ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕಲ್ಲಿದ್ದಲು: ಅವಲಂಬನೆ ಇನ್ನೆಷ್ಟು ಕಾಲ?

ಕಲ್ಲಿದ್ದಲು ಆಧಾರಿತ ಉಷ್ಣಸ್ಥಾವರಗಳನ್ನು ಭಾರತ ಹಂತಹಂತವಾಗಿ ಸ್ಥಗಿತಗೊಳಿಸಬೇಕಿದೆ
Last Updated 5 ಜನವರಿ 2023, 22:42 IST
ಅಕ್ಷರ ಗಾತ್ರ

ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಲ್ಲಿದ್ದಲು ಗಣಿ ಹೂಡಿಕೆದಾರರ ಸಮಾವೇಶದಲ್ಲಿ ನೀಡಿದ ಮಾಹಿತಿಯು ಪರಿಸರಪ್ರಿಯರು ಯೋಚಿಸುವಂತೆ ಮಾಡಿದೆ. ಕಲ್ಲಿದ್ದಲು ಮತ್ತು ಗಣಿ ವಲಯದಿಂದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಕೊಡುಗೆ ಸದ್ಯ ಶೇಕಡ 0.9ರಷ್ಟಿದೆ. ಇದನ್ನು ಶೇ 2.5ಕ್ಕೆ ಏರಿಸಬೇಕಾಗಿದೆ. ಕಲ್ಲಿದ್ದಲಿನ ವಿಚಾರದಲ್ಲಿ ಭಾರತ ಅತಿ ದೊಡ್ಡ ಉತ್ಪಾದಕ ದೇಶಗಳಲ್ಲೊಂದು ಹಾಗೆಯೇ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶವೂ ಹೌದು. ಸದ್ಯಕ್ಕೆ ದೇಶದ ಕಲ್ಲಿದ್ದಲು ಉತ್ಪಾದನೆ ವಾರ್ಷಿಕ 90 ಕೋಟಿ ಟನ್ನು. ಗುರಿ ಇರುವುದು ಶತಕೋಟಿ ಟನ್ನು. ಇದು ಅವರ ಮಾತಿನ ಸಾರಾಂಶ.

ನಮ್ಮ ದೇಶದಲ್ಲಿ ಎಲ್ಲ ಸಂಪನ್ಮೂಲಗಳ ಲಭ್ಯತೆಯ ಪ್ರಮಾಣವನ್ನು ಈಗಾಗಲೇ ಅಂದಾಜು ಮಾಡಲಾಗಿದೆ. ಈ ಸಮೀಕ್ಷೆಯಂತೆ, ಭಾರತದಲ್ಲಿ 10,772 ಕೋಟಿ ಟನ್ನು ಕಲ್ಲಿದ್ದಲು ಸಂಪನ್ಮೂಲ ನೆಲದಲ್ಲಿ ಅಡಗಿದೆ. ಈ ಲೆಕ್ಕದಲ್ಲಿ ಈಗಿನ ಬಳಕೆಯ ಪ್ರಮಾಣವನ್ನು ಪರಿಗಣಿಸಿದರೆ ಇನ್ನೂ 111 ವರ್ಷ ಕಲ್ಲಿದ್ದಲಿನ ಗಣಿಗಾರಿಕೆ ಮಾಡಬಹುದು. ಭಾರತದಲ್ಲಿ, ಕರ್ನಾಟಕದ ನಾಲ್ಕು ಉಷ್ಣಸ್ಥಾವರಗಳೂ ಸೇರಿದಂತೆ 106 ಉಷ್ಣಸ್ಥಾವರಗಳು ವಿದ್ಯುತ್‌ ಉತ್ಪಾದನೆ ಮಾಡುತ್ತಿವೆ. ಈ ಪೈಕಿ 53 ಸ್ಥಾವರಗಳು ನೇರವಾಗಿ ಕಲ್ಲಿದ್ದಲನ್ನು ಇಂಧನವಾಗಿ ಬಳಸುತ್ತಿವೆ. ದೇಶದ ಶೇ 68ರಷ್ಟು ಪಾಲು ವಿದ್ಯುತ್‌ ಉತ್ಪಾದನೆ ಈ ಮೂಲದಿಂದಲೇ ಬರುತ್ತಿದೆ.

ಪ್ರಲ್ಹಾದ ಜೋಶಿ ಈಚೆಗೆ ರಾಜ್ಯಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ 13.19 ಕೋಟಿ ಟನ್ನು ಕಲ್ಲಿದ್ದಲನ್ನು ಭಾರತ ಆಮದು ಮಾಡಿಕೊಂಡಿದೆ, ಇದರ ಮೌಲ್ಯ ₹ 2,28,742 ಕೋಟಿ ಎಂಬ ಅಂಕಿಅಂಶವನ್ನು ಮುಂದಿಟ್ಟರು. ಈ ಸಂದರ್ಭದಲ್ಲಿ ನಾವು ನೀತಿ ಆಯೋಗ ಈಗಾಗಲೇ ಸೂಚಿಸಿರುವ ಎಚ್ಚರಿಕೆಯನ್ನು ಗಮನಿಸಬೇಕು- ಕಲ್ಲಿದ್ದಲು ಆಧಾರಿತ ಉಷ್ಣಸ್ಥಾವರಗಳ ಅರ್ಧದಷ್ಟನ್ನು 2030ರ ಹೊತ್ತಿಗೆ ಭಾರತ ಸ್ಥಗಿತಗೊಳಿಸಲೇಬೇಕು. ನಲವತ್ತೈದು ವರ್ಷಗಳ ಕಾಲ ನಿರಂತರವಾಗಿ ಕಾರ್ಯಶೀಲವಾದ ಮೇಲೆ ಈ ಸ್ಥಾವರಗಳ ಸಾಮರ್ಥ್ಯ ಕುಗ್ಗಿ ಅನುಪಯುಕ್ತವಾಗುತ್ತವೆ.

ಕೇಂದ್ರ ಸರ್ಕಾರವು ವಿಶೇಷವಾಗಿ ಜಾರ್ಖಂಡ್‌, ಛತ್ತೀಸಗಡ, ಒಡಿಶಾ, ಮಧ್ಯಪ್ರದೇಶದಂತಹ ಪ್ರಮುಖ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಗುರುತಿಸಿರುವ 141 ಬ್ಲಾಕ್‌ಗಳ ಹರಾಜು ಮಾಡಿರುವುದನ್ನು ಗಮನಿಸಿದರೆ, ಕಲ್ಲಿದ್ದಲಿನ ಬಳಕೆ ಸದ್ಯದಲ್ಲಿ ತಗ್ಗುವ ಸೂಚನೆಗಳಿಲ್ಲ. ನಮ್ಮ ಕಲ್ಲಿದ್ದಲು ಸಂಪನ್ಮೂಲದಲ್ಲಿ ಹೆಚ್ಚಿನ ಪಾಲನ್ನು ಗಣಿಗಾರಿಕೆ ಮಾಡ ಲಾಗುತ್ತಿಲ್ಲ ಎಂಬುದು ಸರ್ಕಾರದ ಚಿಂತೆ. ಏಕೆಂದರೆ ಪ್ರತಿವರ್ಷ ವಿದ್ಯುತ್‌ ಬೇಡಿಕೆ ಹಿಂದಿನ ವರ್ಷಕ್ಕಿಂತ ಶೇ 7ರಷ್ಟು ಹೆಚ್ಚುತ್ತಿದೆ. ಹೆಚ್ಚಿನ ಪಾಲು ಉಷ್ಣಸ್ಥಾವರಗಳಿಂದಲೇ ಬರಬೇಕು. ನಮ್ಮ ದೇಶದ ಮಟ್ಟಿಗೆ ವಾಯುಮಾಲಿನ್ಯದಲ್ಲಿ ಕಲ್ಲಿದ್ದಲಿನ ದಹನದ ಪಾಲೇ ಶೇ 40ರಷ್ಟಿದೆ ಎಂಬುದು ಜಗಜ್ಜಾಹೀರಾಗಿದೆ. ಇನ್ನು ಕಲ್ಲಿದ್ದಲು ಉತ್ಪಾದನೆ ಏಕೆ ಹೆಚ್ಚುತ್ತಿಲ್ಲ? ನಿಧಿ ಇದ್ದರೂ ಪರದಾಟವೇಕೆ? ಇಲ್ಲಿ ಹಲವು ಗೊಂದಲಗಳಿವೆ.

ಮೊದಲನೆಯದಾಗಿ, ಕಲ್ಲಿದ್ದಲು ಇರುವುದು ಹೆಚ್ಚಿನ ಪಾಲು ದಟ್ಟ ಕಾಡಿನಲ್ಲಿ. ಅಲ್ಲಿ ಧಾರಾಳವಾಗಿ ಗಣಿಗಾರಿಕೆ ಮಾಡುವಂತಿಲ್ಲ. ಅರಣ್ಯ ಕಾಯ್ದೆಯನ್ನೇ ಸಡಿಲಗೊಳಿಸಬೇಕಾಗುತ್ತದೆ. ಮೇಲಾಗಿ ಹಸಿರು ನ್ಯಾಯಪೀಠ ಒಪ್ಪಬೇಕಾಗುತ್ತದೆ. ಜೊತೆಗೆ ಸ್ಥಳೀಯರ ಎತ್ತಂಗಡಿ ಆಗಬೇಕು. ನಿರ್ವಸತಿಗರಿಗೆ ಮರುವಸತಿ ಕಲ್ಪಿಸಬೇಕು. ನಿತ್ಯ ಜೀವನಕ್ಕೆ ಸೌಕರ್ಯ ಕಲ್ಪಿಸಬೇಕು. ಇದನ್ನು ಉಪಾಯವಾಗಿ ಬಗೆಹರಿಸಲೆಂದೇ 2015ರಲ್ಲಿ ಕೇಂದ್ರ ಸರ್ಕಾರ ‘ಡಿಸ್ಟ್ರಿಕ್ಟ್‌ ಮಿನರಲ್‌ ಫೌಂಡೇಷನ್‌’ ಎಂಬ ಟ್ರಸ್ಟ್ ಸ್ಥಾಪಿಸಿತು. ಸ್ಥಳೀಯರಿಗೆ ಗಣಿಯ ಉತ್ಪನ್ನದ ಲಾಭದಲ್ಲಿ ಇಂತಿಷ್ಟು ಪಾಲು ಕೊಡಬೇಕೆಂದು ಮೊದಲ ಬಾರಿಗೆ ಕಾನೂನು ರೂಪಿಸಿತು. ವಾಸ್ತವವಾಗಿ ಈ ಹಣವನ್ನು ಸರ್ಕಾರ ಕೊಡುತ್ತಿಲ್ಲ. ಗಣಿ ದಣಿಗಳಿಂದ ಸರ್ಕಾರಕ್ಕೆ ಎಷ್ಟು ರಾಜಧನ ಕೊಡಬೇಕಾಗುತ್ತದೋ ಅದರ ಶೇ 30 ಭಾಗವನ್ನು ಗಣಿಯಿಂದ ನಿರಾಶ್ರಿತರಾದ ಜನರಿಗೆ ಸೌಲಭ್ಯ ಕಲ್ಪಿಸಲು ಬಳಸಬೇಕು. ಈ ಲೆಕ್ಕದಲ್ಲಿ ಈಗಾಗಲೇ ಈ ನಿಧಿಗೆ ₹ 36,000 ಕೋಟಿ ಸಂದಿದೆ. ಮುಂದೆ ವಾರ್ಷಿಕ ₹ 6,000ದಿಂದ 7,000 ಕೋಟಿ ಜಮಾ ಆಗಲಿದೆ.

ಇದರ ಜೊತೆಗೆ ಇನ್ನೊಂದು ಸಂಕೀರ್ಣ ವಿಚಾರವೂ ಇದೆ. ರೈಲ್ವೆ ಕಂಟೇನರ್‌ಗಳ ಮೂಲಕ (ರೇಕ್) ಕಲ್ಲಿದ್ದಲನ್ನು
ಸಾಗಿಸುವುದು ಕೂಡ ಸವಾಲಾಗಿದೆ. ಏಕೆಂದರೆ ರೈಲ್ವೆ ಇಲಾಖೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೇಕ್‌ಗಳನ್ನು ಉತ್ಪಾದಿಸುತ್ತಿಲ್ಲ. ಈ ಕಾರಣದಿಂದ, ಹೊಸ ಉಷ್ಣ ಸ್ಥಾವರಗಳನ್ನು ಸ್ಥಾಪಿಸದಿದ್ದರೂ ಇರುವ ಸ್ಥಾವರಗಳು ಅಬಾಧಿತವಾಗಿ ವಿದ್ಯುತ್‌ ಉತ್ಪಾದಿಸಲೇಬೇಕು. ನಾವು ಉಳಿದ ದೇಶಗಳಿಗಿಂತ ಹೆಚ್ಚು ಕಲ್ಲಿದ್ದಲಿನ ಮೇಲೆಯೇ ಅವಲಂಬಿತರಾಗಿದ್ದೇವೆ.

ಈ ಆರ್ಥಿಕ ವರ್ಷದಲ್ಲಿ ಈವರೆಗೆ ಆಮದು ಮಾಡಿಕೊಂಡಿರುವ ಕಲ್ಲಿದ್ದಲಿನಿಂದ ನಮ್ಮ ಕೊರತೆ ನೀಗಬಹುದೇ? ಇಲ್ಲ, ಅದರ ಉದ್ದೇಶವೇ ಬೇರೆ. ಭಾರತದ ಕಡಲತೀರದ ಕೆಲವು ಉಷ್ಣಸ್ಥಾವರಗಳಿಗೆ ಮತ್ತು ಸಿಮೆಂಟ್‌, ರಸಗೊಬ್ಬರ, ಉಕ್ಕು ಕಾರ್ಖಾನೆಗಳಿಗೆ ಉತ್ಕೃಷ್ಟ ದರ್ಜೆಯ ಕಲ್ಲಿದ್ದಲು ಬೇಕು. ಅದು ನಮ್ಮಲ್ಲಿ ದೊರೆಯುತ್ತಿಲ್ಲ. 1993ರ ಮುಕ್ತ ಸಾಮಾನ್ಯ ಪರವಾನಗಿ (ಓಪನ್‌ ಜನರಲ್‌ ಲೈಸೆನ್ಸ್) ರೀತ್ಯ ಕಲ್ಲಿದ್ದಲನ್ನು ನೇರವಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲು ಖಾಸಗಿ ವಲಯಕ್ಕೂ ಅವಕಾಶವಿದೆ.

ಇಂಡೊನೇಷ್ಯ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾದಿಂದ ಉತ್ಕೃಷ್ಟ ದರ್ಜೆಯ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದೇವೆ. ಈಗ ರಷ್ಯಾವು ಉಕ್ರೇನ್‌ ಮೇಲೆ ಯುದ್ಧ ಸಾರಿರುವುದರಿಂದ ಯುರೋಪಿನ ಅನಿಲ ಪೂರೈಕೆಗೆ ದೊಡ್ಡ ಪ್ರಮಾಣದ ತೊಂದರೆಯಾಗಿದೆ. ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಭಾರತವು ಟನ್ನಿಗೆ 400 ಡಾಲರ್‌ ತೆತ್ತು ಆಮದು ಮಾಡಿಕೊಳ್ಳಬೇಕಾಯಿತು. ಆಮದು ಮಾಡಿಕೊಂಡ ಕಲ್ಲಿದ್ದಲಿನ ಶೇ 80ರಷ್ಟು ಪಾಲನ್ನು ಅದಾನಿ ಕಂಪನಿಗೆ ಪೂರೈಸಲಾಗುತ್ತಿದೆ. ಕಲ್ಲಿದ್ದಲಿನಿಂದ ಅನಿಲ ಉತ್ಪಾದಿಸಲು ಕೇಂದ್ರ ಸರ್ಕಾರ ಈ ವರ್ಷ ಖಾಸಗಿ ಸಂಸ್ಥೆಗಳನ್ನು ಉತ್ತೇಜಿಸಲು ₹ 6,000 ಕೋಟಿ ಮೀಸಲಿಟ್ಟಿದೆ. ಈ ಅನಿಲ ಉತ್ಪಾದನೆಯಲ್ಲಿ ಹೆಚ್ಚಿನ ಪಾಲು ಕಾರ್ಬನ್‌ ಡೈ ಆಕ್ಸೈಡ್‌ ವಾಯುಗೋಳಕ್ಕೆ ಸೇರುವುದಿಲ್ಲ ಎಂಬುದು ಒಂದು ಸಕಾರಾತ್ಮಕ ಅಂಶ.

ರಾಜ್ಯಸಭೆ ಮಹತ್ವದ ಮಸೂದೆಯೊಂದನ್ನು ಇತ್ತೀಚೆಗೆ ಅಂಗೀಕರಿಸಿದೆ. ಇದು ಶಕ್ತಿ ಸಂರಕ್ಷಣೆಯ ಮಸೂದೆ (ತಿದ್ದುಪಡಿ, 2022). ಇದು ಅನ್ವಯಿಸುವುದು ದೊಡ್ಡ ದೊಡ್ಡ ವಸತಿ ಸಮುಚ್ಚಯಗಳಿಗೆ. ಕಟ್ಟಡಕ್ಕೆ ಬೇಕಾದ ವಿದ್ಯುತ್‌ ಪೂರೈಕೆಗಾಗಿ ಇನ್ನುಮುಂದೆ ಪೆಟ್ರೋಲ್‌, ಡೀಸೆಲ್‌, ಕಲ್ಲಿದ್ದಲು ಆಧಾರಿತ ವಿದ್ಯುತ್‌ ಬಳಸುವಂತಿಲ್ಲ. ಅಂದರೆ ನೂರು ಕಿಲೊವ್ಯಾಟ್‌ ವಿದ್ಯುತ್‌ ಬಳಸುವ ಕಟ್ಟಡಗಳು ಇನ್ನುಮುಂದೆ ಹೈಡ್ರೋಜನ್‌, ಅಮೋನಿಯ, ಎಥೆನಾಲ್‌ನಂತಹ ಅಸಾಂಪ್ರದಾಯಿಕ ಮೂಲದಿಂದ ವಿದ್ಯುತ್ ಪಡೆಯಬೇಕು. ಇದನ್ನು ಕಡ್ಡಾಯ
ಗೊಳಿಸಲಾಗಿದೆ. ಇದು ಶಕ್ತಿ ಸಂರಕ್ಷಣೆಯಲ್ಲಿ ಭಾರತ ಇಟ್ಟಿರುವ ದೊಡ್ಡ ಹೆಜ್ಜೆ ಎಂದು, ನವೀಕರಿಸಬಹುದಾದ ಇಂಧನ ಇಲಾಖೆ ಅಭಿಪ್ರಾಯಪಟ್ಟಿದೆ. ಇದರ ಜೊತೆಗೆ ಎಲ್ಇಡಿ ಬಲ್ಬ್‌ ಬಳಕೆಗೆ ಪ್ರಾರಂಭಿಸಿದ ಮೇಲೆ 12,900 ಕೋಟಿ ಯುನಿಟ್‌ ವಿದ್ಯುತ್‌ ಉಳಿತಾಯವಾಗಿದೆ ಎಂದೂ, ಹತ್ತು ಕೋಟಿ ಟನ್ನು ಕಾರ್ಬನ್‌ ಡೈ ಆಕ್ಸೈಡ್‌ ಉತ್ಸರ್ಜನೆಗೆ ಲಗಾಮು ಬಿದ್ದಿದೆ ಎಂದೂ ಅಂಕಿಅಂಶವನ್ನು ಇಲಾಖೆ ನೀಡಿದೆ.

2015ರಲ್ಲಿನ ಪ್ಯಾರಿಸ್‌ ಒಪ್ಪಂದದಂತೆ, ಭಾರತವು ತಾನು ಉತ್ಸರ್ಜಿಸುತ್ತಿರುವ ಈಗಿನ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣವನ್ನು 2030ರೊಳಗೆ ಶೇ 35 ಭಾಗ ಕಡಿಮೆಗೊಳಿಸುವುದಾಗಿ ಒಪ್ಪಿಕೊಂಡಿತ್ತು. ನವೀಕರಿಸುವ ಇಂಧನದ ಬಳಕೆಯಲ್ಲಿ ಭಾರತ ಹೊಸ ಪರ್ವವನ್ನೇ ಪ್ರಾರಂಭಿಸಿದೆ ಎಂದು ವಿಶ್ವಸಂಸ್ಥೆ ಕೂಡ ಪ್ರಶಂಸೆ ಮಾಡಿದೆ. ಆದರೆ ಕಲ್ಲಿದ್ದಲು ಆಧಾರಿತ ಉಷ್ಣಸ್ಥಾವರಗಳನ್ನು
ಹಂತಹಂತವಾಗಿ ಸ್ಥಗಿತಗೊಳಿಸುವ ಜವಾಬ್ದಾರಿಯೂ ಭಾರತಕ್ಕಿದೆ; ಜಗತ್ತು ನಮ್ಮ ನಡೆಯನ್ನು ಗಮನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT