ಶನಿವಾರ, ಮೇ 8, 2021
19 °C

ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರುವ ಹಟ: ಅರ್ಹತೆ ಮೀರಿ ಪಲ್ಲಟ ಸಲ್ಲದು

ದಾಸನೂರು ಕೂಸಣ್ಣ Updated:

ಅಕ್ಷರ ಗಾತ್ರ : | |

1950ರಲ್ಲಿ ನಮ್ಮ ಸಂವಿಧಾನ ಜಾರಿಗೆ ಬರುವುದರೊಂದಿಗೆ 1936ರ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಪಂಗಡ ಪರಿಕಲ್ಪನೆಯ ಸಾಮಾಜಿಕ–ಸಾಂಸ್ಥಿಕ ಸ್ವರೂಪ ಬದಲಾಯಿತು. ಆಗ, ನಿಮ್ನ ವರ್ಗ (ಮಾಜಿ ಅಸ್ಪೃಶ್ಯರು) ಮತ್ತು ಆದಿವಾಸಿಗಳನ್ನು ಗುರುತಿಸುವುದಕ್ಕಾಗಿ ಎರಡು ವಿಧಾನಗಳಿದ್ದವು. ಸಂಪೂರ್ಣ ಪ್ರಮಾಣದ ಅಸ್ಪೃಶ್ಯತೆ (Absolute Untouchables) ಅನುಭವಿಸಿದ್ದವರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಲಾಯಿತು; ಮೂಲ 44 ಆದಿಮ ಬುಡಕಟ್ಟುಗಳ (Aboriginal Tribes) ಗುಣಲಕ್ಷಣವಿದ್ದ ಸಮುದಾಯಗಳು ಸೇರಿ ಪರಿಶಿಷ್ಟ ಪಂಗಡ ಆಯಿತು. ಇವೆರಡು ಗುಂಪುಗಳಿಗಿಂತ ಮೇಲಿದ್ದ ನಿಮ್ನ ವರ್ಗ ಮತ್ತು ಬುಡಕಟ್ಟುಗಳು ವಿವಿಧ ಸ್ತರದ ಅತಿ ಹಿಂದುಳಿದ ವರ್ಗಗಳಾದವು.

ಸಂವಿಧಾನವು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆಯು ಈಗ ಮೂರಾಬಟ್ಟೆಯಾಗುತ್ತಿದೆ. ಆ ಕಾರಣಕ್ಕಾಗಿಯೇ ಮೀಸಲಾತಿಯನ್ನು ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ಪಡೆಯುವ ಪ್ರಯತ್ನ ಜೋರಾಗಿದೆ.

ಸಾಮಾಜಿಕ ಸ್ಥಿತಿಗತಿ ಮತ್ತು ಭೌಗೋಳಿಕ ಚಲನೆಯು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ನಿರ್ಣಯಿಸುವ ನೆಲೆಗಟ್ಟಾಗಿದ್ದವು ಎಂಬುದನ್ನು ಗಮನದಲ್ಲಿ ಇರಿಸಿಕೊಂಡೇ ಈಗಿನ ಮೀಸಲಾತಿ ಹೋರಾಟವನ್ನು ನೋಡಬೇಕು.

ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಬೇರೆ ಪ್ರಾಂತ್ಯದಲ್ಲಿದ್ದ ಕೆಲವು ಭೌಗೋಳಿಕ ಪ್ರದೇಶಗಳು ಕರ್ನಾಟಕಕ್ಕೆ ಸೇರ್ಪಡೆಯಾದವು. ಭೌಗೋಳಿಕ ಪ್ರದೇಶಗಳ ಜತೆಗೆ ಅಲ್ಲಿದ್ದ ಕೆಲವು ಸಮುದಾಯಗಳು ಕೂಡ ರಾಜ್ಯದ ಭಾಗವಾದವು. ಹಾಗಾಗಿ, ಮೂಲ ರಾಜ್ಯದಲ್ಲಿ ಈ ಸಮುದಾಯಗಳಿಗೆ ಯಾವ ಸ್ಥಾನಮಾನ ಇತ್ತೋ ಅದನ್ನೇ ಹೊಸ ರಾಜ್ಯದಲ್ಲಿಯೂ ಮುಂದುವರಿಸಲಾಯಿತು.

ಸಂವಿಧಾನದ 341 ಮತ್ತು 342ನೇ ವಿಧಿ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ 340ನೇ ವಿಧಿಯಲ್ಲಿ ಇತರ ಹಿಂದುಳಿದ ವರ್ಗಗಳನ್ನು ಗುರುತಿಸಲಾಗಿದೆ. ರಾಜ್ಯದ ಬಹುತೇಕ ಹಿಂದುಳಿದ ವರ್ಗಗಳ ಆಯೋಗಗಳು ಐದು ಅಂಶಗಳ ಆಧಾರದಲ್ಲಿ ಜಾತಿ ಗುಂಪುಗಳನ್ನು ರೂಪಿಸಿವೆ. ಅವುಗಳೆಂದರೆ, 1. ಬಡ ರೈತ ಮತ್ತು ಕೂಲಿಕಾರ ಸಮುದಾಯ, 2. ಸಾಂಪ್ರದಾಯಿಕ ಸೇವೆ ನೀಡುವ ಸಮುದಾಯಗಳು, 3. ಸಾಂಪ್ರದಾಯಿಕ ಕುಶಲಕರ್ಮಿ ಸಮುದಾಯಗಳು, 4. ಸುಧಾರಿತ ಕುಶಲಕರ್ಮಿ ಸಮುದಾಯಗಳು ಮತ್ತು 5. ಭಿಕ್ಷುಕ, ಅಲೆಮಾರಿ, ಅರೆ ಅಲೆಮಾರಿ, ಅಧಿಸೂಚಿತ ಅಪರಾಧೀಕರಣ ಬುಡಕಟ್ಟು ಮತ್ತು ವಿಮುಕ್ತ ಸಮುದಾಯಗಳು. ಹಾಗಾಗಿ, ಕರ್ನಾಟಕದ ಹಿಂದುಳಿದವರ ಪಟ್ಟಿಯು ರಾಷ್ಟ್ರದಲ್ಲೇ ವೈಜ್ಞಾನಿಕವಾಗಿದೆ. ಈ ಸ್ತರ ವಿನ್ಯಾಸ ಮತ್ತು ಚಲನೆಗಳನ್ನು ಅರಿಯಲಾಗದ ಸಮುದಾಯಗಳು ಮೀಸಲಾತಿಗಾಗಿ ಹಿಂದೆ-ಮುಂದೆ ಜಿಗಿಯುತ್ತಿವೆ. ಹಿಂದುಳಿದ ಸಮುದಾಯದಿಂದ ಪರಿಶಿಷ್ಟ ಪಂಗಡ ಆಗಬೇಕೆನ್ನುವ ಅಥವಾ ಹಿಂದುಳಿದ ಸಮುದಾಯಗಳಲ್ಲೇ ಹಿನ್ನೆಗೆತ ಮಾಡಬೇಕೆನ್ನುತ್ತಿರುವ ಸಮುದಾಯಗಳಿಗೆ, ಈ ಸಾಮಾಜಿಕ ಸೂತ್ರ ಗೋಚರಿಸುತ್ತಿಲ್ಲ. ಹಾಗಾಗಿ, ಸಾಮಾಜಿಕ ಸಮಾನ ಅವಕಾಶಗಳ ಮೂಲಕ ಸಂಪಾದಿಸಬೇಕಿರುವ ಸಂರಕ್ಷಣೆಗಳನ್ನು ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯ ಮೂಲಕ ಪಡೆಯಬೇಕೆಂಬ ಬೇಡಿಕೆ ಮುಂದಿಡುತ್ತಿವೆ. 

ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಪ್ರಮಾಣವು ಶೇ 6.95ರಷ್ಟಕ್ಕೇರಿದೆ (2011). ಇಲ್ಲಿಯೂ ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗುವ ಪ್ರವೃತ್ತಿ ಇದೆ; ಅತ್ಯಂತ ದುರ್ಬಲ ಬುಡಕಟ್ಟುಗಳಿಗೆ ಮೀಸಲಾತಿ ಸಿಗದೆ ಕಂಗಾಲಾಗಿರುವ ದಾರುಣ ಸ್ಥಿತಿ ಈ ಮೀಸಲಾತಿ ಪಟ್ಟಿಗೆ ಸೇರಬೇಕೆನ್ನುವವರಿಗೆ ಅರ್ಥವಾಗುತ್ತಿಲ್ಲ. ಬೇಡರು ಪಡೆದ ಮೀಸಲು ಸ್ಥಾನಗಳನ್ನು ಕಂಡು ಅನೇಕ ಸಮುದಾಯಗಳು ಇದರ ಫಲಾನುಭವಿ ಆಗಬೇಕೆನ್ನುವ ಹಟ ಮಾಡುತ್ತಿವೆ. ಆದರೆ, ಮೀಸಲು ಪ್ರಮಾಣ ಹೆಚ್ಚಳವು ಸಾಂವಿಧಾನಿಕವಾಗಿ ಮಾನ್ಯವಾಗಿಲ್ಲ ಎಂಬುದನ್ನು ಎಲ್ಲರೂ ಮರೆಯುತ್ತಿರುವಂತೆ ಕಾಣಿಸುತ್ತಿದೆ. ಯಾವುದೇ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದರೆ ಅದರಲ್ಲಿ ಮೂಲತಃ ಆದಿಮವಾದ ಲಕ್ಷಣ, ಭೌಗೋಳಿಕ ಪ್ರತ್ಯೇಕ ಅಸ್ಮಿತೆ, ವಿಶಿಷ್ಟ ಬುಡಕಟ್ಟು ಸಾಂಸ್ಕೃತಿಕ ಗುಣ, ಅನ್ಯರೊಂದಿಗೆ ಬೆರೆಯುವುದಕ್ಕೆ ಸಂಕೋಚ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವಿಕೆಯಂತಹ ಸ್ವರೂಪ ಇರಬೇಕು. 

ಸಮಾಜದ ಮಧ್ಯಮ ಹಂತದಲ್ಲಿರುವ ಕುರುಬ, ಮಡಿವಾಳ, ಬೆಸ್ತ ಮುಂತಾದ ಸಮುದಾಯಗಳು ಈ ಮೀಸಲಾತಿಗೆ ಅರ್ಹರಾಗುವವೇ? ಕಾಡು ಕುರುಬ, ಜೇನು ಕುರುಬ ಹಾಗೂ ಗೊಂಡರ ಕುಲಾಚಾರಗಳಡಿ ನುಗ್ಗುವ ಕಸರತ್ತನ್ನು ಕುರುಬರು ಐದು ದಶಕಗಳಿಂದ ಮಾಡುತ್ತಿದ್ದಾರೆ. ಜನಗಣತಿ (1961) ಮತ್ತು ಕುಲಶಾಸ್ತ್ರೀಯ ಅಧ್ಯಯನದ ವರದಿಗಳಲ್ಲಿ ಕುರುಬ ಪದ ಅಪಭ್ರಾಂಶಿಕವಾಗಿ ಸೇರಿದೆ ಎಂಬ ಅಭಿಪ್ರಾಯಗಳಿವೆ. ಗೊಂಡ್ ಹಿಂದುಳಿದ ಪ್ರವರ್ಗವಾಗಿತ್ತು  (1936). ಆದರೆ, ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದ ಅರ್ಹತೆ ಪಡೆದು, ರಾಷ್ಟ್ರೀಯ ಸಂಖ್ಯಾಬಲದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಬಾಂಬೆ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿದ್ದ ಈ ಸಮುದಾಯದ ಜನರು ಕರ್ನಾಟಕದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರ್ಪಡೆಗೊಂಡಿದ್ದಾರೆ. ಕುರುಬ/ಕುರುಮ/ಧನಗರ್ ಜಾತಿಗಳು ಇದರ ಒಳ ಪಂಗಡವಾಗಿದ್ದರೆ ಅಂದೇ ಈ ಮೀಸಲಾತಿ ಪಟ್ಟಿಗೆ ಸೇರುತ್ತಿದ್ದವು.

ಹಿಂದಿನ ಯಾವುದೇ ಕುಲಶಾಸ್ತ್ರೀಯ ಅಧ್ಯಯನ ಮತ್ತು ಜನಗಣತಿಯಲ್ಲಿ ಗೊಂಡ್‌ (Koitur) ಮತ್ತು ಕುರುಬ ನಡುವಿನ ಸಾಮಾಜಿಕ ಸಂಬಂಧಗಳು ರುಜುವಾತಾಗಿಲ್ಲ. ಗಾಮವಕ್ಕಲಿಗರೂ ಸಹ ಗೊಂಡರಲ್ಲ. ಗೊಂಡರು-ಕುರುಬರು-ಗಾಮವಕ್ಕಲಿಗರು ಒಂದೆಂದು ವಾದಿಸುವುದು ಗೊಂಡರಿಗೆ ಮಾಡುವ ಸಾಮಾಜಿಕ ದ್ರೋಹವಾಗುತ್ತದೆ. ಒಂದುವೇಳೆ, ರಾಜಕೀಯ ಒತ್ತಡಗಳಿಗೆ ಕೇಂದ್ರ ಸರ್ಕಾರ ಮಣಿದು ಓಟಿನ ದುರಾಸೆಯಿಂದ ಕುರುಬರನ್ನು ಪರಿಶಿಷ್ಟ ಪಂಗಡವಾಗಿಸಿದರೆ ಬೇಡರನ್ನೇ ಅರಗಿಸಿಕೊಳ್ಳಲಾಗದ ಅತಿಸೂಕ್ಷ್ಮ ಬುಡಕಟ್ಟುಗಳು ಮೀಸಲಾತಿಯಿಂದ ಮತ್ತಷ್ಟು ದೂರ ಹೋಗಬೇಕಾಗುತ್ತವೆ. ಕುರುಬರು ಸುಧಾರಿಸಿದ ನಾಗರಿಕ ಪ್ರವರ್ಗ ಎನ್ನುವುದೇ ಸೇರ್ಪಡೆಗೆ ಕೇಂದ್ರ ಸರ್ಕಾರ ಸಮ್ಮತಿಸದಿರಲು ಕಾರಣ. ಆದರೆ ಬೇಡರಿಗೆ ಬಾಂಬೆ ಕರ್ನಾಟಕದಲ್ಲಿ ಮೀಸಲಾತಿಯಿದ್ದ ಕಾರಣ, ಇತ್ತೀಚಿನ ತಿದ್ದುಪಡಿಯಲ್ಲಿ ತಳವಾರ ಮತ್ತು ಪರಿವಾರ ಸಹ ಉಪ ಪಂಗಡಗಳೆಂದು ಸಾರಲಾಗಿದೆ. ಆದರೆ ಬೆಸ್ತ, ಗಂಗಾಮತಸ್ಥ, ಬೊಯಾ ಸಮುದಾಯಗಳಿಗೆ ಈ ಪದಗಳು ಸಲ್ಲದಿಲ್ಲದ್ದರೂ ಈ ಗುಂಪುಗಳಿಗೆ ಅನ್ಯಾಯ ಆಗಿದೆ ಎಂಬುದು ಸತ್ಯ. ತಳಸ್ತರದ ಪಂಗಡಗಳಿಗೆ ಆಗುತ್ತಿರುವ ಸಾಂವಿಧಾನಿಕ ಅನ್ಯಾಯಗಳು ಇರುಳುಗಣ್ಣಿನ ರಾಜಕಾರಣಕ್ಕೆ ಮೆಳ್ಳುಗಣ್ಣಿನ ಆಡಳಿತ ಸಾಥಿ ಎಂಬುದನ್ನು ಎತ್ತಿ ತೋರಿಸುತ್ತದೆ.

ಪಂಚಮಸಾಲಿ, ವೀರಶೈವ ಜಂಗಮರ ಸಾಮಾಜಿಕ ಸ್ಥಾನದಲ್ಲಿರುವ ಬಲಿಷ್ಠ ಕೃಷಿಕ ಸಮುದಾಯವಾಗಿದ್ದು ಪ್ರವರ್ಗ 2(ಎ) ಮೀಸಲಾತಿಗಾಗಿ ಆಗ್ರಹಿಸುತ್ತಿದೆ. ಅಲ್ಲಿರುವ 102 ಜಾತಿಗಳ ಒಳವಿನ್ಯಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಅವರಲ್ಲಿ‌‌‌‌‌‌ ಸಾಂಪ್ರದಾಯಿಕ ಸೇವಾ ನಿರತರು ಕಡಿಮೆ ಇದ್ದಾರೆ ಮತ್ತು ಹೆಚ್ಚಿನ ಸಮುದಾಯಗಳು ಸಾಂಪ್ರದಾಯಿಕ ಕುಶಲಕರ್ಮಿ ಉತ್ಪಾದಕ ಸಮುದಾಯಗಳಾಗಿವೆ. ಅಂದರೆ, ಇವುಗಳ ಭೂಹಿಡುವಳಿ ರಚನೆ ಹಲವಾರು ಕೋನಗಳಾಗಿ ವಿಭಜನೆಗೊಂಡು ಭೂರಹಿತರ ಪ್ರಮಾಣ ಹೆಚ್ಚಿದೆ ಎಂದರ್ಥ. ಒಟ್ಟಾರೆ, ಹಿಂದುಳಿದ ವರ್ಗಗಳಲ್ಲೇ ಅಧಿಕ ಜನಸಂಖ್ಯೆ ಹೊಂದಿರುವ ಸಮುದಾಯ ಇದು. ಈ ಮೀಸಲಾತಿಗಾಗಿ ಆಗ್ರಹಿಸುವ ಹಕ್ಕು ಪಂಚಮಸಾಲಿಗಳಿಗಿದೆ; ಆದರೆ ಈ ಗವಾಕ್ಷಿಗೆ ಸೇರುವ ಅರ್ಹತೆ ಇದೆಯೇ ಎನ್ನುವುದು ಸಾಂವಿಧಾನಿಕ ಪ್ರಶ್ನೆ.

ಲಿಂಗಾಯತ ಸಮುದಾಯಗಳನ್ನು ಪ್ರಾಥಮಿಕ ಸಮೀಕ್ಷೆಗೆ ಒಳಪಡಿಸಿದರೆ ಸರ್ಕಾರಿ ಉದ್ಯೋಗ ಮತ್ತು ಸಂಪತ್ತು ಕ್ರೋಡೀಕರಣಗಳಲ್ಲಿ ಪಂಚಮಸಾಲಿ, ಬಣಜಿಗ, ವೀರಶೈವ, ಜಂಗಮರು ಯಾವ ಕ್ರಮಾಂಕದಲ್ಲಿದ್ದಾರೆಂದು ತಿಳಿಯುತ್ತದೆ. ದುರ್ಬಲ ಲಿಂಗಾಯತ ಸಮುದಾಯಗಳ ಸಂಕಷ್ಟವು ಲಿಂಗಾಯತ ಬಲಿಷ್ಠ ಕೋಮುಗಳಿಗೆ ಕಾಣಿಸುತ್ತಿಲ್ಲ ಎಂಬುದು ನಿಜ. ಹಾಗಾಗಿಯೇ ‘ಬಲಿಷ್ಠರಿಗೆ ಅನ್ಯಾಯ’ ಎಂಬ ಕೂಗು ವಿಧಾನ ಸೌಧದಲ್ಲಿ ಧ್ವನಿಸುತ್ತಿದೆ. ಈ ದನಿ ರಾಜಕಾರಣದಿಂದ ಧರ್ಮಕಾರಣವಾಗಿ ಸಾಮಾಜೀಕರಣದ ವಕ್ರಸುಳಿಯಲ್ಲಿ ನಲುಗುತ್ತಿದೆ. ಆಗ್ರಹಗಳು ಸಾಂವಿಧಾನಿಕ ಚೌಕಟ್ಟಿನಲ್ಲಿದ್ದರಷ್ಟೇ ಮನ್ನಣೆ ಎನ್ನುವ ಎದೆಗಾರಿಕೆಯನ್ನು ಸರ್ಕಾರ ತೋರಬೇಕಿದೆ.  ಒಂದುವೇಳೆ ಪಂಚಮಸಾಲಿಯಂತಹ ಸಮುದಾಯ ಅಪ್ಪಿತಪ್ಪಿ 2(ಎ) ಕಕ್ಷೆಗೆ ಸೇರಿದರೆ ಈಡಿಗ, ವಿಶ್ವಕರ್ಮ, ಕುರುಬ ಮತ್ತು ಅನೇಕ ಸಣ್ಣಪುಟ್ಟ ಸಮುದಾಯಗಳು ಮುಂದೆ ಮಂಗಮಾಯ. ಇದು ಸಂವಿಧಾನದ ಧೋರಣೆ ಆಗಬಾರದಷ್ಟೇ.

(ಲೇಖಕ: ಸಮುದಾಯ ಚಿಂತಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ಬೆಂಗಳೂರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು