ಭಾನುವಾರ, ಜೂನ್ 13, 2021
26 °C
ತ್ಯಾಜ್ಯದ ಅಸಮರ್ಪಕ ನಿರ್ವಹಣೆಯಿಂದ ಸೋಂಕು ಇನ್ನಷ್ಟು ಹಬ್ಬುವ ಅಪಾಯವಿದೆ

ವಿಶ್ಲೇಷಣೆ: ಕೋವಿಡ್ ಕಸ ನಿರ್ವಹಣೆ ಸವಾಲು

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿರುವಂತೆ ಅದರ ಚಿಕಿತ್ಸೆಗೆ ಸಂಬಂಧಿಸಿದ ತ್ಯಾಜ್ಯದ ಪ್ರಮಾಣವೂ ಏರುತ್ತಿದೆ. ಆಸ್ಪತ್ರೆಗಳ ಕೋವಿಡ್ ತ್ಯಾಜ್ಯವನ್ನು ಆಸ್ಪತ್ರೆಯವರೇ ನಿರ್ವಹಿಸಬೇಕು. ಆದರೆ ಸೋಂಕಿಗೆ ತುತ್ತಾಗಿ ಮನೆಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತ್ಯೇಕ ವಾಸದಲ್ಲಿರುವ ರೋಗಿಗಳು ಬಿಸಾಡುವ ಸೋಂಕುಕಾರಿ ಕಸವನ್ನು ಎತ್ತುವವರಾರು? ಅದಕ್ಕೆ ನಿರ್ದಿಷ್ಟ ಮಾರ್ಗಸೂಚಿ ಇಲ್ಲದ್ದರಿಂದ ವಿಲೇವಾರಿ ಸರಿಯಾಗಿ ಆಗದೆ ಊರಿನ ಖಾಲಿ ನಿವೇಶನ, ರಸ್ತೆ ಬದಿ ಮತ್ತು ಚರಂಡಿಗಳಲ್ಲಿ ಶೇಖರಣೆಯಾಗಿ, ರೋಗವನ್ನು ಇನ್ನಷ್ಟು ಹಬ್ಬಿಸುವ ಅಪಾಯ ಎದುರಾಗಿದೆ.

ರೋಗಚಿಕಿತ್ಸಾ ತಾಜ್ಯ, ಪ್ಲಾಸ್ಟಿಕ್, ಗೃಹತ್ಯಾಜ್ಯ, ಸ್ಯಾನಿಟರಿ ನ್ಯಾಪ್‍ಕಿನ್, ಡೈಪರ್, ಕಾಂಡೋಮ್, ಒಣ ಮತ್ತು ಹಸಿ ಕಸವನ್ನು ಪ್ರಾರಂಭದಲ್ಲೇ ಬೇರ್ಪಡಿಸಬೇಕೆಂಬ ನಿರ್ದೇಶನವಿದ್ದರೂ ಯಾರೂ ಅದರ ಕುರಿತು ತಲೆ ಕೆಡಿಸಿಕೊಂಡಿಲ್ಲ. ದೇಶದ ನಗರಗಳಿಂದ ಪ್ರತಿದಿನ ಒಂದೂವರೆ ಲಕ್ಷ ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ ಶೇ 25ರಷ್ಟು ಮಾತ್ರ ಸಂಸ್ಕರಣೆಗೊಳ್ಳುತ್ತದೆ. ಉಳಿದದ್ದು ಭೂಭರ್ತಿ ತಾಣ ಸೇರುತ್ತದೆ.

ಅಗಾಧ ಪ್ರಮಾಣದ ಘನ ಕಸವನ್ನು ಸಂಸ್ಕರಿಸಲು ದೇಶದಾದ್ಯಂತ ವೇಸ್ಟ್ ಟು ಎನರ್ಜಿ (ಡಬ್ಲ್ಯುಟಿಇ) ಘಟಕಗಳನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಯೋಜನೆ ಅಂದುಕೊಂಡ ವೇಗದಲ್ಲಿ ಸಾಗುತ್ತಿಲ್ಲ. ಅದಲ್ಲದೆ 2019ರಲ್ಲೇ ಜಾರಿಯಾಗಬೇಕಿದ್ದ, ಉತ್ಪಾದಕರೇ ಕಸ ವಿಲೇವಾರಿ ಮತ್ತು ಸಂಸ್ಕರಣೆ ಮಾಡಬೇಕೆನ್ನುವ ಎಕ್ಸ್‌ಟೆಂಡೆಡ್‌ ಪ್ರೊಡ್ಯೂಸರ್‌ ರೆಸ್ಪಾನ್ಸಿಬಿಲಿಟಿಯ (ಉತ್ಪಾದಕನ ಮುಂದುವರಿದ ಜವಾಬ್ದಾರಿ) ಕಾನೂನು ಇನ್ನೂ ಕರಡು ರೂಪದಲ್ಲೇ ಇದೆ.

ಕಸದಿಂದ ವಿದ್ಯುತ್ ಮತ್ತು ತೈಲ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಶೇ 40ರಷ್ಟು ಸಬ್ಸಿಡಿ ನೀಡುತ್ತಿದೆ. 1987ರಲ್ಲೇ ದೆಹಲಿಯ ತಿಮ್ರಪುರ ಮತ್ತು ದೇಶದ ಇತರ ಭಾಗಗಳಲ್ಲಿ, 130 ಮೆಗಾವಾಟ್ ಶಕ್ತಿ ಉತ್ಪಾದಿಸಬಲ್ಲ 14 ಘಟಕಗಳನ್ನು ಸ್ಥಾಪಿಸಿ ಕೆಲಸ ಶುರು ಮಾಡಿದರೂ ಈಗ ಕೆಲಸ ಮಾಡುತ್ತಿರುವುದು ಕೇವಲ 6. ಸುಡುವಾಗ ಹೊಮ್ಮುವ ಹೊಗೆ ಮತ್ತು ವಾಸನೆ ಅತಿಯಾದ ಮಾಲಿನ್ಯ ಉಂಟುಮಾಡುವುದರಿಂದ, ಯಾವ ಘಟಕವೂ ಯಶಸ್ವಿಯಾಗಿಲ್ಲ.

ಕಸದಲ್ಲಿ ತೇವಾಂಶದ ಜೊತೆ ಮಣ್ಣು ಮತ್ತು ಮರಳಿನ ಅಂಶ ಹೆಚ್ಚಿರುವುದರಿಂದ ಅದು ಸುಲಭವಾಗಿ ಸುಡುವುದಿಲ್ಲ ಮತ್ತು ಅದರಿಂದ ಶಕ್ತಿ ಉತ್ಪಾದನೆಯೂ ಕಡಿಮೆ. ಅಲ್ಲದೆ ಪೂರ್ಣವಾಗಿ ಸುಡಲು ಹೆಚ್ಚಿನ ವಿದ್ಯುತ್ ಮತ್ತು ಇಂಧನ ಎರಡೂ ಬೇಕಾಗುತ್ತವೆ. ಸೋಲಾರ್ ಮತ್ತು ಕಲ್ಲಿದ್ದಲಿನಿಂದ ತಯಾರಾಗುವ ವಿದ್ಯುತ್ ಯುನಿಟ್‍ಗೆ ₹ 3ರಿಂದ 4 ಇದೆ. ತ್ಯಾಜ್ಯದಿಂದ ತಯಾರಾಗುವ ವಿದ್ಯುತ್ತಿನ ಬೆಲೆ ಯುನಿಟ್‍ಗೆ ₹ 7 ಇರುವುದರಿಂದ ದುಬಾರಿ ಬೆಲೆಯ ವಿದ್ಯುತ್‌ ಅನ್ನು ಕೊಳ್ಳಲು ಯಾವ ವಿದ್ಯುತ್‌ ಸರಬರಾಜು ಕಂಪನಿಯೂ ತಯಾರಿಲ್ಲ. 2016ರ ಘನ ತ್ಯಾಜ್ಯ ನಿರ್ವಹಣೆ ಕಾನೂನಿನಂತೆ, ಡಬ್ಲ್ಯುಟಿಇ ಘಟಕಗಳು ಇರುವುದು ಹೆಚ್ಚಿನ ಕ್ಯಾಲೋರಿಫಿಕ್ ವ್ಯಾಲ್ಯೂ ಹೊಂದಿರುವ ಬಳಕೆಗೊಂಡ ರಬ್ಬರ್ ಟೈರುಗಳು ಮತ್ತು ಹಲವು ಪದರಗಳುಳ್ಳ ಪ್ಲಾಸ್ಟಿಕ್‍ಗಳನ್ನು ಸುಡಲು ಮಾತ್ರ. ಇದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿರುವ ಮಿಶ್ರ ಕಸವನ್ನು ಸುಡಲು ಅವಕಾಶವೇ ಇಲ್ಲ.

ಈಗ ಕೋವಿಡ್‍ನಿಂದ ಉತ್ಪತ್ತಿಯಾಗುತ್ತಿರುವ ಪಿಪಿಇ ಕಿಟ್, ಮಾಸ್ಕ್, ಕೈಗವಸು, ಸ್ಯಾನಿಟೈಸರ್ ಶೀಷೆ, ಗಂಟಲು ದ್ರವ ಪರೀಕ್ಷೆಯ ಹತ್ತಿ, ಇಂಜೆಕ್ಷನ್ ಬಾಟಲ್, ಗುಳಿಗೆ ಕವರ್‌ಗಳ ಭಾರಿ ಕಸ ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಶೇಖರಣೆಗೊಳ್ಳುತ್ತಿದೆ. ಚಿಂದಿ ಮತ್ತು ಕಸ ಆಯುವವರು ಈ ಕಸವನ್ನೆಲ್ಲ ಸಂಗ್ರಹಿಸಿ, ವಿಂಗಡಿಸಿ ಕಸ ಕೊಳ್ಳುವ ಅಂಗಡಿಗಳಿಗೆ ಮಾರುತ್ತಾರೆ. ಸೋಂಕಿತರು ಬಳಸಿ ಬಿಸಾಡಿದ ವಸ್ತುಗಳನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸದೆ ಸಂಗ್ರಹಿಸುವ ಇವರ ಆರೋಗ್ಯ ಅಪಾಯದಲ್ಲಿದೆ. ಸಂಗ್ರಹಿಸಿದ ಕಸವನ್ನು ಅಂದಂದೇ ಕಂಟ್ರಾಕ್ಟರ್‌ಗಳಿಗೆ ನೀಡಿ ಹಣ ಪಡೆಯುವ ಇವರಿಗೆ ಕಸದಿಂದಲೇ ಸೋಂಕು ಹರಡಬಹುದು. ಹೊರದೇಶಗಳಲ್ಲಿ ಇಂತಹವರಿಗೆ ಆರ್ಥಿಕ ಭದ್ರತೆಯ ಜೊತೆ ಆರೋಗ್ಯ ವಿಮೆ ಇದೆ. ಕಸ ಆಯುವಾಗ ಧರಿಸಲು ರಕ್ಷಣಾ ಉಡುಪು ನೀಡುತ್ತಾರೆ. ನಮ್ಮಲ್ಲಿ ಈವರೆಗೆ ಮಾಡಿದ ಕೆಲಸಕ್ಕೇ ಕೂಲಿ ನೀಡಿಲ್ಲ.

ಕೋವಿಡ್ ಕಸವನ್ನು ನಿರ್ವಹಿಸುವವರು ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಬರೀ ಅಸಂಘಟಿತ, ಅನಕ್ಷರಸ್ಥ ಸಮುದಾಯವೇ ಈ ಕೆಲಸದಲ್ಲಿ ತೊಡಗಿರುವಾಗ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುವುದಾದರೂ ಹೇಗೆ? ಅವರು ಆನ್‍ಲೈನ್‍ನ ಉಸಾಬರಿಯೇ ಬೇಡ ಎಂದುಕೊಂಡು ಮತ್ತು ಸೋಂಕು ತಗಲುವ ಅಪಾಯ ಜಾಸ್ತಿ ಇರುವುದರಿಂದ ಕೇವಲ ಪೇಪರ್ ಮತ್ತು ಕಾರ್ಡ್‌ಬೋರ್ಡ್‌ ಕಸ ಸಂಗ್ರಹಿಸಲು ಕಚೇರಿ ಮತ್ತು ಇತರ ವಾಣಿಜ್ಯ ಸಂಕೀರ್ಣಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದರಿಂದ ಕೋವಿಡ್ ಕಸ ಹಾಗೆಯೇ ಕೊಳೆಯುತ್ತಿದೆ.

ಒಂದು ಲೆಕ್ಕದ ಪ್ರಕಾರ, ನಮ್ಮಲ್ಲಿ ಪ್ರತೀ ತಿಂಗಳು ನೂರು ಕೋಟಿ ಸ್ಯಾನಿಟರಿ ಪ್ಯಾಡ್‍ಗಳು ಬಳಕೆಯಾಗುತ್ತಿವೆ. ಅವು ಶೇ 90ರಷ್ಟು ಪ್ಲಾಸ್ಟಿಕ್ ಹೊಂದಿರುತ್ತವೆ. ಭಾರತೀಯ ಮಹಿಳೆ ತನ್ನ ಗರ್ಭಧಾರಣೆಯ ಶಕ್ತಿಯ ಅವಧಿಯಲ್ಲಿ ಸರಾಸರಿ 10,000 ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಾಳೆ ಮತ್ತು ಪ್ಯಾಡ್, ಡೈಪರ್‌ಗಳು ನೈಸರ್ಗಿಕವಾಗಿ ಕೊಳೆಯಲು 700ರಿಂದ 800 ವರ್ಷಗಳು ಬೇಕು ಎಂಬ ಅಂಕಿ ಅಂಶ ಲಭ್ಯವಿದೆ. ಡೈಪರ್ ಮತ್ತು ಪ್ಯಾಡ್‍ಗಳಲ್ಲಿ ಅಶುದ್ಧ ರಕ್ತ ಹಾಗೂ ಮಾನವ ದೇಹದ ದ್ರವಗಳಿದ್ದು ಅವು ಕೈಯಿಂದ ಮುಟ್ಟುವವರಿಗೆ ದೊಡ್ಡ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ. ಅವುಗಳಲ್ಲಿ ಶೇ 90ರಷ್ಟು ಪ್ಲಾಸ್ಟಿಕ್ ಇದ್ದರೂ ಈ ಕಸವನ್ನು ಗೃಹತ್ಯಾಜ್ಯವೆಂದು ವರ್ಗೀಕರಿಸಿರುವುದರಿಂದ, ಅದರ ವಿಲೇವಾರಿಗೂ ನಮಗೂ ಸಂಬಂಧವಿಲ್ಲ ಎಂದು ಹಟ ಹಿಡಿದಿರುವ ಕಂಪನಿಗಳು, ನಗರಸಭೆಗಳಿಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲ. ಇದು ಕಸ ನಿರ್ವಹಣೆಯ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ.

ಕಸ ಸಂಗ್ರಹ, ವಿಂಗಡಣೆ ಮತ್ತು ವಿಲೇವಾರಿಯ ಸಂಪೂರ್ಣ ಜವಾಬ್ದಾರಿ ಏನಿದ್ದರೂ ಪುರ- ನಗರಸಭೆಗಳದ್ದು ಎಂಬ ಕಾನೂನು ಇದೆ. ಸದ್ಯದ ಪರಿಸ್ಥಿತಿಯಲ್ಲಿ ಇಡೀ ಊರಿನ ಕಸದ ಜವಾಬ್ದಾರಿ ಹೊರಲು ನಮ್ಮಲ್ಲಿ ಸಿಬ್ಬಂದಿಯಿಲ್ಲ ಎನ್ನುವುದು ಪುರ- ನಗರಸಭೆಗಳ ಅಳಲು. ಕೋವಿಡ್ ಅಲೆ ಸ್ಫೋಟವಾದದ್ದರಿಂದ ಸ್ಯಾನಿಟೈಸೇಶನ್, ಲಾಕ್‍ಡೌನ್, ಸೀಲ್‍ಡೌನ್, ವ್ಯಾಕ್ಸಿನೇಷನ್ ಮಾಡುವಲ್ಲೇ ಎಲ್ಲ ಸಿಬ್ಬಂದಿಯ ಬಳಕೆಯಾಗುತ್ತಿದೆ. ಕಸ ವಿಲೇವಾರಿ ಮಾಡಲು ಸಮಯವೇ ಇಲ್ಲ. ಘನ ತ್ಯಾಜ್ಯ ನಿರ್ವಹಣೆಯಲ್ಲಿ ತಯಾರಕ ಕಂಪನಿಗಳು ನಗರಸಭೆಗಳ ಜೊತೆ ಕೈಜೋಡಿಸಿ ಕೆಲಸ ಮಾಡಬೇಕೆಂಬ ನಿಯಮವಿದೆ. ಎಕ್ಸ್‌ಟೆಂಡೆಡ್ ಪ್ರೊಡ್ಯೂಸರ್ಸ್‌ ರೆಸ್ಪಾನ್ಸಿಬಿಲಿಟಿಯನ್ನು ಕೇವಲ ಪ್ಲಾಸ್ಟಿಕ್‍ಗೆ ಅನ್ವಯಿಸುವುದು ಸರಿಯಲ್ಲ, ಅದಕ್ಕೆ ತಿದ್ದುಪಡಿಯಾಗಬೇಕು ಎಂದು ಒತ್ತಾಯಿಸಿವೆ. ಡಬ್ಲ್ಯುಟಿಇ ಘಟಕ ಸ್ಥಾಪಿಸಲು ಶೇ 40ರಷ್ಟು ಸಬ್ಸಿಡಿ ಇದ್ದರೂ ಇದು ದುಬಾರಿ ಎಂದು ಲೆಕ್ಕ ಹಾಕುವವರು ಅವುಗಳ ಕುರಿತು ಆಸಕ್ತಿ ತೋರಿಸುತ್ತಿಲ್ಲ.

ಯಾವುದೇ ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಿಂದ ಹರಡುವ ಗಂಭೀರ ಸ್ವರೂಪದ ಕಾಯಿಲೆಗಳನ್ನು ನಿಯಂತ್ರಿಸಲು ದುಪ್ಪಟ್ಟು ಖರ್ಚಾಗುತ್ತದೆ ಎಂಬುದನ್ನು ಎಲ್ಲರೂ ಮರೆತು ಕೂತಿದ್ದಾರೆ. ಘನ ತ್ಯಾಜ್ಯ ವಿಲೇವಾರಿಯ ಕಥೆ ಇದಾದರೆ, ದ್ರವ ಹಾಗೂ ಅನಿಲ ತ್ಯಾಜ್ಯಗಳ ನಿರ್ವಹಣೆ ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಗುರುರಾಜ್ ಎಸ್. ದಾವಣಗೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು