ಭಾನುವಾರ, ಆಗಸ್ಟ್ 14, 2022
26 °C
ಗಂಡು ದೃಷ್ಟಿಕೋನದ ಮಿತಿಯಾಚೆಗೆ ಚಾಚಿದೆ ಹೆಣ್ಣಿನ ಭಾವವಲಯ

ವಿಶ್ಲೇಷಣೆ: ಸ್ತ್ರೀ ಅಸ್ಮಿತೆ ಮತ್ತು ಶಿಕ್ಷಣದ ಹುಡುಕಾಟ

ಡಾ. ಗೀತಾ ವಸಂತ Updated:

ಅಕ್ಷರ ಗಾತ್ರ : | |

‘ಹೆಬ್ಬದುಕ ಒಂಟಿತನದೊಳದೇನು ಬದುಕುವೆಯೋ, ತಬ್ಬಿಕೊಳೋ ವಿಶ್ವವನು ಮಂಕುತಿಮ್ಮ’- ಡಿ.ವಿ.ಜಿ.

ನೈತಿಕತೆ ಮತ್ತು ಜವಾಬ್ದಾರಿ ಎಂಬ ಪದಗಳು ಹೆಣ್ಣಿನ ಬೆನ್ನಿಗಂಟಿಕೊಂಡೇ ಬಂದಿವೆ. ಆ ಪದಗಳು ಅರ್ಥ ಕಳೆದುಕೊಂಡಿರುವ ಇಂದಿನ ದಿನಮಾನದಲ್ಲಿ ಅವನ್ನು ಸೆರಗಿನ ಕೆಂಡದಂತೆ ಕಟ್ಟಿಕೊಂಡು ಬದುಕುತ್ತಿರುವ ಹೆಣ್ಣುಜೀವಗಳು ಅಂದಿನಿಂದಲೂ ಬೇಯುತ್ತಲೇ ಇವೆ. ವಿವಾಹವೆಂಬ ಸಂಸ್ಥೆಯು ಎಂದು ಅಧಿಕೃತವಾಯಿತೋ ಅಂದಿನಿಂದ ಅಧಿಕಾರ ಕೇಂದ್ರವೊಂದು ರೂಪಿತವಾಯಿತು. ಗಂಡೆಜಮಾನಿಕೆಯ ಸುತ್ತಲೂ ಬೆಳೆದ ವಂಶಪಾರಂಪರ್ಯದ ನೊಗಕ್ಕೆ ಹೆಣ್ಣನ್ನು ಹೂಡಲಾಯಿತು. ನೈತಿಕ ಶುದ್ಧತೆಯೆಂಬುದು ಅವಳ ದೇಹಕ್ಕೆ ಸೀಮಿತವಾಗಿ, ಪಾವಿತ್ರ್ಯ, ಪಾತಿವ್ರತ್ಯಗಳ ಸುಳಿಯೊಂದು ಅವಳನ್ನು ಸುತ್ತಿಕೊಳ್ಳುತ್ತ ಹೋಯಿತು.

ಹುಟ್ಟಿದ ಮಕ್ಕಳು ಬೇರಿಲ್ಲದಂತೆ ಪ್ರವಾಹದಲ್ಲಿ ಕೊಚ್ಚಿಹೋಗಬಾರದೆಂದು ಈ ನೈತಿಕತೆ ರೂಪುಗೊಂಡಿದೆ ಎಂಬರ್ಥದ ಮಾತೊಂದು ಗಿರೀಶ ಕಾರ್ನಾಡರ ‘ಯಯಾತಿ’ ನಾಟಕದಲ್ಲಿ ಬರುತ್ತದೆ. ಆದರೆ ಹುಟ್ಟಿದ ಮಕ್ಕಳನ್ನು ಕೊಚ್ಚಿಹೋಗಲು ಬಿಡದೇ ಪೊರೆಯುವುದು ಹೆಣ್ತನದ ಧರ್ಮ. ಆ ಹುಟ್ಟನ್ನು ನೈತಿಕ, ಅನೈತಿಕ ಎಂದು ನಿರ್ಧರಿಸುವ ಗಂಡು ದೃಷ್ಟಿಕೋನದ ಮಿತಿಯಾಚೆಗೆ ಹೆಣ್ಣಿನ ಭಾವವಲಯ ಚಾಚಿದೆ. ತಮ್ಮ ಸಾಂಸಾರಿಕ ಚೌಕಟ್ಟನ್ನು ಛಿದ್ರವಾಗದಂತೆ ಕಾಯುವಲ್ಲಿ ಈ ತಾಯಂದಿರ ಅಪಾರ ಶ್ರಮ, ತಾಳ್ಮೆ ಹಾಗೂ ನೈತಿಕಶಕ್ತಿಯೇ ಪ್ರಧಾನವಾಗಿದೆ. ಇಲ್ಲಿ ನಾನು ನೈತಿಕತೆಯೆಂದು ಕರೆಯುತ್ತಿರುವುದು ದೇಹಕ್ಕೆ ಮಾತ್ರ ಅಂಟಿದ ಹುಸಿ ನೈತಿಕತೆಯಲ್ಲ. ತಮಗೆ ದತ್ತವಾದ ಬದುಕಿಗೆ ನ್ಯಾಯ ಸಲ್ಲಿಸುವ ನೈತಿಕತೆ. ತಮ್ಮ ಮೇಲೆ ಹೇರಿದ ವ್ಯವಸ್ಥೆಯಲ್ಲೂ ಹೋರಾಡುತ್ತಲೇ ಗಂಡ, ಮಕ್ಕಳನ್ನು ಸಲಹುವ ಮಾತೃತ್ವ ಮೂಲದ ನೈತಿಕತೆ.

ನಮ್ಮ ನಿತ್ಯದ ಬದುಕಿನ ಕ್ರಿಯೆಗಳು ಆರಂಭ ವಾಗುವುದೇ ಹೆಂಗಳೆಯರು ಒಲೆ ಹಚ್ಚುವ ಮೂಲಕ. ತಮ್ಮ ಸುತ್ತಲ ಬದುಕನ್ನು ಬೆಚ್ಚಗಿಡುವಲ್ಲಿ ವ್ಯಯವಾಗುವ ಇವರ ಒಡಲುರಿ ಕಾಣದೇ ಹೋಗುತ್ತದೆ. ಯಾಕೆಂದರೆ ನಮ್ಮ ಇತಿಹಾಸ, ಆಳುವವರ ಇತಿಹಾಸ. ವರ್ತಮಾನವೂ ಅದೇ. ನಗರಗಳೆಂಬ ನರಕಗಳಲ್ಲಿ ಬೆಳಗಾಗುವುದೇ ಹೂಮಾರುವ ಮುದುಕಿಯ ಕೂಗಿನಿಂದ. ಸೊಪ್ಪು ಮಾರುವ ಹೆಂಗಸರ ರಾಗದಿಂದ. ಚುಮುಚುಮು ಚಳಿಯಲ್ಲಿ ಹೊರಬಿದ್ದರೆ ಪಿನ್ನು ಸಿಕ್ಕಿಸಿಕೊಂಡ ಹರಕು ನೈಟಿಗಳಲ್ಲಿ, ಮಾಸಿದ ಸೀರೆ, ಚೂಡಿದಾರುಗಳಲ್ಲಿ ಲಗುಬಗೆಯಿಂದ ನಡೆವ ಹೆಂಗಳೆಯರ ಆಕೃತಿ ಯಾವುದೋ ಬೀದಿಯ ತಿರುವುಗಳಲ್ಲಿ ಮರೆಯಾಗುತ್ತಿರುತ್ತದೆ. ಇವರೆಲ್ಲ ಮನೆಕೆಲಸಕ್ಕಾಗಿ ಬೀದಿಬೀದಿಗಳನ್ನು ಸುತ್ತುತ್ತಾ ತಮ್ಮ ಮನೆಯವರ ತುತ್ತಿನಚೀಲ ತುಂಬಿಸುತ್ತಾರೆ. ಬೀದಿಬದಿ ಕಸ ಗುಡಿಸುತ್ತಾ ಲೋಕದ ಸೂತಕ ಕಳೆಯುತ್ತಾರೆ. ಸಿಂಕಿನಲ್ಲಿ ಪೇರಿಸಿಟ್ಟ ಪಾತ್ರೆಗಳ ಮೇಲೆ ಕೈಯಾಡಿಸುತ್ತ, ಕಣ್ಣಿಗೆ ಕಾಣದಂತಿದ್ದ ಕಸವ ನಾಜೂಕಾಗಿ ಗುಡಿಸಿ ಸ್ವಚ್ಛಗೊಳಿಸುತ್ತ ಮಾತಿಗಿಳಿಯುವ ಹೆಂಗಸರ ಕಣ್ಣಲ್ಲಿ ಇಣುಕುವ ಅಸಂಖ್ಯ ಕಥೆಗಳನ್ನು ಓದಿದರೆ ನಿಜಕ್ಕೂ ದಿಗ್ಭ್ರಾಂತರಾಗುತ್ತೇವೆ. ನಮ್ಮ ಮನೆಗಳ ಕಸಮುಸುರೆಗಳನ್ನು ಸ್ವಚ್ಛಗೊಳಿಸಿ ನಮಗೆ ಹಾಯೆನಿಸುವಂತೆ ಮಾಡುವ ಅವರ ಬದುಕಿನ ಕರಕರೆಗಳು ಎಂದೂ ನೀಗದಂಥವು. ವಯಸ್ಸಿಗೆ ಬಂದ ಮಗ ಉಢಾಳನಾಗಿ, ಅವಳೇ ಚೀಟಿಯೆತ್ತಿ ಕೊಡಿಸಿದ ಬೈಕಿನಲ್ಲಿ ಅಂಡಲೆದು ತಡರಾತ್ರಿ ಬಂದು ಮಲಗಿರುತ್ತಾನೆ. ಸೋರುವ ಮನೆಯ, ಯಾವಾಗಾದರೂ ಒಕ್ಕಲೆಬ್ಬಿಸಬಹುದಾದ ಅಭದ್ರತೆಯಲ್ಲಿ ಅವಳ ರಾತ್ರಿಗಳು ಕಳೆದುಹೋಗುತ್ತವೆ.

ಸರ್ಕಾರಿ ಯೋಜನೆಯಡಿ ಲಭ್ಯವಾಗುವ ಮನೆಯ ಕನಸಿಗೆ ರೆಕ್ಕೆಹಚ್ಚುತ್ತಾಳೆ. ಭೂಮಿಗೆ ಹೋಲಿಸಲ್ಪಡುವ ಅವಳಿಗೆ ಒಂದು ತುಂಡು ನೆಲ ಇಂದಿಗೂ ಕನಸು. ಒಡೆತನದ ಪ್ರಶ್ನೆ ಬಂದಾಗಲೆಲ್ಲ ಅದು ಪುರುಷನ ಪಾಲು. ಇವಳು ಹೊಟ್ಟೆಬಟ್ಟೆ ಕಟ್ಟಿ ಕಟ್ಟಿಕೊಂಡ ಸೂರಿನಲ್ಲೂ ಅತಂತ್ರ ಸ್ಥಿತಿ ತಪ್ಪಿದ್ದಲ್ಲ. ದುಡಿಯದೇ ಕುಡಿದು ಮಲಗುವ ಗಂಡನಿಗೂ ಅವಳು ತನ್ನ ಪಾತಿವ್ರತ್ಯವನ್ನು ಸಾಬೀತುಪಡಿಸುತ್ತಲೇ ಇರಬೇಕಾದ ಅನಿವಾರ್ಯ!

ಕೊನೆಗೊಮ್ಮೆ ಮೈಕೊಡವಿ ಹೊರಡುತ್ತಾರೆ ಈ ಲಕ್ಷ್ಮಿ, ಪಾರ್ವತಿ, ಉಮಾ, ರಮಾ, ಸೀತೆ, ಸಾವಿತ್ರಿಯರು. ಕಳೆಕೀಳುತ್ತ, ನೇಜಿ ನೆಡುತ್ತ, ಕಟ್ಟಡಗಳಿಗೆ ಕಲ್ಲು ಹೊರುತ್ತ, ರೆಡಿಮೇಡು ಉಡುಪುಗಳಿಗೆ ಕಾಜುಗುಂಡಿ ಹೊಲೆಯುತ್ತ ಎಲ್ಲೆಂದರಲ್ಲಿ ಪ್ರತ್ಯಕ್ಷರಾಗುತ್ತಾರೆ. ಆದರೆ ಅವರ ಶ್ರಮ ಮಾತ್ರ ಅದೃಶ್ಯವಾಗೇ ಉಳಿಯುತ್ತದೆ. ಕೆಲವೊಮ್ಮೆ ಇವರು ದೇವಸ್ಥಾನಗಳ ಮುಂದೆ ಚಿಲ್ಲರೆತಾಟಿನೊಂದಿಗೂ ಕತ್ತಲ ತಿರುವಿನಲ್ಲಿ ಗಿರಾಕಿಗಳ ಕಾಯುತ್ತಲೂ ಸಿಗ್ನಲ್ಲುಗಳಲ್ಲಿ ಮಗುವನ್ನು ಜೋಳಿಗೆಯಲ್ಲಿ ನೇತಾಡಿಸಿಕೊಂಡು ಗೊಂಬೆ ಮಾರುತ್ತಲೂ ಪ್ರತ್ಯಕ್ಷರಾಗುತ್ತ ನಮ್ಮ ಸಾಕ್ಷಿಪ್ರಜ್ಞೆಯನ್ನೇ ತಿವಿಯುತ್ತಾರೆ. ಇಂಥವರನೇಕರ ಬದುಕಲ್ಲಿ ಗಂಡನೆಂಬುವಾತ ಸಾಮಾಜಿಕ ಮುದ್ರೆಗಷ್ಟೇ ಇರುವ ವಸ್ತು. ಒಳಗಿನ ಬಿಕ್ಕುಗಳಿಗೆ ಎಂದೂ ಸ್ಪಂದಿಸದೆ ಉಳಿದ ಕೊರಡು. ಬದುಕಿನ ನೊಗಕ್ಕೆ ಹೆಗಲು ಕೊಡದೇ ನುಣುಚಿಕೊಳ್ಳುವ ಅನುಕೂಲಸಿಂಧು. ಅವರಿಗೆ ಗೊತ್ತೇ ಇಲ್ಲ ತಮ್ಮಷ್ಟಕ್ಕೆ ತಾವೇ ಪರಿಪೂರ್ಣರೆಂದು. ತಮ್ಮ ಅಂತಃಶಕ್ತಿಯನ್ನು ಒರೆಗೆ ಹಚ್ಚಿ ಬದುಕುವ ತಮ್ಮ ಮಡಿಲಲ್ಲಿ ಈ ಲೋಕ ಉಸಿರಾಡುತ್ತಿದೆಯೆಂದು!

ಸದಾ ಮಧ್ಯಮವರ್ಗದ ಹಳವಂಡಗಳಲ್ಲಿ ನಲುಗುವ ನಮ್ಮಂಥವರಿಗೆ ಈ ಲೋಕ ಮುಖಾಮುಖಿಯಾಗುತ್ತಲೇ ಇರುತ್ತದೆ. ನಮ್ಮದೇ ಕನ್ನಡಿಯಂತೆ ಅವರು ಹಾಗೂ ಅವರ ನಿಟ್ಟುಸಿರಿನಂತೆ ನಾವು ಇದ್ದರೂ ಒಂದಾಗದ ಲೋಕಗಳಂತೆ ಬದುಕಿರುತ್ತೇವೆ. ನಡುವೆ ಶಿಕ್ಷಣವೆಂಬ ತೆರೆ ಮಾತ್ರ ನಮ್ಮನ್ನು ಪ್ರತ್ಯೇಕಿಸಿದಂತೆ ಅನಿಸುತ್ತದೆ ಅಷ್ಟೇ. ಒಲೆ ಬದಲಾದರೂ ಉರಿ ಬದಲಾಗಿಲ್ಲವೆಂಬುದೇ ಲೋಕಸತ್ಯ. ಈ ವಿದ್ಯಾಭ್ಯಾಸ, ಡಿಗ್ರಿಗಳು ಯಾವುದೂ ಅಧಿಕಾರದ ವಿನ್ಯಾಸಗಳನ್ನು ಬದಲಾಯಿಸದೇ ಹೋಗಿವೆ. ಮಹಾನಗರಿಗಳೆಂಬ ಬಾಣಲೆಯಲ್ಲಿ ಬೇಯುತ್ತ ತುಟಿಗೆ ಸವರಿದ ಲಿಪ್‌ಸ್ಟಿಕ್ಕುಗಳಲ್ಲಿ ಬಣ್ಣಗೆಟ್ಟ ಬದುಕ ಮುಚ್ಚಿಡಲು ಹೆಣಗುವ ಆಧುನಿಕ ಪತಿವ್ರತೆಯರು. ಬಣ್ಣಗೇಡಾದ ನೈಟಿಗಳಲ್ಲಿ ನರಳುವ ಕೆಳ ಮಧ್ಯಮ ವರ್ಗದ ನೀರೆಯರು. ಮಹಾನಗರಿಯ ಥಳಕಿಗೆ ಕಣ್ಬಿಟ್ಟ ಮಕ್ಕಳು ‘ಇಂಥ ದರಿದ್ರ ಬದುಕಿಗಾಗಿ ಯಾಕಾದರ ಹುಟ್ಟಿಸಿದೆ’ ಎಂದು ಪ್ರಶ್ನಿಸುವಾಗ ಅಪ್ರತಿಭರಾಗಿ ನಿಲ್ಲುವ ಕುಂಕುಮ ಸೌಭಾಗ್ಯವತಿಯರು. ಈ ಮದುವೆಯೆಂಬ ವ್ಯವಸ್ಥೆಗೆ ಸಿಲುಕಲು ನಾನೊಲ್ಲೆ ಎಂಬ ಮಗಳಿಗೆ ಉತ್ತರ ಕೊಡಲಾಗದೇ ಮಾತುಸೋತ ಮಾತೆಯರು...

ಸ್ತ್ರೀ ಶಿಕ್ಷಣ, ಸಮಾನತೆ, ಮಹಿಳಾ ಸಬಲೀಕರಣ, ರಾಜಕೀಯ ಮೀಸಲಾತಿ ಮುಂತಾದ ಘನವಾದ ಪದಗಳು ಪಠ್ಯಗಳಲ್ಲಿವೆ. ಸೆಮಿನಾರುಗಳಲ್ಲಿ ಮೇಜುಕುಟ್ಟಿ ಮಾತನಾಡುವ ಪರಿಭಾಷೆಯನ್ನೂ ಕಲಿತಾಗಿದೆ. ಮಹಾಪ್ರಬಂಧಗಳು ಮಡಚಿಟ್ಟಲ್ಲೇ ಮುಗುಳ್ನಗುತ್ತಿವೆ. ಅವಳು ಇನ್ನೂ ಅಲ್ಲೇ ಇದ್ದಾಳೆ. ಹೆಣ್ಣುಮಕ್ಕಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆಂದು ಬೆನ್ನುತಟ್ಟುವ ಲೋಕವೇ ಅವಕಾಶಗಳ ಪ್ರಶ್ನೆ ಬಂದಾಗ ಪುರುಷಪಕ್ಷಪಾತಿಯಾಗಿಬಿಡುತ್ತದೆ. ಅಧಿಕಾರವು ತನ್ನ ಅಹಂ ಅನ್ನು ಓಲೈಸುವ ಸ್ತ್ರೀಯರನ್ನೇ ಆದರ್ಶವಾಗಿ ಮುಂದಿರಿಸುತ್ತದೆ. ಆನ್‌ಲೈನ್ ಕ್ಲಾಸಿನಲ್ಲಿ ಸ್ತ್ರೀವಾದಿ ಪಠ್ಯವೊಂದನ್ನು ಪಾಠ ಮಾಡಲು ಅವಳು ಕುಳಿತಿದ್ದಾಳೆ. ಮುಂದೆ ಕಾಣದ ವಿದ್ಯಾರ್ಥಿಗಳನ್ನು ಕಲ್ಪಿಸಿಕೊಂಡು. ಅವಳು ಆಡುವ ಮಾತುಗಳೆಲ್ಲ ಸುತ್ತಲಿನ ಸೂಕ್ಷ್ಮ ಕ್ರೌರ್ಯದಲ್ಲಿ ಕಲಸಿಹೋಗುತ್ತಿರುವಾಗ ಪಾಠ ಕೇಳಲು ಕುಳಿತ ಹುಡುಗಿಯರ ಮನಃಸ್ಥಿತಿಯನ್ನು ಅರಿಯಲು ಮಹಿಳಾ ಅಧ್ಯಯನದ ಪರಿಕಲ್ಪನಾತ್ಮಕ ಚೌಕಟ್ಟುಗಳು ಸೀಮಿತವೆನಿಸತೊಡಗುತ್ತವೆ.

ಲಾಕ್‌ಡೌನಿನಲ್ಲಿ ಮನೆಗೆಲಸಕ್ಕೂ ಸಂಚಕಾರ ಬಂದಾಗ ಎಲ್ಲಿ ಮಾಯವಾದರು ಇವರ ತಾಯಂದಿರು? ಸೇಲ್ಸ್‌ಗರ್ಲುಗಳಾಗಿ ಬಾಗಿಲು ತಟ್ಟುತ್ತಿದ್ದ ಇವರ ಅಕ್ಕಂದಿರು? ನಾವು ಮಾಸ್ಕುಗಳಲ್ಲಿ ಮುಖ ಮುಚ್ಚಿಕೊಂಡು ಶಬ್ದಲಜ್ಜೆಯಲ್ಲಿ ಅವಿತಿರುವಾಗ? ಕೌಟುಂಬಿಕ ಹಿಂಸೆಗಳನ್ನು ಗೆಲ್ಲಲು ಯಾವ ಕಾನೂನು, ಯಾವ ಆರ್ಥಿಕ ನೀತಿ, ಯಾವ ಚಂದದ ಹೆಸರಿಟ್ಟುಕೊಂಡ ಯೋಜನೆಗಳು ಅವರನ್ನು ಸಶಕ್ತಗೊಳಿಸಿದವು?

‘ಮಗಳನ್ನು ಏನು ಓದಿಸಲಿ ಅಕ್ಕಾ’ ಎಂಬ ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಸವಾಲೇ. ಹಣ ತರುವ ಕೋರ್ಸುಗಳ ಬಗ್ಗೆ ಹೇಳಬಹುದು. ಅಸ್ಮಿತೆಯನ್ನು ಕಟ್ಟಿಕೊಳ್ಳುವ, ಸ್ವಯಂಪೂರ್ಣರಾಗುವ ಯಾವ ಕೋರ್ಸುಗಳ ಬಗ್ಗೆ ಹೇಳುವುದು? ಶಿಕ್ಷಣವು ಹೆಣ್ಣಿನ ಪಾಲಿಗೆ ನಿಜವಾಗಿ ಶಕ್ತಿಯಾಗಬೇಕಾದರೆ ಇಡೀ ಸಮಾಜ ಲಿಂಗಸೂಕ್ಷ್ಮತೆಗೆ ಕಣ್ತೆರೆಯಬೇಕು. ಶಿಕ್ಷಣ ಸಂಸ್ಥೆಗಳು ಮೊದಲು ಈ ಹೆಜ್ಜೆ ಇರಿಸಬೇಕು. ಇದೂ ನಮ್ಮ ನೈತಿಕ ಜವಾಬ್ದಾರಿಯೇ.

ಲೇಖಕಿ: ಮುಖ್ಯಸ್ಥೆ, ಕನ್ನಡ ವಿಭಾಗ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು