ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಇ-ವಾಣಿಜ್ಯಕ್ಕೆ ಮತ್ತಷ್ಟು ಕಡಿವಾಣ

ಈ ಕ್ಷೇತ್ರವನ್ನು ಇನ್ನಷ್ಟು ನಿಯಂತ್ರಣಕ್ಕೆ ಒಳಪಡಿಸುವುದು ಎಷ್ಟು ಸರಿ ಎಂಬುದು ಉದ್ಯಮದ ಪ್ರಶ್ನೆ
Last Updated 8 ಜುಲೈ 2021, 19:31 IST
ಅಕ್ಷರ ಗಾತ್ರ

ಬರೀ ಹನ್ನೊಂದು ತಿಂಗಳ ಹಿಂದೆ ಇ-ವಾಣಿಜ್ಯ ಅಥವಾ ಆನ್‍ಲೈನ್ ಮಾರಾಟಕ್ಕೆ ಸಂಬಂಧಿಸಿದ ನಿಯಮ ರೂಪಿಸಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಈಗ ಅದಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಕರಡು ನಿಯಮ ಪ್ರಕಟಿಸಿದೆ. ಇ-ವಾಣಿಜ್ಯದ ದೈತ್ಯ ಕಂಪನಿಗಳಿಂದ ಬಳಕೆದಾರರನ್ನು ರಕ್ಷಿಸುವುದು, ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಹಾಗೂ ಇ-ವಾಣಿಜ್ಯ ಸಂಸ್ಥೆಗಳು ತಮ್ಮ ವ್ಯವಹಾರದ ಮೂಲಕ ಸಂಗ್ರಹಿಸುವ ಗ್ರಾಹಕರ ಮಾಹಿತಿಯನ್ನು ಲಾಭಕ್ಕೆ ಬಳಸಿಕೊಳ್ಳುವುದನ್ನು ನಿಯಂತ್ರಿಸುವುದು ತಿದ್ದುಪಡಿಯ ಉದ್ದೇಶ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಈಗಾಗಲೇ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಒಳಪಟ್ಟಿರುವ ಇ-ವಾಣಿಜ್ಯ ಮಾರುಕಟ್ಟೆ ಹಾಗೂ ಈ ಕ್ಷೇತ್ರ ಪ್ರವೇಶಿಸಲು ಜಿಯೊ, ಟಾಟಾ ಮುಂತಾದ ಸಂಸ್ಥೆಗಳು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ, ಸರ್ಕಾರ ಮಾಡಲು ಹೊರಟಿರುವ ತಿದ್ದುಪಡಿಯ ಉದ್ದೇಶದ ಬಗ್ಗೆ ಹಲವು ಪ್ರಶ್ನೆಗಳು ವ್ಯಕ್ತವಾಗಿವೆ.

ಹಿಂದಿನ ನಿಯಮದಲ್ಲಿ ಇದ್ದ ಇ-ಕಾಮರ್ಸ್ ಸಂಸ್ಥೆಗಳ ಅರ್ಥವ್ಯಾಪ್ತಿಯನ್ನು ಈಗ ವಿಸ್ತರಿಸಲಾಗಿದೆ. ಉದಾಹರಣೆಗೆ, ಅಮೆಜಾನ್, ಫ್ಲಿಪ್‌ಕಾರ್ಟ್ ಮುಂತಾದ ಸಂಸ್ಥೆಗಳು ತಮ್ಮ ಪ್ಲಾಟ್‍ಫಾರ್ಮ್ ಮೂಲಕ ಇತರ ಕಂಪನಿಗಳ ಸರಕು, ಸೇವೆಯನ್ನು ಮಾರಾಟ ಮಾಡುತ್ತವೆ. ಈ ಕಂಪನಿಗಳು ನಿಯಮವನ್ನು ಅನುಸರಿಸುವಂತೆ ನೋಡಿಕೊಳ್ಳುವುದು ಇ-ಕಾಮರ್ಸ್ ಸಂಸ್ಥೆಗಳ ಜವಾಬ್ದಾರಿ. ಇದರ ಪರಿಣಾಮವಾಗಿ ಈ ಸಂಸ್ಥೆಗಳ ಹೊಣೆಗಾರಿಕೆ ಹೆಚ್ಚಾಗಲಿದೆ. ಆದರೆ ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಇ-ವಾಣಿಜ್ಯ ಸಂಸ್ಥೆಗಳು ನೇರವಾಗಿ ಮಾರಾಟ ಮಾಡುವುದಿಲ್ಲ ಅಥವಾ ಒಬ್ಬ ಉತ್ಪಾದಕರ ಸರಕುಗಳನ್ನು ಮಾತ್ರ ಮಾರಾಟ ಮಾಡುವುದಿಲ್ಲ. ಈ ಸಂಸ್ಥೆಗಳು ಮತ್ತು ಉತ್ಪಾದಕರು– ವಿತರಕರ ನಡುವೆ ಗಾಢವಾದ ಸಂಬಂಧ ಇರುವುದಿಲ್ಲ. ಹೀಗಾಗಿ, ಉತ್ಪಾದಕರು ಅಥವಾ ವಿತರಕರು ಮಾಡುವ ತಪ್ಪುಗಳಿಗೆ ಇ-ವಾಣಿಜ್ಯ ಸಂಸ್ಥೆಗಳು ಏಕೆ ಗುರಿಯಾಗಬೇಕು ಎಂಬುದು ಉದ್ಯಮದ ಪ್ರಶ್ನೆ.

ಸರಕು ಉತ್ಪಾದಕರು, ವಿತರಕರ ಕಂಪನಿಯಲ್ಲಿ ಇ-ವಾಣಿಜ್ಯ ಸಂಸ್ಥೆಗಳು ಬಂಡವಾಳ ಹೂಡಿದ್ದರೆ, ಆ ಕಂಪನಿಗಳ ಸರಕುಗಳನ್ನು ಸಂಸ್ಥೆಗಳು ತಮ್ಮ ವೆಬ್‍ಸೈಟ್ ಮೂಲಕ ಮಾರಾಟ ಮಾಡಬಾರದೆಂದು ನಿಯಮ ಹೇಳುತ್ತದೆ. ಇದರ ಬಗ್ಗೆ ಬಹಳಷ್ಟು ಗೊಂದಲವಿದ್ದು, ಸರ್ಕಾರ ಸ್ಪಷ್ಟೀಕರಣ ನೀಡಬೇಕಿದೆ. ಈ ಹಿಂದೆ, ಉತ್ಪಾದಕ ಕಂಪನಿಗಳಲ್ಲಿ ಅಮೆಜಾನ್ ಹೂಡಿದ್ದ ಬಂಡವಾಳವನ್ನು ವಾಣಿಜ್ಯ ಸಚಿವಾಲಯವು ಶೇಕಡ 24ಕ್ಕೆ ಇಳಿಸಿತ್ತು. ಬಳಕೆದಾರರು ಆನ್‍ಲೈನ್ ಮೂಲಕ ನಿರ್ದಿಷ್ಟ ಸರಕು ಅಥವಾ ಸೇವೆಯನ್ನು ಖರೀದಿಸಲು ಹೊರಟಾಗ ಇಚ್ಛಿಸಿದ ಸರಕುಗಳಿಗೆ ಅತೀ ಹತ್ತಿರದ (ಅದೇ ಉದ್ದೇಶ ಈಡೇರಿಸುವ) ಸರಕುಗಳ ಪಟ್ಟಿ ಕಾಣುತ್ತದೆ. ಆ ಸರಕುಗಳನ್ನು ಖರೀದಿಸಲು ಇ-ವಾಣಿಜ್ಯ ಸಂಸ್ಥೆಗಳು ಬಳಕೆದಾರರಿಗೆ ಪ್ರೇರಣೆ ನೀಡುತ್ತವೆ. ಕೆಲವೊಮ್ಮೆ ಅಗತ್ಯವಿಲ್ಲದಿದ್ದರೂ ಬಳಕೆದಾರರು ಅದನ್ನು ಕ್ಲಿಕ್ ಮಾಡುವುದುಂಟು. ಹೊಸ ನಿಯಮದಲ್ಲಿ ಈ ‘ಕ್ರಾಸ್ ಸೆಲ್ಲಿಂಗ್’ಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಉದಾಹರಣೆಗೆ, ಆ ಸರಕುಗಳನ್ನು ಮಾರಾಟ ಮಾಡುವ ಉತ್ಪಾದಕರ ಬಗ್ಗೆ ಮಾಹಿತಿ ನೀಡಬೇಕಿದೆ.

ಇ-ವಾಣಿಜ್ಯ ಪ್ಲಾಟ್‍ಫಾರ್ಮ್‌ಗಳ ಜವಾಬ್ದಾರಿಯನ್ನು ಹೆಚ್ಚಿಸುವ ಸಲುವಾಗಿ ‘ಫಾಲ್‍ಬ್ಯಾಕ್ ಲಯಬಿಲಿಟಿ’ ಸೇರಿಸಲಾಗಿದೆ. ಸರಕು ಅಥವಾ ಸೇವೆ ವಿತರಿಸುವಲ್ಲಿ ಯಾವುದೇ ಲೋಪದೋಷಗಳು ಉಂಟಾದರೆ ಅದಕ್ಕೆ ಇ-ವಾಣಿಜ್ಯ ಪ್ಲಾಟ್‍ಫಾರ್ಮ್‌ಗಳೇ ಹೊಣೆ. ಅವು ಸರಕು ತಯಾರಕರನ್ನು ಬೊಟ್ಟು ಮಾಡಿ ತೋರಿಸಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇ-ವಾಣಿಜ್ಯ ಸಂಸ್ಥೆಗಳು ನಿರ್ದಿಷ್ಟ ದಿನಗಳಲ್ಲಿ ಬೃಹತ್ ಮಾರಾಟದ ದಿನ ವ್ಯವಸ್ಥೆ ಮಾಡುತ್ತವೆ. ಉದಾಹರಣೆಗೆ ‘ಒಂದು ದಿನದ ಬಿಲಿಯನ್ ಸೇಲ್ಸ್’ ಇತ್ಯಾದಿ. ಈ
ಫ್ಲ್ಯಾಷ್‍ಸೇಲ್‍ಗಳಲ್ಲಿ ಕೆಲವು ಅನುಚಿತ ವ್ಯಾಪಾರ ಪದ್ಧತಿ ಕಂಡುಬಂದಿದೆ. ಉದಾಹರಣೆಗೆ, ಒಬ್ಬ ಅಥವಾ ಕೆಲವೇ ಮಾರಾಟಗಾರರಿಗೆ ಫ್ಲ್ಯಾಷ್‍ಸೇಲ್‍ನಲ್ಲಿ ಅವಕಾಶ ಕೊಡುವುದು, ಮುಂಚಿತವಾಗಿ ತಿಳಿಸದಿರುವುದು, ಭಾರಿ ಮೊತ್ತದ ಸೋಡಿ (ಡಿಸ್ಕೌಂಟ್) ನೀಡುವುದು ಇತ್ಯಾದಿ. ಇದೆಲ್ಲವನ್ನು ತಡೆಗಟ್ಟಲು ಫ್ಲ್ಯಾಷ್‍ಸೇಲ್‍ಗೆ ನಿರ್ಬಂಧ ಹೇರಲಾಗಿದೆ. ‌ ಮಾರುಕಟ್ಟೆಯಲ್ಲಿ ಆಧಿಪತ್ಯ ಹೊಂದಿರುವ ಪ್ರತಿಷ್ಠಿತ ಇ-ವಾಣಿಜ್ಯ ಸಂಸ್ಥೆಗಳು ಸುಳ್ಳುಮಾಹಿತಿ ನೀಡಿ ಬಳಕೆದಾರರನ್ನು ವಂಚಿಸುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆ ರೀತಿಯ ‘ಮಿಸ್‍ಸೆಲ್ಲಿಂಗ್’ ತಪ್ಪಿಸಲು ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ.

ಪ್ರತಿಯೊಂದು ಇ-ವಾಣಿಜ್ಯ ಸಂಸ್ಥೆಯು ಕೈಗಾರಿಕೋದ್ಯಮ ಮತ್ತು ಆಂತರಿಕ ವ್ಯವಹಾರ ಇಲಾಖೆಯಲ್ಲಿ (ಡಿಪಿಐಐಟಿ) ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಅವು ತಮ್ಮ ಎಲ್ಲಾ ಪತ್ರ ವ್ಯವಹಾರದಲ್ಲಿ ಡಿಪಿಐಐಟಿ ನೀಡುವ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಇದರಿಂದ ಸಂಸ್ಥೆಗಳ ವಹಿವಾಟಿನಲ್ಲಿ ಪಾರದರ್ಶಕತೆ ಉಂಟಾಗುತ್ತದೆ. ಸಂಸ್ಥೆಗಳು ಬಳಕೆದಾರರ ಕುಂದುಕೊರತೆಗಳನ್ನು ನಿವಾರಿಸಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಹಿಂದಿನ ನಿಯಮದಲ್ಲಿ ಸೂಚಿಸಲಾಗಿತ್ತು. ಅದಕ್ಕೆ ಹೆಚ್ಚುವರಿಯಾಗಿ ಈಗ ಒಬ್ಬ ಪಾಲನಾ ಅಧಿಕಾರಿಯನ್ನು (Compliance Officer) ನೇಮಕ ಮಾಡಬೇಕು. ಗ್ರಾಹಕ ಸಂರಕ್ಷಣಾ ಕಾಯ್ದೆ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಇ-ವಾಣಿಜ್ಯ ಸಂಸ್ಥೆ ಅನುಸರಿಸುತ್ತಿದೆ ಎಂಬುದನ್ನು ಖಾತರಿಗೊಳಿಸಿಕೊಳ್ಳುವುದು ಈ ಅಧಿಕಾರಿಯ ಕರ್ತವ್ಯ.

ಬಳಕೆದಾರರ ಕುಂದುಕೊರತೆಗಳನ್ನು ನಿವಾರಿಸಲು ಒಬ್ಬ ಸ್ಥಾನೀಯ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು (ಜಿಆರ್‌ಒ) ನೇಮಕ ಮಾಡುವುದು ಇ-ವಾಣಿಜ್ಯ ಸಂಸ್ಥೆಯ ಕರ್ತವ್ಯವಾಗಿದೆ. ಪಾಲನಾ ಅಧಿಕಾರಿಯಂತೆ ಜಿಆರ್‌ಒ ಸಹ ಭಾರತೀಯ ಪ್ರಜೆಯಾಗಿದ್ದು, ಭಾರತದಲ್ಲೇ ನೆಲೆಸಿರಬೇಕು. ಅವರ ಹೆಸರು, ಹುದ್ದೆ, ದೂರವಾಣಿ ಸಂಖ್ಯೆ, ಇ–ಮೇಲ್ ಐಡಿ ಇತ್ಯಾದಿಯನ್ನು ಸಂಸ್ಥೆಯು ತನ್ನ ವೆಬ್‍ಸೈಟ್‍ನಲ್ಲಿ ಬಳಕೆದಾರರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.

ಹೊರದೇಶಗಳಿಂದ ಆಮದು ಮಾಡಿಕೊಂಡ ಸರಕುಗಳಿಗೆ ಸಂಬಂಧಿಸಿದ ನಿಯಮಗಳು ಬಹಳಷ್ಟು ಚರ್ಚೆಗೆ ಒಳಪಟ್ಟಿವೆ. ಸಂಸ್ಥೆಗಳು ಸರಕನ್ನು ಯಾವ ದೇಶದಿಂದ ಆಮದು ಮಾಡಿಕೊಂಡಿವೆ ಎಂಬುದರ ಮಾಹಿತಿ ನೀಡಬೇಕು. ತಮ್ಮ ವೆಬ್‍ಸೈಟ್‍ನಲ್ಲಿ ‘ಫಿಲ್ಟರ್’ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ನಿಯಮ ಹೇಳುತ್ತದೆ. ಹೊರದೇಶದಿಂದ ಯಾವ ಸರಕನ್ನು ಆಮದು ಮಾಡಿಕೊಳ್ಳಲಾಗುತ್ತದೋ ಅದಕ್ಕೆ ಸಮನಾದ ದೇಶೀಯ ಸರಕುಗಳ ವಿವರವನ್ನು ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು. ಹೊರದೇಶದ ಮತ್ತು ದೇಶೀಯ ಸರಕುಗಳ ಮಧ್ಯೆ ತಾರತಮ್ಯ ಮಾಡುವುದನ್ನು ತಪ್ಪಿಸಿ, ಭಾರತದಲ್ಲಿ ತಯಾರಾದ ಸರಕುಗಳ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶ ಇದಾಗಿರಬಹುದು.

ಬಳಕೆದಾರರು ನೀಡುವ ಮಾಹಿತಿಯಲ್ಲಿ ವೈಯಕ್ತಿಕ ಮಾಹಿತಿಯೂ ಇರಬಹುದು. ಇ-ವಾಣಿಜ್ಯ ಸಂಸ್ಥೆಗಳು ಈ ಮಾಹಿತಿಯನ್ನು ಮತ್ತೊಂದು ಸಂಸ್ಥೆಗೆ ನೀಡುವುದಲ್ಲದೆ ಅದರಿಂದ ಲಾಭ ಗಳಿಸುವ ಪ್ರಕರಣಗಳು ವರದಿಯಾಗಿವೆ. ಇದನ್ನು ತಪ್ಪಿಸಿ ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ನಿಯಮದಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಈ ವಿಷಯದಲ್ಲಿ ಬಳಕೆದಾರರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದಿದ್ದಲ್ಲಿ ಮಾಹಿತಿ ಹಂಚಬಹುದು ಎಂಬ ಅರ್ಥ ಬರುವ ರೀತಿಯಲ್ಲಿ ವೆಬ್‍ಸೈಟ್ ರಚಿಸಲಾಗಿರುತ್ತದೆ. ಇದು ಬಳಕೆದಾರರಿಗೆ ಗೋಚರಿಸುವುದಿಲ್ಲ. ನಿಯಮವು ಈ ರೀತಿಯ ಪದ್ಧತಿಗಳನ್ನು ನಿಷೇಧಿಸುತ್ತದೆ.

ಇ-ವಾಣಿಜ್ಯ ನಿಯಮದ ಬಗ್ಗೆ ಕೆಲವು ಸಂರಚನಾತ್ಮಕ ಸಮಸ್ಯೆಗಳು ಕಂಡುಬರುತ್ತವೆ. ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಇ-ವಾಣಿಜ್ಯದ ಪಾಲು ಶೇಕಡ 3ರಿಂದ 4. ಕೋವಿಡ್ ಪರಿಣಾಮ ಇದರಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಆದರೂ ಈ ಕ್ಷೇತ್ರವನ್ನು ನಿಯಂತ್ರಿಸಲು ಈಗಾಗಲೇ ಇತರ ಕಾನೂನುಗಳು ಅಸ್ತಿತ್ವದಲ್ಲಿವೆ. ಉದಾಹರಣೆಗೆ, ಸ್ಪರ್ಧಾ ಕಾನೂನು ಮತ್ತು ನೀತಿ (ಕಾಂಪಿಟಿಶನ್ ಲಾ ಆ್ಯಂಡ್‌ ಪಾಲಿಸಿ). ಭಾರತದ ಸ್ಪರ್ಧಾ ಆಯೋಗ (ಸಿಸಿಐ) ದೈತ್ಯ ಇ-ವಾಣಿಜ್ಯ ಕಂಪನಿಗಳ ವ್ಯವಹಾರ ಮತ್ತು ಸ್ಪರ್ಧೆಯ ಮೇಲೆ ಅದರ ದುಷ್ಪರಿಣಾಮ ಕುರಿತು ತನಿಖೆ ನಡೆಸುತ್ತಿದೆ. ಬಳಕೆದಾರರ ವೈಯಕ್ತಿಕ ಮಾಹಿತಿ ರಕ್ಷಣೆಗೆ ಸಹ ಮತ್ತೊಂದು ಕಾನೂನು ಬರಲಿದೆ. ಇಂತಹ ಸನ್ನಿವೇಶದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೂಲಕ ಇ-ವಾಣಿಜ್ಯವನ್ನು ಮತ್ತಷ್ಟು ನಿಯಂತ್ರಣಕ್ಕೆ ಒಳಪಡಿಸುವುದು ಎಷ್ಟು ಸರಿ ಎಂಬುದು ಉದ್ಯಮದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT