ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಲೇಖನ: ಜನತಾ ಬಂಡಾಯದ ಮೆಲುಕು

ಬ್ರಿಟಿಷರ ವಿರುದ್ಧದ ಕೊಡಗಿನ ಬಂಡಾಯದಲ್ಲಿ ಪ್ರಜಾಸತ್ತಾತ್ಮಕ ದೃಷ್ಟಿಕೋನವಿದೆ
Last Updated 30 ಅಕ್ಟೋಬರ್ 2020, 1:45 IST
ಅಕ್ಷರ ಗಾತ್ರ

1837ರ ಅಕ್ಟೋಬರ್ 31ರಂದು ಬೆಳಗ್ಗೆ 10 ಗಂಟೆಗೆ ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿ ಸರ್ಕಾರವು ತನ್ನ ವಿರುದ್ಧ ಬಂಡೆದ್ದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರನ್ನು ‘ಮಹಾ ಅಪಾಯಕಾರಿ ಪಿತೂರಿಗಾರ’ ಎಂದು ಹೇಳಿ, ಮಡಿಕೇರಿ ಕೋಟೆಯ ಮುಂಭಾಗದಲ್ಲಿ ನೇಣಿಗೇರಿಸಿತು. ಅಕ್ಟೋಬರ್ 31 ಅನ್ನು ಈಗ ಕೊಡಗು ಜಿಲ್ಲೆಯ ಆಡಳಿತವು ಹುತಾತ್ಮ ದಿನವೆಂದು ಆಚರಿಸುತ್ತಿದೆ.

1834ರಿಂದ 1837ರವರೆಗೆ ನಡೆದ ಕೊಡಗು ಮತ್ತು ಕರಾವಳಿ ಭಾಗದ ಬಂಡಾಯವು ಕಾಸರಗೋಡನ್ನೂ ವ್ಯಾಪಿಸಿ ಮಂಗಳೂರನ್ನು 13 ದಿನಗಳ ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡಿತ್ತು. ಇದು, ಆ ಕಾಲಮಾನದಲ್ಲಿನ ಉಳಿದ ಬ್ರಿಟಿಷ್ ವಿರೋಧಿ ಹೋರಾಟಗಳಿಗಿಂತ ಭಿನ್ನವಾಗಿತ್ತು. ಅಂದಿನ ಬ್ರಿಟಿಷ್ ವಿರೋಧಿ ಹೋರಾಟಗಳು ಸಾಮಾನ್ಯವಾಗಿ ಸ್ಥಳೀಯ ರಾಜರ ಹಿತಾಸಕ್ತಿಗೆ ಅಥವಾ ವೈಯಕ್ತಿಕ ಹಿತಾಸಕ್ತಿಗೆ ಧಕ್ಕೆ ಬಂದಾಗ ನಡೆದುದನ್ನು ಕಾಣುತ್ತೇವೆ. ಆದರೆ ಇದು ಜನತಾ ಬಂಡಾಯವಾಗಿತ್ತು.

ಈ ಬಂಡಾಯಕ್ಕೆ ತಂಬಾಕು ಮತ್ತು ಉಪ್ಪಿನ ತೆರಿಗೆಯ ಛಾಯೆ ಹಾಗೂ ಭೂಕಂದಾಯದ ಹೊರೆ, ಭೂಹೀನರಾಗುವ ಭಯ ಮುಂತಾದ ಹಲವು ಕಾರಣಗಳು ವಿಶಾಲ ವ್ಯಾಪ್ತಿಯ ವೇದಿಕೆಯನ್ನು ನಿರ್ಮಿಸಿವೆ. 1834ರಲ್ಲಿ ಬ್ರಿಟಿಷರು ಕೊಡಗಿನ ಚಿಕವೀರ ರಾಜೇಂದ್ರರನ್ನು ಪದಚ್ಯುತಗೊಳಿಸಿದಾಗ ಉಂಟಾದ ಅಸಮಾಧಾನವು ಜನಸಮುದಾಯಗಳಲ್ಲಿ ಸಾಮ್ರಾಜ್ಯಶಾಹಿ ಆಡಳಿತ ಬೇಡ ಎಂಬ ಮನೋಭಾವ ಸೃಷ್ಟಿಸಿದ ಪರಿಣಾಮವಾಗಿ ನಡೆದ ಹೋರಾಟವಿದು.

ಏಕೆಂದರೆ, ಬಂಡಾಯಗಾರರಿಂದ ರಾಜಕುಟುಂಬದವರೆಂದು ಬಿಂಬಿತವಾದ ಸ್ವಾಮಿ ಅಪರಂಪಾರ, ಕಲ್ಯಾಣ ಸ್ವಾಮಿ, ನಂತರ ಕಲ್ಯಾಣ ಸ್ವಾಮಿಯ ವೇಷ ಹಾಕಿಸಿ ತೋರಿಸಿದ ಪುಟ್ಟಬಸಪ್ಪ ಇವರ್‍ಯಾರೂ ರಾಜಕುಟುಂಬದವರಾಗಿರಲಿಲ್ಲ. ತೋರಿಸಲು ಒಬ್ಬ ನಾಯಕ ಬೇಕಿತ್ತು. ರಾಜನ ಆಡಳಿತ ಇದ್ದುದರಿಂದ ರಾಜಕುಟುಂಬದವನೆಂದು ಒಬ್ಬರನ್ನು ತೋರಿಸಲು ವೇಷಧಾರಿಗಳನ್ನು ಸಿದ್ಧಪಡಿಸಲಾಗಿತ್ತು, ಅಷ್ಟೆ. 1837ರ ಮಾರ್ಚ್ 31ರಂದು, ರಾಜಕುಟುಂಬಕ್ಕೆ ಸೇರಿರದ ಕಲ್ಯಾಣ ಸ್ವಾಮಿಯನ್ನು ಕೊಡಗಿನ ಆಡಳಿತಗಾರ ಎಂದು ಬಂಡಾಯಗಾರರು ಬೆಳ್ಳಾರೆಯಲ್ಲಿ ಘೋಷಿಸಿದ್ದರು. ಅಧಿಕಾರ ಸ್ವೀಕರಿಸಿದ ಕಲ್ಯಾಣ ಸ್ವಾಮಿಯ ಘೋಷಣೆಗಳು ಜನಪರ ಕಳಕಳಿಯಿಂದ ಕೂಡಿದ್ದವು. ಅಲ್ಲದೆ, ಬ್ರಿಟಿಷರು ಅಪರಂಪಾರನನ್ನು ಬಂಧಿಸಿದಾಗ, ಮತ್ತೊಬ್ಬ ಕಲ್ಯಾಣ ಸ್ವಾಮಿ; ಕಲ್ಯಾಣ ಸ್ವಾಮಿಯನ್ನು ಬಂಧಿಸಿದಾಗ, ಕೃತಕ ಕಲ್ಯಾಣ ಸ್ವಾಮಿಯನ್ನು ರೂಪಿಸಿದ್ದನ್ನು ನೋಡಿದಾಗ ಬಂಡಾಯಗಾರರಿಗಿದ್ದದ್ದು ನಾಯಕ ನಿಷ್ಠೆ ಅಲ್ಲ; ಬ್ರಿಟಿಷರು ಇರಬಾರದೆಂಬುದೇ ಆಗಿತ್ತು ಎನ್ನುವುದು ಗೊತ್ತಾಗುತ್ತದೆ. ನಾಯಕತ್ವದ ಆರಾಧನೆಗೆ ಒಳಗಾಗದ ಕಾರಣಗಳೇ ಪ್ರಧಾನವಾದ ಬಲು ಅಪೂರ್ವ ಹೋರಾಟವಿದು.

ಬಂಡಾಯದ ರಚನೆಯಲ್ಲಿಯೂ ಪ್ರಜಾಸತ್ತಾತ್ಮಕ ದೃಷ್ಟಿಕೋನ ಕಾಣಿಸುತ್ತದೆ. ಆಗ ಈ ಪ್ರದೇಶದಲ್ಲಿ ಎಲ್ಲರನ್ನೂ ಒಟ್ಟು ಸೇರಿಸುವ ಶಕ್ತಿ ಇದ್ದುದು ಗೌಡರಿಗೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಮೀಪದ ಕೂಜುಗೋಡು ಕಟ್ಟೆಮನೆಯ ಗೌಡರ ಸಭೆ, ಕೆದಂಬಾಡಿ ರಾಮಯ್ಯ ಗೌಡರ ಸಭೆ... ಇಲ್ಲೆಲ್ಲ ಹುಟ್ಟಿಕೊಂಡ ಬಂಡಾಯದ ಸಂಘಟನೆಯಲ್ಲಿ ಮುಸ್ಲಿಮರು, ಬ್ರಾಹ್ಮಣರು, ಜೈನರು, ಬಂಟರು, ಮಲೆಕುಡಿಯರು, ಲಿಂಗಾಯತರು ಮುಂತಾಗಿ ಎಲ್ಲ ಸಮುದಾಯಗಳೂ ಒಟ್ಟಾಗಿದ್ದವು. ಬಂಡಾಯವು ವ್ಯಕ್ತಿ ಹಿತಾಸಕ್ತಿಯನ್ನು ದಾಟಿ, ಒಂದು ಸಮುದಾಯದ ಹಿತಾಸಕ್ತಿಯನ್ನೂ ದಾಟಿ ಎಲ್ಲ ಸಮುದಾಯಗಳ ಸಾಮಾನ್ಯ ಆಕಾಂಕ್ಷೆಯನ್ನೂ ಪ್ರತಿನಿಧಿಸಲು ಸಮರ್ಥವಾಗಿತ್ತು ಎನ್ನುವುದು ಈ ಬಂಡಾಯದ ಮಹತ್ವವಾಗಿದೆ. ಹೋರಾಟವು ಲಕ್ಷ್ಮಪ್ಪ ಬಂಗರಸನನ್ನೂ ಕೊಡಗಿನ ಕಾವಲು ಭಟ ಚೆಟ್ಟಿ ಕುಡಿಯನನ್ನೂ ಒಂದೇ ಉದ್ದೇಶಕ್ಕಾಗಿ ಒಟ್ಟು ಮಾಡಿದ್ದು ನಾಯಕತ್ವದ ಹಿಂದಿನ ವಿವೇಕ.

ಅಂತಹ ವಿವೇಕ ಸಣ್ಣ ನಾಯಕತ್ವದಲ್ಲಿ ಬಂದಿತ್ತು. ಉಪ್ಪಿನಂಗಡಿ ಮಂಜ, ಅಮೀನ್ ವೆಂಕಟ, ಪೆರಾಜೆ ಕೃಷ್ಣಯ್ಯ, ಕುಡೆಕಲ್ಲು ಪುಟ್ಟ, ಷೇಕ್, ಹುಲಿಕಡಿದ ನಂಜಯ್ಯ, ವೀರಣ್ಣ ರೈ, ಕುಂಬಳೆ ಸುಬ್ರಾಯ ಹೆಗ್ಡೆ, ಊಕಣ್ಣ ರೈ ಮುಂತಾದ ಅಸಂಖ್ಯಾತ ನಾಯಕರೆಲ್ಲರೂ ಸಣ್ಣ ನಾಯಕರು. ಆದರೆ ಎಲ್ಲರನ್ನೂ ಒಳಗೊಳ್ಳಬಲ್ಲವರು. ಈ ರೀತಿಯ ಸಣ್ಣ ನಾಯಕತ್ವ ಅದೆಷ್ಟು ಬಲಿಷ್ಠವಾಗಿರುತ್ತದೆ ಎಂದರೆ, ಬ್ರಿಟಿಷ್ ಅಧಿಕಾರಿ ಲೆವಿನ್ ತನ್ನ ವರದಿಯಲ್ಲಿ, ‘ನಾವು ಎದುರಿಸಬೇಕಾದ್ದು ನಕಲಿ ಉತ್ತರಾಧಿಕಾರಿಯನ್ನು ಮಾತ್ರವಲ್ಲ; ಊರಿನ ಜನರು, ನೆರೆಯವರು, ಸರ್ಕಾರಿ ನೌಕರರು ಎಲ್ಲರೂ ಅವನೊಂದಿಗಿದ್ದಾರೆ. ಪಟೇಲರು ಮತ್ತು ಶಾನುಭೋಗರು ಒಬ್ಬನೇ ಒಬ್ಬ ನಮ್ಮ ಕಡೆಗೆ ಬರುತ್ತಿಲ್ಲ’ ಎಂದು ಬರೆಯುತ್ತಾನೆ. ಆದ್ದರಿಂದ ಬಂಡಾಯದ ಬಿಸಿ ಎಷ್ಟಿತ್ತೆಂದರೆ, 1835ರ ಜೂನ್‌23ರಂದು ಕೋರ್ಟ್ ಆಫ್ ಡೈರೆಕ್ಟರ್ಸ್, ಜನರಲ್ ಫ್ರೇಸರ್‌ಗೆ ಲಂಡನ್‌ನಿಂದ ಬರೆದ ಪತ್ರದಲ್ಲಿ, ‘ನಿಜವಾದ ರಾಜವಂಶಸ್ಥ ಇದ್ದರೆ ಕೊಡಗನ್ನು ಅವರಿಗೆ ಕೊಟ್ಟುಬಿಡಿ’ ಎಂದು ಬರೆದಿತ್ತು. ಸಣ್ಣ ನಾಯಕತ್ವವು ಜಾತಿ, ಧರ್ಮ, ಪ್ರದೇಶ, ಭಾಷೆಗಳನ್ನು ಮೀರಿ ಎಲ್ಲರನ್ನೂ ತಲುಪಲು ಹೊರಟಾಗ ಇದು ಸಾಧ್ಯ ಎನ್ನಲು ಈ ಬಂಡಾಯವೇ ಸಾಕ್ಷಿ. ವರ್ತಮಾನದಲ್ಲಿ ತಮ್ಮ ವಿರೋಧಿಗಳನ್ನು ಹೆಚ್ಚಿಸಿಕೊಳ್ಳುವ ಜಾತಿ, ಧರ್ಮ, ಪ್ರದೇಶ, ಭಾಷೆಗಳ ಸಂಕಥನಕಾರರು ಇದರಿಂದ ಕಲಿಯಬೇಕಾದ್ದು ಬಹಳವಿದೆ.

ಸಂಘಟನೆಯ ಚಾತುರ್ಯವನ್ನು ಈ ಬಂಡಾಯವು ತಿಳಿಸುತ್ತದೆ. ಬಂಡಾಯಗಾರರು ಮಡಿಕೇರಿಯನ್ನು ವಶಪಡಿಸಿಕೊಳ್ಳಲು ಬರುತ್ತಾರೆ ಎಂದು ಭಾವಿಸಿ ಬ್ರಿಟಿಷರು ಅವರನ್ನು ಎದುರಿಸಲು ಸನ್ನದ್ಧರಾಗುತ್ತಾರೆ. ಆದರೆ ಅಪ್ಪಯ್ಯ ಗೌಡ ನೇತೃತ್ವದ ಒಂದು ತಂಡ ಮಾತ್ರ ಬ್ರಿಟಿಷರಿಗೆ ಸಿಗುತ್ತದೆ. ಪಂಜದ ಜ್ಯೋತಿಷಿಯ ಸಲಹೆಯಂತೆ ತಂಡವು ಮಂಗಳೂರು ಕಡೆಗೆ ಹೋಗುತ್ತದೆ. ಪುತ್ತೂರಿನಲ್ಲಿ ಕವಲುಗಳಾಗಿ ಒಡೆಯುತ್ತದೆ. ಒಂದು ಕವಲು ಕೊಡಗಿನ ಕಡೆ, ಒಂದು ಕುಂಬಳೆ-ಕಾಸರಗೋಡು ಕಡೆ, ಮತ್ತೊಂದು ಮಂಗಳೂರು ಕಡೆಗೆ ಹೊರಡುತ್ತದೆ. ಇದರಿಂದ ಪ್ರಭಾವಿತರಾಗಿ ಹೊನ್ನಾವರದ ರೈತರು ಬ್ರಿಟಿಷರ ವಿರುದ್ಧ ಸಂಘಟಿತರಾಗುತ್ತಾರೆ. ಕುಟಿಲೋಪಾಯಗಳಲ್ಲಿ ಪರಿಣತರಾದ ಬ್ರಿಟಿಷರನ್ನು ದಿಕ್ಕು ತಪ್ಪಿಸುವ ಚಾತುರ್ಯ ಈ ಸಂಘಟನೆಗಿತ್ತು. ಬಂಡಾಯಗಾರರು ಗೆರಿಲ್ಲಾ ಯುದ್ಧ ತಂತ್ರವನ್ನು ಬಳಸಿದ್ದರು. ಸ್ವಾಮಿ ಅಪರಂಪಾರ, ಕಲ್ಯಾಣ ಸ್ವಾಮಿ ಹೆಸರಿನೊಂದಿಗೆ ನಿಜ ಹೆಸರೆಂದು ಹುಡುಕಲ್ಪಟ್ಟಿರುವ ಕೇದಾರ ಭಾವ, ಪುಟ್ಟ ಬಸಪ್ಪ, ಮರಿ ಬಸವ, ಬೂದಿ ಬಸವ- ಈ ಹೆಸರುಗಳಲ್ಲಿ ನಿಜವಾದ ವ್ಯಕ್ತಿ ಇಂತಹವರೇ ಎಂದು ಸಂದೇಹಕ್ಕೆ ಆಸ್ಪದವಿಲ್ಲದಂತೆ ಹೇಳಲು ಇಂದಿಗೂ ಸಾಧ್ಯವಾಗಿಲ್ಲ!

ಭಾರತದ ವೈಫಲ್ಯವು ಅದರ ಧರ್ಮ ಮತ್ತು ಜಾತಿಯನ್ನು ಎದುರಾಳಿ ಬಳಸಿಕೊಳ್ಳುವುದರಲ್ಲಿದೆ. ಇಲ್ಲೂ ಅದೇ ಆಯಿತು. ಕೊಡಗು ಗೆಜೆಟಿಯರ್‌ನಲ್ಲಿ, ‘ಕೊಡಗಿನ ಬಂಡಾಯವು ನಿಜವಾಗಿ ಗೌಡರ ಮೇಲ್ಬೀಳುವಿಕೆಯಾಗಿದೆ’ ಎಂದುಜಿ. ರಿಕ್ಟರ್ ಬರೆದಿರುವುದು ಬ್ರಿಟಿಷ್ ಆಡಳಿತವು ಮುಂದೆ ಸೃಷ್ಟಿಸುತ್ತಾ ಹೋದ ಜಾತಿಗಳ ಒಡೆದು ಆಳುವಿಕೆಯ ಸೂಚನೆಯಾಗಿದೆ. ಬಂಡಾಯದ ನಾಯಕತ್ವವು ಗೌಡರದೇ ಆಗಿತ್ತು. ಆದರೆ ಎಲ್ಲ ಸಮುದಾಯದಿಂದಲೂ ಬಂಡಾಯ ನಡೆದಿತ್ತು. ಈ ಒಳಗೊಳ್ಳುವಿಕೆಯನ್ನು ಪ್ರತ್ಯೇಕಿಸುವ ಕೆಲಸ ಮುಂದೆ ನಡೆಯಿತು. ಕೊಡವ ಬೋಪು ದಿವಾನನನ್ನು ಬಳಸಿಕೊಂಡು ಕೊಡವರನ್ನು ಬಂಡಾಯಗಾರರಿಂದ ಪ್ರತ್ಯೇಕಿಸುವ ತಂತ್ರವನ್ನು ಬ್ರಿಟಿಷರು ಅನುಸರಿಸಿದರು. ಆದರೆ ನಿಜವಾಗಿ ಹಾಗಿರಲಿಲ್ಲ. ಬೋಪು ದಿವಾನನ ಸಂಬಂಧಿ ಕೊಡವರು ಬಂಡಾಯಗಾರರೊಂದಿಗಿದ್ದರು. ಕೊಡವ ದಿವಾನ ಚೆಪ್ಪುಡೀರ ಪೊನ್ನಪ್ಪ ಬ್ರಿಟಿಷರೊಂದಿಗಿದ್ದರೆ, ಆತನ ಸ್ವಂತ ತಮ್ಮ ಚೆಪ್ಪುಡೀರ ಅಪ್ಪಯ್ಯ ಬಂಡಾಯಗಾರರೊಂದಿಗಿದ್ದದ್ದು ಇತಿಹಾಸ. ಆದರೆ ಬೋಪು ದಿವಾನನನ್ನು ಕೇಂದ್ರೀಕರಿಸಿ ಬಹುಸಂಖ್ಯೆಯ ಕೊಡವರು ಬಂಡಾಯದೊಂದಿಗಿದ್ದ ಕೊಡವರೊಂದಿಗೆ ಸೇರದಂತೆ ಮಾಡುವಲ್ಲಿ ಬ್ರಿಟಿಷರು ಯಶಸ್ವಿಯಾದರು.

ಗಾಂಧೀಜಿಯ ನಾಯಕತ್ವ ಯಶಸ್ವಿಯಾದದ್ದು ಜಾತಿ, ಧರ್ಮಗಳ ನಿರ್ಬಂಧವನ್ನು ತೊಡೆದುಹಾಕಿ, ಎಲ್ಲರನ್ನೂ ಒಳಗೊಂಡಾಗ ಎಂಬ ಅರಿವು ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದ ವೇದಿಕೆಯಲ್ಲಿ ಗಾಂಧಿ ಕಾಣಿಸಿಕೊಳ್ಳುವ 95 ವರ್ಷಗಳ ಮೊದಲೇ ಆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ಕರ್ನಾಟಕದ ಈ ಬಂಡಾಯವು ಚಾರಿತ್ರಿಕ ಮಾತ್ರವಲ್ಲ, ವರ್ತಮಾನ ಮತ್ತು ಭವಿಷ್ಯಕ್ಕೆ ಸಂದೇಶವೂ ಹೌದು. ಅಂತಲೇ ಜನತಾ ಬಂಡಾಯವಾದ ಇದನ್ನು ಅಭಿಮಾನದಿಂದ ಸ್ಥಳೀಯರು ಸ್ವಾತಂತ್ರ್ಯ ಸಮರ ಎಂದು ಕರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT