ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆ ಕಳೆಯಬಲ್ಲ ಕಾಬಾಳೆ! ಡಾ. ಕೇಶವ ಎಚ್. ಕೊರ್ಸೆ ಅವರ ವಿಶ್ಲೇಷಣೆ

ನೈಸರ್ಗಿಕ ಸಂಪನ್ಮೂಲದ ಸದ್ಬಳಕೆಗೆ ಪರಿಸರಸ್ನೇಹಿ ತಂತ್ರಜ್ಞಾನ ಅಳವಡಿಕೆ ಅಗತ್ಯ
Published 17 ಅಕ್ಟೋಬರ್ 2023, 23:45 IST
Last Updated 17 ಅಕ್ಟೋಬರ್ 2023, 23:45 IST
ಅಕ್ಷರ ಗಾತ್ರ

ತೊಂಬತ್ತರ ದಶಕದ ಮಧ್ಯಭಾಗವದು. ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯು ‘ಸುಸ್ಥಿರ ತಂತ್ರಜ್ಞಾನ’ ಕುರಿತ ರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿತ್ತು. ‘ಹಸಿರುಕ್ರಾಂತಿ’ಯು ಸೃಜಿಸಿದ್ದ ಅಪಾಯಗಳ ಅಗಾಧತೆಯನ್ನು ಅದಾಗಲೇ ಅರಿತಿದ್ದ ವಿಜ್ಞಾನಿ ಸ್ವಾಮಿನಾಥನ್, ಆ ಸವಾಲುಗಳನ್ನು ಮೀರಲು ಸಾಂಸ್ಥಿಕ ಉಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ದಿನಗಳವು.

ಬೆಂಗಳೂರಿನ ಐಐಎಸ್‌ಸಿ ರೂಪಿಸಿದ್ದ ಹೊಗೆರಹಿತ ಅಸ್ತ್ರಒಲೆ, ಮುಂಬೈ ಐಐಟಿ ಅಭಿವೃದ್ಧಿಪಡಿಸಿದ್ದ ಜೈವಿಕ ಅನಿಲ ಯಂತ್ರ, ಟೆರಿ ಸಂಸ್ಥೆ ಸಂಶೋಧಿಸಿದ್ದ ಕೊಳಚೆ ಸಂಸ್ಕರಣೆ ವಿಧಾನ, ಕೇರಳದಲ್ಲಿ ಬಳಸತೊಡಗಿದ್ದ ಲಾರಿ ಬೇಕರ್ ವಿಧಾನದ ಪರಿಸರಸ್ನೇಹಿ ಮನೆಗಳು... ಹೀಗೆ, ದೇಶದಾದ್ಯಂತದ ಹಲವಾರು ವಿಶಿಷ್ಟ ತಂತ್ರಜ್ಞಾನಗಳ ಕುರಿತು ಅಲ್ಲಿ ಚರ್ಚೆಯಾಗಿತ್ತು. ಅವುಗಳ ಭವಿಷ್ಯ ಹಾಗೂ ಪ್ರಸ್ತುತತೆಯು ಆಗ ಅಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ನನ್ನ ಊಹೆಗೆ ನಿಲುಕಿರದಿದ್ದರೂ, ಆ ಚರ್ಚೆಗಳಲ್ಲಿದ್ದ ವೈವಿಧ್ಯ ಕಂಡು ಚಕಿತನಾಗಿದ್ದೆ. ಅಂಥ ‘ಹಸಿರುತಂತ್ರ’ಗಳನ್ನೆಲ್ಲ ಪ್ರಯೋಗಕ್ಕಿಳಿಸುವ ಸಂಶೋಧನೆಗಳು ಮುಂದಿನ ದಿನಗಳಲ್ಲಿ ನಿರಂತರ ಸಾಗಿಬಂದದ್ದು ಈಗ ಇತಿಹಾಸ.

ಮೂರು ದಶಕಗಳ ನಂತರದ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಜಾಗತಿಕ ಪರಿಸರ ಆರೋಗ್ಯ ಇನ್ನಷ್ಟು ತೀವ್ರವಾಗಿ ಕುಸಿಯುತ್ತಿದೆ, ಹವಾಮಾನ ಬದಲಾವಣೆಯಿಂದಾಗಿ ಜೈವಿಕ ಪರಿಸರದ ಅಡಿಪಾಯ ಧ್ವಂಸಗೊಳ್ಳುತ್ತಿದೆ. ಹೀಗಾಗಿ, ಅಭಿವೃದ್ಧಿ ವಿಧಾನಗಳು ಪರಿಸರ ಸುರಕ್ಷತೆಯ ಚೌಕಟ್ಟು ಮೀರದಂತೆ ನೋಡಿಕೊಳ್ಳಲು, ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಈಗ ಆಯ್ಕೆಯಲ್ಲ, ಅನಿವಾರ್ಯವಾಗಿದೆ!

ಭಾರತದಲ್ಲಿನ ಪರಿಸರ ಪರಿಸ್ಥಿತಿಯಂತೂ ಜನಸಂಖ್ಯಾ ಹೆಚ್ಚಳದಿಂದಾಗಿ ಇನ್ನಷ್ಟು ಜಟಿಲವಾಗುತ್ತಿದೆ. ಅಭಿವೃದ್ಧಿ ಯೋಜನೆಗಳು ಹಾಗೂ ಉದ್ಯಮಗಳಲ್ಲಿ ಸುರಕ್ಷಿತ ತಂತ್ರಜ್ಞಾನಗಳನ್ನು ಸಂತುಲಿತಗೊಳಿಸಬೇಕಾದದ್ದು ಇಂದಿನ ತುರ್ತೇ ಸರಿ.  ನೈಸರ್ಗಿಕ ಸಂಪನ್ಮೂಲಗಳ ಮಿತಬಳಕೆ, ಸರಕುಗಳ ಮರುಬಳಕೆ, ತ್ಯಾಜ್ಯದ ಸಂಸ್ಕರಣೆ ಹಾಗೂ ಪುನರ್ಬಳಕೆಯಂತಹ ಅಂಶಗಳ ‘ಚಕ್ರೀಯ ಆರ್ಥಿಕತೆ’ ಸಾರುವುದು ಇದನ್ನೇ. ಜಗತ್ತಿನ ಮೂರು ಪ್ರಮುಖ ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುವತ್ತ ದೇಶವು ಈಗ ಸಾಗಿರುವಾಗ, ಈ ಬಗೆಯ ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುವ ಉದ್ಯಮದ ವಾತಾವರಣ ನಿರ್ಮಾಣವಾಗಬೇಕಿದೆ. ಈ ತಿಂಗಳ ಮೊದಲ ವಾರದಲ್ಲಿ ಚೆನ್ನೈ ಐಐಟಿಯಲ್ಲಿ ಉದ್ಘಾಟನೆಯಾದ ಉನ್ನತಮಟ್ಟದ ‘ಸುಸ್ಥಿರ ಅಭಿವೃದ್ಧಿ ಕೇಂದ್ರ’ವು ದೇಶವಿದೇಶಗಳ ಗಮನ ಸೆಳೆದಿರುವುದು ಈ ಕಾರಣಕ್ಕಾಗಿ.

ಸುಸ್ಥಿರ ತಂತ್ರಜ್ಞಾನದ ವ್ಯಾಪ್ತಿ ಹಿಗ್ಗಿಸುವ ಸಂಶೋಧನೆಗಳ ಜೊತೆಗೆ, ಮಾನವ ಸಂಪನ್ಮೂಲ ವೃದ್ಧಿ, ಕೌಶಲ ತರಬೇತಿ, ಅವುಗಳ ಅನುಷ್ಠಾನಕ್ಕೆ ಆರ್ಥಿಕ ಕ್ರೋಡೀಕರಣ, ಅವನ್ನು ಕೈಗೆತ್ತಿಕೊಳ್ಳಬಲ್ಲ ನವೋದ್ಯಮಿಗಳಿಗೆ ಮಾರ್ಗದರ್ಶನ– ಈ ಎಲ್ಲ ಆಯಾಮಗಳಲ್ಲಿ ಕಾರ್ಯಕ್ರಮ ರೂಪಿಸುವ ಅಶಯ ಚೆನ್ನೈ ಐಐಟಿಯದು. ಪರಿಸರ ಅಸಮತೋಲನದ ಸಂಕಟಗಳಿಂದ ಹೊರಬರಲು ವಿಶ್ವವು ಶ್ರಮಿಸುತ್ತಿರುವ ಈ ಗಳಿಗೆಯಲ್ಲಿ, ಈ ಬಗೆಯ ಪ್ರಯತ್ನಗಳು ನಿಜಕ್ಕೂ ಆಶಾವಾದ ಹುಟ್ಟಿಸುವಂಥವು.

ಇಂಥ ತಂತ್ರಜ್ಞಾನಗಳ ಕುರಿತು ಯಾಕಿಷ್ಟು ನಿರೀಕ್ಷೆ? ಸಮಕಾಲೀನ ಸಮಸ್ಯೆಯೊಂದಕ್ಕೆ ಪರಿಣಾಮಕಾರಿ ಪರಿಹಾರ ಒದಗಿಸಬಲ್ಲ ಸರಳ ತಂತ್ರವೊಂದನ್ನು ಪರಿಶೀಲಿಸುವುದರೊಂದಿಗೆ ಅದನ್ನು ಅರ್ಥೈಸಿಕೊಳ್ಳಬಹುದು. ಉದ್ಯಾನಗಳಲ್ಲೋ ಮನೆಯಂಗಳದ ಕೈತೋಟದಲ್ಲೋ ನೀವು ‘ಕಾಬಾಳೆ ಗಿಡ’ವನ್ನು ನೋಡಿರುತ್ತೀರಿ. ಶುಂಠಿಗಿಡದ ವರ್ಗ ಹಾಗೂ ಬಾಳೆಗಿಡದ ಸಹೋದರ ಕುಟುಂಬದ ಸಸ್ಯವಿದು. ಗಡ್ಡೆಯಿಂದ ಚಿಗುರಿ ಆಳೆತ್ತರಕ್ಕೆ ಗುಂಪಾಗಿ ಬೆಳೆಯುವ ಗಿಡ. ಎರಡು ಅಡಿ ಉದ್ದದ ಬಾಳೆಎಲೆಯನ್ನು ಹೋಲುವ ಹಸಿರು ಎಲೆಗಳು, ಗಿಣಿಯಂತೆ ತೋರುವ ಬಣ್ಣಬಣ್ಣದ ಹೂಗಳು! ದೂರದಿಂದಲೇ ನೋಡುಗರ ಮನದಲ್ಲಿ ಸಂತಸದ ತಂಗಾಳಿ ಮೂಡಿಸಬಲ್ಲ ಈ ಹೂಗಿಡವೆಂದರೆ, ಹೂತೋಟಿಗರೆಲ್ಲರಿಗೂ ಅಚ್ಚುಮೆಚ್ಚು.

ಈ ಆಲಂಕಾರಿಕ ಹೂಗಿಡ ಇದೀಗ ಸುಸ್ಥಿರ ಅಭಿವೃದ್ಧಿ ವಿಧಾನಗಳಲ್ಲಿ ತೊಡಗಿಕೊಂಡಿರುವ ವೃತ್ತಿಪರರೆಲ್ಲರ ಗಮನ ಸೆಳೆಯುತ್ತಿದೆ. ಜನವಸತಿಯ ಕೊಳಚೆಯನ್ನು ಸಂಸ್ಕರಿಸಲು ಈ ಗಿಡವನ್ನು ಆಧರಿಸಿದ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು, ಮೂರು ದಶಕಗಳಿಂದ ವಿವಿಧ ಬಗೆಯಲ್ಲಿ ಕೈಗೊಂಡಿರುವ ಪ್ರಯೋಗಗಳು ನಿರೂಪಿಸಿವೆ. ನಗರಗಳಲ್ಲಿ ಈಗ ಬಳಕೆಯಲ್ಲಿರುವ ಕೊಳಚೆ ಶುದ್ಧೀಕರಣ ಘಟಕಗಳ ಸ್ಥಾಪನೆ ಹಾಗೂ ನಿರ್ವಹಣೆ ಬಹಳ ವೆಚ್ಚದಾಯಕ ತಾನೇ? ಇದಕ್ಕೆ ಭ್ರಷ್ಟಾಚಾರವೂ ಜೊತೆಯಾಗಿ, ಭಾರತದ ಬಹುತೇಕ ಪಟ್ಟಣಗಳ ಕೊಳಚೆ ಸಂಸ್ಕರಣೆ ಅರೆಬರೆಯಾಗಿಯೇ ಸಾಗಿದೆ. ಅಲ್ಲಿಂದ ಹೊರಬಿದ್ದ ಕಶ್ಮಲಯುಕ್ತ ನೀರು ಜಲಮೂಲ ಸೇರಿ, ಸಾರ್ವಜನಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಇಂಥ ಸಂದರ್ಭದಲ್ಲಿ, ಕಡಿಮೆ ವೆಚ್ಚದಿಂದ ಸರಳವಾಗಿ ರೂಪಿಸಬಹುದಾದ ‘ಕಾಬಾಳೆ ಗಿಡ’ದ ತಂತ್ರಜ್ಞಾನ ವರವಾಗುವ ಎಲ್ಲ ಸಾಧ್ಯತೆಗಳಿವೆ.

ಕೊಳಚೆ ಹೊರಬಿಡುವ ಸ್ಥಳದಲ್ಲಿ ಕೃತಕ ಜೌಗೊಂದನ್ನು ನಿರ್ಮಿಸಿ, ಈ ಗಿಡಗಳನ್ನು ಒತ್ತೊತ್ತಾಗಿ ಬೆಳೆಸಲಾಗುತ್ತದೆ. ಒಂದೆರಡು ಸಾವಿರ ಚದರ ಅಡಿಯ ಅಂಥ ಜೌಗನ್ನು ‘ಕಾಬಾಳೆ ಗದ್ದೆ’ ಎನ್ನಬಹುದು. ಊರು–ಕೇರಿಯಿಂದ ಹರಿದುಬರುವ ಕೊಳಚೆಯನ್ನು ಈ ಜೌಗಿನಲ್ಲಿ ಹರಿಬಿಡಲಾಗುವುದು. ಪಟ್ಟಣ- ನಗರಗಳಲ್ಲಾದರೆ, ಕೊಳಚೆನೀರು ಸಂಸ್ಕರಣೆಗೆ ಬಳಸುವ ಸಂಚಯ ಹೊಂಡ, ಜೈವಿಕ ಸೋಸುಹೊಂಡ ಹಾಗೂ ಆಮ್ಲಜನಕ ಹೆಚ್ಚಿಸುವ ಕೊಳದಿಂದ ಹರಿದುಬರುವ ಅರೆ ಸಂಸ್ಕರಿಸಿದ ನೀರನ್ನು ಈ ಕಾಬಾಳೆಗದ್ದೆಗೆ ಹಾಯಿಸಬಹುದು. ಕೊಳಚೆಯು ಆ ಜೌಗಿನಗುಂಟ ನಿಧಾನವಾಗಿ ಹರಿದು ಮತ್ತೊಂದು ತುದಿ ತಲುಪುವ ವೇಳೆಗೆ, ಕೊಳಚೆನೀರು ಸಂಸ್ಕರಣೆಯಾಗಿ ಬಹುತೇಕ ಶುದ್ಧನೀರು ಹೊರ ಹರಿಯತೊಡಗುತ್ತದೆ! ಇದನ್ನು ಕೃಷಿಗೋ ಜಲಮರುಪೂರಣಕ್ಕೋ ಬಳಸಬಹುದು.

ಈ ಚಮತ್ಕಾರ ಘಟಿಸುವುದು ಹೇಗೆ? ವೇಗವಾಗಿ ಬೆಳೆಯುವ ಈ ಗಿಡದ ಬುಡದಲ್ಲಿ ಗಡ್ಡೆಗಳಿದ್ದು, ಅಸಂಖ್ಯ ನಾರುಬೇರಿನ ಜಾಲವಿದೆ. ಇವಕ್ಕೆ ಅಂಟಿಕೊಂಡು ಅಪಾರ ಪ್ರಮಾಣದ ಬ್ಯಾಕ್ಟೀರಿಯಾಗಳು ವೃದ್ಧಿಯಾಗಿ, ನೀರಿನ ಲವಣಗಳನ್ನೆಲ್ಲ ಹೀರಿಕೊಳ್ಳುತ್ತವೆ. ಸಾರಜನಕವನ್ನು ಗಿಡವು ಬಳಸುವ ನೈಟ್ರೇಟ್ ಪೋಷಕಾಂಶವಾಗಿ ಪರಿವರ್ತಿಸುತ್ತದೆ. ಗಿಡದ ಬೇರು, ಗಡ್ಡೆಯಲ್ಲಿರುವ ವಾಯುಚೀಲದಂತಿರುವ ದೊಡ್ಡ ಜೀವಕೋಶಗಳು ಅಪಾರ ಪ್ರಮಾಣದಲ್ಲಿ ಕೊಳಚೆನೀರನ್ನು ಹೀರಿ, ಕರಗಿರುವ ಲವಣಾಂಶಗಳನ್ನು ಇರಿಸಿಕೊಂಡು, ಶುದ್ಧನೀರನ್ನು ಹೊರಬಿಡುತ್ತವೆ. ಹೀಗೆ, ನೀರಲ್ಲಿರುವ ಇಂಗಾಲ, ಸಾರಜನಕ, ರಂಜಕ, ಮ್ಯಾಗ್ನೀಶಿಯಂ, ಭಾರಲೋಹದಂತಹವುಗಳ ಪ್ರಮಾಣ ಕಡಿಮೆಯಾಗುತ್ತದೆ. ಸಾವಿರಾರು ಗಿಡಗಳ ಗಡ್ಡೆ, ಬೇರುಗಳ ಜಾಲದಲ್ಲಿ ಈ ಪ್ರಕ್ರಿಯೆ ನಿರಂತರ ಪುನರಾವರ್ತನೆಯಾದಾಗ, ಲವಣಾಂಶದ ಪ್ರಮಾಣ ತಗ್ಗಿ, ಆಮ್ಲಜನಕ ಹೆಚ್ಚಿ, ಆಮ್ಲೀಯತೆ ತಟಸ್ಥವಾಗಿ, ನೀರು ಸಹಜ ಸ್ಥಿತಿಗೆ ಬರತೊಡಗುತ್ತದೆ.

ಅಲ್ಲಿ ಸುಲಭವಾಗಿ ಬೆಳೆಯುವ ಕಾಬಾಳೆ ಗಿಡಗಳನ್ನು ವರ್ಷಕ್ಕೆ ಒಂದೆರಡು ಬಾರಿ ಕೊಯಿಲು ಮಾಡಬಹುದು. ಅಪಾರ ಲವಣಾಂಶವಿರುವ ಈ ದ್ರವ್ಯರಾಶಿಯನ್ನು ಪೋಷಕಾಂಶಯುಕ್ತ ಸಾವಯವ ಗೊಬ್ಬರವಾಗಿಸಬಹುದು. ಅಷ್ಟೇಅಲ್ಲ, ಅದರ ಗಡ್ಡೆಗಳನ್ನು ಕೊಳೆಸಿ ಪಡೆಯುವ ‘ಪಾಲಿಲ್ಯಾಕ್ಟಿಕ್ ಆಮ್ಲ’ವನ್ನು (ಪಿಎಲ್ಎ), ಸುಲಭವಾಗಿ ಮಣ್ಣಿನಲ್ಲಿ ಕರಗುವ ‘ಜೈವಿಕ ಪ್ಲಾಸ್ಟಿಕ್’ ಉತ್ಪಾದನೆಗೆ ಬಳಸಬಹುದೆಂದು ಸಂಶೋಧನೆಗಳು ತೋರಿಸಿವೆ. ದೈನಂದಿನ ಬಳಕೆ ಉತ್ಪನ್ನಗಳ ಪ್ಯಾಕೇಜಿಂಗ್ ಹಾಗೂ ಸಾಗಣೆಯಲ್ಲಿ ಬಳಸಿ ಬಿಸಾಡುತ್ತಿರುವ ಪೆಟ್ರೋಲಿಯಂ ಮೂಲದ ಪ್ಲಾಸ್ಟಿಕ್ ಒಂದು ಜಾಗತಿಕ ಸಮಸ್ಯೆಯಾಗಿರುವಾಗ, ಅದರ ಬದಲು ಮಣ್ಣಲ್ಲಿ ಮಣ್ಣಾಗಬಲ್ಲ ಈ ಜೈವಿಕ ಪ್ಲಾಸ್ಟಿಕ್ ಬಳಕೆ ಸಾಧ್ಯವಾದರೆ, ಜಾಗತಿಕ ಪರಿಸರಕ್ಕೆ ದೊಡ್ಡ ಜೀವದಾನ ನೀಡಿದಂತಲ್ಲವೇ?

ಇಂಥ ಸುಸ್ಥಿರ ತಂತ್ರಜ್ಞಾನಗಳನ್ನು ಅಭಿವೃದ್ಧಿ ವಿಧಾನಗಳ ಮುಖ್ಯವಾಹಿನಿಗೆ ತರುವ ನೀತಿಯನ್ನು ಸರ್ಕಾರ ಆದ್ಯತೆಯಲ್ಲಿ ರೂಪಿಸಬೇಕು. ಬಹುಶಃ, ಇತ್ತೀಚೆಗೆ ವಿಧಿವಶರಾದ ಎಂ.ಎಸ್‌.ಸ್ವಾಮಿನಾಥನ್ ಅವರನ್ನು ಸ್ಮರಿಸುವ ಉತ್ಕೃಷ್ಟ ಮಾರ್ಗವಾಗಬಲ್ಲದು ಅದು.

ಡಾ. ಕೇಶವ ಎಚ್ ಕೊರ್ಸೆ

ಡಾ. ಕೇಶವ ಎಚ್ ಕೊರ್ಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT