ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಾತಿನ ಬರ; ಮನಸಿನ ಅಂತರ

ಪೋಷಕರು–ಮಕ್ಕಳು ಮತ್ತು ಬಾಂಧವ್ಯ ಬೆಸುಗೆ
Last Updated 23 ಡಿಸೆಂಬರ್ 2020, 5:51 IST
ಅಕ್ಷರ ಗಾತ್ರ
ADVERTISEMENT
""

‘ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು’ ಎನ್ನುವ ಮಾತಿದೆ. ಪೋಷಕರೇನೊ ಮಕ್ಕಳನ್ನು ಸ್ನೇಹಿತರಂತೆ ಕಾಣಲು ಯತ್ನಿಸುತ್ತಾರೆ, ಆದರೆ ವಯಸ್ಸಿಗೆ ಬಂದ ಮಕ್ಕಳೇಕೊ ಪೋಷಕರಲ್ಲಿ ಸ್ನೇಹಿತರನ್ನು ಕಾಣುತ್ತಿಲ್ಲ. ಉದ್ಯೋಗ, ವ್ಯಾಪಾರ, ವಹಿವಾಟು, ಸ್ನೇಹದ ವಿಚಾರವನ್ನು ಪೋಷಕರೆದುರು ಮುಕ್ತವಾಗಿ ಹಂಚಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು.

‘ಮೊದಲೆಲ್ಲಾ ಅಮ್ಮ, ಅಮ್ಮ ಅಂತ ಹಿಂದೇ ಸುತ್ತುತ್ತಿದ್ದ. ಕಾಲೇಜು ಮೆಟ್ಟಿಲೇರಿದ ಮೇಲೆ ತನ್ನ ರೂಮಿಂದ ಹೊರಗೆ ಬರುವುದೇ ಅಪರೂಪವಾಯ್ತು. ಈಗಂತೂ ಆಫೀಸು–ಪಾರ್ಟಿ, ಪ್ರವಾಸ, ಸ್ನೇಹಿತರು... ಅದೇ ಅವನ ಪ್ರಪಂಚ. ಮನೆಗೆ ಬಂದರೂ ಮಾತು ಅಪರೂಪ...’ ಇದು ತಾಯಿಯೊಬ್ಬಳ ಹಳಹಳಿ. ಹೀಗೇ ಮಗ/ಮಗಳು ಬೆಳೆಯುತ್ತ ಮಾತು ಕಡಿಮೆ ಮಾಡಿದ್ದಾರೆ, ಮನಸಿನಿಂದಲೂ ದೂರ ಸರಿಯುತ್ತಿದ್ದಾರೆ ಎನ್ನುವ ಗೋಳು ಅನೇಕ ಪೋಷಕರದ್ದು.

‘ಅವರೆದುರು ಎಲ್ಲವನ್ನೂ ಹೇಳಲಾಗದು. ಆಫೀಸು, ಕೆಲಸ, ಸಹೋದ್ಯೋಗಿಗಳು, ಅಲ್ಲಿನ ದುಗುಡ–ದುಮ್ಮಾನಗಳನ್ನು ಅಮ್ಮಪ್ಪ ಅರ್ಥ ಮಾಡಿಕೊಳ್ಳಲಾರರು. ಅವರ ಕಾಲದ ವ್ಯವಸ್ಥೆಯೇ ಬೇರೆ ಇತ್ತು. ಈಗಿನ ವಾತಾವರಣ ಪೂರ್ಣ ಬದಲು. ಅಷ್ಟಕ್ಕೂ ನಮ್ಮ ತಾಪತ್ರಯಗಳನ್ನೆಲ್ಲಾ ಅವರ ಮೇಲೆ ಹಾಕುವುದು ವೃಥಾ ಹೊರೆಯಲ್ಲವೆ?’ ಎನ್ನುವುದು ಯುವಪೀಳಿಗೆಯ ಅಂಬೋಣ.

ಮಕ್ಕಳ ಆರೈಕೆ, ಬೆಂಬಲ ಹಾಗೂ ಕುಟುಂಬ ವ್ಯವಸ್ಥೆಗೆ ಭಾರತ ಹೆಸರುವಾಸಿ. ಆದರೆ ದುರದೃಷ್ಟವಶಾತ್, ಇಲ್ಲಿಯೂ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಬೆಳೆಯುತ್ತಲೇ ಹೊರಟಿದೆ ಎನ್ನುವುದು ಸತ್ಯ. ಎಷ್ಟೇ ಮುಕ್ತ ವಾತಾವರಣ ಕಲ್ಪಿಸಿದರೂ, ಎಷ್ಟು ಸ್ನೇಹದಿಂದ ವರ್ತಿಸಿದರೂ ವಯಸ್ಸಿಗೆ ಬಂದ ಮಕ್ಕಳ ಮನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಇತ್ತ ಯುವಪೀಳಿಗೆ ತಮ್ಮ ಕಾಲದ ತಲ್ಲಣಗಳಿಗೆ ಪೋಷಕರು ಸ್ಪಂದಿಸಲಾರರು ಎಂದೇ ನಂಬಿದ್ದಾರೆ. ಇಬ್ಬರ ನಡುವಣ ಮಾತಿನ ಬರ, ಮಾನಸಿಕ ಅಂತರವನ್ನು ಹೆಚ್ಚಿಸುತ್ತಿದೆ.

ಲಾಕ್‌ಡೌನ್‌ ಹಾಗೂ ಅನಂತರದ ಕೋವಿಡ್‌–19 ಸ್ಥಿತಿ ಎಲ್ಲರನ್ನೂ ಮನೆಯಲ್ಲೇ ಕೂಡಿ ಹಾಕುವ ಮೂಲಕ ಮನೆಮಂದಿಯೊಂದಿಗೆ ಮಧುರ ಗಳಿಗೆಗಳನ್ನು ಕಳೆಯಲು ಸಾಕ್ಷಿಯಾಗಿದ್ದಂತೂ ಸತ್ಯ. ಕಳೆದ ಎಂಟು ತಿಂಗಳಲ್ಲಿ ಗಂಡ–ಹೆಂಡತಿ–ಮಕ್ಕಳೆಲ್ಲಾ ಒಟ್ಟಿಗೇ ಮನೆಯಲ್ಲಿ ಕಳೆಯುವ ಸಮಯ ಹೆಚ್ಚಿದೆ. ಹೀಗೆಂದು ಪರಸ್ಪರರ ನಡುವಿನ ಅನುಬಂಧ ಹೆಚ್ಚಿದೆ ಎಂದು ಅರ್ಥವಲ್ಲ. ಪೋಷಕರು ಹಾಗೂ ವಯಸ್ಕ ಮಕ್ಕಳ ನಡುವಿನ ಅಂತರ ಸರಿಯಲು ಈಗಲೂ ಸಾಧ್ಯವಾಗಿಲ್ಲ.

ಅನೇಕರು ತಮ್ಮ ಮಕ್ಕಳು ಎಲ್ಲವನ್ನೂ ತಮ್ಮ ಬಳಿ ಹಂಚಿಕೊಳ್ಳುತ್ತಾರೆ ಎಂದು ಸಮಾಧಾನ ಪಟ್ಟುಕೊಂಡರೂ ಅದು ಅವರ ಭ್ರಮೆ ಅಷ್ಟೆ. ವಾಸ್ತವದಲ್ಲಿ ಮಕ್ಕಳು, ಅದರಲ್ಲೂ ಯುವಪೀಳಿಗೆ ತಮ್ಮ ಮನದ ಭಾವನೆಗಳನ್ನು ಪೋಷಕರೆದುರು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ತಮ್ಮ ಸಾಮಾಜಿಕ ಜೀವನ, ಕೆಲಸ, ಕಚೇರಿ, ಅಲ್ಲಿನ ಸಂಬಂಧಗಳನ್ನು ಪೋಷಕರು ತಿಳಿದುಕೊಳ್ಳಲಾರರು ಎಂದು ಕೆಲವರು ಅಂದಾಜಿಸಿದರೆ, ಇನ್ನೂ ಕೆಲವರು ಪೋಷಕರೆದುರು ತಮ್ಮ ಭಾವಬುತ್ತಿಯನ್ನು ಬಿಚ್ಚಿಡುವುದರಿಂದ ಪ್ರಯೋಜನ ಇಲ್ಲ ಎಂದೇ ನಂಬಿದ್ದಾರೆ. ಇನ್ನೂ ಕಲವರು ತಮ್ಮ ತಾಪತ್ರಯಗಳನ್ನು ಅವರೆದುರು ಹೇಳಿಕೊಂಡು ಅವರನ್ನೂ ಒತ್ತಡಕ್ಕೆ ಸಿಲುಕಿಸುವುದು ಬೇಡ ಎನ್ನುವ ನಿಲುವು ಹೊಂದಿದ್ದಾರೆ.

ಕೋವಿಡ್‌–19 ಅವಧಿಯಲ್ಲಿ ಮನೆಯಲ್ಲಿ, ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರೂ ಇಂದಿನ ಯುವಜನ ಮಾತಿನ ಕೊರತೆಯನ್ನು ಎದುರಿಸುತ್ತಿದ್ದಾರೆಯೇ, ಅಥವಾ ಮುಕ್ತ ಸಂವಹನ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ? ವಯಸ್ಸಿಗೆ ಬಂದ ಮಕ್ಕಳ ಮನದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರಿಯುವಲ್ಲಿ ಪಾಲಕರ ಪ್ರಯತ್ನ ಫಲಿಸಿದೆಯೇ?

ಇಲ್ಲ ಎನ್ನುತ್ತದೆ ಸಮೀಕ್ಷೆಯೊಂದು. ಶೇ 92ರಷ್ಟು ಪೋಷಕರು ತಮ್ಮ ಮಕ್ಕಳು ತಮ್ಮೊಂದಿಗೆ ಮನಸ್ಸು ಬಿಚ್ಚಿ ಮಾತಾಡುತ್ತಾರೆ ಎಂದೇ ನಂಬಿದ್ದಾರೆ. ಆದರೆ ಇದು ಅವರ ಅನಿಸಿಕೆ ಅಷ್ಟೇ. ವಾಸ್ತವ ಬೇರೆಯೇ ಇದೆ. ವಯಸ್ಕ ಮಕ್ಕಳನ್ನು ನಡೆಸಿಕೊಳ್ಳುವಲ್ಲಿ ಇಂದಿನ ಪೋಷಕರು ಎಡವುತ್ತಿದ್ದಾರೆ. ಇಬ್ಬರ ನಡುವಿನ ಅನುಬಂಧದ ಕೊಂಡಿ ಎಲ್ಲಿ ಸಡಿಲವಾಗಿದೆ ಎನ್ನುವುದು ಪಾಲಕರ ಗಮನಕ್ಕೆ ಇಲ್ಲ. ಇತ್ತ ಶೇ 68ರಷ್ಟು ಯುುವಜನ ತಮ್ಮ ಸ್ನೇಹ–ಸಂಬಂಧದ ವಿಷಯಗಳನ್ನು ಹೆತ್ತವರೆದುರು ಹಂಚಿಕೊಳ್ಳಲು ತೊಳಲಾಡುತ್ತಾರೆ. ಅಂದರೆ ಅವರಿಗೆ ತಮ್ಮ ಭಾವನೆ, ವಿಚಾರಗಳನ್ನು ಹೆತ್ತವರೆದುರು ಹೇಗೆ ಹೇಳುವುದು, ತಾವು ಹೇಳುವ ವಿಷಯವನ್ನು ಅವರು ಹೇಗೆ ಅರ್ಥೈಸಿಕೊಳ್ಳುವರು, ಹೇಗೆ ಪ್ರತಿಕ್ರಿಯಿಸುವರು ಎನ್ನುವ ಆತಂಕವಿದೆ. ಶೇ 49ರಷ್ಟು ಜನ ತಮ್ಮ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುವ ಸಂಗತಿ ಶಾದಿ.ಕಾಂನ ಸಾಮಾಜಿಕ ಉಪಕ್ರಮವಾದ ಶಾದಿ ಕೇರ್ಸ್‌ನ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಇಂದಿನ ಯುವಜನರ ಮನಸ್ಥಿತಿ ಹೇಗಿದೆ, ಯುವಪೀಳಿಗೆ ತಮ್ಮ ಹೆತ್ತವರೊಂದಿಗೆ ಮತ್ತು ಪೋಷಕರು ತಮ್ಮ ಮಕ್ಕಳೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಿದ್ದಾರೆ ಎನ್ನುವ ಅಂಶಗಳ ಮೇಲೆ ಈ ಸಮೀಕ್ಷೆ ಬೆಳಕು ಚೆಲ್ಲಿದೆ.

ಬದಲಾವಣೆಯ ಪರ್ವ

‘ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದೇವೆ ಎನ್ನುವುದು ಬಹುತೇಕ ಪೋಷಕರ ನಂಬಿಕೆಯಷ್ಟೆ. ನಿಜಾರ್ಥದಲ್ಲಿ ಮಕ್ಕಳ ಅಂತರಾಳದ ಒಳಹೊಕ್ಕು, ಅವರಲ್ಲೇನು ನಡೆಯುತ್ತಿದೆ ಎನ್ನುವುದನ್ನು ಅರಿಯುವ ಪ್ರಯತ್ನ ಪಾಲಕರಿಂದ ನಡೆಯುತ್ತಿಲ್ಲ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಶಾಂತಾ ನಾಗರಾಜ್‌.

ಶಾಂತಾ ನಾಗರಾಜ್‌

‘ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮಕ್ಕಳು ನಾಲ್ಕು ವಲಯಗಳಲ್ಲಿ ನೆಲೆನಿಲ್ಲಲು ತಮ್ಮೊಳಗೇ ತಾವು, ತಮ್ಮೊಂದಿಗೇ ತಾವು ಹೋರಾಡುತ್ತಿರುತ್ತಾರೆ. ಹೊರಗಿನ ಸಮಾಜದೊಂದಿಗೆ ಹೇಗೆ ಬೆರೆಯುವುದು‌, ಅಲ್ಲಿ ತಮ್ಮನ್ನು ತಾವು ಹೇಗೆ ಬಿಂಬಿಸಿಕೊಳ್ಳುವುದು ಎನ್ನುವ ಗೊಂದಲ, ತಮ್ಮೊಳಗೆ ಆಗುತ್ತಿರುವ ದೈಹಿಕ ಬದಲಾವಣೆಗಳನ್ನು ಹೇಗೆ ಗ್ರಹಿಸುವುದು ಎನ್ನುವ ಕಳವಳ, ಬೌದ್ಧಿಕ ಬದಲಾವಣೆಗಳನ್ನು ಹೇಗೆ ಪ್ರತಿಪಾದಿಸುವುದು ಎನ್ನುವ ಸಂಕಟ, ಅದರಲ್ಲೂ ಮುಖ್ಯವಾಗಿ ತಮ್ಮಲ್ಲಿ ಆಗುತ್ತಿರುವ ಲೈಂಗಿಕ ಬೆಳವಣಿಗೆಗಳ ಬಗೆಗಿನ ಆತಂಕಕ್ಕೆ ಅವರು ಹೈರಾಣಾಗಿರುತ್ತಾರೆ. ಇದೆಲ್ಲದರ ಬಗ್ಗೆ ಗೊತ್ತಿದ್ದರೂ ವೈಜ್ಞಾನಿಕ ದೃಷ್ಟಿಕೋನದಿಂದ, ವಿಶಾಲ ಮನೋಭಾವದಿಂದ ಅವರೊಳಗೊಬ್ಬರಾಗಿ ಹದಿಹರೆಯದ ಮಕ್ಕಳೊಂದಿಗೆ ವರ್ತಿಸುವುದನ್ನು ಬಹುತೇಕ ಪೋಷಕರು ಮರೆತೇ ಬಿಡುತ್ತಾರೆ. ಈ ಎಲ್ಲಾ ಗೊಂದಲಗಳಿಂದಾಗಿ ತೀವ್ರ ಒತ್ತಡದಲ್ಲಿರುವ ಮಕ್ಕಳ ಮನಸ್ಸು ಅರಿಯದೇ ಸುಮ್ಮನೇ ತಮ್ಮನ್ನು ತಾವು ಮಕ್ಕಳ ಸ್ನೇಹಿತರೆಂದು ಕರೆದುಕೊಂಡರೆ ಆಗದು.ಪ್ರತಿ ವ್ಯಕ್ತಿಯೂ ಭಿನ್ನ. ಮತ್ತು ಪ್ರತಿ ವ್ಯಕ್ತಿಯ ಮಿದುಳಿನ ಸಾಮರ್ಥ್ಯ ಎಷ್ಟಿರುತ್ತದೋ ಅಷ್ಟೇ ಪ್ರಗತಿ ಸಾಧ್ಯ. ಇದನ್ನೂ ಪೋಷಕರು ಅರಿಯಬೇಕು.ಅವರ ಮೇಲೆ ಅನಗತ್ಯ ಒತ್ತಡ ಹಾಕದೆ, ಅವರ ಸಾಮರ್ಥ್ಯ, ಆಸಕ್ತಿಗೆ ಅನುಗುಣವಾಗಿ ಬೆಳೆಯಲು ಪೂರಕ ವಾತಾವರಣ ಕಲ್ಪಿಸಬೇಕು.‘

‘ನಿಜಾರ್ಥದಲ್ಲಿ ಮಕ್ಕಳು ನಿಮ್ಮ ಸ್ನೇಹಿತರಾಗಬೇಕು ಎಂದರೆ ಮೊದಲು ನಿಮ್ಮ ನಡೆಯಲ್ಲಿ, ನೋಟದಲ್ಲಿ, ಗ್ರಹಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಿ’ ಎನ್ನುವ ಅವರು ಪೋಷಕರಿಗಾಗಿ ಕೆಲವು ಕಿವಿಮಾತುಗಳನ್ನು ಹೇಳುತ್ತಾರೆ:

· ಎಲ್ಲದಕ್ಕೂ ಆಕ್ಷೇಪಣೆ ಮಾಡಬೇಡಿ, ಎಲ್ಲವನ್ನೂ ಪ್ರಶ್ನಿಸಬೇಡಿ

· ಅವರ ಆತ್ಮಗೌರವಕ್ಕೆ ಧಕ್ಕೆಯಾಗುವಂತೆ ವರ್ತಿಸಬೇಡಿ, ಅವಮಾನ ಮಾಡಬೇಡಿ

· ಆತ್ಮವಿಶ್ವಾಸ ಕುಗ್ಗುವಂತೆ, ಕೀಳರಿಮೆಗೆ ಈಡಾಗುವಂತೆ ಮಾತಾಡಬೇಡಿ

· ಅವರ ಕೆಲವು ಮಾತುಗಳು, ವರ್ತನೆಗಳು ಸಮಂಜಸವಾಗಿಲ್ಲ ಎನಿಸಿದರೆ ಪ್ರೀತಿಯಿಂದ ತಿದ್ದಿಹೇಳಿ. ಅವರ ಕೆಲವು ಒಳ್ಳೆಯ ಗುಣಗಳ ಬಗ್ಗೆ, ವರ್ತನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ

· ಮುಖ್ಯವಾಗಿ ಹೋಲಿಕೆ ಮಾಡಬೇಡಿ. ಬೇರೆ ಮಕ್ಕಳೊಂದಿಗೆ ಅಥವಾ ನಿಮ್ಮ ಬಾಲ್ಯದೊಂದಿಗೆ ಅವರನ್ನು ಹೋಲಿಸಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT