ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಎರಡು ಬೆರಳ ಪರೀಕ್ಷೆಯೆನ್ನುವ ಅಸಭ್ಯ ನಡತೆ

ಈ ಪರೀಕ್ಷೆಯು ಭಾರತದ ಗಂಡುಹಿರಿಮೆಯ ಸಮಾಜದ ಕಪ್ಪುಚುಕ್ಕೆಯಾಗಿದೆ
Last Updated 8 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಒಪ್ಪಿಗೆಯಿಲ್ಲದೆ ನಡೆಸುವ ಲೈಂಗಿಕ ಕ್ರಿಯೆಯೇ ಅತ್ಯಾಚಾರ ಎಂದಾದರೆ, ಒಪ್ಪಿಗೆಯ ಅಸ್ತಿತ್ವವನ್ನು ಸಂತ್ರಸ್ತೆಯ ಹೇಳಿಕೆ ಯಲ್ಲಿ ಹುಡುಕಬೇಕು, ಅವಳ ಯೋನಿಯ ಬಿಗಿತನ, ಮಡಿಕೆ, ಸಡಿಲತನದಲ್ಲಿ ಅಲ್ಲ. ಈ ಸರಳ ಮೂಲಭೂತ ತಿಳಿವಳಿಕೆಯೂ ಇಲ್ಲ ಎನ್ನುವುದೇ ಭಾರತದ ಗಂಡು ಹಿರಿಮೆಯ ಸಮಾಜದ ಕಪ್ಪುಚುಕ್ಕೆ.

ಮೊದಲೆಲ್ಲ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಆರೋಗ್ಯ ತಪಾಸಣೆ, ಸಾಕ್ಷ್ಯ ಸಂಗ್ರಹದ ವೇಳೆ ತಪಾಸಣೆಗೆ ಬರುವ ವೈದ್ಯ ಅಥವಾ ವೈದ್ಯೆ ತಮ್ಮೆರಡು ಬೆರಳುಗಳನ್ನು ಯೋನಿಯಲ್ಲಿ ಹಾಕಿ, ಯೋನಿಪೊರೆ ಇದೆಯೇ, ಅದರ ಸ್ಥಿತಿ ಹೇಗಿದೆ, ಯೋನಿಯು ಬಿಗಿಯಾಗಿದೆಯೇ, ಸಡಿಲವಾಗಿದೆಯೇ, ಸಂಭೋಗ- ಬಲಾತ್ಕಾರ ನಡೆದ ಕುರುಹುಗಳೇನಾದರೂ ಇವೆಯೇ ಎಂಬುದನ್ನು ಪರಿಶೀಲಿಸಿ ವಿವರ ನೀಡಲು ‘ಎರಡು ಬೆರಳ ಪರೀಕ್ಷೆ’ ನಡೆಸುವುದು ಅವಶ್ಯವಾಗಿತ್ತು. ಆದರೆ ಮಹಿಳೆಯ ಘನತೆಯನ್ನು ಕುಗ್ಗಿಸುವ ಈ ಪರೀಕ್ಷೆಯನ್ನು ನಿಲ್ಲಿಸಲೇಬೇಕೆಂದು ನ್ಯಾಯಾಲಯಗಳು ಹೇಳುತ್ತಾ ಬಂದರೂ ಅದು ಕೊನೆಗೊಳ್ಳದ ಕಾರಣ, ಎರಡು ಬೆರಳ ಪರೀಕ್ಷೆ ನಡೆಸುವುದು ‘ಅಸಭ್ಯ ನಡತೆ’ಯಾಗಿದ್ದು ಅದು ಶಿಕ್ಷಾರ್ಹ ಎಂದು ಪರಿಗಣಿಸುವಂತೆ ಆಯಿತು.

2004ರಲ್ಲಿ ಜಾರ್ಖಂಡ್‍ನ ಬಾಲಕಿಯ ಮೇಲೆ ಕೇಡಿಗನೊಬ್ಬ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ ಪ್ರಕರಣ ದಲ್ಲಿ, ತೀರಿಕೊಳ್ಳುವ ಮೊದಲು ಹುಡುಗಿ ಘಟನೆಯ ಪೂರ್ತಿ ವಿವರ ಕೊಟ್ಟಳು. ಪೂರಕ ಸಾಕ್ಷಿಗಾಗಿ ಅವಳ ಯೋನಿ ಪರೀಕ್ಷೆ ನಡೆಯಿತು. ಸೆಷನ್ಸ್ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದಾಗ ಆತ ಹೈಕೋರ್ಟ್‌ ಮೊರೆ ಹೋದ. 2018ರಲ್ಲಿ ಖುಲಾಸೆಯಾದ! ಖುಲಾಸೆ ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ, ‘ಮರಣಶಯ್ಯೆಯಲ್ಲಿರುವ ಹುಡುಗಿಯ ಹೇಳಿಕೆಗಿಂತ ದೊಡ್ಡ ಸಾಕ್ಷ್ಯ ಬೇಕಿಲ್ಲ. ಅಂಥ ಸ್ಥಿತಿಯಲ್ಲೂ ಅವಳಿಗೆ ಎರಡು ಬೆರಳ ಪರೀಕ್ಷೆ ನಡೆಸಿರುವುದು ಅಮಾನವೀಯ. ಹೆಣ್ಣು ಸಂಭೋಗಕ್ಕೆ ಒಗ್ಗಿಕೊಂಡಿರುವವಳೋ, ಅನೇಕ ಸಲ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವವಳೋ ಎನ್ನು ವುದು ಅಪ್ರಸ್ತುತವೆಂದು ಸುಪ್ರೀಂ ಕೋರ್ಟ್‌ ಬಹಳಷ್ಟು ಸಲ ಹೇಳಿದೆ. ಆದರೂ ಯೋನಿ ಪರೀಕ್ಷೆ ನಡೆಸುತ್ತಲೇ ಇರುವುದು ಗಂಡುಹಿರಿಮೆಯ, ಲಿಂಗಪೂರ್ವಗ್ರಹದ ನಡೆಯಾಗಿದೆ’ ಎಂದು ಅ.31ರಂದು ನೀಡಿದ ತೀರ್ಪಿನಲ್ಲಿ ಖಂಡಿಸಿದರು. ಸಂತ್ರಸ್ತೆಗೆ ಆ ಪರೀಕ್ಷೆ ನಡೆಸುವುದು ಶಿಕ್ಷಾರ್ಹ ಅಪರಾಧವೆಂದು ತಿಳಿಸಿದರು.

ಅತ್ಯಾಚಾರ ಆರೋಪಿಯ ಪುರುಷತ್ವದ ಪರೀಕ್ಷೆಗೆ ಅವನ ಒಪ್ಪಿಗೆಯ ಅವಶ್ಯಕತೆ ಇರುವುದಿಲ್ಲ. ಆದರೆ ದೌರ್ಜನ್ಯ ಪ್ರಕರಣ ಒತ್ತಟ್ಟಿಗಿರಲಿ, ಹೆರಿಗೆ, ಪ್ರಜನನಾಂಗ ಕಾಯಿಲೆ ಪತ್ತೆಯೇ ಮೊದಲಾದ ಸಂದರ್ಭಗಳಲ್ಲಿಯೂ ಅವಳು ಅನುಮತಿಸದಿದ್ದರೆ ಯೋನಿ ಪರೀಕ್ಷೆ ಮಾಡು ವಂತಿಲ್ಲ. ದಿನ ತುಂಬಿದ ಎಷ್ಟೋ ಬಸುರಿಯರು ಈ ಪರೀಕ್ಷೆ ತಪ್ಪಿಸಲು ಐಚ್ಛಿಕವಾಗಿ ಸಿಸೇರಿಯನ್‍ಗೆ ಒಳಗಾಗುತ್ತಾರೆ. ಹಾಗಿರುವಾಗ ಯೋನಿ ಪರೀಕ್ಷೆಯ ವರದಿಯನ್ನು ಇಟ್ಟುಕೊಂಡು ಪ್ರತಿವಾದಿ ವಕೀಲರು ಸಾರ್ವಜನಿಕರ ಎದುರು ಅವಹೇಳನಕಾರಿ ಪ್ರಶ್ನೆ ಕೇಳುತ್ತಾ ನಡೆಸುತ್ತಿದ್ದ ಅತ್ಯಾಚಾರ ವಿಚಾರಣೆ ಅಮಾನವೀಯ; ಪೊಲೀಸರಿಂದ, ವೈದ್ಯಕೀಯ ಸಿಬ್ಬಂದಿಯಿಂದ, ನ್ಯಾಯಾಲಯದಿಂದ, ಮಾಧ್ಯಮದವರಿಂದ ಸಂತ್ರಸ್ತ ಮಹಿಳೆ ಮತ್ತೆಮತ್ತೆ ಅವಮಾನ ಅನುಭವಿಸುವುದು ನಿಲ್ಲಬೇಕು ಎಂದು 80ರ ದಶಕದಿಂದ ಉಪೇಂದ್ರ ಬಕ್ಷಿ, ಸೀಮಾ ಸಖಾರೆ, ವಸುಧಾ ಧಗಂವರ್ ಮೊದಲಾದ ಹೋರಾಟಗಾರರು ಹಕ್ಕೊತ್ತಾಯ ತಂದರು.

ಅತ್ಯಾಚಾರ ಆಗಿದೆ ಅಥವಾ ಇಲ್ಲ ಎನ್ನಲು ಎರಡು ಬೆರಳ ಪರೀಕ್ಷೆಯು ಯಾವ ವೈಜ್ಞಾನಿಕ ಸಾಕ್ಷ್ಯವನ್ನೂ ಒದಗಿಸುವುದಿಲ್ಲ. ಪರೀಕ್ಷೆಯಿಂದ ಸಿಗುವ ಮಾಹಿತಿಯಿಂದ ಏನೂ ಉಪಯೋಗವಿಲ್ಲ ಎಂದು ಅನೇಕ ಅಂತರರಾಷ್ಟ್ರೀಯ ನಿಯಮಾವಳಿಗಳು ಮತ್ತು ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳೂ ಉಲ್ಲೇಖಿಸಿದವು.

ನಮ್ಮ ಸುಪ್ರೀಂ ಕೋರ್ಟ್‌ ಸಹ ಹಲವಾರು ಪ್ರಕರಣಗಳ ವಿಚಾರಣೆಯ ವೇಳೆ ಎರಡು ಬೆರಳ ಪರೀಕ್ಷೆ ನಡೆಸಬಾರದೆಂದು ಹೇಳಿತ್ತು. 2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ರೂಪುಗೊಂಡ ನ್ಯಾಯ ಮೂರ್ತಿ ಜೆ.ಎಸ್.ವರ್ಮಾ ಸಮಿತಿಯ ವರದಿಯು, ‘ಅತ್ಯಾಚಾರಕ್ಕೆ ಒಳಗಾದವರ ಹೇಳಿಕೆಯನ್ನೇ ಪರಮ ಸತ್ಯ (‘ಗಾಸ್ಪೆಲ್ ಟ್ರೂತ್’) ಎಂದು ಭಾವಿಸಬೇಕು. ಉಳಿದ ವೆಲ್ಲ ಅದಕ್ಕೆ ಪೂರಕ ಸಾಕ್ಷ್ಯಗಳಾಗಬೇಕು. ಎರಡು ಬೆರಳ ಪರೀಕ್ಷಾ ವಿಧಾನವನ್ನು ರದ್ದುಗೊಳಿಸಬೇಕು. ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಈ ಮೊದಲ ಲೈಂಗಿಕ ಅನುಭವಕ್ಕೂ ಸಾಕ್ಷ್ಯದ ಗುಣಮೌಲ್ಯಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿತು. ಕೇಂದ್ರ ಸರ್ಕಾರ ದೇಶದೆಲ್ಲೆಡೆ ಆಸ್ಪತ್ರೆಗಳಿಗೆ, ಆರೋಗ್ಯ- ಪೊಲೀಸ್ ಇಲಾಖೆ ಸಿಬ್ಬಂದಿಗೆ ಕಳಿಸಿದ ಸುತ್ತೋಲೆಯಲ್ಲೂ ಆ ಪರೀಕ್ಷೆ ಅನಗತ್ಯವೆಂದು ಹೇಳಲಾಯಿತು.

ವಿಚಾರಣೆಯ ವೇಳೆ ಅನುಸರಿಸಬೇಕಾದ ಮಾರ್ಗ ದರ್ಶಿ ಸೂತ್ರಗಳಲ್ಲಿ, ‘ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ನಡತೆ ಮತ್ತು ನೈತಿಕತೆ ಅಪ್ರಸ್ತುತ. ದೌರ್ಜನ್ಯಕ್ಕೆ ಒಳಗಾದ ವರ ಈ ಮೊದಲ ಲೈಂಗಿಕ ಸಂಬಂಧ, ಅನುಭವ ಕುರಿತು, ಅವರ ಅನೈತಿಕ ಸ್ವಭಾವ ಕುರಿತು ಪಾಟೀ ಸವಾಲಿನ ವೇಳೆಯೂ ಕೇಳುವಂತಿಲ್ಲ (ಸೆಕ್ಷನ್ 146, ಇಂಡಿಯನ್ ಎವಿಡೆನ್ಸ್ ಆ್ಯಕ್ಟ್). ಒಪ್ಪಿಗೆಯ ಪ್ರಶ್ನೆಯೇ ವಿವಾದಿತವಾಗಿ ರುವಾಗ ದೌರ್ಜನ್ಯಕ್ಕೆ ಒಳಗಾದವರ ನಡತೆ ಅಥವಾ ಈ ಮೊದಲ ಲೈಂಗಿಕತೆಯು ಅವರ ‘ಒಪ್ಪಿಗೆ’ಯ ಮೌಲ್ಯ ನಿರ್ಧರಿಸುವಲ್ಲಿ ಅಪ್ರಸ್ತುತ (ಸೆಕ್ಷನ್ 53ಎ, ಇಂಡಿಯನ್ ಎವಿಡೆನ್ಸ್ ಆ್ಯಕ್ಟ್)’ ಎಂದೂ ತಿಳಿಸಿತು. 2014ರ ಮಾರ್ಚ್ 6ರಂದು ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ಮಾರ್ಗಸೂಚಿ ಗಳನ್ನು ದೇಶದ ಪ್ರತಿಯೊಂದು ಆಸ್ಪತ್ರೆಗೂ ರವಾನಿಸಿತ್ತು. ಅದರಲ್ಲಿ, ‘ಅತ್ಯಾಚಾರ ದೃಢಗೊಳಿಸಲು ಎರಡು ಬೆರಳ ಪರೀಕ್ಷೆ ಮಾಡಬಾರದು. ವೈದ್ಯಕೀಯ ಪರೀಕ್ಷೆಯ ವೇಳೆ ಸಂತ್ರಸ್ತೆ ಮತ್ತು ವೈದ್ಯರನ್ನು ಹೊರತುಪಡಿಸಿ ಮೂರನೇ ವ್ಯಕ್ತಿ ಹಾಜರಿರಬಾರದು. ವೈದ್ಯ ಪುರುಷನಾಗಿದ್ದರೆ, ಮಹಿಳಾ ದಾದಿ ಕೊಠಡಿಯಲ್ಲಿ ಇರಬೇಕು. ತಾವು ಯಾವ ಪರೀಕ್ಷೆ ಮಾಡುತ್ತಿದ್ದೇವೆ, ಅದರ ಅಗತ್ಯವೇನೆಂದು ವೈದ್ಯರು ಸಂತ್ರಸ್ತೆಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು’ ಎಂದು ತಿಳಿಸಲಾಗಿತ್ತು.

‘ಸಂತ್ರಸ್ತೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ, ಪರೀಕ್ಷೆಗಳ ವಿವರವನ್ನು ಆಕೆಯ ಪೋಷಕರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಅನುಮತಿ ಪಡೆದುಕೊಳ್ಳಬೇಕು. ಅತ್ಯಾಚಾರ ಎಂಬುದು ಕಾನೂನಿಗೆ ಸಂಬಂಧಪಟ್ಟ ಪದವಾಗಿದ್ದು, ಇದನ್ನು ವೈದ್ಯರು ಬಳಸುವಂತಿಲ್ಲ. ವೈದ್ಯಕೀಯ ಪರಿಭಾಷೆಯಲ್ಲಿ ಸಂತ್ರಸ್ತೆಯ ದೇಹಸ್ಥಿತಿ ಮತ್ತು ತಪಾಸಣೆಯ ವಿವರಗಳ ಷರಾ ಬರೆಯಬೇಕು’ ಎಂದು ಹೇಳಿತ್ತು. ಆದರೆ ಮೇಲೆ ಸೂಚಿಸಿದವು ಮಾರ್ಗಸೂಚಿಗಳಷ್ಟೇ ವಿನಾ ಕಾನೂನು ಗಳಲ್ಲ. ಹಾಗಾಗಿ ಪಾಲಿಸಲೇಬೇಕೆಂಬ ಕಡ್ಡಾಯ ನಿಯಮ ಇರುವುದಿಲ್ಲ. ಈ ನಡುವೆ, ಎರಡು ಬೆರಳ ಪರೀಕ್ಷೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್‌ ಈ ವರ್ಷದ ಏಪ್ರಿಲ್‍ನಲ್ಲಿ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿತು. ಅದರ ಮುಂದುವರಿಕೆಯಾಗಿ ಈಗ ಸುಪ್ರೀಂ ಕೋರ್ಟ್‌ ತೀರ್ಪು ಬಂದಿದೆ.

ಒಟ್ಟಾರೆ, ಹೆಣ್ಣಿಗೆ ದೇಹದ ಹೊರತಾಗಿ ಒಂದು ಅಸ್ತಿತ್ವ- ವ್ಯಕ್ತಿತ್ವ ಇದೆಯೆಂದು ಭಾರತೀಯ ಸಮಾಜ ಭಾವಿಸಿಲ್ಲ. ಹಾಗಾಗಿಯೇ, ಹೆಣ್ಣನ್ನು ಮದುವೆಯ ಆಧಾರದ ಮೇಲೆ ಅಳೆಯುವ, ವಿಭಾಗಿಸುವ ಕ್ರಮ ಕಾನೂನಿನಲ್ಲೂ ಮುಂದುವರಿದಿದೆ. ಮದುವೆಯಾದದ್ದೇ ಹೆಣ್ಣು ತವರ ಹೆಸರು- ಅಧಿಕಾರ- ಮನೆತನದ ಹೆಸರನ್ನು ತನ್ನ ಮಕ್ಕಳಿಗೆ ದಾಟಿಸುವ ಹಕ್ಕು ಕಳೆದುಕೊಳ್ಳುತ್ತಾಳೆ. ಆಧಾರ್‌ ಕಾರ್ಡು, ಪಡಿತರ ಕಾರ್ಡುಗಳಲ್ಲೂ ಅವಳ ತವರಿನ ಕುರುಹು ಅಳಿಸಿಹೋಗುತ್ತದೆ. ಪುರುಷ ಲೈಂಗಿಕ ದಬ್ಬಾಳಿಕೆಯೇ ಎರಡು ಬೆರಳ ಪರೀಕ್ಷೆ, ಕನ್ಯತ್ವ, ಯೋನಿ ಬಿಗಿತ ಪ್ರಮುಖವಾಗುವುದರ ಹಿಂದೆ ಕೆಲಸ ಮಾಡುತ್ತಿದೆ.

ಗಂಡುಮಯ ಭಾರತೀಯ ಸಮಾಜದ ಪ್ರತೀ ವ್ಯವಸ್ಥೆ ಯೊಳಗಿರುವ ಪುರುಷತನವು ‘ಪ್ರಭುತ್ವ’ವಾಗಿ ಮಹಿಳೆ ಯನ್ನು ಶೋಷಣೆಗೆ ಒಳಪಡಿಸಿರುತ್ತದೆ. ಇಂತಲ್ಲಿ ಹೆಣ್ಣು ಬರಿಯ ಕಾನೂನು ಎಂಬ ಕತ್ತಿಯನ್ನು ನೆಚ್ಚಿಕೊಂಡರೆ ಸಾಲದು. ನಮ್ಮದೇ ಎದೆಯೋನಿಕಿಬ್ಬೊಟ್ಟೆಗಳ ನಡುವಿ ನಿಂದ ಹುಟ್ಟಿ ಬೆಳೆಯುವ ಗಂಡು ಹಿಂಸಾರೂಪಿ ಆಗದಂತೆ ತಡೆಯುವ ಪ್ರಯತ್ನ ಕುಟುಂಬದ ಒಳಗಿನಿಂದಲೇ ನಡೆಯಬೇಕು. ಪ್ರತೀ ಮನೆಯೂ ತನ್ನ ಗಂಡುಗಳ ಹೆಣ್ಣುಗುಣ ನಾಶವಾಗದಂತೆ ಬೆಳೆಸಬೇಕು. ಮಹಿಳಾ ಘನತೆಗೆ ಕುಂದು ತರುವ ಎಲ್ಲವನ್ನೂ ಎಲ್ಲರನ್ನೂ ಸಾರಾ ಸಗಟಾಗಿ ನಿರಾಕರಿಸಬೇಕು. ಆಗ ಲಿಂಗ ಸಮಾನತೆ ಸ್ವಭಾವವಾಗಿ ಮೈಗೂಡುತ್ತದೆ. ಎರಡು ಬೆರಳ ಪರೀಕ್ಷೆಯೂ ಅತ್ಯಾಚಾರವೂ ನಮಗೆ ಸಂಬಂಧಪಡದ ಬರಿಯ ಪದಗಳಾಗುತ್ತವೆ.

ಲೇಖಕಿ: ವೈದ್ಯೆ, ಕವಲಕ್ಕಿ, ಹೊನ್ನಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT