ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಭವಿಷ್ಯದ ಸಾರಿಗೆಯಲ್ಲಿ ಭಾರತೀಯನ ಮೊದಲ ಪಯಣ

Last Updated 13 ನವೆಂಬರ್ 2020, 6:11 IST
ಅಕ್ಷರ ಗಾತ್ರ

ಮೊನ್ನೆ ಮಧ್ಯರಾತ್ರಿ ಭಾರತೀಯರು ನಿದ್ರೆಗೆ ಜಾರಿದ್ದ ಹೊತ್ತು. ಅತ್ತ ಅಮೆರಿಕಾದ ಮೋಜಿನ ನಗರ ಲಾಸ್‌ವೆಗಾಸ್‌ನ ಮರಳುಗಾಡಿನಲ್ಲಿ ಭವಿಷ್ಯದ ಸಾರಿಗೆ ವ್ಯವಸ್ಥೆ ಹೈಪರ್‌ಲೂಪ್‌ನ ಪರೀಕ್ಷಾರ್ಥ ಪ್ರಯೋಗ ನಡೆದಿತ್ತು. ಈ ಹಿಂದೆಯೂ ಇದರ ಪರೀಕ್ಷೆ ನಡೆದಿದ್ದರೂ, ಮೊನ್ನೆ ನಡೆದದ್ದು ಮೊದಲ ಮಾನವ ಸಹಿತ ಪ್ರಯೋಗವಾಗಿದ್ದರಿಂದ ಸಹಜವಾಗಿ ಕುತೂಹಲ ಹೆಚ್ಚಾಗಿತ್ತು.ಆದರೆ ಈ ವೇಗದ ಸಾರಿಗೆಯಲ್ಲಿಮೊದಲ ಭಾರತೀಯ ಪ್ರಯಾಣಿಸಿದ್ದು ಈಗ ಇಡೀ ವಿಶ್ವದ ಗಮನ ಸೆಳೆದಿದೆ.

ಪುಣೆಯ ಎಂಜಿನಿಯರ್ ತನಯ್ ಮಂಜ್ರೇಕರ್ ಅರ್ಧ ಕಿಲೋಮೀಟರ್ ದೂರದ ಕೊಳವೆಯಲ್ಲಿ ‘ಪಾಡ್‌’ ಎಂಬ 3.3 ಮೀ. ಸುತ್ತಳತೆಯ ಬೋಗಿಯೊಳಗೆ ಕೂತು ಪ್ರತಿ ಗಂಟೆಗೆ 171 ಕಿ.ಮೀ. ವೇಗದಲ್ಲಿ ಸಂಚರಿಸಿ ಸಂಭ್ರಮಿಸಿದ್ದು ಇಡೀ ವಿಶ್ವದ ಕುತೂಹಲ ಹೆಚ್ಚಿಸಿದೆ. ವರ್ಜಿನ್ ಹೈಪರ್‌ಲೂಪ್‌ನಲ್ಲಿ ಎಂಜಿನಿಯರ್ ಆಗಿರುವ ತನಯ್ ತಮ್ಮ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗದಲ್ಲಿ ವೇಗದ ಸಾರಿಗೆ ಅಳವಡಿಸುವ ಕುರಿತು ಈ ಹಿಂದೆ ‘ಪಿವಿ ವೆಬ್‌ ಎಕ್ಸ್‌ಕ್ಲೂಸಿವ್’‌ನಲ್ಲಿ (https://www.prajavani.net/technology/science/hyperloop-lightning-in-tunnel-766784.html) ಲೇಖನ ಪ್ರಕಟವಾಗಿತ್ತು. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಹೈಪರ್‌ಲೂಪ್‌ನಲ್ಲಿ ಮಾನವರ ಸುರಕ್ಷಿತ ಪ್ರಯಾಣದ ಪರೀಕ್ಷೆ ನಡೆದಿದ್ದು ಇದೇ ಮೊದಲು.

ವರ್ಜಿನ್ ಹೈಪರ್‌ಲೂಪ್‌ ಭಾರತದ ಮುಂಬೈ, ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳೊಂದಿಗೆ ಹೊಸ ಸಾರಿಗೆ ಕುರಿತು ಚರ್ಚಿಸಿ ಒಡಂಬಡಿಕೆ ಮಾಡಿಕೊಂಡಿದೆ. ಜಗತ್ತಿನ ಮೊದಲ ಹೈಪರ್‌ಲೂಪ್ ಅಳವಡಿಸಿಕೊಳ್ಳಲು ದುಬೈ ಈಗಾಗಲೇ ತುದಿಗಾಲಲ್ಲಿ ನಿಂತಿದೆ. ಆದರೆ ಅದಕ್ಕೂ ಮೊದಲುಲಾಸ್‌ವೆಗಾಸ್‌ನಲ್ಲಿರುವ ವರ್ಜಿನ್‌ ಹೈಪರ್‌ಲೂಪ್‌ನ ಪರೀಕ್ಷಾ ಟ್ರ್ಯಾಕ್‌ನಲ್ಲಿ ಮಾನವರ ಸುರಕ್ಷಿತ ಪ್ರಯಾಣದಿಂದಾಗಿ ಈ ನೂತನ ಸಾರಿಗೆ ವ್ಯವಸ್ಥೆ ಶೀಘ್ರದಲ್ಲಿ ಸಾಕಾರಗೊಳ್ಳುವ ನಿರೀಕ್ಷೆಗಳು ಹೆಚ್ಚಾಗಿವೆ.

ಮೊದಲ ಪ್ರಯಾಣದ ಅನುಭವ

ಮೊದಲ ಪ್ರಯಾಣದಲ್ಲಿ ವರ್ಜಿನ್ ಹೈಪರ್‌ಲೂಪ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ಸಹ ಸಂಸ್ಥಾಪಕ ಜೋಶ್ ಗೀಗೆಲ್‌ ಹಾಗೂ ಪ್ರಯಾಣಿಕರ ಅನುಭವ ವಿಭಾಗದ ಮುಖ್ಯಸ್ಥೆ ಸಾರಾ ಲೂಸಿಯಾನ್‌ ಪ್ರಯಾಣಿಸಿದರು. ನಂತರದ ತನಯ್ ಮಂಜ್ರೇಕರ್ ಅವರು ಪ್ರಯಾಣಿಸಿ ಇತಿಹಾಸ ಸೃಷ್ಟಿಸಿದರು. ನಂತರದಲ್ಲಿ ಸಂಚರಿಸಿದ ತನಯ್, ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.

ತನಯ್ ಪುಣೆಯ ವಿಶ್ವವಿದ್ಯಾಲಯದಿಂದಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಸದರನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಸದ್ಯ ವರ್ಜಿನ್ ಹೈಪರ್‌ಲೂಪ್‌ನಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಹೈಪರ್‌ಲೂಪ್‌ನ ಪರೀಕ್ಷಾರ್ಥ ಪ್ರಯೋಗದಲ್ಲಿ ಆಯ್ಕೆಯಾಗಿರುವ 40 ಜನರಲ್ಲಿ ತನಯ್ ಅಗ್ರ ಸ್ಥಾನದಲ್ಲಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ.

ವಿಮಾನದ ವೇಗ ಹಾಗೂ ರೈಲು ಪ್ರಯಾಣದ ಹಿತ ಎರಡನ್ನೂ ಒಳಗೊಂಡಿರುವ ಹೈಪರ್‌ಲೂಪ್ ವಾಸ್ತವದಲ್ಲಿ ಪ್ರತಿ ಗಂಟೆಗೆ 1200ಕಿ.ಮೀ. ವೇಗದಲ್ಲಿ ಸಂಚರಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ ಪರೀಕ್ಷಾರ್ಥ ಪ್ರಯೋಗದಲ್ಲಿ 171ಕಿ.ಮೀ. ವೇಗದಲ್ಲಿ ಚಲಿಸಿದೆ. ಪರೀಕ್ಷಾರ್ಥ ಪ್ರಯೋಗದಲ್ಲಿ 500 ಮೀಟರ್ ದೂರ ಕೇವಲ 15 ಸೆಕೆಂಡ್‌ಗಳಲ್ಲಿ ಪಾಡ್ ಪೂರ್ಣಗೊಳಿಸಿದೆ.

‘ಇಂಥದ್ದೊಂದು ಅವಕಾಶ ನನಗೆ ಸಿಗುವ ನಿರೀಕ್ಷೆಯೇ ಇರಲಿಲ್ಲ. ಈ ಐತಿಹಾಸಿಕ ಕ್ಷಣದಲ್ಲಿ ಆ ಮೊದಲ ಪ್ರಯಾಣವನ್ನು ನಾನು ಸಂಭ್ರಮಿಸಿದೆ. ಇಂಥದ್ದೊಂದು ತಂತ್ರಜ್ಞಾನ ಸಾಕಾರಗೊಳ್ಳುವ ಸಂದರ್ಭದಲ್ಲಿ ನಾನಿದ್ದೇನೆ ಎಂಬ ಸಂಭ್ರಮ ನನ್ನದು. ನನ್ನ ಹುಟ್ಟೂರಾದ ಪುಣೆಯಿಂದ ಮುಂಬೈಗೆ ಹೈಪರ್‌ಲೂಪ್ ಸಂಚರಿಸುವ ದಿನವನ್ನು ಎದುರುನೋಡುತ್ತಿದ್ದೇನೆ’ ಎಂದು ತನಯ್ ಹೇಳಿದ್ದಾರೆ.

3.3ಮೀ ಸುತ್ತಳತೆಯ ಕೊಳವೆಯೊಳಗಿನ ಪ್ರಯಾಣ

2012ರಲ್ಲಿ ಇಂಥದ್ದೊಂದು ಸಾರಿಗೆ ಕುರಿತು ಸ್ಪೇಸ್‌ಎಕ್ಸ್ ಕಂಪನಿ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದಾಗ ಇದೊಂದು ಕಾಲ್ಪನಿಕ ಎಂದು ನಂಬಿದವರೇ ಹೆಚ್ಚು. ಆದರೆ ಲಾಸ್‌ವೆಗಾಸ್‌ನ ಮರುಭೂಮಿಯಲ್ಲಿ ಇದು ಮೊನ್ನೆ ಸಾಕಾರಗೊಂಡಿದೆ. ಈ ಪರೀಕ್ಷಾರ್ಥ ಸಂಚಾರಕ್ಕಾಗಿಯೇ 3.3ಮೀ ಸುತ್ತಳತೆಯ ಪುಟ್ಟ ಪಾಡ್‌ ಅನ್ನು ಸಜ್ಜುಗೊಳಿಸಲಾಗಿತ್ತು. ಇದು ಮಾನವ ಸಂಚಾರಕ್ಕೂ ಮೊದಲು 400 ಬಾರಿ ಈ ಕೊಳವೆಯಲ್ಲಿ ಸಂಚರಿಸಿತ್ತು. 2017ರಲ್ಲಿ ಪ್ರತಿ ಗಂಟೆಗೆ 386 ಕಿ.ಮೀ. ವೇಗದಲ್ಲಿ ಪಾಡ್ ಸಂಚರಿಸಿ ದಾಖಲೆಯನ್ನೂ ಸೃಷ್ಟಿಸಿತ್ತು. ಭವಿಷ್ಯದಲ್ಲಿ ಹೈಪರ್‌ಲೂಪ್‌ ಪ್ರತಿ ಗಂಟೆಗೆ 1223 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ ಎಂದು ಗೀಗಲ್ ಹೇಳಿದ್ದಾರೆ.

‘ಸದ್ಯ ಪರೀಕ್ಷಾರ್ಥ ಎಕ್ಸ್‌ಪಿ–2 ಎಂಬ ‘ಪಾಡ್’ ಬಳಸಲಾಗುತ್ತಿದ್ದು, ಇದರಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬಹುದು. ಆದರೆ ಪ್ರಯಾಣಿಕ ಪಾಡ್ ಸಿದ್ಧಗೊಂಡ ನಂತರ ಅದರಲ್ಲಿ 23 ಪ್ರಯಾಣಿಕರು ಸಂಚರಿಸುವಂತೆ ಸಿದ್ಧಪಡಿಸಲಾಗುವುದು. ಇದರ ತೂಕ 2.5ಟನ್ ಇರಲಿದೆ. 15ರಿಂದ 18 ಟನ್ ಉದ್ದವಿರಲಿದೆ’ ಎಂದು ಗೀಗಲ್ ತಿಳಿಸಿದ್ದಾರೆ.

ಹೈಪರ್‌ಲೂಪ್‌ಗೆ ಕಾದಿದೆ ಬೆಂಗಳೂರು

ಈಗಾಗಲೇ‍ಪುಣೆ ಹಾಗೂ ಮುಂಬೈ ನಡುವಿನ 200 ಕಿ.ಮೀ. ದೂರವನ್ನು 25 ನಿಮಿಷಗಳ ಪ್ರಯಾಣಕ್ಕೆ ಇಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ದೆಹಲಿ, ಪಂಜಾಬ್ ಸರ್ಕಾರಗಳೂ ಹೈಪರ್‌ಲೂಪ್‌ ಅಳವಡಿಸಲು ತುದಿಗಾಲಲ್ಲಿ ನಿಂತಿವೆ.

ಕರ್ನಾಟಕ ಸರ್ಕಾರವೂ ಮೆಜೆಸ್ಟಿಕ್‌ನಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 10 ನಿಮಿಷಗಳಲ್ಲಿ ಪ್ರಯಾಣಿಸುವ ಯೋಜನೆಗೂ ಒಪ್ಪಂದ ಮಾಡಿಕೊಂಡಿದೆ. ಇಷ್ಟೇ ಏಕೆ, ಭವಿಷ್ಯದಲ್ಲಿ ಬೆಂಗಳೂರು ಹಾಗೂ ಮೈಸೂರು ನಡುವೆಯೂ ಹೈಪರ್‌ಲೂಪ್ ಸಂಚರಿಸುವ ಕುರಿತೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಕೊಳವೆಯೊಳಗೆ ಕಡಿಮೆ ಒತ್ತಡದಲ್ಲಿ ನಾಗಾಲೋಟದಲ್ಲಿ ಸಂಚರಿಸುವ ಹೈಪರ್‌ಲೂಪ್‌ ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಪುಣೆ–ಮುಂಬೈ ಮಾರ್ಗದ ಸಮೀಕ್ಷೆಯೂ ಪೂರ್ಣಗೊಂಡಿದೆ. ಟ್ರಾಫಿಕ್ ಜಂಜಾಟದಲ್ಲಿ ಕಂಗೆಟ್ಟಿರುವ ಬೆಂಗಳೂರಿಗರು ಇದರ ನಿರೀಕ್ಷೆಯಲ್ಲಿರುವುದಂತೂ ಸತ್ಯ. ಈ ಪರೀಕ್ಷಾರ್ಥ ಪ್ರಯೋಗ ಮತ್ತಷ್ಟು ನಿರೀಕ್ಷೆಯ ಗರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT