ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮಾಧ್ಯಮ ದೃಶ್ಯಾವಳಿ ಮತ್ತು ಹಿಂಸಾಪ್ರವೃತ್ತಿ

ಸಮೂಹ ಮಾಧ್ಯಮ ಪರಿಕಲ್ಪನೆ ಈಗ ತೀವ್ರವಾಗಿ ಬದಲಾಗಿರುವುದು ಗಮನಾರ್ಹ
Last Updated 12 ಜನವರಿ 2023, 19:32 IST
ಅಕ್ಷರ ಗಾತ್ರ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟಿ.ವಿ. ವಾಹಿನಿಗಳಿಗೆ ಇತ್ತೀಚೆಗೆ ನೀಡಿರುವ ಸಲಹೆಯಲ್ಲಿ, ಸಂವೇದನಾರಹಿತ ವಿಡಿಯೊಗಳನ್ನು ಹಾಗೂ ಆತಂಕ ಸೃಷ್ಟಿಸುವ ಚಿತ್ರಗಳನ್ನು ಬಿತ್ತರಿಸದಂತೆ ಹೇಳಿದೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರ, ಅಪಘಾತ, ಸಾವಿಗೆ ಸಂಬಂಧಿಸಿದ ಪ್ರಕರಣಗಳ ವರದಿ ಮಾಡುವಾಗ ‘ಉತ್ತಮ ಅಭಿರುಚಿ ಹಾಗೂ ಸಭ್ಯತೆ’ಯ ಚೌಕಟ್ಟು ಮೀರದಂತೆ ಸೂಚಿಸಿದೆ. ಹಿಂಸಾತ್ಮಕವಾದ 12 ಪ್ರಕರಣಗಳು ಬಿತ್ತರವಾಗಿದ್ದ ಬಗೆಯನ್ನು ಉಲ್ಲೇಖಿಸಿ, ಈ ಬಗೆಯ ದೃಶ್ಯಗಳನ್ನು ಪ್ರಸಾರ ಮಾಡದಂತೆ ಹೇಳಿದೆ. ದೃಶ್ಯಗಳನ್ನು ವೀಕ್ಷಣೆಗೆ ಯೋಗ್ಯವಾಗುವ ರೀತಿಯಲ್ಲಿ ಎಡಿಟ್ ಮಾಡದೆ, ಸಾಮಾಜಿಕ ಜಾಲತಾಣಗಳಲ್ಲಿ ದೊರೆತಿರುವ ವಿಡಿಯೊಗಳನ್ನು ಅವು ಇರುವ ರೀತಿಯಲ್ಲಿ ಹಸಿಹಸಿಯಾಗಿಯೇ ಬಳಸಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮಾಧ್ಯಮ ಮತ್ತು ಮನಸ್ಸಿನ ಮೇಲಿನ ಪ್ರಭಾವ, ಪ್ರಯೋಜನ, ಅಪಾಯಗಳ ಬಗ್ಗೆ ಒಬ್ಬ ಮನೋವೈದ್ಯೆಯಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿರುವವಳು ನಾನು. ಸಮೂಹ ಮಾಧ್ಯಮಗಳ ಬಗೆಗಿನ ಪರಿಕಲ್ಪನೆ ಇಂದಿನ ದಿನಗಳಲ್ಲಿ ಹಿಂದೆಂದಿಗಿಂತ ಬದಲಾಗಿದೆ ಎನ್ನುವುದು ನಾವು ಗಮನಿಸಬೇಕಾದ ಸಂಗತಿ. ಇಂದಿನ ದಿನಗಳಲ್ಲಿ ಮಾನಸಿಕ ಸಮಸ್ಯೆ ಇರುವ ಮಕ್ಕಳನ್ನು ಕರೆತರುವ ಅಪ್ಪ-ಅಮ್ಮಂದಿರನ್ನು ನಾವು ಹಿಂದಿನಂತೆ ‘ಇವರು ಎಷ್ಟು ಹೊತ್ತು ಟಿ.ವಿ. ನೋಡುತ್ತಾರೆ’ ಎಂದು ಪ್ರಶ್ನಿಸಿದರೆ, ತತ್‍ಕ್ಷಣ ಅಚ್ಚರಿಯಾಗುವಂತೆ ‘ಇವರು ಟಿ.ವಿ. ನೋಡುವುದೇ ಇಲ್ಲ ಡಾಕ್ಟ್ರೇ’ ಎಂಬ ಉತ್ತರ ಬರುತ್ತದೆ! ನೀವು ‘ಅರೆ!’ ಎಂದು ಆಶ್ಚರ್ಯಪಡುತ್ತಿರುವಾಗಲೇ ಮಗುವಿನ ಪುಟ್ಟ ಕೈಯ್ಯಲ್ಲಿರುವ ದೊಡ್ಡ ಅಂಗೈಯಗಲದ ಮೊಬೈಲ್ ಕಣ್ಣಿಗೆ ಬೀಳುತ್ತದೆ. ಆಗ ನಿಮಗೆ ಜ್ಞಾನೋದಯವಾಗುತ್ತದೆ. ಆಗಲೇ ಅಪ್ಪ-ಅಮ್ಮ ‘ಇವನಿಗೆ ಯಾವಾಗಲೂ ಮೊಬೈಲ್ ನೋಡುವ ಅಭ್ಯಾಸ ಮೇಡಂ. ಯಾವಾಗಲೂ ಯುಟ್ಯೂಬ್‍ನಲ್ಲಿ ಅದು ಇದು ನೋಡ್ತಿರ್ತಾನೆ’ ಎಂದು ದೂರುತ್ತಾರೆ!

ಇಂದು ಮೊಬೈಲ್‍ನಲ್ಲಿ ಯಾರು ಏನನ್ನಾದರೂ ಚಿತ್ರೀಕರಿಸಿಕೊಳ್ಳಬಹುದು. ಅಪಘಾತವಾದಾಗ ಹತ್ತಿರ ಇದ್ದವರು ಸಹಾಯ ಮಾಡುವುದರ ಬದಲಿಗೆ, ಏನಾಗುತ್ತಿದೆ ಎನ್ನುವುದನ್ನು ತಮ್ಮ ಮೊಬೈಲ್‍ನಲ್ಲಿ ಚಿತ್ರಿಸಿ ನಂತರ ತಮ್ಮ ಗುಂಪುಗಳಲ್ಲಿಯೋ ಸಾರ್ವಜನಿಕ
ವಾಗಿಯೋ ಹರಿಯಬಿಡುವುದು ಇಂದು ಸಾಮಾನ್ಯ. ಹಾಗೇ ಹತ್ಯೆ ಮಾಡುವುದು, ದರ ದರ ಎಳೆಯುವುದು, ರಪರಪ ಹೊಡೆಯುವಂತಹವುಗಳನ್ನು ನಾವು ‘ಲೈವ್’ ಆಗಿ, ಹಸಿಹಸಿಯಾಗಿ ನೋಡಲು ಇಂದು ಟಿ.ವಿ. ವಾಹಿನಿಗಳೇ ಬೇಕೆಂದೇನೂ ಇಲ್ಲ. ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವ ಹಿಂಸೆ, ಕ್ರೌರ್ಯದ ದೃಶ್ಯಾವಳಿಗಳನ್ನು ಟಿ.ವಿ. ವಾಹಿನಿಯವರು ಪ್ರಸಾರ ಮಾಡಲಿಲ್ಲವೆಂದರೆ ಬಹುಜನ ಟಿ.ವಿ. ನೋಡಲು ಇಷ್ಟಪಡುವುದಿಲ್ಲ ಎಂಬ ವಾದವನ್ನು ಹಲವರು ಮುಂದಿಡುತ್ತಾರೆ. ಇದು ಒಪ್ಪುವ ಮಾತೇ? ಅಲ್ಲ. ಏಕೆಂದರೆ, ಅಂಗೈನಲ್ಲಿ ಇರುವ ಮೊಬೈಲ್ ಆ್ಯಪ್‍ಗಳಲ್ಲೇ ಯಾವುದೇ ರೀತಿಯ ಮನರಂಜನೆ ‘ವೈಯಕ್ತಿಕ’ವಾಗಿ ದೊರಕುವಾಗ, ಮನೆಮಂದಿಯೆಲ್ಲಾ ಕುಳಿತು ನೋಡುವ ಪರಿಸ್ಥಿತಿ ಇಂದು ಹೆಚ್ಚಿನ ಕುಟುಂಬಗಳಲ್ಲಿ ಇಲ್ಲ! ಆದ್ದರಿಂದ ಇಂದು ‘ಮಾಧ್ಯಮ’ ಅಂದರೆ ಯಾರು ಎಂಬ ಪ್ರಶ್ನೆಗೆ ನಮ್ಮಲ್ಲಿ ‘ನಾನು’ ಎಂದು ಪ್ರತಿಯೊಬ್ಬರೂ ಉತ್ತರಿಸಬೇಕಾದೀತು, ಬಾಧ್ಯತೆ ಹೊರಬೇಕಾದೀತು.

ನಮ್ಮ ಮನಸ್ಸುಗಳಿಗೂ ಹಿಂಸೆಗೂ ಇರುವ ಮನೋವೈಜ್ಞಾನಿಕ ನಂಟಿನತ್ತಲೂ ನಾವು ನೋಡಬೇಕು. ಏಕೆಂದರೆ ಮಾಧ್ಯಮಗಳ ವಿಷಯದಲ್ಲಿ ಎಂದಿಗೂ ಚರ್ಚೆಗೆ ಆಸ್ಪದವಾಗಿರುವ ವಿಷಯಗಳು ಎರಡು. ಹಿಂಸೆ ಮತ್ತು ಲೈಂಗಿಕತೆ. ಮಕ್ಕಳ ಮನಸ್ಸಿಗೆ ಸಂಬಂಧಿಸಿದಂತೆ, ಸಮಾಜದಲ್ಲಿ ಅಪರಾಧಗಳ ಪ್ರಮಾಣದ ಕುರಿತು, ಮಾಧ್ಯಮಗಳಲ್ಲಿ ತೋರಿಸಲಾಗುವ ಹಿಂಸೆ, ಲೈಂಗಿಕತೆಯ ದೃಶ್ಯಗಳು ಬೀರುವ ಪ್ರಭಾವದ ಮೇಲೆ ಬಹಳಷ್ಟು ಅಧ್ಯಯನಗಳು ನಡೆದಿವೆ. ಆದರೆ ನಿಯಂತ್ರಣದ ಹೊಣೆ ಹೊತ್ತ ಸಂಸ್ಥೆಗಳಾಗಲೀ ಆಡಳಿತ ವ್ಯವಸ್ಥೆಯಾಗಲೀ ಇವುಗಳತ್ತ ಕಣ್ಣು ಹಾಯಿಸಿದಂತೆ ಕಾಣಿಸುವುದಿಲ್ಲ.

ಪ್ರಸ್ತುತ ಮಾಹಿತಿ ಸಚಿವಾಲಯ ಹೆಸರಿಸಿರುವ 12 ಪ್ರಕರಣಗಳೂ ಹಿಂಸೆಗೆ ಸಂಬಂಧಿಸಿದವು ಎನ್ನುವುದು ಮಹತ್ವದ ಅಂಶ. ಮಾಧ್ಯಮಗಳಲ್ಲಿ ಬಿಂಬಿಸುವ ಹಿಂಸೆ, ಕ್ರೌರ್ಯಗಳನ್ನು ಮನೋವಿಜ್ಞಾನ ಕ್ಷೇತ್ರವು ‘ಯುವಜನರ ಮಾನಸಿಕ ಆರೋಗ್ಯದ ಬಿಕ್ಕಟ್ಟು’ (Youth mental health crisis) ಎಂದು ಗುರುತಿಸುತ್ತದೆ. ಅದೊಂದು ತತ್‍ಕ್ಷಣ ಕಾರ್ಯಪ್ರವೃತ್ತರಾಗಬೇಕಾದ ತುರ್ತು ಪರಿಸ್ಥಿತಿ ಎಂದು ಕರೆಯುತ್ತದೆ. ಹಿಂಸೆಗೂ ಮಾನವ ಮನಸ್ಸಿಗೂ ಇರುವ ನಂಟು ಹತ್ತಿರದ್ದು. ತನ್ನನ್ನು ತಾನು ರಕ್ಷಿಸಿಕೊಳ್ಳುವಾಗ ಇತರ ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಹಿಂಸೆಯನ್ನು ಉಪಯೋಗಿಸುವುದು ಒಂದು ರಕ್ಷಣಾ ತಂತ್ರವಾಗಿ. ಹಾಗಾಗಿ ಅದೊಂದು ಆದಿಮ ಪ್ರವೃತ್ತಿ ಎನ್ನುವುದು ಸರಿಯೇ. ಆದರೆ ಹಿಂಸೆಯ ನಿರಂತರ ನೋಡುವಿಕೆ, ತಾದಾತ್ಮ್ಯದಿಂದ ಅದರಲ್ಲಿ ಒಂದಾಗಿ ವೀಕ್ಷಿಸುವುದು, ‘ಅಬ್ಬಾ ನೋಡೋಕಾಗ್ತಿಲ್ಲ’ ಎನ್ನುತ್ತಲೇ ನೋಡುವುದು ‘‌ಸಂವೇದನಾರಾಹಿತ್ಯ’ದ ಅಪಾಯಕ್ಕೆ ನಮ್ಮನ್ನು ಒಡ್ಡುತ್ತವೆ. ಕೋಪ, ಯಾರನ್ನೂ ನಂಬಲಾಗದ ಅವಿಶ್ವಾಸ, ಇತರರ ಅವಸ್ಥೆಯನ್ನು ನೋಡಿ ‘ಅಯ್ಯೋ ಪಾಪ’ ಎಂದು ಮರುಕಪಡುವ ಗುಣವನ್ನು ಕಳೆದುಕೊಳ್ಳುವುದು ಸಂವೇದನೆಯಿಲ್ಲದ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಹಿಂಸೆ ಹಾಗೂ ಅದರ ಪರಿಣಾಮಗಳ ಬಗೆಗೆ ನಮಗೆ ಇಷ್ಟೆಲ್ಲಾ ಗೊತ್ತಿದೆ. ಆದರೂ ಅದನ್ನು ನಾವು ಕುತೂಹಲದಿಂದ ನೋಡುವುದು ಏಕೆ?! ಬದುಕಿ ಉಳಿಯುವುದೇ ಗುರಿಯಾಗಿದ್ದಾಗ, ಅಪಾಯದ ಸನ್ನಿವೇಶಗಳಲ್ಲಿ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ನೋಡಿ
ಕಲಿಯುವುದು ಮುಖ್ಯವಾಗುತ್ತಿತ್ತು. ಈ ಮೂಲಭೂತ ಮಾನವಸಹಜ ಗುಣದೊಂದಿಗೆ ಈಗ ಇಂತಹ ದೃಶ್ಯಗಳನ್ನು ನೋಡುವಾಗ, ನಮ್ಮ ಮತ್ತು ಆ ದೃಶ್ಯಗಳಲ್ಲಿನ ಅಪಾಯದ ನಡುವೆ ವೀಕ್ಷಣಾ ಪರದೆ ಇರುತ್ತದೆ. ‘ಇದು ಸುರಕ್ಷಿತ, ನೋಡುವುದರಿಂದ ಏನೂ ಆಗಲು ಸಾಧ್ಯವಿಲ್ಲ’ ಎಂಬ ಭಾವನೆಯೂ ಜೊತೆಗೂಡಿ, ನೋಡುವ ಕುತೂಹಲ ತಣಿಸಿಕೊಳ್ಳಲು ‘ಅನುಮತಿ’ ನೀಡುತ್ತದೆ.

ಮಾಧ್ಯಮಗಳು ಉಣಬಡಿಸುವ ಹಿಂಸೆಯ ದೃಶ್ಯಾವಳಿಗಳು, ದುರ್ಘಟನೆಗಳ ನೇರ ಪ್ರಸಾರ, ಯುದ್ಧದ ಘಟನಾವಳಿಗಳನ್ನು ನೋಡುವುದರಲ್ಲಿ ಹಿರಿಯರು ಮಕ್ಕಳ ಜೊತೆಗಾರರಾಗಿರುತ್ತಾರೆ ಎನ್ನುವುದು ಆತಂಕಕಾರಿಯಾದರೂ ಸತ್ಯ ಸಂಗತಿಯೇ. ಇದು ಎಷ್ಟು ಸಾಮಾನ್ಯವೆಂದರೆ, ‘ಇದೇ ಜಗತ್ತಿನಲ್ಲಿ ಈ ಮಕ್ಕಳು ಬೆಳೆಯಬೇಕಷ್ಟೆ. ಹಾಗಾಗಿ ಜಗತ್ತು ಹೇಗಿದೆ ಎಂದು ತೋರಿಸಿಯೇಬಿಡೋಣ’ ಎಂದು ಅಪ್ಪ ಅಮ್ಮ ತಾವು ನೋಡಿದ ದೃಶ್ಯವನ್ನು ಮಕ್ಕಳಿಗೆ ಕರೆದು ತೋರಿಸುವಷ್ಟು!

ಹಿಂಸೆಯ ದೃಶ್ಯಾವಳಿಗಳನ್ನು ಪ್ರಸಾರ ಮಾಡುವುದು- ನಾವು ನೋಡುವುದು- ನಾವು ನೋಡುತ್ತೇವೆಂದು ಪ್ರಸಾರ ಹೆಚ್ಚುವುದು ಹೀಗೆ ವಿಷಚಕ್ರ ಮುಂದುವರಿಯುತ್ತದೆ. 2021ರ ಅಕ್ಟೋಬರ್‌ನಲ್ಲಿ ಅಮೆರಿಕದ ಮಕ್ಕಳ ಮನೋವೈದ್ಯಕೀಯ ಸಂಸ್ಥೆ, ಮಕ್ಕಳ ಆಸ್ಪತ್ರೆಗಳ ಸಂಘದಂತಹ ಮಕ್ಕಳ ಆರೋಗ್ಯ ಸಂಸ್ಥೆಗಳು ಸೇರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು (State of national emergency) ಘೋಷಿಸಿದ್ದವು! ಮನೋವೈದ್ಯಕೀಯ ಸಮಸ್ಯೆಗಳಿಂದ ಬಳಲುವ, ಆತ್ಮಹತ್ಯೆಗೆ ಪ್ರಯತ್ನಿಸುವ ಮಕ್ಕಳನ್ನು ತುರ್ತು ಪರಿಸ್ಥಿತಿ ವಿಭಾಗಕ್ಕೆ ಕರೆತರುವವರ ಸಂಖ್ಯೆ ಹೆಚ್ಚಿದ್ದರಿಂದ ಇಂತಹ ಆತಂಕ ಉದ್ಭವಿಸಿತ್ತು ಎಂದರೆ ಪರಿಸ್ಥಿತಿಯ ತೀವ್ರತೆ ನಮಗೆ ಅರಿವಾಗಬೇಕು.

ಆಡಳಿತ ವ್ಯವಸ್ಥೆಯು ದೇಶದ ಆರೋಗ್ಯ ಕಾಯ್ದುಕೊಳ್ಳುವುದನ್ನೇ ಕೇಂದ್ರವಾಗಿಸಿ ನಿರ್ಣಯಗಳನ್ನು ಕೈಗೊಳ್ಳಬೇಕು. ಪ್ರಸಾರ ಮಾಡುವ ಮಾಧ್ಯಮಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಅದೇ ಪ್ರೇಕ್ಷಕ ವರ್ಗ ಆತ್ಮಹಿತವನ್ನು ಕಾಯ್ದುಕೊಳ್ಳುವತ್ತ ಮನಸ್ಸು ಮಾಡಬೇಕು. ಹೀಗೆ ಒಟ್ಟಾಗಿ ನಾವು ಎಚ್ಚರ ಗೊಳ್ಳದಿದ್ದರೆ ಸೂಚನೆ, ಸಲಹೆ, ನಿರ್ಬಂಧಗಳು ನಿರರ್ಥಕವಾಗುವುದರಲ್ಲಿ ಸಂದೇಹವೇ ಇಲ್ಲ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT