ಸೋಮವಾರ, ಜನವರಿ 25, 2021
17 °C

PV Web Exclusive: ಪ್ರೀ, ಪೋಸ್ಟ್‌ ವೆಡ್ಡಿಂಗ್‌ ಫೋಟೊಶೂಟ್‌ಗಳಿಗೆ ‘ಏಕೆ’ ವಿರೋಧ?

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಮದುವೆ ಎನ್ನುವುದು ವೈಯಕ್ತಿಕ ವಿಚಾರ. ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಮದುವೆ ದಿನವನ್ನು, ಮದುವೆಯ ಸಂಭ್ರಮವನ್ನು ಸ್ಮರಣೀಯವಾಗಿಸಿಕೊಳ್ಳಲು ಯಾರಾದರೂ ಬಯಸುವುದು ಸಹಜ. ಕೆಲವರು ತಮ್ಮ ಸ್ಮೃತಿಪಟಲದಲ್ಲಿ ಘನೀಕರಿಸಿಕೊಂಡರೆ, ಕೆಲವರು ಫೋಟೊ, ವಿಡಿಯೊಗಳ ಮೂಲಕ ಆ ನೆನಪನ್ನು ಸದಾ ಹಸಿರಾಗಿಟ್ಟುಕೊಳ್ಳಲು ಬಯಸುತ್ತಾರೆ.

ವಿವಾಹಪೂರ್ವ ಮತ್ತು ವಿವಾಹದ ನಂತರ ಫೋಟೊಶೂಟ್‌ಗಳು ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಟ್ರೆಂಡ್‌. 4–5 ವರ್ಷಗಳಿಂದ ಮದುವೆ ಸಂದರ್ಭದ ಹೊಸ ಸಂಪ್ರದಾಯವೆಂಬಂತೆ ಇದು ನಡೆಯುತ್ತಿದೆ. ಇದಕ್ಕಾಗಿಯೇ ಸಾಕಷ್ಟು ಹಣ ವೆಚ್ಚ ಮಾಡಲಾಗುತ್ತಿದೆ. ಫೋಟೊಶೂಟ್‌ಗಾಗಿ ಒಂದು ಪರಿಕಲ್ಪನೆ, ಅದಕ್ಕೆ ಹೊಂದುವ ಬಟ್ಟೆ–ಬರೆ, ಸುಂದರ ತಾಣದ ಆಯ್ಕೆಗಾಗಿ ₹ 80 ಸಾವಿರದಿಂದ ಲಕ್ಷದವರೆಗೂ ಖರ್ಚು ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದೊಂದು ದೊಡ್ಡ ಉದ್ಯಮವಾಗಿಯೂ ಬೆಳೆಯುತ್ತಿದೆ.

ಹೊಸತು ಎಂದ ಮೇಲೆ ಪರ–ವಿರೋಧದ ಚರ್ಚೆಗಳೂ ಇರುತ್ತವೆ. ಫೋಟೊಶೂಟ್‌ನ ಪರಿಕಲ್ಪನೆಯನ್ನೇ ಟೀಕಿಸುವವರಿದ್ದಾರೆ. ಉಡುಗೆಯ ಕಾರಣಕ್ಕಾಗಿ, ಒಳ್ಳೆಯ ಫೋಟೊಗಾಗಿ ಅಪಾಯ ಲೆಕ್ಕಿಸದೇ ಆಯಕಟ್ಟಿನ ಸ್ಥಳದಲ್ಲಿ ನಿಂತು ಕಾಲುಜಾರಿ ಪ್ರಾಣ ಕಳೆದುಕೊಂಡ ಸಂದರ್ಭಗಳಲ್ಲಿ, ನೆಲದ ಕಾನೂನನ್ನು ಪಾಲಿಸಿಲ್ಲ ಎನ್ನುವ ಕಾರಣಕ್ಕಾಗಿ ಫೋಟೊಶೂಟ್‌ಗಳು ವಿವಾದವನ್ನು ಸೃಷ್ಟಿಸಿವೆ. ‘ಫೋಟೊಶೂಟ್‌ ನಮ್ಮ ಧರ್ಮದ ಭಾಗವಲ್ಲ. ನಮ್ಮ ಸಂಪ್ರದಾಯವೂ ಅಲ್ಲ’ ಎನ್ನುತ್ತಾರೆ ಕೆಲವರು.

ವಿವಾಹ ನಿಶ್ಚಯಗೊಂಡಿರುವ ಜೋಡಿಗಳು ಅಪಾಯಕಾರಿ ಸ್ಥಳಗಳಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುವ ಸಾಹಸಕ್ಕೆ ಕೇಳಿಬರುವ ವಿರೋಧದಲ್ಲಿ ಅರ್ಥವೂ ಇದೆ. ಇನ್ನು ಕೆಲವು ಸಂದರ್ಭಗಳಲ್ಲಿ ತೀರಾ ವೈಯಕ್ತಿಯ ಎನಿಸುವಂಥ ಭಂಗಿಗಳಲ್ಲಿ ಫೋಟೊ ತೆಗೆಸಿಕೊಂಡು ಜಾಲತಾಣಗಳಲ್ಲಿ ಹಾಕುವವರು ಇದ್ದಾರೆ. ಇದಕ್ಕೆ ಬರುವ ಕಾಮೆಂಟ್‌ಗಳಿಂದ ನೊಂದು ಮಾನಸಿಕ ಹಿಂಸೆ ಅನುಭವಿಸಿದವರು ಇದ್ದಾರೆ.

ಐತಿಹಾಸಿಕ ತಾಣಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ಫೋಟೊಶೋಟ್‌ ಮಾಡಿಸಿಕೊಳ್ಳಲು ಹಲವರು ಇಷ್ಟಪಡುತ್ತಾರೆ. ‘ಐತಿಹಾಸಿಕ ಮಹತ್ವವುಳ್ಳ ಧಾರ್ಮಿಕ ಕ್ಷೇತ್ರದಲ್ಲಿ ಇತ್ತೀಚೆಗೆ ಫೋಟೊಶೂಟ್‌ ಒಂದು ನಡೆದಿತ್ತು. ದಂಪತಿ ಹತ್ತಿರ ನಿಂತುಕೊಂಡು, ಮುಖಕ್ಕೆ ಮುಖ ಕೊಟ್ಟ ಭಂಗಿಗಳಲ್ಲಿ ಫೋಟೊ ತೆಗೆಸಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೂ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಇದಕ್ಕೆ ಅನುಮತಿ ನೀಡಿದ ಧಾರ್ಮಿಕ ಕ್ಷೇತ್ರದ ವಿರುದ್ಧವೇ ಜಾಲತಾಣದಲ್ಲಿ ಟೀಕೆ ಕೇಳಿಬಂದಿತ್ತು. ನಂತರ ಆ ಕ್ಷೇತ್ರದವರು ಫೋಟೊಶೂಟ್‌ಗೆ ನಿರ್ಬಂಧ ಹೇರಿದ್ದರು’ ಎಂದು  ಸ್ನೇಹಿತರೊಬ್ಬರು ವಿವರಿಸಿದ್ದರು.

ಈ ಎರಡೂ ಸಂದರ್ಭಗಳಲ್ಲಿ ಒಂದೇ ಮಾನಸಿಕತೆಯ ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಗಳಿಂದ ಕೂಡಿದ ಪ್ರತಿಕ್ರಿಯೆಯನ್ನು ನೆಟ್ಟಿಗರು ನೀಡಿದ್ದಾರೆ. ‘ಫೋಟೊಶೂಟ್‌ ಮಾಡಿಸಿಕೊಂಡವರು ತಮಗೆ ಬೇಕಾದ ಭಂಗಿಯಲ್ಲಿ ಫೋಟೊ ತೆಗೆಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಅದಕ್ಕೆ ನಮ್ಮ ವಿರೋಧ ಇರಬಹುದು. ಆದರೆ ಬೆದರಿಕೆ ಹಾಕುವುದು, ಷೇರ್‌ ಮಾಡಿ ಕಮೆಂಟ್ ಬರೆಯುವುದು, ಮಾನಸಿಕ ಹಿಂಸೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಏಳುತ್ತದೆ. ನಮ್ಮ ಇತಿಹಾಸ ಪ್ರಸಿದ್ಧ ಹಲವು ದೇವಾಲಯಗಳ ಮೇಲೆ, ವಿವಿಧ ಲೈಂಗಿಕ ಭಂಗಿಯ ಚಿತ್ರಗಳನ್ನು ಕೆತ್ತಲಾಗಿದೆ. ಇದನ್ನು ಹೇಗೆ ಅರ್ಥೈಸುವುದು?

ಹಿಂದೆಲ್ಲ ಮದುವೆ ಅಂದರೆ ಒಂದು ವಾರದ ಸಂಭ್ರಮ. ಆದರೆ, ಈಗ ಒಂದು ಹೆಚ್ಚು ಅಂದರೆ, ಎರಡು ದಿನದಲ್ಲಿ ಮುಗಿದು ಹೋಗುತ್ತದೆ. ಎಷ್ಟೋ ಸಂಪ್ರದಾಯವನ್ನು ಪಾಲಿಸಲಾಗುತ್ತಿಲ್ಲ, ಕೆಲವನ್ನು ಸಾಂಕೇತಿಕ ರೂಪದಲ್ಲಿ ಮುಗಿಸಲಾಗುತ್ತಿದೆ. ಕಾಲಕಾಲಕ್ಕೆ ಬದಲಾವಣೆ ಚಲನಶೀಲತೆಯ, ಜೀವಂತಿಕೆಯ ಲಕ್ಷಣ.

ಛಾಯಾಗ್ರಾಹಕನ ಹೊಣೆ:

ಇತ್ತೀಚೆಗೆ ಹಂಪಿಯಲ್ಲಿ ಹಾಗೂ ಮಂಡ್ಯದಲ್ಲಿ ನಡೆದ ಘಟನೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನೆಲದ ಕಾನೂನನ್ನು ನಾವು ಗೌರವಿಸಲೇ ಬೇಕು. ಒಳ್ಳೆಯ ಫೋಟೊ ಬೇಕು ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವುದೂ ಹುಚ್ಚುತನವೇ ಸರಿ. ಈ ಘಟನೆಗಳಲ್ಲಿ ನಾವು ಕಲಿಯುವುದು ಬಹಳಷ್ಟಿದೆ. ಈ ರೀತಿಯ ಫೋಟೊಶೂಟ್‌ಗಳಲ್ಲಿ ಇಡಲಾಗುತ್ತಿರುವ ಹೆಜ್ಜೆಗಳ ಕುರಿತು ಪುತ್ತೂರಿನ ಶೋಭಾ ಡಿಜಿಟಲ್ಸ್‌ನ ರವಿ ಶೆಣೈ ಅವರು ಕೆಲವು ಪ್ರಮುಖ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇವರು ವೃತ್ತಿಯಲ್ಲಿ ಉಪನ್ಯಾಸಕ. ಹವ್ಯಾಸಿ ಛಾಯಾಗ್ರಾಹಕ ಕೂಡ. ಇವರು ಈ ರೀತಿಯ ಫೋಟೊಶೂಟ್‌ಗಳನ್ನು ಮಾಡುತ್ತಾರೆ.

‘ವಿವಾಹಪೂರ್ವ ಅಥವಾ ವಿವಾಹದ ನಂತರ ನಡೆಯುವ ಫೋಟೊಶೂಟ್‌ಗಳ ಜವಾಬ್ದಾರಿ ಫೋಟೊ ತೆಗೆಸಿಕೊಳ್ಳುವವರದ್ದು ಎಷ್ಟೋ, ಫೋಟೊ ತೆಗೆಯುವವರದ್ದೂ ಅಷ್ಟೇ ಇರುತ್ತದೆ. ನಮಗೆ ಈ ರೀತಿಯ ಫೋಟೊ ಬೇಕು ಎಂದು ಗ್ರಾಹಕರು ತಂದು ತೋರಿಸುತ್ತಾರೆ. ಆ ರೀತಿಯ ಫೋಟೊ ತೆಗೆಯುವುದು ಸುರಕ್ಷಿತವೋ ಅಲ್ಲವೋ, ಅದರ ಸಾಧಕ– ಬಾಧಕಗಳನ್ನು ಆಲೋಚಿಸಿ ಛಾಯಾಗ್ರಾಹಕರು ಅವರಿಗೆ ತಿಳಿಹೇಳಬೇಕು’ ಎನ್ನುತ್ತಾರೆ ಅವರು.

‘ದೋಣಿಯ ಮೇಲೆ ಫೋಟೊ ಬೇಕು ಎಂದು ಗ್ರಾಹಕರು ಹೇಳುತ್ತಾರೆ. ಛಾಯಾಗ್ರಾಹಕ ಕೂಡ ಒಪ್ಪಿಕೊಳ್ಳುತ್ತಾನೆ. ದೋಣಿಯಲ್ಲಿ ಸಾಗುವಾಗ ಜೀವರಕ್ಷಕ ಜಾಕೆಟ್‌ಗಳನ್ನು ಧರಿಸಬೇಕಾಗುತ್ತದೆ. ಆ ಸಮಯದಲ್ಲಿ ಛಾಯಾಗ್ರಾಹಕ, ‘ನೀವು ಇಷ್ಟು ಚಂದ ಸೀರೆ ಉಟ್ಟಿದ್ದೀರಿ, ಈ ಜಾಕೆಟ್‌ಗಳು ಆ ಅಂದವನ್ನು ಕೆಡಿಸುತ್ತವೆ. ಒಳ್ಳೆಯ ಫೋಟೊ ಬರುವುದಿಲ್ಲ ಎಂದರೆ ಹೇಗೆ? ಈ ರೀತಿ ಹೇಳಿದವರನ್ನೂ ನಾನು ಬಲ್ಲೆ’ ಎನ್ನುತ್ತಾರೆ ರವಿ.

‘ಯಾವುದೋ ಐತಿಹಾಸಿಕ ಕೇಂದ್ರಗಳಿಗೆ ಫೋಟೊ ತೆಗೆಯುವುದಕ್ಕೆ ಹೋಗಬೇಕು ಎನ್ನುವುದಾದರೆ, ಅದಕ್ಕೆ ಅನುಮತಿ ಪಡೆದುಕೊಳ್ಳಬೇಕೋ ಬೇಡವೋ, ನಿಯಮ ಏನಿದೆ, ಹಣ ಪಾವತಿ ಮಾಡಬೇಕೋ ಬೇಡವೋ, ಸಂರಕ್ಷಿತ ಅರಣ್ಯದಲ್ಲಿ ಫೋಟೊಶೂಟ್‌ ಮಾಡಬಹುದೋ, ಮಾಡಬಾರದೋ ಎನ್ನುವ ಸಾಮಾನ್ಯಜ್ಞಾನವನ್ನು ಒಬ್ಬ ವೃತ್ತಿಪರ ಛಾಯಾಗ್ರಾಹಕ ಅರಿತುಕೊಳ್ಳಬೇಕಾಗುತ್ತದೆ. ಕೇವಲ ಫೋಟೊ ತೆಗೆಯುವುದು ಮಾತ್ರ ಆತನ ಜವಾಬ್ದಾರಿ ಆಗಿರುವುದಿಲ್ಲ.’

‘ಗ್ರಾಹಕರು, ಛಾಯಾಗ್ರಾಹಕರು ಇಬ್ಬರಿಗೂ ತಮ್ಮ ಚಿತ್ರ ವೈರಲ್‌ ಆಗಬೇಕು, ನಾವು ಸಮಾಜದಲ್ಲಿ ಚರ್ಚೆ ಆಗಬೇಕು ಎನ್ನುವ ಹಂಬಲ ಇರುತ್ತದೆ. ಈ ಕಾರಣಕ್ಕಾಗಿಯೂ ವಿವಾದಾತ್ಮಕವಾಗಿ, ಸಾಹಸ ಮಾಡಿ ಫೋಟೊ ತೆಗೆಯಲು/ ತೆಗೆಸಿಕೊಳ್ಳಲು ಮುಂದಾಗುತ್ತಾರೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ವಿವಾಹಪೂರ್ವ ಅಥವಾ ವಿವಾಹದ ನಂತರದ ಫೋಟೊಶೂಟ್‌ಗಳು ವ್ಯಕ್ತಿಯ ವೈಯಕ್ತಿಕ ಆಸಕ್ತಿ, ವಿಚಾರಗಳಿಗೆ ಸಂಬಂಧಿಸಿದವು. ಇದನ್ನು ಧಾರ್ಮಿಕ ಕಣ್ಣಿನಿಂದ ನೋಡುವ ಅವಶ್ಯಕತೆ ಇಲ್ಲ.  ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಅದನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಅದಕ್ಕೆ ಒಂದು ಸಭ್ಯತೆಯ ಮಿತಿ ಇರುತ್ತದೆ.

ಹಾಗೆಯೇ, ಪ್ರಾಣ ಕಳೆದುಕೊಂಡು, ಕುಟುಂಬದವರಿಗೆ ನೋವುಂಟು ಮಾಡುವ ಸಾಹಸಕಾರ್ಯಕ್ಕೆ ಯಾರೂ ಕೈ ಹಾಕಬಾರದು. ಅಷ್ಟರ ಮಟ್ಟಿಗೆ ನಾವು ಎಚ್ಚರಿಕೆ ವಹಿಸಬೇಕು. ಈ ಎಲ್ಲ ಕಾರಣಕ್ಕಾಗಿ ಈ ರೀತಿಯ ಫೋಟೊಶೂಟ್‌ಗಳೇ ಬೇಡ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು