ಸೋಮವಾರ, ಆಗಸ್ಟ್ 15, 2022
23 °C

ಇದ್ದರೂ ಇಲ್ಲದಂತಿರುವ ಮೀಸಲು ಶೋಷಿತರಿಗೆ ಸಮಾನವಾಗಿ ಸಿಕ್ಕಲಿ

ರುದ್ರು ಪುನೀತ್‌ ಆರ್‌.ಸಿ. Updated:

ಅಕ್ಷರ ಗಾತ್ರ : | |

ಮೀಸಲಾತಿಯನ್ನೇ ನುಂಗಿಹಾಕುವ ವಿಷಸರ್ಪ ನಮ್ಮ ನೆತ್ತಿಯ ಮೇಲೆ ಪ್ರಹಾರ ಮಾಡುತ್ತಿರುವ ಈ ಸಂದರ್ಭದಲ್ಲಿ, ಪರಿಶಿಷ್ಟ ಸಮುದಾಯದಲ್ಲಿರುವ ಎಲ್ಲ ಜಾತಿಗಳವರು ಬಹಳ ಜಾಗರೂಕತೆಯಿಂದ ವರ್ತಿಸಬೇಕಾಗಿದೆ. ಒಳಮೀಸಲಾತಿ ಎನ್ನುವುದು, ಸರಿಯೋ ತಪ್ಪೋ ಎನ್ನುವುದರ ಬಗ್ಗೆ ವಿಮರ್ಶೆ ಮತ್ತು ಚರ್ಚೆಗಳಾಗುವುದು ಆರೋಗ್ಯಕರ ಬೆಳವಣಿಗೆ. ಆದರೆ, ಪರ– ವಿರೋಧದ ಭರದಲ್ಲಿ ವೈಯಕ್ತಿಕ ನಿಂದನೆ ಅಥವಾ ವಿರೋಧ ಸಲ್ಲದು; ಅದು ಜಾತಿಗಳ ನಡುವಿನ ವೈಷಮ್ಯಕ್ಕೆ ಕಾರಣವಾಗಬಹುದು. ನ್ಯಾಯಮೂರ್ತಿ ಸದಾಶಿವ ಆಯೋಗವು ನೀಡಿರುವ ವರದಿಯು ವೈಜ್ಞಾನಿಕವೋ, ಅವೈಜ್ಞಾನಿಕವೋ ಎನ್ನುವುದು ನಂತರದ ವಿಷಯ. ಆದರೆ, ತಾನು ನೇಮಿಸಿದ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವ ಮೊದಲು, ಅದನ್ನು ಸಾರ್ವಜನಿಕವಾಗಿ ವಿಮರ್ಶೆಗೆ ಒಳಪಡಿಸಬೇಕಾಗಿರುವುದು ಸರ್ಕಾರದ ಕೆಲಸ.

ಪರಿಶಿಷ್ಟ ಸಮುದಾಯ ಪಟ್ಟಿಯಲ್ಲಿರುವ 101 ಜಾತಿಗಳು ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕವಾಗಿ ಶೋಷಣೆಯನ್ನು ಅನುಭವಿಸಿವೆ ಎಂಬುದು ಸ್ಪಟಿಕದಷ್ಟು ಸ್ಪಷ್ಟ. ಜೊತೆಗೆ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದಕ್ಕೆ ಅಸ್ಪೃಶ್ಯತೆಯೊಂದೇ ಮಾನದಂಡವಲ್ಲ ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆ ಒಂದು ಆಧಾರದ ಮೇಲೆಯೇ ಸಾಮಾಜಿಕವಾಗಿ ಶೋಷಣೆ ಮತ್ತು ತುಳಿತಕ್ಕೆ ಒಳಗಾದ ಅನೇಕ ಜಾತಿಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ‘ಎಡ’ದಲ್ಲಿ 30ಕ್ಕೂ ಹೆಚ್ಚು ಮತ್ತು ‘ಬಲ’ದಲ್ಲಿ 25ಕ್ಕೂ ಹೆಚ್ಚು ಜಾತಿಗಳಿದ್ದು, ಅವುಗಳನ್ನು ಹೊರತುಪಡಿಸಿ, ಇನ್ನೂ ಅನೇಕ ಸಣ್ಣ ಜಾತಿಗಳು ಅವಕಾಶ ವಂಚಿತವಾಗಿವೆ. ಸ್ಪೃಶ್ಯರು ಎಂದು ಪರಿಗಣಿಸಲಾಗಿರುವ ಅನೇಕ ಜಾತಿಗಳು ಅಸ್ಪೃಶ್ಯರಷ್ಟೆ ಹೀನಾಯವಾದ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿವೆ ಅನ್ನುವುದೂ ಸತ್ಯ.

ಲಂಬಾಣಿ, ಕೊರಚ, ಕೊರಮ ಮತ್ತು ಭೋವಿ ಜನಾಂಗದ ಸ್ಥಿತಿ, ಹೊಲೆಯ ಮತ್ತು ಮಾದಿಗರ ಸ್ಥಿತಿಗಿಂತ ಉತ್ತಮವೇನಿಲ್ಲ. ಬುಡಕಟ್ಟು ಜನಾಂಗಗಳನ್ನು ಹತ್ತಿಕ್ಕಲು ಬ್ರಿಟಿಷರು ಕ್ರಿಮಿನಲ್ ಟ್ರೈಬಲ್ ಆ್ಯಕ್ಟ್– 1872 ಜಾರಿಗೆ ತಂದರು. ಅಲೆಮಾರಿ ಜನಾಂಗವಾದ ಲಂಬಾಣಿ ಸಮುದಾಯಕ್ಕೆ ಒಂದು ನಿರ್ದಿಷ್ಟ ನೆಲೆಯಿರಲಿಲ್ಲ. ಕಟ್ಟಿಗೆ, ಉಪ್ಪು ಮಾರಿ ಜೀವನೋಪಾಯ ಕಂಡುಕೊಂಡಿದ್ದ ಈ ಸಮುದಾಯದ ಮೇಲೆ ಬ್ರಿಟಿಷರು ಕ್ರಿಮಿನಲ್ ಟ್ರೈಬಲ್ ಆ್ಯಕ್ಟ್ ಹೇರಿ, ‘ಇವರು ಅಭ್ಯಾಸಿತ ಚೋರರು’ ಎಂದರು. ಈ ರೀತಿಯ ಸಾಮಾಜಿಕ ಕಳಂಕವನ್ನು ಹೊತ್ತ ಸಮುದಾಯಗಳಿಗೂ ಮೀಸಲಾತಿಯ ಅವಶ್ಯಕತೆ ಇದೆ ಎನ್ನುವ ಆಯಾಮದ ಮೇಲೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಅಲೆಮಾರಿಯಾಗಿ, ಕೂಲಿನಾಲಿ ಮಾಡಿ ಜೀವನ ಸಾಗಿಸುವ ಈ ಸಮುದಾಯವನ್ನು ಸಮಾಜವು ನೋಡುವ ದೃಷ್ಟಿಕೋನವೇ ಬೇರೆಯಾಗಿತ್ತು. ಗುಲ್ಬರ್ಗ ಭಾಗದಲ್ಲಿ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಈಗಲೂ ಮಕ್ಕಳನ್ನು ಮಾರಿ ಜೀವನ ಸಾಗಿಸುವಂತಹ ದಾರುಣ ಸ್ಥಿತಿಗಳಿಗೆ ನಾವು ಲಂಬಾಣಿಗರು ಸಾಕ್ಷಿಯಾಗಿದ್ದೇವೆ. ಪೇಟೆಗೆ 15 ಕಿ.ಮೀ. ನಡೆದು ಹೋಗುವ ಮತ್ತು ಇಲ್ಲಿಯವರೆಗೂ ವಿದ್ಯುತ್ ಸಂಪರ್ಕವನ್ನು ಹೊಂದಿರದ ಲಂಬಾಣಿ ತಾಂಡಾಗಳ ಸ್ಥಿತಿಯನ್ನು ‘ಪ್ರಜಾವಾಣಿ’ ಪತ್ರಿಕೆ ಇತ್ತೀಚೆಗೆ ಮುಖಪುಟದಲ್ಲೇ ಪ್ರಕಟಿಸಿತ್ತು.

ಶೋಷಣೆ ಎನ್ನುವುದು ಅಸ್ಪೃಶ್ಯರ ಮೇಲೆ ಹೆಚ್ಚಾಗಿದೆ ಎನ್ನುವುದನ್ನು ತಳ್ಳಿಹಾಕಲಿಕ್ಕೆ ಆಗುವುದಿಲ್ಲವಾದರೂ, ಸ್ಪೃಶ್ಯರು ಎಂದು ಹೇಳಲಾಗುತ್ತಿರುವ ಜಾತಿಗಳ ಮೇಲೂ ಬೇರೆ ಬೇರೆ ರೀತಿಯಲ್ಲಿ ದೌರ್ಜನ್ಯ ನಡೆದಿದೆ ಎನ್ನುವುದೂ ಸತ್ಯ. ಮಾದಿಗರ ಮನೆಯಲ್ಲಿ ಬಿಟ್ಟುಕೊಳ್ಳದ ಮತ್ತು ಮಾದಿಗರ ಮನೆಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ದಕ್ಕಲಿಗ ಸಮುದಾಯದವರ ದೃಷ್ಟಿಯಲ್ಲಿ ಮಾದಿಗರು ಶೋಷಕರು. ಹೊಲೆಯರು ಮನೆಯೊಳಗೆ ಬಿಟ್ಟುಕೊಳ್ಳದ ಮಾದಿಗರ ದೃಷ್ಟಿಯಲ್ಲಿ ಹೊಲೆಯರು ಶೋಷಕರು. ಈ ಸರಪಣಿ ಹೀಗೆಯೇ ಮುಂದುವರಿಯುತ್ತದೆ.

ಮೀಸಲಾತಿಯಿಂದ ವಂಚಿತರಾಗಿರುವವರನ್ನು ಒಳಗೊಂಡು ಸಣ್ಣ ಸಣ್ಣ ಜಾತಿಗಳಿಗೆ ಮೀಸಲಾತಿಯ ಸೌಲಭ್ಯವನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಅದನ್ನು ವಿರೋಧಿಸುವುದು ಸಾಮಾಜಿಕ ನ್ಯಾಯವನ್ನು ವಿರೋಧಿಸುವುದಕ್ಕೆ ಸಮ. ಆದರೆ, ಒಳಮೀಸಲಾತಿಯನ್ನು ವಿರೋಧಿಸುವವರ ಭಿನ್ನಾಭಿಪ್ರಾಯವಿರುವುದು ಸದಾಶಿವ ಆಯೋಗದ ವರದಿಯು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಸಮೀಕ್ಷೆ ಮಾಡಿಲ್ಲ ಎನ್ನುವುದಾಗಿದೆ. ಕೆಲವು ಬಲಿತ ಸಮುದಾಯಗಳನ್ನು ಒಳಮೀಸಲಾತಿ ಪಟ್ಟಿಯಲ್ಲಿ ಸೇರಿಸಿರುವುದರಿಂದ ನಿಜವಾದ ವಂಚಿತರಿಗೆ ಅಲ್ಲಿಯೂ ವಂಚನೆ ಆಗುತ್ತದೆ ಎಂಬುದಾಗಿದೆ. ಹಾಗಾಗಿ ಪರಿಶಿಷ್ಟ ಸಮುದಾಯ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳಿಗೂ ಆಯಾ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿದಾಗ ಎಲ್ಲರಿಗೂ ಮೀಸಲಾತಿ ತಲುಪುತ್ತದೆ ಎನ್ನುವುದಾಗಿದೆ.

ವರ್ಣದ ಆಧಾರದ ಮೇಲೆ ಸಾವಿರಾರು ವರ್ಷಗಳ ಕಾಲ ಶೋಷಣೆ ಮಾಡಿದ ಸಿದ್ಧಾಂತವೇ ಇವತ್ತು ಸಂವಿಧಾನ ಮತ್ತು ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಒಟ್ಟಾರೆ ಔದ್ಯೋಗಿಕ ಕ್ಷೇತ್ರಗಳನ್ನು ಗಮನಿಸಿದಾಗ ಸರ್ಕಾರಿ ಉದ್ಯೋಗವು ಕೇವಲ 3ರಿಂದ 4 ಪ್ರತಿಶತ ಮಾತ್ರ. ಇನ್ನುಳಿದ ಶೇ 96ರಿಂದ ಶೇ 97ರಷ್ಟು ಉದ್ಯೋಗವು ಖಾಸಗಿ ಕ್ಷೇತ್ರವನ್ನು ಅವಲಂಬಿಸಿದೆ.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ. ಅತಿಯಾದ ಖಾಸಗೀಕರಣವು ಮೀಸಲಾತಿಯನ್ನು ಪರೋಕ್ಷ ರೀತಿಯಲ್ಲಿ ಮುಗಿಸುವ ಹುನ್ನಾರವಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಸುಮಾರು ಶೇ 30ರಷ್ಟು ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತುಂಬಿಸಲಾಗುತ್ತಿದೆ; ಸರ್ಕಾರಿ ಸ್ವಾಮ್ಯದ ಅನೇಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಇಲ್ಲೆಲ್ಲೂ ಮೀಸಲಾತಿ ಇಲ್ಲ. ಮೀಸಲಾತಿ ಇದ್ದರೂ ಇಲ್ಲದಂತಾಗಿರುವ ಈ ಸಂದರ್ಭದಲ್ಲಿ, ಇರುವ ಮೀಸಲಾತಿಯನ್ನು ಸರಿಯಾಗಿ ಕೊಡಿ ಎಂದು ಕೇಳಬೇಕಾಗಿದೆ. ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸಿ ಎಂದು ಕೇಳಬೇಕಾಗಿದೆ. ಖಾಸಗೀಕರಣ ನಿಲ್ಲಿಸಿ, ಖಾಸಗಿ ಕಂಪನಿಗಳು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಮೀಸಲಾತಿ ಕೊಡಿ ಎಂದು ಒಕ್ಕೊರಲಿನಿಂದ ಕೇಳಬೇಕಾಗಿದೆ. ಇವು ನಮ್ಮ ಪ್ರಬಲ ಬೇಡಿಕೆಗಳಾಗಬೇಕು.

ಶೇ 15ರಷ್ಟು ಇರುವ ಮೀಸಲಾತಿಯು ಕೆಲವು ತೀರಾ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಒಳಮೀಸಲಾತಿ ತಂದರೆ, ಅಲ್ಲಿಯೂ ಬಲಿತರಿಗೆ ಹೆಚ್ಚಾಗಿ ಮೀಸಲಾತಿ ದೊರೆತು ಹಿಂದುಳಿದ ದಲಿತರು ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಳಮೀಸಲಾತಿಯ ಉದ್ದೇಶ ಒಳ್ಳೆಯದಾಗಿದ್ದರೂ ಅದರಿಂದಾಗುವ ನ್ಯೂನತೆಗಳ ಕಡೆಗೆ ಗಮನಹರಿಸಬೇಕಾಗಿದೆ.

ಒಳಮೀಸಲಾತಿಯ ಪರ– ವಿರೋಧ ಬಣಗಳು ಸೃಷ್ಟಿಯಾಗಿ ಒಟ್ಟಾರೆ ಮೀಸಲಾತಿ ವಿರೋಧಿ ಸಿದ್ಧಾಂತದ ಆಶಯಗಳನ್ನು ಈಡೇರಿಸುವಂತಾಗುತ್ತದೆ. ನಮ್ಮ ಹೋರಾಟದ ದಿಕ್ಕು ಬದಲಾಗುವುದು ಬೇಡ. ಮೀಸಲಾತಿಯನ್ನು ಬುಡಸಮೇತ ಕಿತ್ತುಹಾಕುವ ಹುನ್ನಾರ ಈಡೇರದಿದ್ದಾಗ ಒಡೆದು ಆಳುವ ನೀತಿ ಅನುಷ್ಠಾನಕ್ಕೆ ಹೊರಟಿರುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬಾರದ ಹಾಗೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಒಳಜಗಳವು ಸಂವಿಧಾನಕ್ಕೆ ತೋರುವ ಅಗೌರವವಾಗುತ್ತದೆ ಎಂಬುದನ್ನು ಅರಿತು, ಕೈತಪ್ಪಿ ಹೋಗುತ್ತಿರುವ ಮೀಸಲಾತಿಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನ ಪಡೋಣ.

(ಲೇಖಕ ಸಾಮಾಜಿಕ ಕಾರ್ಯಕರ್ತ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು