ಬುಧವಾರ, ಆಗಸ್ಟ್ 10, 2022
21 °C
ನೀರಿನಲ್ಲಿನ ರಾಸಾಯನಿಕವನ್ನು ಸಂಪೂರ್ಣ ತೊಡೆಯುವ ತಂತ್ರಜ್ಞಾನ ಎಷ್ಟರಮಟ್ಟಿಗೆ ಅಳವಡಿಕೆಯಾಗಿದೆ?

ವಿಶ್ಲೇಷಣೆ: ಕೆರೆ ತುಂಬಿಸುವ ಮುನ್ನ...

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ಕೋರಮಂಗಲ- ಚಲ್ಲಘಟ್ಟ ಕಣಿವೆ (ಕೆ.ಸಿ. ವ್ಯಾಲಿ) ಸದಾ ಸುದ್ದಿಯಲ್ಲಿರುತ್ತದೆ. ಇದಕ್ಕೆ ಬೆಂಗಳೂರಿನ ಮಳೆನೀರು ಹರಿಯುವ ಪ್ರಮುಖ ಕಣಿವೆ ಎಂಬುದಷ್ಟೇ ಕಾರಣವಲ್ಲ. ಇಲ್ಲಿ ಮಳೆನೀರಿಗಿಂತ ಹೆಚ್ಚಿಗೆ ಹರಿಯುವುದು ಬೆಂಗಳೂರು ಜಲಮಂಡಳಿ ಸಂಸ್ಕರಿಸಿದ ಕೊಳಚೆ ನೀರು; ಅದೂ ಕೃಷಿಯ ಬಳಕೆಗಾಗಿ. ‌

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 126 ಕೆರೆಗಳನ್ನು ಭರ್ತಿ ಮಾಡುವುದು ಮೊದಲ ಹಂತದ ಗುರಿಯಾಗಿತ್ತು. ಒಟ್ಟು ವೆಚ್ಚ ₹ 1,300 ಕೋಟಿ. ನಿತ್ಯ 40 ಕೋಟಿ ಲೀಟರ್‌ ಸಂಸ್ಕರಿಸಿದ ಕೊಳಚೆ ನೀರನ್ನು ಹರಿಸುವ ಉದ್ದೇಶದೊಂದಿಗೆ ಯೋಜನೆಯ ಅನುಷ್ಠಾನವೂ ಆಯಿತು. ಒಟ್ಟು 83 ಕೆರೆಗಳು ಭರ್ತಿಯಾದವು. ಇವೆಲ್ಲವೂ ಒಂದಕ್ಕೊಂದು ಕೊಂಡಿಯಾಗಿರುವುದು ವಿಶೇಷ. ಅಂದರೆ ಒಂದು ತುಂಬಿದರೆ ಮತ್ತೊಂದಕ್ಕೆ ಕೋಡಿ ಬೀಳುತ್ತದೆ. ಈ ಯೋಜನೆಗೆ ಏಕೆ ಇಷ್ಟು ಮಹತ್ವ ಬಂದಿದೆ ಎಂದರೆ, ಇಡೀ ಜಗತ್ತಿನಲ್ಲಿ ಇಸ್ರೇಲ್ ಹೊರತು ಪಡಿಸಿದರೆ ಸಂಸ್ಕರಿಸಿದ ಕೊಳಚೆ ನೀರನ್ನು ಕೃಷಿಗಾಗಿ ಬಳಸುತ್ತಿರುವುದು ಈ ಕಣಿವೆಯಿಂದಲೇ.

ಎರಡನೇ ಹಂತದ ಯೋಜನೆಗೆ ಈಗ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರ ಅಂದಾಜುವೆಚ್ಚ ₹ 455 ಕೋಟಿ. ಇದನ್ನು ಬಳಸಿಕೊಂಡು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 257 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದೆ. 

ಕೆ.ಸಿ. ವ್ಯಾಲಿ ಯೋಜನೆ ಕುರಿತು ಆರಂಭದಲ್ಲೇ ಅನೇಕ ಸಂದೇಹಗಳಿದ್ದವು. ಮೊದಲನೆಯದಾಗಿ, ಉದ್ದೇಶಿಸಿದಂತೆ ದಿನವಹಿ 40 ಕೋಟಿ ಲೀಟರ್‌ ನೀರನ್ನು ಸಂಸ್ಕರಿಸುವ ಗುರಿಯನ್ನು ತಲುಪಲೇ ಇಲ್ಲ. ಅದು 30 ಕೋಟಿ ಲೀಟರ್ ದಾಟಲೇ ಇಲ್ಲ. ಬಹುಶಃ ಇದು ಅಂಥ ಗಂಭೀರ ಸಮಸ್ಯೆ ಎನ್ನಿಸದು. ಬೆಳ್ಳಂದೂರು ಕೆರೆಯಿಂದ ಸಂಸ್ಕರಿಸಿದ ನೀರು ಮೊದಲು 45 ಕಿಲೊ ಮೀಟರ್ ದೂರದಲ್ಲಿರುವ ಲಕ್ಷ್ಮಿಸಾಗರ ಕೆರೆಗೆ ಹರಿಯಿತು, ಅಲ್ಲಿಂದ ಕೆರೆ ಜಾಲಗಳಿಗೆ ಹರಿಯುವ ನೈಸರ್ಗಿಕ ವ್ಯವಸ್ಥೆಯೇ ಇದೆ.

ಮೊದಲ ಹಂತದಲ್ಲಿ 2018ರಲ್ಲಿ ಈ ಯೋಜನೆ ಫಲಿಸಿದಾಗ, 2011ರಿಂದ ಏಳು ವರ್ಷ ಸತತವಾಗಿ ಬರಗಾಲ ಅನುಭವಿಸಿದ ಜಿಲ್ಲೆಗಳ ರೈತರಿಗೆ ಪುಳಕವಾಗಿದ್ದುಂಟು. ಏಕೆಂದರೆ ಕೆರೆಗಳು ಭರ್ತಿಯಾಗುತ್ತಿದ್ದಂತೆಯೇ ಸುತ್ತಣ ಭೂಮಿಯಲ್ಲಿ ಅಂತರ್ಜಲ ಮಟ್ಟ ಏರಿ ಕೃಷಿಗೆ ಒದಗಿಬಂತು. ವಾಸ್ತವವಾಗಿ ಕೆರೆಯ ನೀರನ್ನು ನೇರವಾಗಿ ಬಳಸಿಕೊಳ್ಳುವ ಉದ್ದೇಶ ಯೋಜನೆಯಲ್ಲಿ ಇರಲಿಲ್ಲ. ಆದರೆ ಸಂಸ್ಕರಿಸಿದ ಕೊಳಚೆ ನೀರಿನಲ್ಲಿ ಭಾರ ಧಾತುಗಳಿವೆ. ಅಲ್ಲದೆ ನೈಟ್ರೇಟ್ ಸಂಯುಕ್ತಗಳೂ ಇವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ಮಾಡಿದಾಗ ಅದು ಗೊಂದಲ ಸೃಷ್ಟಿಸಿತು. ಏಕೆಂದರೆ ಸಾರ್ವಜನಿಕ ಆರೋಗ್ಯದ ಪ್ರಶ್ನೆ ಅದರಲ್ಲಿತ್ತು. ಬೆಳೆಯುವ ಆಹಾರದಲ್ಲೂ ಅವು ಸೇರುತ್ತವೆ ಎಂಬ ವಿಚಾರ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿತು. ಅದು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತು. ಸಂಸ್ಕರಿಸಿದ ನೀರಿನ ಪೂರೈಕೆ ಮಾಡುವುದನ್ನು ಕೋರ್ಟ್ ತಡೆಹಿಡಿಯಿತು. ಆನಂತರ, ಫಾಸ್ಫೇಟ್ ಅಂಶ ತೀರ ನಗಣ್ಯ ಎಂಬುದು ಪರೀಕ್ಷೆಯಿಂದ ಗೊತ್ತಾಗಿರುವುದಾಗಿ ಹೇಳಿದ ಮೇಲೆ ಕೋರ್ಟ್ ಹಸಿರು ನಿಶಾನೆ ತೋರಿತು.

ಬೆಂಗಳೂರಿನ ಕೈಗಾರಿಕೆಗಳು ಬೆಳ್ಳಂದೂರು ಕೆರೆಗೆ ಹರಿಸುತ್ತಿರುವ ಕೊಳಚೆ ನೀರಿನಲ್ಲಿ ಭಾರ ಧಾತುಗಳಾದ ಕ್ರೋಮಿಯಂ, ಕ್ಯಾಡ್ಮಿಯಂ, ನಿಕ್ಕಲ್ ಪ್ರಮಾಣ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿಯೇ ಇರುವುದನ್ನು ಇತ್ತೀಚೆಗೆ ಮಾರಗೊಂಡನಹಳ್ಳಿ, ಹೊಸಕೋಟೆ, ವರ್ತೂರು, ಜಿಗಣಿ, ಭೈರಮಂಗಲ, ಎಲೆ ಮಲ್ಲಪ್ಪಶೆಟ್ಟಿ ಕೆರೆಗಳ ನೀರಿನ ವಿಶ್ಲೇಷಣೆ ಮಾಡಿರುವ ವಿಜ್ಞಾನಿಗಳ ತಂಡ ದೃಢಪಡಿಸಿದೆ. ವಿಶೇಷವಾಗಿ ನವಿಲುಕೋಸು, ಹರಿವೆ ಸೊಪ್ಪು, ಬೀಟ್‍ರೂಟ್, ಟೊಮ್ಯಾಟೊಗಳಲ್ಲಿ ಇವು ಹೆಚ್ಚು ಸಂಚಯಿಸಿರುವುದು ಸಾರ್ವಜನಿಕರನ್ನು ಗಾಬರಿಗೊಳಿಸಿದೆ.

ಈಗಾಗಲೇ 79 ಕಾರ್ಖಾನೆಗಳು ವೃಷಭಾವತಿಯ ನೀರನ್ನು ಕಲುಷಿತಗೊಳಿಸಿ ಅತಿ ಹೆಚ್ಚಿನ ಸೀಸವನ್ನು ಕೊಳಚೆ ನೀರಿಗೆ ಸೇರಿಸಿ ಅದು ಅಲ್ಲಿನ ಹುಲ್ಲಿನಲ್ಲೂ ಕೊನೆಗೆ ಹಸುವಿನ ಹಾಲಿನಲ್ಲೂ ತೂರಿಕೊಂಡಿರುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಈಗ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಣಿವೆಯ ಅನೇಕ ಕೈಗಾರಿಕೆಗಳನ್ನು ಮುಚ್ಚಿಸಲು ಮುಂದಾಗಿದೆ. ಆದರೆ ಈಗಾಗಲೇ ಅಂತರ್ಜಲವನ್ನು ಸೇರಿರುವ ಭಾರ ಧಾತುಗಳನ್ನು ತೊಡೆದು ಹಾಕುವುದು ಹೇಗೆ?

ರಾಜ್ಯ ಸರ್ಕಾರ ಒಂದು ಹಂತದಲ್ಲಂತೂ ಎಚ್ಚೆತ್ತಿದೆ. ಹಸಿರು ನ್ಯಾಯಮಂಡಳಿ ಸೂಚಿಸಿದಂತೆ ಎನ್.ಕೆ.ಪಾಟೀಲರ ನೇತೃತ್ವದಲ್ಲಿ 2011ರಲ್ಲಿ ರಚಿಸಿದ ಸಮಿತಿ, ರಾಜಕಾಲುವೆಗೆ ಚರಂಡಿ ನೀರು ಸೇರಿ ಮಲಿನ ಮಾಡುವುದನ್ನು ತಪ್ಪಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ವಿಶದವಾದ ವರದಿ ನೀಡಿತ್ತು. ಅದನ್ನು ಅನುಷ್ಠಾನಗೊಳಿಸಲು ಕೃಷ್ಣರಾಜ ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗೆ ರಾಜಕಾಲುವೆಯ ದುರಸ್ತಿಯನ್ನು ಮಾಡಲು ಹಾಗೂ ಮನರಂಜನೆಗಾಗಿ ಮತ್ತು ಪಾದಚಾರಿಗಳಿಗೆ ಅವಕಾಶ ಮಾಡಿಕೊಡಲು ಸುಮಾರು ₹ 169 ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ರೂಪಿಸಿದೆ. ಆದರೆ ಸದ್ಯದಲ್ಲಿ ಇದಕ್ಕಿಂತಲೂ ಮುಖ್ಯವಾದದ್ದು ಕೈಗಾರಿಕೆಗಳು ಭಾರ ಧಾತುಗಳನ್ನು ಬೆಳ್ಳಂದೂರು ಕೆರೆಗೆ ಬಿಡದಂತೆ ನಿರ್ಬಂಧಿಸುವುದು.

ಇಲ್ಲಿ ಪ್ರಮುಖವಾಗಿ ಯೋಚಿಸಬೇಕಾದದ್ದು ಜಲಮಂಡಳಿಯು ಕೊಳಚೆ ನೀರನ್ನು ಸಂಸ್ಕರಿಸಿ ಹೊರಬಿಡಲು ಅನುಸರಿಸುತ್ತಿರುವ ತಂತ್ರ ನಿಜಕ್ಕೂ ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವುದು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾರ್ಗದರ್ಶನ ಅನುಸರಿಸುತ್ತಿರುವುದಾಗಿ ಜಲಮಂಡಳಿ ಹೇಳುತ್ತಲೇ ಬಂದಿದೆ. ನೀರಿನಲ್ಲಿ ಸೇರಿರುವ ರಾಸಾಯನಿಕಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ತಂತ್ರಜ್ಞಾನ ಎಷ್ಟರಮಟ್ಟಿಗೆ ಅಳವಡಿಕೆಯಾಗಿದೆ ಎಂಬುದು ಜನಾರೋಗ್ಯದ ದೃಷ್ಟಿಯಿಂದ ಕೇಳಬೇಕಾದ ಪ್ರಶ್ನೆ.

ಕೇಂದ್ರ ಸರ್ಕಾರದ ಸಾರ್ವಜನಿಕ ಆರೋಗ್ಯ ಸಂಸ್ಥೆಯು 2013ರಲ್ಲಿ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿಯೇ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಬೇಕು. ಮೊದಲನೆಯದು, ಇದ್ದಿಲು ಬಳಸಿಕೊಂಡು ತೇಲುಕಣ ಗಳನ್ನು ತೊಡೆದುಹಾಕುವುದು, ಆನಂತರ ಸೋಸಿ ಅತಿ ಸೂಕ್ಷ್ಮ ರಾಸಾಯನಿಕಗಳನ್ನು ಬೇರ್ಪಡಿಸುವುದು, ಕೊನೆಯ ಹಂತದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಪೊರೆಯನ್ನು ಬಳಸಿ ಒತ್ತಡದಲ್ಲಿ ನೀರನ್ನು ಹಾಯಿಸುವುದು. ಇದನ್ನು ರಿವರ್ಸ್ ಆಸ್ಮಾಸಿಸ್ ಎನ್ನುತ್ತಾರೆ. ಸಾಗರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಂತ್ರ ಇದೇ. ಈ ಕೊನೆಯ ಹಂತ ಅತ್ಯಂತ ಮುಖ್ಯವಾದದ್ದು. ಏಕೆಂದರೆ ಕೊಳಚೆ ನೀರಿನಲ್ಲಿ ಮಲದ ಮೂಲಕ ಹೊರಬೀಳುವ ಇ-ಕೋಲಿ ಎಂಬ ಬ್ಯಾಕ್ಟೀರಿಯಗಳಿರುತ್ತವೆ. ಅವನ್ನು ತೊಡೆದುಹಾಕಲು ಈ ತಂತ್ರ ಬಳಸಲೇಬೇಕಾಗುತ್ತದೆ.

ಸದ್ಯದಲ್ಲಿ ಮೂರನೇ ಹಂತದ ಸಂಸ್ಕರಣೆಯ ತಂತ್ರಜ್ಞಾನದ ಅಳವಡಿಕೆಯ ಬಗ್ಗೆ ಜಲಮಂಡಳಿ ಏನೂ ಹೇಳಿಲ್ಲ. ಸಂಸ್ಕರಿಸಿದ ನೀರು ಕೆರೆಯನ್ನು ಭರ್ತಿ ಮಾಡಿದಾಗ ಅದು ಇಂಗಿ ಅಂತರ್ಜಲ ಭಂಡಾರವನ್ನೂ ತಲುಪುತ್ತದೆ. ಕೊಳವೆ ಬಾವಿಯ ನೀರಲ್ಲೂ
ಬ್ಯಾಕ್ಟೀರಿಯ ಅವತರಿಸಲು ಸಾಧ್ಯ. ಕೇಂದ್ರ ಸರ್ಕಾರ ಇದಕ್ಕೆಲ್ಲ ಒಂದು ಮಿತಿಯನ್ನೂ ಸೂಚಿಸಿದೆ. 100 ಮಿಲಿ ಲೀಟರ್ ನೀರಿನಲ್ಲಿ 200 ಇ-ಕೋಲಿ ಬ್ಯಾಕ್ಟೀರಿಯ ಗಳಿದ್ದರೆ ಅದು ಹೆಚ್ಚೇನೂ ದುಷ್ಪರಿಣಾಮ ಬೀರದು. ಆದರೆ ನೀರನ್ನು ಸಂಸ್ಕರಿಸುವಾಗ ಬಳಸುವ ಕ್ಲೋರಿನ್ ಪ್ರಮಾಣದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ಸಾಕು, ರೋಗಕಾರಕ ಬ್ಯಾಕ್ಟೀರಿಯಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ವೃದ್ಧಿಸುತ್ತದೆ. ಸಂಸ್ಕರಿಸಿದ ಕೊಳಚೆ ನೀರಿನಲ್ಲಿ ಯಾವ ಪ್ರಮಾಣದಲ್ಲಿ ಬ್ಯಾಕ್ಟೀರಿಯ ಇದೆ ಎಂಬುದು ವರದಿಯಾಗಿಲ್ಲ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಪರೀಕ್ಷೆಯನ್ನು ತ್ವರಿತವಾಗಿ ಮಾಡಬೇಕಾದ ತುರ್ತಿದೆ.

ಸಂಸ್ಕರಿಸಿದ ಕೊಳಚೆ ನೀರು ಕೂಡ ಕುಡಿಯುವ ನೀರಿನ ಬಣ್ಣವನ್ನೇ ಹೋಲುತ್ತದೆ ಎಂದಮಾತ್ರಕ್ಕೆ ಅದು ಸಂಪೂರ್ಣವಾಗಿ ರಾಸಾಯನಿಕಮುಕ್ತ ಅಥವಾ ಬ್ಯಾಕ್ಟೀರಿಯಮುಕ್ತ ಎಂದು ತಿಳಿಯಬೇಕಾಗಿಲ್ಲ. ಅದನ್ನು ಖಚಿತಪಡಿಸಿಕೊಳ್ಳಲು ವಿಶ್ಲೇಷಣೆಯನ್ನೇ ಮಾಡಬೇಕು. ಏಕೆಂದರೆ ಇದು ಸಾರ್ವಜನಿಕ ಆರೋಗ್ಯದ ಪ್ರಶ್ನೆ. ಸರ್ಕಾರಕ್ಕೆ ಈ ವಿಚಾರದಲ್ಲಿ ದೊಡ್ಡ ಹೊಣೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು