ಭಾನುವಾರ, ಅಕ್ಟೋಬರ್ 25, 2020
22 °C
ಇಂದು ವಿಶ್ವ ಆಹಾರ ದಿನ

PV Web Exclusive | ವ್ಯರ್ಥ ಮಾಡದಿರಿ ಆಹಾರ

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

‘ದಾನೆ ದಾನೆ ಪೇ ಲಿಖಾ ಹೈ ಖಾನೆ ವಾಲೆ ಕಾ ನಾಮ್’ ಎನ್ನುವ ಜನಜನಿತ ಮಾತೊಂದು ಹಿಂದಿಯಲ್ಲಿದೆ. ‘ತಿನ್ನುವ ಪ್ರತಿ ಅಗುಳಿನ ಮೇಲೆಯೂ ತಿನ್ನುವವನ ಹೆಸರು ಬರೆದಿದೆ' ಎಂದು. ನಮ್ಮಲ್ಲಿಂದು ದೊಡ್ಡಸ್ತಿಕೆಗೋ, ಆಡಂಬರಕ್ಕೋ ಅಥವಾ ತಿಳಿವಳಿಕೆಯ ಕೊರತೆಗೋ ಅನ್ನ, ಆಹಾರವನ್ನು ಚೆಲ್ಲುವವರೇ ಅಧಿಕ. ಆಹಾರ ತಿನ್ನುವುದಕ್ಕಿಂತ ಪೋಲು ಮಾಡುವುದೇ ದೊಡ್ಡಸ್ತಿಕೆ ಅಂದುಕೊಂಡವರು ಬಹಳ. ಅವಿದ್ಯಾವಂತರಿಗಿಂತ ವಿದ್ಯಾವಂತರಲ್ಲಿಯೇ ಈ ಮನೋಭಾವ ಜಾಸ್ತಿ... 

ಮದುವೆ, ಮುಂಜಿ, ಸಭೆ, ಸಮಾರಂಭ, ಆಪ್ತೇಷ್ಟರ ಕೂಟಗಳಲ್ಲಿ ಇಂತಹ ದೃಶ್ಯ ಸಾಮಾನ್ಯ. ಬಟ್ಟಲು ಹಿಡಿದು ಮನಸ್ಸಿಗೆ ಬಂದಷ್ಟು ತುಂಬಿಕೊಂಡು ಕೊನೆಗೆ ಏನನ್ನೂ ತಿನ್ನಲಾಗದೇ ಕಸದ ಬುಟ್ಟಿಗೆ ಚೆಲ್ಲುವ ಅನೇಕರನ್ನು ಕಾಣುತ್ತೇವೆ.

ಅನ್ನಾಹಾರಕ್ಕಾಗಿ ಪರಿತಪಿಸುವ ಅದೆಷ್ಟೋ ಮಂದಿ ನಮ್ಮ ನಡುವಿದ್ದಾರೆ. ಅರೆಹೊಟ್ಟೆಯಲ್ಲೋ, ಖಾಲಿ ಹೊಟ್ಟೆಯಲ್ಲೋ ಲೋಟ ನೀರು ಕುಡಿದು ರಾತ್ರಿ ಕಳೆವ ಜನರೆಷ್ಟೊ...ಹಿಡಿ ತುತ್ತಿಗಾಗಿ ಪರಿತಪಿಸುವ ಜನರೆಷ್ಟೋ...ಹಸಿದ ಹೊಟ್ಟೆ ಸಂತೃಪ್ತಿಯಾಗದೇ ಬದುಕಿನ ಚೈತನ್ಯವಾದರೂ ಹುಟ್ಟುವುದೆಲ್ಲಿ? ಹೀಗಾಗಿ ಆಹಾರ ಸಂರಕ್ಷಣೆಯತ್ತ ನಮ್ಮ ಜನಗಳ ಚಿತ್ತ ಹರಿಯಬೇಕಾಗಿದೆ. ವ್ಯರ್ಥವಾಗಿ ಆಹಾರ ಚೆಲ್ಲುವ ಬದಲು ಅಗತ್ಯ ಉಳ್ಳವರಿಗೆ ಕೊಡುವತ್ತ ಮನಸ್ಸು ಮಾಡಬೇಕಿದೆ.

‘ಊಟ ಮಾಡುವಾಗ ಮಾತನಾಡಬಾರದು, ಬಟ್ಟಲಿನಲ್ಲಿ ಒಂದಗುಳೂ ಬಿಡದೇ ಊಟ ಮಾಡಬೇಕು’ ಎಂದು ನಮಗೆಲ್ಲ ಬಾಲ್ಯದಲ್ಲಿ ಹಿರಿಯರು ಕಲಿಸಿದ ಪಾಠದ ಮಹತ್ವ ಈಗ ಅರಿವಾಗುತ್ತಿದೆ. ಅನ್ನಬ್ರಹ್ಮನಿಗೆ ಕೈಮುಗಿದೇ ತುತ್ತು ಉಣ್ಣಬೇಕು. ಅದು ಪವಿತ್ರ, ಬಟ್ಟಲಿನಿಂದ ಹೊರಗೂ ಚೆಲ್ಲುವಂತಿಲ್ಲ ಎಂದು ಬಾಲ್ಯದಿಂದಲೇ ಹೇಳಿಕೊಂಡು ಬರಲಾಗುತ್ತಿದೆ. ಈಗಿನ ಮಕ್ಕಳಿಗೂ ಬಾಲ್ಯದಿಂದಲೇ ಇದನ್ನೂ ಕಲಿಸಬೇಕಾಗಿದೆ.

‘ತಿನ್ನುವ ಹಕ್ಕು ಎಲ್ಲರಿಗೂ ಇದೆ; ಬಿಸಾಡುವ ಹಕ್ಕಿಲ್ಲ’, ‘ಆಹಾರ ಚೆಲ್ಲದಿರಿ; ಬಡವನ ಊಟ ಕಸಿಯದಿರಿ’ ಎಂಬಿತ್ಯಾದಿ ಅಭಿಯಾನಗಳು ಕೂಡ ನಮ್ಮಲ್ಲಿ ಅಲ್ಲಲ್ಲಿ ನಡೆದಿವೆ. ಆಹಾರದ ಅಪವ್ಯಯ ತಡೆಯಲು ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ಕೆಲವೆಡೆ ಹಲವು ವರ್ಷಗಳಿಂದ ನಡೆಯುತ್ತಿವೆ.

ದೇವಸ್ಥಾನ, ವಿವಿಧ ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಸ್ವಯಂ ಸೇವಕರು ಇದಕ್ಕಾಗಿಯೇ ನಿಯೋಜನೆಗೊಳ್ಳುತ್ತಾರೆ. ಹೆಚ್ಚಾದ ಆಹಾರ ಪದಾರ್ಥಗಳನ್ನು ಬಡವರಿಗೆ, ಬಡ ಮಕ್ಕಳ ಹಾಸ್ಟೆಲ್‌ಗಳಿಗೆ, ಬಸ್‌ನಿಲ್ದಾಣ, ಅನಾಥಾಶ್ರಮಗಳಿಗೆ ಹಂಚುವ ಕಾಯಕ ಮಾಡುವವರೂ ಇದ್ದಾರೆ. ಆದರೆ ಇಂತಹ ಕಾರ್ಯ ಹೆಚ್ಚಬೇಕಷ್ಟೆ.

ಬಡತನ ನಿರ್ಮೂಲನೆ ಮಾಡುವುದು, ಹಸಿವಿನ ವಿರುದ್ಧ ಹೋರಾಟ ಮಾಡುವುದು, ಎಲ್ಲರಿಗೂ ಆಹಾರ, ಸೂರು ಇವೆಲ್ಲ ಬಾಯಿ ಮಾತಿನಲ್ಲಿ ಹೇಳಿದಷ್ಟು ಸುಲಭದ ವಿಚಾರಗಳೇನೂ ಅಲ್ಲ. ವೇದಿಕೆಗಳಲ್ಲಿ, ಸೆಮಿನಾರ್‌ಗಳಲ್ಲಿ ದಿನವಿಡೀ ಚರ್ಚಿಸಿ ನಿರ್ಣಯಿಸುವ ವಿಚಾರವಂತೂ ಅಲ್ಲ. ಹೊಟ್ಟೆತುಂಬಿದವರಿಗೆ ಅರಿವಾಗುವಷ್ಟು ಸರಳವೂ ಅಲ್ಲ...ಹಸಿವಿನ ಸಮಸ್ಯೆಯ ಬ್ರಹ್ಮಾಂಡ ರೂಪದ ಹಿಂದೆ ಜಗತ್ತನ್ನು ಕಾಡುವ ಬಹುತೇಕ ಸಮಸ್ಯೆಗಳೆಲ್ಲ ಹಲವು ಸಲ ಗೌಣವೆನಿಸುತ್ತವೆ. 

ಹಸಿವಿನ ಸಮಸ್ಯೆಗೆ ಜಾಗತಿಕ ಆಯಾಮಗಳಿವೆ. ಆರ್ಥಿಕತೆ, ಸಾಮಾಜಿಕ ಕಾರಣಗಳೆಲ್ಲವೂ ಥಳಕು ಹಾಕಿಕೊಂಡಿವೆ. ಕೃಷಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ. ಕೃಷಿ ಜಮೀನುಗಳು ರಿಯಲ್‌ ಎಸ್ಟೇಟ್‌ ಪಾಲಾಗುತ್ತಿವೆ. ಆಹಾರ ಬೆಳೆಯುವವನೇ ಮುಂದೊಂದು ದಿನ ತನ್ನ ಕಾಯಕ ನಿಲ್ಲಿಸಬಹುದು...

***

ಅಕ್ಟೋಬರ್‌ 16 ಹಸಿವಿನ ವಿರುದ್ಧ ಹೋರಾಟಕ್ಕಾಗಿ ವಿಶ್ವಸಂಸ್ಥೆ ಜಾರಿಗೆ ತಂದ ದಿನ. 1945 ರಲ್ಲಿ  ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ನಿರ್ಧಾರ ಕೈಗೊಂಡಿತು. ಅಧಿಕೃತವಾಗಿ  ಜಾರಿಗೆ ಬಂದಿದ್ದು ಮಾತ್ರ 1981ರಲ್ಲಿ. ಪ್ರಪಂಚದ ಜನರೆಲ್ಲ ಸೇರಿ ಹಸಿವಿನ ಹೋರಾಟ ಮಾಡಬೇಕು, ಇದರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವುದು ಈ ದಿನದ ಹಿಂದಿನ ಉದ್ದೇಶವೂ ಹೌದು.

ಅಂಕಿ ಅಂಶಗಳು ಹೇಳುವುದು ಹೀಗೆ...

ಜಾಗತಿಕವಾಗಿ ಹಸಿವಿನ ಅಂಕಿಅಂಶಗಳು ಹೇಳುವಂತೆ, ವಿಶ್ವದಾದ್ಯಂತ 7.85 ಕೋಟಿ ಜನರಿಗೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಂಡಿರಲು ಸಾಕಷ್ಟು ಆಹಾರವಿಲ್ಲ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಸ ಮಾಡುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿಯೇ ಸುಮಾರು 20 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದಾರೆ.

5 ವರ್ಷದೊಳಗಿನ ಮಕ್ಕಳಲ್ಲಿ ಶೇ 45 ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ವರ್ಷಕ್ಕೆ  30 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ಇದನ್ನೆಲ್ಲ ಗಮನಿಸಿದಾಗ ಆಹಾರ ವ್ಯರ್ಥಮಾಡುವುದು ಎಷ್ಟು ಅಪರಾಧ ಎನ್ನುವುದು ಅರಿವಾಗುತ್ತದೆ. 

ಆಹಾರ ವ್ಯರ್ಥ ಮಾಡದಿರಿ

ಹಸಿವಿನ ಪ್ರಮಾಣವನ್ನು ತಗ್ಗಿಸುವುದು ಹೇಗೆ? ಮೊದಲು ಆಹಾರವನ್ನು ವ್ಯರ್ಥವಾಗಿ ಚೆಲ್ಲುವುದನ್ನು ನಿಲ್ಲಿಸಿ. ಪ್ರಪಂಚದ ಹಸಿವನ್ನು ಕೊನೆಗೊಳಿಸುವ ಕೀಲಿಯು ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸುವುದೇ ಆಗಿದೆ. ನಾವೇನು ಜಾಗತಿಕ ಹಸಿವಿನ ಸಮಸ್ಯೆಯನ್ನು ನೀಗಿಸಲು ಸಾಧ್ಯವಿಲ್ಲ. ಆದರೆ ನಮ್ಮ ಕೈಲಾದ ಮಟ್ಟಿಗೆ ನಮ್ಮ ಸುತ್ತಮುತ್ತ ಆಹಾರ ವ್ಯರ್ಥವಾಗುವುದನ್ನು  ತಡೆಯಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಒಂದಿಷ್ಟು ಜಾಗೃತಿ ಮೂಡಬೇಕಿದೆ.

ಒಟ್ಟಿನಲ್ಲಿ ಪ್ರತಿದಿನ ನಿಮ್ಮ ಊಟದ ಬಟ್ಟಲಿಗೆ ಅನ್ನ–ಆಹಾರ ಹಾಕಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ...ಹಸಿದ ಮಕ್ಕಳ ಚಿತ್ರವನ್ನು ಕಣ್ಣಮುಂದೆ ತಂದುಕೊಳ್ಳಿ...ಎಷ್ಟು ಅಗತ್ಯವೋ ಅಷ್ಟೇ ಬಡಿಸಿಕೊಂಡು ಉದರಪೋಷಣೆ ಮಾಡಿಕೊಳ್ಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು