ಮಂಗಳವಾರ, ಮೇ 18, 2021
30 °C

ಕನ್ನಡವನ್ನು ನೆತ್ತಿಯ ಮೇಲಿಟ್ಟು ಮೆರೆಸಿದ ‘ಜೀವಿ’

ಎಚ್‌.ಎಸ್‌. ವೆಂಕಟೇಶಮೂರ್ತಿ Updated:

ಅಕ್ಷರ ಗಾತ್ರ : | |

ಜಿ.ವಿ. ಎಂಬ ಸಂಕ್ಷಿಪ್ತನಾಮದಿಂದ ಲೋಕಪ್ರಿಯರಾದ ಗಂಜಾಮ್ ವೆಂಕಟಸುಬ್ಬಯ್ಯನವರು (23.8.1913- 19.4.2021) ಈಗ ನಮ್ಮೊಂದಿಗೆ ಭೌತಿಕವಾಗಿ ಇಲ್ಲ ಎನ್ನುವುದು ನಮ್ಮಂಥ ಅವರ ಅಭಿಮಾನಿಗಳಿಗೆ ನುಂಗಲಾಗದ ತುತ್ತು. ಪಾಂಡಿತ್ಯ ಮತ್ತು ರಸಿಕತೆಯ ಸಂಗಮವಾಗಿದ್ದ ಶ್ರೀಯುತರು, ದಾರಿ ಮುಗಿಯಿತು ಎನ್ನಿಸಿದಾಗಲೆಲ್ಲ, ಕೈ ಮರದಂತೆ ನಮಗೆ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲಿ ದಿಕ್ಕು ತೆರೆಯುತ್ತಿದ್ದವರು. 108 ವರ್ಷಗಳ ತುಂಬು ಜೀವನ ನಡೆಸಿ ಈಗ ಇಹಲೋಕಕ್ಕೆ ವಿದಾಯ ಹೇಳಿ ಕಂಡರಿಯದ ಹೊಸ ಲೋಕದ ಅನ್ವೇಷಣೆಗೆ ಹೊರಟಿದ್ದಾರೆ.


ಎಚ್‌.ಎಸ್‌. ವೆಂಕಟೇಶಮೂರ್ತಿ

ಶತಪುರುಷರಾದ ಜಿ.ವಿ. ಕೊನೆಯವರೆಗೂ ತಮ್ಮ ಮನಸ್ಸು, ಬುದ್ಧಿ, ನೋಟಗಳನ್ನು ನಿಚ್ಚಳವಾಗಿ ಇಟ್ಟುಕೊಂಡವರು. ಜೀವನೋತ್ಸಾಹವನ್ನು ಕಿಂಚಿತ್ತೂ ಕಳೆದುಕೊಳ್ಳದವರು. ಅವರನ್ನು ನೋಡಲು ಹೋದಾಗಲೆಲ್ಲಾ ಅವರ ಮೇಜಿನ ಮೇಲೆ ಕನ್ನಡದ ಅನೇಕ ಹೊಸ ಕೃತಿಗಳು ಕಾಣುತ್ತಾ ಇದ್ದವು. ಪ್ರತಿದಿನವೂ ಒಂದಲ್ಲ ಒಂದು ಹೊಸ ಪುಸ್ತಕದ ಮೇಲೆ ಕಣ್ಣಾಡಿಸದೆ ಅವರು ವಿಶ್ರಾಂತಿ ತೆಗೆದುಕೊಳ್ಳುವವರಲ್ಲ.

ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಅಪಾರ ವಿದ್ವತ್ತು ಗಳಿಸಿದ್ದ ಜಿ.ವಿ. ತೆಲುಗು ಮೊದಲಾದ ಭಾಷೆಗಳಲ್ಲೂ ಪ್ರವೇಶವುಳ್ಳವರಾಗಿದ್ದರು. ಹೆಚ್ಚು ಕಮ್ಮಿ ಅವರು ತಮ್ಮ ಜೀವಿತದ  ನೂರು ವರ್ಷಗಳನ್ನೇ ಸಾಹಿತ್ಯಾಧ್ಯಯನ ಮತ್ತು ಗ್ರಂಥರಚನೆಗೆ ವಿನಿಯೋಗಿಸಿದ್ದಾರೆ. ಶಬ್ದ ಜೀವಿಯಾದ ಜೀವಿಯವರು ಶಬ್ದಕೋಶಗಳ ರಚನೆಗೆ ದಶಕಗಳನ್ನೇ ವಿನಿಯೋಗಿಸಿದ್ದಾರೆ. ಗ್ರಂಥ ಸಂಪಾದನೆ, ಸಂಶೋಧನೆ, ವಿಮರ್ಶೆ ಮತ್ತು ನಿರಂತರ ಓದು ಜಿ.ವಿ. ಅವರ ಪ್ರಧಾನ ಆಸಕ್ತಿಗಳು. ಮಕ್ಕಳ ಸಾಹಿತ್ಯ ರಚನೆಯಲ್ಲೂ ಶ್ರೀಯುತರು ಕೆಲಸ ಮಾಡಿದ್ದಾರೆ.

ತಮ್ಮ ಗುರುಗಳಾದ ಎ.ಆರ್. ಕೃಷ್ಣಶಾಸ್ತ್ರಿಗಳ ಸೂಚನೆಯಂತೆ ಶಬ್ದಕೋಶ ರಚನೆಯಲ್ಲಿ ಆಸಕ್ತಿ ವಹಿಸಿದ್ದ ಜಿ.ವಿ. ತಮ್ಮ ನಿವೃತ್ತಿಯ ನಂತರ ದಶಕಗಳ ಕಾಲ ತಮ್ಮ ಸಂಗಡಿಗರೊಂದಿಗೆ ಶ್ರಮಿಸಿ ನಾವೆಲ್ಲ ಹೆಮ್ಮೆಪಡಬಹುದಾದ ಎಂಟು ಸಂಪುಟಗಳ, ಒಟ್ಟು 10,000ಕ್ಕೂ ಹೆಚ್ಚು ಪುಟಗಳ, ಕನ್ನಡ ಶಬ್ದಕೋಶ ರಚನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಮುಗಿಸಿಕೊಟ್ಟಿದ್ದನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಈ ಪ್ರಕಟಣೆ, ಜಿ.ವಿ. ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಮರಗೊಳಿಸುವ ಆಚಾರ್ಯ ಕೃತಿ. ಹೀಗಾಗಿಯೇ ರೆ.ಫಾ.ಕಿಟ್ಟೆಲ್ ನಂತರ ಪ್ರೊ.ಮರಿಯಪ್ಪ ಭಟ್ಟರು, ಜಿ.ವಿ. ಅಂತಹವರ ಹೆಸರು ನಮಗೆ ಮುಖ್ಯವಾಗುವುದು.

ಪಾಂಡಿತ್ಯದ ಪ್ರವಾಹವನ್ನು ಲೋಕೋಪಯೋಗಿಯಾಗುವಂತೆ ಕಿರುಗಾಲುವೆಗಳ ಮೂಲಕ  ಜನಸಾಮಾನ್ಯರ ನಿತ್ಯ ಕೃಷಿಗೆ ಹಾಯಿಸಿದ್ದು ಜಿ.ವಿ. ಅವರ ಮಹತ್ವ. ‘ಇಗೋ ಕನ್ನಡ’ ಎಂಬ, ಅವರು ‘ಪ್ರಜಾವಾಣಿ’ ಪತ್ರಿಕೆಗೆ ಬರೆದ ಕಾಲಂಗಳು ಈಗ ಮೂರು ಬೃಹತ್ ಸಂಪುಟವಾಗಿ ಪ್ರಕಟಗೊಂಡಿವೆ. ‘ಇಗೋ ಕನ್ನಡ’ ಕಾಲಂ ಪ್ರಕಟವಾಗುತ್ತಿದ್ದ ಕಾಲದಲ್ಲಿ ಅದರ ಜನಪ್ರಿಯತೆ ಬೆರಗುಹುಟ್ಟಿಸುವಂತಿತ್ತು. ನಾವು ನಿತ್ಯವೂ ಬಳಸುವ ನಮ್ಮ ತಾಯ್ನುಡಿಯ ಬಗ್ಗೆ ನಮ್ಮ ಅರಿವು ಹಿಗ್ಗುವಂತೆ ತಿಳಿಯಾಗಿ ಜಿ.ವಿ. ಆ ಕಾಲಮ್ಮಿನಲ್ಲಿ ಬರೆಯುತ್ತಿದ್ದರು. ನಮ್ಮ ಮಾತೃಭಾಷೆಯ ಬಗ್ಗೆ ನಮ್ಮ ಆಸಕ್ತಿ ಕುದುರಿಸುವ ಕೆಲಸವನ್ನು ‘ಇಗೋ ಕನ್ನಡ’ ಕಾಲಂ ಅದ್ಭುತವಾಗಿ ಮಾಡಿತು. ಗ್ರಂಥರೂಪದಲ್ಲಿ ಈಗಲೂ ಮಾಡುತ್ತಿದೆ.

ನಾನು 2000ರಲ್ಲಿ ನಿವೃತ್ತನಾದ ಮೇಲೆ ಜಿ.ವಿ. ಅವರೊಂದಿಗೆ ನನ್ನ ಒಡನಾಟವೂ ಹೆಚ್ಚಾಯಿತು. ಆಗಲೇ ಜಿ.ವಿ. ಅವರ ಕಾವ್ಯ ಪ್ರೀತಿ, ಸಾಹಿತ್ಯ ರಸಿಕತೆ ನನಗೆ ಮನದಟ್ಟಾದದ್ದು.  ಜಿ.ವಿ. ಅವರ ಮನೆಯಲ್ಲಿ ಅವರ ಅಭ್ಯಾಸದ ಕೋಣೆಯಲ್ಲಿ ಕಾಲಿಡಲು ತೆರಪಿಲ್ಲವೆನ್ನುವಷ್ಟು ಕೃತಿಗಳು. ಬರೆಯುವುದು ಮತ್ತು ಓದುವುದು ಜಿ.ವಿ.ಗೆ ಉಸಿರಾಟದಷ್ಟು ಸಹಜ ಮತ್ತು ಅನಿವಾರ್ಯ. ಸಾವಿರಾರು ಪುಟಗಳ ಸಾಹಿತ್ಯ ರಚನೆ ಅವರಿಗೆ ಸಾಧ್ಯವಾದದ್ದು ಅವರ ಈ ಬಗೆಯ ಶಿಸ್ತಿನಿಂದ.

ಬೆಳಿಗ್ಗೆ ನಾಲ್ಕಕ್ಕೆ ಅವರ ದಿನಚರಿ ಪ್ರಾರಂಭ. ವ್ಯಾಸಂಗ, ಬರವಣಿಗೆ, ವಾಕಿಂಗು, ಐದಾರು ಪತ್ರಿಕೆಗಳ ಓದು, ಲಘು ಉಪಹಾರ, ಅಭಿಮಾನಿಗಳೊಂದಿಗೆ ಮಾತುಕತೆ, ಮನೆಯವರೊಂದಿಗೆ ವಿನೋದ, ಮಧ್ಯಾಹ್ನ ವಿಶ್ರಾಂತಿ, ಸಂಜೆ ಮತ್ತೆ ಅಭಿಮಾನಿಗಳೊಂದಿಗೆ ಮಾತುಕತೆ, ವಿದ್ವಾಂಸರೊಂದಿಗೆ ವಿಚಾರ ವಿನಿಮಯ... ಇದು ಯಾವತ್ತೂ ತಪ್ಪದ ದಿನಚರಿ. ಅವರದ್ದು ಸರಳ ಸುಂದರ ಬದುಕಿನ ಕ್ರಮ. ಬೆಳ್ಳನೆಯ ಅರೆತೋಳಂಗಿ, ಮುಂಡು ಪಂಚೆ. ನಡೆ ನುಡಿ ಎಲ್ಲದರಲ್ಲೂ ಶುಚಿ ರುಚಿ. ಓದುವಾಗ ಕನ್ನಡಕದ ಅಗತ್ಯವಿಲ್ಲ. ಉಚ್ಚರಣೆ ಸ್ಪಷ್ಟ, ಶುದ್ಧ, ಅಸ್ಖಲಿತ. ಅವರದ್ದು ಸ್ವಲ್ಪ ಮೆಲುದನಿಯೇ ಅದರೆ ಅದರ ಖಾಚಿತ್ಯ ಅಸಾಮಾನ್ಯ.

ಜಿ.ವಿ. ಅವರನ್ನು ನೋಡುವ ಮುನ್ನ ನಾನು ಅವರ ಮಗ ಜಿ.ವಿ.ಅರುಣ ಅವರನ್ನು ಸಂಪರ್ಕಿಸುತ್ತಿದ್ದೆ. ಅವರು ಜಿ.ವಿ. ಅವರೊಂದಿಗೆ ಮಾತಾಡಿ, ನಾಲಕ್ಕು ಗಂಟೆಗೆ ಬನ್ನಿ ಎಂದರೆ ಅದು ನಾಲಕ್ಕು ಗಂಟೆಯೇ. ಯಥಾಪ್ರಕಾರ ಜಿ.ವಿ. ತಮ್ಮ ಸರಳ ಶ್ವೇತ ಉಡುಪಿನಲ್ಲಿ ಸಿದ್ಧರಾಗಿ ಸೋಫಾದಲ್ಲಿ ಕಾಲ್ಚಾಚಿ ಕೂತಿ ರುವರು. ಓಹೋ! ಎಚ್ಚೆಸ್ವಿ, ಬನ್ನಿ ಬನ್ನಿ -ಎಂದು ಸ್ವಾಗತಿಸುವರು.

ಮತ್ತೇನು ಬರೆದಿರಿ ಎನ್ನುವುದು ಅವರ ಮೊದಲ ಪ್ರಶ್ನೆ. ನಾನು ಹಸ್ತಪ್ರತಿ ಕೊಟ್ಟು, ಎಲ್ಲಾ ಓದಿ ಕಣ್ಣಿಗೆ ಆಯಾಸ ಮಾಡಿಕೊಳ್ಳಬೇಡಿ... ಸುಮ್ಮನೆ ಕಣ್ಣು ಹಾಯಿಸಿ, ಸಾಕು. ಶ್ರೀರಾಮಚರಣ ಎನ್ನುವ ಸಂಗ್ರಹ ರಾಮಾಯಣದ ಈ ಅನುವಾದವನ್ನು ನಾನು ನಿಮಗೇ ಅರ್ಪಿಸುತ್ತಿರುವೆನು ಎಂದರೆ ಜಿ.ವಿ. ಕಣ್ಣರಳಿಸುವರು. ನೀವು ಮುನ್ನುಡಿಯೋ ಬ್ಲರ್ಬೋ ಕೇಳುವಿರಿ ಅಂದುಕೊಂಡಿದ್ದೆ! ನನಗೇ ಪುಸ್ತಕ ಅರ್ಪಿಸುತ್ತಿರುವಿರಲ್ಲ! ತುಂಬ ಸಂತೋಷ -ಎಂದು ಜಿ.ವಿ. ಮೃದುವಾಗಿ ನಗುವರು. ಎರಡು ದಿನದ ನಂತರ ಮುಂಜಾನೆಯೇ ಅರುಣ ಅವರ ಫೋನ್. ಎಚ್ಚೆಸ್ವೀ.... ತಂದೆ ನಿಮಗೆ ಮಾತಾಡುವರು. ಈಗ ಜಿ.ವಿ. ಧ್ವನಿ ಸ್ಪಷ್ಟವಾಗಿ ಫೋನಿನಲ್ಲಿ. ತಾವು ಪೂರ್ಣವಾಗಿ ರಾಮಚರಣ ಓದಿದ್ದನ್ನು, ಸಂತೋಷಪಟ್ಟಿದ್ದನ್ನು ಕೆಲವೇ ಮಾತಲ್ಲಿ, ಅಭಿಮಾನ ತುಂಬಿದ ದನಿಯಲ್ಲಿ ಜಿ.ವಿ. ವಿವರಿಸುವರು. ಇದು 107ರಲ್ಲೂ ಅವರು ಬದುಕಿದ ಜೀವನಕ್ರಮ.

ತಮ್ಮ ತಂದೆ-ತಾಯಿಯಂತೆ ಜಿ.ವಿ. ಕೂಡ ದೀರ್ಘಾಯುಗಳು. ತಮ್ಮ ನಿಡಿದಾದ ಬದುಕನ್ನು ಸಾರ್ಥಕವಾಗಿ ಭಾಷೆ-ಸಾಹಿತ್ಯದ ಏಳಿಗೆಗೆ ಧಾರೆ ಎರೆದವರು! ವಿದ್ಯಾರ್ಥಿಗಳು, ಅಧ್ಯಾಪಕರು, ವಿದ್ವಾಂಸರು, ಭಾಷಾಭಿಮಾನಿಗಳು… ಜಿ.ವಿ.ಗೆ ಮಾತಾಡಿ ತಮ್ಮ ಸಂದೇಹ ಕಳೆದುಕೊಳ್ಳುವರು! ಆ ಗುಂಪಿನಲ್ಲಿ ನಾನೂ ಒಬ್ಬ! ಆದರೆ ಜಿ.ವಿ. ಅನ್ನುತ್ತಾರೆ: ಇದೆಲ್ಲಾ ನನ್ನ ಗುರುಗಳ ಮಾರ್ಗದರ್ಶನದ ಫಲ. ನನಗೆ ಭಾಷಾವಿಜ್ಞಾನದಲ್ಲಿ ಇಷ್ಟು ಆಳವಾದ ಆಸಕ್ತಿ ಮೂಡಿಸಿದವರು ನನ್ನ ಗುರುಗಳಾದ ಟಿ.ಎಸ್.ವೆಂಕಣ್ಣಯ್ಯ, ತೀ.ನಂ.ಶ್ರೀ, ಡಿ.ಎಲ್.ನರಸಿಂಹಾಚಾರ್, ಎ.ಆರ್.ಕೃಷ್ಣಶಾಸ್ತ್ರಿ, ರಾ.ಅನಂತ ಕೃಷ್ಣಶರ್ಮ ಮುಂತಾದವರು.

ಕನ್ನಡ ಭಾಷೆಗೆ ಅಳಿವಿಲ್ಲ ಎಂದು ವಿಶ್ವಾಸ ತುಂಬಿದ ಕಂಠದಲ್ಲಿ ಜಿ.ವಿ. ಅದೆಷ್ಟು ಸಾರಿ ಘೋಷಿಸಿದ್ದಾರೋ! ಜಗತ್ತಿನಲ್ಲಿ ಬಹುಸಂಖ್ಯೆಯಲ್ಲಿ ಜನರು ಮಾತಾಡುವ 26 ಭಾಷೆಗಳಲ್ಲಿ ಕನ್ನಡವೂ ಒಂದು ಎನ್ನುವಾಗ ಅಭಿಮಾನದಿಂದ ಜಿ.ವಿ. ಕಣ್ಣುಗಳು ಥಳಗುಟ್ಟುತ್ತಿದ್ದವು. ಆ ಥಳಗುಡುವ ಕಣ್ಣುಗಳನ್ನು ನಾನು ಯಾವತ್ತೂ ಮರೆಯಲಾರೆ.

(ಲೇಖಕ: ಹಿರಿಯ ಕವಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು