ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬೆಳಗಾವಿಯಲ್ಲಿ ‘ಕೆಂಪ್ನೀರಾಸ್ತ್ರ’ ಟ್ರೆಂಡ್!

ಮನೆಗಳ ಮುಂದೆ ಕೆಂಪು ನೀರಿನ ಬಾಟಲಿಗಳ ’ಪ್ರತಿಷ್ಠಾಪನೆ’
Last Updated 26 ನವೆಂಬರ್ 2020, 6:36 IST
ಅಕ್ಷರ ಗಾತ್ರ

ಬೆಳಗಾವಿ: ಬಾಯಿಯಿಂದ ಬಾಯಿಗೆ ಹರಡುವ ವಿಷಯ ಹೆಚ್ಚು ಹಬ್ಬುತ್ತದೆ. ಯಾರೋ ಒಬ್ಬರು ಮಾಡಿದ್ದನ್ನು ಇತರರೂ ಅನುಸರಿಸುತ್ತಾರೆ. ಅದು ‘ಟ್ರೆಂಡ್’ ಕೂಡ ಆಗುತ್ತದೆ. ಅಂಥಾದ್ದೇ ಒಂದು ಆಸಕ್ತಿಕರ ಬೆಳವಣಿಗೆ ಕುಂದಾನಗರಿ ಬೆಳಗಾವಿಯಲ್ಲಿ ಇತ್ತೀಚೆಗೆ ಗಮನಸೆಳೆಯುತ್ತಿದೆ. ಅದೇನೆಂದರೆ, ಬೀದಿ ನಾಯಿಗಳ ಉಪಟಳ ತಡೆಯಲು ಮಾಡುತ್ತಿರುವ ‘ಕೆಂಪ್ನೀರಾಸ್ತ್ರ’ ಬಳಕೆಯ ಪ್ರಯೋಗ.

ನಾಯಿಗಳು ಬಂದು ಬೊಗಳುತ್ತಾ ನಿಲ್ಲುವುದು ಮತ್ತು ‘ಗಲೀಜು’ ಮಾಡುವುದನ್ನು ತಪ್ಪಿಸಲು ಮನೆಗಳ ಎದುರು ಅಲ್ಲಲ್ಲಿ ಕೆಂಪು ನೀರು ತುಂಬಿದ ಬಾಟಲಿಗಳನ್ನು ಇಟ್ಟಿರುವುದು ಅಥವಾ ಕಟ್ಟಿರುವುದು ಇಲ್ಲಿ ಸಾಮಾನ್ಯವಾಗಿದೆ.

ಕುಂಕುಮವನ್ನು ನೀರಿನಲ್ಲಿ ಬೆರೆಸಿ, ಕಡುಗೆಂಪಾಗಿ ಕಾಣುವಂತೆ ಅಥವಾ ಪೆಟ್ರೋಲ್‌ನಂತೆ ಗೋಚರಿಸುವಂತೆ ಮಾಡಿ ನೀರಿನ ಬಾಟಲಿಗಳಲ್ಲಿ ತುಂಬಿ ಅದನ್ನು ಮನೆ ಮುಂದೆ ಇಡುತ್ತಾರೆ. ಕಾಂಪೌಂಡ್‌ಗೆ ಕಟ್ಟುವುದು ಕೂಡ ಕಂಡುಬರುತ್ತಿದೆ. ಆ ‘ಬಾಟಲಿ’ಗಳನ್ನು ನೋಡಿ ನಾಯಿಗಳು ಹೆದರಿ ಓಡುತ್ತವೆ. ಇದರಿಂದ ಅವುಗಳ ಉಪಟಳದಿಂದ ಪಾರಾಗಬಹುದು ಎನ್ನುವುದು ಜನರ ‘ನಂಬಿಕೆ’.

ಕೆಲವೆಡೆಯಿಂದ ಹಲವೆಡೆಗೆ

ಹಳೆಬೆಳಗಾವಿ ಪ್ರದೇಶದಲ್ಲಿ ಹೋದ ವರ್ಷ ಕಂಡು ಬಂದ ಈ ಪ್ರಯೋಗ, ಕ್ರಮೇಣ ನಗರದ ಬಹುತೇಕ ಬಡಾವಣೆಗಳಿಗೆ ವ್ಯಾಪಿಸಿದೆ. ಹೊರವಲಯದಲ್ಲೂ ಹಾಗೂ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲೂ ಹರಡಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಹೋಟೆಲ್‌ಗಳ ಮುಂದೆಯೂ ಕೆಂಪು ನೀರು ತುಂಬಿಸಿಟ್ಟ ಬಾಟಲಿಗಳ ‘ದರ್ಶನ’ವಾಗುತ್ತಿದೆ.

ಹೀಗೊಂದು ಪ್ರಯೋಗದ ‘ಸೃಷ್ಟಿಕರ್ತ’ ಯಾರು ಮತ್ತು ಖಚಿತವಾಗಿ ಎಲ್ಲಿಂದ ಹಬ್ಬಿತು ಎನ್ನುವುದು ಗೊತ್ತಿಲ್ಲ. ಆದರೆ, ಜನರು ಅದನ್ನು ಅನುಸರಿಸುತ್ತಿದ್ದಾರೆ!

ಈ ಪ್ರಯೋಗದ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಎನ್ನುವುದು ಪಶುವೈದ್ಯರ ಹೇಳಿದೆ. ಒಟ್ಟಿನಲ್ಲಿ, ಬೀದಿ ನಾಯಿಗಳು ನಮ್ಮ ಮನೆಗಳ ಮುಂದೆ ಬಂದು ‘ವಾತಾವರಣ ಹಾಳು’ ಮಾಡದಿದ್ದರಷ್ಟೇ ಸಾಕು ಎನ್ನುವುದು ಜನರ ಭಾವನೆ. ಸುಶಿಕ್ಷಿತರು, ಬಹುತೇಕ ಹೆಚ್ಚು ಶ್ರೀಮಂತರು ಇರುವ ಬಡಾವಣೆಗಳಾದ ಹನುಮಾನ್ ನಗರ, ಕುವೆಂಪು ನಗರ, ಸದಾಶಿವ ನಗರ, ಜಾಧವ ನಗರ ಮೊದಲಾದ ಕಡೆಗಳಲ್ಲೂ ನಾಯಿಗಳ ವಿರುದ್ಧವಾಗಿ ಈ ಬಾಟಲಿ ಅಸ್ತ್ರವನ್ನು ಪ್ರಯೋಗಿಸಲಾಗಿದೆ!

ಬೇರೆಡೆ ನೋಡಿದೆನೆಂದು...

‘ಕೆಲವು ಮನೆಗಳ ಬಳಿ ಹೀಗೆ ಬಾಟಲಿ ಇಟ್ಟಿದ್ದನ್ನು ಅಥವಾ ಕಟ್ಟಿದ್ದನ್ನು ಗಮನಿಸಿದ್ದೆ. ವಿಚಾರಿಸಿದಾಗ, ನಾಯಿಗಳು ಮನೆಗಳ ಬಳಿ ಬಾರದಂತೆ ತಡೆಯಲು ಹೀಗೆ ಮಾಡಿದ್ದಾರೆ ಮತ್ತು ಬಾಟಲಿಯ ಪ್ರತಿಫಲನಕ್ಕೆ ಹೆದರಿ ಓಡುತ್ತವೆ ಎಂದು ತಿಳಿದುಬಂದಿತು. ಹೀಗಾಗಿ, ನಾವೂ ಒಂದೆರಡು ಬಾಟಲಿಗಳನ್ನು ಇಟ್ಟಿದ್ದೇವೆ. ಬಳಿಕ ನಾಯಿಗಳ ಉಪಟಳ ತಕ್ಕಮಟ್ಟಿಗೆ ತಗ್ಗಿದೆ’ ಎಂದು ಸದಾಶಿವ ನಗರದ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದರು.

‘ಯಾರೋ ಹೇಳಿದರೆಂದು ನಾವೂ ಮನೆಗಳ ಎದುರು ಬಾಟಲಿ ಇಟ್ಟಿದ್ದೇವೆ. ಆದರೆ, ನಾಯಿಗಳು ಬರುವುದೇನೂ ನಿಂತಿಲ್ಲ’ ಎಂದು ಶಾಹೂನಗರದ ನಿವಾಸಿ ಲೋಕಯ್ಯ ಹೇಳಿದರು.

ಮನೆಗಳ ಮುಂದಷ್ಟೇ ಏಕೆ? ಕೆಲವು ಸರ್ಕಾರಿ ಕಚೇರಿಗಳ ಮುಂದೆಯೂ ಹೀಗೆ ಬಾಟಲಿ ಪ್ರತಿಷ್ಠಾಪಿಸಿದ್ದಾರೆ! ಕಾಲೇಜು ರಸ್ತೆಯಲ್ಲಿರುವ ಪಶುಸಂಗೋಪನಾ ಇಲಾಖೆ ಆವರಣದಲ್ಲೂ ಅಲ್ಲಿನ ಸಿಬ್ಬಂದಿ ಬಾಟಲಿ ಇಟ್ಟಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶು ವೈದ್ಯ ಡಾ.ಶಶಿಧರ ನಾಡಗೌಡ, ‘ಹೀಗೆ ಬಾಟಲಿಯಲ್ಲಿ ಕೆಂಪು ನೀರು ತುಂಬಿಸಿಟ್ಟರೆ, ಅದನ್ನು ನೋಡಿ ನಾಯಿಗಳು ಹೆದರಿ ಓಡುತ್ತವೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಇದೆಲ್ಲವೂ ಜನರ ನಂಬಿಕೆಯಷ್ಟೆ. ಮೂಢನಂಬಿಕೆ ಅಥವಾ ತಪ್ಪುಗ್ರಹಿಕೆ ಎನ್ನಲೂಬಹುದು. ಅದರಿಂದ ಒಳಿತಾಗಿದೆ ಎಂದು ಜನರು ಭಾವಿಸಿದರೆ ಒಳ್ಳೆಯದೇ ಅಲ್ಲವೇ? ಎನ್ನುತ್ತಾರೆ ಅವರು.

ಇದಕ್ಕೇ ಹೇಳುವುದು– ಜನ ಮರುಳೋ, ಜಾತ್ರೆ ಮರುಳೋ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT