ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಒಟ್ಟಿಗೇ ಬೆಳೆಯೋಣ, ಪೋಷಿಸೋಣ, ಸುಸ್ಥಿರಗೊಳ್ಳೋಣ!

ಇಂದು ವಿಶ್ವ ಆಹಾರ ದಿನ
Last Updated 16 ಅಕ್ಟೋಬರ್ 2020, 5:58 IST
ಅಕ್ಷರ ಗಾತ್ರ

2019, ಜುಲೈ 22. ಬಳ್ಳಾರಿ ನಗರದ ಕೋಟಾಲಪಲ್ಲಿ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿದ್ದ ಅಂದಿನ ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಕೆ.ರಾಮೇಶ್ವರಪ್ಪ ಅವರನ್ನು 81ರ ವೃದ್ಧೆ ಮುತ್ಯಾಲಮ್ಮ ತರಾಟೆಗೆ ತೆಗೆದುಕೊಂಡಿದ್ದರು.

‘ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಕಾಯುತ್ತಿದ್ದರೂ ಸಿಕ್ಕಿಲ್ಲ’ ಎಂಬುದು ಅವರ ಆಕ್ರೋಶಭರಿತ ಮತ್ತು ಅಸಹಾಯಕ ದೂರಾಗಿತ್ತು. ಚೀಟಿಗಾಗಿ ಅಲೆದಾಡಿ ಸುಸ್ತಾಗಿದ್ದ ವೃದ್ಧೆಯ ಆಕ್ರೋಶದ ಮಾತು ಒಂದೇ ದಿನದಲ್ಲಿ ಆಕೆ ಇದ್ದ ಜಾಗಕ್ಕೇ ಆಹಾರ ಅದಾಲತ್‌ ಅನ್ನು ಕರೆತಂದಿತ್ತು. ಮಾರನೇ ದಿನವೇ ಅಲ್ಲಿ ನಡೆದ ಅದಾಲತ್‌ನಲ್ಲಿ ಆಕೆಗೆ ಪಡಿತರ ಚೀಟಿ ಸಿಕ್ಕಿತ್ತು. ಆರಂಭದಲ್ಲೇ ಆ ಅಧಿಕಾರಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.‌

ಪಡಿತರ ವಿತರಣೆ ವ್ಯವಸ್ಥೆಯ ಒಳ್ಳೆಯ ಮತ್ತು ಕೆಟ್ಟ ಮುಖಗಳೆರಡೂ ಅಲ್ಲಿ ಅನಾವರಣಗೊಂಡಿದ್ದವು. ಯಾವ ಇಲಾಖೆಯು ವರ್ಷಗಳ ಕಾಲ ಚೀಟಿ ಕೊಡದೇ ಸತಾಯಿಸಿತ್ತೋ, ಅದೇ ಇಲಾಖೆಯ ಅಧಿಕಾರಿ ವೃದ್ಧೆಯ ಮನೆ ಬಾಗಿಲಿಗೇ ಬಂದು ಚೀಟಿ ಕೊಟ್ಟಿದ್ದರು. ಜನಾಕ್ರೋಶಕ್ಕೆ ಮಾತ್ರ ಆಡಳಿತ ಸ್ಪಂದಿಸುತ್ತದೆ ಎಂಬ ಸತ್ಯ ಮತ್ತೊಮ್ಮೆ ಸಾಬೀತಾಗಿತ್ತು.

ವಿಶ್ವ ಆಹಾರ ದಿನದಂದು ಈ ಘಟನೆಯನ್ನು ನೆನಪಿಸಿಕೊಳ್ಳಲು ಕಾರಣವೂ ಇದೆ. ಈ ಘಟನೆಯನ್ನು ಆಹಾರ ಇಲಾಖೆಯ ಕಾರ್ಯವೈಖರಿಯ ವೈರುಧ್ಯಗಳ ಹಿನ್ನೆಲೆಯಲ್ಲಷ್ಟೇ ನೋಡಿದರೆ ಸಾಲದು. ಆಹಾರ ಭದ್ರತೆಯ ಆಯಾಮದಿಂದಲೂ ನೋಡಬೇಕು. ವೃದ್ಧೆಗೆ ಆಹಾರ ಭದ್ರತೆ ಇರಲಿಲ್ಲ.

ಆಹಾರ ಎಲ್ಲರಿಗೂ ಸದಾಕಾಲ ಸಿಗಬೇಕು. ಯಾರಿಗೂ ದುರ್ಲಭವಾಗಿರಬಾರದು. ಸಿಗುವ ಆಹಾರ ಪೌಷ್ಠಿಕವಾಗಿರಬೇಕು ಎಂಬ ‘ಆಹಾರ ಭದ್ರತೆ’ಯ ಪ್ರಮುಖ ತತ್ವಗಳು ಈಗ ಅಣಕಕ್ಕೆ ಈಡಾಗಿವೆ.

ಹಸಿವಾದಾಗ ಆಹಾರ ಸಿಗುವುದಿಲ್ಲ. ಸಿಕ್ಕರೂ ಸದಾಕಾಲ ಸಿಗುವ ಭರವಸೆ ಇಲ್ಲ. ಪೌಷ್ಠಿಕವೇ? ಅದನ್ನು ಖಾತರಿಪಡಿಸುವ ಹೊಣೆ ಹೊರುವವರೂ ಅಪರೂಪ.

ಸ್ಥಳೀಯವಾಗಿ ಆಹಾರ ಬೆಳೆಯುವ ರೈತರು ಮತ್ತು ಅದನ್ನು ಮಾರುವ ಸಣ್ಣ ವ್ಯಾಪಾರಸ್ಥರ ಸುಸ್ಥಿರ ಅಭಿವೃದ್ಧಿಯಲ್ಲೇ ಆಹಾರ ಭದ್ರತೆಯನ್ನೂ ಕಾಯ್ದುಕೊಳ್ಳಬೇಕೆಂಬ ಸರಳ ಆಶಯವೂ ಈಗ ದಿಕ್ಕಾಪಾಲಾಗಿದೆ. ಹೀಗಾಗಿ ಸ್ಥಳೀಯ ಕೃಷಿ ಮತ್ತು ಆಹಾರ ಸಂಸ್ಕೃತಿಯೂ ಅನಾಥವಾಗಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ತಮಗೆ ಅನ್ಯಾಯವಾಗುತ್ತದೆ ಎಂಬ ರೈತರ ಕೂಗು ಅರಣ್ಯರೋದನವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳದೇ ಇರಲಾದೀತೇ.

ಇಂಥ ಪರಿಸ್ಥಿತಿಯಲ್ಲೇ ಎಂದಿನಂತೆ ಮತ್ತೊಂದು ವಿಶ್ವ ಆಹಾರ ದಿನ ಬಂದಿದೆ. ಒಟ್ಟಿಗೇ ಬೆಳೆಯೋಣ, ಪೋಷಿಸೋಣ, ಸುಸ್ಥಿರಗೊಳ್ಳೋಣ ಎಂಬುದು ಈ ಬಾರಿಯ ಧ್ಯೇಯ ವಾಕ್ಯ. ಜಗತ್ತಿನ ಎಲ್ಲ ಜನ ಸಮುದಾಯ, ಸಂಸ್ಕೃತಿಗಳು ಪರಸ್ಪರರ ಒಳಿತಿಗಾಗಿ ಹಸಿವು ನೀಗಿಕೊಳ್ಳಬೇಕೆಂಬ ಮಹದಾಶಯ ಇದು. ಆಶಯವೇನೋ ದೊಡ್ಡದೇ. ಅನುಷ್ಠಾನ?

ವರ್ಷಕ್ಕೊಂದು ಆಶಯವನ್ನಿಟ್ಟುಕೊಂಡು ವಿಶ್ವ ಆಹಾರ ದಿನವನ್ನು ಆಚರಿಸುವ ಸಂಪ್ರದಾಯಕ್ಕೆ ಈಗ ಎರಡು ದಶಕ ತುಂಬಿದೆ. ಆಶಯಗಳ ಅನುಷ್ಠಾನದ ವಿಷಯಕ್ಕೆ ಬಂದರೆ, ಅದು ಕುಂಭಕರ್ಣನ ಹೊಟ್ಟೆಯಂತೆಯೇ ಕಾಣುತ್ತಿದೆ!

1981ರಲ್ಲಿ ಆರಂಭವಾದ ಈ ಆಶಯ ಕೇಂದ್ರಿತ ಆಹಾರ ದಿನಾಚರಣೆಯು ಜಗತ್ತಿನಾದ್ಯಂತ ಹಲವು ಆಯಾಮಗಳಲ್ಲಿ ಆಹಾರ ಸಮಸ್ಯೆಯನ್ನು ಪ್ರಾಮಾಣಿಕವಾಗಿ ನೋಡಲು ಪ್ರಯತ್ನಿಸಿರುವುದಂತೂ ನಿಜ.

‘ಆಹಾರವೇ ಮೊದಲು’ (food comes first) ಎಂಬುದು ಮೊಟ್ಟ ಮೊದಲ ಆಹಾರ ದಿನದ ಆಶಯ ವಾಕ್ಯ. ಹೌದು,ಉಸಿರಾಡುವ ಎಲ್ಲ ಜೀವಿಗಳಿಗೂ ಮೊದಲು ಬೇಕಾದ್ದು ಆಹಾರ. ಅದಿಲ್ಲದೆ ಯಾವುದೇ ಸಮುದಾಯ ಮತ್ತು ಸಂಸ್ಕೃತಿ ಇಲ್ಲ. ಅವುಗಳ ಏಳು–ಬೀಳು ಕೂಡ ಅವುಗಳ ಆಹಾರವನ್ನೇ ಅವಲಂಬಿಸಿರುತ್ತವೆ.

ಆಹಾರ ಸಾಕುತಾಯಿ ಇದ್ದಂತೆ. ವಿಪರ್ಯಾಸವೆಂದರೆ ಇಲ್ಲಿ ಹೆತ್ತ ತಾಯಿಗೂ ಸರಿಯಾದ ಆಹಾರ ಸಿಗುವುದಿಲ್ಲ. ನೀಗದ ಹಸಿವು ಒಂದು ಪಿಡುಗಾದರೆ, ತಾಯಿ–ಮಗು ಅಪೌಷ್ಠಿಕತೆ ಈ ದೇಶದ ಇನ್ನೊಂದು ದೊಡ್ಡ ಪಿಡುಗು.

ಆಹಾರ ಎಂದರೆ ಏನು? ಚೆನ್ನಾಗಿ ಬದುಕಲು ಬೇಕಾದ ಮೂಲದ್ರವ್ಯ. ಘನ ಮತ್ತು ದ್ರವಾಹಾರ. ಸರಳವಾಗಿ ಹೇಳುವುದಾದರೆ ಅನ್ನ–ನೀರು. ಜಗತ್ತಿನಲ್ಲಿ ಇಷ್ಟಕ್ಕೂ ಕೊರತೆಯುಳ್ಳವರ ಸಂಖ್ಯೆ ಕೋಟಿಗಟ್ಟಲೆಯುಂಟು. ತಾಯಿ–ಮಕ್ಕಳ ಲೆಕ್ಕಕ್ಕೆ ಬಂದರೆ ಅದು ಕರುಳು ಹಿಂಡುವ ದುರಂತ ಕಥನ.

80ರ ದಶಕದಲ್ಲೇ, ಮೂರನೇ ಆಹಾರ ದಿನಾಚರಣೆಯ ಹೊತ್ತಿಗೇ ವಿಶ್ವಸಂಸ್ಥೆಯು ಆಹಾರ ಭದ್ರತೆಯ ಕುರಿತು ಗಮನ ಹರಿಸಿತ್ತು. ಆಹಾರ ಎಂಬುದು ಜನರ ಬದುಕಿನ ಸದಾಕಾಲದ ಭದ್ರತೆಯಾಗಿರಬೇಕು ಎಂಬ ಆಶಯ ಅಂದಿನಿಂದ ಇಂದಿನವರೆಗೂ ಪುನರಾರ್ವತನೆಯಾಗುತ್ತಲೇ ಇದೆ. ಅದಕ್ಕಾಗಿ ಕಾಯ್ದೆಗಳು ಬಂದರೂ ಭದ್ರತೆ ಮಾತ್ರ ಬಡವರಿಂದ ದೂರವೇ ಉಳಿದಿದೆ. ಹೊಟ್ಟೆ ಬೆನ್ನಿಗಂಟಿಕೊಂಡವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಆಹಾರ–ಕೃಷಿ–ಗ್ರಾಮೀಣ ಸಂಸ್ಕೃತಿ ಈ ಮೂರೂ ತ್ರಿವಳಿಗಳ ಸುತ್ತಲೇ ಆಹಾರ ದಿನವೂ ಸುತ್ತುತ್ತಿದೆ. ಸುತ್ತಲೇಬೇಕು. ಏಕೆಂದರೆ ಕೃಷಿ ಚಟುವಟಿಕೆಗಳಿಲ್ಲದೆ ಆಹಾರ ಉತ್ಪಾದನೆ ಎಂದಿಗೂ ಇಲ್ಲ. ಗ್ರಾಮೀಣ ಸಂಸ್ಕೃತಿಯೇ ಕೃಷಿಯ ಮೂಲಮಾತೃಕೆ.

ಹೀಗೆ ಹೇಳುವ ಸಮಯದಲ್ಲಿ, ನಗರೀಕರಣಗೊಂಡ ಗ್ರಾಮ ಸಮುದಾಯದ ಬದಲಾದ ಜೀವನಶೈಲಿ, ಇತ್ತೀಚೆಗೆ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಕೃಷಿ ಸಂಸ್ಕೃತಿ ಎದುರಿಸುತ್ತಿರುವ ಬಿಕ್ಕಟ್ಟನ್ನು ಪಕ್ಕಕ್ಕೆ ಇಡುವಂತಿಲ್ಲ. ಇದು ಆಹಾರ ಸಂಸ್ಕೃತಿಯು ಎದುರಿಸುತ್ತಿರುವ ತೀವ್ರ ಸಮಕಾಲೀನ ಬಿಕ್ಕಟ್ಟು.

ಎಷ್ಟೊಂದು ಆಯಾಮಗಳು..:ಆಹಾರ ದಿನಕ್ಕೆ ಹಲವು ಆಯಾಮಗಳು, ಎರಡು ದಶಕಗಳ ಅವಧಿಯಲ್ಲಿ ಇಡೀ ವಿಶ್ವ ಈ ಎಲ್ಲ ಆಯಾಮಗಳಲ್ಲೂ‘ಆಹಾರ’ವನ್ನು ಕುರಿತು ಧ್ಯಾನಿಸಿವೆ. ಚರ್ಚಿಸಿವೆ.

ಗ್ರಾಮೀಣ ಬಡತನ, ಮಹಿಳಾ ಸಮುದಾಯ ಅದರಲ್ಲೂ ರೈತ ಮಹಿಳೆಯರು, ಆಹಾರ ಭದ್ರತೆ, ಸಣ್ಣ ರೈತರು, ಮೀನುಗಾರರು, ಗ್ರಾಮೀಣ ಯುವಜನರು, ಪರಿಸರ, ಭವಿಷ್ಯ, ವೃಕ್ಷಗಳು, ಪೌಷ್ಠಿಕತೆ–ಅಪೌಷ್ಠಿಕತೆ, ಪರಿಸರದ ವೈವಿಧ್ಯತೆ, ನೀರು, ಹೂಡಿಕೆ, ಗ್ರಾಮೀಣ ಬಡತನ ನಿರ್ಮೂಲನೆ, ಹಸಿವಿನ ನಿರ್ಮೂಲನೆ, ಸುಸ್ಥಿರ ಆಹಾರ ವ್ಯವಸ್ಥೆ, ಯುವಜನ, ಹವಾಮಾನ ಬದಲಾವಣೆ, ಬಿಕ್ಕಟ್ಟುಗಳು, ಆಹಾರ ದರ ಏರಿಕೆಯ ಬಿಕ್ಕಟ್ಟುಗಳು, ಕೃಷಿ ಸಹಕಾರ ತತ್ವ, ಕುಟುಂಬ ಕೃಷಿ, ಸಾಮಾಜಿಕ ಭದ್ರತೆ, ಆರೋಗ್ಯಕರ ಡಯಟ್‌...

ಇಷ್ಟೊಂದು ವೈವಿಧ್ಯಮಯವಾಗಿ ಪ್ರತಿ ವರ್ಷವೂ ಆಹಾರ ದಿನ ಚರ್ಚೆಗಳು ನಡೆದಿವೆ. ನಡೆಯುತ್ತಿವೆ. ಆಹಾರ ಭದ್ರತೆಯಲ್ಲಿ ಹೂಡಿಕೆ ಹೇಗೆ? ಹಸಿವಿನ ವಿರುದ್ಧ ಯುವಜನ ಏನು ಮಾಡಬಹುದು? ಜಗದ ಹೊಟ್ಟೆ ತುಂಬಿಸುವ ಮಹಿಳೆಯರ ಸ್ಥಿತಿ ಏನು?

ಬಡತನ ನಿರ್ಮೂಲನೆಗಾಗಿ ಹಸಿವಿನ ವಿರುದ್ಧ ಹೋರಾಟ ಮಾಡುವುದು ಹೇಗೆ? ಆಹಾರಭದ್ರತೆಯ ಸಂಪನ್ಮೂಲವಾಗಿ ನೀರನ್ನು ಸಂರಕ್ಷಿಸಿಕೊಳ್ಳುವುದು ಹೇಗೆ? ಆಹಾರ ಭದ್ರತೆಯಲ್ಲಿ ಜೀವವೈವಿಧ್ಯದ ಪಾತ್ರವೇನು? ಆಹಾರಭದ್ರತೆಗೆ ಹವಾಮಾನ ಬದಲಾವಣೆ ತಂದಿಟ್ಟಿರುವ ಸವಾಲುಗಳನ್ನು ಎದುರಿಸುವ ಬಗೆ ಎಂತು?

ಬಿಕ್ಕಟ್ಟಿನ ಸಮಯದಲ್ಲಿ ಆಹಾರ ಭದ್ರತೆ ಸಾಧಿಸುವ ದಾರಿಗಳು ಯಾವುದು? ಹಸಿವಿನ ನಿರ್ಮೂಲನೆಗಾಗಿ ಇಡೀ ಜಗತ್ತನ್ನು ಒಗ್ಗೂಡಿಸುವುದು ಹೇಗೆ? ಆಹಾರ ದರದ ವಿಷಯಲ್ಲಿ ಎದ್ದಿರುವ ಬಿಕ್ಕಟ್ಟನ್ನು ಸ್ಥಿರತೆಯಡೆಗೆ ಕೊಂಡೊಯ್ಯಲು ಏನು ಮಾಡಬೇಕು? ಜಗದ ಹಸಿವು ನೀಗಿಸಲು ಕೃಷಿ ಸಹಕಾರ ತತ್ವವನ್ನು ಹೇಗೆ ಬಳಸಿಕೊಳ್ಳಬಹುದು? ಸುಸ್ಥಿರ ಆಹಾರ ವ್ಯವಸ್ಥೆಯನ್ನು ರೂಪಿಸುವುದು ಹೇಗೆ? ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ, ಆಹಾರದ ಸ್ವರೂಪ ಹೇಗಿರಬೇಕು? ಗ್ರಾಮೀಣ ಬಡತನ ನಿವಾರಣೆಗಾಗಿ ಕೃಷಿ ಮತ್ತು ಸಾಮಾಜಿಕ ಭದ್ರತೆಯನ್ನು ಮರುರೂಪಿಸುವ ವಿಧಾನಗಳೇನು?

‘2030ರ ವೇಳೆಗೆ ಹಸಿವು ಮುಕ್ತ ವಿಶ್ವ ನಿರ್ಮಿಸಲು ಸಾಧ್ಯ’ ಎಂಬುದು ಎರಡು ವರ್ಷದ ಹಿಂದಿನ ಆಹಾರ ದಿನದ ಆಶಯವಾಗಿತ್ತು. ಆದರೆ ಅದಕ್ಕಾಗಿ ಇದುವರೆಗೆ ಮಾಡಿರುವ ಪ್ರಯತ್ನಗಳೇನು ಎಂದು ಹುಡುಕಾಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.

ಪ್ರಯತ್ನಗಳ ಕಡೆಗೆ ಗಮನ ಹರಿಸಲು ಆಗದ ರೀತಿಯಲ್ಲಿ ಕೋವಿಡ್‌ 19 ಬಿಕ್ಕಟ್ಟು ಈ ಬಾರಿಯ ಆಹಾರ ದಿನವನ್ನು ಹೊಸಬಗೆಯಲ್ಲಿ ನೋಡುವಂತೆ ಮಾಡಿದೆ. ಹೀಗಾಗಿಯೇ ಈ ಬಾರಿಯ ಆಶಯವನ್ನೂ ಈ ಬಿಕ್ಕಟ್ಟಿಗೆ ಅನುಗುಣವಾಗಿಯೇ ರೂಪಿಸಲಾಗಿದೆ; ಒಟ್ಟಿಗೇ ಬೆಳೆಯುವುದು, ಸುಸ್ಥಿರಗೊಳ್ಳುವುದು.

ದಿಢೀರ್‌ ಲಾಕ್‌ಡೌನ್‌ ಕಾಲದಲ್ಲಿ ಹುಟ್ಟಿಕೊಂಡ ದಾನಿಗಳ ಸಹಾಯಹಸ್ತದ ಸಂಪರ್ಕಕ್ಕೆ ಬರಲು ಆಗದ ಲಕ್ಷಾಂತರ ವಲಸಿಗರು, ಕೂಲಿಕಾರ್ಮಿಕರು ಊಟವಿಲ್ಲದೆ ಬಳಲಿದರು. ಹಲವರು ಜೀವವನ್ನೂ ತೆತ್ತರು. ಇದೇ ಸಂದರ್ಭದಲ್ಲಿ ಉಳ್ಳವರು ಹಸಿವಿನ ನೆನಪಾಗದ ರೀತಿಯಲ್ಲಿ ಎಂದಿನಂತೆ ದಿನ ಕಳೆದರು. ಈ ತಾರತಮ್ಯ ನಿವಾರಣೆಯೇ ಈ ಬಾರಿಯ ಆಹಾರ ದಿನ ಆಶಯದ ಪ್ರಮುಖ ಕಾಳಜಿ ಎನ್ನಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT