ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಭೂಮಿಯಲ್ಲಿ ಕೃತಕ ಬುದ್ಧಿಮತ್ತೆ: ನಾಳಿನ ಸಮರಕ್ಕೆ ಭಾರತ ಸಜ್ಜು

Last Updated 27 ಏಪ್ರಿಲ್ 2022, 8:16 IST
ಅಕ್ಷರ ಗಾತ್ರ

ಬಹಳ ಹಿಂದೆಯೇ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- ಎಐ) ಎಂಬುದು ನಮಗೆ ಕಲ್ಪನೆಯ ವಿಷಯ ಮಾತ್ರವಾಗಿತ್ತು. ಆದರೆ ಇಂದು- 2022 ರ ಹೊತ್ತಿಗೆ, ಇದು ಅಸಾಧಾರಣ ತಂತ್ರಜ್ಞಾನವಾಗಿ ಬೆಳೆಯುತ್ತಿದೆ ಮತ್ತು ಇದು ಈಗಾಗಲೇ ನಮ್ಮ ಸುತ್ತಲೂ ವ್ಯಾಪಿಸಿದೆ.

ವೈಯಕ್ತೀಕರಿಸಿದ ಶಾಪಿಂಗ್ ಮತ್ತು ಕಲಿಕೆ, ವರ್ಚುವಲ್ ಅಸಿಸ್ಟೆಂಟ್‌ಗಳು, ಸ್ಮಾರ್ಟ್ ಕಂಟೆಂಟ್, ಸೈಬರ್‌ ಸೆಕ್ಯುರಿಟಿ, ಸ್ವಾಯತ್ತ ವಾಹನಗಳು, ಮುಖ ಗುರುತಿಸುವಿಕೆ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಂತೆ 'ಕೃತಕ ಬುದ್ಧಿಮತ್ತೆ' (ಎಐ) ಇಂದು ಬಹಳಷ್ಟು ವಿಷಯಗಳನ್ನು ಚಾಲನೆ ಮಾಡುತ್ತಿದೆ.

ಒಂದು ಉದ್ಯಮವಾಗಿ, ಕೃತಕ ಬುದ್ಧಿಮತ್ತೆಯು 2022 ರಲ್ಲಿ 432.8 ಶತಕೋಟಿ ಡಾಲರ್‌ಗಳಿಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಇಂಟರ್‌ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಇತ್ತೀಚಿನ ವರದಿ ಹೇಳಿದೆ.

ಅದರ ಸಾಮರ್ಥ್ಯ ಎಷ್ಟು ದೊಡ್ಡದಾಗಿದೆ ಎಂದರೆ 2030 ರ ವೇಳೆಗೆ ಎಐ ಉದ್ಯಮವು 15 ಟ್ರಿಲಿಯನ್ ಡಾಲರ್‌ಗಳ ಮೌಲ್ಯವನ್ನು ಹೊಂದಲಿದೆ ಎಂದು ಹೆಸರಾಂತ ಕಾರ್ಪೊರೇಟ್‌ ಫೈನಾನ್ಸ್‌ ಅಕೌಂಟಿಂಗ್‌ ಸೇವೆಗಳ ಸಂಸ್ಥೆ ಪ್ರೈಸ್‌ ವಾಟರ್‌ಹೌಸ್‌ ಕೂಪರ್ಸ್‌ (ಪಿಡಬ್ಲ್ಯುಸಿ) ಅಂದಾಜಿಸುತ್ತದೆ!

ಇಂದು, ವಿಶ್ವಾದ್ಯಂತ ರಕ್ಷಣಾ ಉದ್ಯಮಗಳು ಸಹ ಎಐ ಯ ಶಕ್ತಿಯನ್ನು ಬಳಸಿಕೊಳ್ಳಲು ನೋಡುತ್ತಿವೆ. ರಕ್ಷಣಾ ಉದ್ಯಮ ವಿಭಾಗವೊಂದರಲ್ಲೇ ಎಐ ನ ಕೊಡುಗೆಯು ಜಾಗತಿಕವಾಗಿ ಸುಮಾರು 6.4 ಬಿಲಿಯನ್ ಡಾಲರ್‌ ಆಗಿದೆ ಮತ್ತು 2028 ರ ವೇಳೆಗೆ ಈ ಮೊತ್ತ 13.15 ಶತಕೋಟಿ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ ಎಂದು 'ದಿ ಇನ್‌ಸೈಟ್ ಪಾರ್ಟ್ನರ್ಸ್‌ ಅಂದಾಜಿಸಿದೆ.

ಇತ್ತೀಚಿನ ದಿನಗಳಲ್ಲಿ ರಕ್ಷಣೆಗಾಗಿ ಎಐ ಭಾರತದ ಆಸಕ್ತಿಯನ್ನು ಕೆರಳಿಸಿದೆ. ಏಪ್ರಿಲ್ 2022 ರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ತಮ್ಮ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಅದರ ಬಳಕೆ ಮತ್ತು ಇತರ ವಿಷಯಗಳ ಕುರಿತು ತಮ್ಮ ಅಮೆರಿಕನ್ ಸಹವರ್ತಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಇದರ ಪರಿಣಾಮವಾಗಿ, ಭಾರತ ಮತ್ತು ಅಮೆರಿಕ ರಕ್ಷಣಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂವಾದವನ್ನು ಪ್ರಾರಂಭಿಸಲು ಒಪ್ಪಿಕೊಂಡಿವೆ ಮತ್ತು ತಮ್ಮ ಜಂಟಿ ಸೈಬರ್ ತರಬೇತಿ ಮತ್ತು ಚಟುವಟಿಕೆಗಳನ್ನು ವಿಸ್ತರಿಸಲು ಬದ್ಧವಾಗಿವೆ ಎಂದು ಪೆಂಟಗನ್ ಘೋಷಿಸಿತು.

ಎಐ ಬೆಳವಣಿಗೆಯಲ್ಲಿ ಭಾರತದ ಪಾತ್ರ:

ಸಾಫ್ಟ್‌ವೇರ್ ಉದ್ಯಮದ ಬೆಳವಣಿಗೆಯಲ್ಲಿ ವಹಿಸಿದ ಪಾತ್ರದಂತೆಯೇ ಭಾರತವು ಎಐ ಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಕಳೆದ ದಶಕದಲ್ಲಿ ಕಂಪ್ಯೂಟರ್‌ಗಳು ಗಾತ್ರದಲ್ಲಿ ಕುಗ್ಗಿದಂತೆ, ಭಾರತವು ವಿಶ್ವದ ಸಾಫ್ಟ್‌ವೇರ್ ಮತ್ತು ಎಐ ಮಾರುಕಟ್ಟೆಗಳಿಗೆ ಹೆಚ್ಚಿನ ಕೊಡುಗೆ ನೀಡುವವರ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಐಡಿಸಿ ವರದಿಯ ಪ್ರಕಾರ, ಭಾರತೀಯ ಕೃತಕ ಬುದ್ಧಿಮತ್ತೆ (ಎಐ) ಮಾರುಕಟ್ಟೆಯು 2025 ರ ವೇಳೆಗೆ 7.8 ಶತಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಇದು ಶೇ 20.2 ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್‌) ಬೆಳೆಯುತ್ತದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದೇಶಾದ್ಯಂತ ಸಾರ್ವಜನಿಕ ಕಲ್ಯಾಣಕ್ಕಾಗಿ ಸ್ವಯಂಚಾಲಿತ ಮೇಲ್ವಿಚಾರಣಾ ವ್ಯವಸ್ಥೆಗಳು, ಸಂವಾದಾತ್ಮಕ ಎಐ ಪರಿಹಾರಗಳು, ವಂಚನೆ ಪತ್ತೆ ಮತ್ತು ಇನ್ನಷ್ಟು ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಗಮನಾರ್ಹ ಕ್ರಮಗಳನ್ನು ಕೈಗೊಂಡಿವೆ.

ಕೋವಿಡ್‌-19 ಮತ್ತು ರಕ್ಷಣೆಯಲ್ಲಿ ಎಐ:

ಕೊರೊನಾ ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಆರ್ಥಿಕತೆಯ ಮೇಲೆ ಭಾರಿ ಪ್ರಭಾವ ಬೀರಿತು ಮತ್ತು ಎಲ್ಲ ಬಗೆಯ ಕೈಗಾರಿಕೆಗಳಿಗೆ ಸಾಕಷ್ಟು ಹೊಡೆತ ನೀಡಿತು. ಆದರೆ ಕೃತಕ ಬುದ್ಧಿಮತ್ತೆಯು ವೇಗವಾಗಿ ಅಭಿವೃದ್ಧಿ ಹೊಂದಿತು. ರಕ್ಷಣಾ ವಿಭಾಗವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದು ನೆರವಿಗೆ ಬಂದಿತು. ಲಾಕ್‌ಹೀಡ್ ಮಾರ್ಟಿನ್, ಐಬಿಎಂ ಮತ್ತು ನಾರ್ತ್‌ರಾಪ್ ಗ್ರುಮ್ಮನ್ ಸೇರಿದಂತೆ ಪ್ರಮುಖ ರಕ್ಷಣಾ ತಯಾರಕರು ಮತ್ತು ವಿಶ್ವಾದ್ಯಂತ ಸರ್ಕಾರಗಳು ಕೋವಿಡ್‌-19 ಹೊರತಾಗಿಯೂ ಈ ತಂತ್ರಜ್ಞಾನದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿವೆ. ರಾಷ್ಟ್ರೀಯ ಭದ್ರತೆಗಾಗಿ ಎಐ ವ್ಯವಸ್ಥೆಗಳ ಸಾಮರ್ಥ್ಯ ಮತ್ತು ಮಹತ್ವವನ್ನು ಈ ಸಂಸ್ಥೆಗಳು ಮೊದಲೇ ಗುರುತಿಸಿದ್ದರಿಂದ ಹೂಡಿಕೆ ಹೆಚ್ಚಾಗಿತ್ತು.

ಎಐ ತಂತ್ರಜ್ಞಾನದ ಅಭಿವೃದ್ಧಿಯು ಗಮನಾರ್ಹವಾದ ಮುನ್ನಡೆಯನ್ನು ಕಂಡರೂ, ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಪೂರೈಕೆ ಸರಪಳಿಯಲ್ಲಿನ ಅಡಚಣೆ, ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಎಐ ವ್ಯವಸ್ಥೆಗಳನ್ನು ನಿರ್ಮಿಸುವ ಪ್ರಕ್ರಿಯೆಗೆ ಹಿನ್ನಡೆ ಆಯಿತು.

ಎಐ-ಚಾಲಿತ ಪರಿಹಾರಗಳು - ಭವಿಷ್ಯ ಹೇಗಿರುತ್ತದೆ:

ಪ್ರಪಂಚದಾದ್ಯಂತದ ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ಶಕ್ತಿಯುತವಾಗಿ ಉಳಿಯಲು ತಮ್ಮ ರಕ್ಷಣಾ ಕಾರ್ಯಕ್ರಮಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತವೆ. ಮತ್ತು ಮಿಲಿಟರಿ ಅಪ್ಲಿಕೇಶನ್‌ಗಳಲ್ಲಿ ಎಐ ನಂತಹ ರಕ್ಷಣಾ ತಂತ್ರಜ್ಞಾನಗಳನ್ನು ಹೆಚ್ಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತಮ್ಮ ರಕ್ಷಣಾ ಬಜೆಟ್‌ನ ಬಹುದೊಡ್ಡ ಮೊತ್ತವನ್ನು ವಿನಿಯೋಗಿಸುತ್ತವೆ. ಈ ಅಪ್ಲಿಕೇಶನ್‌ಗಳು ಹೆಚ್ಚಿನ ಪ್ರಮಾಣದ ಡೇಟಾವನ್ನು ನಿರ್ವಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಸಮರ್ಥವಾಗಿವೆ ಹಾಗೂ ವರ್ಧಿತ ಗಣನೆ ಮತ್ತು ನಿರ್ಧಾರ ಕೈಗೊಳ್ಳುವ ಕೌಶಲ್ಯಗಳನ್ನು ಹೊಂದಿವೆ.

ಎಐ ನಿಜವಾಗಿಯೂ ಲಾಜಿಸ್ಟಿಕ್ಸ್, ಮಾಹಿತಿ ಕಾರ್ಯಾಚರಣೆಗಳು, ಗುಪ್ತಚರ ಸಂಗ್ರಹಣೆ ಮತ್ತು ವಿಶ್ಲೇಷಣೆ, ಆದೇಶ ಮತ್ತು ನಿಯಂತ್ರಣ (ಕಮಾಂಡ್ ಅಂಡ್‌ ಕಂಟ್ರೋಲ್) ಮತ್ತು ಅರೆ ಸ್ವಯಂ ಮತ್ತು ಸ್ವಾಯತ್ತ ವಾಹನಗಳ ಕಾರ್ಯ ನಿರ್ವಹಣೆಯ ಕ್ಷೇತ್ರಗಳಲ್ಲಿ ಆಟವನ್ನೇ ಬದಲಾಯಿಸಬಲ್ಲದು. (ಗೇಮ್ ಚೇಂಜರ್). ವಾಸ್ತವವಾಗಿ, ಎಐ ಅನ್ನು ಈಗಾಗಲೇ ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಯುದ್ಧಭೂಮಿಗಳಲ್ಲಿ ನಿಯೋಜಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ರಕ್ಷಣಾ ಪಡೆಗಳ ತರಬೇತಿ ಮತ್ತು ಸಿಮ್ಯುಲೇಶನ್‌ಗಳ ಸಮಯದಲ್ಲಿ ತಂತ್ರಜ್ಞಾನವನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಸುವ ವಿಭಿನ್ನ ಹೋರಾಟದ ವ್ಯವಸ್ಥೆಗಳ ತರಬೇತಿಯಲ್ಲಿ ಸೈನಿಕರಿಗೆ ಸಹಾಯ ಮಾಡಲು ಶಕ್ತವಾದ ಮಾದರಿಗಳನ್ನು ರೂಪಿಸಲು ಸಿಸ್ಟಮ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಲ್ಪನೆಗಳನ್ನು ಬಳಸಿಕೊಳ್ಳಲು ಎಐ ಸಹಾಯ ಮಾಡುತ್ತದೆ. ಅಮೆರಿಕದ ನೌಕಾಪಡೆ ಮತ್ತು ಭೂಸೇನೆಯು ಈಗಾಗಲೇ ತಮ್ಮ ಸೈನಿಕರು ಮತ್ತು ಕೆಡೆಟ್‌ಗಳಿಗೆ ತರಬೇತಿ ನೀಡಲು ಸಿಮ್ಯುಲೇಶನ್ ಕಾರ್ಯಕ್ರಮಗಳನ್ನು ಬಳಸುತ್ತಿವೆ.

ಇವುಗಳ ಹೊರತಾಗಿ, ಕೃತಕ ಬುದ್ಧಿಮತ್ತೆಯು ವಿವಿಧ ಮೂಲಗಳಿಂದ ಡೇಟಾವನ್ನು ಒಟ್ಟುಗೂಡಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ, ಉದಾಹರಣೆಗೆ ಸೆನ್ಸರ್‌ಗಳು, ಉಪಗ್ರಹಗಳು ಮತ್ತು ಸಾಧನಗಳು ಎದುರಾಳಿಗಳ ಮೇಲೆ ಬುದ್ಧಿವಂತ ಒಳನೋಟಗಳನ್ನು ಒದಗಿಸಲು, ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ರಕ್ಷಣಾ ಸಿಬ್ಬಂದಿಗೆ ಅನುವು ಮಾಡಿಕೊಡುತ್ತದೆ.

"ಸನ್ನಿವೇಶದ ಬಗ್ಗೆ ಸುಧಾರಿತ ಅರಿವು, ಸೆನ್ಸರ್‌ಗಳ ಒಗ್ಗೂಡಿಸುವಿಕೆ, ತ್ವರಿತ ನಿರ್ಧಾರ ಪ್ರಕ್ರಿಯೆ, ಸ್ವಾಯತ್ತ ಆಯುಧಗಳ ಬಳಕೆ ಮತ್ತು ಯುದ್ಧದ ಪ್ರತಿಯೊಂದು ಅಂಶಗಳಲ್ಲಿ ಎಐ ಯ ಜೋಡಣೆ, ಅದಕ್ಕೆ ತಕ್ಕಂತೆ ಸಮರ ತಂತ್ರಗಳು, ಸಂಸ್ಥೆಗಳು ಮತ್ತು ಸಂರಚನೆಗಳು, ತರಬೇತಿ ವಿಧಾನ ಮತ್ತು ನಾಯಕತ್ವದಲ್ಲಿಯೂ ಬದಲಾವಣೆಗಳನ್ನು ಮಾಡಬೇಕಾಗುತ್ತದೆ" ಎಂದು ಭಾರತೀಯ ಸೇನೆಯ ನಿಕಟಪೂರ್ವ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ "ಪ್ರಪಂಚದಾದ್ಯಂತದ ಎಲ್ಲ ಮಿಲಿಟರಿಗಳಿಗೂ ಇದು ಸವಾಲಾಗಿ ಉಳಿದಿದೆ. ಜತೆಗೆ ಈ ನಿಟ್ಟಿನಲ್ಲಿ ಪರಿಹಾರೋಪಾಯಗಳ ಕಾರ್ಯವೂ ಪ್ರಗತಿಯಲ್ಲಿವೆ" ಎಂದು ಜನರಲ್ ನರವಣೆ ತಿಳಿಸಿದ್ದಾರೆ.

ರಕ್ಷಣೆಯಲ್ಲಿ ಎಐ ಬಳಕೆ- ಭಾರತ ಸರಕಾರದ ಕ್ರಿಯಾಶೀಲ ನಡೆ

ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಗಳು ನಾಳಿನ ಯುದ್ಧಭೂಮಿಯಲ್ಲಿ ನಿರ್ಣಾಯಕ ಅಂಶವಾಗಿದೆ. ಮತ್ತು ಎಐ ಪ್ರಾಬಲ್ಯಕ್ಕಾಗಿ ಈಗಾಗಲೇ ಓಟದ ಸ್ಪರ್ಧೆ ಪ್ರಾರಂಭವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಈ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದರೆ, ಭಾರತವೂ ರಕ್ಷಣಾ ವಲಯದಲ್ಲಿ ಎಐ ಯ ಸಾಮರ್ಥ್ಯವನ್ನು ಅರಿತುಕೊಂಡಿದೆ.

2019 ರಿಂದ, ಭಾರತೀಯ ರಕ್ಷಣಾ ವ್ಯವಸ್ಥೆಯು ರಕ್ಷಣಾ ಸಚಿವರ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕೃತಕ ಬುದ್ಧಿಮತ್ತೆ ಮಂಡಳಿ (ಡಿಎಐಸಿ) ಯನ್ನು ಸ್ಥಾಪಿಸಿದೆ. ಈ ಮಂಡಳಿಯು ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ರೂಪಾಂತರದ ಕಡೆಗೆ ಮಾರ್ಗದರ್ಶನ ಮಾಡುವ ಕಾರ್ಯಸೂಚಿ ಹೊಂದಿದೆ. ಡೇಟಾ ಹಂಚಿಕೆಯ ಕ್ಷೇತ್ರಗಳಲ್ಲಿ ದಿಗ್ದರ್ಶನ ಮಾಡುವುದು, ಉದ್ಯಮದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಚಾಲನೆಗೊಳಿಸುವುದು, ತಂತ್ರಜ್ಞಾನ ಸ್ವಾಧೀನತೆಯ ಬಗ್ಗೆ ನಿರ್ಧರಿಸುವುದು ಮತ್ತು ಇಂತಹದೇ ಇನ್ನಷ್ಟು ಕಾರ್ಯಗಳನ್ನು ಇದಕ್ಕೆ ವಹಿಸಲಾಗಿದೆ.

ರಕ್ಷಣಾ ಉತ್ಪಾದನೆಯ ಕಾರ್ಯದರ್ಶಿಗಳನ್ನೇ ಡಿಫೆನ್ಸ್ ಎಐ ಪ್ರಾಜೆಕ್ಟ್ ಏಜೆನ್ಸಿ (ಡಿಎಐಪಿಎ) ಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಎಐ-ನಿರ್ದಿಷ್ಟ ಅಪ್ಲಿಕೇಶನ್ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳನ್ನು ಮೀಸಲಿಡಲು ಪ್ರತಿಯೊಂದು ಸೇನೆಯ ಪ್ರಧಾನ ಕಛೇರಿಗಳಿಗೆ ನಿರ್ದೇಶನ ನೀಡಲಾಗಿದೆ.

ದೇಶದ ಮೂರು ರಕ್ಷಣಾ ಪಡೆಗಳಲ್ಲಿ, ಭಾರತೀಯ ನೌಕಾಪಡೆಯು ಎಐ- ಸಂಬಂಧಿತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಳತ್ವ ವಹಿಸಿದೆ. "ನೌಕಾಪಡೆಯು ಸ್ವಾಯತ್ತ ವ್ಯವಸ್ಥೆಗಳು, ಭಾಷಾ ಅನುವಾದ, ಮುನ್ಸೂಚಕ ನಿರ್ವಹಣೆ, ದಾಸ್ತಾನು ನಿರ್ವಹಣೆ, ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ, ಪರಿಧಿಯ ಭದ್ರತೆ, ಕಡಲ ರಕ್ಷಣಾ ವ್ಯಾಪ್ತಿಯ ಜಾಗೃತಿ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಒಳಗೊಂಡಿರುವ ಸುಮಾರು 30 ಎಐ ಯೋಜನೆಗಳು ಮತ್ತು ಉಪಕ್ರಮಗಳು ಪ್ರಗತಿಯಲ್ಲಿದೆ" ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ತಿಳಿಸಿದ್ದಾರೆ.

ತೀರಾ ಇತ್ತೀಚೆಗೆ, ಎಐ ಮತ್ತು ರಕ್ಷಣಾ ವ್ಯವಸ್ಥೆಯ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಳಿಂದ ಹೆಚ್ಚಿನ ಆವಿಷ್ಕಾರವನ್ನು ಬೆಂಬಲಿಸುವ ಪ್ರಯತ್ನವಾಗಿ, ರಕ್ಷಣಾ ಸಚಿವಾಲಯವು- 'ರಕ್ಷಣಾ ಉತ್ಕೃಷ್ಟತೆಗಾಗಿ ನಾವೀನ್ಯತೆಗಳು' (ಇನ್ನೊವೇಶನ್ಸ್ ಫಾರ್ ಡಿಫೆನ್ಸ್‌ ಎಕ್ಸಲೆನ್ಸ್‌- ಐಡಿಎಎಕ್ಸ್‌) ಕಾರ್ಯಕ್ರಮದ ಅಡಿಯಲ್ಲಿ ಡಿಫೆನ್ಸ್ ಇಂಡಿಯನ್ ಸ್ಟಾರ್ಟ್ಅಪ್ ಚಾಲೆಂಜ್ (ಡಿಐಎಸ್‌ಸಿ 6) ನ ಆರನೇ ಆವೃತ್ತಿಯನ್ನು ಪ್ರಾರಂಭಿಸಿತು. ಈ ಸವಾಲಿನ ಮೂಲಕ, ಸಚಿವಾಲಯವು 1.5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳ ವರೆಗಿನ ಹಣಕಾಸು ನೆರವು ನೀಡುವ ಮೂಲಕ ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು ಮುಂದಾಗಿದೆ.

ಭಾರತದ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಚೀನಾ, ರಕ್ಷಣಾ ಎಐ ವಿಭಾಗದಲ್ಲಿ ಮುಂದಿದ್ದರೂ, ಭಾರತಕ್ಕೆ ಇದು ಉತ್ತಮ ಆರಂಭವಾಗಿದೆ. ಆವಿಷ್ಕಾರಗಳು ಮುಂದುವರಿಯಲು ಪ್ರಸ್ತುತ ಉಪಕ್ರಮಗಳಿಗೆ ಗಮನ ಕೊಡಬೇಕಾಗಿದೆ. ಭಾರತೀಯ ಸ್ಟಾರ್ಟ್‌ಅಪ್‌ಗಳು ಮುನ್ನಡೆಯ ಹಾದಿಯಲ್ಲಿವೆ. ಎಐ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಅವುಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವುದರಿಂದ ಈ ಕ್ಷೇತ್ರದಲ್ಲಿ ದೇಶವು ಹೆಚ್ಚಿನ ದರದಲ್ಲಿ ಕ್ಷಿಪ್ರ ಬೆಳವಣಿಗೆ ಸಾಧಿಸಲು ಸಹಾಯ ಮಾಡಿದಂತಾಗುತ್ತದೆ.

ಕೃತಕ ಬುದ್ಧಿಮತ್ತೆಯ ಕಲ್ಪನೆ ಹುಟ್ಟಿದ್ದೆಲ್ಲಿ?

ಎಐ ಇಂದು ಐಟಿ, ಟೆಲಿಕಾಂ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಗಮನಾರ್ಹ ತಂತ್ರಜ್ಞಾನವಾಗಿದ್ದರೂ, ಕೃತಕ ಬುದ್ಧಿಮತ್ತೆಯು ಎರಡನೇ ವಿಶ್ವ ಸಮರದ ವೇಳೆಯಲ್ಲಿಯೇ ಮೊಳಕೆಯೊಡೆದಿತ್ತು ಎಂಬುದು ನಿಮಗೆ ಗೊತ್ತೇ? ನಾಜಿ ಎಂಜಿಮಾ ಯಂತ್ರವನ್ನು ಯಶಸ್ವಿಯಾಗಿ ಭೇದಿಸಿದ ಅಲನ್ ಟ್ಯೂರಿಂಗ್ ತನ್ನ ಕೃತಿಯಲ್ಲಿ ''ಯಂತ್ರಗಳು ಯೋಚಿಸಬಲ್ಲವೇ?'' ಎಂಬ ಪ್ರಶ್ನೆಯನ್ನು ಎತ್ತಿದಾಗಲೇ ಕೃತಕ ಬುದ್ಧಿಮತ್ತೆಯ ಸಂಭಾವ್ಯತೆ ಹುಟ್ಟಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT