ಭಾನುವಾರ, ಜನವರಿ 17, 2021
18 °C
ಹಳಿ ತಪ್ಪಿದ ಆರ್ಥಿಕತೆಯನ್ನು ಹಳಿಗೆ ತರಲು ತ್ವರಿತ ಕ್ರಮಗಳು ಅವಶ್ಯಕ

ಹೂಡಿಕೆಯ ಔಚಿತ್ಯದ ಸ್ವರೂಪ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ಆರ್ಥಿಕ ಅಭಿವೃದ್ಧಿಯು ಹಣಕಾಸಿನ ಹೂಡಿಕೆಯನ್ನು ಅವಲಂಬಿಸಿರುತ್ತದೆ. ಹೂಡಿಕೆಯು ವಸ್ತು ಮತ್ತು ಸೇವೆಗಳ ಅವಶ್ಯಕತೆಯನ್ನು ಅವಲಂಬಿಸಿದೆ. ಅಲ್ಲದೆ, ಆರ್ಥಿಕ ಅಭಿವೃದ್ಧಿಯು ಆರ್ಥಿಕತೆಯ ಬಗ್ಗೆ ಜನರ ಮಾನಸಿಕ ಸ್ಥಿತಿಯನ್ನೂ ಅವಲಂಬಿಸಿರುತ್ತದೆ. ಆರ್ಥಿಕತೆಯಲ್ಲಿ ಈ ಅಂಶವು ಹೆಚ್ಚು ಮಹತ್ವವನ್ನು ಪಡೆದಿದೆ. ಉದಾಹರಣೆಗೆ, ಗೃಹಸಾಲವನ್ನು ಪಡೆದು ಮನೆ ಕಟ್ಟಿಕೊಳ್ಳುವುದು ಒಬ್ಬ ವ್ಯಕ್ತಿಯ ಅವಶ್ಯಕತೆ ಇರಬಹುದು. ಸಾಲವನ್ನು ಕೊಡಲು ಬ್ಯಾಂಕೂ ಸಿದ್ಧವಿರಬಹುದು. ಅಂದಮಾತ್ರಕ್ಕೆ ಅವನು ಗೃಹ ಸಾಲವನ್ನು ಪಡೆಯುತ್ತಾನೆ ಎನ್ನುವಂತಿಲ್ಲ. ಸಾಲವನ್ನು ಮರುಪಾವತಿ ಮಾಡಲು ತನಗೆ ಎಷ್ಟರಮಟ್ಟಿಗೆ ಸಾಧ್ಯ ಎಂದು ಅವನು ಭಾವಿಸುತ್ತಾನೆಯೊ ಅದನ್ನು ಅವಲಂಬಿಸಿ ಸಾಲ ಪಡೆಯುವ ಪ್ರಕ್ರಿಯೆ ನಿರ್ಧಾರವಾಗುತ್ತದೆ. ಈ ಆರ್ಥಿಕ ಮಾನಸಿಕತೆ ಎಷ್ಟು ಸಶಕ್ತವಾಗಿರುತ್ತದೆ ಎಂದರೆ, ಬ್ಯಾಂಕ್‌ನಲ್ಲಿ ಠೇವಣಿ ಇಡುವುದು ಸುರಕ್ಷಿತ ಅಲ್ಲ ಎಂದು ಮನಸ್ಸಿಗೆ ಬಂದರೆ ಮುಗಿಯಿತು; ಬ್ಯಾಂಕ್‌ಗಳು ಯಾವ ಉತ್ತೇಜನವನ್ನು ನೀಡಿದರೂ ಬ್ಯಾಂಕ್‌ನಲ್ಲಿ ಠೇವಣಿ ಉಳಿಯುವುದಿಲ್ಲ. ಆದ್ದರಿಂದ ಆರ್ಥಿಕ ಉತ್ತೇಜನಕ್ಕೆ ಮಾಡುವ ಪ್ರಯತ್ನಗಳು ಆರ್ಥಿಕ ಮನಃಸ್ಥಿತಿಯನ್ನು ಬಲಪಡಿಸುವ ರೀತಿಯಲ್ಲಿ ಇರಬೇಕಾದುದು ಅಗತ್ಯವಾಗಿದೆ.

ಕೊರೊನಾ ಬಂದ ನಂತರ ಬಹಳಷ್ಟು ಬದಲಾವಣೆಗಳಾಗಿವೆ. ಕೆಲವು ಉದ್ಯೋಗಗಳು ಹೊರಟುಹೋಗಿವೆ. ಕೆಲವು ಹೊಸ ಉದ್ಯೋಗಗಳ ಸೃಷ್ಟಿಯೂ ಆಗಿದೆ. ಆದರೆ ಇಲ್ಲಿ ಆರ್ಥಿಕ ಮಾನಸಿಕತೆ ಹೇಗೆ ರೂಪುಗೊಂಡಿದೆ ಎಂಬುದು ಮುಖ್ಯ ವಿಷಯವಾಗಿದೆ. ಬಹುಮಟ್ಟಿಗೆ ‘ಆರ್ಥಿಕವಾಗಿ ನಾವು ಸುರಕ್ಷಿತರಲ್ಲ’ ಎಂಬ ಭಾವನೆ ಜನರಲ್ಲಿ ಕಾಣಿಸುತ್ತಿದೆ.

ಇಂತಹ ಸನ್ನಿವೇಶದಲ್ಲಿ ಆರ್ಥಿಕತೆಯನ್ನು ಉತ್ತೇಜಿಸುವ ಪ್ರಯತ್ನವು ಆರ್ಥಿಕ ಮನಃಸ್ಥಿತಿಯನ್ನು ಭರವಸೆದಾಯಕವಾಗಿ ಮಾಡಬೇಕಾಗಿದೆ. ಅಂದರೆ, ನಾವು ಕಷ್ಟಪಟ್ಟು ದುಡಿದರೆ ಅದರಿಂದ ನಿರ್ದಿಷ್ಟ ಆದಾಯ ಬರುತ್ತದೆ ಮತ್ತು ಅದು ನಮ್ಮದಾಗಿಯೇ ಉಳಿಯುತ್ತದೆ ಎಂಬ ಭಾವನೆ ಜನರಲ್ಲಿ ಬರುವ ಹಾಗೆ ಮಾಡಬೇಕು. ಹಾಗಾಗಬೇಕಾದರೆ, ಯಾವ ವಲಯಕ್ಕೆ ಎಷ್ಟು ಮತ್ತು ಹೇಗೆ ಹೂಡಿಕೆ ಮಾಡಬೇಕು ಎನ್ನುವುದನ್ನು ವ್ಯಾಪಕವಾಗಿ ವಲಯವಾರು ಅಧ್ಯಯನ ಮಾಡಿದ ನಂತರವಷ್ಟೇ ಹೇಳಲು ಸಾಧ್ಯ. ಆಯವ್ಯಯವನ್ನು ರೂಪಿಸುವಾಗ ಇದನ್ನು ಅಧ್ಯಯನ ಮಾಡಬೇಕಾಗುತ್ತದೆ. ಆದರೆ ಅದರ ಸ್ವರೂಪ ಹೇಗಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ, ಪ್ರಸ್ತುತ ಕೃಷಿ ರಂಗಕ್ಕೆ ಹೂಡಿಕೆ ಮಾಡುವುದರಿಂದ ಉಪಯೋಗವಿಲ್ಲ. ಅದರಿಂದ ಆರ್ಥಿಕತೆ ಕುರಿತ ಮನೋಧೋರಣೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದಿಲ್ಲ.

ಕೊರೊನಾ ನಂತರದಲ್ಲಿಯೂ ಕೃಷಿ ರಂಗ ಅದಕ್ಕಿಂತ ಮೊದಲು ಹೇಗಿತ್ತೋ ಹಾಗೇ ಇದೆ. ಆದರೆ ನಗರ ಕೇಂದ್ರಿತವಾದ ಸೇವಾ ವಲಯದಲ್ಲಿ ಉದ್ಯೋಗಗಳು ಹೊರಟುಹೋಗಿ ಅಲ್ಲಿನ ಉದ್ಯೋಗಿಗಳು ಕೃಷಿ ರಂಗಕ್ಕೆ ಹೆಚ್ಚುವರಿಯಾಗಿ ಸೇರಿಕೊಂಡಿದ್ದಾರೆ. ಅಂದರೆ ನಗರಗಳಲ್ಲಿ ಉದ್ಯೋಗದಲ್ಲಿದ್ದವರು ಹಳ್ಳಿ ಸೇರಿದ್ದಾರೆ. ಆದರೆ ಹಳ್ಳಿಗಳಿಗೆ ಹೆಚ್ಚುವರಿಯಾಗಿ ಸೇರಿದ ಇವರ ಮೇಲೆಯೇ ಅದಾಗಲೆ ಹಳ್ಳಿಯಲ್ಲಿದ್ದವರು ಭರವಸೆಯನ್ನು ಹೊಂದಿದ್ದರು. ಈಗ, ನಮ್ಮವನೊಬ್ಬ ನಗರದಲ್ಲಿ ಉದ್ಯೋಗದಲ್ಲಿದ್ದು ಅಗತ್ಯಕ್ಕೆ ಸಹಾಯಕ್ಕೆ ಬಂದಾನೆಂಬ ಭರವಸೆ ಅವರಿಗೆ ಹೊರಟುಹೋಗಿದೆ. ಅಗತ್ಯ ಇದ್ದಾಗ ಊರಿನಲ್ಲಿದ್ದವರಿಗೆ ನೆರವಾಗಬಲ್ಲೆ ಎಂಬ ಧೈರ್ಯ ಇವರಿಗೆ ಹೊರಟುಹೋಗಿದೆ. ಅಂದರೆ ಕೃಷಿ ರಂಗದಲ್ಲಿ ಇದ್ದವರು ಮತ್ತು ಹೆಚ್ಚುವರಿ ಸೇರ್ಪಡೆಯಾದವರು- ಈ ಎರಡೂ ವರ್ಗಗಳಲ್ಲಿ ಆರ್ಥಿಕ ಮಾನಸಿಕತೆಯು ನಕಾರಾತ್ಮಕ ನೆಲೆಯಲ್ಲಿದೆ. ಇವರಲ್ಲಿ ಆರ್ಥಿಕ ಭರವಸೆ ಮೂಡಬೇಕಾದರೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡವರಲ್ಲಿ ಆರ್ಥಿಕ ಭರವಸೆಗಳನ್ನು ಮೂಡಿಸುವ ಕೆಲಸ ನಡೆಯಬೇಕು.

ಇದನ್ನು ಎರಡು ರೀತಿಯಲ್ಲಿ‌ ಮಾಡಬೇಕು. ಮೊದಲನೆಯದು, ಎಲ್ಲಿ ಉದ್ಯೋಗ ಕಳೆದುಹೋಯಿತೋ ಅಲ್ಲಿಗೆ ಮರು ಸೇರ್ಪಡೆಗೊಳಿಸುವುದು. ಸಾಕಷ್ಟು ಅನುಭವಿಗಳಾದವರೇ ಬೇಕಾಗಿರುವ ಘಟಕಗಳು ಹಿಂದಿನ ಉದ್ಯೋಗಿಗಳನ್ನೇ ಮತ್ತೆ ತೆಗೆದುಕೊಳ್ಳುತ್ತವೆ. ಆದರೆ, ಅದಕ್ಕಿಂತ ಹೆಚ್ಚಾಗಿ ಹಿಂದಿನ ಉದ್ಯೋಗಿಗಳ ಬದಲಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳುವ ಘಟಕಗಳು ಜಾಸ್ತಿ ಇರುತ್ತವೆ. ಏಕೆಂದರೆ ಹೊಸಬರಾದಾಗ ವೇತನ ಕಡಿಮೆ ಕೊಟ್ಟರೆ ನಡೆಯುತ್ತದೆ. ಜಾಸ್ತಿ ಅನುಭವಿಗಳಿಗೆ ಜಾಸ್ತಿ ವೇತನ ನೀಡುವ ಪದ್ಧತಿ ಹಾಗೂ ಘಟಕಗಳ ಸೊರಗುವಿಕೆ ಈ ಎರಡೂ ಈ ಪರಿಸ್ಥಿತಿಗೆ ಕಾರಣವಾಗಿವೆ. ನಗರದ ಸೇವಾ ವಲಯಕ್ಕೆ ಹೊಸಬರ ಬರುವಿಕೆಯು ಬಹಳ ನಿಧಾನವಾಗಿ ಜರುಗಿದೆ. ಇದರಿಂದಾಗಿ ಸೇವಾ ವಲಯದಿಂದ ಹೊರಬಿದ್ದ, ಆದರೆ ಕೃಷಿ ವಲಯದಲ್ಲಿ ನೆಲೆಯಾಗದ ಒಂದು ದೊಡ್ಡ ವರ್ಗ ಒಟ್ಟೂ ಆರ್ಥಿಕತೆಯಿಂದಲೇ ಹೊರತಳ್ಳಲ್ಪಡುತ್ತಿದೆ.

ಆರ್ಥಿಕ ಮಾನಸಿಕತೆ ರೂಪಿಸುವ ದೃಷ್ಟಿಯಲ್ಲಿ ಈ ವರ್ಗವೇ ಅತ್ಯಂತ ಮಹತ್ವದ್ದು. ಏಕೆಂದರೆ ಹೊಸದಾಗಿ ಉದ್ಯೋಗ ಪಡೆದವರದು ಹೊಸ ಗಳಿಕೆ. ಅದಿನ್ನೂ ಆರ್ಥಿಕತೆಯ ಮೇಲೆ ಪ್ರಭಾವವನ್ನು ಉಂಟು ಮಾಡಿರುವುದಿಲ್ಲ. ಆದರೆ ಉದ್ಯೋಗವನ್ನು ಕಳೆದುಕೊಂಡ ವರ್ಗದ ಆದಾಯವು ಬಹು ರೀತಿಯಲ್ಲಿ ಪರಿಣಾಮ ಬೀರುವಂತಹದ್ದಾಗಿತ್ತು. ಅದೀಗ ಸ್ತಬ್ಧವಾ ಗಿದೆ. ಇವರದ್ದೂ ಜೀವನ ನಡೆಯಬಹುದು. ಆದರೆ ಜೀವನ ನಡೆಯುವುದೇ ಸಕಾರಾತ್ಮಕ ಆರ್ಥಿಕ ಮಾನಸಿಕತೆಯನ್ನು ಹುಟ್ಟುಹಾಕುವುದಿಲ್ಲ. ಅದಾಗಬೇಕಾದರೆ, ಕಳೆದುಕೊಂಡ ಆದಾಯದ ಹತ್ತಿರ ಹತ್ತಿರ ಬರುವಷ್ಟಾದರೂ ಆದಾಯ ಗಳಿಕೆ ಆಗಬೇಕಾಗುತ್ತದೆ.

ಈ ವರ್ಗ ಯಾವ ವಲಯದಿಂದ ಎಷ್ಟು ಹೋಗಿದೆ ಎಂದು ತಿಳಿಯುವುದು ಕಷ್ಟಕರ. ಆದರೆ ಆಯಾ ವ್ಯಕ್ತಿಗಳಿಗೆ ತಮ್ಮ ಕ್ಷೇತ್ರದ ಅನುಭವ-ಕೌಶಲಗಳ ಅರಿವಿರುತ್ತದೆ. ಆ ಅನುಭವಗಳಿಗೆ ತಕ್ಕ ಹಾಗೆ ಅವರಿಗೆ ಬದಲಿಗಳು ದೊರೆಯಲು ಸಾಧ್ಯವಾಗಬೇಕು. ಉದ್ಯೋಗ ಕಳೆದುಕೊಂಡವರ ವಿವರ ಮತ್ತು ಅವರನ್ನು ಯಾವ ವಲಯಕ್ಕೆ ನಿಯೋಜಿಸಬಹುದೆಂಬ ಅಂದಾಜಿಸುವಿಕೆಯನ್ನು ಜಿಲ್ಲಾ ಮಟ್ಟದಲ್ಲಿ ಮಾಡಬೇಕು. ಆ ಅಂದಾಜಿಸುವಿಕೆಯನ್ನು ರಾಜ್ಯ ಮಟ್ಟದಲ್ಲಿ ಜಾರಿ ಮಾಡಬೇಕು. ಆಗ ಈ ಸಮಸ್ಯೆಯನ್ನು ಬಗೆಹರಿಸಬಹುದು. ಅಲ್ಲದೆ, ಸಮಸ್ಯೆಯ ನಿರ್ವಹಣೆಗೆ ಇನ್ನೊಂದು ವಿಧಾನವಿದೆ. ಉದ್ಯೋಗ ಕಳೆದುಕೊಂಡ ವರ್ಗ ತನ್ನದೇ ಆದ ಉತ್ಪಾದಕ ಚಟುವಟಿಕೆಗಳಲ್ಲಿ ನಿರತವಾಗಲು ಬಡ್ಡಿರಹಿತ ಸಾಲ ಮತ್ತು ಸಬ್ಸಿಡಿಗಳನ್ನು ನೀಡಬೇಕು.

ಕೌಟುಂಬಿಕ ಅಥವಾ ವೈಯಕ್ತಿಕ ನೆಲೆಯಲ್ಲಿ ಉದ್ಯೋಗದ ಮರು ಗಳಿಕೆಯಲ್ಲಿಯೂ ಗಮನಿಸಬೇಕಾದುದು ಈ ಅಂಶವನ್ನೆ. ಬದಲಿ ಉತ್ಪಾದಕ ಚಟುವಟಿಕೆಗಳು ಈ ಹಿಂದಿನಷ್ಟೇ ಆದಾಯ ಗಳಿಕೆಯ ಅವಕಾಶವನ್ನು ಕೊಡಬೇಕು. ಇಂತಹ ಸಂದರ್ಭದಲ್ಲಿ ವೈಯಕ್ತಿಕ, ಕೌಟುಂಬಿಕ, ಸಾರ್ವಜನಿಕ ಹೂಡಿಕೆಗಳು ಅನುತ್ಪಾದಕ ಚಟುವಟಿಕೆಗಳ ಮೇಲೆ ತುಂಬಾ ನಿಯಂತ್ರಣವನ್ನು ಹೊಂದಿರಬೇಕಾಗುತ್ತದೆ. ಹಳಿ ತಪ್ಪಿದ ಆರ್ಥಿಕತೆಯನ್ನು ಹಳಿಗೆ ತರಲು ಈ ರೀತಿಯ ಕ್ರಮಗಳು ಅವಶ್ಯಕ.

ಇಂತಹ ಆರ್ಥಿಕ ಕ್ರಮಗಳನ್ನು ಈಗ ತೆಗೆದುಕೊಳ್ಳದಿದ್ದರೆ ನಿಧಾನವಾಗಿ ಸಾಮಾಜಿಕ ಕೆಡುಕುಗಳು ಶುರುವಾಗುತ್ತವೆ. ಏಕೆಂದರೆ, ಒಳ್ಳೆಯ ಆದಾಯವನ್ನು ಪಡೆಯುತ್ತಿದ್ದ ವರ್ಗವು ಅದೇ ಪ್ರಮಾಣದ ಆದಾಯವಿಲ್ಲದೆ ಬಹುಕಾಲ ಬಾಳಲು ಹೊರಟಾಗ ವೈಯಕ್ತಿಕ ಹತಾಶೆ, ಸಾಮಾಜಿಕ ಅವಮಾನ ಮತ್ತು ಅವಲಂಬಿತರ ಸಂಕಷ್ಟಗಳು ಶುರುವಾಗುತ್ತವೆ. ಈ ಕ್ಷಣಕ್ಕೆ ಇದೆಲ್ಲ ಕೊರೊನಾದ ಸಮಸ್ಯೆ ಎಂದು ಸಂಭಾಳಿಸಿಕೊಂಡು ಹೋಗುತ್ತದೆ. ಆದರೆ ನಿಧಾನವಾಗಿ ಅದು ಆರ್ಥಿಕ ಸಮಸ್ಯೆಯೇ ಆಗಿ ಉಳಿದುಕೊಂಡರೆ ಕಳ್ಳತನದಂತಹ ಚಟುವಟಿಕೆ ಶುರುವಾಗಲು, ಭೂಹಿಡುವಳಿಗಳ ಛಿದ್ರೀಕರಣವಾಗಿ ಕೃಷಿ ಉತ್ಪಾದನೆ ಕುಸಿಯಲು, ಕೌಟುಂಬಿಕ ಮನಸ್ತಾಪ ಏರ್ಪಡಲು- ಇನ್ನೂ ಮುಂತಾದ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಮೊದಲ ಹಂತದಲ್ಲಿ ಮಾಹಿತಿ ಸಂಗ್ರಹ ಆಗಬೇಕು. ನಂತರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯು ನಿಯೋಗಿಗಳಾಗಿ ಸಮಸ್ಯೆಯನ್ನು ನಿರ್ವಹಿಸಬೇಕು. ಇದನ್ನು ನಿರ್ವಹಣೆ ಮಾಡುತ್ತಾ ಹೋದ ಹಾಗೆ ಪಂಚಾಯಿತಿ ಮಟ್ಟದಲ್ಲಿ ಹೊಸ ಉದ್ದಿಮೆಗಳ ಸೃಷ್ಟಿಯಾಗಬಹುದು. ಹಾಗೆ ಆದಲ್ಲಿ ಅದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಬಳಸಿಕೊಂಡ ಅವಕಾಶವೂ ಆಗಿರುತ್ತದೆ. ಆಗ ಅದು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು