ಶನಿವಾರ, ನವೆಂಬರ್ 28, 2020
25 °C

PV Web Exclusive: ಒಂದು ಮಾಟಮಂತ್ರ ಘಟನೆಯ ಸುತ್ತ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಮಾಟಮಂತ್ರ-ಪ್ರಾತಿನಿಧಿಕ ಚಿತ್ರ

ಬ್ಲ್ಯಾಕ್‌ ಮ್ಯಾಜಿಕ್. ಇದನ್ನು ಕನ್ನಡದ ಆಡುಭಾಷೆಯಲ್ಲಿ ಮಾಟಮಂತ್ರ, ಮಾಡಿಸುವುದು ಎಂದೆಲ್ಲಾ ಕರೆಯುವ ರೂಢಿಯಿದೆ. ಬ್ಲ್ಯಾಕ್‌ ಮ್ಯಾಜಿಕ್ ನಿಜವೇ, ಅದು ಪರಿಣಾಮ ಬೀರುತ್ತದೆಯೇ ಎಂಬುದನ್ನು ಹುಡುಕುತ್ತಾ ಹೋಗುವುದು ವ್ಯರ್ಥವೇ ಸರಿ. ಈ ಹುಡುಕಾಟಕ್ಕೆ ಒಂದು ತಾರ್ಕಿಕ ಅಂತ್ಯ ದೊರೆಯುತ್ತದೆ ಎಂಬ ಸಾಧ್ಯತೆಗಳು ಕಡಿಮೆ. ‘ಇದನ್ನು ನಂಬುವುದು ಮತ್ತು ನಂಬದೇ ಇರುವುದು ಅವರವರಿಗೆ ಬಿಟ್ಟದ್ದು. ಆದರೆ, ತಮ್ಮ ಮೇಲೆ ಮಾಟಮಂತ್ರ ಮಾಡಿಸಿದ್ದಾರೆ ಎಂದು ನಂಬುವವರು ದುರ್ಬಲ ಮನಸ್ಸಿನವರಾಗಿದ್ದರೆ, ಅವರು ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತಾರೆ’ ಎನ್ನುತ್ತಾರೆ ಮನಶಾಸ್ತ್ರಜ್ಞ ಡಾ.ಆರ್.ಕಟ್ಟೀಮನಿ.

ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಪ್ರಸ್ತಾಪಿಸಲು ಕಾರಣವಿದೆ. ಕುಟುಂಬವೊಂದರಲ್ಲಿ ಈಚಿನ 15 ದಿನಗಳಲ್ಲಿ ಕೆಲವು ಸಂಶಯಾಸ್ಪದ ಘಟನೆಗಳು ನಡೆದವು. ಈ ಘಟನೆಗಳನ್ನು ಬಿಡಿಬಿಡಿಯಾಗಿ ಗಮನಿಸಿದರೆ, ಅವು ಆಕಸ್ಮಿಕ ಎಂದಷ್ಟೇ ಅನಿಸುತ್ತಿದ್ದವು. ಆದರೆ, ಈ ಎಲ್ಲಾ ಘಟನೆಗಳನ್ನು ಪರಸ್ಪರ ಜೋಡಿಸಿಕೊಂಡು ನೋಡಿದಾಗ ಸಂದೇಹವನ್ನು ಹುಟ್ಟುಹಾಕುತ್ತಿದ್ದವು.

ಅದೊಂದು ಸಣ್ಣ ಕುಟುಂಬ. ಗಂಡ-ಹೆಂಡತಿ ಇಬ್ಬರಷ್ಟೇ ಇರುವ ಕುಟುಂಬ. ಇಬ್ಬರಿಗೂ ಅಪ್ಪ-ಅಮ್ಮ, ತಮ್ಮ-ತಂಗಿ ಎಲ್ಲರೂ ಇದ್ದರು. ಈ ಲೇಖನ ಬರೆಯುವ ವೇಳೆಗೆ ಕೆಲವರು ಉಳಿದಿಲ್ಲ ಅಷ್ಟೆ. ಈ ಕುಟುಂಬದ ಹೆಂಗಸು ಸರ್ಕಾರದ ಒಂದು ಇಲಾಖೆಯಲ್ಲಿ ಮುಖ್ಯವಾದ ಹುದ್ದೆಯಲ್ಲಿ ಇದ್ದಾರೆ. ಪ್ರತಿದಿನ ಸಾರ್ವಜನಿಕರನ್ನು ಭೇಟಿ ಮಾಡುವ, ಮಾತುಕತೆ ನಡೆಸುವಂತಹ ಹುದ್ದೆ ಅದು. ಹೀಗೆ 15 ದಿನಗಳ ಹಿಂದೆ ಅವರಿಗೆ ಬೇರೊಬ್ಬ ಮಹಿಳೆ ಕರೆ ಮಾಡುತ್ತಾರೆ. ಕೆಲಸದ ವಿಚಾರವಾಗಿ ನಿಮ್ಮೊಂದಿಗೆ ಮಾತನಾಡಬೇಕಿದೆ ಎನ್ನುತ್ತಾರೆ. ಆ ಅಧಿಕಾರಿಯು ಕಚೇರಿಯ ಬಳಿ ಬರಲು ಆ ಮಹಿಳೆಗೆ ಸೂಚಿಸುತ್ತಾರೆ. ಆದರೆ ಆ ಮಹಿಳೆ ಕಚೇರಿಯ ಬಳಿ ಹೋಗದೆ, ಅಧಿಕಾರಿಯ ಮನೆಯ ಬಳಿ ಹೋಗುತ್ತಾರೆ. ಆದರೆ ಅಧಿಕಾರಿ ಕಚೇರಿಯಲ್ಲೇ ಇರುತ್ತಾರೆ.

ಅಧಿಕಾರಿಗೆ ಕರೆ ಮಾಡಿದ ಮಹಿಳೆ, ‘ನಿಮ್ಮ ಮನೆ ಬಳಿ ಇದ್ದೇನೆ. ಬನ್ನಿ’ ಎನ್ನುತ್ತಾರೆ. ಅಧಿಕಾರಿಗೆ ಕಸಿವಿಸಿಯಾಗುತ್ತದೆ. ‘ಕಚೇರಿ ಇರುವುದು ಬೇರೊಂದು ಬಡಾವಣೆಯಲ್ಲಿ. ಈ ಬಡಾವಣೆಗೆ ಸಂಬಂಧಿಸಿದ ವಿಚಾರ ಮಾತನಾಡಲು ನೀವು ಇಲ್ಲಿಂದ 25 ಕಿ.ಮೀ. ದೂರವಿರುವ ನನ್ನ ಮನೆಯ ಬಳಿ ಏಕೆ ಹೋಗಿದ್ದೀರಿ’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆ ಮಹಿಳೆ, ‘ನಿಮ್ಮ ಕುಟುಂಬದ 11 ಗೊಂಬೆಗಳು ನನ್ನ ಬಳಿ ಇವೆ. ಅದರಲ್ಲಿ ಒಂದು ಗೊಂಬೆಯನ್ನು ಮುರಿದು ಹಾಕಿದ್ದೇನೆ. ಒಂದೊಂದೇ ಗೊಂಬೆಯನ್ನು ಮುರಿದುಹಾಕುತ್ತೇನೆ’ ಎಂದು ಕರೆ ಕಟ್ ಮಾಡುತ್ತಾರೆ. ಆನಂತರ ಕರೆ ಮಾಡಿದರೆ ಆ ಸಂಖ್ಯೆ ಸ್ವಿಚ್ಡ್ ಆಫ್ ಆಗಿರುತ್ತದೆ. ಅಧಿಕಾರಿ ಮತ್ತು ಅವರ ಪತಿ ಈ ಘಟನೆಯನ್ನು ನಿರ್ಲಕ್ಷಿಸಿ ಸುಮ್ಮನಾಗುತ್ತಾರೆ.

ಆದರೆ ಈ ಘಟನೆ ನಡೆದ ಒಂದೆರಡು ದಿನದಲ್ಲಿ, ಆ ಅಧಿಕಾರಿಯ ಪತಿಯ ಸೋದರ ಅಕಾಲಿಕವಾಗಿ ಮರಣ ಹೊಂದುತ್ತಾರೆ. ಯಾವುದೇ ಕಾಯಿಲೆ ಇಲ್ಲದ ಸುಮಾರು 30 ವರ್ಷದ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಮೃತಪಡುತ್ತಾರೆ. ತೀರಾ ಗ್ರಾಮೀಣ ಪ್ರದೇಶದಲ್ಲಿ ಅವರು ಇದ್ದ ಕಾರಣ, ಪೊಲೀಸ್ ಪ್ರಕರಣ ದಾಖಲಾಗದೆ ಅಂತ್ಯಸಂಸ್ಕಾರ ಮುಗಿದು ಹೋಗುತ್ತದೆ.

ಸಾವು ಸಂಭವಿಸಿ ಒಂದೆರಡು ದಿನಗಳ ನಂತರ ಆ ಅಧಿಕಾರಿಯ ಮನೆಯಲ್ಲಿ ಒಂದೆರಡು ವಿಚಿತ್ರವಾದ ವಸ್ತುಗಳು ದೊರೆಯುತ್ತವೆ. ಎರಡು ಪ್ಲಾಸ್ಟಿಕ್ ಡಬ್ಬಗಳಲ್ಲಿ, ಒಂದರಲ್ಲಿ ವಿಭೂತಿ ಮತ್ತು ಮತ್ತೊಂದರಲ್ಲಿ ಬೂದಿ ಇರುತ್ತದೆ. ಆ ಡಬ್ಬಗಳನ್ನು ತಾವು ಇಟ್ಟಿಲ್ಲ ಎಂಬುದು ಆ ಅಧಿಕಾರಿಗೆ ನಿಖರವಾಗಿ ಗೊತ್ತಿದೆ. ಆ ಡಬ್ಬಗಳು ಅವರು ತಮ್ಮ ತವರು ಮನೆಯಿಂದ ತಂದಿದ್ದ ಪುಸ್ತಕಗಳ ಬಂಡಲ್‌ ಮಧ್ಯೆ ಇತ್ತು. ಅಲ್ಲಿದ್ದಾಗಲೇ ಇದನ್ನು ಯಾರೋ ಇಟ್ಟಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಯತ್ನಿಸುತ್ತಾರೆ. ತಮಗೆ ಸಂದೇಹವಿದ್ದ ವ್ಯಕ್ತಿಯ ಬಳಿ ಆ ಡಬ್ಬಗಳನ್ನು ತೋರಿಸಿ ಪ್ರಶ್ನಿಸುತ್ತಾರೆ. ಆ ವ್ಯಕ್ತಿ ಅವುಗಳನ್ನು ಇರಿಸಿದ್ದು ತಾವೇ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಒಮ್ಮೆ ಅವುಗಳನ್ನು ಹೋಮಿಯೋಪತಿ ಔಷಧಿ ಎನ್ನುತ್ತಾರೆ. ಇನ್ನೊಮ್ಮೆ ಅದನ್ನು ಕೊಳ್ಳೇಗಾಲಕ್ಕೆ ಹೋಗಿದ್ದಾಗ ತಂದ ದೇವರ ಪ್ರಸಾದ ಎನ್ನುತ್ತಾರೆ.

ಈ ಎಲ್ಲಾ ವಿವರಗಳನ್ನು ಅಧಿಕಾರಿ ತಮ್ಮ ಕುಟುಂಬದ ಹಿರಿಯರೊಬ್ಬರ ಬಳಿ ಚರ್ಚಿಸುತ್ತಾರೆ. ಆ ಹಿರಿಯರು, ‘ಕೊಳ್ಳೇಗಾಲದ ಕಡೆ ಮಾಟಮಂತ್ರ ಮಾಡುವವರು ಬೂದಿ ಕೊಡುತ್ತಾರೆ. ಇದು ಸಹ ಅದೇ ರೀತಿ ಇದೆ’ ಎನ್ನುತ್ತಾರೆ. ಈ ಚರ್ಚೆಯ ನಂತರ ಆ ಅಧಿಕಾರಿಯ ಕುಟುಂಬದವರು ಈ ಮೂರು ಬಿಡಿ ಘಟನೆಗಳನ್ನು ಜೋಡಿಸುತ್ತಾ, ಪರಸ್ಪರ ಸಂಬಂಧ ಕಲ್ಪಿಸಲು ಯತ್ನಿಸುತ್ತಾರೆ. ಈ ಕುಟುಂಬದವರು ನಾಸ್ತಿಕರಾದರೂ ಈ ಘಟನೆಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಒಂದು ಕ್ಷಣ ಸಂದೇಹಪಡುತ್ತಾರೆ.

ಅದರ ಬೆನ್ನಲ್ಲೇ ಮನಶಾಸ್ತ್ರಜ್ಞರನ್ನು ಭೇಟಿ ಮಾಡುತ್ತಾರೆ. ಈ ಘಟನೆಗಳ ಮಧ್ಯೆ ಪರಸ್ಪರ ಸಂಬಂಧವಿರಬೇಕಾದರೆ, ಅಗತ್ಯವಿದ್ದ ಕೊಂಡಿಗಳು ಇಲ್ಲದೇ ಇರುವುದನ್ನು ಮನಶಾಸ್ತ್ರಜ್ಞರು ಸ್ಪಷ್ಟವಾಗಿ ಎತ್ತಿತೋರಿಸುತ್ತಾರೆ.

ಅಧಿಕಾರಿಗೆ ಕರೆ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಪರಿಶೀಲಿಸಿದ್ದರೆ ಒಂದು ಘಟನೆಯ ಸತ್ಯಾಸತ್ಯತೆ ಏನು ಎಂಬುದು ತಿಳಿಯುತ್ತಿತ್ತು. ಈ ಎಲ್ಲಾ ಘಟನೆಗಳು ನಡೆದ ನಂತರ ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಕರೆ ಬಂದಿದ್ದ ನಂಬರ್ ಈಗ ಚಾಲ್ತಿಯಲ್ಲಿ ಇಲ್ಲ.

ಅವರ ಪತಿಯ ಸೋದರನ ಅಕಾಲಿಕ ಮತ್ತು ಅಸಹಜ ಸಾವಿಗೆ ಇದನ್ನು ಹೇಗೆ ಜೋಡಿಸುವುದು ಎಂಬುದು ಅಧಿಕಾರಿಗೆ ಅರ್ಥವಾಗುತ್ತಿಲ್ಲ. ಅವರ ಮನೆಯಲ್ಲಿ ದೊರೆತ ಬೂದಿಯ ಡಬ್ಬಗಳನ್ನು ಇಟ್ಟವರು ಯಾರು ಎಂಬುದು ಸ್ಪಷ್ಟವಾಗಿದೆ. ಆದರೆ, ಆ ಡಬ್ಬಗಳನ್ನು ಇರಿಸಿದ ವ್ಯಕ್ತಿಗೂ ಮೃತಪಟ್ಟ ವ್ಯಕ್ತಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಹೀಗಾಗಿ ಸಾವಿಗೆ ಈ ಡಬ್ಬಗಳು ಕಾರಣ ಅಲ್ಲ ಎಂಬ ತೀರ್ಮಾನಕ್ಕೆ ಆ ಅಧಿಕಾರಿ ಬಂದಿದ್ದಾರೆ.

ಇನ್ನು ಆ ಡಬ್ಬಗಳನ್ನು ಇರಿಸಿದ ವ್ಯಕ್ತಿ ನೀಡಿದ ಉತ್ತರಗಳು ಸಂದೇಹಾಸ್ಪದವಾಗಿವೆ. ಒಮ್ಮೆ ಅವರು, ಅದು ಬೆಂಗಳೂರಿನ ಆಸ್ಪತ್ರೆ ಒಂದರಲ್ಲಿ ನೀಡಿದ ಹೋಮಿಯೊಪತಿ ಔಷಧಿ ಎಂದಿದ್ದರು. ಇನ್ನೊಮ್ಮೆ, ಕೊಳ್ಳೇಗಾಲದ ದೇವಾಲಯವೊಂದರಲ್ಲಿ ನೀಡಿದ ದೇವರ ಪ್ರಸಾದ ಎಂದಿದ್ದರು. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಇಷ್ಟು ವ್ಯತಿರಿಕ್ತವಾದ ಉತ್ತರಗಳನ್ನು ನೀಡುವುದು ಹೇಗೆ ಸಾಧ್ಯ ಎಂಬ ಸಂದೇಹ ಅಧಿಕಾರಿಗೆ ಇದೆ. ಹಾಗಿದ್ದಲ್ಲಿ, ಆ ವ್ಯಕ್ತಿ ಹೇಳಿದ ಎರಡು ಉತ್ತರಗಳೂ ಸುಳ್ಳು. ಮಾಟಮಂತ್ರ ಮಾಡಿಸುವ ಉದ್ದೇಶದಿಂದಲೇ ಅವನ್ನು ಅವರು ತಂದಿರಿಸಿದ್ದಾರೆ ಎಂಬ ತೀರ್ಮಾನಕ್ಕೆ ಆ ಅಧಿಕಾರಿ ಬಂದಿದ್ದಾರೆ.

‘ದುರ್ಬಲ ಮನಸ್ಸಿನವರು ಮಾತ್ರವೇ ಇಂತಹ ಘಟನೆಗಳಿಂದ ಕುಗ್ಗುತ್ತಾರೆ. ಅದನ್ನು ನಂಬದವರ ಮೇಲೆ ಇಂತಹ ಮಾಟಮಂತ್ರಗಳು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಮನಶಾಸ್ತ್ರಜ್ಞರು ನೀಡಿದ ಸಲಹೆಯನ್ನು ಅವರು ನಂಬಿದ್ದಾರೆ. ಇಂತಹ ಘಟನೆಗಳು ನಡೆದರೆ ನಿಮ್ಮ ನಂಬಿಕೆಗೆ ಅನುಗುಣವಾಗಿ ಅಗತ್ಯ ಧಾರ್ಮಿಕ ಕ್ರಿಯೆಗಳನ್ನೂ ಮಾಡಿ, ಮನಶಾಸ್ತ್ರಜ್ಞರನ್ನೂ ಭೇಟಿ ಮಾಡಿ ಎಂದು ಅವರು ತಮ್ಮ ಒಡನಾಡಿಗಳಿಗೆ ಹೇಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು