ಶುಕ್ರವಾರ, ಡಿಸೆಂಬರ್ 3, 2021
20 °C
ಬಸವಳಿಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತರುಣ ಪಡೆ ಜೀವ ತುಂಬಬಲ್ಲದೇ?

ವಿಶ್ಲೇಷಣೆ: ಪ್ರಿಯಾಂಕಾ ಝಳಪಿಸಿದ ಮಹಿಳಾ ಕಾರ್ಡ್

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

Prajavani

ಈಚೆಗೆ ರೈತ ಚಳವಳಿಗಾರರ ಮೇಲೆ ದುರಹಂಕಾರದಿಂದ ವಾಹನ ಚಲಾಯಿಸಿ ಕೊಂದ ಭೀಕರ ದೌರ್ಜನ್ಯವನ್ನು ಖಂಡಿಸಿ ಲಖಿಂಪುರಕ್ಕೆ ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ ಉತ್ತರ ಪ್ರದೇಶ ಸರ್ಕಾರವು ಪೊಲೀಸರನ್ನು ಛೂಬಿಟ್ಟಿತು. ಸರ್ಕಾರಕ್ಕೆ ದಿಟ್ಟ ಉತ್ತರ ಕೊಟ್ಟ ಪ್ರಿಯಾಂಕಾ ಹೊಸ ಇಮೇಜ್ ವೈರಲ್ ಆಗಿದೆ.

ಎರಡು ವರ್ಷಗಳ ಕೆಳಗೆ ಕೂಡ ಉತ್ತರಪ್ರದೇಶದ ಸಾಮಾಜಿಕ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆಯಾದಾಗ ಅವರ ಮನೆಗೆ ಭೇಟಿ ಕೊಡಲು ಹೊರಟ ಪ್ರಿಯಾಂಕಾ ಅವರನ್ನು ಪೊಲೀಸರು ತಡೆದಿದ್ದರು; ಕಾಂಗ್ರೆಸ್ ಕಾರ್ಯಕರ್ತನ ಸ್ಕೂಟರನ್ನೇರಿ ಪ್ರಿಯಾಂಕಾ ಗುರಿ ತಲುಪಿದ್ದರು. ಕಳೆದ ವರ್ಷ ಹತ್ರಾಸ್‌ನಲ್ಲಿ ಅತ್ಯಾಚಾರಕ್ಕೆ ಬಲಿಯಾದ ಅಮಾಯಕ ಹುಡುಗಿಯ ಮನೆಗೆ ಭೇಟಿ ಕೊಡಲು ಹೊರಟಿದ್ದ ಪ್ರಿಯಾಂಕಾ, ರಾಹುಲ್ ಇಬ್ಬರನ್ನೂ ಪೊಲೀಸರು ತಡೆದಿದ್ದರು. ಇದೀಗ ಪ್ರಿಯಾಂಕಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಉತ್ತರಪ್ರದೇಶದ ತರುಣ ಮಹಿಳಾ ಪೊಲೀಸರ ಮೇಲೆ ಅಧಿಕಾರಿಗಳು ಗರಂ ಆಗಿದ್ದಾರೆ… ಇವೆಲ್ಲ ಪ್ರಿಯಾಂಕಾ ಅವರ ಹೊಸ ಇಮೇಜಿಗೆ ಹೆದರಿದ ಸರ್ಕಾರಿ ವ್ಯವಸ್ಥೆಯ ಬೆದರು ನಡೆಗಳಲ್ಲದೆ ಮತ್ತೇನು?!

ಅಂತೂ ಪ್ರಿಯಾಂಕಾ ಕೊನೆಗೂ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಧುಮುಕಿದ್ದಾರೆ. ಮೊನ್ನೆ ಅಮರಿಂದರ್ ಸಿಂಗ್ ಅವರನ್ನು ಕೆಳಗಿಳಿಸಿ, ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಆರಿಸಿ ದ್ದರಲ್ಲೂ ಪ್ರಿಯಾಂಕಾ ನಿರ್ಧಾರ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮ ಮಾಡದ ಪ್ರಿಯಾಂಕಾ ಈ ಸಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿಯಂತೆಯೇ ಮುನ್ನುಗ್ಗುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ನಿರೀಕ್ಷೆಯನ್ನಂತೂ ಹುಟ್ಟಿಸಿದೆ.

ಈ ನಿರೀಕ್ಷೆಗೆ ಬಲ ತುಂಬುವಂತೆ ಪ್ರಿಯಾಂಕಾ ಹಠಾತ್ತನೆ ಮಹಿಳಾ ಕಾರ್ಡ್ ಚಲಾಯಿಸಿದ್ದಾರೆ; ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇಕಡ 40 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಿದೆ ಎಂದು ಘೋಷಿಸಿದ್ದಾರೆ. ಈ ಘೋಷಣೆ ಈಚೆಗೆ ನಿಶ್ಚಿತ ಮತದಾರ ವಲಯವಿಲ್ಲದ ಕಾಂಗ್ರೆಸ್ಸಿನ ಅನಿವಾರ್ಯ ಜೂಜಿನಂತೆಯೂ ಕಾಣುತ್ತಿದೆ! ‘ವಿಧಾನಸಭಾ ಚುನಾವಣೆಗೆ ನಿಲ್ಲುತ್ತೀರಾ’ ಎಂಬ ಪ್ರಶ್ನೆಗೆ ಪ್ರಿಯಾಂಕಾ, ‘ಯಾಕಾಗಬಾರದು?’ ಎಂದಿದ್ದಾರೆ; ವಿಧಾನಸಭೆಯ ನೇರ ಚುನಾವಣೆಯನ್ನು ಎದುರಿಸದಿರುವ ‘ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿಯ ಎದುರು ಚುನಾವಣೆಗೆ ನಿಲ್ಲುತ್ತೀರಾ’ ಎಂಬ ಪ್ರಶ್ನೆಗೂ ಪ್ರಿಯಾಂಕಾ ‘ಯಾಕಾಗಬಾರದು?’ ಎಂದಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಪಕ್ಷವನ್ನು ಮುನ್ನಡೆಸುತ್ತಾ, ಅಲ್ಲಿ ಸ್ಪರ್ಧಿಸುವುದು ಬಹುತೇಕ ಗ್ಯಾರಂಟಿಯಾಗಿದೆ; ಹೊಸ ತಲೆಮಾರಿನ ಕೈಗೆ ನಾಯಕತ್ವವನ್ನು ದಾಟಿಸಲೇಬೇಕಾದ ಅನಿವಾರ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲೇಬೇಕಾಗಿದೆ.

ಕಾಂಗ್ರೆಸ್ಸಿನಲ್ಲಿ ಹೊಸ ನಾಯಕಿಯೊಬ್ಬರು ಮೂಡುತ್ತಿರುವ ಈ ಕಾಲದಲ್ಲಿ ಕನ್ಹಯ್ಯ ಕುಮಾರ್ ಥರದ ಹೊಸ ತಲೆಮಾರಿನ ಹುಡುಗರು ಕಾಂಗ್ರೆಸ್ ಸೇರುತ್ತಿದ್ದಾರೆ. ಜಿಗ್ನೇಶ್ ಮೆವಾನಿ ಥರದ ಫೈರ್ ಬ್ರ್ಯಾಂಡ್ ಹಿಂದುಳಿದ ನಾಯಕ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಈ ಇಬ್ಬರೂ ಇಡೀ ದೇಶದಲ್ಲೇ ಹೊಸ ತಲೆಮಾರಿನ ಸಮಾನತಾಭಾವದ ಹುಡುಗ, ಹುಡುಗಿಯರ ಹೊಸ ಐಕನ್‌ಗಳಾಗಿ ಬೆಳೆದಿದ್ದಾರೆ. ಉತ್ತರಪ್ರದೇಶ ಕಾಂಗ್ರೆಸ್ಸಿನ ತರುಣ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ನಿರಂತರ ಪ್ರತಿಭಟನೆಗಳ ಮೂಲಕ ಸುದ್ದಿಯಲ್ಲಿದ್ದಾರೆ. ಇನ್ನು ಪ್ರಧಾನಮಂತ್ರಿ ಸ್ಥಾನ ಕುರಿತಂತೆ ಈವರೆಗಿನ ಸಮೀಕ್ಷೆಗಳಲ್ಲಿ ರಾಹುಲ್ ಗಾಂಧಿ ಎರಡನೆಯ ಸ್ಥಾನದಲ್ಲಂತೂ ಇದ್ದೇ ಇದ್ದಾರೆ. ಬಿಜೆಪಿ ನಿರಂತರವಾಗಿ ರಾಹುಲ್ ಮೇಲೆ ದಾಳಿ, ಗೇಲಿ ಮಾಡುತ್ತಿರುವುದಕ್ಕೆ ಅವರ ಪ್ರಭಾವ ಬೆಳೆಯುತ್ತಿರುವ ಬಗೆಗಿನ ಭಯವೇ ಮೂಲ ಕಾರಣ.

ಹೀಗೆ ತಯಾರಾಗುತ್ತಿರುವ ಹೊಸ ತಲೆಮಾರಿನ ಕಾಂಗ್ರೆಸ್ ಜೊತೆಗೆ ಬಿಹಾರದ ನವನಾಯಕ ತೇಜಸ್ವಿ ಯಾದವ್, ಎಂ.ಕೆ.ಸ್ಟಾಲಿನ್‌ ಥರದ ಜನಪ್ರಿಯ ನಾಯಕರೂ ಇದ್ದಾರೆ. ಉತ್ತರಪ್ರದೇಶದಲ್ಲಿ ಪುನಃ ಅಧಿಕಾರ ಹಿಡಿಯಲು ತೀವ್ರ ಪ್ರಯತ್ನ ನಡೆಸಿರುವ ಅಖಿಲೇಶ್ ಸಂದರ್ಭ ಬಂದರೆ ಕಾಂಗ್ರೆಸ್ ಜೊತೆ ಹೋಗಬಲ್ಲರು. ಪಶ್ಚಿಮ ಬಂಗಾಳದಂತೆಯೇ ಈಶಾನ್ಯ ರಾಜ್ಯಗಳಲ್ಲೂ ತಳವೂರಿ, ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ 60-70 ಸ್ಥಾನಗಳನ್ನು ಪಕ್ಕಾ ಮಾಡಿ ಕೊಳ್ಳಲು ಮುನ್ನುಗ್ಗುತ್ತಿರುವ ತೃಣಮೂಲ ಕಾಂಗ್ರೆಸ್ ಕೂಡ ಕಾಂಗ್ರೆಸ್ ಜೊತೆಗೆ ಹೋಗಬಲ್ಲದು.

ಇಂಥ ಸಾಧ್ಯತೆಗಳ ಸ್ಥಿತಿಯಲ್ಲೂ ಕಾಂಗ್ರೆಸ್ ತನಗೊಬ್ಬ ಹೊಸ ಡೈನಮಿಕ್ ರಾಷ್ಟ್ರೀಯ ಅಧ್ಯಕ್ಷರನ್ನು ಹುಡುಕಿಕೊಳ್ಳಲು ಆಗದಿರುವುದು ವಿಚಿತ್ರ. ಕಾಂಗ್ರೆಸ್ಸಿ ನಲ್ಲಿ ಬೇರು ಬಿಟ್ಟು, ಈಗ ಸಾವಿರ ವೋಟುಗಳನ್ನೂ ತರಲಾಗದ ಕೆಲವಾದರೂ ಮುದಿಗೊಡ್ಡು ಮರಗಳು ಕಾಂಗ್ರೆಸ್ ವರ್ಕಿಂಗ್ ಕಮಿಟಿಯಿಂದ ಹೊರಬರದಿದ್ದರೆ, ಕಾಂಗ್ರೆಸ್ ಮರುಜೀವ ಪಡೆಯುವುದು ಕಷ್ಟ. ಹಾಗೆಂದು ಹಿರಿಯರನ್ನೆಲ್ಲ ಅಂಚಿಗೆ ತಳ್ಳಿದರೂ ಕಾಂಗ್ರೆಸ್ಸಿಗೆ ಕಷ್ಟ. ಕಮಲ್‌ನಾಥ್, ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋತ್ ಥರದ ಸ್ಟ್ರ್ಯಾಟಿಜಿ ಮಾಸ್ಟರುಗಳು ಪಕ್ಷಕ್ಕೆ ಅನಿವಾರ್ಯ. ಕರ್ನಾಟಕದಲ್ಲೂ ಸಿದ್ದರಾಮಯ್ಯನವರ ಥರದ ಹಿರಿಯರ ಅನುಭವ ಹಾಗೂ ಜನಮನ್ನಣೆಯ ಬಲವಿಲ್ಲದೆ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಆದರೆ ಈ ಹಿರಿಯ ನಾಯಕರ ಜೊತೆಗೇ ತರುಣ ನಾಯಕರಿಗೆ ಹಾದಿ ಮಾಡಿಕೊಡುವ ಕೆಲಸವನ್ನೂ ಕಾಂಗ್ರೆಸ್ ದೊಡ್ಡ ಮಟ್ಟದಲ್ಲೇ ಮಾಡಬೇಕಾಗಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಹಿರಿಯ–ಕಿರಿಯರ ತಿಕ್ಕಾಟದಿಂದಲೇ ಕಾಂಗ್ರೆಸ್ ಸೊರಗುತ್ತಿದೆ. ಮೊದಲು ರಾಜ್ಯಗಳಲ್ಲಿ ಗಟ್ಟಿಯಾಗಿ, ನಂತರ ಕೇಂದ್ರದತ್ತ ಸಾಗುವ ರಾಜಕಾರಣಕ್ಕೆ ಮರಳುವುದು ಕಾಂಗ್ರೆಸ್ಸಿಗೆ ಈಗ ಅನಿವಾರ್ಯ.

ಈ ಸಲ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಚುನಾವಣೆಗಳಲ್ಲಿ ರೈತ ಚಳವಳಿಯ ಪ್ರಭಾವವೂ ನಿರ್ಣಾಯಕವಾಗಲಿದೆ. ಕಾಂಗ್ರೆಸ್ ರೈತಪರ ಪಕ್ಷವಲ್ಲದಿದ್ದರೂ ಆಡಳಿತ ವಿರೋಧಿ ಅಲೆಯ ಲಾಭ ಕಾಂಗ್ರೆಸ್ಸಿಗೂ ಸಿಗಲಿದೆ. ಇಂಥ ಸಂದರ್ಭದಲ್ಲಿ ಪ್ರಿಯಾಂಕಾ ಮಹಿಳಾ ಕಾರ್ಡ್ ಕೊನೆಯಪಕ್ಷ ಶೇಕಡ ಐದರಷ್ಟು ಹೆಚ್ಚಿನ ಮತಗಳನ್ನು ಪಕ್ಷದೆಡೆಗೆ ತಿರುಗಿಸಿಕೊಂಡರೂ ಅದೊಂದು ಪವಾಡವೇ. ಮಮತಾ ಬ್ಯಾನರ್ಜಿ ಮಹಿಳಾ ಮತಗಳನ್ನು ಒಗ್ಗೂಡಿಸಿಕೊಂಡು ಗೆದ್ದರು; ಮಹಿಳಾ ಮತಗಳ ಒಗ್ಗೂಡಿಕೆಯಲ್ಲಿ ಒಡಿಶಾದ ನವೀನ್ ಪಟ್ನಾಯಕ್, ಬಿಹಾರದ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಇಂಥ
ಪ್ರಯೋಗಕ್ಕಿಳಿದಿರುವ ಪ್ರಿಯಾಂಕಾ ಈ ದಿಸೆಯಲ್ಲಿ ಎಸ್‌ಪಿ, ಬಿಎಸ್‌ಪಿ, ಆರ್‌ಜೆಡಿ ಪಕ್ಷಗಳು ಎತ್ತುತ್ತಲೇ ಇರುವ ಜಾತ್ಯಾಧಾರಿತ ಮಹಿಳಾ ಮೀಸಲಾತಿಯನ್ನೂ ಟಿಕೆಟ್ ಹಂಚಿಕೆಯಲ್ಲೇ ಸಾಧಿಸಿಬಿಟ್ಟರೆ, ಅದು ಕ್ರಾಂತಿಕಾರಕವಾದ ಜಾಣ ನಡೆಯಾಗಬಲ್ಲದು. ಕಾಂಗ್ರೆಸ್ಸಿನ ಕಾಲದಲ್ಲಿ ಜಾರಿಗೆ ಬಂದ ಸ್ಥಳೀಯ ಸಂಸ್ಥೆಗಳ ಮಹಿಳಾ ಮೀಸಲಾತಿಯ ಫಲವಾಗಿ ಉತ್ತರಪ್ರದೇಶದಲ್ಲೂ ಎಲ್ಲ ಜಾತಿಗಳಿಂದಲೂ ದಕ್ಷ ನಾಯಕಿಯರು ಹೊರಹೊಮ್ಮಿದ್ದಾರೆ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ಸದಸ್ಯರಾಗಿ, ಅಧ್ಯಕ್ಷಿಣಿ ಯರಾಗಿ ಕೆಲಸ ಮಾಡಿರುವ ಈ ಹೊಸ ನಾಯಕಿಯರು ಶಾಸಕಿಯರಾಗಿ, ಸಚಿವೆಯರಾಗಿ, ಮುಖ್ಯಮಂತ್ರಿ
ಯಾಗಿ ಯಾಕೆ ರೂಪುಗೊಳ್ಳಲಾರರು? ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಸವಾಲಿನಿಂದಾಗಿ, ಇತರ ರಾಜಕೀಯ ಪಕ್ಷಗಳ ಟಿಕೆಟ್ ಹಂಚಿಕೆಯಲ್ಲೂ ಮಹಿಳಾ ಮೀಸಲಾತಿ ಜಾರಿಯಾಗತೊಡಗಿದರೆ ಮಹಿಳಾ ಮೀಸಲಾತಿ ಮಸೂದೆ ಪಾರ್ಲಿಮೆಂಟಿನಲ್ಲೂ ಮುಂದೊಮ್ಮೆ ಜಾರಿಯಾಗಬಲ್ಲದು.

ಇಷ್ಟಾಗಿಯೂ ದೇಶದ ಹಲವೆಡೆ ಬಸವಳಿಯು ತ್ತಿರುವ ಕಾಂಗ್ರೆಸ್ಸಿಗೆ ಈ ಮಹಿಳಾ ಕಾರ್ಡ್ ಶಕ್ತಿ ತುಂಬಬಲ್ಲದೆ? ವಿಶ್ಲೇಷಕರು ತೋರಿಸಿರುವಂತೆ ದೇಶದಾದ್ಯಂತ 200 ಪಾರ್ಲಿಮೆಂಟರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ತಕ್ಕಮಟ್ಟಿನ ಬೆಂಬಲವಿದೆ. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಯ 18 ಕೋಟಿ ವೋಟುಗಳ ಎದುರು ಕಾಂಗ್ರೆಸ್ 12 ಕೋಟಿ ವೋಟು ಪಡೆದಿದ್ದ ಅಂಕಿಅಂಶವೂ ಕಾಂಗ್ರೆಸ್ಸಿಗೆ ಸ್ಫೂರ್ತಿ ತರಬಹುದು. ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕಾರದ ಸಾಧ್ಯತೆ ಕಾಣದಿದ್ದರೆ ಕಾರ್ಯಕರ್ತರು, ಮತದಾರರು ಉತ್ಸಾಹಗೊಳ್ಳಲಾರರು. ಈಗ ಸ್ಥಳೀಯ ನಾಯಕರ ಛಾತಿಯಿಂದಾಗಿ, ಕಟ್ಟಾ ಬೆಂಬಲಿಗ ಜಾತಿಗಳು, ಸಾಮಾಜಿಕ ವಲಯಗಳು ಹಾಗೂ ಜಾತ್ಯತೀತ ವಲಯಗಳಿಂದಾಗಿ ಕಾಂಗ್ರೆಸ್ ಉಳಿದುಕೊಂಡಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕರು ಕಿರಿಯರನ್ನು ತುಳಿಯು ವುದೇ ತಮ್ಮ ಉಳಿವೆಂಬ ವಿನಾಶಕಾರಿ ರಾಜಕಾರಣ ಬಿಟ್ಟು ಹೊಸ ನಾಯಕರನ್ನು ತಮ್ಮೊಡನೆ ಒಯ್ಯುತ್ತಾ, ಬೆಳೆಸುತ್ತಾ ತಾವೂ ಉಳಿಯುವ ರಾಜಕಾರಣ ಮಾಡದಿ ದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಹಿರಿಯರೂ ಕಿರಿಯರೂ ಒಟ್ಟಿಗೇ ನೆಲ ಕಚ್ಚುವುದು ಗ್ಯಾರಂಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು