ಗುರುವಾರ , ಅಕ್ಟೋಬರ್ 28, 2021
18 °C
ಈ ಹೆಮ್ಮೆಯ ಕಂಪನಿ ವಿರುದ್ಧ ಮಾಡಿರುವ ದಾಳಿಯು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ

ವಿಶ್ಲೇಷಣೆ: ಇನ್ಫೊಸಿಸ್‌; ಟೀಕಾಸ್ತ್ರ ವೃತ್ತಾಂತ

ಪ್ರೊ. ಬಿ.ಕೆ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಮುಖವಾಣಿಯಾದ ‘ಪಾಂಚಜನ್ಯ’ ನಿಯತಕಾಲಿಕವು ರಾಷ್ಟ್ರದ ಹೆಮ್ಮೆಯ ಕಂಪನಿಯಾದ ಇನ್ಫೊಸಿಸ್ ವಿರುದ್ಧ ಟೀಕಾಸ್ತ್ರ ಝಳಪಿಸಿ ಮುಗಿಬಿದ್ದಿದೆ. ಇನ್ಫೊಸಿಸ್ ಅಭಿವೃದ್ಧಿಪಡಿಸಿದ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪೋರ್ಟಲ್‌ಗಳಲ್ಲಿನ ಲೋಪಗಳ ಕಾರಣದಿಂದಾಗಿ, ದೇಶದ ಅರ್ಥ ವ್ಯವಸ್ಥೆಯ ಮೇಲೆ ತೆರಿಗೆ ಪಾವತಿದಾರರು ಹೊಂದಿದ್ದ ವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ; ಯಾವುದಾದರೂ ದೇಶವಿರೋಧಿ ಶಕ್ತಿಗಳು ಇನ್ಫೊಸಿಸ್‌ ಮೂಲಕ ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆ ತರಲು ಯತ್ನಿಸುತ್ತಿರಬಹುದೇ ಎಂದು ಲೇಖನದಲ್ಲಿ ಪ್ರಶ್ನೆ ಮಾಡಲಾಗಿದೆ.

ಸಮಾಜದಲ್ಲಿ ಜಾತಿದ್ವೇಷ ಬಿತ್ತುವ ಕೆಲವು ಸಂಘಟನೆಗಳು ಕಂಪನಿಯ ಅನುದಾನದ ಪ್ರಯೋಜನ ಪಡೆದಿವೆ ಎಂದು ಹೇಳಲಾಗಿದೆ. ನಕ್ಸಲೀಯರು, ಎಡಪಂಥೀಯರು ಮತ್ತು ತುಕ್ಡೆ–ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡಿದ ಆರೋಪವೂ ಇನ್ಫೊಸಿಸ್‌ ಮೇಲೆ ಇದೆ ಎಂದೂ ಉಲ್ಲೇಖವಾಗಿದೆ. ಕಂಪನಿಯು ರೂಪಿಸಿದ ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿನ ಕೆಲವು ತಾಂತ್ರಿಕ ತೊಂದರೆಗಳನ್ನೇ ನೆಪ ಮಾಡಿಕೊಂಡು ಈ ಮುಖಪುಟ ಲೇಖನವನ್ನು ಪ್ರಕಟಿಸಲಾಗಿದೆ.

ಹೀಗೆ ಇನ್ಫೊಸಿಸ್ ಕಂಪನಿಯನ್ನು ಗುರಿಯಾಗಿಸಿ ಕೊಂಡು ಆರೋಪ ಮಾಡುವಾಗ ಅನಗತ್ಯವಾಗಿ ಇನ್ಫೊಸಿಸ್ ಟ್ರಸ್ಟ್ ಅನ್ನೂ ಅದರೊಟ್ಟಿಗೆ ಎಳೆದು ತರಲಾಗಿದೆ. ಇನ್ಫೊಸಿಸ್ ಟ್ರಸ್ಟ್ ಮೆಚ್ಚುಗೆಗೆ ಪಾತ್ರವಾಗುವಂತಹ ಕಾರ್ಯಯೋಜನೆಗಳಿಗೆ ಅನುದಾನ ನೀಡುತ್ತಿರುವುದನ್ನು ಕಡೆಗಣಿಸಿ ಈ ಆರೋಪ ಮಾಡಿರುವುದು ಸಮರ್ಥನೀಯವಾದುದಲ್ಲ. ಉದಾಹರಣೆಗೆ, ಪ್ರಾಚೀನ ಭಾರತದ ಅನನ್ಯವಾದ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ಮಹತ್ವದ ಕಾರ್ಯಯೋಜನೆಗಳಿಗೆ ಈ ಟ್ರಸ್ಟ್ ಅನುದಾನ ನೀಡಿದೆ.

ತಾನು ತೆರೆಮರೆಯಲ್ಲಿದ್ದು ಕಂಪನಿಯ ವಿರುದ್ಧ ಆರ್‌ಎಸ್ಎಸ್ ಮಾಡಿರುವ ಈ ದಾಳಿಯು ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲದೆ, ಆರ್‌ಎಸ್ಎಸ್‌ನ ನಿಜವಾದ ಕಾರ್ಯಸೂಚಿಯೇ ಬೇರೆ ಹಾಗೂ ಅದು ತನ್ನನ್ನು ಸಾರ್ವಜನಿಕವಾಗಿ ಬಿಂಬಿಸಿಕೊಳ್ಳುವ ರೀತಿಯೇ ಬೇರೆ ಎಂಬುದನ್ನೂ ಇದು ಜಗಜ್ಜಾಹೀರುಗೊಳಿಸಿದೆ. ಈ ಲೇಖನವು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ‘ಆರ್‌ಎಸ್ಎಸ್ ಒಂದು ಸಾಂಸ್ಕೃತಿಕ ಸಂಘಟನೆ. ಸಮಾಜದಲ್ಲಿ ಆಗುತ್ತಿರುವ ಧ್ರುವೀಕರಣವೂ ಸೇರಿದಂತೆ ಯಾವುದೇ ರಾಜಕೀಯ ವಿಷಯಕ್ಕೂ ಸಂಘಟನೆಗೂ ಸಂಬಂಧವೇ ಇಲ್ಲ. ಅದು ಸಂಪೂರ್ಣ ರಾಷ್ಟ್ರವಾದಿ ಸಂಘಟನೆ. ವಿದೇಶಿ ನಿಧಿಯನ್ನು ನಿರೀಕ್ಷಿಸುವ ಗೋಜಿಗೆ ಹೋಗದೆ ತನ್ನ ಪಾವಿತ್ರ್ಯ ಕಾಪಾಡಿಕೊಂಡಿದೆ’ ಎಂದು ಆರ್‌ಎಸ್ಎಸ್ ಸ್ಪಷ್ಟನೆ ಕೊಟ್ಟಿದೆ. ಅಲ್ಲದೇ, ಪಾಂಚಜನ್ಯವು ಆರ್‌ಎಸ್ಎಸ್ ಮುಖವಾಣಿಯಲ್ಲ ಎಂದೂ ಹೇಳಿದೆ. 

ಇದು ನಾಮಕಾವಸ್ತೆಯ ಸ್ಪಷ್ಟನೆಯಷ್ಟೆ. ವಾಸ್ತವದಲ್ಲಿ, ‘ಪಾಂಚಜನ್ಯ’ ಮತ್ತು ‘ದ ಆರ್ಗನೈಜರ್’ ಪತ್ರಿಕೆಗಳು ಬಹಳ ಹಿಂದಿನಿಂದಲೂ ಆರ್‌ಎಸ್ಎಸ್ ಮುಖವಾಣಿಗಳೆಂದೇ ಗುರುತಿಸಿಕೊಂಡಿವೆ. ಈ ಪತ್ರಿಕೆಗಳಿಗೂ ತನಗೂ ಸಂಬಂಧವಿದೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಧೈರ್ಯವನ್ನು ಆರ್‌ಎಸ್ಎಸ್ ಏಕೆ ಮಾಡಬಾರದು? ಯಾವುದೇ ಲೇಖಕ ಯಾವ ಪೂರ್ವಸೂಚನೆಯೂ ಇಲ್ಲದೆ ಹಾಗೂ ಸಂಪಾದಕರ ಸಮ್ಮತಿ ಇಲ್ಲದೆ ಇಷ್ಟು ಸುದೀರ್ಘವಾದ ಮುಖಪುಟ ಲೇಖನವನ್ನು ಬರೆಯಲು ಸಾಧ್ಯವೇ? ಆರ್‌ಎಸ್ಎಸ್ ಸ್ಪಷ್ಟನೆಗೆ ಪೂರಕವಾಗಿ, ‘ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ವೈಯಕ್ತಿಕವಾದವು’ ಎಂಬ ಸೂಚನೆಯನ್ನೇನಾದರೂ ಲೇಖನದೊಂದಿಗೆ ಹಾಕಲಾಗಿದೆಯೇ? ಈ ಲೇಖನ ಪ್ರಕಟಿಸಿದ್ದರ ಸಂಬಂಧವಾಗಿ ಆರ್‌ಎಸ್ಎಸ್ ಮತ್ತು ‘ಪಾಂಚಜನ್ಯ’ ಕ್ಷಮೆ ಕೋರಬೇಕಿತ್ತು.

ಭಾರತವು ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಎಂ.ಎಸ್. ಗೋಲ್ವಾಲ್ಕರ್ ಅವರು ಸಂಘಟನೆಯು ‘ರಾಜಗುರು’ವಿನಂತೆ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಿದ್ದರಾದರೂ ಅಧಿಕಾರ ರಾಜಕಾರಣದಲ್ಲಿ ಭಾಗಿಯಾಗುವ ಯಾವ ಆಸಕ್ತಿಯನ್ನೂ ಆರ್‌ಎಸ್ಎಸ್ ವ್ಯಕ್ತಪಡಿಸಿರಲಿಲ್ಲ. ಕೆ.ಆರ್.ಮಲ್ಕಾನಿ ಅವರು ‘ದ ಆರ್ಗನೈಜರ್’ನಲ್ಲಿ 1949ರ ಡಿಸೆಂಬರ್‌ನಲ್ಲಿ ‘ಹೊಸ ಸರ್ಕಾರದ ಭಾರತೀಯವಲ್ಲದ ಮತ್ತು ಭಾರತ ವಿರೋಧಿಯಾದ ಕಾರ್ಯನೀತಿಗಳಿಗೆ ತಡೆಯೊಡ್ಡಲು ಸಂಘವು ರಾಜಕಾರಣದಲ್ಲಿ ಪಾಲ್ಗೊಳ್ಳಬೇಕು... ಇದಕ್ಕಾಗಿ ಅದು ರಾಜಕೀಯ ಘಟಕವೊಂದನ್ನು ಬೆಳೆಸಬೇಕು’ ಎಂದು ಬರೆದಿದ್ದರು. ವಿಪರ್ಯಾಸವೆಂದರೆ, ಸಂಘಟನೆಯ ಕೇಂದ್ರಗುರಿಯಾದ ‘ಹಿಂದೂ ರಾಷ್ಟ್ರ’ ನಿರ್ಮಾಣದ (ಇದನ್ನೇ ಸಾವರ್ಕರ್‌ ಮತ್ತು ಗೋಲ್ವಾಲ್ಕರ್‌ ಅವರು ‘ಹಿಂದುತ್ವ’ ಎಂದು ಕರೆದಿದ್ದು) ಕಲ್ಪನೆಯೇ ಸ್ಪಷ್ಟವಾಗಿ ‘ರಾಜಕಾರಣ’ವಾಗಿತ್ತು.

ಇಷ್ಟಾದರೂ ಹಿಂದುತ್ವವು ‘ರಾಜಕೀಯೇತರ’ ಎಂಬ ಭ್ರಮೆಯನ್ನು ಸಮಾಜದಲ್ಲಿ ಹರಡಿ, ಹಿಂದುತ್ವವನ್ನು ಟೀಕಿಸುವುದೇ ‘ರಾಜಕೀಯ’ ಎಂಬ ನಂಬಿಕೆಯನ್ನು ಮೂಡಿಸಲಾಗಿದೆ.

2005ರಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಎಲ್.ಕೆ.ಅಡ್ವಾಣಿ ಅವರು ವಿಮರ್ಶಾತ್ಮಕವಾಗಿ ಮಾಡಿದ ಉಲ್ಲೇಖವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ‘ಪಕ್ಷವು ಯಾವುದೇ ರಾಜಕೀಯ ನಿರ್ಧಾರವನ್ನು ಅಥವಾ ಸಂಘಟನಾತ್ಮಕ ನಿರ್ಧಾರವನ್ನು ಆರ್‌ಎಸ್ಎಸ್ ಒಪ್ಪಿಗೆ ಇಲ್ಲದೇ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ’ ಎಂದು ಅವರು ಹೇಳಿದ್ದರು. ಇದಕ್ಕೆ ಮುನ್ನ, ಆರ್‌ಎಸ್ಎಸ್ ಮುಖ್ಯಸ್ಥರಾಗಿದ್ದ ಕು.ಸೀ.ಸುದರ್ಶನ್ ಅವರು 2005ರ ಟಿ.ವಿ. ಸಂದರ್ಶನವೊಂದರಲ್ಲಿ, ‘ವಾಜಪೇಯಿ ಮತ್ತು ಅಡ್ವಾಣಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಜಾಗ ತೆರವು ಮಾಡಬೇಕು’ ಎಂದಿದ್ದರು. ಇದಕ್ಕೆ ಪ್ರತಿಯಾಗಿ, ‘ಪಕ್ಷದ ವಿಚಾರಗಳಲ್ಲಿ ಆರ್‌ಎಸ್ಎಸ್ ತಲೆಹಾಕಬಾರದು’ ಎಂದು ಅಡ್ವಾಣಿ ತಿರುಗೇಟು ನೀಡಿದ್ದರು. ಆದರೆ ಹಾಗೆ ಹೇಳಿದ ಅಡ್ವಾಣಿ ಅದೇ ಡಿಸೆಂಬರ್‌ನಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು!

ಇನ್ನು ವಿದೇಶಿ ಹಣಕಾಸು ದೇಣಿಗೆಯ ವಿಷಯಕ್ಕೆ ಬಂದರೆ ಆರ್‌ಎಸ್ಎಸ್, ತನ್ನ ಕಾರ್ಯಕರ್ತನಾಗಿದ್ದ, ಅಮೆರಿಕ ಮೂಲದ ವಿಶ್ವಬ್ಯಾಂಕ್ ಉದ್ಯೋಗಿಯಾಗಿದ್ದ ವಿನೋದ್ ಪ್ರಕಾಶ್ ಅವರು 1988ರಲ್ಲಿ ಸ್ಥಾಪಿಸಿದ ‘ಇಂಡಿಯಾ ಡೆವಲಪ್‌ಮೆಂಟ್ ಆ್ಯಂಡ್ ರಿಲೀಫ್ ಫಂಡ್‌’ನ (ಐಡಿಆರ್‌ಎಫ್) ದೊಡ್ಡ ಫಲಾನುಭವಿ. ಅಮೆರಿಕದಲ್ಲಿದ್ದ ಭಾರತೀಯ ಮೂಲದ ಪ್ರಭಾವಿ ಸಾಫ್ಟ್‌ವೇರ್ ವೃತ್ತಿಪರರು ಮುಂಚೂಣಿ ಬ್ಲೂಚಿಪ್ ಕಂಪನಿಗಳಾದ ಸಿಸ್ಕೊ, ಸನ್ ಮೈಕ್ರೊ ಸಿಸ್ಟಮ್ಸ್, ಹ್ಯೂಲೆಟ್ ಪ್ಯಾಕರ್ಡ್ ಮತ್ತಿತರ ಕಂಪನಿಗಳನ್ನು ಆರ್‌ಎಸ್ಎಸ್‌ಗೆ ದೇಣಿಗೆ ನೀಡುವಂತೆ ಮನವೊಲಿಸಿದರು ಎಂಬ ಮಾತಿದೆ. ಐಡಿಆರ್‌ಎಫ್, 1994-2000ದ ಅವಧಿಯಲ್ಲಿ ಸಂಘ ಪರಿವಾರದ ಸಂಘಟನೆಗಳಿಗೆ 40 ಲಕ್ಷ ಡಾಲರ್‌ಗಳನ್ನು ದೇಣಿಗೆಯಾಗಿ ನೀಡಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಇತರ ಭಾರತೀಯ ವೃತ್ತಿಪರರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಕಲಾವಿದರು ಮತ್ತು ಬುದ್ಧಿಜೀವಿಗಳನ್ನು ಒಳಗೊಂಡ ‘ಕ್ಯಾಂಪೇನ್‌ ಟು ಸ್ಟಾಪ್ ಫಂಡಿಂಗ್ ಹೇಟ್’ 2002ರ ನವೆಂಬರ್‌ನಲ್ಲಿ ಅಂಕಿ ಅಂಶಗಳನ್ನೊಳಗೊಂಡ ‘ಎ ಫಾರಿನ್ ಎಕ್ಸ್‌ಚೇಂಜ್ ಆಫ್ ಹೇಟ್: ಐಡಿಆರ್‌ಎಫ್’ ಶೀರ್ಷಿಕೆಯಡಿಯಲ್ಲಿ 91 ಪುಟಗಳ ವರದಿಯನ್ನು ಪ್ರಕಟಿಸಿತು. ಅದರ ಪ್ರಕಾರ, ಶೇ 83ರಷ್ಟು ದೇಣಿಗೆಯು ಆರ್‌ಎಸ್ಎಸ್, ವಿಎಚ್‌ಪಿಯಂತಹ ಮೂಲಭೂತವಾದಿ ಸಂಘಟನೆಗಳಿಗೆ, ಶೇ 2ರಷ್ಟು ಮಾತ್ರ ಜಾತ್ಯತೀತ ಸಂಘಟನೆಗಳಿಗೆ ಸಂದಾಯವಾಗಿದೆ.

ಇದು, ಐಡಿಆರ್‌ಎಫ್ ಹಾಗೂ ಆರ್‌ಎಸ್ಎಸ್ ಒಳಸಂಬಂಧವನ್ನು ಎತ್ತಿತೋರಿಸುತ್ತದೆ. ನಂತರ ಇದು ಅಮೆರಿಕದಲ್ಲಿ ದೊಡ್ಡ ವಿವಾದವನ್ನು ಉಂಟುಮಾಡಿ, ಮುಂಚೂಣಿ ಕಂಪನಿಗಳು ದೇಣಿಗೆಯನ್ನು ಸ್ಥಗಿತಗೊಳಿಸುವುದಕ್ಕೆ ಕಾರಣವಾಯಿತು. ಅಮೆರಿಕದ ನ್ಯಾಯಾಂಗ ಇಲಾಖೆಯು ಶಂಕಾಸ್ಪದ ವ್ಯವಹಾರಗಳ ಬಗ್ಗೆ ತನಿಖೆಯನ್ನು ಆರಂಭಿಸಿತು. ಅಮೆರಿಕದ ಸಣ್ಣ ವ್ಯಾಪಾರಗಳ ಆಡಳಿತಾಂಗವು (ಫೆಡರಲ್ ಏಜೆನ್ಸಿ) ಬಹಿರಂಗಗೊಳಿಸಿರುವಂತೆ, 2021ರ ಏಪ್ರಿಲ್ ವೇಳೆಗೆ ಅಮೆರಿಕದಲ್ಲಿನ ಹಿಂದೂ ಬಲಪಂಥೀಯ ಸಂಘಟನೆಗಳು 8.33 ಲಕ್ಷ ಡಾಲರ್ ಬೃಹತ್ ಮೊತ್ತವನ್ನು ‘ಕೋವಿಡ್ ನಿಧಿ’ಯ ಹೆಸರಿನಲ್ಲಿ ಪಡೆದಿವೆ.

ಈ ಎಲ್ಲಾ ಮೂಲಗಳ ಪ್ರಕಾರ, ಆರ್‌ಎಸ್ಎಸ್ ಎಂಬುದು ಪ್ರಭಾವಿಯಾದ ರಾಜಕೀಯ ನಿರ್ಣಯಗಳನ್ನು ನಿರ್ಧರಿಸುವ ಪರ್ಯಾಯ ಅಧಿಕಾರ ಕೇಂದ್ರ ಎಂಬುದು ಸ್ಪಷ್ಟವಾಗಿ ಸಾಬೀತಾಗುತ್ತದೆ.

ಲೇಖಕ: ಕೆಪಿಸಿಸಿ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು