ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಇಂಗ್ಲೆಂಡ್ ನೆಲದಲಿ ಗೆಲುವಿನ ಸುಖ

ಕ್ರಿಕೆಟ್ ಜನಕರ ನಾಡಿನಲ್ಲಿ ಕೊಹ್ಲಿ ಬಳಗವು ಟೆಸ್ಟ್ ಕ್ರಿಕೆಟ್ ಸರಣಿ ಜಯದ ಹೊಸ್ತಿಲಿಗೆ ಬಂದು ನಿಂತಿದೆ
Last Updated 7 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲಿಯೇ ಮಣಿಸುವ ಸಂತೋಷಕ್ಕೆ ಬೆಲೆ ಕಟ್ಟಲಾಗದು.

ಐವತ್ತು ವರ್ಷಗಳ ಹಿಂದೆ ಅಂತಹದೊಂದು ಅವಿಸ್ಮರಣೀಯ ವಿಜಯ ಸಾಧಿಸಿದ್ದು ಅಜಿತ್ ವಾಡೇಕರ್ ಬಳಗ. ಮೊದಲ ಬಾರಿಗೆ ಇಂಗ್ಲೆಂಡ್ ತಂಡದ ವಿರುದ್ಧ ಅದರ ನೆಲದಲ್ಲಿಯೇ ಸರಣಿ ಗೆದ್ದಿತ್ತು. ಅದಾಗಿ 15 ವರ್ಷಗಳ ನಂತರ ಕಪಿಲ್‌ ದೇವ್ ಪಡೆಯು ಸರಣಿ ಗೆಲುವಿನ ಸಂತಸ ಆಚರಿಸಿತ್ತು. ಇದೀಗ ವಿರಾಟ್ ಕೊಹ್ಲಿ ಬಳಗವೂ ಅಂತಹದೊಂದು ಐತಿಹಾಸಿಕ ಜಯದ ಹೊಸ್ತಿಲಲ್ಲಿ ಬಂದು ನಿಂತಿದೆ. ಸೋಮವಾರವಷ್ಟೇ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿದೆ. ಗಣೇಶ ಚತುರ್ಥಿಯಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಕೊನೆಯ ಪಂದ್ಯ ಡ್ರಾ ಆದರೂ ಸಾಕು ಭಾರತಕ್ಕೆ ಕಿರೀಟ ಖಚಿತ. ಆದರೆ ಆತಿಥೇಯರು ಗೆದ್ದುಬಿಟ್ಟರೆ ಸಮಬಲ ಸಾಧನೆಯಷ್ಟೇ.

ಫಲಿತಾಂಶ ಏನೇ ಇರಲಿ. ಈ ಸರಣಿಯ ಪಂದ್ಯಗಳಲ್ಲಿ ಒಲಿ ರಾಬಿನ್ಸನ್, ಜಿಮ್ಮಿ ಆ್ಯಂಡರ್ಸನ್, ಕ್ರಿಸ್ ವೋಕ್ಸ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಅವರಂತಹ ವೇಗದ ಬೌಲರ್‌ಗಳು ವಿಕೆಟ್‌ ಉರುಳಿಸಿದ ರೀತಿ ನೋಡಿದಾಗ ಒಂದು ಪ್ರಶ್ನೆ ಕಾಡಿತು. ಇದೇ ನೆಲದಲ್ಲಿ 1971ರಲ್ಲಿ ಕನ್ನಡಿಗ, ಸ್ಪಿನ್ ಗಾರುಡಿಗ ಬಿ.ಎಸ್. ಚಂದ್ರಶೇಖರ್ ಯಶಸ್ವಿಯಾಗಿದ್ದು ಹೇಗೆ ಎಂಬುದೇ ಆ ಪ್ರಶ್ನೆ. ಲಾಗಾಯ್ತಿನಿಂದಲೂ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಪಿಚ್‌ಗಳೆಂದರೆ ವೇಗಿಗಳ ಸ್ವರ್ಗ. ತಲೆಗಪ್ಪಳಿಸುವ ಬೌನ್ಸರ್‌ಗಳು, ಕಾಲಬುಡದಲ್ಲಿ ನುಗ್ಗಿಬರುವ ಯಾರ್ಕರ್‌ಗಳದ್ದೇ ದರ್ಬಾರು. ಅಂತಹ ಪಿಚ್‌ನಲ್ಲಿ ಅಂದು ಚಂದ್ರಶೇಖರ್ ಆರು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡು, ಭಾರತದ ಮಡಿಲಿಗೆ ಸರಣಿ ಜಯದ ಕಾಣಿಕೆ ನೀಡಿದ್ದರು.

ಕಳೆದ ಐದು ದಶಕಗಳಲ್ಲಿ ಲಂಡನ್‌ನ ಥೇಮ್ಸ್‌ ನದಿಯಲ್ಲಿ ಬಹಳಷ್ಟು ನೀರು ಹರಿದುಹೋಗಿದೆ. ಅದೇ ರೀತಿ ಕ್ರಿಕೆಟ್‌ನಲ್ಲಿಯೂ ಬದಲಾವಣೆಗಳು ನಿರಂತರವಾಗಿ ಆಗುತ್ತಿವೆ. ಆದರೆ, ಇಂಗ್ಲೆಂಡ್ ಇಂದಿಗೂ ತನ್ನ ವೇಗದ ಬೌಲರ್‌ಗಳನ್ನೇ ನೆಚ್ಚಿಕೊಂಡಿದೆ. ಹಾಗಾಗಿ ಹಸಿರುಕ್ಕುವ ಪಿಚ್‌ಗಳ ಮೇಲೆ ಆತಿಥ್ಯ ನೀಡುತ್ತದೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಸಿತು. ನಾಲ್ಕು ಪಂದ್ಯಗಳಲ್ಲಿ ಒಟ್ಟು 133 ವಿಕೆಟ್‌ಗಳು ಪತನಗೊಂಡಿವೆ. ಅದರಲ್ಲಿ ಸ್ಪಿನ್ನರ್‌ಗಳಿಗೆ ದಕ್ಕಿದ್ದು 13 ಮಾತ್ರ!

ಆದರೆ ವಿರಾಟ್ ಪಡೆಯು ಆತಿಥೇಯರಿಗೆ ತಿರುಮಂತ್ರವನ್ನು ಹಾಕಿತು. ಸ್ಪಿನ್ನರ್‌ಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡದೇ ತನ್ನ ಮಧ್ಯಮವೇಗಿಗಳ ಮೇಲೆ ವಿಶ್ವಾಸವಿಟ್ಟ ಭಾರತ ತಂಡದ ವ್ಯವಸ್ಥಾಪನ ಸಮಿತಿ ಸೈ ಎನಿಸಿಕೊಂಡಿತು. ಸರಣಿಯ ಒಂದೂ ಪಂದ್ಯದಲ್ಲಿ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕಣಕ್ಕಿಳಿಸಿಯೇ ಇಲ್ಲ. ಅವಕಾಶ ಪಡೆದ ಏಕೈಕ ಸ್ಪಿನ್ನರ್ ರವೀಂದ್ರ ಜಡೇಜ ಬೌಲಿಂಗ್‌ಗಿಂತ ಹೆಚ್ಚು ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ.

ಅಶ್ವಿನ್‌ಗೆ ಅವಕಾಶ ಕೊಡಬೇಕಿತ್ತು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಲೇ ಇದೆ. ಆದರೆ ತಂಡದ ಆಡಳಿತ ತಲೆಕೆಡಿಸಿಕೊಂಡಿಲ್ಲ. ಪ್ರತೀ ಪಂದ್ಯದಲ್ಲಿಯೂ ನಾಲ್ವರು ಮಧ್ಯಮ ವೇಗಿಗಳನ್ನು ಕಣಕ್ಕಿಳಿಸಿದೆ. ಅದಕ್ಕೆ ತಕ್ಕಂತೆ ಗೆಲುವು ಕೂಡ ಒಲಿದಿದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಬೌಲರ್‌ಗಳು ‘ಬಾಲಂಗೋಚಿ’ ಎಂಬ ಉಡಾಫೆಯ ಹಣೆಪಟ್ಟಿಯನ್ನು ಅಳಿಸಿ ಹಾಕಿದ್ದಾರೆ. ಲಾರ್ಡ್ಸ್‌ ವಿಜಯದಲ್ಲಿ ಮೊಹಮ್ಮದ್ ಶಮಿ ಅವರ ಅರ್ಧಶತಕ ಮತ್ತು ಬೂಮ್ರಾ ಅವರ 34 ರನ್‌ಗಳ ಕಾಣಿಕೆಯೇ ಪ್ರಮುಖ ಪಾತ್ರ ವಹಿಸಿತ್ತು. ಲೀಡ್ಸ್‌ ಸೋಲಿನಲ್ಲಿ ಅಗ್ರ ಬ್ಯಾಟ್ಸ್‌ಮನ್‌ಗಳ ಜೊತೆಗೆ ಕೊನೆಯ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕೂಡ ಎದ್ದು ಕಂಡಿತ್ತು.

ಆದರೆ, ಕೆನಿಂಗ್ಟನ್‌ ಓವಲ್ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಶಾರ್ದೂಲ್ ಠಾಕೂರ್ ತಮ್ಮ ಆಯ್ಕೆಯನ್ನೂ ಸಮರ್ಥಿಸಿಕೊಂಡರು. ಈ ಪಂದ್ಯದಲ್ಲಿ ಅವರು ಶಮಿ ಬದಲು ಸ್ಥಾನ ಪಡೆದಿದ್ದರು. ಅನುಭವಿ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡಿ ಉಮೇಶ್ ಯಾದವ್‌ಗೆ ಅವಕಾಶ ಕೊಟ್ಟಿದ್ದು ಒಳ್ಳೆಯದೇ ಆಯಿತು. ಒಟ್ಟು ಆರು ವಿಕೆಟ್ ಸಂಪಾದಿಸಿದ್ದೂ ಅಲ್ಲದೆ ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಕಾಣಿಕೆ ನೀಡಿದರು. ಅದರಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮಾಡಿದ ಶತಕ ವ್ಯರ್ಥವಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆಗಿ, 99 ರನ್‌ಗಳ ಹಿನ್ನಡೆ ಅನುಭವಿಸಿದ ನಂತರವೂ 466 ರನ್‌ಗಳ ಮೊತ್ತ ಗಳಿಸಿದ್ದು ಸಣ್ಣ ಸಾಧನೆಯಲ್ಲ. ಬೂಮ್ರಾ, ಉಮೇಶ್ ಬೌಲಿಂಗ್‌ನಲ್ಲಿ ಮಿಂಚಿ ತಂಡದ ಜಯವನ್ನು ಖಚಿತಪಡಿಸಿದರು.

ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೊದಲ ಸರಣಿಯೂ ಇದಾಗಿರುವುದರಿಂದ ಈ ಜಯಕ್ಕೆ ಅದರದ್ದೇ ಆದ ಮಹತ್ವವಿದೆ. ಮೊದಲ ಟೂರ್ನಿಯಲ್ಲಿ ರನ್ನರ್ ಅಪ್ ಆಗಿರುವ ಭಾರತ ತಂಡ ಈಗಿನ ಜಯದ ಅಬ್ಬರದಲ್ಲಿ ಮೈಮರೆಯುವಂತಿಲ್ಲ. ಆತ್ಮಾವಲೋಕನ ಮಾಡಿಕೊಳ್ಳುವಂತಹ ಕೆಲವು ಸಂಗತಿಗಳೂ ಇಲ್ಲಿವೆ. ಅದರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್. ಸುಮಾರು ಒಂದೂವರೆ ವರ್ಷದಿಂದ ಅವರು ಒಂದೂ ಶತಕ ಗಳಿಸಿಲ್ಲ. ಡಬ್ಲ್ಯುಟಿಸಿ ಫೈನಲ್ ಸೋಲಿನಲ್ಲಿ ಅವರ ನಾಯಕತ್ವ ಕೂಡ ಟೀಕೆಗೊಳಗಾಗಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದೇ ಇರುತ್ತದೆ. ಅದರ ಒತ್ತಡವನ್ನು ನಿಭಾಯಿಸುವಷ್ಟು ಅನುಭವ ಮತ್ತು ಮಾನಸಿಕ ಸದೃಢತೆ ಅವರಿಗೆ ಇದೆ. ವೇಗದ ಪಿಚ್‌ಗಳಲ್ಲಿ ಹೊಸ ಚೆಂಡಿನ ಹೊಳಪಿನ ಮುಂದೆ ಆರಂಭಿಕ ಜೋಡಿ ವಿಫಲವಾದಾಗ ಮೂರು ಮತ್ತು ನಾಲ್ಕನೇ ಕ್ರಮಾಂಕದವರ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಆದ್ದರಿಂದ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಮೇಲೆ ಹೆಚ್ಚಿನ ಹೊಣೆ ಇರುತ್ತದೆ.

ಆದರೆ ಇತ್ತೀಚಿನ ಪಂದ್ಯಗಳಲ್ಲಿ ಈ ಇಬ್ಬರ ಆಟ ಅಸ್ಥಿರವಾಗಿದೆ. ಅಜಿಂಕ್ಯ ರಹಾನೆ ಕೂಡ ಫಾರ್ಮ್‌ ಕಳೆದುಕೊಂಡಿರುವುದು ಚಿಂತೆಯ ವಿಷಯ. ಬೆಂಚ್‌ ಕಾಯುತ್ತಿರುವ ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್‌ ಹನುಮವಿಹಾರಿ ಅವರನ್ನು ಕಣಕ್ಕಿಳಿಸುವ ಬಗ್ಗೆ ತಂಡವು ಏಕೆ ಚಿತ್ತ ಹರಿಸುತ್ತಿಲ್ಲ? ಗಾಯದಿಂದ ಚೇತರಿಸಿಕೊಂಡಿರುವ ಮಯಂಕ್ ಅಗರವಾಲ್ ಕೂಡ ಅವಕಾಶಕ್ಕಾಗಿ ಕಾದಿದ್ದಾರೆ. ಕ್ರಿಕೆಟಿಗರು ಒಂದು ಹಂತದಲ್ಲಿ ಲಯ ಕಳೆದುಕೊಳ್ಳುವುದು ಸಹಜ. ಕೋವಿಡ್ ಕಾಲಘಟ್ಟದಲ್ಲಿ ನಿರಂತರ ವೈಫಲ್ಯವು ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ಅದು ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ, ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವಲ್ಲಿ ಇರದ ಹಿಂಜರಿಕೆ ಬ್ಯಾಟಿಂಗ್‌ನಲ್ಲಿ ಯಾಕೆ?

ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಅಸ್ಥಿರತೆಗೆ ಪರಿಹಾರ ಕಂಡುಹಿಡಿಯುವುದೂ ಅವಶ್ಯಕ. ಇಂತಹ ಸಂದರ್ಭದಲ್ಲಿ ತಂಡದೊಳಗೇ ಇರುವ ‘ಪ್ರತಿಭಾ ಸಂಪನ್ಮೂಲ’ವನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಜಾಣತನ. ಇನ್ನೂ ಎರಡು ವರ್ಷಗಳ ಕಾಲ ನಡೆಯಲಿರುವ ಈ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ತಂಡದಲ್ಲಿ ಸಮತೋಲನ ಕಾಪಾಡಲು ಸಕಾರಾತ್ಮಕ ಪ್ರಯೋಗಗಳು ಅವಶ್ಯಕ. ಕಳೆದ ಡಿಸೆಂಬರ್‌–ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಜಯ ಸಾಧಿಸಿದ ತಂಡದಲ್ಲಿ ‘ಬೆಂಚ್‌ ಶಕ್ತಿ’ಯೇ ವಿಜೃಂಭಿಸಿತ್ತು ಎಂಬುದನ್ನು ಮರೆಯಬಾರದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT