ಗುರುವಾರ , ಮಾರ್ಚ್ 4, 2021
24 °C
ದೆಹಲಿಗೆ ಹತ್ತಿರವಿದ್ದಾರೆ ಎಂದ ಮಾತ್ರಕ್ಕೆ, ಅವರ ಮಾತೇ ಅಂತಿಮ ಎನ್ನಲಾಗದು

ಎ.ಸೂರ್ಯ ಪ್ರಕಾಶ್ ಬರಹ- ಕೃಷಿ ಕಾಯ್ದೆ: ಏಕೆ ಈ ವಿರೋಧ?

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಸಂಸತ್ತಿನ ಅನುಮೋದನೆ ಪಡೆದಿರುವ, ರಾಷ್ಟ್ರಪತಿಯ ಅಂಕಿತ ಪಡೆದಿರುವ ಮೂರು ಕೃಷಿ ಕಾಯ್ದೆಗಳು ರೈತರನ್ನು ಸಶಕ್ತರನ್ನಾಗಿಸುವ ಗುರಿ ಹೊಂದಿವೆ, ಇವು ರೈತರಿಗೆ ಮಾರುಕಟ್ಟೆಯನ್ನು ಮುಕ್ತಗೊಳಿಸಲಿವೆ, ಈಗಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ಎಪಿಎಂಸಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲಿವೆ. ಈ ಕಾಯ್ದೆಗಳಿಗೆ ಎದುರಾಗಿರುವ ವಿರೋಧದ ಹಿಂದೆ ತರ್ಕಕ್ಕಿಂತಲೂ ಹೆಚ್ಚಾಗಿ ರಾಜಕೀಯ ಇದೆ ಎಂಬುದು ಕಾಯ್ದೆಗಳನ್ನು ಸಮಾಧಾನದಿಂದ, ನಿರ್ಲಿಪ್ತವಾಗಿ ಅವಲೋಕಿಸಿದಾಗ ಗೊತ್ತಾಗುತ್ತದೆ.

ಈ ಮೂರು ಕಾಯ್ದೆಗಳಲ್ಲಿ ಮೊದಲನೆಯದಾದ ‘ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಕಾಯ್ದೆ – 2020’ ಅಡಿಯಲ್ಲಿ ರೈತರಿಗೆ ಎಪಿಎಂಸಿ ಮಾರುಕಟ್ಟೆಗಳ ಹೊರಗಡೆಯೂ ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ರೈತರು ತಮ್ಮ ಉತ್ಪನ್ನಗಳ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರದಲ್ಲಿ ತೊಡಗಬಹುದು. ಕಾಯ್ದೆಯ ಸೆಕ್ಷನ್ 4(3)ರ ಅನ್ವಯ, ರೈತರ ಜೊತೆ ವಹಿವಾಟು ನಡೆಸುವ ವ್ಯಾಪಾರಸ್ಥರು ರೈತನಿಗೆ ಆತನ ಉತ್ಪನ್ನಕ್ಕೆ ಕೊಡಬೇಕಿರುವ ಹಣವನ್ನು ಅದೇ ದಿನ ಅಥವಾ ಗರಿಷ್ಠ ಮೂರು ಕೆಲಸದ ದಿನಗಳಲ್ಲಿ ಪಾವತಿಸಬೇಕು.

ಈ ಕಾನೂನು ರೈತರಿಗೆ ಎಪಿಎಂಸಿ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳುವ ಅಥವಾ ಸ್ಥಳೀಯ ಎಪಿಎಂಸಿ ಹೊರತಾಗಿಯೂ ಮಾರುಕಟ್ಟೆಯನ್ನು ಅರಸುವ ಆಯ್ಕೆಯನ್ನು ನೀಡುತ್ತದೆ. ರೈತರಿಗೆ ಹಣ ಪಾವತಿ ವಿಚಾರದಲ್ಲಿ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಗಡುವನ್ನು ಕೂಡ ನಿಗದಿ ಮಾಡುತ್ತದೆ. ತಕರಾರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವ ವ್ಯವಸ್ಥೆ ಕೂಡ ಇದರಲ್ಲಿದೆ.

‘ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಜಮೀನು ಸೇವೆಗಳ ಒಪ್ಪಂದ ಕಾಯ್ದೆ –
2020’ ಈ ಕಾಯ್ದೆಗಳ ಪೈಕಿ ಎರಡನೆಯದು. ಚಿಲ್ಲರೆ ಅಥವಾ ಸಗಟು ಮಾರಾಟಗಾರರ ಜೊತೆ, ಕೃಷಿ ಉದ್ಯಮ ಸಂಸ್ಥೆಗಳ ಜೊತೆ, ಸಂಸ್ಕರಣಾ ಘಟಕಗಳ ಜೊತೆ, ರಫ್ತುದಾರರ ಜೊತೆ ಅಥವಾ ಚಿಲ್ಲರೆ ವಹಿವಾಟನ್ನು ದೊಡ್ಡ ಮಟ್ಟದಲ್ಲಿ ನಡೆಸುವವರ ಜೊತೆ ಮುಂದೆ ಬರುವ ಕೃಷಿ ಬೆಳೆಯನ್ನು ಪೂರ್ವನಿಗದಿತ ಬೆಲೆಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಈ ಕಾಯ್ದೆ. ಕನಿಷ್ಠ ಒಂದು ಬೆಳೆ, ಗರಿಷ್ಠ ಐದು ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳಬಹುದು.

ಕೃಷಿ ಜಮೀನನ್ನು ರೈತನಿಂದ ಬೇರೆ ಮಾಡಲಾಗದು ಎಂಬುದು ಅತ್ಯಂತ ಪ್ರಮುಖ ಅಂಶ. ಕೃಷಿ ಜಮೀನು ಅಥವಾ ರೈತನ ಆವರಣವನ್ನು ವರ್ಗಾವಣೆ ಮಾಡಲು, ಮಾರಲು, ಅಡ ಇರಿಸಲು ಯಾವುದೇ ಕೃಷಿ ಒಪ್ಪಂದ ಮಾಡಿಕೊಳ್ಳುವಂತೆ ಇಲ್ಲ ಎಂದು ಇದು ಹೇಳುತ್ತದೆ. ಇಲ್ಲಿ ಕೂಡ ವ್ಯಾಜ್ಯಗಳ ಇತ್ಯರ್ಥಕ್ಕೆ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ.

ಮೂರನೆಯದು, ಅಗತ್ಯ ವಸ್ತುಗಳ ಕಾಯ್ದೆ –1955ಕ್ಕೆ ತಂದಿರುವ ತಿದ್ದುಪಡಿ. ದ್ವಿದಳ ಹಾಗೂ ಏಕದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿ, ಎಣ್ಣೆಕಾಳುಗಳು ಮತ್ತು ಖಾದ್ಯ ತೈಲಗಳು, ಆಹಾರ ವಸ್ತುಗಳ ಪೂರೈಕೆಯನ್ನು ಅಸಾಮಾನ್ಯ ಪರಿಸ್ಥಿತಿಗಳಲ್ಲಿ ನಿಯಂತ್ರಣಕ್ಕೆ ಒಳಪಡಿಸಬಹುದು. ಯುದ್ಧ, ಕ್ಷಾಮ, ಅಸಾಮಾನ್ಯ ಅನ್ನಿಸುವಂತಹ ಬೆಲೆ ಹೆಚ್ಚಳ, ತೀವ್ರ ಪ್ರಮಾಣದ ಪ್ರಾಕೃತಿಕ ವಿಕೋಪಗಳು ಇಂತಹ ಅಸಾಮಾನ್ಯ ಪರಿಸ್ಥಿತಿಗಳು ಎಂದು ಈ ತಿದ್ದುಪಡಿ ಕಾಯ್ದೆಯಲ್ಲಿ ಹೇಳಲಾಗಿದೆ. ಆಹಾರ ಧಾನ್ಯಗಳ ಸಾಗಣೆ ವಿಚಾರದಲ್ಲಿ ದಶಕಗಳಿಂದ ಇದ್ದ ನಿರ್ಬಂಧವನ್ನು ತೆಗೆದುಹಾಕುವ ಇಂತಹ ಪ್ರಮುಖ ಕ್ರಮಗಳಿಗೆ ಯಾವುದೇ ರೈತ ಯಾವ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಬಹುದು?

ಹೊಸ ಕಾನೂನುಗಳು ರೈತರನ್ನು ಹಾಗೂ ವರ್ತಕರನ್ನು ಪುರಾತನ ಕಾನೂನುಗಳಿಂದ ಮುಕ್ತಗೊಳಿ
ಸುತ್ತವೆ. ಹೊರ ಜಗತ್ತಿನ ಸಂಪರ್ಕ ಇಲ್ಲದ, ತಾಲ್ಲೂಕು ಮಟ್ಟದ ಮಾರುಕಟ್ಟೆಗಳ ಹಿಡಿತದಿಂದ ರೈತರನ್ನು ಪಾರು ಮಾಡುತ್ತವೆ. ಬೇರೆ ಬೇರೆ ರಾಜ್ಯಗಳಲ್ಲಿ ಸಿಗುತ್ತಿರುವ ಬೆಲೆ ರೈತರಿಗೆ ಸಿಗುವಂತೆ ಮಾಡುತ್ತವೆ. ಮಾರುಕಟ್ಟೆ ಶಕ್ತಿಗಳು ವಹಿವಾಟಿನ ನಿಯಂತ್ರಣ ತೆಗೆದುಕೊಳ್ಳುತ್ತವೆ, ಮಂಡಿಗಳು ಹೆಚ್ಚು ಸ್ಪರ್ಧಾತ್ಮಕ ಆಗುತ್ತವೆ, ಎಂಎಸ್‌ಪಿ ವ್ಯವಸ್ಥೆ ಮುಂದು
ವರಿಯುತ್ತದೆ. ಎಪಿಎಂಸಿಗಳ ಬಿಗಿಹಿಡಿತದಿಂದ, ಕಮಿಷನ್‌ ಏಜೆಂಟ್‌ಗಳ ನಿಯಂತ್ರಣದಿಂದ ರೈತರನ್ನು ಬಿಡುಗಡೆ ಮಾಡುತ್ತವೆ ಇವು.

ಕೃಷಿ ಕಾಯ್ದೆಗಳ ವಿಚಾರದಲ್ಲಿ ಯುಪಿಎ ತೋರಿದ ಡೋಂಗಿತನದ ಬಗ್ಗೆ ಒಂದು ಮಾತು ಹೇಳಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸೇರಿದಂತೆ ಹಲವು ಸರ್ಕಾರಗಳು ಕೃಷಿ ಕಾಯ್ದೆಗಳಲ್ಲಿ ಸುಧಾರಣೆ ತರಬೇಕು ಎಂದು 20 ವರ್ಷಗಳಿಗೂ ಹೆಚ್ಚು ಕಾಲ ಹೆಣಗಿವೆ. ಅವರು ಇಂದು ನಡೆಸುತ್ತಿರುವ ಪ್ರತಿಭಟನೆ ಟೊಳ್ಳಾಗಿ ಕಾಣುತ್ತಿದೆ. ಇಲ್ಲಿ ಬಹುದೊಡ್ಡ ಯೂಟರ್ನ್‌ ಹೊಡೆದಿರುವ ರಾಜಕಾರಣಿ ನ್ಯಾಷನಲಿಸ್ಟ್‌ ಕಾಂಗ್ರೆಸ್‌ನ ನಾಯಕ ಶರದ್ ಪವಾರ್. ಅವರು 2010ರಲ್ಲಿ ಕೇಂದ್ರ ಕೃಷಿ ಸಚಿವ ಆಗಿದ್ದಾಗ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಪರವಾಗಿದ್ದರು. ರೈತರು, ಗ್ರಾಹಕರ ಹಿತದ ದೃಷ್ಟಿಯಿಂದ ಖಾಸಗಿ ವಲಯವು ಪರ್ಯಾಯ ಸ್ಪರ್ಧಾತ್ಮಕ ಮಾರುಕಟ್ಟೆ ಮಾರ್ಗವನ್ನು ತೋರಿಸಲು ಉತ್ತೇಜಿಸುವಂತೆ ಕಾಯ್ದೆಗಳಿಗೆ ರಾಜ್ಯಗಳು ತಿದ್ದುಪಡಿ ತರಬೇಕು ಎಂದಿದ್ದರು. ಖಾಸಗಿ ವಲಯದ ತೊಡಗಿಕೊಳ್ಳುವಿಕೆ ಅಗತ್ಯವೆಂದು ಅವರು ಹೇಳಿದ್ದರು.

2011ರ ನವೆಂಬರ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರಿಗೆ ಬರೆದ ಪತ್ರದಲ್ಲಿ ಪವಾರ್ ಅವರು, ‘ಕೃಷಿ ಕ್ಷೇತ್ರಕ್ಕೆ ಚೆನ್ನಾಗಿ ಕೆಲಸ ಮಾಡುತ್ತಿರುವ ಮಾರುಕಟ್ಟೆಗಳ ಅಗತ್ಯವಿದೆ. ಇಲ್ಲಿ ಖಾಸಗಿ ವಲಯವು ಮುಖ್ಯ ಪಾತ್ರವನ್ನು ವಹಿಸಬೇಕು. ಇದು ಕೊಯ್ಲಿನ ನಂತರದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಗ್ರಾಹಕರು ಪಾವತಿಸುವ ಹಣದಲ್ಲಿ ರೈತರಿಗೆ ಹೆಚ್ಚಿನ ಪಾಲು ಸಿಗುವಂತೆ ಮಾಡುತ್ತದೆ’ ಎಂದಿದ್ದರು. ಹಾಗಾಗಿ, ಎಪಿಎಂಸಿ ಕಾಯ್ದೆಯನ್ನು ಸೂಕ್ತವಾಗಿ ಬದಲಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು. ಈಗ ಪವಾರ್ ಅವರು ಬೇರೆಯ ರಾಗ ನುಡಿಸುತ್ತಿದ್ದಾರೆ. ಮಂಡಿಗಳಿಗೆ ತೊಂದರೆ ಆಗುತ್ತದೆ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಎಂಎಸ್‌ಪಿ ಖಾತರಿ ಇಲ್ಲ ಎಂದು ಪವಾರ್ ಹೇಳುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಏಕೆಂದರೆ, ಎಂಎಸ್‌ಪಿ ಅಡಿಯಲ್ಲಿ ಸರ್ಕಾರಕ್ಕೆ ಉತ್ಪನ್ನಗಳನ್ನು ಮಾರುವ ಅವಕಾಶವನ್ನು ರೈತರು ಕಳೆದುಕೊಳ್ಳುವುದೇ ಇಲ್ಲ.

ಈ ಕಾಯ್ದೆಗಳನ್ನು ರೈತರ ಮೇಲೆ ಇದ್ದಕ್ಕಿದ್ದಂತೆ ಹೇರಲಾಗಿದೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಕೃಷಿ ಮಾರುಕಟ್ಟೆಯನ್ನು ಮುಕ್ತವಾಗಿಸಬೇಕು ಎಂಬ ಮಾತು 20 ವರ್ಷಗಳಿಂದಲೂ ಇದೆ. ಹಲವು ಸರ್ಕಾರಗಳು ಕೆಲವು ಯತ್ನಗಳನ್ನು ನಡೆಸಿವೆ. 2017ರಲ್ಲಿ ಮಾದರಿ ಮಸೂದೆಯೊಂದನ್ನು ಕೇಂದ್ರವು ರಾಜ್ಯಗಳಿಗೆ ರವಾನಿಸಿತ್ತು. ಹನ್ನೊಂದು ರಾಜ್ಯಗಳು ಅದನ್ನು ಪೂರ್ತಿಯಾಗಿ ಒಪ್ಪಿಕೊಂಡಿವೆ. ಆರು ರಾಜ್ಯಗಳು ಆಂಶಿಕವಾಗಿ ಒಪ್ಪಿವೆ. ಕೃಷಿ ಗುತ್ತಿಗೆಗೆ ಸಂಬಂಧಿಸಿದ ಮಾದರಿ ಕಾಯ್ದೆಯನ್ನು ಕೇಂದ್ರವು 2018ರಲ್ಲಿ ರಾಜ್ಯಗಳಿಗೆ ರವಾನಿಸಿತ್ತು. ಎರಡು ರಾಜ್ಯಗಳು ಇದನ್ನು ಒಪ್ಪಿವೆ. ಪಂಜಾಬ್‌ನಲ್ಲಿ ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ 2013ರಿಂದಲೇ ಕಾಯ್ದೆಯೊಂದು ಇದೆ.

ಭಾರತದಲ್ಲಿ 28 ರಾಜ್ಯಗಳು, ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ ಎಂಬುದನ್ನು ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ಅರ್ಥ ಮಾಡಿಕೊಳ್ಳಬೇಕು. ಹೊಸ ಕಾಯ್ದೆಗಳ ಬಗ್ಗೆ ಹಲವು ರಾಜ್ಯಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಹತ್ತಿರವಿದ್ದಾರೆ ಎಂಬ ಮಾತ್ರಕ್ಕೆ, ಅವರ ಮಾತೇ ಅಂತಿಮ ಎನ್ನಲಾಗದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು