ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಬರಹ: ಮತೀಯತ್ವಕ್ಕೆ ಕನ್ನಡತ್ವದಲ್ಲಿ ಉತ್ತರ

ಈ ಉತ್ತರವನ್ನು ಬಿತ್ತರಿಸುವ ಹೊಣೆ ನಮ್ಮದಾಗಿದೆ
Last Updated 11 ನವೆಂಬರ್ 2022, 19:31 IST
ಅಕ್ಷರ ಗಾತ್ರ

ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳು. 1956ರ ನವೆಂಬರ್ ಒಂದರಂದು ಅಧಿಕೃತ ಗೊಂಡ ಕರ್ನಾಟಕ ಏಕೀಕರಣದ ಕಾರಣಕ್ಕಾಗಿ ನಮ್ಮಲ್ಲಿ ರಾಜ್ಯೋತ್ಸವವನ್ನು ಅಪಾರ ಉತ್ಸಾಹದಿಂದ ಆಚರಿಸುತ್ತೇವೆ. ಉತ್ಸಾಹದ ಜೊತೆಗೆ ವಿವೇಕವೂ ಮುಖ್ಯ. ಕನ್ನಡ ವಿವೇಕವು ಕನ್ನಡಿಗರ ಬದುಕು ಮತ್ತು ಸಾಹಿತ್ಯದಲ್ಲಿ ಅಭಿವ್ಯಕ್ತಿಗೊಳ್ಳುತ್ತ ಬಂದಿದೆ.

ಕನ್ನಡವೆಂದರೆ ಅದು ಭಾಷೆ ಮಾತ್ರವಲ್ಲ. ಕನ್ನಡ ಎನ್ನುವುದು ಭಾಷೆ, ಭಾವ, ಬುದ್ಧಿ, ಬದುಕು, ಸಂಸ್ಕೃತಿ, ಸಂವೇದನೆ, ಚಿಂತನೆ ಎಲ್ಲವೂ ಹೌದು. ಇಂಥ ಬಹುತ್ವವೇ ನಮ್ಮ ‘ಕನ್ನಡತ್ವ’. ಮತೀಯತ್ವ ಮೇಲುಗೈ ಪಡೆಯುತ್ತಿರುವ ಇಂದಿನ ದಿನಮಾನದಲ್ಲಿ ಕನ್ನಡತ್ವವು ಹೇಗೆ ಉತ್ತರಆಗಬಲ್ಲದು ಎಂಬ ಆಯಾಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ಕನ್ನಡದ ವಿವೇಕವೂ ವಿಸ್ತರಿಸುತ್ತದೆ, ಕನ್ನಡತ್ವದ ತಾತ್ವಿಕ ಶಕ್ತಿಯೂ ಗೋಚರವಾಗುತ್ತದೆ.

ಕನ್ನಡದ ಬೆಳವಣಿಗೆಯಲ್ಲೇ ಒಂದು ರೀತಿಯ ಸೌಹಾರ್ದ ಸಂಯೋಜನೆಯಿದೆ. ಕನ್ನಡ ಭಾಷೆ, ಸಾಹಿತ್ಯವನ್ನು ಕಟ್ಟುವಲ್ಲಿ ವಿವಿಧ ಜಾತಿ, ಮತ, ಧರ್ಮಗಳ ತೊಡಗುವಿಕೆಯಿಂದ ಕನ್ನಡವು ತನಗೆ ತಾನೆ ಜಾತ್ಯತೀತ ವಾಗಿದೆ. ದ್ವೇಷಾತೀತವಾಗಿದೆ. ಕನ್ನಡ ಸಾಹಿತ್ಯವನ್ನು ಸಾರ್ಥಕಗೊಳಿಸಿದ ಆಧುನಿಕ ಪೂರ್ವ ಕವಿಗಳು ಒಂದೇ ಧರ್ಮದವರಲ್ಲ. ಜೈನರು, ವೈದಿಕರು, ವೀರಶೈವ ಲಿಂಗಾಯತರು, ವಚನಕಾರರು, ದಾಸರು ಎಲ್ಲರೂ ಇದ್ದಾರೆ. ಆಧುನಿಕ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮೂಲದ ಕನ್ನಡ ಸಾಹಿತಿಗಳು, ಚಳವಳಿಗಾರರು ಕನ್ನಡವನ್ನು ಕಟ್ಟಿದ್ದಾರೆ. ಮಹಿಳೆಯರು, ತಳಸಮುದಾಯದವರು ಮತ್ತು ಬುಡಕಟ್ಟಿನವರು ಕರ್ನಾಟಕ ಸಂಸ್ಕೃತಿಗೆ ಬಹುತ್ವದ ಬದುಕು ಕೊಟ್ಟಿದ್ದಾರೆ.

ಕನ್ನಡದಲ್ಲಿ ಲಭ್ಯವಾದ ಮೊದಲ ಕೃತಿ ‘ಕವಿರಾಜ ಮಾರ್ಗ’ದ ಒಂದು ಪದ್ಯವು ಪ್ರಜಾಸತ್ತಾತ್ಮಕ ಮೌಲ್ಯ ವನ್ನು ಸಹಿಷ್ಣುತೆಯ ನೆಲೆಯಲ್ಲಿ ಮಂಡಿಸುತ್ತದೆ. ‘ಕಸವರ ವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮಂ ಧರ್ಮಮುಮಂ’ ಅಂದರೆ ಅನ್ಯ‌ವಿಚಾರ ಮತ್ತು ಧರ್ಮವನ್ನು ಸಹಿಸಿಕೊಳ್ಳುವುದು ಬಂಗಾರ ಎಂದರ್ಥ. ಈ ಸಹಿಷ್ಣುತೆಯು ಕನ್ನಡತ್ವದ ದಿಕ್ಸೂಚಿಯಾಗಿದೆ. ಇಂಥ ಅರಿವಿನ ಕನ್ನಡತ್ವವು ಭಾರತೀಯತ್ವವೂ ಆಗುತ್ತದೆ.

ಆದಿಕವಿಯೆಂದೇ ಖ್ಯಾತಿ ಪಡೆದ ಪಂಪ ಮಹಾ ಕವಿಯ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ನುಡಿ ಸಾರ್ವಕಾಲಿಕ ಸಂದೇಶವಾಗಿದೆ. ಅಷ್ಟೇಕೆ ಕನ್ನಡದ ಸಾಹಿತ್ಯದಲ್ಲಿ ಕರ್ಣನ ಮೂಲಕ ಕುಲದ ಪ್ರಶ್ನೆಯನ್ನು ಎತ್ತಿ ಜಾತಿ ತಾರತಮ್ಯ ವಿರೋಧಿಸಿದ ಕೀರ್ತಿ ಪಂಪ ಕವಿಯ ಕಾವ್ಯಕ್ಕೆ ಸಲ್ಲುತ್ತದೆ. ತನ್ನ ಧರ್ಮದೊಳಗಿದ್ದು ಅದನ್ನು ಮೀರಿದ ಮಾನವತ್ವದ ಆಶಯ ಪಂಪ ಕವಿಯಲ್ಲಿ ಕಾಣುತ್ತದೆ.

ಹೀಗೆ ವೃತ್ತಿ ನೆಲೆಯಲ್ಲಿ ವ್ಯಕ್ತವಾಗುತ್ತಿದ್ದ ಪ್ರಜಾಸತ್ತಾತ್ಮಕ ಸಮತೆಯ ಆಶಯಗಳು ಚಳವಳಿ ಪ್ರಜ್ಞೆಯಾಗಿ ಬೆಳೆದದ್ದು ಬಸವಣ್ಣನವರ ನೇತೃತ್ವದಲ್ಲಿ ಸಂಭವಿಸಿದ ‘ವಚನ ಚಳವಳಿ’ಯಲ್ಲಿ. ಇದೊಂದು ಸಾಮಾಜಿಕ ಆಯಾಮದ ಧಾರ್ಮಿಕ ಸ್ವಾತಂತ್ರ್ಯ ಚಳವಳಿ. ನಾಡಿನ ಬಹುಪಾಲು ತಳಸಮುದಾಯ ಮತ್ತು ಮಹಿಳೆಯರನ್ನು ಒಳಗೊಂಡ ಈ ಚಳವಳಿಯ ಫಲಿತವಾಗಿ ಪ್ರಚಲಿತವಾದ ‘ದೇಹವೇ ದೇಗುಲ’, ‘ಶರಣ ಸತಿ ಲಿಂಗ ಪತಿ’ ಎಂಬ ಬಸವಣ್ಣ ಅವರ ತಾತ್ವಿಕತೆಯು ಇವತ್ತಿಗೂ ದೊಡ್ಡ ಆದರ್ಶವಾಗಿದೆ. ದೇವಾಲಯವನ್ನು ದೇಹಕ್ಕೆ ಸ್ಥಳಾಂತರಿಸಿದ ಈ ವೈಚಾರಿಕ ವಿಪ್ಲವವು ದೇವರ ಹೆಸರಿನ ಸ್ಥಾವರ ಜಡತ್ವವನ್ನು ನಿರಾಕರಿಸುತ್ತದೆ. ‘ಶರಣ ಸತಿ ಲಿಂಗ ಪತಿ’ಯೆಂಬ ಉಕ್ತಿಯು ಭಕ್ತಿಯ ಖಾಸಗಿತನವನ್ನು ಪ್ರತಿಪಾದಿಸುತ್ತದೆ. ಇದು ಇಡೀ ವಚನ ಚಳವಳಿಯ ಆದರ್ಶವಾಗಿದೆ. ಆದರೆ ಇಂದು ಬಹಿರಾಡಂಬರವೇ ಭಕ್ತಿ ಎಂಬಂತಾಗಿದೆ. ವಿವಿಧ ಧರ್ಮಗಳ `ಕೆಲವರು’ ಅಧರ್ಮದ ಕೆಲಸಗಳನ್ನು ಧರ್ಮದ ಹೆಸರಲ್ಲಿ ಮಾಡುತ್ತಿದ್ದಾರೆ. ನೈಜ ಧಾರ್ಮಿಕರ ದನಿ ಕ್ಷೀಣವಾಗುತ್ತಿದೆ.

ಕುಮಾರವ್ಯಾಸ ಕವಿಯು ತನ್ನ ಕೃತಿಯಲ್ಲಿ ಮತೀಯತ್ವಕ್ಕೆ ಮಣೆ ಹಾಕದೆ ಸಂಕೀರ್ಣ ಸಮಸ್ಯೆಗಳಿಗೆ ಮುಖಾಮುಖಿಯಾಗಿರುವುದನ್ನೂ ಗಮನಿಸಬೇಕು. ಸಭಾಪರ್ವದಲ್ಲಿ ದ್ರೌಪದಿಯ ಮೂಲಕ ಸ್ಫೋಟಗೊಳ್ಳುವ ಧರ್ಮದ ಪ್ರಶ್ನೆ, ಕರ್ಣಪರ್ವದಲ್ಲಿ ಬರುವ ಯುದ್ಧದ ವ್ಯಾಖ್ಯಾನ ಮತ್ತು ಮನುಷ್ಯ ಸಂಬಂಧಗಳ ನೈತಿಕ ಪ್ರಶ್ನೆಗಳ ಜೊತೆಗೆ ವ್ಯಾಧನನ್ನು ‘ಧರ್ಮವ್ಯಾಧ’ ಎಂದು ಕರೆದು ಧಾರ್ಮಿಕ ಮನ್ನಣೆ ನೀಡುವುದಲ್ಲದೆ ‘ಆಹಾರ ಸಂಸ್ಕೃತಿ ಸ್ವಾತಂತ್ರ್ಯ’ದ ಸಂಕೇತವಾಗಿಸುವುದು ವಿಶೇಷವಾಗಿದೆ.

ಕನಕದಾಸರ ‘ರಾಮಧಾನ್ಯ ಚರಿತೆ’ಯು ವರ್ಗಮೂಲ ಸಮಾಜದ ಒಂದು ಪ್ರತಿಮಾತ್ಮಕ ವ್ಯಾಖ್ಯಾನವಾಗಿದ್ದು ಶ್ರೀರಾಮ ‘ರಾಗಿ’ಯ ಪರವಾಗಿ ನಿಲ್ಲುವ ಮೂಲಕ ಶ್ರಮಿಕ ಸಮುದಾಯಕ್ಕೆ ‘ದೈವಮನ್ನಣೆ’ ದೊರಕಿಸಿದ ವಿಶಿಷ್ಟತೆಯನ್ನು ಮೆರೆದಿದೆ. ಕುಲ ಕುಲವೆಂದು ಹೊಡೆದಾಡುವವರ ಬಗ್ಗೆ ಕನಕದಾಸರು ಎತ್ತುವ ಪ್ರಶ್ನೆಯು ಜಾತಿ ಸಮತೆಯ ಸಂದೇಶವನ್ನು ಸಾರುತ್ತದೆ. ಪುರಂದರ ದಾಸರು ಪುಡಿ ಮೈಲಿಗೆಯನ್ನು ವಿರೋಧಿಸಿದ್ದು ಉಲ್ಲೇಖನೀಯ. ಒಟ್ಟಾರೆ, ದಾಸ ಪರಂಪರೆಯು ರಾಜರಿಗೆ ದಾಸರಾಗದೆ ದೈವಕ್ಕೆ ಮಾತ್ರ ದಾಸರೆಂಬ ನಿಲುವು ತಾಳಿದ್ದು ಪ್ರಭುತ್ವ ದೂರ ತಾತ್ವಿಕತೆಯಾಗಿದೆ.

ಸರ್ವಜ್ಞ ಕವಿಯು ದೈವವನ್ನು ಕಂಡದ್ದು ಅನ್ನದಲ್ಲಿ. ‘ಅನ್ನದೇವರ ಮುಂದೆ ಇನ್ನು ದೇವರು ಉಂಟೆ’ ಎಂದ ಈ ಕವಿ ಎಂದೂ ಮತೀಯತ್ವಕ್ಕೆ ಮಣೆ ಹಾಕಲಿಲ್ಲ.

ಕನ್ನಡದಲ್ಲಿ ನುಡಿದ ಸೂಫಿ ಸಂತರು ಮತ್ತು ತತ್ವಪದ ಕಾರರು ಸದಾ ಧಾರ್ಮಿಕ ಸಾಮರಸ್ಯದ ಸಂವೇದನಾ ಶೀಲರಾಗಿದ್ದರು. ಬಂದೇನವಾಜರಿಗೆ ಸಿದ್ದಪ್ಪ, ನಾಸಿರುದ್ದೀನರಿಗೆ ಹೆಗ್ರಾಸಸ್ವಾಮಿ, ಕಡಕೋಳ ಮಡಿವಾಳಪ್ಪ ಅವರಿಗೆ ಚೆನ್ನೂರು ಜಲಾಲ ಸಾಹೇಬ, ಗೋವಿಂದ ಭಟ್ಟರಿಗೆ ಶಿಶುನಾಳ ಶರೀಫರು ಶಿಷ್ಯರಾಗಿದ್ದನ್ನು ಧಾರ್ಮಿಕ ಸಾಮರಸ್ಯದ ಸಾರ್ಥಕ ಪ್ರತೀಕವೆನ್ನಬಹುದು. ತಾರತಮ್ಯ ಇಲ್ಲದ ಧಾರ್ಮಿಕತೆಯನ್ನು ಬದುಕಿದ ಸೂಫಿ ಸಂತರು ಮತ್ತು ತತ್ವಪದಕಾರರು ಯಾವತ್ತೂ ಸಮಾಜದ ಸೌಹಾರ್ದಕ್ಕೆ ಬದ್ಧರಾಗಿ ಬದುಕಿದರು. ಕುವೆಂಪು ಅವರು ರಾವಣನಿಗೇ ರಾಮತ್ವ ನೀಡಿದ ಸರ್ವೋದಯ ಸಂವೇದನೆಯ ಮಹಾಕವಿ. ‘ನನಗೆ ಯಾವ ಮತದ ಗೋಜೂ ಇಲ್ಲ, ನನ್ನದು ಮನುಜ ಮತ, ವಿಶ್ವಪಥ’ ಎಂದು ಸಾರಿ, ‘ನವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ- ಇವು ಎಲ್ಲರ ಧ್ಯೇಯಮಂತ್ರವಾಗಲಿ ಎಂದು ಆಶಿಸಿದರು. ವರಕವಿ ಬೇಂದ್ರೆಯವರು ‘ಒಳ್ಳೆಯ ಮನಸ್ಸಿನಿಂದ ಒಂದುಗೂಡಿಸುವುದೇ ಧರ್ಮ, ದ್ವೇಷ ದಿಂದ ದೂರವಾಗುವುದೇ ಅಧರ್ಮ’ ಎಂದು ಪ್ರತಿಪಾದಿಸಿದರು. ಸರ್ವೋದಯದಿಂದ ಹಿಡಿದು ದಲಿತ- ಬಂಡಾಯದವರೆಗಿನ ‘ಬಹುಪಾಲು’ ಲೇಖಕ- ಲೇಖಕಿಯರು ಧರ್ಮದ್ವೇಷಕ್ಕೆ ಕೊರಳಾಗಲಿಲ್ಲ, ಮಾನವೀಯತೆಯ ಕರುಳಾದರು. ಹೀಗೆ ಸಮತೆ ಮಮತೆ ಗಳ ಕರುಳ ಕನ್ನಡಿಯಾಗಿ ಮುನ್ನುಡಿಯುವುದೇ ಕನ್ನಡತ್ವ.

ಕನ್ನಡವು ಸಂವೇದನೆಯ ಅದೆಷ್ಟು ವ್ಯಾಪ್ತಿಯನ್ನು ಹೊಂದಿದೆಯೆಂದರೆ, ಅದು ಏಕಕಾಲಕ್ಕೆ ಸ್ಥಳೀಯವೂ ರಾಷ್ಟ್ರೀಯವೂ ಅಂತರರಾಷ್ಟ್ರೀಯವೂ ಆಗುತ್ತದೆ. ಪ್ರಾದೇಶಿಕ ಸಂಸ್ಕೃತಿಗಳನ್ನು ಅಭಿವ್ಯಕ್ತಿಸಿದ ಅಸಂಖ್ಯಾತರ ಮೂಲಕ ಕನ್ನಡವು ಸ್ಥಳೀಯವಾಗಿದೆ. ಅಂತೆಯೇ ಅಂಬೇಡ್ಕರ್, ಗಾಂಧಿ, ಬೋಸ್, ಭಗತ್‍ಸಿಂಗ್, ವಿವೇಕಾನಂದ, ಟ್ಯಾಗೋರ್ ಮುಂತಾದವರನ್ನು ನಮ್ಮವರನ್ನಾಗಿಸಿಕೊಂಡು ಕನ್ನಡಸ್ಥಗೊಳಿಸಿ ರಾಷ್ಟ್ರೀಯ ವಾಗಿದೆ. ದೂರದ ದೇಶದ ಕ್ರಾಂತಿಕಾರಿ ಯುವಕವಿ ಬೆಂಜಮಿನ್ ಮೊಲಾಯಿಸ್‍ ಅವರನ್ನು ಗಲ್ಲಿಗೇರಿಸಿ
ದಾಗ ಮೂರು ನಾಲ್ಕು ತಿಂಗಳಲ್ಲೇ ಅವರ ಬಗ್ಗೆ ನಲವತ್ತ ರಷ್ಟು ಕನ್ನಡ ಕವಿತೆಗಳು ಹುಟ್ಟಿದ್ದು ಕನ್ನಡದ ಅಂತರರಾಷ್ಟ್ರೀಯ ಸಂವೇದನೆಗೆ ಸಾಂಕೇತಿಕ ಸಾಕ್ಷಿಯಾಗಿದೆ. ಹೀಗೆ ಕನ್ನಡತನದ ಸತ್ವಕ್ಕೆ ನೂರಾರು ನಿದರ್ಶನ ನೀಡಬಹುದಾಗಿದೆ.

ಇಷ್ಟೆಲ್ಲ ವಿವರಿಸಲು ಕಾರಣವಿದೆ. ಕನ್ನಡವನ್ನು ಭಾಷೆಯಾಗಿ ಉಳಿಸಿಕೊಳ್ಳುವುದರ ಜೊತೆಗೆ ಕನ್ನಡದಲ್ಲಿ ಅರಳಿದ ಮಾನವೀಯ ಸಂವೇದನೆ ಮತ್ತು ಚಿಂತನೆಗಳನ್ನು ನಮ್ಮದಾಗಿಸಿಕೊಂಡಾಗ ಕನ್ನಡತನಕ್ಕೆ ಗೌರವಕೊಟ್ಟಂತಾಗುತ್ತದೆ. ಇಂದು ನಾವು ಮತೀಯತ್ವದಿಂದ ದೂರವಾದ ಕನ್ನಡತ್ವದ ಪ್ರತಿಪಾದಕರೂ ಪರಿಚಾರಕರೂ ಪರಿಪಾಲಕರೂ ಆಗುವ ಅಗತ್ಯವಿದೆ. ಯಾಕೆಂದರೆ, ಒಂದೇ ಅಲ್ಲ, ಎಲ್ಲ ಧರ್ಮಗಳ ಮೂಲಭೂತವಾದಿ ಮತೀಯತ್ವಕ್ಕೆ ಕನ್ನಡತ್ವದಲ್ಲಿ ಉತ್ತರವಿದೆ. ಈ ಉತ್ತರವನ್ನು ಬಿತ್ತರಿಸುವ ಹೊಣೆ ನಮ್ಮದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT