ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಕಟ್ಟುಗಳಾಚೆಗೂ ಇವೆ ಕಾಣ್ಕೆಗಳು

ಕತೆ ಕಟ್ಟುವವರ ನಡುವೆ ಪಥ ಕಟ್ಟುವವರ ಹುಡುಕಬೇಕು
Last Updated 30 ಸೆಪ್ಟೆಂಬರ್ 2020, 20:30 IST
ಅಕ್ಷರ ಗಾತ್ರ
ADVERTISEMENT
""

1980ರಲ್ಲಿ ಭೋಪಾಲ್‍ನ ಭಾರತಭವನದಲ್ಲಿ ಅಧ್ಯಕ್ಷರಾಗಿದ್ದ ಬಿ.ವಿ.ಕಾರಂತರ ಸಹೋದ್ಯೋಗಿ ವಿಭಾ ತನ್ನ ಮನೆಯಲ್ಲಿ ಸುಟ್ಟುಕೊಂಡಾಗ, ಅಲ್ಲೇ ಇದ್ದ ಕಾರಂತರು ಅವಳನ್ನು ರಕ್ಷಿಸಿದ್ದರಿಂದ ಅವರ ಕೈಗಳು ಸುಟ್ಟು ಹೋಗಿರುತ್ತವೆ. ಮರುದಿನ ಪತ್ರಿಕೆಯಲ್ಲಿ ಇಷ್ಟೇ ವರದಿ ಪ್ರಕಟ ಆಗಿರುತ್ತೆ. ಆದರೆ ಒಂದೇ ದಿನದಲ್ಲಿ ಚಿತ್ರಣ ಬದಲಾಗಿ ವಾರಂಟ್ ಇಲ್ಲದೆಯೇ ಕಾರಂತರ ಅರೆಸ್ಟ್ ಆಗುತ್ತೆ.

‘ನೀವೇ ಬೆಂಕಿ ಹಚ್ಚಿದ್ರಿ ಅಂತ ವಿಭಾ ಸ್ಟೇಟ್‍ಮೆಂಟ್ ಕೊಟ್ಟಿದ್ದಾಳೆ. ಇನ್ನರ್ಧ ಗಂಟೇಲಿ ಅವಳು ಸತ್ತೇ ಹೋಗ್ತಾಳೆ. ನಿಜ ಹೇಳಿಬಿಡಿ’ ಎಂದು ಪೊಲೀಸರು ಕಾರಂತರನ್ನು ಒತ್ತಾಯಿಸುತ್ತಾರೆ. ಅವರು ನಡೆದದ್ದನ್ನೇ ಮತ್ತೆ ಮತ್ತೆ ತಿರುಗಿಸಿ ಹೇಳುತ್ತಲೇ ಇದ್ದರು. ಕೊನೆಗೆ ಸಿಟ್ಟಾದ ಪೊಲೀಸ್ ಆಫೀಸರ್, ‘ಹೇಳಿ ಕೇಳಿ ನೀವು ನಾಟಕದೋರು. ಕಥೆ ಕಟ್ಟೋಕೆ ಬರಲ್ವೇನ್ರಿ?’ ಎಂದು ಗುಡುಗಿದ. ಕಾರಂತ್, ‘ಸರ್, ನಾನು ನಡೆದದ್ದನ್ನು ಮಾತ್ರ ಹೇಳಿದ್ದೇನೆ’ ಎಂದಾಗ ‘ನೀವು ಕತೆಕಟ್ಟಿ ಹೇಳದಿದ್ರೆ ನಿಮ್ಮನ್ನು ಏರೋಪ್ಲೇನ್ ಮಾಡ್ತೀವಿ. ಥರ್ಡ್ ಡಿಗ್ರಿ ಉಪಯೋಗಿಸ್ತೀವಿ’ ಎಂದು ಹೆದರಿಸಿದ. ಕಾರಂತರು ಕಥೆ ಶುರು ಮಾಡಿದರು. ಕತೆ ‘ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಬಿಟ್ಟೆ’ ಎಂದು ಮುಗಿಯಿತು. ಹೀಗೆ ಹೇಳಿಸುವಾಗ ನಿಯಮಬಾಹಿರವಾಗಿ ಪತ್ರಕರ್ತರನ್ನೂ ಕೂರಿಸಿಕೊಳ್ಳಲಾಗಿತ್ತು.

ಸವಿತಾ ಬನ್ನಾಡಿ

ಮರುದಿನದ ಪತ್ರಿಕೆಗಳಲ್ಲಿ ಇನ್ನಷ್ಟು ಹೊಲಸುಗಳನ್ನು ಸೇರಿಸಿ ವರದಿ ಬಂತು. ಎಂ.ಪಿ. ಕ್ರಾನಿಕಲ್ ಎಂಬ ಪತ್ರಿಕೆ ಮಾತ್ರ ಇರುವುದನ್ನಷ್ಟೇ ವರದಿ ಮಾಡಿತ್ತು ಎಂದು ಪ್ರೇಮಾ ಕಾರಂತ ತಮ್ಮ ‘ಸೋಲಿಸಬೇಡಾ ಗೆಲಿಸಯ್ಯಾ’ ಆತ್ಮಚರಿತ್ರೆಯಲ್ಲಿ ಬರೆಯುತ್ತಾರೆ.

ಮುಂದೆ ಎಂಟು ವರ್ಷಗಳ ಕಾಲ ಪಡಬಾರದ ಪಾಡನ್ನು, ಅವಮಾನಗಳನ್ನು ಅನುಭವಿಸಿದ್ದನ್ನು ಹೇಳುವ ಪ್ರೇಮಾ, ಕೊನೆಗೂ ಕಾರಂತರನ್ನು ಉಳಿಸಿದ್ದು ‘ಅವರು ನನ್ನನ್ನು ದೇವರಂತೆ ಬಂದು ರಕ್ಷಿಸಿದರು’ ಎಂಬ ವಿಭಾಳ ಕೊನೆಯ ತನಕವೂ ಬದಲಾಗದ ಹೇಳಿಕೆಯೊಂದೇ ಎನ್ನುತ್ತಾರೆ. ಸುಟ್ಟು ಆಸ್ಪತ್ರೆಯಲ್ಲಿದ್ದ ವಿಭಾಳಿಂದ ಕಾರಂತರ ವಿರುದ್ಧ ಹೇಳಿಕೆ ಹೊರಡಿಸಲು ನಿರಂತರ ಪ್ರಯತ್ನ ನಡೆದಾಗಲೂ ಆಕೆ ಸತ್ಯಕ್ಕೆ ಬದ್ಧಳಾಗಿದ್ದಳು. ಆದರೆ, ಕಾರಂತ ಮತ್ತು ಪ್ರೇಮಾರ ಬದುಕಿನಲ್ಲಿ ಯಾವ ತಪ್ಪೂ ಮಾಡದೆ ಕೊಲೆಗಡುಕತನದ ಆಪಾದನೆ, ಜೈಲುವಾಸ, ಹೊಲಸು ಮಾತು, ಅವಮಾನಗಳು ನಡೆದು ಹೋದವಲ್ಲ– ಅವರ ಬಗ್ಗೆ ಎಗ್ಗಿಲ್ಲದೆ ಬರೆದ, ನಿರ್ಣಯ ಕೊಟ್ಟ ಪತ್ರಿಕಾ ಸಮೂಹಕ್ಕೆ ಎಂದಾದರೂ ಪಶ್ಚಾತ್ತಾಪ ಆಗಿದೆಯೇ? ಇಲ್ಲ.

ಈಗ ಅದರ ಮರಿಗಳು ಊರ ತುಂಬ ಪಸರಿಸಿವೆ. ಅದರ ನಡುವೆಯೂ ಎಂ.ಪಿ. ಕ್ರಾನಿಕಲ್‌ ಅಂತಹ ಪತ್ರಿಕೆಗಳು ಎಲ್ಲ ಒತ್ತಡಗಳ ನಡುವೆ ವಾಸ್ತವಕ್ಕೆ ಹತ್ತಿರದ ವರದಿಗೇ ಪ್ರಾಶಸ್ತ್ಯ ಕೊಡುವುದನ್ನು ನಿಲ್ಲಿಸಿಲ್ಲ. ದೃಶ್ಯ ಮಾಧ್ಯಮಗಳು ಎಲ್ಲಾ ಮೇರೆ ಮೀರಿ ವರ್ತಿಸುತ್ತಿರುವಾಗಲೂ ಅಲ್ಲೂ ನೈತಿಕ ಪತ್ರಿಕೋದ್ಯಮಕ್ಕಾಗಿ ಜೀವ, ಉಸಿರು ಕೊಡುವವರು ತಾವು ಅಪ್ರಸ್ತುತರಾದರೂ ಸರಿ ಎಂದು ಮುಂದುವರಿದಿದ್ದಾರೆ.

ಈ ಸಂದರ್ಭದಲ್ಲಿ ವಚನಗಳ ಮೂರು ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ಮೊದಲನೆಯದು ‘ಭಕ್ತಿ ಎಂಬುದು ತೋರಿ ಉಂಬುವ ಲಾಭ’, ಇನ್ನೊಂದು ‘ಭಕ್ತಿ ಎಂಬುದ ಮಾಡಬಾರದು, ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು’. ಮೂರನೆಯದು, ‘ಶುದ್ಧ ಭಕ್ತಿಯನರಿತು ನಡೆದುದು ಬಟ್ಟೆ(ದಾರಿ)ಯಾಗದೇ? ನುಡಿದುದು ಸಿದ್ಧಿಯಾಗದೇ?’. ಇದು ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿರುವ ಹಲವು ರೀತಿಯ ಬದುಕುಗಳನ್ನೂ ಪ್ರತಿನಿಧಿಸುತ್ತಿದೆ. ಒಂದೆಡೆ ಎಲ್ಲವೂ ಲಾಭಕ್ಕಾಗಿ ಯಾವ ಲಜ್ಜೆಯೂ ಇಲ್ಲದೆ ಸರಕಾಗುತ್ತದೆ. ಭಕ್ತಿ ಎಂಬ ಜಾಗದಲ್ಲಿ ಏನನ್ನು ಬೇಕಾದರೂ ಹಾಕಿ. ಜಾತಿ, ಮತ, ಸಿದ್ಧಾಂತ, ದೇಶ, ಪ್ರೀತಿ, ಭೀತಿ, ಕಾಯಿಲೆ, ಸಾವು... ಮೆರೆಯುವ, ಮೊರೆಯುವ ಬಯಕೆಗಳನ್ನೆಲ್ಲಾ ಇದು ಪೂರೈಸಬೇಕು. ಆಳುವ ಅಧಿಕಾರವನ್ನು ಇದು ಒದಗಿಸಬೇಕು. ಸುತ್ತಲಿನ ಜನ ಬೆರಗಾಗುವಂತೆ ಗತ್ತು ಗೈರತ್ತು ಪ್ರದರ್ಶಿಸಬೇಕು. ಒಟ್ಟಿನಲ್ಲಿ ತನ್ನೊಳಗಿನ ಸರ್ವಾಧಿಕಾರಿ ಸಂತೃಪ್ತಗೊಳ್ಳಬೇಕು. ಹೀಗೆ ಬದುಕಬೇಕೆಂದು ಬಯಸುವ ಎಲ್ಲ ಗಂಡು ಹೆಣ್ಣುಗಳ ಒಳಗಿನ ಆಸೆ ಇದು.

ಇನ್ನೊಂದು ರೀತಿಯಲ್ಲಿ ಬದುಕುವವರೂ ಇದ್ದಾರೆ. ಇವರಿಗೆ ತಾವು ನಂಬಿರುವ ಬದುಕಿನ ಮಾರ್ಗವೆಂದರೆ, ಅದು ಪ್ರತಿಕ್ಷಣವೂ ತನ್ನನ್ನು ತಾನೇ ಪರೀಕ್ಷೆಗೆ ಒಳಪಡಿಸಿಕೊಳ್ಳುವ ಕಠಿಣ ಮಾರ್ಗ. ಅದು ಗರಗಸದಂತೆ ಕೊಯ್ಯುತ್ತಾ ತನ್ನೊಳಗನ್ನು ತೋರುತ್ತಲೇ ಇರುತ್ತದೆ. ‘ನೀನು ನಂಬಿದ ದಾರಿಯಲ್ಲಿ ನಡೆಯುತ್ತಿರುವೆಯಾ?’ ಎಂದು ಕೇಳುತ್ತಲೇ ಇರುತ್ತದೆ. ಇವರು ಉತ್ತರಿಸ ಬಯಸುವುದು ಲೋಕಕ್ಕಲ್ಲ, ತನಗೇ. ಹೀಗಾಗಿ, ತೋರಿ ಉಂಬುವ ಲಾಭದವರು ಬಳಸುವ ಎಲ್ಲಾ ಲಾಭದ ಕಾರ್ಡುಗಳನ್ನು ಇವರು ನಿರಾಕರಿಸಿ, ಪ್ರಾಮಾಣಿಕವಾದ, ಸರಳವಾದ ಪಥದಲ್ಲೇ ತೆರಳಬಯಸುತ್ತಾರೆ.

ಮೂರನೆಯ ರೀತಿಯ ಜನ ಮೊದಲಿನವರಿಗಿಂತ ಅಪಾಯಕಾರಿಯಾದವರು. ಮೊದಲಿನವರ ಲೋಭ ಢಾಳಾಗಿ ಕಣ್ಣಿಗೆ ಕಾಣಿಸುತ್ತಿರುತ್ತದೆ. ಆದರೆ ಇವರಾದರೋ ಎರಡನೆಯವರ ರೀತಿಯ ವೇಷ ತೊಟ್ಟ ವೇಷಧಾರಿಗಳು. ಹೊರಗೆ ಪ್ರಗತಿಯ ಮಾತಾಡುತ್ತ ಒಳಗೆ ವಿಗತಿಯ ಪಾತಾಳಕ್ಕೆ ಕುಸಿದಿರುವವರು. ನುಡಿಯಲ್ಲಿರುವ ಹಸನು ನಡೆಯಲ್ಲಿ ಇರದೇ, ಬೆಳಗಿನಲ್ಲಿ ಸಂಕಟದಲ್ಲಿರುವವರಿಗೆ ಸಂಗಾತಿಗಳಂತೆ ನಟಿಸಿ, ಕತ್ತಲಿನಲ್ಲಿ ತಮ್ಮ ತಮ್ಮ ಜಾತಿ, ಪಂಥದ ಟ್ರಂಪ್‍ಕಾರ್ಡ್ ಬಳಸಿ, ಹಗಲಿನಲ್ಲಿ ವಿರೋಧಿಸಿದವರ ಮನೆಯ ಬಾಗಿಲನ್ನು ರಾತ್ರಿ ಕಾಯುವವರು. ಬಹುಶಃ ಇದು ಎಲ್ಲ ಕಾಲದಲ್ಲೂ ಇದ್ದ ದಿಟ. ಆದರೆ ನಮ್ಮ ನಮ್ಮ ಕಾಲದಲ್ಲಿ ಇವುಗಳ ಏರುಪೇರು, ಅಬ್ಬರಗಳಲ್ಲಿ ಆಗಾಗ ವ್ಯತ್ಯಾಸಗಳಾಗಬಹುದೇನೋ.

ಜಾಗತೀಕರಣಕ್ಕೆ ಮುಕ್ತಗೊಂಡ ಈ ಮೂವತ್ತು ವರ್ಷಗಳಲ್ಲಿ ‘ತೋರಿಕೆ’ಯ ಬದುಕು ಅನಿವಾರ್ಯ ಎಂಬಷ್ಟು ಮುಂದೆ ಬಂದಿದೆ. ಹೀಗಾಗಿ, ‘ಹೇಗಾದರೂ ಸರಿ, ಏನಾದರೂ ಆಗು’ ಎಂಬ ಒತ್ತಡ ಮತ್ತು ಬಯಕೆ ಸಾಮಾಜಿಕ ಮನ್ನಣೆ ಪಡೆದುಕೊಂಡಿದೆ. ಮೊದಲೆಲ್ಲ, ಗುರಿಯಷ್ಟೇ ದಾರಿಯೂ ಮುಖ್ಯ ಎಂದು ನೀತಿ ಪಾಠ ಹೇಳಲಾಗುತ್ತಿತ್ತು. ಆದರೀಗ ಗುರಿ ತಲುಪಲು ಯಾವ ದಾರಿಯಾದರೂ ಸರಿ, ಅದನ್ನು ಸರಿ ಎಂಬಂತೆ ಪ್ರಸ್ತುತಪಡಿಸು ಎಂಬುದು ಆದರ್ಶವಾಗಿದೆ. ಬಹಳ ಆಶ್ಚರ್ಯ ಎಂದರೆ, ಇದನ್ನೆಲ್ಲಾ ಸಾಧಿಸಿಕೊಳ್ಳಲು ಬಳಸುವ ಪದಗಳು ಒಂದೋ ವಿಪರೀತ ಭಾವುಕವಾಗಿರುತ್ತವೆ, ಇಲ್ಲವೇ ಭಯಂಕರ ನೈತಿಕ ಲೇಪ ಮೆತ್ತಿಕೊಂಡಿರುತ್ತವೆ. ತಾವು ತುಳಿಯುವ ಅನೈತಿಕ ದಾರಿಯನ್ನು ಸಮರ್ಥಿಸಲು ನೈತಿಕತೆಯನ್ನೇ ಮೈವೆತ್ತಂತೆ ಅಭಿನಯಿಸುವುದು ಬಹಳ ತಮಾಷೆಯಾಗಿರುತ್ತದೆ.

ದೇವಾಲಯವೊಂದರ ಮೇಲೆ ಅನ್ಯಧರ್ಮದ ಬಾವುಟ ಹಾರಿದಾಗ (ಹಾರಿಸಿದವರು ಸ್ವಧರ್ಮದವರೇ ಎಂದು ಆಮೇಲೆ ತಿಳಿಯುತ್ತದೆ) ಮೈಮೇಲೆ ಬೆಂಕಿ ಬಿದ್ದಂತೆ ಸುದ್ದಿ ಮಾಡುವವರು, ಕಾಶ್ಮೀರದ ದೇವಾಲಯದೊಳಗೇ ಬಾಲೆಯೊಬ್ಬಳ ಅತ್ಯಾಚಾರವಾದಾಗ ಏನೂ ಆಗದವರಂತೆ ಸುಮ್ಮನಿರಬಲ್ಲರು. ಇದು ಕವಿ ಜನ್ನನ ಮಾತಿನಲ್ಲಿ ಹೇಳುವುದಾದರೆ ‘ಪಾಪದ ಜೋಳದ ಬೆಳೆಗೆ ಬೆದರುಬೊಂಬೆ ಕಟ್ಟಿದ ರೀತಿಯಲ್ಲಿ’ ಇರುವ ಧೋರಣೆ. ಪಾಪಕೃತ್ಯಗಳನ್ನು ಬೆಳಕಿಗೆ ತರಬೇಕಾದವರೇ ಅದನ್ನು ರಕ್ಷಿಸುವ ಅಧಃಪತನ. ಇದನ್ನು ಮಾಧ್ಯಮಗಳಲ್ಲಷ್ಟೇ ಅಲ್ಲ ಎಲ್ಲೆಡೆ ಕಾಣಬಹುದು. ಆದರೆ, ಪ್ರತೀ ಕಾಲವೂ ಪ್ರತಿದಾರಿಗಳನ್ನೂ ತೋರಿಸಿದೆ.

ಪಿ.ಸಾಯಿನಾಥ್ ಕೃಷಿ ಸಂದರ್ಭದಲ್ಲಿ ಹೇಳಿದ್ದನ್ನು ಸಂದರ್ಭದಾಚೆ ಅನ್ವಯಿಸಿದರೆ ಅಂತಹ ದಾರಿಯೂ ಕಂಡೀತು. ಕೇರಳದ ಭತ್ತ ಬೆಳೆವ ರೈತರು ಕಾರ್ಪೊರೇಟ್ ಕಂಪನಿಗಳ ವಂಚನೆಗೆ ಬಲಿಯಾಗಿ ವೆನಿಲಾ ಬೆಳೆದು ಆತ್ಮಹತ್ಯೆಗೆ ಬಲಿಯಾದರೆ, ಇನ್ನೊಂದೆಡೆ ಉಳುವ ಭೂಮಿಯೇ ಇಲ್ಲದ 43 ಲಕ್ಷ ಮಹಿಳೆಯರು ಕೈಜೋಡಿಸಿ ‘ಕುಡುಂಬಶ್ರೀ’ ಎಂಬ ಸಂಘಟನೆಯಡಿ ‘ಸಮುದಾಯ ಕೃಷಿ’ ಮಾಡುತ್ತಾರೆ. ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರ ಲಾಭ ಪಡೆದಿದ್ದಾರೆ. ಇಂತಹ ಹಂಗಿಲ್ಲದ ಪಥಗಳು ಮತ್ತು ದಿಟವನ್ನು ಬಿಡದ ವಿಭಾಳಂತಹವರು ಇಂದು ಒಗ್ಗೂಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT