ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುರಾಜ ದಾವಣಗೆರೆ ಅವರ ವಿಶ್ಲೇಷಣೆ: ಭಾರತ– ಭವಿಷ್ಯ, ಅವಕಾಶ, ಸಾಧ್ಯತೆ

Published : 6 ಸೆಪ್ಟೆಂಬರ್ 2024, 19:45 IST
Last Updated : 6 ಸೆಪ್ಟೆಂಬರ್ 2024, 19:45 IST
ಫಾಲೋ ಮಾಡಿ
Comments

‘ನಿಮಗೆ ಶುಭವಾಗುತೈತೆ’ ಎಂದು ಜನರಿಗೆ ಕಣಿ ಹೇಳುವವರನ್ನು ಸಂತೆ, ಜಾತ್ರೆ, ಬೀದಿಗಳಲ್ಲಿ ಕಾಣುತ್ತಲೇ ಇರುತ್ತೇವೆ. ಅದೇ ರೀತಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆ ತಜ್ಞರೊಬ್ಬರು ದೇಶಗಳ ಆರ್ಥಿಕ ಅಭಿವೃದ್ಧಿಯ ಬಗ್ಗೆ ಕಣಿ ಹೇಳುತ್ತಾರೆ. ಇವರ ಹೆಸರು ಕಿರಿಲ್ ಸೊಕೋಲೋಫ್. ಮುಂದಿನ ದಶಕಗಳಲ್ಲಿ ಯಾವ್ಯಾವ ದೇಶಗಳು ಆರ್ಥಿಕವಾಗಿ ಮುನ್ನಡೆಯುತ್ತವೆ, ಯಾವ ದೇಶಗಳು ಮುಗ್ಗರಿಸುತ್ತವೆ, ಯಾವು ಹಿಂದುಳಿಯುತ್ತವೆ ಎಂಬುದನ್ನೆಲ್ಲ ಇವರು ಕಣ್ಣಾರೆ ಕಂಡವರಂತೆ ಹೇಳುತ್ತಾರೆ.

ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆ ‘13 ಡಿ’ ಮುಖ್ಯಸ್ಥರಾಗಿರುವ ಕಿರಿಲ್, ಇನ್ನು 25 ವರ್ಷಗಳಲ್ಲಿ ಭಾರತವು ಇಡೀ ವಿಶ್ವಕ್ಕಲ್ಲದಿದ್ದರೂ ದಕ್ಷಿಣ ಭೂಗೋಳದ ಭಾಗದಲ್ಲಿ ಏಕಮೇವಾದ್ವತೀಯ ನಾಯಕನಾಗಿ ಮೆರೆಯಲಿದೆ ಎಂದು ಇಂಗ್ಲಿಷ್‌ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಡೀ ದೇಶವಾಗಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ನಾವು ಏನೇನು ಮಾಡಿದರೆ ಅವರ ಮಾತು ಸಾಕಾರಗೊಳ್ಳಬಹುದು ಎಂಬುದನ್ನು ಅವರು ವಿವರಿಸಿದ್ದಾರೆ ಮತ್ತು ಈಗಾಗಲೇ ನಾವು ಯಾವುದರಲ್ಲಿ ಮುಂದಿದ್ದೇವೆ ಎಂಬುದರ ಪಟ್ಟಿಯನ್ನು ಸಹ ನೀಡಿದ್ದಾರೆ.

ಈ ನಾಲ್ಕು ದಶಕಗಳಲ್ಲಿ ಜಾಗತಿಕ ಆರ್ಥಿಕತೆಯ ಏಳುಬೀಳುಗಳ ಬಗ್ಗೆ ಇವರು ಹೇಳಿರುವುದು ಬಹುಮಟ್ಟಿಗೆ ನಿಜವಾಗಿದೆ. 90ರ ದಶಕದಲ್ಲಿ ಚೀನಾ ಆರ್ಥಿಕವಾಗಿ ದೊಡ್ಡ ಸ್ಥಾನ ಸಂಪಾದಿಸಲಿದೆ ಎಂದಿದ್ದರು. ಅದು ನಿಜವಾಯಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದಿದ್ದರು. ಅದೂ ನಮ್ಮ ಕಣ್ಣೆದುರಿಗೇ ಇದೆ. ಜಗತ್ತಿನ ಜನಸಂಖ್ಯೆಯ ಶೇಕಡ 88ರಷ್ಟು ವಿಶ್ವದ ದಕ್ಷಿಣ ಭಾಗದಲ್ಲಿಯೇ ಇದೆ. ಅವರೆಲ್ಲರಿಗೂ ಮುಂದಿನ ನೂರು ವರ್ಷಗಳ ಕಾಲ ಭಾರತ ನಾಯಕನಾಗಲಿದೆ ಎಂಬ ಕಿರಿಲ್‌ ಅವರ ಮಾತು ನಮ್ಮವರಲ್ಲಿ ಹುಮ್ಮಸ್ಸು ತುಂಬಿದ್ದರೆ ಅಮೆರಿಕ, ಚೀನಾದಲ್ಲಿ ಆತಂಕ ಸೃಷ್ಟಿಸಿದೆ. 14 ವರ್ಷಗಳಿಂದ ಅಮೆರಿಕದಲ್ಲಿ ಕೇಂದ್ರೀಕೃತಗೊಂಡಿದ್ದ ಬಂಡವಾಳವು ಇನ್ನು ಮುಂದೆ ಭಾರತಕ್ಕೆ ಹರಿದುಬರಲಿದೆ, ಬಂಗಾರದ ಬೆಲೆ ಊಹಿಸಲಾಗದಷ್ಟು ಎತ್ತರಕ್ಕೆ ಏರಲಿದೆ ಎಂದಿದ್ದಾರೆ.

ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು 2022ರಲ್ಲಿ ಆಚರಿಸಿದ್ದ ನಾವು ಈಗ ನೂರನೆಯ ವರ್ಷದತ್ತ ದಾಪುಗಾಲು ಹಾಕಿದ್ದೇವೆ. ಹೊಸ ತಂತ್ರಜ್ಞಾನದ ಬಲ ನಮ್ಮ ಹೆಜ್ಜೆಗಳನ್ನು ಹಿಂದೆಂದಿಗಿಂತ ಹೆಚ್ಚು ದೃಢವಾಗಿಸಿದೆ. ಇಡೀ ವಿಶ್ವದಲ್ಲಿ ಯಾಂತ್ರಿಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಮ್ಮಷ್ಟು ಬಳಸುವವರು ಯಾರೂ ಇಲ್ಲ. ‘ತರುಣದೇಶ’ ಎಂಬ ಖ್ಯಾತಿಯೂ ನಮಗಿದೆ. ಈ ತಾರುಣ್ಯವನ್ನೇ ಬಂಡವಾಳ ಮಾಡಿಕೊಂಡು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡರೆ ಇನ್ನು 25 ವರ್ಷಗಳಲ್ಲಿ ವಿಶ್ವದ ನಂಬರ್‌ 1 ಆರ್ಥಿಕ ಶಕ್ತಿಯಾಗಿ ಹೊಮ್ಮುವ ಎಲ್ಲಾ ಅವಕಾಶಗಳು ನಮ್ಮೆದುರುಗಿವೆ.

ನಮ್ಮ ಆರ್ಥಿಕತೆಯ ಪ್ರಮಾಣ ಈಗಾಗಲೇ ಮೂರೂಕಾಲು ಲಕ್ಷ ಕೋಟಿ ಡಾಲರ್ ದಾಟಿದೆ. ಮುಂದಿನ ವರ್ಷದ ಕೊನೆಯ ವೇಳೆಗೆ ಅದನ್ನು ಐದು ಲಕ್ಷ ಕೋಟಿ ಡಾಲರ್‌ಗೆ ತಲುಪಿಸುವ ಉದ್ದೇಶದ ಯೋಜನೆಗಳು ಜಾರಿಯಲ್ಲಿವೆ. 2047ಕ್ಕೆ ಅದು 30 ಲಕ್ಷ ಕೋಟಿ ಡಾಲರ್ ಆಗಲಿದೆ ಎಂಬ ಅಂದಾಜಿದೆ. ಆಗ ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವು ₹ 15 ಲಕ್ಷದಷ್ಟು ಇರುತ್ತದೆ. ಈಗಿನ ತಲಾ ಆದಾಯವು ₹ 2 ಲಕ್ಷ ಆಗಿದೆ. ನೀತಿ ಆಯೋಗವು ಜರ್ಮನಿ, ಸಿಂಗಪುರ, ಜಪಾನ್, ದಕ್ಷಿಣ ಕೊರಿಯಾ ದೇಶಗಳ ಸಾಧನೆಗಳ ಮಾದರಿಯನ್ನು ನಮ್ಮಲ್ಲೂ ಅನುಕರಿಸಬಹುದು ಎಂದು ಹೇಳುತ್ತಿದೆ. ಭವಿಷ್ಯದ ತಂತ್ರಜ್ಞಾನಗಳು ಎಂದು ಬಿಂಬಿತಗೊಂಡಿರುವ 63ರ ಪೈಕಿ 57ರಲ್ಲಿ ಚೀನಾ ಸಂಪೂರ್ಣ ಹಿಡಿತ ಸಾಧಿಸಿದೆ ಎಂಬ ಮಾಹಿತಿ ಇದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಚೀನಾ ತನ್ನ ಜಿಡಿಪಿಯ ಶೇ 20ರಷ್ಟು ಬಳಸುತ್ತದೆ. ನಾವು ಬಳಸುತ್ತಿರುವುದು ಶೇ 3.3ರಷ್ಟು ಮಾತ್ರ. ಮೂಲಸೌಕರ್ಯ ಸೃಷ್ಟಿಯಾಗದೆ ದೊಡ್ಡ ಮಟ್ಟದ ಆರ್ಥಿಕ ಬೆಳವಣಿಗೆ ಕಷ್ಟವೇ ಸರಿ. ನಮ್ಮದು ವಿಕಸಿತ ಭಾರತವಾಗಲು ಪಕ್ಕದ ಚೀನಾದ ಸಾಧನೆಯನ್ನು ಮೀರಿಸಲೇಬೇಕು.

ಆರ್ಥಿಕತೆಯನ್ನು ತ್ವರಿತವಾಗಿ ವೃದ್ಧಿಸಬಲ್ಲ ಎಂಟು ವಿವಿಧ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಅದಕ್ಕೆ ಬೇಕಾದ ಬಂಡವಾಳ ಮತ್ತು ಮಾನವ ಸಂಪನ್ಮೂಲ ಈ ಎರಡನ್ನೂ ಒದಗಿಸಿ ನಿಶ್ಚಿತ ಗುರಿ ತಲುಪುವ ಕೆಲಸಗಳು ನಡೆಯುತ್ತಿವೆ. ದೇಶದ ಜನಸಂಖ್ಯೆ 144 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅರ್ಧದಷ್ಟು ಜನರ ವಯಸ್ಸು 29ರ ಕೆಳಗಿದೆ. 2047ಕ್ಕೆ ಜನಸಂಖ್ಯೆಯು 165 ಕೋಟಿಯಷ್ಟು ಆಗಲಿದೆ. ಜನರ ಸರಾಸರಿ ಆಯುಷ್ಯ 84 ವರ್ಷಕ್ಕೆ ಏರಲಿದೆ. ಶೇ 100ರ ಸಾಕ್ಷರತೆ, ರಸ್ತೆಗಳ ಮೇಲೆ ಶೇಕಡ 75ರಷ್ಟು ಎಲೆಕ್ಟ್ರಿಕ್ ವಾಹನಗಳು, ಕೆಲಸ ಮಾಡಲು ಸಾಮರ್ಥ್ಯವಿರುವ 112 ಕೋಟಿ ಜನ, ದೇಶದ ವಿಶ್ವವಿದ್ಯಾಲಯಗಳಲ್ಲಿ ಹೊರದೇಶಗಳ 5 ಲಕ್ಷ ವಿದ್ಯಾರ್ಥಿಗಳು ಇರಲಿದ್ದಾರೆ ಎಂಬ ಭವ್ಯ ಚಿತ್ರಣವಿದೆ.

1997ರಲ್ಲಿ ಸುವರ್ಣ ಸ್ವಾತಂತ್ರ್ಯವನ್ನು ದೇಶ ಸಂಭ್ರಮದಿಂದ ಆಚರಿಸಿತು. ಅಲ್ಲಿಂದ ಈಚೆಗೆ 27 ವರ್ಷಗಳು ಸಂದಿವೆ. ಅಂದು ಬಳಕೆಯಲ್ಲಿದ್ದ ತಂತ್ರಜ್ಞಾನದ ಅನೇಕ ಸಲಕರಣೆಗಳು ಈಗ ಎಲ್ಲಿಯೂ ಕಾಣಿಸುತ್ತಿಲ್ಲ. ಟೈಪ್‌ರೈಟರ್, ರೀಲ್ ಕ್ಯಾಮೆರಾ, ಕ್ಯಾಸೆಟ್ ಟೇಪ್, ಸಂಗೀತ ಕೇಳಲು ಬಳಸುತ್ತಿದ್ದ ವಾಕ್ಮನ್, ಎಸ್‌ಟಿಡಿ ಬೂತ್, ಮುದ್ರಿತ ರೋಡ್ ಮ್ಯಾಪ್, ಉಬ್ಬಿದ ಟೆಲಿವಿಷನ್, ಫ್ಲಾಪಿ ಡಿಸ್ಕ್, ಟೆಲಿಗ್ರಾಂ ಕಳಿಸುವ ಸಾಧನ, ಪಾಕೆಟ್ ರೇಡಿಯೊ, ಟ್ರಾನ್ಸಿಸ್ಟರ್‌, ಸಿ.ಡಿ, ಡಿ.ವಿ.ಡಿ, ಡಯಲ್ಅಪ್ ಇಂಟರ್ನೆಟ್ ಸಾಧನ ಹೀಗೆ ಹತ್ತು ಹಲವು ಎಲೆಕ್ಟ್ರಾನಿಕ್ಸ್ ವಸ್ತುಗಳು ತೆರೆಮರೆಗೆ ಸರಿದು ದಶಕಗಳೇ ಆಗಿವೆ. ಮೊದಲೆಲ್ಲ ಎಲ್ಲ ಮನೆಗಳಲ್ಲೂ ಇರುತ್ತಿದ್ದ ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕ ವ್ಯವಸ್ಥೆ ಈಗ ಬಹುಮಟ್ಟಿಗೆ ಸರ್ಕಾರಿ ಕಚೇರಿಗಳಿಗಷ್ಟೇ ಸೀಮಿತಗೊಂಡಿದೆ. ಈಗ ಬಳಕೆಯಲ್ಲಿರುವ ಕೇಬಲ್ ಟಿ.ವಿ. ಜಾಲ, ಡಿಟಿಎಚ್ ಸೇವೆ, ಫ್ಯಾಕ್ಸ್ ಯಂತ್ರ, ಏಕಬಳಕೆಯ ಪ್ಲಾಸ್ಟಿಕ್, ಲೋಹದ ಬೀಗದ ಕೈ, ಡೀಸೆಲ್ ವಾಹನ, ಶಾಪಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಕೈಚೀಲ... ಇಂಥವುಗಳು 2047ರ ವೇಳೆಗೆ ಸಂಪೂರ್ಣ ಕಣ್ಮರೆಯಾಗಲಿವೆ.

ಆರ್ಥಿಕ ಅಭಿವೃದ್ಧಿಯಾದರೆ ಎಲ್ಲವೂ ಆದಂತೆ ಎನ್ನುವುದು ಅರ್ಧಸತ್ಯವಷ್ಟೇ. ಜನರ ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಆಯಾಮಗಳಲ್ಲೂ ಅಭಿವೃದ್ಧಿ ಹಾಸುಹೊಕ್ಕಾಗಬೇಕು. ಜೀವನವಿಧಾನ ಸರಳಗೊಳ್ಳಬೇಕು. ಸಮುದಾಯಗಳ ಆರೋಗ್ಯ ಉನ್ನತ ಮಟ್ಟದಲ್ಲಿರಬೇಕು. ಪ್ರಜೆಗಳ ನೆಮ್ಮದಿಯ ಸೂಚ್ಯಂಕ ಹೆಚ್ಚಬೇಕು. 2070ರ ವೇಳೆಗೆ ಶೂನ್ಯ ಇಂಗಾಲ ಹೊಮ್ಮುವಿಕೆಯನ್ನು ಸಾಧಿಸುತ್ತೇವೆ ಎಂದು ಶಪಥ ಮಾಡಿದ್ದೇವೆ. ಭೂಮಿ ಬಿಸಿ ಏರಿಕೆಯನ್ನು ತಡೆಯುವಲ್ಲಿ ನಾವು ಎಲ್ಲ ದೇಶಗಳಿಗಿಂತ ಮುಂದಿರಬೇಕು. ಜನ ತಮ್ಮ ಎಲ್ಲ ನಡವಳಿಕೆಗಳಲ್ಲೂ ಸಾಮಾಜಿಕ ಪ್ರಜ್ಞೆ ಮೆರೆಯಬೇಕು. ಕುವೆಂಪು ಹೇಳಿದ ವಿಶ್ವಮಾನವ ತತ್ವದ ತಳಹದಿಯ ಮೇಲೆ ನಮ್ಮ ಕೆಲಸಗಳು ನಡೆಯಬೇಕು.

ದುಡಿಯುವ ಕೈಗಳಿಗೆ ಉದ್ಯೋಗಗಳು ಸಿಗಬೇಕು. ದೇಶಕ್ಕೆ ಹೆಸರು ಮತ್ತು ಆರ್ಥಿಕ ಸದೃಢತೆ ಈ ಎರಡನ್ನೂ ತಂದುಕೊಟ್ಟಿದ್ದ ಸರ್ಕಾರಿ ಸ್ವಾಮ್ಯದ ಅನೇಕ ಉದ್ಯಮಗಳು ಬಾಗಿಲು ಹಾಕಿಕೊಂಡಿವೆ. ಅವುಗಳ ಪುನಶ್ಚೇತನ ಆಗಬೇಕು. ಸಂಶೋಧನೆಯ ಪ್ರಯೋಜನಗಳು ಎಲ್ಲರಿಗೂ ತಲುಪುತ್ತಿಲ್ಲ. ವಿಜ್ಞಾನ– ತಂತ್ರಜ್ಞಾನ ಸಂಶೋಧನೆಗೆ ನೀಡುತ್ತಿರುವ ಅನುದಾನದ ಪ್ರಮಾಣ ಹೆಚ್ಚಬೇಕು. ಉನ್ನತ ಶಿಕ್ಷಣವು ಗ್ರಾಮೀಣ ಮಕ್ಕಳಿಗೆ ಎಟಕುತ್ತಿಲ್ಲ. ಸುಧಾರಿತ ವೈದ್ಯಕೀಯ ಸೇವೆಗಳು ದುಡ್ಡಿರುವವರಿಗೆ ಮಾತ್ರ ಎನ್ನುವ ಪರಿಸ್ಥಿತಿ ಈಗಲೂ ಇದೆ. ಕೇರಳ ರಾಜ್ಯದಲ್ಲಿ ಪ್ರತಿ 10,000 ಜನರಿಗೆ 42 ಮಂದಿ ವೈದ್ಯರು ಇದ್ದರೆ, ಜಾರ್ಖಂಡ್‌ನಲ್ಲಿ ಅಷ್ಟೇ ಜನರಿಗೆ ಬರೀ ನಾಲ್ಕು ವೈದ್ಯರು ಲಭ್ಯವಿದ್ದಾರೆ. ಆತ್ಮನಿರ್ಭರದ ಕೆಲಸಗಳು ನಮ್ಮ ರಕ್ಷಣಾ ಸಂಶೋಧನೆಯಲ್ಲಿ ಎದ್ದುಕಾಣುತ್ತಿಲ್ಲ. ನಮ್ಮದೇ ತಂತ್ರಜ್ಞಾನ ಬಳಸಿ ಜೆಟ್ ಎಂಜಿನ್ ನಿರ್ಮಿಸಲು ಪ್ರಯತ್ನವು 25 ವರ್ಷಗಳಿಂದ ನಡೆದಿದ್ದರೂ ಅದು ಇನ್ನೂ ಸಾಧ್ಯವಾಗಿಲ್ಲ. ಚಾಲಕರಹಿತ ಆಗಸ ವಾಹನಗಳ ನಿರ್ಮಾಣ ತಂತ್ರಜ್ಞಾನ ನಮ್ಮನ್ನು ಇನ್ನೂ ಕೈಹಿಡಿದಿಲ್ಲ. ಒಲಿಂಪಿಕ್ ಆಟೋಟಗಳಲ್ಲಿ ಚಿನ್ನದ ಪದಕಗಳ ಸಂಖ್ಯೆ ಎರಡಂಕಿ ದಾಟುತ್ತಿಲ್ಲ.

ಆಹಾರ ಬೆಳೆಯುವ ರೈತ, ದೇಶ ಕಾಯುವ ಸೈನಿಕ, ಮಕ್ಕಳನ್ನು ರೂಪಿಸುವ ಶಿಕ್ಷಕ ಮತ್ತು ದೇಶದ ಉತ್ಪನ್ನ ರೂಪಿಸುವ ಶ್ರಮಿಕ ವರ್ಗಕ್ಕೆ ಆತ್ಮಗೌರವ ಮತ್ತು ಗಳಿಕೆ ಈ ಎರಡೂ ಹೆಚ್ಚಾಗುವಂತೆ ಸಮಾಜದ ನಡವಳಿಕೆ ರೂಪುಗೊಳ್ಳಬೇಕು. ಈ ದಿಸೆಯಲ್ಲಿ ಸಮೂಹಪ್ರಜ್ಞೆ ಜಾಗೃತಗೊಂಡರೆ ವಿಕಸಿತ ಭಾರತದ ಕನಸು ನನಸಾಗುವುದು ಕಷ್ಟವೇನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT