಾಮಿ ಮತ್ತು ನನ್ನಜ್ಜನ ಯೋಚನೆಗಳಿಗೂ ಸಂಪೂರ್ಣ ವೈರುಧ್ಯವಿತ್ತು.

ಪೋಥನ್‌ ಜೋಸೆಫ್‌ ಹೇಗೆ ಸಿಕ್ಕರು?

ಮತ್ತೊಂದು ಕುತೂಹಲದ ಪ್ರಶ್ನೆ: ಆಗಿನ ಕಾಲದಲ್ಲಿ ಹೆಚ್ಚೆಂದರೆ ಪುಟ್ಟ ಹಾಗೂ ಹಿಂದುಳಿದ ಪಟ್ಟಣವಾಗಿದ್ದ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಅಜ್ಜನಿಗೆ, ಬಾಂಬೆ, ದೆಹಲಿ, ಕರಾಚಿ, ಮದ್ರಾಸ್‌ ಮೊದಲಾದ ಕಡೆಗಳ ದೊಡ್ಡ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿ, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಪೋಥನ್‌ ಜೋಸೆಫ್‌ ಅವರಂತಹ ಪತ್ರಕರ್ತರನ್ನು ಸಂಪಾದಕರನ್ನಾಗಿ ಕರೆತರಲು ಹೇಗೆ ಸಾಧ್ಯವಾಯಿತು? ಆ ಸಮಯದಲ್ಲಿ, ಮದ್ರಾಸಿನಲ್ಲಿ ಪತ್ರಿಕೋದ್ಯಮದ ಅವಕಾಶಗಳನ್ನು ಅನ್ವೇಷಿಸುತ್ತಿದ್ದ ತಮ್ಮ ಸ್ನೇಹಿತ ಪೋಥನ್‌ ಜೋಸೆಫ್‌ ಅವರಿಗೆ, ಹೊಸ ಹುದ್ದೆಯನ್ನು ದೊರಕಿಸಿ ಕೊಡುವ ಸಲುವಾಗಿ ರಾಮಸ್ವಾಮಿ ಮೊದಲಿಯಾರ್ ಅವರು, ಜೋಸೆಫ್‌ ಅವರ ಹೆಸರನ್ನು ಸೂಚಿಸಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅನ್ನಿಸುತ್ತದೆ. ಆ ಮೊದಲು ಪತ್ರಿಕಾ ಯೋಜನೆಯಲ್ಲಿ ವೈಫಲ್ಯದ ಕಹಿ ಉಂಡಿದ್ದ ಅಜ್ಜ, ಪ್ರಸಿದ್ಧ ಸಂಪಾದಕರನ್ನು ಹೊಂದುವ ಅವಕಾಶವನ್ನು ಬಿಟ್ಟುಕೊಡಲಿಲ್ಲ ಎನ್ನುವುದನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ.

ಇದೆಲ್ಲವೂ ದಶಕಗಳ ಬಳಿಕ ಬೇರೆ, ಬೇರೆ ವ್ಯಕ್ತಿಗಳು ತಮ್ಮದೇ ಕಾರ್ಯಸೂಚಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ನೀಡಿರುವಂತಹ ತಾಳೆಯೇ ಆಗದ ಹೇಳಿಕೆಗಳು ಹಾಗೂ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ನಡೆಸಿದ ವಿಶ್ಲೇಷಣೆಗಳಿಂದ ಘಟನಾವಳಿಗಳು ಹೀಗೆ ನಡೆದಿರಬಹುದು ಎಂದು ನಾನು ಮಾಡಿದ ಊಹೆಯಷ್ಟೆ. ನಿರ್ದಿಷ್ಟವಾಗಿ ಪತ್ರಿಕೆ ಆರಂಭವಾದ ಅವಧಿಯಲ್ಲಿನ ವ್ಯಕ್ತಿಗಳು ಅಥವಾ ಅವರ ಸಹವರ್ತಿಗಳ ಬೇರೆ ಇನ್ಯಾವುದಾದರೂ ಸಂಬಂಧಿಸಿದ ಖಾಸಗಿ ಅಥವಾ ಸಾರ್ವಜನಿಕ ದಾಖಲೆ ಬೆಳಕಿಗೆ ಬರುವವರೆಗೂ ಬಹುಶಃ ಇದಷ್ಟೇ ಹೇಳಲಿಕ್ಕಾಗುವುದು. ವೃತ್ತಿಯ ಉತ್ತುಂಗದಲ್ಲಿದ್ದ ಪೋಥನ್‌ ಜೋಸೆಫ್‌, ಅದು ಯಾವುದೇ ಕಾರಣಕ್ಕಾಗಿ, ಹೆಚ್ಚೆಂದರೆ ಅನಿಶ್ಚಿತ ಭವಿಷ್ಯವಿದ್ದ ಹೊಸ ಪತ್ರಿಕೆಯ ಸಂಪಾದಕರಾಗಿ ಬಂದಿದ್ದರೂ, ಆ ಹುದ್ದೆಯಲ್ಲಿ ಒಂದು ದಶಕದವರೆಗೆ ಅವರು ಮುಂದುವರಿದಿದ್ದು ಹೊಸ ಉದ್ಯಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದಲ್ಲದೆ, ಹೊಸ ಪತ್ರಿಕೆಯನ್ನು ಶುರು ಮಾಡಿದ ಸಮಯ ಕೂಡ ಯಶಸ್ಸಿಗೆ ಅನುಕೂಲಕರವಾಗಿಯೇ ಇತ್ತು. ಇಂತಹ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ಉಳಿಸಿಕೊಳ್ಳಲು ಅಜ್ಜನಿಗೆ ಬೇಕಾದ ಸಂಪನ್ಮೂಲ, ಆಸಕ್ತಿ ಮತ್ತು ಬದ್ಧತೆ ಎಲ್ಲವೂ ಇದ್ದವು. ಅಜ್ಜನ ವ್ಯವಸ್ಥಾಪಕರ ಪ್ರಕಾರ, ಎರಡನೇ ಜಾಗತಿಕ ಸಮರದ ಸಮಯದಲ್ಲಿ, ಕಳ್ಳು ವ್ಯವಹಾರದಲ್ಲಿ ಅವರು ಅಭೂತಪೂರ್ವ ಲಾಭವನ್ನು ಗಳಿಸಿದ್ದರು. ಇದರಿಂದ ಕಂಪನಿಯ ಬಹಳಷ್ಟು ಷೇರುಗಳನ್ನು ಹೊಂದಲು ಮತ್ತು ಅದರ ಮೇಲೆ ನಿಯಂತ್ರಣ ಸಾಧಿಸಲು ಅವರಿಗೆ ಸಾಧ್ಯವಾಯಿತು. ಸ್ವಾತಂತ್ರ್ಯವು ಆಗಷ್ಟೇ ಉದಯಿಸಿತ್ತು ಮತ್ತು ದೇಶ ನಿಧಾನವಾಗಿ ಪ್ರಜಾಪ್ರಭುತ್ವದ ಹಾದಿಯನ್ನು ಹಿಡಿದಿತ್ತು. ಆಗ ಶುರುವಾದ ಈ ಪತ್ರಿಕಾ ಕಂಪನಿಯು ಬೆಂಗಳೂರಿನ, ಮೈಸೂರು ರಾಜ್ಯದ, ಬಳಿಕ ಏಕೀಕೃತ ಕರ್ನಾಟಕದ ಮೊತ್ತಮೊದಲ ಪೂರ್ಣಪ್ರಮಾಣದ ಇಂಗ್ಲಿಷ್‌ ಪತ್ರಿಕೋದ್ಯಮ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಯಿತು. ಜಾಗತೀಕರಣದ ಜಗತ್ತಿನಲ್ಲಿ, ದೇಶದ ಮೆಟ್ರೊಪಾಲಿಟನ್‌ ನಗರಗಳಲ್ಲಿ ಒಂದಾಗುವ ಹಾದಿಯನ್ನು ಆಗಷ್ಟೇ ಹಿಡಿದಿದ್ದ ಬೆಂಗಳೂರು, ದೇಶದ ಐ.ಟಿ ಮತ್ತು ಆವಿಷ್ಕಾರಗಳ ರಾಜಧಾನಿ ಎನಿಸಿಕೊಳ್ಳುವ ರೂಪಾಂತರಕ್ಕೆ ನಿಧಾನವಾಗಿ ಸಜ್ಜಾಗಲು ಆರಂಭಿಸಿತ್ತು.

ಸವಾಲಿನ ದಿನಗಳಿಗೆ ಎದೆಗೊಟ್ಟ ಅಜ್ಜ

‘ಡೆಕ್ಕನ್‌ ಹೆರಾಲ್ಡ್‌’ ಮತ್ತು ಅದೇ ವರ್ಷ (1948) ಅಕ್ಟೋಬರ್ 15ರಂದು ಆರಂಭವಾದ ‘ಪ್ರಜಾವಾಣಿ‌’ ಪತ್ರಿಕೆಗಳ ಪ್ರಸರಣ ಸಂಖ್ಯೆ ನಿಧಾನವಾಗಿ ಬೆಳೆಯುತ್ತಿದ್ದರೂ ಸಂಸ್ಥೆಯ ಪಾಲಿಗೆ ಆರಂಭಿಕ ವರ್ಷಗಳು ಆರ್ಥಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸವಾಲಿನ ದಿನಗಳೇ ಆಗಿದ್ದವು. ಅಜ್ಜನ ಪಾಲಿಗೆ ಇದೊಂದು ಹೊಸ ಉದ್ಯಮವಾಗಿದ್ದುದೂ ಇದಕ್ಕೆ ಒಂದು ಕಾರಣವಾಗಿತ್ತು. ಮಹಾತ್ಮ ಗಾಂಧಿ ರಸ್ತೆಯಲ್ಲಿನ ತಮ್ಮ ವೈಯಕ್ತಿಕ ಆಸ್ತಿಯನ್ನೇ ಕಂಪನಿಗಾಗಿ ಹೆಸರಿಗೆ ಮಾತ್ರ ಬಾಡಿಗೆಗೆ ಕೊಟ್ಟರು. ಕೆಲವು ವರ್ಷಗಳವರೆಗೆ ಬಡ್ಡಿರಹಿತ ಸಾಲವನ್ನೂ ಈ ಕಂಪನಿಗೆ ಒದಗಿಸಿದರು. ಒಂದು ಹಂತದಲ್ಲಿ ವೆಂಕಟಸ್ವಾಮಿಯವರೂ ಸೇರಿದಂತೆ ಎಲ್ಲರೂ ನಷ್ಟಕ್ಕೆ ಕಡಿವಾಣ ಹಾಕಲು ಪತ್ರಿಕೆಗಳನ್ನು ಮುಚ್ಚುವಂತೆ ಸಲಹೆ ನೀಡಿದಾಗಲೂ ಅಜ್ಜ ಮಾತ್ರ ಹತಾಶೆಯನ್ನು ಮೆಟ್ಟಿ, ತಮ್ಮ ನಿರ್ಧಾರಕ್ಕೆ ತುಂಬಾ ಗಟ್ಟಿಯಾಗಿ ಅಂಟಿಕೊಂಡು ನಿಂತಿದ್ದರು ಎಂದು ನಮ್ಮ ಪತ್ರಿಕೆಗಳಲ್ಲಿದ್ದ ಹಿರಿಯ ಪತ್ರಕರ್ತರು ನನಗೆ ತಿಳಿಸಿದ್ದರು. ಮೊದಲ ಒಂದು ದಶಕದ ಬಳಿಕ ಕಂಪನಿಯು ಸ್ಥಿರತೆಯನ್ನು ಸಾಧಿಸಿತಾದರೂ ಗಣನೀಯ ಲಾಭ ಮಾಡಲು ಅದಕ್ಕೆ ಮತ್ತೆ 20 ವರ್ಷಗಳು ಬೇಕಾದವು. ಆ ವೇಳೆಗೆ, 1960ರ ದಶಕದ ಮಧ್ಯಭಾಗದಲ್ಲಿ, ಶುರುಮಾಡಿದ್ದ ಕನ್ನಡ ನಿಯತಕಾಲಿಕಗಳಾದ ‘ಸುಧಾ’ ಮತ್ತು ‘ಮಯೂರ’ ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲೂ ಅಗ್ರಸ್ಥಾನವನ್ನು ಗಳಿಸಿದ್ದವು. 1990ರಲ್ಲಿ, ಅಜ್ಜ ತಮ್ಮ 89ನೇ ವಯಸ್ಸಿನಲ್ಲಿ ತೀರಿಕೊಳ್ಳುವ ಹೊತ್ತಿಗೆ ಕಂಪನಿಯ ಚೇರ್‌ಮನ್‌ ಹಾಗೂ ಆಡಳಿತ (ಮುಂದೆ ವ್ಯವಸ್ಥಾಪಕ) ನಿರ್ದೇಶಕರಾಗಿ 42 ವರ್ಷಗಳವರೆಗೆ ಮಾರ್ಗದರ್ಶನವನ್ನು ಮಾಡಿದ್ದರು.

ಅಜ್ಜ, ತಮ್ಮ ವ್ಯವಹಾರಗಳಲ್ಲಿ ಕೆಲವು ತತ್ವಗಳಿಗೆ ತುಂಬಾ ಬಲವಾಗಿ ಅಂಟಿಕೊಂಡಿದ್ದರು. ಇದೇ ಕಾರಣದಿಂದ 1960ರ ದಶಕದಲ್ಲಿ ಕಳ್ಳು ವ್ಯವಹಾರದಿಂದಲೇ ಹಿಂದೆ ಸರಿದರು. ಏಕೆಂದರೆ, ಕ್ಲೋರಲ್‌ ಹೈಡ್ರೇಟ್‌ ರಾಸಾಯನಿಕ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲ್ಪಟ್ಟಿದ್ದರಿಂದ ಹೆಂಡದಲ್ಲಿ ಅದನ್ನು ಮಿಶ್ರಣ ಮಾಡಲು ಅವರು ಬಯಸಲಿಲ್ಲ. ಹೀಗಾಗಿ ಹರಾಜಿನಲ್ಲಿ ಉಳಿದ ಬಿಡ್ಡರ್‌ಗಳೊಂದಿಗೆ ಸ್ಪರ್ಧಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಅಜ್ಜ, ತಮ್ಮ ಹರಾಜಿನ ಮೊತ್ತ ಮತ್ತು ತೆರಿಗೆಯನ್ನು ಸರ್ಕಾರಕ್ಕೆ ಯಾವಾಗಲೂ ಸಕಾಲದಲ್ಲೇ ಪಾವತಿಸುತ್ತಿದ್ದರು. ಉಳಿದವರು ಹರಾಜಿನ ಮೊತ್ತವನ್ನು ತುಂಬುವುದನ್ನು ವಿಳಂಬ ಮಾಡುತ್ತಿದ್ದರು ಮತ್ತು ಕೊಡಬೇಕಾದ ಬಾಕಿ ಮನ್ನಾ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರು. ಇಂತಹ ಸನ್ನಿವೇಶದಲ್ಲಿ ಇತರರೊಂದಿಗೆ ಅವರು ಸ್ಪರ್ಧಾತ್ಮಕವಾಗಿ ಹರಾಜಿನಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿತ್ತು. 1980ರ ದಶಕದ ಮಧ್ಯಭಾಗದಲ್ಲಿ ಅದಾಗಲೇ ತೀವ್ರ ಮುಪ್ಪಿನಲ್ಲಿದ್ದು, ಆ ವೇಳೆಗೆ ವೆಂಕಟಸ್ವಾಮಿ ಸಹ ತೀರಿ ಹೋಗಿದ್ದರಿಂದ ಸಾರಾಯಿ ವ್ಯವಹಾರದಿಂದ ಅವರು ಸಂಪೂರ್ಣವಾಗಿ ಹೊರಬರಬೇಕಾಯಿತು. ಹೀಗಿರುವಾಗ, ಆ ಸಂದರ್ಭದಲ್ಲಿ ನಾನು ಅವರಿಗೆ ನಷ್ಟ ಆಗುತ್ತಾ ಇರುವ ಸಾರಾಯಿ ಕಂಪನಿಯಿಂದ ಹೊರಬರಬೇಕು ಎಂದು ಸಲಹೆ ಮಾಡಿದ ಸನ್ನಿವೇಶದಲ್ಲಿ, ಒಬ್ಬರು ಪ್ರಮುಖ ಪಾಲುದಾರರು, ‘ಅಜ್ಜನಿಗೆ ಪಿತ್ರಾರ್ಜಿತ ವ್ಯವಹಾರದಲ್ಲಿ ಭಾವನಾತ್ಮಕ ನಂಟು ಇರಬಹುದಾದ್ದರಿಂದ ಅವರನ್ನು ಮತ್ತೆ ಕೇಳಿ ನೋಡಿ’ ಎಂದಿದ್ದರೆಂಬುದನ್ನು ಹೇಳಿದಾಗ, ಆ ಮಾತನ್ನು ತಳ್ಳಿಹಾಕಿ ತಮ್ಮದೇ ನಿರ್ಧಾರವನ್ನು ಮತ್ತೊಮ್ಮೆ ಹೇಳಿದ್ದರು.

ಅಜ್ಜನೊಂದಿಗೆ ಕೆಲಸ ಮಾಡಿದ ನನ್ನ ಅನುಭವದ ಮೇಲೆ ಹೇಳುವುದಾದರೆ ಉದ್ಯಮ ಹಾಗೂ ಆಡಳಿತ ವಿಚಾರಗಳಲ್ಲಿ ಅವರಿಗೆ ಸ್ಪಷ್ಟ

ಪ್ರಜಾವಾಣಿಯ ಮೊದಲ ಸಂಪಾದಕಬಿ.ಪುಟ್ಟಸ್ವಾಮಯ್ಯ
ಪ್ರಜಾವಾಣಿಯ ಮೊದಲ ಸಂಪಾದಕ
ಬಿ.ಪುಟ್ಟಸ್ವಾಮಯ್ಯ

ದರ್ಶನ ಇತ್ತು. ಗುರಿ ನಿಗದಿ ಹಾಗೂ ನಿರ್ಧಾರ, ನಿರ್ದೇಶನ, ಆದೇಶಗಳನ್ನು ನೀಡುವಲ್ಲಿ ಸ್ಪಷ್ಟತೆ ಇತ್ತು. ಆಜ್ಞೆಗಳನ್ನು ಮಾಡಲೆಂದೇ ಜನಿಸಿದಂತಿದ್ದ ಅಜ್ಜ, ತಮ್ಮ ಆಜ್ಞೆಗಳೆಲ್ಲ ಪರಿಪಾಲನೆ ಆಗುವಂತೆಯೂ ನೋಡಿಕೊಳ್ಳುತ್ತಿದ್ದರು. ಪತ್ರಿಕೆಯ ಶಕ್ತಿ ಏನೆಂಬುದು ಅವರಿಗೆ ಸಂಪೂರ್ಣವಾಗಿ ಗೊತ್ತಿತ್ತು ಮತ್ತು ಹಾಗೆಯೇ ತಮ್ಮ ಪತ್ರಿಕೆಗಳು ರೂಪುಗೊಳ್ಳುವಂತೆ ನಿರ್ದೇಶಿಸುತ್ತಿದ್ದರು. ‘ಪತ್ರಿಕೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಅದರಿಂದ ಯಾರಾದರೂ ದೇಶವನ್ನೂ ವಿಭಜನೆ ಮಾಡಬಹುದು (The press is a very powerful instrument. One can divide a nation with it)’ ಎಂದು, ಅವರು ತಮ್ಮದೇ ಮಾತುಗಳಲ್ಲಿ ಹೇಳುತ್ತಿದ್ದರು.

‘ಡೆಕ್ಕನ್‌ ಹೆರಾಲ್ಡ್‌’ನ ಸಂಪಾದಕರಾಗಿದ್ದ ವಿ.ಕೆ. ನರಸಿಂಹನ್‌ ಅವರು 1980ರಲ್ಲಿ ನಿವೃತ್ತಿ ಹೊಂದುವಾಗ ಅಜ್ಜನಿಗೆ, ‘ನಿಮಗೆ ಪಕ್ಕಾ ಉದ್ಯಮಿಯ ಮೂಲ ಪ್ರವೃತ್ತಿ ಇದೆ’ ಎಂದಿದ್ದರು. ಅಜ್ಜನ ಈ ಸ್ವಭಾವವೇ ಜೀವನಪರ್ಯಂತ ಅವರ ಯಶಸ್ಸಿನ ಹಿಂದಿದ್ದ ಗುಟ್ಟಾಗಿತ್ತು ಎನ್ನುವುದು ನನ್ನ ಅಭಿಮತ. 1980ರ ದಶಕದ ಮಧ್ಯಭಾಗದಲ್ಲಿ ‘ನಾವು ಪತ್ರಿಕೋದ್ಯಮದಲ್ಲಿ ಗಳಿಸುತ್ತಿರುವ ಗಣನೀಯ ಪ್ರಮಾಣದ ಲಾಭವನ್ನು ಹೊಸ ವ್ಯವಹಾರಗಳಲ್ಲಿ ತೊಡಗಿಸಲು ಉದ್ದೇಶಿಸಿದ್ದೇವೆ’ ಎಂದು ನಾನು ಅಜ್ಜನಿಗೆ ಹೇಳಿದಾಗ, ಅದಕ್ಕೆ ಅವರು ನನ್ನನ್ನು ಹೀಯಾಳಿಸುತ್ತಾ, ‘ಹೊಸ ವ್ಯವಹಾರ ಶುರು ಮಾಡುವ ಯೋಚನೆ ಬಿಡಿ, ನಾನು ಕಟ್ಟಿ ಬೆಳೆಸಿದ ಉದ್ಯಮವನ್ನು ನೀವು ಮೂವರೂ (ಅಣ್ಣ–ತಮ್ಮಂದಿರು) ಜಗಳವಾಡದೆ ಮುಂದುವರಿಸಿಕೊಂಡು ಹೋದರೆ ಅದೇ ಒಂದು ದೊಡ್ಡ ಸಾಧನೆ’ ಎಂದಿದ್ದರು. ಅವರದು ಮುನ್ನರಿವಿನ ಮಾತು.

ಸಾರ್ವಜನಿಕ ರಂಗದಲ್ಲೂ ಹೆಜ್ಜೆ ಗುರುತು

ಅಜ್ಜ, ತಮ್ಮ ಈಡಿಗ ಅಥವಾ ಕಳ್ಳು ಇಳಿಸುವ ಸಮುದಾಯದ ಸಮಾಜೋ–ಆರ್ಥಿಕ ಮತ್ತು ರಾಜಕೀಯ ಉನ್ನತಿಗಾಗಿ ಆ ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಾರ್ವಜನಿಕ ರಂಗಕ್ಕೂ ಕಾಲಿಟ್ಟರು. 1944ರಲ್ಲಿ ಮೈಸೂರು ಆರ್ಯ ಈಡಿಗರ ಸಂಘ ಸ್ಥಾಪನೆಯಾದಾಗ ಅಜ್ಜನೇ ಅದರ ಮೊತ್ತಮೊದಲ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಏಕೀಕೃತ ಮೈಸೂರು/ಕರ್ನಾಟಕ ರಾಜ್ಯದಲ್ಲಿ ಈ ಸಮುದಾಯ ಎದುರಿಸುತ್ತಿದ್ದ ಸಮಸ್ಯೆಗಳನ್ನು ಆಡಳಿತ ವ್ಯವಸ್ಥೆಯ ಗಮನಕ್ಕೆ ತಂದು, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅಜ್ಜನೇ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಎರಡು ಬಾರಿ –1958 ಮತ್ತು 1961ರಲ್ಲಿ– ಸಮುದಾಯದ ರಾಜ್ಯಮಟ್ಟದ ಸಮಾವೇಶಗಳನ್ನೂ ಸಂಘಟಿಸಲಾಗಿತ್ತು. ದಕ್ಷಿಣದ ನೆರೆಯ ರಾಜ್ಯಗಳ ಕಳ್ಳು ಇಳಿಸುವ ಸಮುದಾಯಗಳೊಂದಿಗೆ ರಾಜ್ಯದ ಈಡಿಗರ ಸಂಬಂಧ ಬೆಸೆಯುವ ಕೆಲಸವನ್ನೂ ಈ ಸಮಾವೇಶವು ಮಾಡಿತ್ತು. ಬರಲಿದ್ದ ಹೆಂಡ ನಿಷೇಧ ನೀತಿಯಿಂದ ಸಂಕಷ್ಟಕ್ಕೆ ಸಿಲುಕಲಿದ್ದ, ಅದೇ ವೃತ್ತಿಯನ್ನು ನಂಬಿಕೊಂಡಿದ್ದ ಸಮುದಾಯದ ಜನರ ಜೀವನ ನಿರ್ವಹಣೆಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನುವುದು ಸಮಾವೇಶದ ಪ್ರಮುಖ ಬೇಡಿಕೆಯಾಗಿತ್ತು. ಸಂಘದಿಂದ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ವಿದ್ಯಾರ್ಥಿಗಳ ವಸತಿನಿಲಯ ಸ್ಥಾಪನೆಯಾಗುವಂತೆಯೂ ಅಜ್ಜ ನೋಡಿಕೊಂಡಿದ್ದರು. ಈಡಿಗ ಸಮುದಾಯವನ್ನು ಹಿಂದುಳಿದ ವರ್ಗಗಳಲ್ಲಿ ಒಂದಾಗಿ ಪರಿಗಣಿಸಿದ್ದರೂ 1920ರ ನಂತರದ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದಲ್ಲಿ ರೂಪುಗೊಂಡ ಹಿಂದುಳಿದ ವರ್ಗಗಳ ಆಂದೋಲನದಲ್ಲಿ ಅವರೇನೂ ಪಾಲ್ಗೊಳ್ಳಲಿಲ್ಲ. ಹಾಗೆಯೇ ಸ್ವಾತಂತ್ರ್ಯಪೂರ್ವ ಇಲ್ಲವೆ ಸ್ವಾತಂತ್ರ್ಯೋತ್ತರದ ರಾಜ್ಯ ರಾಜಕೀಯದಲ್ಲೂ ಅವರು ಭಾಗಿಯಾಗಲಿಲ್ಲ. ಆಧುನಿಕ ರಾಜಕೀಯ ವ್ಯವಸ್ಥೆಯ ಕುರಿತು ಅವರಿಗೆ ಆಸಕ್ತಿಯಾಗಲಿ, ಒಲವಾಗಲಿ ಇರಲಿಲ್ಲ. ಅಜ್ಜನ ಮತ್ತೊಂದು ಸಾಮಾಜಿಕ ತೊಡಗುವಿಕೆಯೆಂದರೆ ಅವರು ಫ್ರೀಮೇಸನ್ ಆಗಿದ್ದರು. ಬೆಂಗಳೂರಿನ ‘ಲಾಡ್ಜ್‌ ಸ್ಟಾರ್‌ ಆಫ್‌ ದಿ ಸೌತ್‌ ನಂ. 101’ರ ಮಾಸ್ಟರ್‌ ಆಗಿ ಮೂರು ಬಾರಿ (1934, 1971 ಮತ್ತು 1972) ಹೊಣೆಯನ್ನು ನಿಭಾಯಿಸಿದ್ದರು.

ಟಿಪ್ಪು ಸುಲ್ತಾನನನ್ನು ತೀವ್ರವಾಗಿ ಮೆಚ್ಚಿದ್ದ ಅಜ್ಜ, ಆತನೊಬ್ಬ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್‌ ಯೋಧ ಎಂದು ಮೆಚ್ಚುತ್ತಾ ಟಿಪ್ಪುವಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು. ಟಿಪ್ಪುವಿನ ಜೀವನದ ಮಹತ್ವದ ಘಟ್ಟಗಳ ಕಥೆ ಹೇಳುವ ಕೆತ್ತನೆಯ ನಾಲ್ಕು ದೊಡ್ಡ ಚಿತ್ರಗಳನ್ನು ನಮ್ಮ ಮನೆಯ ಉಪ್ಪರಿಗೆಯ ಊಟದ ಕೋಣೆಯ ಗೋಡೆಗಳ ಮೇಲೆ ತೂಗು ಹಾಕಲಾಗಿತ್ತು. ಮಹಾತ್ಮ ಗಾಂಧಿಯನ್ನು ಒಬ್ಬ ಸನ್ಯಾಸಿ ಎನ್ನುತ್ತಿದ್ದ ಅಜ್ಜ, ಅವರ ಬಗ್ಗೆ ಅಪಾರ ಗೌರವವನ್ನೂ ಹೊಂದಿದ್ದರು. ಆದರೆ, ಆಡಳಿತದ ಮತ್ತು ಲೌಕಿಕ ಚಟುವಟಿಕೆಗಳಲ್ಲಿ ಸದಾಕಾಲ ಅಹಿಂಸೆಯು ಸರಿಯಾದ ಮತ್ತು ಪರಿಣಾಮಕಾರಿಯಾದ ಮಾರ್ಗವಾಗಬಲ್ಲುದೇ ಎಂದು ಅವರು ಸಂಶಯ ವ್ಯಕ್ತಪಡಿಸುತ್ತಿದ್ದರು. ರಾಜಮನೆತನಗಳ ಬಗೆಗೆ ಅಪಾರ ಅಭಿಮಾನವನ್ನು ಹೊಂದಿದ್ದ ಅಜ್ಜ, ರಾಜರಂತೆಯೇ ಬದುಕಲು ಯತ್ನಿಸಿದ್ದರು.

ಅಜ್ಜನ ಬಹುತೇಕ ಸ್ನೇಹಿತರು ಉದ್ಯಮಿಗಳು. ಕೆಲವರು, ಶ್ರೀಮಂತ ಕುಟುಂಬದವರು ಮತ್ತು ರಾಜಮನೆತನದವರೂ ಇದ್ದರು. ಅವರ ಬಗ್ಗೆ ಅಜ್ಜನಿಗೆ ವಿಸ್ಮಯಭರಿತ ಅಪಾರ ಗೌರವವಿರುತ್ತಿತ್ತು. ಅವರ ಸ್ನೇಹವರ್ಗದಲ್ಲಿ ಕೆಲವರು ಹಿರಿಯ ನ್ಯಾಯಾಧೀಶರು ಮತ್ತು ಅಧಿಕಾರಿಗಳೂ ಇದ್ದರು. ಕೆಲವೊಮ್ಮೆ ತಮ್ಮ ವ್ಯವಹಾರದಲ್ಲಿ ಅವರನ್ನೂ ತೊಡಗಿಸಿಕೊಳ್ಳುತ್ತಿದ್ದರು. ತಮ್ಮ ಸ್ನೇಹಿತರಾಗಿದ್ದ ಹಿಂದುಪುರದ ಖಾನ್‌ ಬಹದ್ದೂರ್‌ ಬುಡನ್‌ ಸಾಹೇಬ್‌ ಅವರಿಗೆ ಪತ್ರಿಕಾ ಕಂಪನಿಯಲ್ಲಿ ಅವರು ಷೇರು ನೀಡಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಸಂಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಆಡಳಿತ ಸಂಸ್ಥೆಗಳ ಹಿರಿಯ ಆಡಳಿತಗಾರರು ಹಾಗೂ ಜನನಾಯಕರ ಬಗೆಗೆ ಅಜ್ಜ ಗೌರವವನ್ನು ಹೊಂದಿದ್ದರೂ ಸ್ವಾತಂತ್ರ್ಯಪೂರ್ವದಲ್ಲೂ ಸ್ವಾತಂತ್ರ್ಯಾನಂತರವೂ ಕಾಂಗ್ರೆಸ್‌ ಹಾಗೂ ಇತರ ರಾಜಕಾರಣಿಗಳಿಂದ ಅವರು ಬಹುಮಟ್ಟಿಗೆ ದೂರವೇ ಇದ್ದರು. ಸ್ವಾತಂತ್ರ್ಯಾನಂತರದ ಸ್ಥಿತಿಗತಿಗಳ ಕುರಿತು ಒಮ್ಮೊಮ್ಮೆ ಭ್ರಮನಿರಸನಗೊಂಡು ‘ಒಂದು ರೀತಿಯಲ್ಲಿ ಬ್ರಿಟಿಷರ ಆಡಳಿತವೇ ಎಷ್ಟೋ ಉತ್ತಮವಾಗಿತ್ತು. ಕನಿಷ್ಠಪಕ್ಷ ಅವರು ಕೆಲವು ನಿಯಮಗಳಿಗಾದರೂ ಅಂಟಿಕೊಂಡಿದ್ದರು’ ಎನ್ನುತ್ತಿದ್ದರು.

ಸಂಪ್ರದಾಯಸ್ಥ ಹಿಂದೂ, ಉದಾರ ದೇಣಿಗೆದಾರ

ಅಜ್ಜ ಸಂಪ್ರದಾಯಸ್ಥ ಮತ್ತು ವಿಧಿವಿಧಾನಗಳನ್ನು ಆಚರಿಸುವ ಹಿಂದೂವಾಗಿದ್ದರು. ನಮ್ಮ ಮನೆಯಲ್ಲಿ ಯುಗಾದಿ ಮತ್ತು ಆಯುಧ ಪೂಜೆ ಎರಡೂ ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಯುಗಾದಿ ಸಂದರ್ಭದಲ್ಲಿ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗುತ್ತಿತ್ತು ಮತ್ತು ಮನೆ ಮಂದಿಯೆಲ್ಲ ಹೊಸ ಬಟ್ಟೆಯನ್ನು ಧರಿಸುತ್ತಿದ್ದರು. ಕುಲದೈವಕ್ಕೆ ಪೂಜೆ ಸಲ್ಲಿಸುವುದಲ್ಲದೆ ಅಜ್ಜನ ಅಪ್ಪ–ಅಮ್ಮ ಹಾಗೂ ಇತರ ಹಿರಿಯ ಸಂಬಂಧಿಗಳ ಸಮಾಧಿಗಳಿರುವ ಸ್ಥಳಕ್ಕೆ ತೆರಳಿ, ಗೌರವ ಸಲ್ಲಿಸಿ ಬರಬೇಕಿತ್ತು. ಆಯುಧ ಪೂಜೆಯ ಸಮಯದಲ್ಲಿ ರೈಫಲ್‌ಗಳು, ಶಾಟ್‌ಗನ್‌ಗಳು, ರಿವಾಲ್ವರ್‌ಗಳು, ಪಿಸ್ತೂಲ್‌ಗಳು, ಕತ್ತಿಗಳು, ಕಠಾರಿಗಳು ಸೇರಿದಂತೆ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿದ್ದ ಎಲ್ಲ ಆಯುಧಗಳಿಗೆ, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕುರಿಯನ್ನು ಹತಾರದಿಂದ ಒಂದೇ ಏಟಿಗೆ ಹೊಡೆದು ಬಲಿ ಕೊಟ್ಟು, ಅದರ ರಕ್ತವನ್ನು ಎಲ್ಲ ವಾಹನಗಳ ಮೇಲೆ ವಿಧಿಯುಕ್ತವಾಗಿ ಲೇಪಿಸಲಾಗುತ್ತಿತ್ತು. ಹಲವು ಹಿಂದೂ ಮಠಗಳು ಮತ್ತು ದೇವಸ್ಥಾನಗಳಿಗೆ ಮಾತ್ರವಲ್ಲದೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿಗೂ ಅಜ್ಜ ದೇಣಿಗೆಯನ್ನು ನೀಡುತ್ತಿದ್ದರು.

ಅಜ್ಜನಿಗೆ ಕೆಲವು ಸಣ್ಣಪುಟ್ಟ ವಿಲಕ್ಷಣ ದೋಷಗಳಿದ್ದವು, ದೌರ್ಬಲ್ಯಗಳೂ ಇದ್ದವು. ಆಗ ವಿವೇಚನೆ ಇಲ್ಲದೆ ಅವರು ವರ್ತಿಸುತ್ತಿದ್ದುದುಂಟು. ಸುಖದ ಸುಪ್ಪತ್ತಿಗೆಯಲ್ಲಿ, ಐಷಾರಾಮಿ ವಾತಾವರಣದಲ್ಲಿ ಮತ್ತು ಸೇವಕರ ಮಧ್ಯೆ ಬೆಳೆದಿದ್ದ ಅವರು, ಜೀವನದಲ್ಲಿ ಕಠೋರ ಸತ್ಯಗಳು ಧುತ್ತೆಂದು ಎದುರಾದಾಗ ಮಂಕಾಗುತ್ತಿದ್ದರು. ವೃದ್ಧಾಪ್ಯದವರೆಗೆ ಅವರಲ್ಲಿ ಮಗುವಿನಂತಹ ಮುಗ್ಧ ಅಹಂಭಾವ ಮತ್ತು ಆತ್ಮಪ್ರಶಂಸೆಯ ಸ್ವಭಾವ ಜಾಗೃತವಾಗಿತ್ತು. ಹೊಗಳಿಕೆಯಿಂದ ಅವರು ಸುಲಭವಾಗಿ ಮೈಮರೆಯುತ್ತಿದ್ದರು. ಸಮಾಜ ಮತ್ತು ಜನರೊಂದಿಗೆ ಅಂತರ ಕಾಯ್ದುಕೊಂಡು ಬಂದಿದ್ದರಿಂದ ಹಾಗೂ ಹೊರಜಗತ್ತಿನೊಂದಿಗೆ ಸಂಪರ್ಕವನ್ನು ಹೊಂದಲು ತಮ್ಮ ನಿಕಟ ವಲಯವನ್ನೇ ಸಂಪೂರ್ಣವಾಗಿ ಆಶ್ರಯಿಸಿದ್ದರಿಂದ ಎಷ್ಟೋ ಸಂದರ್ಭಗಳಲ್ಲಿ ವಾಸ್ತವಿಕ ಸನ್ನಿವೇಶದ ಅರಿವು ಅವರಿಗೆ ಇರುತ್ತಿರಲಿಲ್ಲ. ಮತ್ತೊಬ್ಬರ ಗುಣಸ್ವಭಾವವನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲರಾಗಿ ಎಲ್ಲರನ್ನೂ ಸುಲಭವಾಗಿ ನಂಬುತ್ತಿದ್ದರಿಂದ, ಅವರ ಸಂಪರ್ಕ ಸಾಧಿಸಿದ್ದ ಯಾರು ಬೇಕಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅವರನ್ನು ಬಳಸಿಕೊಳ್ಳಬಹುದಿತ್ತು. ಅಂಥವರಿಂದಾಗಿ ಅಜ್ಜನ ಕುಟುಂಬ ಹಾಗೂ ಸ್ನೇಹದ ಸಂಬಂಧಗಳು ಹಾಳಾದದ್ದೂ ಉಂಟು. ಅದರ ಹೊರತಾಗಿಯೂ ಕೆಲವು ಸಂಬಂಧಗಳು ಬಾಳಿದವು.

ಅತ್ಯುತ್ಸಾಹದ ಲವಲವಿಕೆಯಲ್ಲಿ, ವೈಭವಯುತವಾಗಿ ಬಾಳಿದ ಅಜ್ಜ, ಬದುಕು ನೀಡಬಹುದಾದ ವೈವಿಧ್ಯಮಯ ಭೋಗಗಳನ್ನು ಆಳವಾಗಿ ಅನುಭವಿಸಿದ್ದರು. ಆದರೂ ಎಂದಿಗೂ ಮಿತಿ ಮೀರಲಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ತುಂಬಾ ತೊಡಗಿಕೊಳ್ಳುತ್ತಿದ್ದರು ಅಜ್ಜ. ಸಮಾಜದ ಗಣ್ಯರಲ್ಲಿ ಹಲವರು ಸ್ನೇಹಿತರನ್ನು ಹೊಂದಿದ್ದ ಅವರು, ದೊಡ್ಡ ಔತಣಕೂಟಗಳನ್ನೂ ಏರ್ಪಡಿಸುತ್ತಿದ್ದರು. ಒಳ್ಳೆಯ ಭೋಜನವನ್ನು ಅವರು ಆನಂದಿಸುತ್ತಿದ್ದರು. ಬೇರೆಯವರ ಮನೆಗಳಿಗೆ, ಔತಣಕೂಟಗಳಿಗೆ ಹೋದಾಗ ಇಷ್ಟವಾದ ತಿಂಡಿ ತಿನಿಸುಗಳ ಪಾಕ ವಿಧಾನದ ವಿವರವನ್ನೂ ಪಡೆದುಕೊಳ್ಳುತ್ತಿದ್ದರು. ಮನೆಯಲ್ಲಿ ಅಡುಗೆಯವರಿಂದ ಅದೇ ಖಾದ್ಯಗಳನ್ನು ಮಾಡಿಸುತ್ತಿದ್ದರು. ಹೀಗಾಗಿ ನಮಗೆ ಮನೆಯಲ್ಲಿ ವಿವಿಧ ಪ್ರದೇಶಗಳು ಮತ್ತು ಸಮುದಾಯಗಳ ಸ್ವಾದಿಷ್ಟವಾದ ಭಕ್ಷ್ಯ ಸವಿಯಲು ಸಿಗುತ್ತಿತ್ತು. ಪ್ರತಿದಿನ ಸಂಜೆಯಾದರೆ ಸಾಕು, ಅಜ್ಜ ವಿಸ್ಕಿಯನ್ನು ಆನಂದಿಸುತ್ತಿದ್ದರು. ವಿಶಾಲ ಹೃದಯದ, ದಯಾ ಗುಣದ ಅಜ್ಜ, ಸಂಬಂಧಿಗಳು ಮತ್ತು ಸ್ನೇಹಿತರ ವಿಷಯದಲ್ಲಿ ಉದಾರವಾಗಿ ನಡೆದುಕೊಳ್ಳುತ್ತಿದ್ದರು. ಯಾರಿಗೂ ಯಾವುದೇ ರೀತಿಯಲ್ಲಿ ಅವರು ತೊಂದರೆ ಬಯಸಲಿಲ್ಲ. ಅಜ್ಜ, ತಮ್ಮ ಉದ್ಯೋಗಿಗಳ ಪಾಲಿಗೆ ಪಿತೃಸಮಾನರಾಗಿದ್ದರು. ಅವರಲ್ಲಿ ಹೆಚ್ಚಿನವರು ಮನೆಯಲ್ಲಿ ಮತ್ತು ಅವರ ಉದ್ಯಮದಲ್ಲಿ ಜೀವನಪೂರ್ತಿ ಜೊತೆಯಾಗಿದ್ದರು. ‘ಒಂದು ಹಂತದಲ್ಲಿ ನೀವು ತೃಪ್ತಭಾವ ಹೊಂದಲೇಬೇಕು. ಇಲ್ಲದಿದ್ದರೆ ಅಸೂಯೆಯನ್ನು ಬೆಳೆಯಲು ಬಿಟ್ಟು, ಸದಾ ಅತೃಪ್ತರಾಗಿಯೇ ಸುಖ ಇಲ್ಲದವರಾಗಿ ಉಳಿಯುತ್ತೀರಿ’ ಎಂದು ನಮಗೆ ಹೇಳುತ್ತಿದ್ದರು. ತಮ್ಮ ತೃಪ್ತಭಾವದಿಂದಾಗಿ ಕ್ಷೇಮವಾಗಿದ್ದರು ಅವರು. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ‘ನಾನು ಚೆನ್ನಾಗಿ ನಿದ್ರೆ ಮಾಡಿದೆ’ ಎಂದು ಅವರು ಹೇಳುತ್ತಿದ್ದರು. ತುಂಬಾ ಮುಪ್ಪಿನ ದಿನಗಳವರೆಗೂ ಅಜ್ಜ ಒಳ್ಳೆಯ ಆರೋಗ್ಯವನ್ನು ಹೊಂದಿದ್ದರು.

ಕೆಲವು ಅಸಾಧಾರಣ ವಸ್ತುಗಳು ಅಜ್ಜನ ಹೆಗ್ಗುರುತುಗಳಾಗಿದ್ದವು. ಅವರ ಬೆರಳಿನಲ್ಲಿದ್ದ ತುಂಬಾ ದೊಡ್ಡದಾದ ಒಂಟಿ ವಜ್ರದ ಉಂಗುರ, ಸದಾ ಧರಿಸುತ್ತಿದ್ದ ಬಿಳಿಬಣ್ಣದ ಕಚ್ಚೆ ಪಂಚೆ ಮತ್ತು ಕ್ಲೋಸ್ಡ್‌ ಕಾಲರ್‌ ಕೋಟ್, ತಲೆಯ ಮೇಲೆ ಸುತ್ತಿಕೊಳ್ಳುತ್ತಿದ್ದ ಬಿಳಿಬಣ್ಣದ ದೊಡ್ಡ ಗಾತ್ರದ ರುಮಾಲು, ಕಪ್ಪುಬಣ್ಣದ ಮೊಂಟ್‌ಬ್ಲಾಂಕ್‌ ಪೆನ್ನು ಮತ್ತು ಕಪ್ಪುಬಣ್ಣದ ಉದ್ದನೆಯ ಕ್ಯಾಡಿಲಾಕ್‌ ಕಾರು- ಅವರ ಹೆಗ್ಗುರುತುಗಳೇ ಆಗಿದ್ದವು.

ತಮ್ಮ ತಂದೆಯ ಹೆಸರನ್ನು ಕುಟುಂಬದ ಹೆಸರಾಗಿ ಎತ್ತಿಹಿಡಿಯಲು ಅವರು ಪ್ರಯತ್ನಿಸುತ್ತಿದ್ದರು. ಸಾರ್ವಜನಿಕ ವಲಯದಲ್ಲಿ ಅವರದೇ ಹೆಸರಿಗಿಂತ ನೆಟ್ಟಕಲ್ಲಪ್ಪ ಎಂದೇ ಅವರನ್ನು ಗುರುತಿಸಲಾಗುತ್ತಿತ್ತು. ತಮ್ಮ ಮಗನಿಗೂ ತಮ್ಮ ತಂದೆಯ ಹೆಸರನ್ನೇ ಇಟ್ಟಿದ್ದರು. ತಮ್ಮ ತಂದೆಯಿಂದ ದೊಡ್ಡ ಸಂಪತ್ತನ್ನು ವಾರಸುದಾರಿಕೆಯಿಂದ ಪಡೆದಿದ್ದ ಅಜ್ಜ, ಕ್ರಮವಾಗಿ ತಮ್ಮ ಮೊಮ್ಮಕ್ಕಳಿಗೆ ಅಷ್ಟೇ ದೊಡ್ಡ ಸಂಪತ್ತು, ಪ್ರಭಾವ, ಪ್ರತಿಷ್ಠೆ ಮತ್ತು ಸಮಾಜದಲ್ಲಿ ಗೌರವದ ವಾರಸುದಾರಿಕೆಯನ್ನು ವರ್ಗಾಯಿಸಿದರು. ಮೂವರೂ ಗಂಡು ಮೊಮ್ಮಕ್ಕಳಿಗೆ ಜನಿಸಿದ ನಾಲ್ವರು ಮರಿ ಮಕ್ಕಳನ್ನೂ ಕಂಡ ಅಜ್ಜ, ವಂಶವೃಕ್ಷ ಬೆಳೆಯುತ್ತಿರುವುದಕ್ಕೂ ಸಾಕ್ಷಿಯಾದರು. ಒಟ್ಟಾರೆ ತಮ್ಮದೇ ಸ್ವಂತ ಹಾಗೂ ಈಗ ಹಿಂದಕ್ಕೆ ಸರಿದಿರುವ, ಮಾಯವಾಗಿರುವ ಮೌಲ್ಯಗಳ ಗತಕಾಲದ ಸಮಾಜದ ನಿಯಮಗಳ ಪ್ರಕಾರ, ಒಂದು ವೈವಿಧ್ಯಮಯ ವೈಭವದ ಹಾಗೂ ಸಾರ್ಥಕದ ಜೀವನ ಬದುಕಿದರು. ಅದಕ್ಕಿಂತ ಹೆಚ್ಚಾಗಿ ನನ್ನಜ್ಜ ರಾಜರ, ಯೋಧರ, ಉದ್ಯಮಿಗಳ, ಧರ್ಮದ, ಜಾತಿಯ ಮತ್ತು ತಾವು ಹುಟ್ಟಿ ಬೆಳೆದ ಕುಟುಂಬದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಬೆಳೆದಿದ್ದರು. ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಸಾರ್ವಜನಿಕ ಸೇವೆಯ ಗುರಿಯೊಂದಿಗೆ ಅಜ್ಜ ಪತ್ರಿಕೆಗಳನ್ನು ಸ್ಥಾಪಿಸಿದ್ದರು. ಅವುಗಳು ದೊಡ್ಡದಾಗಿ ಬೆಳೆದು ಇಂದಿಗೂ ಉಸಿರಾಡುತ್ತಿವೆ. ಹಳೆಯ ಜಗತ್ತಿನಲ್ಲಾಗಲಿ ಅಥವಾ ಹೊಸದರಲ್ಲಾಗಲಿ ತಾವು ತೊಡಗಿಸಿಕೊಂಡ ಯಾವುದೇ ಚಟುವಟಿಕೆಯಲ್ಲಿ ಅವರೇ ಕೇಂದ್ರಬಿಂದುವಾಗಿರುತ್ತಿದ್ದರು. ಹೌದು, ನಿಜವಾಗಿಯೂ, ತಾವೇ ಗುರುತಿಸಿಕೊಳ್ಳುತ್ತಿದ್ದಂತೆ ಅವರು ಭಾಗ್ಯಶಾಲಿಯಾಗಿದ್ದರು.

ಆರ್ಯ ಈಡಿಗ ಸಂಘದಲ್ಲಿ ಭಾವಚಿತ್ರ ಅನಾವರಣ ಸಮಾರಂಭದಲ್ಲಿಕೆ.ಎನ್‌.ಗುರುಸ್ವಾಮಿ, ಕೆ.ವೆಂಕಟಸ್ವಾಮಿ ಮತ್ತು ಸರ್‌ ಎ. ರಾಮಸ್ವಾಮಿ
ಆರ್ಯ ಈಡಿಗ ಸಂಘದಲ್ಲಿ ಭಾವಚಿತ್ರ ಅನಾವರಣ ಸಮಾರಂಭದಲ್ಲಿ
ಕೆ.ಎನ್‌.ಗುರುಸ್ವಾಮಿ, ಕೆ.ವೆಂಕಟಸ್ವಾಮಿ ಮತ್ತು ಸರ್‌ ಎ. ರಾಮಸ್ವಾಮಿ
ಕಣೇಕಲ್‌ನಲ್ಲಿ ಆರಂಭಿಸಿದ ಬಾಲಕರ ಹಾಸ್ಟೆಲ್‌ ಉದ್ಘಾಟನಾ ಸಮಾರಂಭದಲ್ಲಿ ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕೆ.ಬ್ರಹ್ಮಾನಂದ ರೆಡ್ಡಿ, ಕೆ.ವೆಂಕಟಸ್ವಾಮಿ ಅವರೊಂದಿಗೆ ಕೆ.ಎನ್‌.ಗುರುಸ್ವಾಮಿ
ಕಣೇಕಲ್‌ನಲ್ಲಿ ಆರಂಭಿಸಿದ ಬಾಲಕರ ಹಾಸ್ಟೆಲ್‌ ಉದ್ಘಾಟನಾ ಸಮಾರಂಭದಲ್ಲಿ ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕೆ.ಬ್ರಹ್ಮಾನಂದ ರೆಡ್ಡಿ, ಕೆ.ವೆಂಕಟಸ್ವಾಮಿ ಅವರೊಂದಿಗೆ ಕೆ.ಎನ್‌.ಗುರುಸ್ವಾಮಿ
ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಅರ್ಪಿಸಿದ ಸನ್ಮಾನ ಪತ್ರ ಓದುತ್ತಿರುವ ಕೆ.ಎನ್‌. ಗುರುಸ್ವಾಮಿ
ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಅರ್ಪಿಸಿದ ಸನ್ಮಾನ ಪತ್ರ ಓದುತ್ತಿರುವ ಕೆ.ಎನ್‌. ಗುರುಸ್ವಾಮಿ
ಅಜ್ಜನ ನೆಚ್ಚಿನ ಚಾಲಕರು
ಅಜ್ಜನ ನೆಚ್ಚಿನ ಚಾಲಕರು

ಲೇಖಕ: ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳ ಮಾಜಿ ಸಂಪಾದಕ ಮತ್ತು ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಮಾಜಿ ಚೇರ್‌ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT