ಬುಧವಾರ, ಆಗಸ್ಟ್ 10, 2022
25 °C
ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಕ್ಕೆ ತಿದ್ದುಪಡಿ ತರುವ ಕೇಂದ್ರದ ಪ್ರಸ್ತಾವ ಸರಿಯೇ?

ಮದನ್‌ ಗೋಪಾಲ್‌ ಬರಹ: ರಾಷ್ಟ್ರದ ಹಿತಾಸಕ್ತಿಯೇ ತಿದ್ದುಪಡಿಗೆ ಕಾರಣ

ಮದನ್‌ ಗೋಪಾಲ್‌ Updated:

ಅಕ್ಷರ ಗಾತ್ರ : | |

ಕೇಂದ್ರ ಆಡಳಿತ ಸುಧಾರಣೆ ಆಯೋಗ, ಸುಪ್ರೀಂ ಕೋರ್ಟ್‌ ಹಾಗೂ ಆಡಳಿತ ನ್ಯಾಯಮಂಡಳಿಗಳು ಈ ಸೇವೆಯ ನಿಯಮಗಳಲ್ಲಿ ಬದಲಾವಣೆ ತರುವಂತೆ ಶಿಫಾರಸು ಮಾಡಿವೆ. ಹಾಗಾಗಿ ತಿದ್ದುಪಡಿಯ ಅಗತ್ಯವೇ ಇಲ್ಲ ಎನ್ನುವುದು ತಪ್ಪು. ಕೇಂದ್ರ ಸರ್ಕಾರ ಯಾವುದೇ ತಿದ್ದುಪಡಿಗೆ ಮುಂದಾದರೂ ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳದೆಯೇ ವಿರೋಧಿಸುವುದು ಇತ್ತೀಚೆಗೆ ಚಾಳಿಯಾಗಿಬಿಟ್ಟಿದೆ. ಸರಿ– ತಪ್ಪುಗಳ ಕುರಿತು ಚರ್ಚಿಸಿ ನಿರ್ಣಯಕ್ಕೆ ಬರಬಹುದಲ್ಲವೇ?

ಭಾರತದಲ್ಲಿ ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಮೊಘಲರು ಹಾಗೂ ಬ್ರಿಟಿಷರ ಕಾಲದಿಂದಲೇ ನಾಗರಿಕ ಸೇವೆ ಬೇರೆ ಬೇರೆ ಸ್ವರೂಪದಲ್ಲಿ ಜಾರಿಯಲ್ಲಿದೆ. ‘ಭಾರತ ಆಡಳಿತ ಸೇವೆ (ವೃಂದ) ನಿಯಮಗಳು 1954’ರ ನಿಯಮಗಳ ತಿದ್ದುಪಡಿ ಪ್ರಸ್ತಾವದ ಬಗ್ಗೆ ಚರ್ಚಿಸುವ ಮುನ್ನ ಅಖಿಲ ಭಾರತ ನಾಗರಿಕ ಸೇವೆಯನ್ನು ಜಾರಿಗೊಳಿಸಿದ ಉದ್ದೇಶವನ್ನು ತಿಳಿಯುವುದು ಬಲುಮುಖ್ಯ.

ಸಂವಿಧಾನದ ಕರಡು ಸಮಿತಿಯಲ್ಲಿಯೂ ಅಖಿಲ ಭಾರತ ನಾಗರಿಕ ಸೇವೆಗಳ ಬಗ್ಗೆ ಚರ್ಚೆಗಳಾಗಿವೆ. ‘ಬ್ರಿಟಿಷರಿಗೆ ಗುಲಾಮರಾಗಿದ್ದ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿದ್ದರು’ ಎಂಬ ಭಾವನೆ ಜವಾಹರಲಾಲ್‌ ನೆಹರೂ ಸೇರಿದಂತೆ ಅನೇಕ ನಾಯಕರ
ಲ್ಲಿತ್ತು. 1948ರ ಏಪ್ರಿಲ್‌ 27ರಂದು ನೆಹರೂ ಅವರಿಗೆ ಪತ್ರ ಬರೆದ ಸರ್ದಾರ್‌ ವಲ್ಲಭಬಾಯಿ ಪಟೇಲ್‌, ‘ದೇಶಭಕ್ತಿ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮರ್ಥ್ಯದ ವಿಚಾರದಲ್ಲಿ ಅವರನ್ನು ಬಿಟ್ಟು ನಮಗೆ ಬೇರೆ ಪರ್ಯಾಯಗಳೇ ಇಲ್ಲ. ಈ ವಿಚಾರಗಳಲ್ಲಿ ಅವರು ನಮ್ಮಷ್ಟೇ ಶ್ರೇಷ್ಠರು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ‘ನಾನು ಅವರ ಜೊತೆಗೆ ನಿಲ್ಲಬೇಕಾಗುತ್ತದೆ’ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಪಟೇಲ್‌ ಅವರು ಈ ಕಾರಣಕ್ಕೆ ರಾಜೀನಾಮೆ ನೀಡಲು ಮುಂದಾದಾಗ ಅವರ ಬೆಂಬಲಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್ ನಿಂತರು. ಇದರ ಫಲವಾಗಿಯೇ ಸಂವಿಧಾನಕ್ಕೆ 312ನೇ ವಿಧಿ ಸೇರ್ಪಡೆಯಾಯಿತು. 1951ರ ಅಖಿಲ ಭಾರತ ಸೇವೆಗಳ ಕಾಯ್ದೆ ಜಾರಿಗೊಳಿಸಿ ಈ ಅಧಿಕಾರಿಗಳಿಗೆ ರಕ್ಷಣೆ ಒದಗಿಸಲಾಯಿತು. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಅಸಮಾನತೆಗಳಿಂದ ಕೂಡಿರುವ ದೇಶದಲ್ಲಿ ರಾಷ್ಟ್ರೀಯ ಸಮಗ್ರತೆ ಮತ್ತು ಐಕ್ಯತೆಯ ರಕ್ಷಣೆಗಾಗಿ ಅಖಿಲ ಭಾರತ ಸೇವೆ ಬೇಕು. ರಾಜ್ಯಗಳ ವಿಭಿನ್ನತೆ ಏನೇ ಇದ್ದರೂ ಸಮಾನ ಆಡಳಿತಕ್ಕಾಗಿ ಇದು ಅತ್ಯಗತ್ಯ ಎಂಬುದನ್ನು ಪಟೇಲ್‌ ಬಲವಾಗಿ ಪ್ರತಿಪಾದಿಸಿದ್ದರು. ಈ ಬೆಳವಣಿಗೆಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿಯನ್ನು ಅವಲೋಕಿಸಬೇಕಾಗುತ್ತದೆ.

ಕೇಂದ್ರ ಆಡಳಿತ ಸುಧಾರಣೆ ಆಯೋಗ, ಸುಪ್ರೀಂ ಕೋರ್ಟ್‌ ಹಾಗೂ ಆಡಳಿತ ನ್ಯಾಯಮಂಡಳಿಗಳು ಈ ಸೇವೆಯ ನಿಯಮಗಳಲ್ಲಿ ಬದಲಾವಣೆ ತರುವಂತೆ ಶಿಫಾರಸು ಮಾಡಿವೆ. ಹಾಗಾಗಿ ತಿದ್ದುಪಡಿಯ ಅಗತ್ಯವೇ ಇಲ್ಲ ಎನ್ನುವುದು ತಪ್ಪು. ಕೇಂದ್ರ ಸರ್ಕಾರ ಯಾವುದೇ ತಿದ್ದುಪಡಿಗೆ ಮುಂದಾದರೂ ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳದೆಯೇ ವಿರೋಧಿಸುವುದು ಇತ್ತೀಚೆಗೆ ಚಾಳಿಯಾಗಿಬಿಟ್ಟಿದೆ. ಸರಿ– ತಪ್ಪುಗಳ ಕುರಿತು ಚರ್ಚಿಸಿ ನಿರ್ಣಯಕ್ಕೆ ಬರಬಹುದಲ್ಲವೇ?

ಅಖಿಲ ಭಾರತ ಸೇವೆಗಳಲ್ಲಿ ಕೇಡರ್‌ ನಿಯೋಜನೆ ಮಾಡುವುದು ಕೇಂದ್ರ ಸರ್ಕಾರ. ಈ ಅಧಿಕಾರಿಗಳು ರಾಜ್ಯ ಸರ್ಕಾರದಲ್ಲಿ 10–12 ವರ್ಷ ಕೆಲಸ ಮಾಡಿದ ಬಳಿಕ ‘ಕೇಂದ್ರ ನಿಯೋಜನೆಯ ಮೀಸಲು’ (ಸಿಡಿಆರ್‌) ಪ್ರಕಾರ ಕೇಂದ್ರ ಸರ್ಕಾರದಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸದ್ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವುದೇ ಇದರ ಪ್ರಮುಖ ಉದ್ದೇಶ. ಕೇಂದ್ರವು ರಾಜ್ಯಗಳ ಉತ್ತಮ ಕಾರ್ಯಗಳ ಅನುಭವಗಳನ್ನು ಆಧರಿಸಿ ರಾಷ್ಟ್ರಮಟ್ಟದ ಕಾರ್ಯಯೋಜನೆಗಳನ್ನು ರೂಪಿಸುತ್ತದೆ. ಇದಕ್ಕಾಗಿ ಕೇಂದ್ರಕ್ಕೆ ರಾಜ್ಯಗಳಿಂದ ಅಧಿಕಾರಿಗಳ ನಿಯೋಜನೆ ಅನಿವಾರ್ಯ. ಕೋವಿಡ್‌ನಂತಹ ಬಿಕ್ಕಟ್ಟು ಎದುರಾದಾಗ ಅದನ್ನು ಬಗೆಹರಿಸುವ ಛಾತಿಯಿರುವ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವುದರಲ್ಲಿ ತಪ್ಪೇನಿದೆ? 

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಬಹಳ ವ್ಯತ್ಯಾಸಗಳಿವೆ. ಕೇಂದ್ರದಲ್ಲಿ ಅಧಿಕಾರವೂ ಕೇಂದ್ರೀಕೃತ ಆಗಿರುತ್ತದೆ ಎಂದು ದೂರುವ ಅಧಿಕಾರಿಗಳಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟವೇ ಪ್ರಧಾನ. ಮುಖ್ಯಮಂತ್ರಿಯಿಂದ ಅಧಿಕಾರಿಗೆ ಕರೆ ಬಂದ ಎರಡೇ ದಿನಗಳಲ್ಲಿ ನೀತಿಗಳನ್ನು ರೂಪಿಸಿದ ಅನೇಕ ಉದಾಹರಣೆಗಳನ್ನು ನೋಡಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಸಾಂಸ್ಥಿಕ ವಿಧಾನಗಳಿಗೆ ಬಹಳ ಪ್ರಾಮುಖ್ಯತೆಗಳಿವೆ. ಪ್ರತಿಯೊಂದು ಸಚಿವಾಲಯದಲ್ಲೂ ಸಾಕಷ್ಟು ವಿಕೇಂದ್ರೀತ ವ್ಯವಸ್ಥೆ ಇದೆ. 

ಅಖಿಲ ಭಾರತ ಸೇವೆಯ ಅಧಿಕಾರಿಗಳು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದರೂ ರಾಜ್ಯ ಸರ್ಕಾರಗಳು ಅವರನ್ನು ಬಿಡುಗಡೆ ಮಾಡುವುದೇ ಇಲ್ಲ. ಪದೇ ಪದೇ ವರ್ಗಾವಣೆ, ಅಮಾನತು, ಒಲ್ಲದ ಹುದ್ದೆಗೆ ನಿಯೋಜನೆಯಂತಹ ಕಿರುಕುಳವನ್ನೂ ಕೆಲವು ಅಧಿಕಾರಿಗಳು ಎದುರಿಸುವುದುಂಟು. ರಾಜ್ಯದಲ್ಲಿ ಶಿಕ್ಷಣ, ಸೌಕರ್ಯಗಳು ಚೆನ್ನಾಗಿವೆ ಎಂಬ ಕಾರಣಕ್ಕೆ ಕೇಂದ್ರ ಸೇವೆಗೆ ಹೋಗಲು ಇಷ್ಟಪಡದ ಅಧಿಕಾರಿಗಳೂ ಇದ್ದಾರೆ. ಐಎಎಸ್‌ ಅಧಿಕಾರಿಗಳು ತರಬೇತಿ ಅವಧಿಯಲ್ಲಿ ಗ್ರಾಮಲೆಕ್ಕಿಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಹಸೀಲ್ದಾರ್‌, ಉಪವಿಭಾಗಾಧಿಕಾರಿ, ಬಳಿಕ ಜಿಲ್ಲಾಧಿಕಾರಿಯಾಗಿ ಕೆಲಸ ಕಲಿಯಬೇಕಾಗುತ್ತದೆ. ಅದೇ ರೀತಿ  ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಾಗ ಉಪಕಾರ್ಯದರ್ಶಿ, ನಿರ್ದೇಶಕರ ಹುದ್ದೆಗಳನ್ನು ನಿರ್ವಹಿಸಬೇಕಾಗುತ್ತದೆ. 

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾಂವಿಧಾನಿಕ ಸಂಸ್ಥೆಯನ್ನೇ ದುರ್ಬಲಗೊಳಿಸುವ ‘ಕಮಿಟೆಡ್‌ ಬ್ಯೂರೋಕ್ರಸಿ’ಯ ಪರಿಕಲ್ಪನೆ ಪ್ರಚಲಿತಕ್ಕೆ ಬಂತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಮಾತನ್ನು ನಿಷ್ಠೆಯಿಂದ ಪಾಲಿಸುವ ಅಧಿಕಾರಿಗಳನ್ನಷ್ಟೇ ಆಯಕಟ್ಟಿನ ಹುದ್ದೆಗೆ ನೇಮಿಸಿಕೊಳ್ಳುತ್ತಿದ್ದರು. ಆ ಬಳಿಕ ಇಡೀ ಆಡಳಿತ ವ್ಯವಸ್ಥೆ ಬಲಹೀನವಾಗುತ್ತಾ ಬರುತ್ತಿದೆ. ಇತ್ತೀಚೆಗೆ ಅಧಿಕಾರಿಗಳೂ ಸ್ಥಳೀಯ ನಾಯಕರ ಜೊತೆ ಶಾಮೀಲಾಗಿ ಅವರ ಮರ್ಜಿಗೆ ತಕ್ಕಂತೆ ನಡೆದುಕೊಳ್ಳುವುದನ್ನು ಕಲಿತುಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಒಂದು ತಿಂಗಳು ಕೆಲಸ ಮಾಡಲು ಕೂಡಾ ಕೆಲವರು ಸಿದ್ಧರಿಲ್ಲದಿರುವುದು ವಿಪರ್ಯಾಸ.

ಅಖಿಲ ಭಾರತ ನಾಗರಿಕ ಸೇವೆಗಳಿಗೆ 1990ರ ಬಳಿಕ ನೇಮಕಾತಿಗಳೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದಾಗಿ ರಾಜ್ಯಗಳಲ್ಲಿ ಹಾಗೂ ಕೇಂದ್ರ ಸರ್ಕಾರದಲ್ಲಿ ಅಧಿಕಾರಿಗಳ ಕೊರತೆ ಎದುರಾಗಿರುವುದು ನಿಜ. ಇದನ್ನೆ ನೆಪವಾಗಿಟ್ಟುಕೊಂಡು ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರ ಸೇವೆಗೆ ಅಧಿಕಾರಿಗಳ ನಿಯೋಜನೆ ಮಾಡುತ್ತಿಲ್ಲ. ಗುಜರಾತ್‌ನಂತಹ ರಾಜ್ಯಗಳೂ ಇದಕ್ಕೆ ಹೊರತಾಗಿಲ್ಲ. ‘ಕೇಂದ್ರದಲ್ಲೂ ಅಧಿಕಾರಿಗಳು ಸಾಲುತ್ತಿಲ್ಲ. ಹಾಗಾಗಿ ಈ ತಿದ್ದುಪಡಿ ಅಗತ್ಯ’ ಎಂಬುದು ಕೇಂದ್ರದ ವಾದ.

ಯಾವುದಾದರೂ ಅಧಿಕಾರಿಯ ಸೇವೆಯನ್ನು ಪಡೆಯಲು ಕೇಂದ್ರವು ಬಯಸಿದರೆ, ರಾಜ್ಯ ಸರ್ಕಾರ ಅವರನ್ನು ಬಿಡುಗಡೆ ಮಾಡಬೇಕು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ನಿಯೋಜನೆ ಕುರಿತು ರಾಜ್ಯ ಹಾಗೂ ಕೇಂದ್ರ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದರೆ, 1954ರ ಐಎಎಸ್‌ (ವೃಂದ) ನಿಯಮ 6 (1)ರ ಪ್ರಕಾರ ಕೇಂದ್ರ ಸರ್ಕಾರದ ತೀರ್ಮಾನವೇ ಅಂತಿಮವಾಗುತ್ತದೆ. ತಿದ್ದುಪಡಿ ಪ್ರಸ್ತಾವದಲ್ಲಿ ಕೇಂದ್ರದ ನಿರ್ಣಯವನ್ನು ‘ನಿರ್ದಿಷ್ಟ ಕಾಲಮಿತಿಯ ಒಳಗೆ’ ಜಾರಿಗೊಳಿಸಬೇಕು ಎಂಬ ಪದವನ್ನಷ್ಟೇ ಸೇರ್ಪಡೆ ಮಾಡಲಾಗುತ್ತಿದೆ. ಅದು ತಪ್ಪೇ?

‌ಇಲ್ಲಿ ಕೇಂದ್ರವು ತನ್ನ ನಿರ್ಧಾರವನ್ನು ಏಕಾಏಕಿ ಹೇರಲಾಗದು. ಎಷ್ಟು ಅಧಿಕಾರಿಗಳನ್ನು ನಿಯೋಜನೆ ಮಾಡಲು ಸಾಧ್ಯ ಎಂಬ ಬಗ್ಗೆ ವಸ್ತುಸ್ಥಿತಿಯ ವಿವರ ಪಡೆದು, ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿಯೇ ಕೇಂದ್ರವು ತೀರ್ಮಾನಕ್ಕೆ ಬರಬೇಕಾಗುತ್ತದೆ. ತಿದ್ದುಪಡಿ
ಪ್ರಸ್ತಾವದಲ್ಲೂ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಈ ತಿದ್ದುಪಡಿ ಕೇವಲ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ತಮಿಳುನಾಡಿಗೆ ಮಾತ್ರ ಅನ್ವಯವಾಗುವುದಲ್ಲ; ಇದು ‌ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಐಎಎಸ್‌ ಮಾತ್ರವಲ್ಲ, ಐಪಿಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳಿಗೂ ಅನ್ವಯವಾಗುತ್ತದೆ.

ನಾನು ಕೈಮಗ್ಗ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದೆ. ಆಗ ಆ ಮಂಡಳಿಯು ಮುಚ್ಚುವ ಸ್ಥಿತಿ ಎದುರಾದಾಗ  ಕೇಂದ್ರದ ಆರ್ಥಿಕ ಇಲಾಖೆಯಲ್ಲಿದ್ದ ಕರ್ನಾಟಕ ವೃಂದದ ಅಧಿಕಾರಿಯೊಬ್ಬರು ಜವಳಿ ಸಚಿವಾಲಯವನ್ನು ಸಂಪರ್ಕಿಸಿ ಮಂಡಳಿಯ ಪುನಃಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಲು ನೆರವಾದರು. ಕರ್ನಾಟಕ ವೃಂದದವರು ಕೇಂದ್ರದ ಹುದ್ದೆಯಲ್ಲಿದ್ದರೆ ನಮ್ಮ ರಾಜ್ಯಕ್ಕೆ ಹೆಚ್ಚು ಪ್ರಯೋಜನ. ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸದಿದ್ದರೆ, ಆ ರಾಜ್ಯಕ್ಕೇ ನಷ್ಟ ಜಾಸ್ತಿ.

ರಾಷ್ಟ್ರದ ಹಿತಾಸಕ್ತಿಯಿಂದ ತಂದ ತಿದ್ದುಪಡಿ ಇದು. ಒಳ್ಳೆಯ ಆಡಳಿತಕ್ಕೆ ಪೂರಕವಾಗಿರುವ ಈ ತಿದ್ದುಪಡಿಯನ್ನು ಸಂಘರ್ಷದ ಬದಲು ಸಂವಾದದ ಮೂಲಕ ಜಾರಿಗೊಳಿಸುವುದು ಸೂಕ್ತ.

ಲೇಖಕ: ನಿವೃತ್ತ ಐಎಎಸ್‌ ಅಧಿಕಾರಿ

ನಿರೂಪಣೆ: ಪ್ರವೀಣ್‌ ಕುಮಾರ್‌ ಪಿ.ವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು