ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

ಬಳಕೆದಾರರ ಹಿತರಕ್ಷಣೆಗೆ ಸಮರ್ಪಕ ನಿಯಮ ರೂಪಿಸಲು ಏಕೆ ಇಷ್ಟು ತಿಣುಕಾಟ?
Last Updated 13 ಮೇ 2022, 22:04 IST
ಅಕ್ಷರ ಗಾತ್ರ

ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾ ಅಥವಾ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುತ್ತಾ ನೀವು ತಿನ್ನುವ ಚಿಪ್ಸ್, ಕೋಡುಬಳೆ, ಚಕ್ಕುಲಿ ಅಥವಾ ಕುಡಿಯುವ ಕೋಕಾ ಕೋಲಾ, ಪೆಪ್ಸಿ, ಫ್ರೂಟಿ ಮುಂತಾದ ತಂಪು ಪಾನೀಯದಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶದ ಪ್ರಮಾಣವನ್ನು ಬಲ್ಲಿರಾ? ಪ್ಯಾಕೆಟ್ ಮೇಲೆ ಮುದ್ರಿಸಿರುವ ಮಾಹಿತಿ ಎಂದಾದರೂ ಓದಿದ್ದೀರಾ? ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಒಂದು ವಾರಕ್ಕೆ ಬೇಕಾದಷ್ಟು ಸಕ್ಕರೆ ನಿಮ್ಮ ಹೊಟ್ಟೆಯೊಳಕ್ಕೆ ಪ್ರವೇಶ ಮಾಡಿರುತ್ತದೆ. ಅತಿಯಾದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶ ಸೇವಿಸುವುದರಿಂದ ಬೊಜ್ಜು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿ
ಕೊಳ್ಳುತ್ತವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ.

ಬಳಕೆದಾರರ ಮೇಲೆ ಆಗುತ್ತಿರುವ ಈ ದುಷ್ಪರಿಣಾಮ ತಡೆಗಟ್ಟಲು ಇರುವ ಒಂದೇ ಮಾರ್ಗ, ಪ್ಯಾಕ್ ಮಾಡಿದ ಆಹಾರದಲ್ಲಿರುವ ಪೌಷ್ಟಿಕಾಂಶ, ಸಕ್ಕರೆ, ಉಪ್ಪು ಮತ್ತು ಇತರ ಅಂಶಗಳ ಬಗ್ಗೆ ಬಳಕೆದಾರರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುವುದು. ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರವು (ಎಫ್‍ಎಸ್‍ಎಸ್‍ಎಐ) ನಿಯಮ ರೂಪಿಸಲು ಮುಂದಾಗಿದೆ. ಆದರೆ ಪ್ರಾಧಿಕಾರದ ನಡೆ ವಿವಾದಕ್ಕೆ ಒಳಪಟ್ಟಿದೆ.

ಬಳಕೆದಾರರು ಸೇವಿಸುವ ಆಹಾರದ ಬಗ್ಗೆ ಮಾಹಿತಿ ನೀಡಲು ವಿಶ್ವದಾದ್ಯಂತ ವಿವಿಧ ಮಾದರಿಗಳನ್ನು ಅನುಸರಿಸಲಾಗಿದೆ. ಬ್ರಿಟನ್, ಇರಾನ್, ಶ್ರೀಲಂಕಾ, ಈಕ್ವೆಡಾರ್‌ನಲ್ಲಿ ‘ಟ್ರಾಫಿಕ್ ಲೈಟ್ ಸಿಗ್ನಲ್’ ಮಾದರಿಯನ್ನು ಅನುಸರಿಸಲಾಗಿದೆ. ಇದರ ಪ್ರಕಾರ, ಆಹಾರದ ಪ್ಯಾಕೆಟ್ ಮೇಲೆ ಮೂರು ಬಣ್ಣಗಳಲ್ಲಿ ಮಾಹಿತಿ ಮುದ್ರಿಸಲಾಗುತ್ತದೆ. ಹಸಿರು, ಕೇಸರಿ ಮತ್ತು ಕೆಂಪು ಬಣ್ಣಗಳ ಹಿನ್ನೆಲೆಯಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶದ ಪ್ರಮಾಣವನ್ನು ಮುದ್ರಿಸಲಾಗುತ್ತದೆ. ಹಸಿರು ಬಣ್ಣ ಅತಿ ಕಡಿಮೆ ಎಂದು, ಕೆಂಪು ಬಣ್ಣವಾದರೆ ಹೆಚ್ಚಿನ ಅಂಶ ಎಂದು ಅರ್ಥ. ಆದರೆ ಒಂದೇ ಆಹಾರ ಪದಾರ್ಥದಲ್ಲಿ ಉಪ್ಪು ಮತ್ತು ಕೊಬ್ಬಿನಾಂಶ ಹೆಚ್ಚಾಗಿದ್ದಲ್ಲಿ ಬಳಕೆದಾರರಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್‌, ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾ ದೇಶಗಳು ನಕ್ಷತ್ರ (ಸ್ಟಾರ್ ರೇಟಿಂಗ್) ನೀಡುವ ಮೂಲಕ ಆಹಾರದಲ್ಲಿರುವ ವಿವಿಧ ಅಂಶಗಳ ಬಗ್ಗೆ ಮಾಹಿತಿ ನೀಡುವ ಕಾನೂನು ಹೊರಡಿಸಿವೆ.

ನಮ್ಮ ದೇಶದಲ್ಲಿ ವಿದ್ಯುತ್ ಉಪಕರಣಗಳಿಗೆ ಸ್ಟಾರ್ ರೇಟಿಂಗ್ ಜಾರಿಯಲ್ಲಿದೆ. ಕಡಿಮೆ ವಿದ್ಯುತ್ ಬಳಸುವ ಉಪಕರಣಕ್ಕೆ ಐದು ಸ್ಟಾರ್, ಹೆಚ್ಚು ವಿದ್ಯುತ್ ಬಳಸುವ ಉಪಕರಣಕ್ಕೆ ಒಂದು ಸ್ಟಾರ್ ನೀಡಲಾಗುತ್ತದೆ. ಚಿಲಿ, ಉರುಗ್ವೆ, ಮೆಕ್ಸಿಕೊ ಮತ್ತು ಇಸ್ರೇಲ್ ದೇಶಗಳು ಅತ್ಯಂತ ಪರಿಣಾಮಕಾರಿ ಮಾದರಿಯನ್ನು ಅನುಸರಿಸುತ್ತಿವೆ. ಈ ದೇಶಗಳಲ್ಲಿ ಆಹಾರದ ಪ್ಯಾಕೆಟ್ ಮೇಲೆ ಎಚ್ಚರಿಕೆಯ ಲೇಬಲ್ ಇರುತ್ತದೆ. ಸಕ್ಕರೆ, ಉಪ್ಪು, ಕೊಬ್ಬಿನಾಂಶ ಮತ್ತು ಇತರ ಪೌಷ್ಟಿಕಾಂಶದ ಪ್ರಮಾಣದ ಮಾಹಿತಿಯನ್ನು ಬಣ್ಣ, ಗ್ರಾಫಿಕ್ಸ್‌ನಂತಹವುಗಳ ಮೂಲಕ ಒದಗಿಸಲಾಗುತ್ತದೆ. ಬಳಕೆದಾರರು ಸುಲಭವಾಗಿ ಇದನ್ನು ಅರ್ಥಮಾಡಿಕೊಳ್ಳಬಹುದು.

ಭಾರತದಲ್ಲಿರುವ ಅನಕ್ಷರತೆ, ಭಾಷಾ ಸಮಸ್ಯೆ, ಬಳಕೆದಾರರಲ್ಲಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲಿನ ವ್ಯಾಮೋಹ ಇತ್ಯಾದಿ ಹಿನ್ನೆಲೆಯಲ್ಲಿ ಯಾವ ಮಾದರಿ ಲೇಬಲ್ ಅಳವಡಿಸಬೇಕೆಂಬ ಚರ್ಚೆ ಏಳೆಂಟು ವರ್ಷಗಳಿಂದ ನಡೆಯುತ್ತಿದೆ. ಎಫ್‍ಎಸ್‍ಎಸ್‍ಎಐ 2014ರ ಮಾರ್ಚ್‌ನಲ್ಲಿ ಆಹಾರ ತಜ್ಞರ ಸಮಿತಿಯನ್ನು ರಚಿಸಿದ್ದು ಮೊದಲನೇ ಪ್ರಯತ್ನ. ಈ ಸಮಿತಿಯು ಆಹಾರದಲ್ಲಿರುವ ವಿವಿಧ ಪೌಷ್ಟಿಕಾಂಶ, ಸಕ್ಕರೆ, ಉಪ್ಪು ಇತ್ಯಾದಿ ವಿವರವನ್ನು ಪ್ಯಾಕೆಟ್ ಮುಂಭಾಗದಲ್ಲಿ ಮುದ್ರಿಸಬೇಕೆಂದು ಸಲಹೆ ನೀಡಿತು. 2015ರ ಜೂನ್‌ನಲ್ಲಿ ಹನ್ನೊಂದು ಸದಸ್ಯರ ಮತ್ತೊಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು 2017ರ ಮೇ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತು.

ಲೇಬಲಿಂಗ್ ಬಗ್ಗೆ 2018ರ ಏಪ್ರಿಲ್‌ನಲ್ಲಿ ಎಫ್‍ಎಸ್‍ಎಸ್‍ಎಐ ಕರಡು ನಿಯಮ ಪ್ರಕಟಿಸಿತು. ಇದರ ಪ್ರಕಾರ, ಪ್ಯಾಕೆಟ್ ಮುಂಭಾಗದಲ್ಲಿ ಒಟ್ಟು ಕೊಬ್ಬಿನಾಂಶ, ಉಪ್ಪು, ಸಕ್ಕರೆ ಮತ್ತು ಅವುಗಳ ಗರಿಷ್ಠ ಪ್ರಮಾಣವನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ನಂತರ ಅದೇ ವರ್ಷ ಆಗಸ್ಟ್‌ನಲ್ಲಿ ಬಿ. ಸಸಿಶೇಖರನ್ ಅವರ ಅಧ್ಯಕ್ಷತೆಯಲ್ಲಿ ಎಫ್‍ಎಸ್‍ಎಸ್‍ಎಐ ಮತ್ತೊಂದು ಸಮಿತಿ ರಚಿಸಿ, ಕರಡು ನಿಯಮದ ಬಗ್ಗೆ ಸಲಹೆ ನೀಡುವಂತೆ ಸೂಚಿಸಿತು. ಈ ಸಮಿತಿಯ ವರದಿ ಬಹಿರಂಗ ಆಗಲಿಲ್ಲ. 2019ರ ಜುಲೈನಲ್ಲಿ ಎಫ್‍ಎಸ್‍ಎಸ್‍ಎಐ ಪ್ರಕಟಿ
ಸಿದ ಮತ್ತೊಂದು ಕರಡು ನಿಯಮದಲ್ಲಿ ಬಹಳಷ್ಟು ಬದಲಾವಣೆ ಮಾಡಿತ್ತು.

ಉದಾಹರಣೆಗೆ ‘ಉಪ್ಪು’ ಎನ್ನುವ ಬದಲು ‘ಸೋಡಿಯಂ’, ಒಟ್ಟು ಸಕ್ಕರೆ ಬದಲು ‘ಸೇರಿಸಿದ ಸಕ್ಕರೆ’ ಎಂಬ ಪದಗಳನ್ನು ಬಳಸಲಾಗಿತ್ತು. ಇದರಿಂದ ಕರಡು ನಿಯಮ ಬಹಳಷ್ಟು ಸಡಿಲಗೊಂಡಿತು. ಮತ್ತೊಮ್ಮೆ 2020ರ ಜನವರಿಯಲ್ಲಿ ಎಫ್‍ಎಸ್‍ಎಸ್‍ಎಐ ಇನ್ನೊಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ, ಪ್ಯಾಕೆಟ್ ಮುಂಭಾಗದಲ್ಲಿ ಮುದ್ರಿಸುವ ನಿಯಮವನ್ನು ಪುನರ್‌ ಪರಿಶೀಲಿಸುವಂತೆ ಸೂಚಿಸಿತು. 2020ರ ನವೆಂಬರ್‌ನಲ್ಲಿ ಎಫ್‍ಎಸ್‍ಎಸ್‍ಎಐ ಪ್ರಕಟಿಸಿದ ಆಹಾರ ಸುರಕ್ಷತೆ ಮತ್ತು ಮಾನಕ (ಲೇಬಲಿಂಗ್) ನಿಯಮದಲ್ಲಿ ಪ್ಯಾಕೆಟ್ ಮುಂಭಾಗದಲ್ಲಿ ಮಾಹಿತಿ ಮುದ್ರಿಸುವ ವಿಚಾರವೇ ನಾಪತ್ತೆ.

ಮೇಲೆ ಹೇಳಿದ ದಂಡಯಾತ್ರೆ ಸಾಲದು ಎಂಬಂತೆ ಎಫ್‍ಎಸ್‍ಎಸ್‍ಎಐ ಈ ವರ್ಷದ ಫೆಬ್ರುವರಿಯಲ್ಲಿ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮೂಲಕ ದೇಶವ್ಯಾಪಿ ಸಮೀಕ್ಷೆ ನಡೆಸಿದ್ದು, ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ
ರಿಂದ ಸಲಹೆ ಆಹ್ವಾನಿಸಿದೆ. ಈ ಸಮೀಕ್ಷೆಯು ಬಳಕೆದಾರರ ಹಿತಕ್ಕಿಂತ ಸಿದ್ಧಪಡಿಸಿದ ಆಹಾರ ಕಂಪನಿಗಳ ಪರ ಇದೆ ಎಂಬ ಟೀಕೆಗೆ ಗುರಿಯಾಗಿದೆ. ವರದಿಯು ಸ್ಟಾರ್ ರೇಟಿಂಗ್ ಪದ್ಧತಿ ಅನುಸರಿಸುವಂತೆ ಸಲಹೆ ನೀಡಿದೆ. ಆದರೆ ಸ್ಟಾರ್ ರೇಟಿಂಗ್ ಪದ್ಧತಿ ಜಾರಿಗೊಳಿಸಿರುವ ದೇಶಗಳಲ್ಲಿ ಅದು ವಿಫಲವಾಗಿರುವುದರಿಂದ ಅದನ್ನು ಭಾರತದಲ್ಲಿ ಅಳವಡಿಸುವುದು ಸರಿಯಲ್ಲ ಎಂದು ಆಹಾರ ತಜ್ಞರು ಮತ್ತು ಗ್ರಾಹಕ ಕಾಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಐಐಎಂ ಸಮೀಕ್ಷೆ ನಡೆಸಿದ ಮಾದರಿ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಸಮೀಕ್ಷೆಯು ಸುಮಾರು 20,000 ಬಳಕೆದಾರರನ್ನು ಒಳಗೊಂಡಿತ್ತು. ವರದಿಯಲ್ಲಿ ಸೂಚಿಸಿರುವಂತೆ ಅದರಲ್ಲಿ ಶೇಕಡ 13.8ರಷ್ಟು ಬಳಕೆದಾರರು ಅನಕ್ಷರಸ್ಥರು ಅಥವಾ ಶಾಲೆಗೆ ಹೋಗದವರು ಮತ್ತು ಶೇಕಡ 28ರಿಂದ 35ರಷ್ಟು ಜನರು ಆಹಾರದ ಪ್ಯಾಕೆಟ್ ಮೇಲಿನ ಲೇಬಲ್ ಓದದವರು. ಪ್ಯಾಕ್ ಮಾಡಿದ ಆಹಾರ ಪದಾರ್ಥ ಸೇವಿಸುವವರಲ್ಲಿ 10ರಿಂದ 18 ವರ್ಷದವರೇ ಹೆಚ್ಚು. ಆದರೆ ಸಮೀಕ್ಷೆಗೆ ಈ ವಯೋಮಾನದವರನ್ನು ಪರಿಗಣಿಸಿಲ್ಲ. ಇಂತಹ ವರದಿಯನ್ನು ಒಪ್ಪಿಕೊಳ್ಳಬೇಕೆ ಎಂಬ ಅನುಮಾನವನ್ನು ಆಹಾರ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಎಫ್‍ಎಸ್‍ಎಸ್‍ಎಐ ಇರುವುದು ಬಳಕೆದಾರರ ಹಿತ ಕಾಯುವುದಕ್ಕೋ ಅಥವಾ ಆಹಾರ ಸಂಸ್ಕರಿಸುವ ಉದ್ಯಮದ ಹಿತ ಕಾಯುವುದಕ್ಕೋ? ಬಳಕೆದಾರರ ತೆರಿಗೆ ಹಣದಿಂದ ಸ್ಥಾಪನೆಗೊಂಡಿರುವ ಎಫ್‍ಎಸ್‍ಎಸ್‍ಎಐ ಇಷ್ಟೆಲ್ಲಾ ಸರ್ಕಸ್ ಮಾಡುವ ಬದಲು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಾದರಿ ಅನುಸರಿಸಬಹುದಿತ್ತು. ಸಂಸ್ಕರಿಸಿದ 100 ಗ್ರಾಂ ಆಹಾರ, 100 ಮಿಲಿ ಲೀಟರ್ ಪಾನೀಯದಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಕರೆ, ಉಪ್ಪು, ಕೊಬ್ಬಿನಾಂಶ ಇರಬಹುದು ಎಂಬುದನ್ನು ಈ ಮಾದರಿಯು ಸೂಚಿಸಿದೆ. ಇದನ್ನು ಆಚರಣೆಗೆ ತರಲು ಇರುವ ಅಡಚಣೆಯಾದರೂ ಯಾವುದು?

ಭಾರತದ ಪರಿಸ್ಥಿತಿಗೆ ಅನುಗುಣವಾಗಿ ಬೇಕಾಗಿರುವ ಗರಿಷ್ಠ ಮಿತಿಯನ್ನು ನಿರ್ಧರಿಸುವವರೆಗೆ ವಿಶ್ವ ಆರೋಗ್ಯ ಸಂಸ್ಥೆಯ ನಿಯಮ ಪಾಲಿಸುವುದು ಸರಿಯಾದ ಮಾರ್ಗ.

ಲೇಖಕ: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT