ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಲೇಖನ | ಚುನಾವಣೆ: ಗೆದ್ದವರು, ಸೋತವರಿಗೆ ಪಾಠ

ನಾಡಿನ ಸರ್ವಶಕ್ತನ ಎದುರು ಮಮತಾ ನಡೆಸಿದ ಹೋರಾಟ ಮೆಚ್ಚುವಂಥದ್ದು
ಅಕ್ಷರ ಗಾತ್ರ

ಶೌರ್ಯವು ಮನುಷ್ಯರನ್ನು ಹಿಂದಿನಿಂದಲೂ ಆಕರ್ಷಿಸುತ್ತಿದೆ. ತಮ್ಮನ್ನು ಸಿಂಹ, ಹುಲಿ, ಚಿರತೆ ಎಂದೆಲ್ಲ ಕರೆದುಕೊಳ್ಳುವುದು ಅವರಿಗೆ ಸಂತಸ ನೀಡುತ್ತದೆ. ಪಶ್ಚಿಮ ಬಂಗಾಳದ ಆಡಳಿತ ಚುಕ್ಕಾಣಿಯನ್ನು ಮೂರನೆಯ ಬಾರಿ ಹಿಡಿದಿರುವ ಮಮತಾ ಬ್ಯಾನರ್ಜಿ ಅವರನ್ನು ಬಂಗಾಳದ ಹುಲಿ ಎಂದು ಕರೆಯುವುದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಸಮಸ್ಯೆಗಳು ಹೆಚ್ಚಾದಾಗಲೇ ಮತ್ತಷ್ಟು ದೃಢವಾಗುವ ಮನಸ್ಸು, ವ್ಯವಸ್ಥೆ ಕುಸಿಯುತ್ತಿದ್ದಾಗಲೂ ಸ್ನೇಹಿತರು ದೂರವಾಗುತ್ತಿದ್ದಾಗಲೂ ಆತ್ಮವಿಶ್ವಾಸ ಹೆಚ್ಚಾಗುವ ಅಪರೂಪದ ಗುಣ, ಗೊಂದಲ ಎದುರಾದಾಗ ತಮ್ಮನ್ನು ತಾವೇ ಸಂತೈಸಿಕೊಳ್ಳುವುದು, ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಉನ್ನತ ಆದರ್ಶವನ್ನು ನೆಚ್ಚಿಕೊಂಡಿರುವುದು, ಭೀತಿ ಹೆಚ್ಚಾದಂತೆಲ್ಲ ದೇಹದಲ್ಲಿನ ಜ್ವಾಲೆಯೂ ಹೆಚ್ಚಾಗುವುದು, ಅಪಾಯ ಹೆಚ್ಚಾದಂತೆಲ್ಲ ಧೈರ್ಯವೂ ಹೆಚ್ಚುತ್ತ ಸಾಗುವುದು, ಬಂದೂಕಿನ ಬಾಯಲ್ಲಿ ನಿಂತಾಗಲೂ ಹೆದರದಿರುವುದು... ಇವೆಲ್ಲ ಶೌರ್ಯವಂತ ವ್ಯಕ್ತಿಯಲ್ಲಿ ಕಾಣಿಸುವ ಗುಣಗಳು.

ಬಂಗಾಳದಲ್ಲಿ ಈಗ ಕೊನೆಗೊಂಡಿರುವ ಚುನಾವಣೆಯ ಸಂದರ್ಭದಲ್ಲಿ ಮಮತಾ ಅವರು ಮುಂಚೂಣಿಯಲ್ಲಿ ನಿಂತು ಪಕ್ಷ ಮುನ್ನಡೆಸಿದರು. ಮೇಲೆ ಹೇಳಿದ ಎಲ್ಲ ಗುಣಗಳನ್ನು ತೋರಿಸಿದರು. ನಾಡಿನ ಸರ್ವಶಕ್ತನ ಎದುರು ಹೋರಾಡುವಾಗ, ದುರ್ಬಲ ವ್ಯಕ್ತಿ ಇಂತಹ ಗುಣಗಳನ್ನು ಪ್ರದರ್ಶಿಸಿದಾಗ ಜನ ಅದನ್ನು ಮೆಚ್ಚಿಕೊಳ್ಳುತ್ತಾರೆ.

ವಿಧಾನಸಭೆಗಳಿಗೆ ಈಗಷ್ಟೇ ನಡೆದಿರುವ ಚುನಾವಣೆ ಹಾಗೂ ಕೊರೊನಾ ವೈರಾಣುವಿನ ಹಾವಳಿಯಲ್ಲಿ, ಗೆದ್ದವರಿಗೆ ಮತ್ತು ಸೋತವರಿಗೆ ಎರಡು ಮುಖ್ಯ ಪಾಠಗಳು ಇವೆ. ನೀವು ಜನರನ್ನು ಉದ್ದೇಶಿಸಿ ಕೆಲಸ ಮಾಡುತ್ತಿರಬಹುದು ಅಥವಾ ವೈರಾಣುವಿನ ವಿರುದ್ಧ ಹೋರಾಟ ನಡೆಸಿರಬಹುದು, ದುರಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸವು ನಿಮ್ಮನ್ನು ನಾಶ ಮಾಡುತ್ತದೆ ಎಂಬುದು ಮೊದಲ ಪಾಠ. ಮನುಕುಲ ಒಂದಾದರೆ ಮಾತ್ರ ವೈರಾಣುವಿನ ವಿರುದ್ಧ ಜಯ ಸಾಧಿಸಬಹುದು ಎಂಬುದು ಎರಡನೆಯ ಪಾಠ.

ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿಗೆ ಭಾರಿ ಸೋಲಾಯಿತು. ಪುದುಚೇರಿ ಮತ್ತು ಅಸ್ಸಾಂನಲ್ಲಿ ಮಾತ್ರ ಪಕ್ಷ ಜಯ ಸಾಧಿಸಿತು. ಬಂಗಾಳದಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಾಯಿತು ಎಂಬುದು ನಿಜ. ಆದರೆ ಮಮತಾ ಅವರ ಜಯದ ಬೆಳಕಿನ ಎದುರು ಬಿಜೆಪಿಯ ಸಾಧನೆ ಅಪ್ರಸ್ತುತ. ಇಡೀ ಜಗತ್ತು ಹಾಗೂ ಮಾಧ್ಯಮಗಳ ದೃಷ್ಟಿ ಬಂಗಾಳದ ಮೇಲೆ ನೆಟ್ಟಿತ್ತು. ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಆ ಪಕ್ಷದ ಬಹುಸಂಖ್ಯಾತವಾದಿ ರಾಜಕಾರಣ, ಇನ್ನೊಬ್ಬರನ್ನು ನೆಲಸಮಗೊಳಿಸುವ ತಂತ್ರಗಳು ಇನ್ನಷ್ಟು ವೇಗ ಪಡೆದುಕೊಳ್ಳುತ್ತವೆ ಎಂಬ ಭೀತಿ ಹಲವರಲ್ಲಿ ಇತ್ತು.

ಎಲ್ಲರನ್ನೂ ಒಳಗೊಳ್ಳುವ, ಸಾಗರದಂತೆ ವಿಶಾಲವಾದ ಹಿಂದೂ ತಾತ್ವಿಕತೆಗೆ ವಿರುದ್ಧವಾಗಿ ತನ್ನದೇ ಅದ ‘ಹಿಂದುತ್ವ’ ಸಿದ್ಧಾಂತವನ್ನು ಜಾರಿಗೆ ತರುವುದು, ಭಿನ್ನಾಭಿಪ್ರಾಯ ದಾಖಲಿಸುವವರನ್ನು ದೇಶದ್ರೋಹಿಗಳು ಎಂದು ಹೇಳುವ ಸಂಕುಚಿತ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವುದು, ಅಕಡೆಮಿಕ್ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅಗೌರವ, ತನಿಖಾ ಸಂಸ್ಥೆಗಳ ಸ್ವಾಯತ್ತತೆಯನ್ನು ಕುಗ್ಗಿಸಿ ಅವುಗಳನ್ನು ತಮ್ಮ ಟೀಕಾಕಾರರು ಮತ್ತು ರಾಜಕೀಯ ವಿರೋಧಿಗಳನ್ನು ಬೆದರಿಸಲು ಬಳಸಿಕೊಳ್ಳುವುದು, ತನ್ನ ಸಿದ್ಧಾಂತವನ್ನೇ ಜನ ಪಾಲಿಸಬೇಕು ಎಂಬ ಉದ್ದೇಶದಿಂದ ಅನೈತಿಕ ಪೊಲೀಸ್‌ಗಿರಿ ನಡೆಸುವುದು... ಇವೆಲ್ಲವೂ ದೇಶದ ರಾಜಕಾರಣವನ್ನು ಅಶ್ಲೀಲಗೊಳಿಸಿವೆ. ಕೇಸರಿ ಪಾಳಯದ ಗುಂಪುಗಳು ನಡೆಸಿದ ಹಿಂಸಾಕೃತ್ಯಗಳು ಸಮಾಜದಲ್ಲಿ ಭೀತಿ ಸೃಷ್ಟಿಸಿದ್ದವು.

ಈ ಮಾದರಿಯ ರಾಜಕಾರಣದಲ್ಲಿ ಎಡೆಬಿಡದೆ ತೊಡಗಿದ ಬಿಜೆಪಿ ನಾಯಕತ್ವವು, ದುರಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸದಲ್ಲಿ, ಅಧಿಕಾರದಿಂದ ಕುರುಡಾಗಿ, ತನ್ನದೇ ಮತದಾರರ ಪೈಕಿ ಬಹುದೊಡ್ಡ ಸಮೂಹವನ್ನು ದೂರ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲದವರು, ಬೇರೆ ಪಕ್ಷಗಳ ರಾಜಕಾರಣದಿಂದ ಬೇಸತ್ತು ಬಿಜೆ‍ಪಿ ಕಡೆ ಬಂದಿದ್ದವರು ದೂರವಾದರು. ಬಿಜೆಪಿಯ ರಾಜಕಾರಣವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿಗೆ ದಾರಿ ಮಾಡಿಕೊಡಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಮಾದರಿಯ ಹೊರತು ಬೇರೆ ಯಾವುದೇ ಮಾದರಿಯು ಸಮಾನ ಅಭಿವೃದ್ಧಿಯನ್ನು ಸಾಧಿಸುವುದಿಲ್ಲ ಎಂಬುದನ್ನು ಬಿಜೆಪಿ ಗುರುತಿಸಲಿಲ್ಲ. ಸಮಾಜದ ವಿವಿಧ ಸಮುದಾಯಗಳ ನಡುವೆ ಸಂಘರ್ಷ ನಿರಂತರವಾಗಿದ್ದರೆ ಯಾವುದೇ ಉದ್ಯಮ, ವಹಿವಾಟು ಬೆಳವಣಿಗೆ ಕಾಣುವುದಿಲ್ಲ. ಬಂಗಾಳದ ಚುನಾವಣೆಯು ಪಕ್ಷದ ಪಾಲಿಗೆ ಮಹತ್ವದ್ದಾಗಿತ್ತು. ಇದು ಬಿಜೆಪಿ ಪಾಲಿಗೆ ನಿರ್ಣಾಯಕ ಸೋಲು ತಂದಿತ್ತಿದೆ.

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್
ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಮಮತಾ ಮತ್ತು ಅವರ ಪಕ್ಷದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು. ಭಾರಿ ಜಯದಲ್ಲಿಯೂ ಅವರು ವೈಯಕ್ತಿಕವಾಗಿ ಸೋತಿದ್ದಾರೆ. ಇದು ಅವರು ಇನ್ನಷ್ಟು ತಗ್ಗಿ–ಬಗ್ಗಿ ನಡೆಯಬೇಕು ಎಂಬ ಎಚ್ಚರಿಕೆಯ ಪಾಠ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಮಮತಾ ಅವರ ಕೋಟೆಗೆ ಲಗ್ಗೆ ಇಟ್ಟು, 18 ಸ್ಥಾನ ಗೆದ್ದುಕೊಂಡಿತ್ತು. ಬಿಜೆಪಿಯ ಯಾವ ನಾಯಕರಿಗೂ ಕಡಿಮೆ ಇಲ್ಲದಂತಹ ಸರ್ವಾಧಿಕಾರ ಮಮತಾ ಅವರದ್ದು. ಇದನ್ನು ಅವರಿಗೆ ನೆನಪಿಸಿಕೊಡಬೇಕು! ಹಿಂದಿನ ಎರಡು ಆಡಳಿತ ಅವಧಿಗಳಲ್ಲಿ ಅವರ ಸ್ವಭಾವವು ಅತಾರ್ಕಿಕವಾಗಿ ಬದಲಾಗಿದ್ದಿದೆ, ಸೇಡು ತೀರಿಸಿಕೊಳ್ಳುವ ರಾಜಕಾರಣ ನಡೆಸಿದ್ದೂ ಇದೆ. ಮಮತಾ ಅವರನ್ನು ಟೀಕಿಸಿದವರು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಕಾರ್ಯಕರ್ತರಿಂದ ಏಟು ತಿಂದಿದ್ದಾರೆ. ಅಲ್ಲಿ ಅಕಡೆಮಿಕ್‌ ವಲಯದವರು ಸೇರಿದಂತೆ ಹಲವರನ್ನು ಬಂಧಿಸಿದ್ದೂ ಇದೆ. ಮೂರು ದಶಕಗಳಿಗಿಂತ ಹೆಚ್ಚಿನ ಅವಧಿಯಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿದ್ದ ಎಡಪಕ್ಷ
ಗಳನ್ನು ಮಮತಾ ಅವರು ಹತ್ತು ವರ್ಷಗಳ ಹಿಂದೆ ಏಕಾಂಗಿಯಾಗಿ ಅಧಿಕಾರದಿಂದ ಕೆಳಗೆ ಇಳಿಸಿದರು. ಸಿಪಿಎಂ ಪಕ್ಷವು ಕುಸಿತ ಕಂಡಿತ್ತು, ಜನರಿಗೂ ಅವರ ಆಡಳಿತ ಸಾಕಾಗಿತ್ತು. ಬಿಜೆಪಿಯಂತೆಯೇ ಎಡಪಕ್ಷದವರು ಕೂಡ, ‘ನೀವು ನಮ್ಮ ಪಕ್ಷದ ವಿರುದ್ಧವಾಗಿದ್ದೀರಿ ಎಂದಾದರೆ ರಾಜ್ಯದ ವಿರುದ್ಧ ಇದ್ದೀರಿ ಎಂದು ಅರ್ಥ’ ಎನ್ನುತ್ತಿದ್ದರು. ಪಕ್ಷದ ನಿಲುವನ್ನು ಒಪ್ಪದಿದ್ದವರಲ್ಲಿ ಎಡಪಕ್ಷಗಳ ಕಾರ್ಯಕರ್ತರು ಭಯ ಹುಟ್ಟಿಸುತ್ತಿದ್ದರು.

ಮಮತಾ ಅವರು ಕೆಲವು ಪುಂಡರನ್ನೂ ಟಿಎಂಸಿಗೆ ಸೇರಿಸಿಕೊಂಡರು. ಮಮತಾ ಅವರ ಬೆಂಬಲದೊಂದಿಗೆ ಹಿಂಸಾಚಾರ ಮುಂದುವರಿಯಿತು. ತಮ್ಮ ಕುಟುಂಬದವರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಾರೆ ಎಂಬ ಆರೋಪ ಮಮತಾ ವಿರುದ್ಧ ಬಂತು. ಪಕ್ಷದಲ್ಲಿ ಸಮರ್ಥರು ಹಾಗೂ ಪ್ರಾಮಾಣಿಕರಿಗಿಂತ ಹೆಚ್ಚಿನ ಆದ್ಯತೆಯನ್ನು ತಮಗೆ ನಿಷ್ಠರಾಗಿರುವವರಿಗೆ ನೀಡುತ್ತಿದ್ದಾರೆ ಎಂದೂ ಆರೋಪಿಸಲಾಯಿತು. ವ್ಯಾಪಕ ಭ್ರಷ್ಟಾಚಾರ ಹಾಗೂ ಹಗರಣಗಳ ಬಗ್ಗೆ ಅವರು ಕುರುಡಾಗಿದ್ದರು. ಮಮತಾ ಅವರ ಅಹಂಕಾರ ಹಲವು ಪಟ್ಟು ಹೆಚ್ಚಾಯಿತು.

ಮಮತಾ ಅವರು ತಮ್ಮ ಮೂರನೆಯ ಅವಧಿಯಲ್ಲಿ ಪ್ರಬುದ್ಧತೆಯನ್ನು ತೋರಬೇಕು. ವ್ಯಾಪಕ ಸಮಾಲೋಚನೆಗಳ ಮೂಲಕ ಆಡಳಿತ ನಡೆಸಬೇಕು, ತಾವು ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣವು ತಿರುಗುಬಾಣವಾಗುತ್ತದೆ, ಅದು ಬಹುಸಂಖ್ಯಾತರ ಕಡೆಯಿಂದ ಪ್ರತಿರೋಧ ವ್ಯಕ್ತವಾಗುವಂತೆ ಮಾಡುತ್ತದೆ ಎಂಬುದನ್ನು ಅವರಿಗೆ ನೆನಪಿಸಬೇಕು. ರಾಜ್ಯ ಸರ್ಕಾರದ ಅಧೀನದ ಸಂಸ್ಥೆಗಳನ್ನು ತಮ್ಮ ವಿರೋಧಿಗಳ ವಿರುದ್ಧ ಬಳಸಿಕೊಳ್ಳಬಾರದು. ಹಿಂದಿನ ಬಾರಿ ಮೂರು ಸ್ಥಾನ ಹೊಂದಿದ್ದ ಬಿಜೆಪಿ ಈ ಬಾರಿ 77 ಸ್ಥಾನ ಗೆದ್ದುಕೊಂಡಿದೆ. ಇದು ಸಣ್ಣ ಸಾಧನೆಯೇನೂ ಅಲ್ಲ. ಚುನಾವಣೆಯಲ್ಲಿ ಕಂಡ ವಿಕಾರಗಳನ್ನು ಅಲ್ಲಿಯೇ ಬಿಟ್ಟು, ಮಮತಾ ಅವರು ವಿರೋಧ ಪಕ್ಷದ ಜೊತೆ ಕೆಲಸ ಮಾಡಬೇಕು. ಗೋಡೆ ಬರಹದಷ್ಟು ಸ್ಪಷ್ಟವಾಗಿರುವುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಮಮತಾ ಅವರ ಅರಮನೆಗೆ ಲಗ್ಗೆ ಇಡುತ್ತದೆ.

ಇದೇ ‍ಪಾಠ ಪಿಣರಾಯಿ ವಿಜಯನ್ ಅವರಿಗೂ ಎಂ.ಕೆ. ಸ್ಟಾಲಿನ್ ಅವರಿಗೂ ಅನ್ವಯವಾಗುತ್ತದೆ. ವಿಜಯನ್ ಅವರ ಹಿಂದಿನ ಅವಧಿ, ಡಿಎಂಕೆಯ ಹಿಂದಿನ ಆಡಳಿತಾವಧಿ ವಿವಾದಗಳಿಂದ ಹೊರತಾಗಿಲ್ಲ. ‘ಗೆಲ್ಲಲೇಬೇಕು ಎಂಬ ದೃಢನಿಶ್ಚಯ ಇಲ್ಲದಿದ್ದರೆ, ಯಾವುದೇ ಯುದ್ಧಕ್ಕೆ ಇಳಿಯುವುದು ಮಾರಣಾಂತಿಕ ಆಗಬಹುದು’ ಎಂದು ಜನರಲ್ ಡಗ್ಲಾಸ್ ಮೆಕ್‌ಅರ್ಥುರ್ ಹೇಳಿದ್ದರು. ರಾಹುಲ್ ಗಾಂಧಿ ಅವರು ಈ ಮಾತಿನಿಂದ ಕೆಲವು ಪಾಠ ಕಲಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT