ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕೋವಿಡ್- ಸಾವಿನ ಸಂಖ್ಯೆಯಿಂದ ಮೌಲಿಕ ಪಾಠ

ಆರೋಗ್ಯ ವ್ಯವಸ್ಥೆ ಬಲಪಡಿಸಲು ನಿಖರ ಅಂಕಿಅಂಶ ಪೂರಕವಾಗಿ ಒದಗಿಬರುವುದು
ಅಕ್ಷರ ಗಾತ್ರ

ಭಾರತದಲ್ಲಿ ಕೋವಿಡ್ ಸಾವುಗಳ ಕುರಿತಾದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವರದಿಯನ್ನು ಭಾರತ ಸರ್ಕಾರ ತಳ್ಳಿಹಾಕಿದ್ದು ಅನಗತ್ಯ ಎಂಬುದು ಅನೇಕ ಸಾರ್ವಜನಿಕ ಆರೋಗ್ಯ ಸಂಶೋಧಕರು ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಭಾವನೆ. ವರದಿಯಾದ ಸಾವುಗಳು ಹಾಗೂ ಅಂದಾಜು ಮಾಡಲಾದ ಸಾವುಗಳನ್ನು ಲೆಕ್ಕಹಾಕಿದ ನಂತರವೂ ತಲಾ 10 ಲಕ್ಷ ಜನರಿಗೆ ಭಾರತದಲ್ಲಿನ ಸಾವಿನ ಪ್ರಮಾಣವು ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಹಲವು ದೇಶಗಳಲ್ಲಿ ವರದಿಯಾಗಿದ್ದಕ್ಕಿಂತ ಕಡಿಮೆಯೇ ಇದೆ. ಅಲ್ಲದೆ, ಲಸಿಕೆ ಕಾರ್ಯಕ್ರಮ ಹಾಗೂ ಅದನ್ನು ಜನರಿಗೆ ತಲುಪಿಸಿದ ಭಾರತದ ಸಾಧನೆಯ ಬಗ್ಗೆ ವ್ಯಾಪಕ ಮೆಚ್ಚುಗೆಯೇ ಇದೆ. ಹೀಗಿದ್ದೂ, ಸಾವುಗಳ ಕುರಿತಾದ ಹೆಚ್ಚಿನ ನಿಖರ ಅಂದಾಜು, ಭವಿಷ್ಯದಲ್ಲಿ ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಆರೋಗ್ಯ ಸಂಪನ್ಮೂಲಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ನೆರವಾಗುತ್ತದೆ ಎಂಬುದು ನಿಜ.

ಡಬ್ಲ್ಯುಎಚ್ಒ ವರದಿ ಏನನ್ನು ಹೇಳುತ್ತದೆ? 2020 ಹಾಗೂ 2021ರಲ್ಲಿ ಜಾಗತಿಕ ಸಾವಿನ ಪ್ರಮಾಣ ಸುಮಾರು 1.5 ಕೋಟಿ ಎಂದು ಅದು ಅಂದಾಜಿಸುತ್ತದೆ. ಜಾಗತಿಕ ಸಾವುಗಳ ಶೇ 68ರಷ್ಟು ಪ್ರಮಾಣ ಕೇವಲ 10 ರಾಷ್ಟ್ರಗಳಲ್ಲಿ ಕೇಂದ್ರೀಕೃತಗೊಂಡಿದೆ. ಆಘಾತಕಾರಿಯಾದ ಸಂಗತಿ ಎಂದರೆ, ಬಹುತೇಕ ಮೂರನೇ ಒಂದರಷ್ಟು ಸಾವುಗಳು ಭಾರತದಲ್ಲೇ ಆಗಿವೆ ಎಂದು ಹೇಳಲಾಗಿದೆ. ಇದಕ್ಕೆ ಹೋಲಿಸಿದಲ್ಲಿ, ಹೆಚ್ಚುವರಿ ಸಾವುಗಳ ಪೈಕಿ ಪಾಕಿಸ್ತಾನದ ಪಾಲು ಶೇ 1.54ರಷ್ಟು (2,30,440) ಇದೆ. ಬಾಂಗ್ಲಾದೇಶದ ಪಾಲು ಶೇ 0.9 (1,40,765) ಹಾಗೂ ಮ್ಯಾನ್ಮಾರ್‌ ಪಾಲು ಶೇ 0.29 (44,187) ಎಂದು ದಾಖಲಿಸಲಾಗಿದೆ. ಶ್ರೀಲಂಕಾ (-8,833) ಹಾಗೂ ಚೀನಾದಂತಹ (-52,063) ದೇಶಗಳು ಕೋವಿಡ್‌ಗೂ ಹಿಂದಿನ ವರ್ಷಗಳಲ್ಲಿ ಆಗಿರುವ ಸಾವುಗಳಿಗಿಂತ ಕಡಿಮೆ ಸಾವು ಸಂಭವಿಸಿರುವುದಾಗಿ ವರದಿ ಮಾಡಿವೆ.

ಭಾರತದಲ್ಲಿ 47 ಲಕ್ಷ ಸಾವುಗಳು ಸಂಭವಿಸಿವೆ ಎಂಬಂಥ ಡಬ್ಲ್ಯುಎಚ್ಒ ಅಂದಾಜು, 2022ರ ಏಪ್ರಿಲ್‌ನಲ್ಲಿ ಭಾರತದ ಆರೋಗ್ಯ ಅಧಿಕಾರಿಗಳು ಅಧಿಕೃತವಾಗಿ ವರದಿ ಮಾಡಿದ್ದ 5.24 ಲಕ್ಷಕ್ಕಿಂತ ಒಂಬತ್ತು ಪಟ್ಟು ಹೆಚ್ಚು.ಡಬ್ಲ್ಯುಎಚ್ಒ ಎಲ್ಲ ಹೆಚ್ಚುವರಿ ಸಾವುಗಳನ್ನೂ ಗಣನೆಗೆ ತೆಗೆದುಕೊಂಡಿದೆ ಅಥವಾ ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಆಧರಿಸಿ, ಸಾಂಕ್ರಾಮಿಕ ಇದ್ದಿರದಿದ್ದಲ್ಲಿ ಎಷ್ಟು ಸಾವುಗಳು ಸಂಭವಿಸಿರಬಹುದಿತ್ತು ಎಂಬುದರ ಜೊತೆಗೆ, ಕೋವಿಡ್‌ ಅವಧಿಯಲ್ಲಿ ಸಂಭವಿಸಿದ ಸಾವುಗಳ ಮಧ್ಯದ ವ್ಯತ್ಯಾಸವನ್ನು ತನ್ನ ಲೆಕ್ಕದಲ್ಲಿ ಬಳಸಿಕೊಂಡಿದೆ. ಆದರೆ, ಸಾಂಕ್ರಾಮಿಕಕ್ಕೆ ನೇರವಾಗಿ ಸಂಬಂಧಿಸಿದ ಸಾವುಗಳನ್ನು ಮಾತ್ರವೇ ಸರ್ಕಾರ ಲೆಕ್ಕ ಹಾಕಿದೆ. ಸಾವಿನ ಸಂಖ್ಯೆಗಳ ಪ್ರಮಾಣದಲ್ಲಿನ ವ್ಯತ್ಯಾಸಕ್ಕೆ ಇದೂ ಒಂದು ಕಾರಣ. ಆದರೆ, ಈ ಅಂದಾಜನ್ನು ಹೇಗೆ ಮಾಡಲಾಯಿತು ಎಂಬುದರ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.

ಸಾವಿನ ಸಂಖ್ಯೆಯ ಅಂದಾಜು ನಿರ್ಧರಿಸಲು ಅನುಸರಿಸಲಾದ ಪ್ರಕ್ರಿಯೆ ಹಾಗೂ ವಿಧಾನಗಳ ಕುರಿತಾದ ಪ್ರಶ್ನೆಗಳ ಮೇಲೆ ಭಾರತ ಸರ್ಕಾರದ ಆಕ್ಷೇಪಗಳುಕೇಂದ್ರೀಕೃತಗೊಂಡಿವೆ. ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (ಸಿಆರ್‌ಎಸ್) ಸಾವುಗಳ ಕುರಿತಾದ ಅಧಿಕೃತ ಅಂಕಿಅಂಶಗಳು ಲಭ್ಯ. ಹೀಗಿರುವಾಗ ಇತರ ಹಲವು ರಾಷ್ಟ್ರಗಳಲ್ಲಿ ಮಾಡಿರುವಂತೆ, ಆ ಸಂಖ್ಯೆಗಳನ್ನು ಡಬ್ಲ್ಯುಎಚ್ಒ ಒಪ್ಪಿಕೊಳ್ಳಬೇಕು. ಸಿಆರ್‌ಎಸ್ ಅಂಕಿಅಂಶಗಳು ಲಭ್ಯವಿರುವ ಸನ್ನಿವೇಶದಲ್ಲಿ ‘ಗಣಿತಶಾಸ್ತ್ರದ ಮಾದರಿ’ಯ ಬಳಕೆ ಅನಗತ್ಯ ಎಂಬುದು ಸರ್ಕಾರದ ವಾದ. ಜೊತೆಗೆ, ವಿವಿಧ ವೆಬ್‌ಸೈಟ್‌ಗಳು ಹಾಗೂ 17 ರಾಜ್ಯಗಳ ಮಾಧ್ಯಮ ವರದಿಗಳಿಂದಅಂಕಿಅಂಶಗಳನ್ನು ಬಳಸಿ ಈ ಮಾದರಿಗಳನ್ನು ಡಬ್ಲ್ಯುಎಚ್ಒ ಅಭಿವೃದ್ಧಿಪಡಿಸಿದೆ. ಹೆಚ್ಚುವರಿ ಮರಣ ಪ್ರಮಾಣ ಅಂದಾಜಿಸುವುದಕ್ಕಾಗಿ ‘ದೋಷಯುಕ್ತ ಅಂಕಿಅಂಶಗಳು ಹಾಗೂ ವೈಜ್ಞಾನಿಕವಾಗಿ ಪ್ರಶ್ನಾರ್ಹವಾದ ವಿಧಾನ’ಗಳನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಸರ್ಕಾರ ವಾದಿಸಿದೆ.

ಅಂತರರಾಷ್ಟ್ರೀಯ ತಜ್ಞರ ತಂಡವೊಂದು ಈ ಮಾದರಿಯನ್ನು ರೂಪಿಸಿದೆ ಎಂಬುದರ ಆಧಾರದ ಮೇಲೆ ಸರ್ಕಾರದ ವಾದವನ್ನು ಡಬ್ಲ್ಯುಎಚ್ಒ ತಳ್ಳಿಹಾಕಿದೆ. ಅಲ್ಲದೆ, ತಮ್ಮ ಅಂದಾಜು ಈ ಹಿಂದಿನ ಅಧ್ಯಯನಗಳನ್ನು ಪ್ರತಿಧ್ವನಿಸುತ್ತದೆ. ‘ವರದಿಯಾಗುತ್ತಿರುವುದಕ್ಕಿಂತ ಭಾರತದ ಕೋವಿಡ್ ಸಾವುಗಳ ಸಂಖ್ಯೆ ಆರರಿಂದ ಏಳು ಪಟ್ಟು ಹೆಚ್ಚಿದೆ’ ಎಂಬುದನ್ನು ಪ್ರಮುಖ ವೈದ್ಯಕೀಯ ಪತ್ರಿಕೆ ‘ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನ ವರದಿಯೂ ಹೇಳಿತ್ತು. ಅಷ್ಟೇ ಅಲ್ಲ, ಸಿಆರ್‌ಎಸ್ ಅಂಕಿಅಂಶದ ಜೊತೆಗೆ ಸರ್ಕಾರದ ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಚ್ಎಂಐಎಸ್) ಮೂಲಕ ವರದಿಯಾಗುವ ವಿವರಗಳನ್ನೂ ಗಣನೆಗೆ ತೆಗೆದುಕೊಂಡಿರುವುದಾಗಿ ಡಬ್ಲ್ಯುಎಚ್ಒ ಪ್ರತಿಪಾದಿಸಿದೆ.

ಈ ವಿವಾದದ ಬೇರಿನಲ್ಲಿ ದೀರ್ಘಕಾಲೀನ ಸಮಸ್ಯೆಯೊಂದಿದೆ. ಅದು, ಭಾರತದಲ್ಲಿ ಸಾವುಗಳು ಹಾಗೂ ಸಾವುಗಳ ಕಾರಣ ಸರಿಯಾಗಿ ವರದಿ ಆಗದೇ ಇರುವುದು. ಶೇಕಡ 95ರಷ್ಟು ಎಲ್ಲಾ ಬಗೆಯ ಸಾವುಗಳೂ ವರದಿಯಾಗುತ್ತವೆ ಎಂಬಂಥ ಸರ್ಕಾರದ ಪ್ರತಿಪಾದನೆಯನ್ನು ಒಪ್ಪಿಕೊಂಡರೂ ಸಾವಿನ ಕಾರಣವನ್ನು ಇದೇ ಎಂದು ನಿಖರವಾಗಿ ವರ್ಗೀಕರಿಸಲಾಗದು. ಗ್ರಾಮೀಣ ಪ್ರದೇಶಗಳಲ್ಲಂತೂ ಇದು ನಿಜ. ಮಾಮೂಲು ಸಂದರ್ಭಗಳಲ್ಲೂ ವೈದ್ಯಕೀಯ ಸೌಲಭ್ಯಗಳ ಕಡಿಮೆ ಲಭ್ಯತೆಯಿಂದಾಗಿ ಸಾವುಗಳ ನಿಖರ ದಾಖಲಾತಿಗೆ ಸಮಸ್ಯೆಗಳಿವೆ. ನಿರ್ದಿಷ್ಟವಾಗಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಂತೂ ಆರೋಗ್ಯ ವ್ಯವಸ್ಥೆಯ ಮೇಲೆ ಬಿದ್ದ ಒತ್ತಡಗಳಿಂದಾಗಿಯೇ ಸಾವುಗಳು ನಿಖರವಾಗಿ ದಾಖಲಾಗದಿರುವ ಸ್ಥಿತಿ ಜಾಸ್ತಿ ಇತ್ತು. ಹೀಗಿದ್ದೂ ಊಹೆಗಳು, ಬಹಿರ್ಗಣನೆಗಳು ಹಾಗೂ ಭಾಗಶಃ ಲೆಕ್ಕಗಳನ್ನು ಅಂಕಿಅಂಶ ಮಾದರಿಯುಅವಲಂಬಿಸುವುದರಿಂದ ಇದೊಂದು ತರಹ ಕ್ಲಿಷ್ಟಕರವಾದದ್ದಾಗಿದ್ದು, ವಿಶ್ವಾಸಾರ್ಹ ಹಾಗೂ ಅಧಿಕೃತ ಅಂಕಿಅಂಶಗಳಿಗೆ ಬದಲಿಯಾದದ್ದು ಯಾವುದೂ ಇಲ್ಲ ಎಂಬುದೂ ನಿಜ. ಹೀಗಾಗಿ ಸಾವುಗಳು ಹಾಗೂ ಅವುಗಳ ಕಾರಣಗಳು ಸಿಆರ್‌ಎಸ್ ಮೂಲಕ ಸರಿಯಾಗಿ ದಾಖಲಾಗುವುದು ಬಹಳ ಮುಖ್ಯವಾಗುತ್ತದೆ.

ಕೋವಿಡ್ ಸಾವುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸುವುದಕ್ಕೆ ಮುಖ್ಯವಾದ ಕಾರಣ, ಸಾವುಗಳ ಸರಿಯಾದ ಸಂಖ್ಯೆಗಳನ್ನು ಪಡೆದುಕೊಳ್ಳುವುದು. ಇದಲ್ಲದೆ ಬೇರೆ ಕಾರಣಗಳೂ ಇವೆ. ಮೊದಲನೆಯದಾಗಿ, ಸರ್ಕಾರದ ಪುನರ್ವಿಮರ್ಶಿತ ಅಂದಾಜುಗಳೂ ಸಾವುಗಳ ಲೆಕ್ಕವನ್ನು ಕಡಿಮೆ ತೋರುತ್ತಿವೆ. ಉದಾಹರಣೆಗೆ, ಸರ್ಕಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳಲ್ಲಿ, 2020ರಲ್ಲಿ ಸಾವುಗಳ ಸಂಖ್ಯೆಯನ್ನು ಬಹುತೇಕ ಐದು ಲಕ್ಷ ಎಂದು ತೋರಿಸಿತ್ತು. ಇದು ಮೂಲ ವರದಿಯಲ್ಲಿದ್ದ 1.49 ಲಕ್ಷದ ಮೂರು ಪಟ್ಟಿಗಿಂತ ಹೆಚ್ಚು. ಇಂತಹ ವಿಪರ್ಯಾಸವು, ಸಾವುಗಳ ನಿಖರ ಅಂದಾಜಿಗಾಗಿ ಸರಿಯಾದ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರೇರಣೆಯಾಗಬೇಕು.

ಡಬ್ಲ್ಯುಎಚ್‌ಒ ವಿಧಾನವನ್ನು ತಳ್ಳಿಹಾಕುವ ಬದಲಿಗೆ, ನಿರ್ದಿಷ್ಟ ಪ್ರಶ್ನೆಗಳನ್ನು ಎತ್ತಲು ಹಾಗೂ ಅಂದಾಜನ್ನು ಪರಿಷ್ಕರಿಸಲು ರಚನಾತ್ಮಕ ಸಲಹೆಗಳನ್ನು ನೀಡುವುದಕ್ಕಾಗಿ ತನ್ನದೇ ಪರಿಣತಿಯನ್ನು ಸರ್ಕಾರ ಬಳಸಿಕೊಳ್ಳಬೇಕು. ಇದು ಚರ್ಚೆಯನ್ನು ಹೆಚ್ಚು ಉಪಯುಕ್ತವಾದ ದಿಕ್ಕಿಗೆ ಒಯ್ಯುತ್ತದೆ. ಇದರಿಂದ ಜನರ ದುರಂತ ಸಾವುಗಳನ್ನು ಗುರುತಿಸಿ ಗೌರವಿಸಿದಂತೆಯೂ ಆಗುತ್ತದಲ್ಲದೆ ಆ ಸಾವುಗಳು ನಿರರ್ಥಕವಾಗದಂತೆಯೂ ನೋಡಿಕೊಂಡಂತೆ ಆಗುತ್ತದೆ.

ಕಡೆಯದಾಗಿ, ಸಾವುಗಳ ಅಂಕಿಅಂಶಗಳ ನಿಖರ ಸಂಗ್ರಹ ಏಕೆ ಬೇಕೆಂದರೆ, ಅದು ಭವಿಷ್ಯದಲ್ಲಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳನ್ನು ನಿರ್ವಹಿಸುವ ಸಲುವಾಗಿ ಆರೋಗ್ಯ ವ್ಯವಸ್ಥೆ ಸಾಮರ್ಥ್ಯವನ್ನು ಬಲಪಡಿಸಲು ನಿರ್ಧಾರ ಕೈಗೊಳ್ಳುವಂತಹವರಿಗೆ ನೆರವಾಗುತ್ತದೆ. ವಿವಾದಾತ್ಮಕ ವಾದವಿವಾದಗಳಿಗೆ ಕಾರಣವಾಗುವ ಬದಲಿಗೆ ಇಂತಹ ಅಂಕಿಅಂಶಗಳು- ರೋಗ ನಿಗಾ ವಿಸ್ತರಣೆ, ಆರೋಗ್ಯ ಕಾರ್ಯಪಡೆ ಹೆಚ್ಚಳ ಅಥವಾ ಮರು ನಿಯೋಜನೆ, ಮೂಲಸೌಕರ್ಯ ನಿರ್ಮಾಣ, ಲಸಿಕೆ ಅಭಿವೃದ್ಧಿ, ಔಷಧ ತಯಾರಿಕೆ ಮುಂತಾದವು ಸೇರಿದಂತೆ ಆರೋಗ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಗಳಿಗೆ ಸಂಬಂಧಿಸಿದಂತೆ ಮೌಲ್ಯಯುತ ಪಾಠಗಳನ್ನು ನೀಡಬಲ್ಲವು.

ಆರೋಗ್ಯ ವಲಯಕ್ಕೆ ಹಣಕಾಸು ಹಂಚಿಕೆ ಹೆಚ್ಚಳದ ಅಂತರಾರ್ಥ ಬಹಳ ಮುಖ್ಯವಾದದ್ದು. ಕೋವಿಡ್ ಮರಣ ಪ್ರಮಾಣದ ವಾಸ್ತವವನ್ನು ತಪ್ಪಾಗಿ ಗ್ರಹಿಸುವುದು ತಪ್ಪು ಸಂದೇಶ ಕಳಿಸಬಹುದು ಎಂಬುದನ್ನು ನಾವು ಮರೆಯಬಾರದು. ನಾವು ಯಥಾಪ್ರಕಾರದ ವ್ಯವಹಾರಗಳನ್ನೇ ಮುಂದುವರಿಸಬಹುದು. ಆದರೆ, ಸರಳವಾಗಿ ಹೇಳಬೇಕೆಂದರೆ, ಅದು ಆಯ್ಕೆ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT