ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹ್ಸೆನ್ ಹತ್ಯೆ: ಪ್ರಾಂತೀಯ ಪಾರಮ್ಯ

ಎಲ್ಲ ದೇಶಗಳಿಗೂ ಪರಮಾಣು ವಿಜ್ಞಾನಿಗಳೇ ತಮ್ಮ ಬತ್ತಳಿಕೆಯ ಪ್ರಬಲ ಅಸ್ತ್ರ!
Last Updated 2 ಡಿಸೆಂಬರ್ 2020, 21:45 IST
ಅಕ್ಷರ ಗಾತ್ರ

ಇರಾನ್ ಪಾಲಿಗೆ ಇದು ಈ ವರ್ಷದ ಎರಡನೆಯ ದೊಡ್ಡ ಹೊಡೆತ. ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಾಂತೀಯ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಉನ್ನತ ಸ್ತರದ ವ್ಯಕ್ತಿಗಳನ್ನು ಅದು ಈ ವರ್ಷ ಕಳೆದುಕೊಂಡಿತು. ಜನವರಿ 3ರಂದು ಇರಾನಿನ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಯಾಯಿತು. ಇದೀಗ ಇರಾನಿನ ಬಹುಮುಖ್ಯ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಹತ್ಯೆ ನಡೆದಿದೆ.

ಸುಲೇಮಾನಿಯನ್ನು ಕೊಂದದ್ದು ಅಮೆರಿಕ ಎಂಬುದು ಸ್ಪಷ್ಟವಾಗಿ ಜಾಹೀರಾಗಿತ್ತು. ಸ್ವತಃ ಡೊನಾಲ್ಡ್‌ ಟ್ರಂಪ್ ತಮ್ಮ ಹೆಗಲು ತಟ್ಟಿಕೊಂಡಿದ್ದರು. ಆದರೆ ಮೊಹ್ಸೆನ್ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬ ಕುರಿತು ಊಹೆಗಳಷ್ಟೇ ಕೇಳಿಬರುತ್ತಿವೆ. ಇದು ಅಮೆರಿಕದ ಬೆಂಬಲದೊಂದಿಗೆ ಇಸ್ರೇಲಿನ ಕೃತ್ಯ ಎಂದು ಇರಾನ್ ಸರ್ಕಾರ ಆರೋಪಿಸಿದೆ. ಜನ ಬೀದಿಗಿಳಿದು ಟ್ರಂಪ್ ಮತ್ತು ಜೋ ಬೈಡನ್ ಅವರ ಚಿತ್ರಗಳನ್ನು ಒಟ್ಟಿಗೆ ಸುಟ್ಟು ಪ್ರತಿಭಟಿಸುತ್ತಿದ್ದಾರೆ.

ಈ ಹಿಂದೆ 2012ರ ಜನವರಿಯಲ್ಲಿ ಪರಮಾಣು ವಿಜ್ಞಾನಿಯೊಬ್ಬರ ಹತ್ಯೆ ನಡೆದಾಗ ‘ನೀವು ಯುದ್ಧ ಆರಂಭಿಸಿದ್ದೀರಿ, ನಾವು ಅಂತ್ಯಗೊಳಿಸುತ್ತೇವೆ’ ಎಂದು ಖುದ್ಸ್ ಪಡೆಯ ಮುಖ್ಯಸ್ಥ ಸುಲೇಮಾನಿ ಅಬ್ಬರಿಸಿದ್ದ. ಅಸಾಂಪ್ರದಾಯಿಕ ಯುದ್ಧ ಮತ್ತು ಮಿಲಿಟರಿ ಬೇಹುಗಾರಿಕೆ
ಯಲ್ಲಿ ನೈಪುಣ್ಯ ಹೊಂದಿರುವ ಖುದ್ಸ್ ಪಡೆ, ಜಗತ್ತಿನ ನಾನಾ ಭಾಗಗಳಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ನಂತರ ಅದು, ಮಧ್ಯಪ್ರಾಚ್ಯದಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಸೇನೆಯ ಮೇಲೆ ದಾಳಿ ಮಾಡಿತು. ಆಗ ಸುಲೇಮಾನಿ ಮೇಲೆ ಅಮೆರಿಕ ಕಣ್ಣಿಟ್ಟಿತು. ಈ ವರ್ಷದ ಆರಂಭದಲ್ಲಿ ಆತನ ಹತ್ಯೆ ನಡೆಯಿತು.

ಇದೀಗ ಮೊಹ್ಸೆನ್ ಹತ್ಯೆಯ ವಿಷಯದಲ್ಲಿ ಇಸ್ರೇಲ್ ಮತ್ತು ಅಮೆರಿಕದತ್ತ ಇರಾನ್ ಬೊಟ್ಟು ಮಾಡುತ್ತಿರುವುದಕ್ಕೂ ಕಾರಣವಿದೆ. ಹಿಂದಿನಿಂದಲೂ ಇರಾನ್ ಅಣ್ವಸ್ತ್ರಮೋಹಿ ರಾಷ್ಟ್ರ. ಪ್ರಾಂತೀಯವಾಗಿ ಹಿಡಿತ ಸಾಧಿಸಲು ಅಣ್ವಸ್ತ್ರ ಇರಲೇಬೇಕು ಎಂದು ಅದು ಬಲವಾಗಿ ನಂಬಿದೆ. ವಿಶ್ವಸಂಸ್ಥೆ ಎಚ್ಚರಿಕೆ ಕೊಟ್ಟರೂ ತನ್ನ ಚಟುವಟಿಕೆಗಳನ್ನು ಇರಾನ್ ಮುಂದುವರಿಸಿದಾಗ, ಅಮೆರಿಕ ಸೇರಿದಂತೆ ಇತರ ಸಮಾನಮನಸ್ಕ ರಾಷ್ಟ್ರಗಳು ಇರಾನ್ ಮೇಲೆ ದಿಗ್ಬಂಧನ ಹೇರಿದ್ದವು. ಇದರಿಂದಾಗಿ ಇರಾನ್ ಆರ್ಥಿಕತೆ ಕುಸಿದುಬಿತ್ತು. ಆದರೂ ಇರಾನ್ ಅಣ್ವಸ್ತ್ರದ ಉಮೇದು ಬಿಡಲಿಲ್ಲ. ಆಗ ಅಮೆರಿಕ ದಾಳಿ ಮಾಡುವ ಬೆದರಿಕೆ ಹಾಕಿತು. ಬೆದರಿದ ಇರಾನ್ ‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ’ಕ್ಕೆ ತಾನು ಬದ್ಧ ಎಂದು ಘೋಷಿಸಿ ಒಳಗೊಳಗೇ ಅಣ್ವಸ್ತ್ರ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಿತು.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇರಾನ್ ಅಣು ಒಪ್ಪಂದದಿಂದ ಹಿಂದೆ ಸರಿಯುವ ಮಾತನ್ನು ಟ್ರಂಪ್ ಆಡಿದಾಗ, ಅಮೆರಿಕದಲ್ಲಿರುವ
ಯಹೂದಿ ಉದ್ಯಮಿಗಳು, ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಟ್ರಂಪ್ ಬೆಂಬಲಕ್ಕೆ ನಿಂತಿದ್ದವು. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುವ ಎರಡು ಪ್ರಮುಖ ರಾಷ್ಟ್ರಗಳೆಂದರೆ ಇಸ್ರೇಲ್ ಮತ್ತು ಸೌದಿ ಅರೇಬಿಯಾ. ಈ ಎರಡಕ್ಕೂ ಇರಾನ್ ಜೊತೆಗಿನ ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದು ಬೇಕಿತ್ತು. ಸುನ್ನಿ ಮುಸ್ಲಿಮರ ಪ್ರಾಬಲ್ಯವಿರುವ ಸೌದಿ ಮತ್ತು ಶಿಯಾ ಮುಸ್ಲಿಮರ ಇರಾನ್ ವೈರತ್ವ ಎಷ್ಟಿದೆಯೆಂದರೆ, ಸೌದಿ ಯುವರಾಜ ಮೊಹಮದ್ ಬಿನ್ ಸಲ್ಮಾನ್, ಇರಾನ್ ಪ್ರಭಾವಿ ನಾಯಕ ಅಯತೊಲ್ಲಾಹ್‌ ಖೊಮೇನಿಯನ್ನು ‘ದಿ ನ್ಯೂ ಹಿಟ್ಲರ್’ ಎಂದು ಕರೆದಿದ್ದರು.

ಇರಾನ್ ಮತ್ತು ಇಸ್ರೇಲ್ ವೈರತ್ವದ ಬಗ್ಗೆ ಹೇಳುವುದೇ ಬೇಡ. ಇಂದಿಗೂ ಇರಾನಿನ ಕ್ರೀಡಾಪಟುಗಳು ಇಸ್ರೇಲಿಗರ ಜೊತೆ ಸೆಣಸುವುದನ್ನು ನಿಷೇಧಿಸಲಾಗಿದೆ. ಇತ್ತ ಅಮೆರಿಕ– ಇರಾನ್ ನಡುವಿನ ಸಂಬಂಧವೂ ಬಹಳಷ್ಟು ಏರಿಳಿತ ಕಂಡಿದೆ. ಬರಾಕ್‌ ಒಬಾಮ ಅವಧಿಯಲ್ಲಿ ಇರಾನ್– ಅಮೆರಿಕದ ಸಂಬಂಧ ಒಂದು ಸಮಸ್ಥಿತಿಗೆ ಬಂತು ಖರೆ. ಆದರೆ ಟ್ರಂಪ್ ಅಧ್ಯಕ್ಷರಾದ ತರುವಾಯ ಆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ಪರಮಾಣು ಒಪ್ಪಂದ ರದ್ದಾಯಿತು.

ಈ ವರ್ಷ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಬೈಡನ್ ಅವರು ಇರಾನ್ ಜೊತೆಗಿನ ಪರ ಮಾಣು ಒಪ್ಪಂದವನ್ನು ಪುನರ್ ಪರಿಶೀಲಿಸಲಾಗುವುದು ಎಂದಿದ್ದರು. ಬೈಡನ್ ಸಂಭಾವ್ಯ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ‘ಇರಾನ್ ಜೊತೆಗಿನ ಅಣ್ವಸ್ತ್ರ ಒಪ್ಪಂದಕ್ಕೆ ಮರುಜೀವ ನೀಡಬಾರದು’ ಎಂಬ ಹೇಳಿಕೆಯನ್ನು ನೆತನ್ಯಾಹು ನೀಡಿದರು. ಹಾಗಾಗಿ, ಅಂತಹದ್ದೊಂದು ಪ್ರಯತ್ನಕ್ಕೆ ಆರಂಭದಲ್ಲೇ ತಡೆಯೊಡ್ಡಲು ಮೊಹ್ಸೆನ್ ಹತ್ಯೆ ನಡೆಯಿತೇ ಎಂಬ ಕುರಿತು ಚರ್ಚೆಯಾಗುತ್ತಿದೆ.

ಒಂದೊಮ್ಮೆ ಇರಾನ್ ಪ್ರತಿದಾಳಿಯ ಮೂಲಕ ಸೇಡು ತೀರಿಸಿಕೊಳ್ಳಲು ಹೊರಟರೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧೋನ್ಮಾದ ಕಂಡುಬರಬಹುದೇ? ನೇರ ಯುದ್ಧ ನಡೆಯದಿದ್ದರೂ ಗಾಜಾ ಪಟ್ಟಿ, ಲೆಬನಾನ್ ಮತ್ತು ಸಿರಿಯಾ ಮೂಲಕ ಉಗ್ರದಾಳಿಗಳು ಹೆಚ್ಚಾಗಬಹುದೇ ಎಂಬ ಆತಂಕ ಮಧ್ಯಪ್ರಾಚ್ಯದ ಜನರಲ್ಲಿದೆ. ಬೈಡನ್ ಅಧಿಕಾರಕ್ಕೆ ಬರುವವರೆಗೆ ಇರಾನ್ ಸಂಯಮದಿಂದ ಕಾಯದೇ ಅದಕ್ಕೆ ಬೇರೆ ದಾರಿಯಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಹಾಗಂತ ಇರಾನಿನಲ್ಲಿ ವಿಜ್ಞಾನಿಗಳ ಹತ್ಯೆ ನಡೆಯುತ್ತಿರುವುದು ಇದೇ ಮೊದಲಲ್ಲ. 2007ರಲ್ಲಿ ಒಬ್ಬ ವಿಜ್ಞಾನಿಗೆ ವಿಷ ಉಣಿಸಿ ಕೊಲ್ಲಲಾಗಿತ್ತು. 2010 ಮತ್ತು 2012ರ ನಡುವೆ ಇರಾನಿನ ನಾಲ್ವರು ಪರಮಾಣು ವಿಜ್ಞಾನಿಗಳ ಹತ್ಯೆ ನಡೆದಿತ್ತು. ಆಗ ಇಸ್ರೇಲ್ ತನ್ನ ಪಾತ್ರದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಇಸ್ರೇಲಿನ ರಕ್ಷಣಾ ಮಂತ್ರಿ ‘ಇರಾನ್ ಅಣ್ವಸ್ತ್ರ ಹೊಂದುವುದನ್ನು ತಪ್ಪಿಸಲು ಎಲ್ಲ ಮಾರ್ಗಗಳನ್ನೂ ಇಸ್ರೇಲ್ ಬಳಸಲಿದೆ’ ಎಂಬ ಹೇಳಿಕೆ ನೀಡಿದ್ದರು. ನಂತರ ಅಮೆರಿಕದ ಸುದ್ದಿ ಸಂಸ್ಥೆ ಎನ್‌ಬಿಸಿ, ಇರಾನಿನ ಪರಮಾಣು ವಿಜ್ಞಾನಿಗಳ ಹತ್ಯೆಗಾಗಿ ‘ಪೀಪಲ್ಸ್ ಮುಜಾಹಿದೀನ್ ಆಫ್ ಇರಾನ್’ ಎಂಬ ಉಗ್ರ ಸಂಘಟನೆಗೆ ಇಸ್ರೇಲ್ ಆರ್ಥಿಕ ಸಹಾಯ ಇತ್ತು, ತರಬೇತಿ ನೀಡಿ, ಶಸ್ತ್ರಾಸ್ತ್ರ ಒದಗಿಸಿದೆ ಎಂಬ ಸುದ್ದಿ ಪ್ರಕಟಿಸಿತ್ತು. ಇಸ್ರೇಲ್ ಮುಂದಿನ ಗುರಿ ಮೊಹ್ಸೆನ್ ಎಂಬುದು ಇರಾನ್‌ಗೆ ತಿಳಿದಿತ್ತು. ಅವರಿಗೆ ಸೂಕ್ತ ಭದ್ರತೆಯನ್ನೂ ಒದಗಿಸಿತ್ತು. ಒಂದು ರೀತಿಯಲ್ಲಿ ಗುಪ್ತವಾಗಿಯೇ ಅವರು ಕಾರ್ಯನಿರ್ವಹಿಸುತ್ತಿದ್ದರು. ಆದರೂ ಇದೀಗ ಹತ್ಯೆ ನಡೆದಿದೆ.

ಮಧ್ಯಪ್ರಾಚ್ಯದ ರಾಜಕೀಯ ಮೇಲಾಟದಲ್ಲಿ ಇರಾನಿಗೆ ಅಣ್ವಸ್ತ್ರ ಹೊಂದುವ ತವಕ, ಇಸ್ರೇಲಿಗೆ ಅದನ್ನು ಹೇಗಾದರೂ ತಡೆಯಬೇಕೆಂಬ ಉನ್ಮಾದ ಮತ್ತು ಅಮೆರಿಕದ ಬೆಂಬಲ ಇರುವತನಕ ಈ ಬಗೆಯ ಹತ್ಯೆಗಳು ನಿಲ್ಲಲಾರವು.

ಹಾಗಂತ ಇಂತಹ ಅಸ್ವಾಭಾವಿಕ ಸಾವುಗಳು ಬೇರೆಡೆ ನಡೆದಿಲ್ಲ ಎಂದಲ್ಲ. ಅಮೆರಿಕ– ರಷ್ಯಾ ನಡುವಿನ ಶೀತಲ ಸಮರದ ಅಧ್ಯಾಯದಲ್ಲಿ ಹಲವು ಉಲ್ಲೇಖಗಳು ಸಿಗುತ್ತವೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸ್ವೀಡನ್ ಮೂಲದ ಡ್ಯಾಗ್ ಹಾಮರ್ಶೋಲ್ಡ್ ಸಾವು ಕೂಡ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಭಾರತದಲ್ಲಿ ಅಣ್ವಸ್ತ್ರ ಯೋಜನೆಗಳಿಗೆ ಶ್ರೀಕಾರ ಹಾಕಿದ ಹೋಮಿ ಜೆ. ಭಾಭಾ ಅವರ ಸಾವಿನ ಕುರಿತ ಪಿತೂರಿ ಕತೆಗಳು ಇಂದಿಗೂ ಇವೆ. ಭಾರತದಲ್ಲಿ 2009 ಮತ್ತು 2013ರ ಅವಧಿಯಲ್ಲಿ 11 ಪರಮಾಣು ವಿಜ್ಞಾನಿಗಳು ಮತ್ತು ತಂತ್ರಜ್ಞರು ಅಸ್ವಾಭಾವಿಕ ಸಾವಿಗೆ ಈಡಾಗಿದ್ದಾರೆ ಎಂಬ ಮಾಹಿತಿ ಈ ಹಿಂದೆ ಆರ್‌ಟಿಐ ಮೂಲಕ ಜಾಹೀರಾದಾಗ ಒಂದಷ್ಟು ಗುಸುಗುಸು ಕೇಳಿಬಂದಿತ್ತು.

ಬಿಡಿ, ಎರಡನೇ ಮಹಾಸಮರದ ಬಳಿಕ ಎಲ್ಲ ದೇಶಗಳೂ ಪರಮಾಣು ವಿಜ್ಞಾನಿಗಳನ್ನು ತಮ್ಮ ಬತ್ತಳಿಕೆಯ ಪ್ರಬಲ ಅಸ್ತ್ರವನ್ನಾಗಿ ನೋಡುತ್ತಾ ಬಂದಿವೆ. ಇನ್ನೊಂದು ದೇಶದ ಬತ್ತಳಿಕೆಯನ್ನು ಬರಿದು ಮಾಡಲು ತಂತ್ರ ಹೆಣೆದಿವೆ. ವಿಜ್ಞಾನಿಗಳ ಅಸ್ವಾಭಾವಿಕ ಸಾವಿನ ಕುರಿತ ಮಾಹಿತಿ ಗೋಪ್ಯ ಲಕೋಟೆಗಳಲ್ಲಿ ಅಡಗಿ ಕುಳಿತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT