ಸೋಮವಾರ, ಡಿಸೆಂಬರ್ 6, 2021
23 °C
ಈ ಸಂದರ್ಭದ ಬೆಳವಣಿಗೆಗಳು ರಾಜಕೀಯ ಪಕ್ಷಗಳ ಆಂತರಿಕ ಆರೋಗ್ಯದ ಸೂಚ್ಯಂಕವೂ ಹೌದು

ಸಂದೀಪ್ ಶಾಸ್ತ್ರಿ ಬರಹ: ಪರಿಷತ್ ಚುನಾವಣೆ- ರಾಜಕೀಯ ಮಹತ್ವ

ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಕರ್ನಾಟಕದಲ್ಲಿ ಸದ್ಯದಲ್ಲೇ ಚುನಾವಣೆಗಳು ನಡೆಯಲಿವೆ. ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಈ ಸದಸ್ಯರು ಚುನಾಯಿತರಾಗುತ್ತಾರೆ. ಇದು ಒಂದು ರೀತಿಯಲ್ಲಿ ಪರೋಕ್ಷ ಚುನಾವಣೆ. ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರಾಗಿರುತ್ತಾರೆ. ಹೀಗಿದ್ದೂ ಸ್ಥಳೀಯ ಮಟ್ಟದಲ್ಲಿನ ಒಲವು ನಿಲುವುಗಳು ಹಾಗೂ ಪಕ್ಷ ನಿಷ್ಠೆಯ ಅಸ್ಥಿರತೆಗಳಿಂದಾಗಿ ಈ ಸಂದರ್ಭದಲ್ಲಿ ಬಹಳಷ್ಟು ಕುತೂಹಲ ಹಾಗೂ ಊಹಾಪೋಹ ಗರಿಗೆದರಿಕೊಳ್ಳುತ್ತವೆ.

ವಿಧಾನ ಪರಿಷತ್ (ವಿಧಾನ ಪರಿಷತ್ತಿಗೆ ಮೇಲ್ಮನೆ- ವಿಧಾನಸಭೆಗೆ ಕೆಳಮನೆ ಎನ್ನಲಾಗುತ್ತದೆ) ಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಕುರಿತಾದ ವಿಚಾರವನ್ನು ಭಾರತದ ಸಂವಿಧಾನವು ರಾಜ್ಯಗಳಿಗೇ ಬಿಟ್ಟುಕೊಟ್ಟಿದೆ. ಸದ್ಯಕ್ಕೆ, ಭಾರತದ 28 ರಾಜ್ಯಗಳ ಪೈಕಿ ಆರು ರಾಜ್ಯಗಳು ವಿಧಾನ ಪರಿಷತ್ ಹೊಂದಿವೆ. ಕರ್ನಾಟಕ ಬಿಟ್ಟರೆ, ವಿಧಾನ ಪರಿಷತ್ ಹೊಂದಿರುವ ಇತರ ರಾಜ್ಯಗಳೆಂದರೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ ಹಾಗೂ ಉತ್ತರಪ್ರದೇಶ. ಆಸಕ್ತಿಯ ಸಂಗತಿ ಎಂದರೆ, ಈಗ ಅಧಿಕಾರದಲ್ಲಿರುವ ಇಬ್ಬರು ಮುಖ್ಯಮಂತ್ರಿಗಳೂ (ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಹಾಗೂ ಬಿಹಾರದ ನಿತೀಶ್ ಕುಮಾರ್) ವಿಧಾನ ಪರಿಷತ್ ಸದಸ್ಯರೇ ಆಗಿದ್ದಾರೆ. ಕರ್ನಾಟಕದಲ್ಲೂ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ನಂತರ ವಿಧಾನ ಪರಿಷತ್ತಿಗೆ ಚುನಾಯಿತಗೊಂಡಿದ್ದರು.

ವಾಸ್ತವವಾಗಿ, 1987ರಲ್ಲಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಬಲವನ್ನು ಏರಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಕೂಡ ಸೇರಿದೆ. ಕರ್ನಾಟಕ ವಿಧಾನ ಪರಿಷತ್‌ ಸಂಖ್ಯಾಬಲ 75.

ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವಂತೆಯೇ, ಅದರ ಪಾತ್ರವನ್ನು ಕುರಿತು ಒಂದಿಷ್ಟು ಸಾವಧಾನವಾಗಿ ಪುನರ್‌ವಿಮರ್ಶಿಸುವುದು ಉಪಯುಕ್ತ. ವಿಧಾನಮಂಡಲದ ಮೇಲ್ಮನೆಗೆ ಸಾಮಾನ್ಯವಾಗಿ ನಿರ್ದಿಷ್ಟ ಪಾತ್ರವಿರುತ್ತದೆ. ಕೆಳಮನೆಯಲ್ಲಿ ಕೈಗೊಂಡ ಶಾಸನಾತ್ಮಕ ಕ್ರಿಯೆಗಳ ಪುನರ್‌ವಿಮರ್ಶೆಗೆ ಈ ‘ಎರಡನೇ’ ಮನೆ ಅವಕಾಶ ಒದಗಿಸುವುದರೊಂದಿಗೇ ‘ಪ್ರಾತಿನಿಧ್ಯ’ಗಳ ಪಾತ್ರವನ್ನೂ ನಿರ್ವಹಿಸುತ್ತದೆ. ಭಾರತದ ಸಂಸತ್‌ನಲ್ಲಿ, ರಾಜ್ಯಸಭೆಯನ್ನು (ಮೇಲ್ಮನೆ), ಹೆಸರೇ ಸೂಚಿಸುವಂತೆ ‘ರಾಜ್ಯಗಳ ಪರಿಷತ್’ ಆಗಿ ಪರಿಭಾವಿಸಲಾಗುತ್ತದೆ. ಭಾರತದ ರಾಜ್ಯಗಳ ಹಿತಾಸಕ್ತಿಗಳನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವಂತಹದ್ದು ಇದು. ಹೀಗಾಗಿ, ರಾಜ್ಯಸಭೆಯ ಬಹಳಷ್ಟು ಸದಸ್ಯರು ರಾಜ್ಯಗಳ ವಿಧಾನಸಭೆಗಳಿಂದ ಚುನಾಯಿತರಾದವರು. ಇದೇ ರೀತಿ, ಕೆಳಮನೆಗಳಲ್ಲಿ ಆತುರದ ಶಾಸನಾತ್ಮಕ ಕ್ರಿಯೆಗಳ ಸಾಧ್ಯತೆಗಳ ಮೇಲೆ ನಿಯಂತ್ರಣ ಇಡಲು ರಾಜ್ಯ ಮಟ್ಟದ ವಿಧಾನ ಪರಿಷತ್‌ಗಳನ್ನು ‘ಎರಡನೇ ಮನೆ’ಗಳಾಗಿ ಪರಿಗಣಿಸಲಾಗುತ್ತದೆ. ನೇರವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಕೆಳಮನೆಗಳಿಗೆ ಚುನಾಯಿತರಾಗಲು ಸಾಧ್ಯವಿಲ್ಲ ದಂತಹ ವರ್ಗಗಳಿಗೆ ಪ್ರಾತಿನಿಧ್ಯ ಒದಗಿಸುವಂತಹ ನೆಲೆಯಾಗಿಯೂ ಇದನ್ನು ಕಾಣಲಾಗುತ್ತದೆ.

73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಯ ನಂತರ, ಒಕ್ಕೂಟ ವ್ಯವಸ್ಥೆಯ ನ್ಯಾಯಬದ್ಧ ಮೂರನೇ ಹಂತವಾಗಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ಸಿಕ್ಕಿದ ನಂತರ, ಸ್ಥಳೀಯ ಸಂಸ್ಥೆಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ರಾಜ್ಯ ಮಟ್ಟದಲ್ಲಿ ವಿಧಾನ ಪರಿಷತ್‌ಗಳು ಪ್ರಮುಖ ವೇದಿಕೆಗಳಾಗುತ್ತವೆ ಎಂದು ಹಲವರು ಭಾವಿಸಿದ್ದರು.

ವಿಧಾನ ಪರಿಷತ್ತಿನ ಸಂರಚನೆಯ ಪ್ರಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ರಾಜ್ಯ ವಿಧಾನಸಭೆಗಳಿಂದ ತಲಾ ಮೂರನೇ ಒಂದರಷ್ಟು ಸದಸ್ಯರನ್ನು ವಿಧಾನ ಪರಿಷತ್ತಿಗೆ ಚುನಾಯಿಸಲಾಗುತ್ತದೆ. ಉಳಿದ ಮೂರನೇ ಒಂದರಷ್ಟು ಸದಸ್ಯರನ್ನು, ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ಚುನಾಯಿಸಲಾಗುತ್ತದೆ; ಇದರ ಜೊತೆಗೇ ವಿವಿಧ ಕ್ಷೇತ್ರಗಳ ಸಾಧಕರನ್ನೂ ವಿಧಾನ ಪರಿಷತ್‌ಗೆ ಸರ್ಕಾರದಿಂದ ನಾಮಕರಣ ಮಾಡಲಾಗುತ್ತದೆ. ಈಗ ರಾಜ್ಯವು ಸದ್ಯದಲ್ಲೇ ಎದುರುಗೊಳ್ಳುತ್ತಿರುವುದು, ಈ ಸ್ಥಳೀಯ ಸಂಸ್ಥೆಗಳಿಂದ ಮೂರನೇ ಒಂದರಷ್ಟು ಸದಸ್ಯರಿಗಾಗಿ (25) ನಡೆಯುತ್ತಿರುವ ಚುನಾವಣೆಗಳು.

ವಿಧಾನ ಪರಿಷತ್ತಿಗೆ ಚುನಾಯಿತರಾಗುವವರ ಸಂಕ್ಷಿಪ್ತ ವ್ಯಕ್ತಿಚಿತ್ರಗಳು ಸಾಮಾನ್ಯವಾಗಿ ಏನಾಗಿರುತ್ತವೆ ಹಾಗೂ ಹೇಗಿರುತ್ತವೆ? ಹೆಚ್ಚಿನ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳ ಮುಖಂಡರು ಈ ವಿಧಾನ ಪರಿಷತ್ ಸದಸ್ಯತ್ವ ಎಂಬುದನ್ನು, ಪಕ್ಷದ ನಿಷ್ಠರನ್ನು ಗುರುತಿಸಲು ಮತ್ತು ವಿಧಾನಸಭೆಯ ನೇರ ಚುನಾವಣೆಯಲ್ಲಿ ಸೋತವರು ಅಥವಾ ಪಕ್ಷದ ನಾಯಕರಿಗೆ ಹತ್ತಿರವಾಗಿರುವವರಿಗೆ ಅವಕಾಶಗಳನ್ನು ಕಲ್ಪಿಸುವಂತಹ ಮಾರ್ಗವನ್ನಾಗಿ ಪರಿಭಾವಿಸಿಕೊಂಡು ಬಂದಿದ್ದಾರೆ. ಆದರ್ಶದ ನೆಲೆಯಲ್ಲಿ ಹೇಳಬೇಕೆಂದರೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗುವ ಸದಸ್ಯರು, ಈ ಹಿಂದೆ ಚುನಾಯಿತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದವರಾಗಿದ್ದು ಆ ಅನುಭವಗಳನ್ನು ರಾಜ್ಯ ವಿಧಾನ ಮಂಡಲದ ಮೇಲ್ಮನೆಗೆ ತರಬೇಕು. ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ಕರ್ನಾಟಕ ವಿಧಾನ ಪರಿಷತ್ ಸದಸ್ಯರ ಸಂಕ್ಷಿಪ್ತ ವ್ಯಕ್ತಿವಿವರಗಳನ್ನು ಪರಿಶೀಲಿಸಿದಲ್ಲಿ, ಸ್ಥಳೀಯ ಸಂಸ್ಥೆಗಳ ಅನೇಕ ಮಾಜಿ ‘ಅಧ್ಯಕ್ಷರು’ ಅಥವಾ ‘ಉಪಾಧ್ಯಕ್ಷ’ರನ್ನು ಅವರ ಕೊಡುಗೆಗಳಿಗಾಗಿ ಅವರುಗಳ ಪಕ್ಷಗಳು ಗುರುತಿಸಿ ರಾಜ್ಯ ವಿಧಾನ ಪರಿಷತ್‌ಗೆ ಕರೆ ತಂದಿರುವುದು ಗೋಚರವಾಗುತ್ತದೆ. ಇಂತಹ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಎಂಬಂಥ ಆದರ್ಶ ಮೆರೆಯಲಿ ಎಂಬುದು ಎಲ್ಲರ ನಿರೀಕ್ಷೆ.

ಚುನಾವಣೆಗೆ ಸ್ಪರ್ಧಿಸಲು ತಾವು ಆಯ್ಕೆ ಮಾಡುವ ಅಭ್ಯರ್ಥಿಗಳು ಸ್ಥಳೀಯ ಮಟ್ಟದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆಯೇ ಈ ದಿಸೆಯಲ್ಲಿ ಏನಾದರೂ ಕೊಡುಗೆ ಸಲ್ಲಿಸಿದ್ದಾರೆಯೇ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತರಾಗಿ ಸೇವೆ ಸಲ್ಲಿಸಿದ್ದಾರೆಯೇ ಎಂಬುದರ ಬಗ್ಗೆ ರಾಜಕೀಯ ಪಕ್ಷಗಳು ಆಂತರಿಕ ಚರ್ಚೆಗಳನ್ನು ನಡೆಸುವುದು ಒಳಿತು. ಅನೇಕ ಸಲ, ರಾಜಕೀಯ ಪಕ್ಷಗಳು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಥವಾ ರಾಜಕಾರಣದಲ್ಲಿ ಅಂತಹ ಕೊಡುಗೆ ಅಥವಾ ಸೇವೆ ಸಲ್ಲಿಸಿದ ಯಾವುದೇ ಹಿನ್ನೆಲೆಯೂ ಇಲ್ಲದಿರುವುದು ವ್ಯಕ್ತವಾಗಿದೆ. ಆಗ, ಸ್ಥಳೀಯ ಪ್ರಾಧಿಕಾರಗಳಲ್ಲಿ ಚುನಾಯಿತರಾಗಿ ಸೇವೆ ಸಲ್ಲಿಸಿದವರಿಗೆ ಪ್ರಾತಿನಿಧ್ಯ ಒದಗಿಸಬೇಕೆನ್ನುವ ಮೂಲ ಉದ್ದೇಶವೇ ವಿಫಲವಾಗುತ್ತದೆ.

ಈ ಚುನಾವಣೆಗಳು ಗಮನ ಸೆಳೆದುಕೊಳ್ಳುವುದಕ್ಕೆ ಮತ್ತೊಂದು ಕಾರಣ ಎಂದರೆ, ರಾಜಕೀಯ ಪಕ್ಷಗಳ ಮೈತ್ರಿಗಳ ಸ್ವರೂಪ ಹಾಗೂ ಸ್ಥಳೀಯ ರಾಜಕೀಯಗಳು ಬಹಿರಂಗಗೊಳ್ಳುವ ಬಗೆಗಳು. ಸ್ಥಳೀಯ ಮಟ್ಟದಲ್ಲಿ ಇಂತಹ ಮೈತ್ರಿಗಳಿಗಿರುವ ಅಸ್ಥಿರತೆಗಳನ್ನು ಗಮನಿಸಿದಲ್ಲಿ ಒಂದು ಜಿಲ್ಲೆಯಲ್ಲಿ ಪಕ್ಷಗಳ ಮಧ್ಯೆ ಏರ್ಪಡುವ ಅನಿರೀಕ್ಷಿತ ಮೈತ್ರಿಯು ಪಕ್ಕದ ಮತ್ತೊಂದು ಜಿಲ್ಲೆಯಲ್ಲೇ ತದ್ವಿರುದ್ಧವಾದದ್ದಾಗಿರುವಂತಹ ನಿದರ್ಶನಗಳನ್ನೂ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಕಾಣಲಾಗಿದೆ. ರಾಜಕೀಯ ಪಕ್ಷಗಳ ಒಳಗೇ ಇರುವ ಬಣ ಸಂಘರ್ಷಗಳೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಈ ಚುನಾವಣೆ ಸಂದರ್ಭಗಳಲ್ಲಿ ಸ್ಫೋಟಗೊಳ್ಳುತ್ತವೆ.

ಈ ಎಲ್ಲಾ ರಾಜಕೀಯ ತಂತ್ರಗಾರಿಕೆಗಳು, ಕುತಂತ್ರಗಳು ಬರಲಿರುವ ದಿನಗಳಲ್ಲಿ ಅನಾವರಣ ಗೊಳ್ಳಲಿವೆ. ಇವು ಸ್ಥಳೀಯ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಆಂತರಿಕ ಆರೋಗ್ಯದ ಸೂಚ್ಯಂಕಗಳೂ ಆಗುತ್ತವೆ. ಅಲ್ಲದೆ, ಸ್ಥಳೀಯ ಮೈತ್ರಿಗಳಿಗೆ ‘ಅವಕಾಶಗಳ ವಿಶ್ವ’ವೂ ಆಗಲಿವೆ. ಈ ಮೈತ್ರಿಗಳ ಹಿಂದಿರುವ ರಾಜಕಾರಣ ಹಾಗೂ ಸಮಾಜಶಾಸ್ತ್ರೀಯ ನೆಲೆಗಳು ಆಸಕ್ತಿದಾಯಕ ಹಾಗೂ ಬಹಳಷ್ಟು ಸಂಗತಿಗಳನ್ನು ಅನಾವರಣಗೊಳಿಸುವಂತಹವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು