ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕನ್ನಡದ ಸುತ್ತ ಬದುಕು ಕಟ್ಟುವ ಬಗೆ

ಬೇಕಾಗಿದೆ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ಸಾಧ್ಯವಾಗಿಸುವ ನೀತಿ
Last Updated 31 ಅಕ್ಟೋಬರ್ 2021, 21:45 IST
ಅಕ್ಷರ ಗಾತ್ರ

ಇನ್ನೊಂದು ‘ಕರ್ನಾಟಕ ರಾಜ್ಯೋತ್ಸವ’ದ ದಿನ ನಮ್ಮೆದುರಿದೆ. ಈ ಬಾರಿಯ ಸಂಭ್ರಮಕ್ಕೆ ಮಂಕು ಕವಿಯುವಂತೆ ನಟ ಪುನೀತ್ ರಾಜ್‌ಕುಮಾರ್ ಅವರು ಹಠಾತ್ ಆಗಿ ನಮ್ಮನ್ನಗಲಿದ್ದಾರೆ. ಮನಸ್ಸುಗಳು ಆ ಪಂಥ, ಈ ಪಂಥ ಎಂದು ಒಡೆದು ಚೂರಾಗಿರುವ, ಎಲ್ಲರೂ ತಮ್ಮದೇ ಸತ್ಯದ ಪ್ರಪಂಚದಲ್ಲಿ ಬದುಕುತ್ತಿರುವ ಈ ಹೊತ್ತಿನಲ್ಲಿ ಎಲ್ಲರನ್ನೂ ಎಲ್ಲ ಒಡಕುಗಳ ಆಚೆಯೂ ಜೋಡಿಸುವಂತಹ ಶಕ್ತಿ ಹೊಂದಿದ್ದ ಕೆಲವೇ ಕೆಲವು ಕನ್ನಡಿಗರಲ್ಲಿ ಅವರೊಬ್ಬರಾಗಿದ್ದರು. ಅವರ ಅಗಲಿಕೆಗೆ ನಾಡಿನ ಉದ್ದಗಲಕ್ಕೂ ಕಿರಿಯರಿಂದ ಹಿರಿಯರವರೆಗೆ ಕಂಬನಿ ಮಿಡಿದ ಎಲ್ಲರನ್ನೂ ಕಂಡಾಗ, ಕನ್ನಡ ಎನ್ನುವ ಮೂರಕ್ಷರಕ್ಕೆ ಹೇಗೆ ನಮ್ಮನ್ನೆಲ್ಲ ನಮ್ಮೆಲ್ಲ ವ್ಯತ್ಯಾಸಗಳ ಆಚೆ ಒಂದಾಗಿಸುವ ಒಂದು ಅಗಾಧ ಶಕ್ತಿಯಿದೆ ಅನ್ನುವುದು ಗೊತ್ತಾಗುತ್ತದೆ. ರಾಜ್ಯೋತ್ಸವದ ಹೊತ್ತಿನಲ್ಲಿ ಕರ್ನಾಟಕದ ಏಳಿಗೆಯ ಕುರಿತ ಯಾವುದೇ ಪ್ರಶ್ನೆಗೆ ಪರಿಹಾರ ಅರಸುವ ತಾತ್ವಿಕತೆಗೆ ಬೇಕಾದ ಅಡಿಪಾಯ ಇಂತಹದೊಂದು
ಒಗ್ಗಟ್ಟಿನಲ್ಲಿದೆ ಅನ್ನುವುದನ್ನು ಮನಗಂಡರೆ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಂದು ಹೊಸ ನೋಟ ದೊರೆಯಬಹುದು.

ಕನ್ನಡಿಗರೆಲ್ಲ ಒಂದಾಗಿ ಭಾರತದ ಒಕ್ಕೂಟದಲ್ಲಿ ಕರ್ನಾಟಕವೆನ್ನುವ ರಾಜಕೀಯ ಗಡಿಯೊಳಗೆ ನೆಲೆ ನಿಂತ ದಿನ ಕರ್ನಾಟಕ ರಾಜ್ಯೋತ್ಸವ. ಏಕೀಕರಣದ ಮೂಲ ಆಶಯವೇ ‘ಕನ್ನಡ ರಾಜ್ಯದಲ್ಲಿ ಕನ್ನಡದಿಂದ ಕನ್ನಡಿಗ ರೆಲ್ಲರ ಏಳಿಗೆ’. ಕನ್ನಡಿಗರ ಬದುಕು-ಬಿಡುಗಡೆಯ ಎಲ್ಲ ಅಗತ್ಯಗಳು ಸಾಕಷ್ಟು ಚೆನ್ನಾಗಿ ಕನ್ನಡ ನೆಲದಲ್ಲೇ ಈಡೇರುವಂತಹ ಏರ್ಪಾಡು ಇದ್ದಾಗ ಅಲ್ಲಿ ಕನ್ನಡಿಗರ ಏಳಿಗೆ ಸಾಧ್ಯ ಅನ್ನಬಹುದು. ಹಾಗಿದ್ದರೆ ಇಂತಹದೊಂದು ಏಳಿಗೆಯ ಏರ್ಪಾಡು ಕಟ್ಟಲು ಇರುವ ದಾರಿ ಯಾವುದು ಅನ್ನುವುದು ನಮ್ಮ ಮುಂದಿನ ಪ್ರಶ್ನೆ. ಈ ಪ್ರಶ್ನೆ ಹುಟ್ಟಿದಾಗ ನಾವು ಇಂದು ಇರುವ ಜಗತ್ತು, ಅದನ್ನು ನಿಯಂತ್ರಿಸುತ್ತಿರುವ ಆರ್ಥಿಕ ಮತ್ತು ರಾಜಕೀಯ ನೀತಿಗಳು, ಅವುಗಳ ಜೊತೆಗಿನ ಕರ್ನಾಟಕದ ಸಂಬಂಧ ಮುಂತಾದ ಇಂದಿನ ವಾಸ್ತವಗಳ ಅಡಿಯಲ್ಲೇ ನಮ್ಮ ಏಳಿಗೆಗೆ ಆಗಬೇಕಿರುವ ಕೆಲಸಗಳೇನು ಅನ್ನುವ ಕುರಿತು ಯೋಚಿಸಬೇಕಾಗುತ್ತದೆ. ನಮ್ಮ ಇಂದಿನ ವಾಸ್ತವವೇನು?

ನಾವು ಕಳೆದ ಮೂವತ್ತು ವರ್ಷಗಳಿಂದ ಜಾಗತೀ ಕರಣದ ವ್ಯವಸ್ಥೆಯಡಿ ಇದ್ದೇವೆ. ತಂತ್ರಜ್ಞಾನದಲ್ಲಾಗು
ತ್ತಿರುವ ವೇಗದ ಬದಲಾವಣೆ, ಅಡೆತಡೆಯಿಲ್ಲದ ಜಾಗತಿಕ ವ್ಯಾಪಾರ, ಬಂಡವಾಳ ಮತ್ತು ವಲಸೆಯ ತಡೆಯಿಲ್ಲದ ಹರಿವು ಇದರ ಮುಖ್ಯ ಗುಣಲಕ್ಷಣಗಳಾಗಿವೆ. ಇದು ಹಲವಾರು ದೇಶಗಳಲ್ಲಿ ಆರ್ಥಿಕತೆಯ ಬೆಳವಣಿಗೆಗೆ, ಹೊಸ ಉದ್ಯೋಗ ಸೃಷ್ಟಿಗೆ ಒಂದಿಷ್ಟು ಕೊಡುಗೆ ಖಂಡಿತ ನೀಡಿದೆ. ಜೊತೆ ಜೊತೆಯಲ್ಲೇ ಇಂತಹದೊಂದು ವ್ಯಾಪಾರ ಕೇಂದ್ರಿತವಾದ ವ್ಯವಸ್ಥೆಯು ಪರಿಸರ ನಾಶ, ಅಕಾಲಿಕ ನೆರೆ, ಬರದಂತಹ ಶತಮಾನದ ಸವಾಲನ್ನು ತಂದಿದೆ. ಅದರ ನಡುವೆಯೇ ಕೊರೊನಾದಂತಹ ಆರೋಗ್ಯ ಬಿಕ್ಕಟ್ಟು ಜಾಗತೀಕರಣದ ನಿಜವಾದ ಮಿತಿಯನ್ನೂ ಎತ್ತಿ ತೋರಿದೆ.

ಕೊರೊನಾ ತಂದ ಆರ್ಥಿಕ ಬಿಕ್ಕಟ್ಟು, ಸೃಷ್ಟಿಸುತ್ತಿರುವ ಸಾಮಾಜಿಕ ತೊಂದರೆಗಳು ಹಲವು ದೇಶಗಳ ರಾಜಕೀಯದ ಸ್ವರೂಪವನ್ನು ಬದಲಾಯಿಸುತ್ತಿವೆ. ಈ ಬದಲಾವಣೆಗಳು ಜಾಗತಿಕ ಸಹಕಾರ, ಸಮನ್ವಯದ ಮೇಲೂ ಬೇರೆ ಬೇರೆ ರೀತಿಯ ಒತ್ತಡ ಹೇರುತ್ತಿವೆ. ಈ ವಾಸ್ತವಗಳಿಂದ ಕೆಲವು ತೀರ್ಮಾನಗಳಿಗೆ ಬರಬಹುದು. ಮೊದಲನೆಯದ್ದು, ವಿಜ್ಞಾನ ಮತ್ತು ತಂತ್ರಜ್ಞಾನದ ಬಲದ ಮೇಲೆ ನಿಂತಿರುವ ಜಾಗತೀಕರಣದ ಇಂದಿನ ಸ್ವರೂಪ ಕೊಂಚ ಬದಲಾಗಬಹುದು, ಆದರೆ ಅದು ಬಹುಮಟ್ಟಿಗೆ ಹೀಗೆಯೇ ಮುಂದುವರೆಯುತ್ತದೆ.

ಎರಡನೆಯದ್ದು, ಈ ಜಾಗತೀಕರಣದ ಅತೀ ಹೆಚ್ಚು ಆರ್ಥಿಕ ಪ್ರಯೋಜನ ಪಡೆದುಕೊಳ್ಳುತ್ತಿರುವ ನಾಡುಗಳು ಯಾವುವು ಅಂದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತಮಗೆ ಸಿಕ್ಕಿರುವ ಮುನ್ನಡೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ನಾಡುಗಳು. ಮೂರನೆಯದ್ದು, ಇಂತಹದೊಂದು ಮುನ್ನಡೆಯನ್ನು ಕಾಯ್ದುಕೊಳ್ಳಲು ಈ ನಾಡುಗಳು ತಮ್ಮ ಕಲಿಕೆಯ ವ್ಯವಸ್ಥೆಯತ್ತ ಸತತವಾದ ಗಮನ ಮತ್ತು ಹೂಡಿಕೆ ಮಾಡುತ್ತಲಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಈ ಶತಮಾನದಲ್ಲಿ ಮೇಲೆ ಚರ್ಚಿಸಿದ ವಿಷಯಗಳು, ಸವಾಲುಗಳ ಹಿನ್ನೆಲೆಯಲ್ಲಿ ಕನ್ನಡಿಗರ ಏಳಿಗೆ ಅಂತ ಯೋಚಿಸಿದಾಗ ನಮ್ಮ ಆದ್ಯತೆ ಏನಾಗಬೇಕು ಅನ್ನುವ ಕುರಿತು ಕೆಲವು ಹೊಳಹುಗಳು ಕಾಣಬಹುದು.

ಮೊದಲನೆಯದ್ದು- ಕನ್ನಡಕ್ಕಿರುವ ವಿಜ್ಞಾನ- ತಂತ್ರಜ್ಞಾನದ ಸಾಧ್ಯತೆ ಹಿಗ್ಗಿಸುವುದು. ಕನ್ನಡವೆಂದರೆ ಹಾಡು, ಕುಣಿತ, ಸಾಹಿತ್ಯ, ಸಿನಿಮಾಗಳಿಗೆ ಮೀಸಲಿಟ್ಟು ಹೊಸ ಜಗತ್ತಿನ ಯಾವ ಸಾಧ್ಯತೆಗಳಿಗೂ ಕನ್ನಡ ಲಾಯಕ್ಕಿಲ್ಲ ಅನ್ನುವ ಕೈಚೆಲ್ಲುವ ನಿಲುವು ಕೈಬಿಟ್ಟು
ಕನ್ನಡಕ್ಕಿರುವ ಸಾಧ್ಯತೆಗಳನ್ನು ಮಿತಿಯಿಲ್ಲದೆ ಹಿಗ್ಗಿಸುವ ಯೋಚನೆ ನಮ್ಮದಾಗಬೇಕು. ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನದ ಎಲ್ಲ ಕವಲುಗಳನ್ನು ತರುವತ್ತ, ಅದಕ್ಕೆ ಬೇಕಿರುವ ಅನುವಾದ, ಪದಕಟ್ಟಣೆ, ಪ್ರಕಟಣೆ, ಆಡಿಯೊ-ವಿಡಿಯೊ ಸಾಮಗ್ರಿ ರೂಪಿಸುವಿಕೆಯಂತಹ ಯೋಜನೆಗಳನ್ನು ನಿರಂತರವಾಗಿ ರೂಪಿಸುತ್ತ ಹಂತ ಹಂತವಾಗಿ ಕನ್ನಡದಲ್ಲೂ ಇದೆಲ್ಲ ಸಾಧ್ಯ ಅನ್ನುವಂತಹ ವಾತಾವರಣ ಕಟ್ಟಬೇಕು. ಇದರಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲವುಗಳಿಗೂ ಪಾತ್ರವಿದೆ. ಬೇಕಿರುವುದು ಇದಾಗಬೇಕು ಅನ್ನುವ ಒಂದು ಮುನ್ನೋಟ ಮಾತ್ರ.

ಎರಡನೆಯದ್ದು- ಕನ್ನಡ ಮಾಧ್ಯಮದಲ್ಲಿ ಕಲಿಕೆಗೆ ಬಲ ತುಂಬುವುದು.ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಈಗ ಶೇ 52ರ ಆಸುಪಾಸಿನಲ್ಲಿದೆ. ಕೇವಲ 20 ವರ್ಷಗಳ ಹಿಂದೆ ಇದು ಶೇ 85ರಷ್ಟಿತ್ತು. ಹೀಗೆ ಕುಸಿಯುತ್ತಿರುವುದನ್ನು ತಡೆಯುವ ಪ್ರಯತ್ನವನ್ನು ಯಾವ ಪಕ್ಷದ ನೇತೃತ್ವದ ಸರ್ಕಾರವೂ ಪ್ರಾಮಾಣಿಕವಾಗಿ ಮಾಡಿಲ್ಲ. ಕನ್ನಡದಲ್ಲಿ ಕಲಿತರೆ ಪ್ರಯೋಜನವಿಲ್ಲ, ಉದ್ಯೋಗವಿಲ್ಲ ಅನ್ನುವ ಅನಿಸಿಕೆಯನ್ನು ವ್ಯಾಪಕವಾಗಿ ಬಿತ್ತಿರುವ ಮಾರುಕಟ್ಟೆಯ ಶಕ್ತಿಗಳಿಂದ ‘ಇಂಗ್ಲಿಷೇ ಪರಿಹಾರ’ ಅನ್ನುವ ಮನಃಸ್ಥಿತಿ ಸಾಮಾನ್ಯರಲ್ಲಿ ನೆಲೆಯೂರಿದೆ. ಆದರೆ ನಮ್ಮ ಪರಿಸರದಲ್ಲಿಲ್ಲದ ಹಾಗೂ ಮಗು, ಶಿಕ್ಷಕ ಮತ್ತು ಪಾಲಕರ ನಾಲಿಗೆಯ ಮೇಲೂ ಇಲ್ಲದ ಇಂಗ್ಲಿಷಿನಲ್ಲಿ ಎಲ್ಲವನ್ನೂ ಕಲಿಸುತ್ತೇನೆ ಎಂದು ಹೊರಡುವುದು ಎಂದಿಗೂ ಒಂದು ವ್ಯಾಪಕವಾದ, ಸಮಾನ ಅವಕಾಶಗಳನ್ನು ಕಲ್ಪಿಸುವ, ಹೆಚ್ಚು ಜನರನ್ನು ಒಳಗೊಳ್ಳುವ ವ್ಯವಸ್ಥೆಯನ್ನು ಕಟ್ಟುವುದನ್ನು ಸಾಧ್ಯ ವಾಗಿಸದು. ಮುಂದುವರೆದ ಎಲ್ಲ ನಾಡುಗಳಲ್ಲೂ ಮಗು ತಾನು ಕನಸು ಕಾಣುವ, ಆಲೋಚಿಸುವ ನುಡಿ ಯಲ್ಲೇ ಕಲಿಕೆ ಪಡೆದುಕೊಳ್ಳುತ್ತದೆ. ಸಹಜವಾಗಿಯೇ ಬಾಯಿಪಾಠಕ್ಕಿಂತ ವಿಷಯದ ತಿರುಳು ತಿಳಿಯುವ ಕಲಿಕೆ ಅಲ್ಲಿ ಹೆಚ್ಚು ಸಹಜವಾಗಿ ಸಾಧ್ಯವಾಗಿದೆ. ಇದು ಕನ್ನಡದಲ್ಲಿ ಸಾಧ್ಯವಾದಾಗಲೇ ಹೆಚ್ಚು ಕನ್ನಡ ಮಕ್ಕಳು ಕಲಿಯುವುದಕ್ಕೂ, ಕಲಿತದ್ದನ್ನು ಬಳಸಿ ಸಾಧಿಸುವುದಕ್ಕೂ ಅವಕಾಶವಾಗುತ್ತದೆ.

ಹೊಸ ಶಿಕ್ಷಣ ನೀತಿ ಪ್ರಾಥಮಿಕ ಹಂತದಲ್ಲಿ ಮಗುವಿನ ಭಾಷೆಯಲ್ಲೇ ಕಲಿಕೆ ಕೊಡುವುದಕ್ಕೆ ಒತ್ತು ನೀಡುವ ಮಾತುಗಳನ್ನು ಆಡಿದೆ. ಇದನ್ನು ಬಳಸಿ ಇಂಗ್ಲಿಷಿಗೆ ಪರ್ಯಾಯವಾಗುವಂತಹ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ಸಾಧ್ಯವಾಗಿಸುವ ನೀತಿಯೊಂದು ಇಂದು ಬೇಕಿದೆ. ಇಂಗ್ಲಿಷ್ ಮಾಧ್ಯಮ ಬೇಕು-ಬೇಡ ಅನ್ನುವ ಚರ್ಚೆಗೆ ಹೋಗದೇ ಕನ್ನಡ ಮಾಧ್ಯಮಕ್ಕೆ ಇಷ್ಟಪಟ್ಟು ಸೇರಿಸುವಂತೆ ಪರ್ಯಾಯವಾದ ಏರ್ಪಾಡನ್ನು ಕಟ್ಟುತ್ತ ಹೋದರೆ ಖಂಡಿತವಾಗಿಯೂ ಕನ್ನಡ ಮಾಧ್ಯಮಕ್ಕೆ ಮತ್ತೆ ಬಲ ಬರಬಹುದು.

ಇವೆರಡೂ ಅಷ್ಟೇನೂ ಹೊಸ ಹೊಳಹುಗಳಲ್ಲ ಅನ್ನಿಸಬಹುದು, ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳೇ ಎಲ್ಲವನ್ನೂ ನಿರ್ದೇಶಿಸುವ 21ನೇ ಶತಮಾನದಲ್ಲಿ ಕನ್ನಡ ಉಳಿಯಬೇಕು, ಕನ್ನಡವೇ ಕನ್ನಡಿಗರ ಏಳಿಗೆಗೆ ದಾರಿಯಾಗಬೇಕು ಅಂದರೆ ಕನ್ನಡವೂ ವಿಜ್ಞಾನ-ತಂತ್ರಜ್ಞಾನದ ಭಾಷೆಯಾಗಬೇಕು. ಕಳೆದ ಇನ್ನೂರು ವರ್ಷಗಳ ಮನುಷ್ಯನ ಇತಿಹಾಸವನ್ನೊಮ್ಮೆ ತೆಗೆದು ನೋಡಿದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯೇ ಅದರ ದಿಕ್ಕುದೆಸೆಯನ್ನು ರೂಪಿಸಿದೆ ಅನ್ನುವುದು ಸ್ಪಷ್ಟ. ಕಷ್ಟ ಅನ್ನಿಸುವಂತಹ, ಆದರೆ ನಿಜವಾದ ಪರಿಹಾರ ಕೊಡುವ ಇಂತಹ ಕನಸು ಕಾಣಲು ಸಜ್ಜಾಗದಿದ್ದರೆ ಹಾಡು, ಕುಣಿತ ಮಾಡಿಕೊಂಡು ಇದ್ದುಬಿಡಬಹುದು. ಆಯ್ಕೆ ನಮ್ಮದು. ಈ ಮಾತು ಭಾರತದ ಪ್ರತಿಯೊಂದು ಭಾಷೆಗೂ ಅನ್ವಯಿಸುತ್ತೆ. ಭಾಷಿಕ ಭಾರತ ಬಲಗೊಂಡಷ್ಟು ಭಾರತದ ಏಳಿಗೆಯೂ ಸಾಧ್ಯ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಸಿಹಿ ಹಾರೈಕೆಗಳು.

ವಸಂತ ಶೆಟ್ಟಿ
ವಸಂತ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT