ಶುಕ್ರವಾರ, ಆಗಸ್ಟ್ 12, 2022
28 °C

PV Web Exclusive: ಅರಿವು ಮತ್ತು ಇರವು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಏನನ್ನು ಬರೆಯುವುದು? ಏಕೆ ಬರೆಯಬೇಕು? – ಈ ಎರಡು ಪ್ರಶ್ನೆಗಳಲ್ಲಿ ಮೊದಲ ಪ್ರಶ್ನೆ ಯಾವುದಿರಬೇಕು ಎನ್ನುವುದೇ ನನ್ನ ಪಾಲಿಗೆ ಇನ್ನೂ ತೀರ್ಮಾನವಾಗಿಲ್ಲ; ಇನ್ನು ಉತ್ತರವನ್ನು ಹೇಗೆ ಕಂಡುಕೊಳ್ಳುವುದು?

ಈ ಪ್ರಶ್ನೆಗಳೇನೂ ಅಕಾರಣದಿಂದ ಹುಟ್ಟಿಕೊಂಡದ್ದಲ್ಲ. ಬರವಣಿಗೆ ಎನ್ನುವುದು ಧ್ಯಾನಸ್ಥ ಮನಸ್ಸಿನ ಬೌದ್ಧಿಕ ವಿಹಾರ; ವೈಚಾರಿಕ ಸಲ್ಲಾಪ. ಇಲ್ಲಿ ಧ್ಯಾನವೂ ಇದೆ, ವಿಹಾರವೂ ಇದೆ. ಇನ್ನೊಂದು ಅರ್ಥದಲ್ಲಿ ಯೋಗವೂ ಇದೆ, ಭೋಗವೂ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ಅವಸ್ಥೆಗಳಲ್ಲಿ ಯಾವುದರಲ್ಲೂ ತೊಡಗದಂಥ ವಿಮುಖತೆಯಲ್ಲಿ ಮನಸ್ಸು ತೊಳಲಾಡುತ್ತಿದೆ. ಧ್ಯಾನಕ್ಕೆ ಏಕಾಂತ ಬೇಕು, ವಿಹಾರಕ್ಕೆ ವಿರಾಮ ಬೇಕು. ಈಗ ಎರಡೂ ಇದೆ, ಏಕಾಂತವೂ ವಿರಾಮವೂ. ಆದರೆ ಧ್ಯಾನವೂ ಆಗುತ್ತಿಲ್ಲ, ವಿಹಾರವೂ ನಡೆಯುತ್ತಿಲ್ಲ. ಹೀಗೇಕೆ?

ಆದರೆ ಸದ್ಯದ ಸಂದರ್ಭವನ್ನು ಅವಲೋಕಿಸಿದರೆ ಅವಗತವಾಗುವ ವಾಸ್ತವ ಎಂದರೆ ನಾವು ಈಗ ಸಿಕ್ಕಿದೆ ಎಂದು ಭಾವಿಸುತ್ತಿರುವ ಏಕಾಂತ, ಅದು ಏಕಾಂತವಲ್ಲ, ಒಂಟಿತನ; ವಿರಾಮ, ಅದು ವಿರಾಮ ಅಲ್ಲ, ನಿಷ್ಕ್ರಿಯತೆ. ಹೌದು, ಕೆಲವರಿಗೆ ಈ ವ್ಯತ್ಯಾಸವೇನೋ ತೋರಿಕೊಂಡಿಲ್ಲ; ಬಹುಶಃ ಸದ್ಯಕ್ಕೆ ಅದು ತಿಳಿಯದಿರಬಹುದು, ಅಥವಾ ವ್ಯತ್ಯಾಸವನ್ನು ಗುರುತಿಸುವಂಥ ಸೂಕ್ಷ್ಮತೆಯನ್ನೂ ಈ ಪರಿಸ್ಥಿತಿಯೇ ಅಳಿಸಿಹಾಕಿರಬಹುದು. ಆದುದರಿಂದಲೇ ಎನಿಸುತ್ತದೆ, ಹಲವರು ಸದ್ಯದ ಒಂಟಿತನ ಅವರ ಬರಹವನ್ನು ಮುಗಿಸುವುದಕ್ಕೋ, ಹೊಸರುಚಿಯನ್ನು ಕಲಿಯುವುದಕ್ಕೋ, ವಿಶ್ರಾಂತಿಯನ್ನು ಪಡೆಯುವುದಕ್ಕೋ ಸಿಕ್ಕ ಸದವಕಾಶ ಎಂದೇ ಸ್ವೀಕರಿಸುತ್ತಿರುವುದು.

ಇಡಿಯ ಜಗತ್ತಿನೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸಬಲ್ಲ ಅಂತರ್ಜಾಲದ ವ್ಯವಸ್ಥೆ ಇದೆ; ಫೆಸ್‌ಬುಕ್‌–ಟ್ವಿಟರ್‌ಗಳಿಗೆ ನಾವು ಎಷ್ಟು ಸಮಯ ಕೊಟ್ಟರೂ ಸಾಲದು ಎನ್ನುವಷ್ಟು ನಮ್ಮನ್ನು ತೊಡಗಿಸಿಕೊಂಡಿದ್ದೇವೆ; ಸಕ್ರಿಯರಾಗಿದ್ದೇವೆ. ಹೀಗಿರುವಾಗ ಎಲ್ಲಿಯ ಒಂಟಿತನ? ಎಲ್ಲಿಯ ನಿಷ್ಕ್ರಿಯತೆ? ಹಲವರು ಕೇಳಬಹುದು!

ಈಗ ಮನೆಯಲ್ಲೋ ಇರುವ ನಮ್ಮ ಬಂಧುಗಳೊಂದಿಗೇ ಹೊಂದಾಣಿಕೆ ಸಾಧ್ಯವಿಲ್ಲ ಎಂಬಂಥ ದೂರಬುದ್ಧಿಯನ್ನೂ ಮನಸ್ಸಿನಲ್ಲಿ ಬೆಳೆಸಿಕೊಂಡಿದ್ದೇವೆ. ಅಡುಗೆಯನ್ನು ಮಾಡುವುದನ್ನೋ ಕಸಗುಡಿಸುವುದನ್ನೋ – ಇಂಥ ಕೆಲಸಗಳನ್ನು ನಾವು ಮಾಡಬೇಕಾಗಿ ಬಂದದ್ದು ಎಂಥ ದುರುಂತ ಎಂದು ದೂರುವ ಬುದ್ಧಿಯನ್ನೂ ತಲೆಯಲ್ಲಿ ತುಂಬಿಕೊಂಡಿದ್ದೇವೆ. ಹಾಗಾದರೆ ಈಗ ಜಗತ್ತಿನ ಜೊತೆಗೆ ನಾವು ಸಾಧಿಸಿರುವ ಸಂಪರ್ಕಕ್ಕೆ ಏನು ಬೆಲೆ? ನಮ್ಮ ಸಕ್ರಿಯತೆಗೆ ಏನು ಅರ್ಥ?

ನಾವು ಈಗ ತಿಳಿದುಕೊಂಡಿರುವ ಹಲವು ಸಂಗತಿಗಳು ನಾವು ತಿಳಿದುಕೊಂಡಿರುವುದಕ್ಕಿಂತಲೂ ಬೇರೆಯೇ ಸ್ವರೂಪದಲ್ಲಿವೆ; ಎಂದರೆ ವಾಸ್ತವಕ್ಕಿಂತಲೂ ಭಿನ್ನ ರೀತಿಯಲ್ಲಿವೆ; ತಪ್ಪಾಗಿ ತಿಳಿದುಕೊಂಡು, ನಾವು ತಿಳಿದುಕೊಂಡಿರುವುದನ್ನೇ ಸರಿಯಾಗಿದೆ ಎಂದುಕೊಂಡಿದ್ದೇವೆ; ಆತ್ಮವಂಚನೆಯಲ್ಲಿಯೇ ಸಂಭ್ರಮವನ್ನು ಪಡುತ್ತಿದ್ದೇವೆ.

ನಮ್ಮ ಕಾಲವನ್ನು ನಾವು  ಬೌದ್ಧಿಕವಾಗಿ ಅತ್ಯಂತ ಮುಂದುವರಿದ ಕಾಲ, ವಿಜ್ಞಾನಯುಗ, ನಾಗರಿಕತೆಯ ಉಚ್ಛ್ರಾಯಕಾಲ – ಎಂದೆಲ್ಲ ಕರೆದುಕೊಳ್ಳುತ್ತಿದ್ದೇವೆ. ಇದು ದಿಟವೆ? ನಮ್ಮ ಸದ್ಯದ ಸಂದರ್ಭವನ್ನು ಅವಲೋಕಿಸಿದಾಗ ನಮ್ಮ ಆತ್ಮವಂಚನೆ ನಮ್ಮ ಎದುರಿಗೇ ಪ್ರತ್ಯಕ್ಷವಾಗುತ್ತದೆ!

ನಮಗಿಂತಲೂ ಹಿಂದಿನವರನ್ನು, ಹಿಂದಿನ ಕಾಲದವರನ್ನು ನಾವು ’ಕರುಣೆ‘ಯಿಂದ ವಿಶ್ಲೇಷಿಸುತ್ತೇವೆ. ಪಾಪ! ಅವರಿಗೆ ನಮಗೆ ಇರುವಷ್ಟು ತಿಳಿವಳಿಕೆ ಇರಲಿಲ್ಲ ಎಂದು ಕನಿಕರದಿಂದ ಅವರ ತಪ್ಪುಗಳನ್ನು ವ್ಯಾಖ್ಯಾನಿಸುತ್ತೇವೆ. ಅವರಿಗೆ ವಿಜ್ಞಾನದ ಜ್ಞಾನ ನಮಗೆ ಒದಗಿದಂತೆ ಒದಗಿರಲಿಲ್ಲ ಎಂದು ಅವರ ಅಜ್ಞಾನ ಬಗ್ಗೆ ಕುಹಕವಾಡುತ್ತೇವೆ. ಹೌದು, ಅಂದಿನವರಲ್ಲಿ ಈ ಎಲ್ಲ ದೋಷಗಳು ಇದ್ದದ್ದು ದಿಟವೇ! ಆದರೆ ವಿಜ್ಞಾನಯುಗದಲ್ಲಿ ಅತ್ಯಂತ ಮುಂದುವರೆದಿರುವ ನಮ್ಮ ಇಂದಿನ ಪಾಡೇನು? ನಮ್ಮ ಯುಗದ ವರಜ್ಞಾನವಾದ ವಿಜ್ಞಾನವೇ ಘೋಷಿಸುತ್ತಿದೆ – ಇಂದು ಎದುರಾಗಿರುವ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆ; ಒಂದು ಸೂಕ್ಷ್ಮಜೀವಿಯಿಂದ ಎದುರಾಗಬಹುದಾಗ ಸಾಮಾನ್ಯ ಸಮಸ್ಯೆ. ಆದರೆ ಇಂಥ ಸಮಸ್ಯೆಯನ್ನು ಎದುರಿಸುವಲ್ಲಿ ನಾವು ಸೋಲುತ್ತಿದ್ದೇವೆವಲ್ಲವೆ, ಈ ಸೋಲು ಯಾರ ಸೋಲು?

ನೈಸರ್ಗಿಕ ವಿಕೋಪಗಳು ನಡೆಯವುದನ್ನು ಕೆಲವೊಂದು ಪ್ರಾಣಿಗಳು ಮೊದಲೇ ಗ್ರಹಿಸುತ್ತವೆಯಂತೆ. ಆಹಾರಕ್ಕಾಗಿಯೂ ಸಂತಾನಾಭಿವೃದ್ಧಿಗಾಗಿಯೂ ಹಕ್ಕಿಗಳು ಸಾವಿರಾರು ಕಿಲೋಮೀಟರ್‌ಗಳಷ್ಟು ದೂರ ಹಾರಿಹೋಗುತ್ತವೆ. ವಾಸನೆಯ ಜಾಡನ್ನು ಹಿಡಿದು ಕ್ರಿಮಿಕೀಟಗಳು ಅವುಗಳ ಜೀವನಕ್ರಮವನ್ನು ರೂಪಿಸಿಕೊಳ್ಳುತ್ತವೆ. ಪ್ರಕೃತಿಯ ಸಹಜ ವಿದ್ಯಾಮಾನಗಳಲ್ಲಿರುವ ಅರಿವು–ಇರವುಗಳಿಗಿರುವ ಇಂಥ ನಂಟಿನ ಬಗ್ಗೆ ಸಾವಿರಾರು ಸಂಖ್ಯೆಯಲ್ಲಿ ಉದಾಹರಣೆಗಳನ್ನು ಕೊಡಲಾದೀತು. ಆದರೆ ವಿಜ್ಞಾನಯುಗದ ವಾರಸಿಕೆಯವರು ಎಂದು ಬೀಗುತ್ತಿರುವ ನಮ್ಮಲ್ಲಿ ಅರಿವು–ಇರವುಗಳ ಸಾಂಗತ್ಯ ಗಟ್ಟಿಯಾಗಿದೆಯೆ? 

ನಮ್ಮಷ್ಟು ತಿಳಿವಳಿಕೆಯನ್ನು ಪಡೆಯದ ಜನಾಂಗವೊಂದು, ನಮ್ಮಷ್ಟು ವೈಜ್ಞಾನಿಕತೆಯನ್ನು ದಕ್ಕಿಸಿಕೊಳ್ಳದ ಸಂಸ್ಕೃತಿಯೊಂದು ಒಂದು ಸೂಕ್ಷ್ಮಜೀವಿಯಿಂದ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸೋತು ತನ್ನ ಇರವನ್ನು ಅಪಾಯಕ್ಕೆ ಒಡ್ಡಿಕೊಂಡಿತು ಎಂದರೆ ಅದಕ್ಕೊಂದು ಸಕಾರಣವನ್ನೇ ಕೊಡಲಾದೀತು; ಅದರ ಅರಿವಿನ ಮಟ್ಟವೇ ಆ ಅನಾಹುತಕ್ಕೆ ಕಾರಣ ಎಂದು ತೀರ್ಪು ಕೊಡಲಾದೀತು. ಆದರೆ ನಾವು ಅರಿವಿನ ಶಿಖರದ ಮೇಲೆ ನಿಂತಿರುವವರು! ಏಕಾದರೂ ನಮಗೆ ಮುಂದಿನ ಅನಾಹುತಗಳು ಇರಲಿ, ಸದ್ಯದ ಅನಾಹುತಗಳೂ ಕಾಣುತ್ತಿಲ್ಲ? ನಮಗೆ ಕಾಣುತ್ತಿಲ್ಲವೆ? ಅಥವಾ ನಾವು ನೋಡುತ್ತಿಲ್ಲವೆ?

ಕಾಣುತ್ತಿಲ್ಲ – ಎಂದರೆ ನಮ್ಮ ಬುದ್ಧಿಶಕ್ತಿಯ ಪಾಟವದ ಬಗ್ಗೆಯೇ ಪ್ರಶ್ನೆ ಏಳುತ್ತದೆ. ನೋಡುತ್ತಿಲ್ಲ – ಎಂದರೆ ನಮ್ಮ ಭಾವಶಕ್ತಿಯ ಸೂಕ್ಷ್ಮತೆಯ ಬಗ್ಗೆಯೇ ಸಂಶಯ ಏಳುತ್ತದೆ. ಎರಡರ ತಾತ್ಪರ್ಯವಂತೂ ಒಂದೇ: ನಮ್ಮ ಅರಿವು ಮತ್ತು ಇರವು ಇನ್ನೂ ಒಂದಾಗಿಲ್ಲ. ಎಂದರೆ ನಮ್ಮ ಇರವಿಗೆ ಬೇಕಾದ ಅರಿವನ್ನು ನಾವಿನ್ನೂ ಪಡೆದಿಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು