ರಾಜಕಾರಣಿಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಕುಟುಂಬಮೋಹ ಎಂಬ ಎರಡು ವಿಚಾರಗಳು ಈಗೀಗ ಸಾರ್ವಜನಿಕ ಬದುಕಿನ ಅನಿಷ್ಟಗಳಾಗಿ ಉಳಿದಿಲ್ಲ; ಅನಿವಾರ್ಯ ನಡವಳಿಕೆ ಎನ್ನಿಸಿವೆ, ಸಾರ್ವತ್ರಿಕ ಮನ್ನಣೆ ಗಳಿಸಿವೆ, ಸ್ವೀಕಾರಾರ್ಹ ನಿಲುವಾಗಿವೆ. ಇವೆಲ್ಲವೂ ಒಮ್ಮೆಗೇ ಘಟಿಸಿದ ವಿದ್ಯಮಾನಗಳೇನಲ್ಲ. ಕೆಲವೇ ದಿನಗಳ ಹಿಂದೆ ಟೀಕೆಗೆ, ಚರ್ಚೆಗೆ, ತಿರಸ್ಕಾರಕ್ಕೆ ಯೋಗ್ಯವೆನಿಸಿದ್ದ ಈ ದುರ್ಗುಣಗಳು ಸಾಂದರ್ಭಿಕ ನೆಪಗಳ ಒಂದೊಂದೇ ಮೆಟ್ಟಿಲು ಏರುತ್ತಾ ಸಮ್ಮತಿಯ ಉಪ್ಪರಿಗೆ ತಲುಪಿವೆ.

ಅಧಿಕಾರದಾಹಿ ರಾಜಕಾರಣಿಗಳು ಆರೋಹಣದ ದಾರಿಯುದ್ದಕ್ಕೂ ನೈತಿಕತೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಗಳನ್ನು ತ್ಯಾಜ್ಯರೂಪದಲ್ಲಿ ಚೆಲ್ಲುತ್ತಾ ಸಾಗಿರುವುದನ್ನು ಗಮನಿಸಬಹುದು. ಎಲ್ಲ ವಲಯಗಳಿಂದಲೂ ವಿಸರ್ಜನೆಯಾಗುತ್ತಿರುವ ಈ ತ್ಯಾಜ್ಯದ ಜಮಾವಣೆಯ ಪ್ರಮಾಣ ಕೂಡ ಸಣ್ಣದಲ್ಲ. ಇದರ ವಿಲೇವಾರಿಗೋ ಸಂಸ್ಕರಣೆಗೋ ಘಟಕಗಳನ್ನು ಸ್ಥಾಪಿಸುವ ಅನಿವಾರ್ಯ ಸ್ಥಿತಿ ಏರ್ಪಟ್ಟಿದೆ. ಇದರ ನಿರ್ವಹಣೆ ಗುತ್ತಿಗೆಗೂ ಇವರೇ ಮುಗಿಬಿದ್ದರೆ ಯಾರೂ ಅಚ್ಚರಿಪಡಬೇಕಿಲ್ಲ!

ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ಮೂಲದಲ್ಲಿ ಅಡಗಿರುವ ಎರಡು ಕಾರಣಗಳಲ್ಲಿ ಮೊದಲನೆಯದು ಸ್ವಾರ್ಥ. ಸ್ವಾರ್ಥದ ಅಂಕುರ ತೀರಾ ವೈಯಕ್ತಿಕ ನೆಲೆಯಲ್ಲಿ ಆದರೂ ಪರಿಣಾಮದಲ್ಲಿ ಸುತ್ತಲೂ ಆವರಿಸಿಕೊಳ್ಳುವ ಗುಣ ಹೊಂದಿರುತ್ತದೆ. ಮತ್ತೊಂದು ಕಾರಣವೆಂದರೆ, ಸುತ್ತಲಿನ ಸಾರ್ವಜನಿಕ ಪರಿಸರ ಸೃಷ್ಟಿಸುವ ಅನಿವಾರ್ಯ. ಇದು ಹೊರಗಿನ ಒತ್ತಡಗಳ ಪ್ರಭಾವದಿಂದ ವ್ಯಕ್ತಿಯ ಒಳಗನ್ನು ಹಳವಂಡ ಮಾಡುವ ಪ್ರಕ್ರಿಯೆ. ತೊಂಬತ್ತರ ದಶಕದ ನಂತರದ ರಿಯಲ್ ಎಸ್ಟೇಟ್, ಗಣಿಗಾರಿಕೆಯಂತಹ ವ್ಯಾಪಾರಿ ಹಿನ್ನೆಲೆಯ ಲಾಭಬಡುಕ ರಾಜಕಾರಣಿಗಳನ್ನು ಹೊರಗಿಟ್ಟು ಅವಲೋಕಿಸುವುದಾದರೆ, ಬಹಳಷ್ಟು ರಾಜಕಾರಣಿಗಳ ಸಾರ್ವಜನಿಕ ಅಸ್ತಿತ್ವ ಈ ಬಗೆಯ ‘ಅನಿವಾರ್ಯ’ದ ಸುಳಿಯಲ್ಲಿ ಸಿಲುಕಿದೆ ಎಂಬುದು ಗೋಚರಿಸುತ್ತದೆ.

ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಅವರಂತಹ ಮೊದಲ ತಲೆಮಾರಿನ ರಾಜಕಾರಣಿಗಳು ಸಾರ್ವಜನಿಕ ಬದುಕಿಗೆ ಪ್ರವೇಶ ಪಡೆದ ಸಂದರ್ಭ, ರೀತಿ, ನೀತಿ ಮತ್ತು ನಡಿಗೆಯಲ್ಲಿ ಸ್ವಾರ್ಥದ ತೂಕ ಹಾಗೂ ಅನಿವಾರ್ಯ ಸ್ಥಿತಿಯ ಪ್ರಮಾಣವನ್ನು ಅಳತೆ ಮಾಡಲು ಸಾಧ್ಯವಾದರೆ, ಬದಲಾದ ಸನ್ನಿವೇಶದ ನೈಜ ಸ್ಥಿತಿ ಇನ್ನಷ್ಟು ನಿಚ್ಚಳವಾಗಬಹುದು. ಇದೇ ಅಳತೆಗೋಲು ಅವರ ಮುಂದಿನ ಪೀಳಿಗೆಗೆ ಅನ್ವಯವಾಗಲು ಖಂಡಿತ ಸಾಧ್ಯವಿಲ್ಲ. ಇಂದು ಒಬ್ಬ ರಾಜಕಾರಣಿ ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ತಗಲುವ ವೆಚ್ಚ ಎಲ್ಲರ ಊಹೆಯನ್ನೂ ಮೀರಿಸಿದ ಹಂತ ಮುಟ್ಟಿರುವುದನ್ನು ಯಾರೂ ಮರೆಮಾಚಲಾಗದು. ಚುನಾವಣೆಗಳಷ್ಟೇ ಅಲ್ಲ, ರಾಜಕಾರಣಿಗಳ ದೈನಂದಿನ ಚಟುವಟಿಕೆಗಳೆಲ್ಲವೂ ಹಣ ವ್ಯಯಿಸುವ, ಹೂಡುವ ಕ್ರಿಯೆ ಆದಾಗ ಅವರಿಗಿರುವ ಆಯ್ಕೆಯಾದರೂ ಏನು? ವರಮಾನದ ಮೂಲಗಳನ್ನು ಹುಡುಕುವುದು ತಾನೇ?

ಈ ಮಾತುಗಳು ಮೇಲ್ನೋಟಕ್ಕೆ ಭ್ರಷ್ಟ ರಾಜಕಾರಣಿಗಳ ಸಮರ್ಥನೆಯಾಗಿಯೋ ಅನುಕಂಪ ಹುಟ್ಟಿಸುವಂತೆಯೋ ಕಾಣಿಸುವುದು ಸಹಜ. ಆದರ್ಶ ಗಣ್ಣುಗಳ ನೋಟಕ್ಕೆ ಧಕ್ಕೆ ಉಂಟು ಮಾಡುವ ಸಂಗತಿಯೂ ಹೌದು. ಆದರೆ ಗ್ರಾಮ ಪಂಚಾಯಿತಿ ಮಟ್ಟದ ರಾಜಕಾರಣಿಯಿಂದ ಹಿಡಿದು ಮುಖ್ಯಮಂತ್ರಿ ತನಕ ಹಣದ ವಹಿವಾಟಿಲ್ಲದೆ ಸಾರ್ವಜನಿಕ ಬದುಕಿನ ಅಸ್ತಿತ್ವವೇ ಇಲ್ಲದಂತಾಗಿದೆ. ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದೊಮ್ಮೆ ಮುಖ್ಯಮಂತ್ರಿ ಹುದ್ದೆಗೆ ₹2,000 ಕೋಟಿ ಎಂದು ಬೆಲೆ ಕಟ್ಟಿದಾಗ ಅಥವಾ ಮುಖ್ಯಮಂತ್ರಿಯಾಗಲು ನಾಯಕರೊಬ್ಬರು ₹1,000 ಕೋಟಿ ಸಿದ್ಧ ಮಾಡಿಕೊಂಡಿದ್ದಾರೆ ಎಂದು ಈಚೆಗೆ ಆರೋಪಿಸಿದಾಗ ಯಾರಿಂದಲೂ ಹೇಳಿಕೊಳ್ಳುವಂತಹ ಪ್ರತಿರೋಧ ಕೇಳಿಬರಲಿಲ್ಲ. ಮೇಲಾಗಿ, ಇದನ್ನು ಕೇಳಿಸಿಕೊಂಡ ಸಾರ್ವಜನಿಕರಿಗೆ ಕೂಡ ಅಚ್ಚರಿ, ಆಘಾತ, ಅಸಹ್ಯ ಏನೂ ಆಗಲಿಲ್ಲ ಎಂಬುದು ಬಹಳ ಮಹತ್ವದ ಸಂಗತಿ!

ಚುನಾವಣೆ ಸಂದರ್ಭದಲ್ಲಿ ತಮ್ಮ ಮತಕ್ಷೇತ್ರಕ್ಕೆ ಹಣ ಸುರಿಯುವ ‘ಸಮರ್ಥ’ ಅಭ್ಯರ್ಥಿಯನ್ನು ಅಪೇಕ್ಷಿಸುವ ಮತದಾರರ ಸಂಖ್ಯೆಯೇ ಹೆಚ್ಚು. ಇನ್ನು, ರಾಜಕೀಯ ಪಕ್ಷಗಳಿಗೆ ಗೆಲ್ಲುವ ಅಭ್ಯರ್ಥಿ ಬಹಳ ಮುಖ್ಯ. ಕ್ಷೇತ್ರದಲ್ಲಿ ಹಣ, ಸಮಯ, ಸಂಯಮ ಹೂಡುವ ಅಭ್ಯರ್ಥಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಈ ನೆಟ್ವರ್ಕ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾಲವಿದು. ರಾಜಕೀಯ ಪಕ್ಷ, ಅಭ್ಯರ್ಥಿ ಮತ್ತು ಮತದಾರರ ತ್ರಿವೇಣಿ ಸಮಾಗಮ! ಹೀಗಿರುವಾಗ, ಯಾರನ್ನೋ ಭ್ರಷ್ಟಾಚಾರಿ ಎಂದಾಗಲೀ ಯಾವುದನ್ನೋ ಕುಟುಂಬ ರಾಜಕಾರಣ ಎಂತಾಗಲೀ ಜರಿಯುವ ಮುನ್ನ ಜನ ಒಮ್ಮೆ ಕನ್ನಡಿಯಲ್ಲಿ ಇಣುಕಿ ನೋಡಿಕೊಳ್ಳುವುದು ಒಳ್ಳೆಯದು ಎನ್ನಿಸುತ್ತದೆ.

ಸಂಕೀರ್ಣ ಸಂದರ್ಭಗಳಲ್ಲಿ, ಚಳವಳಿಗಳ ಕಾವಿನಲ್ಲಿ, ಹೋರಾಟಗಳ ಅಬ್ಬರದಲ್ಲಿ, ಕಾಲೇಜು ಕ್ಯಾಂಪಸ್ಸು
ಗಳಲ್ಲಿ ರೂಪುಗೊಳುತ್ತಿದ್ದ ರಾಜಕೀಯ ನಾಯಕತ್ವಗಳು ಇತ್ತೀಚೆಗೆ ರಾಜಕಾರಣಿಗಳ ಮನೆಗಳಲ್ಲೇ ಹುಟ್ಟು ಪಡೆಯುತ್ತಿರುವುದರ ಗುಟ್ಟು ಇದೇ ಆಗಿದೆ. ಹಾಗೆ ನೋಡಿದರೆ ರಾಜಕಾರಣಿಯ ಕುಟುಂಬದಲ್ಲಿ ಹುಟ್ಟುವುದು ರಾಜಕೀಯ ಕುಡಿಯೇ ವಿನಾ ರಾಜಕೀಯ ನಾಯಕತ್ವ ಅಲ್ಲವೇ ಅಲ್ಲ. ಕರ್ನಾಟಕದ ಮೇಲೆ ಹೇರಲಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳು ಮೂರೂ ರಾಜಕೀಯ ಪಕ್ಷಗಳು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಿದ್ದರ ಫಲ ಆಗಿವೆ. ಬಿಜೆಪಿಯ ಬಸವರಾಜ ಬೊಮ್ಮಾಯಿ, ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ಸಿನ ಇ.ತುಕಾರಾಮ್ ಸಂಸದರಾಗಿ ಆಯ್ಕೆಯಾಗುವ ಮೂಲಕ ತಾವು ಪ್ರತಿನಿಧಿಸುತ್ತಿದ್ದ ಶಿಗ್ಗಾವಿ, ಚನ್ನಪಟ್ಟಣ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳನ್ನು ‘ಖಾಲಿ’ ಮಾಡಿದ್ದರು. ಇದೀಗ ಆ ಸ್ಥಾನಗಳನ್ನು ತುಂಬುವ ಸರ್ಕಸ್ಸು ಆರಂಭವಾಗಿದೆ. ಈ ಕ್ಷೇತ್ರಗಳನ್ನು ಸತತ ‘ಪೋಷಣೆ’ ಮಾಡಿದವರು ಮತ್ತೆ ತಮ್ಮ ಕುಟುಂಬದ ಸದಸ್ಯರ ಮೂಲಕ ಆಪೋಶನ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ಶಿಗ್ಗಾವಿಗೆ ಬಿಜೆಪಿಯಿಂದ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಕಾಂಗ್ರೆಸ್ಸಿನಿಂದ ಅನ್ನಪೂರ್ಣ ತುಕಾರಾಮ್ ಉಮೇದು ವಾರರಾಗಿದ್ದಾರೆ. ಚನ್ನಪಟ್ಟಣಕ್ಕೆ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿಬರುತ್ತಿದೆ.

ಹಾಲಿ ಶಾಸಕರನ್ನೇ ಸಂಸತ್ ಚುನಾವಣೆಗೆ ನಿಲ್ಲಿಸುವ ನಿರ್ಣಯ ಮಾಡುವಾಗ ಈ ಪಕ್ಷಗಳಿಗೆ ಬೇರಾವ ಕಾರ್ಯಕರ್ತರೂ ಕಣ್ಣಿಗೆ ಬೀಳಲೇ ಇಲ್ಲ. ಈಗಿನ ಉಪಚುನಾವಣೆಯಲ್ಲಿ ಕೂಡ ಗೆಲುವು ಮತ್ತು ಹೂಡಿಕೆ ಲೆಕ್ಕದಲ್ಲಿ ಕುಟುಂಬ ರಾಜಕಾರಣದ ಅನಿವಾರ್ಯವನ್ನು ಪುನಃ ರುಜುವಾತು ಮಾಡಲಾಗಿದೆ. ಇನ್ನು, ಈ ಜಾಲದ ಮತ್ತೊಂದು ಕೊಂಡಿಯಾದ ಮತದಾರ ತನ್ನ ಸಮ್ಮತಿಯ ಗುಂಡಿ ಒತ್ತುವುದೊಂದೇ ಬಾಕಿ.

ರಾಜಕಾರಣಿಗಳು, ರಾಜಕೀಯ ಪಕ್ಷಗಳ ಇಂಥ ಧೋರಣೆ ಕುರಿತು ಬಹಳಷ್ಟು ಸಮರ್ಥನೆಗಳು, ವಾಸ್ತವದ ಪಾಠಗಳು, ನೀತಿಕತೆಗಳು ಇರಲು ಸಾಧ್ಯ. ಆದರೆ ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡ ರೀತಿ ಮಾತ್ರ ವಿಶೇಷವೂ ಸಾರಾಂಶರೂಪಿಯೂ ಆಗಿದೆ. ‘ಡಾಕ್ಟರ್ ಮಗ ಡಾಕ್ಟರ್, ಎಂಜಿನಿಯರ್ ಮಗ ಎಂಜಿನಿಯರ್, ಟೀಚರ್ ಮಗ ಟೀಚರ್ ಆಗಬೇಕು...’ ಎಂಬ ತರ್ಕ ಈ ಯುವಕನ ಬಾಯಿಂದ ಹೊರಟಿದೆ. ನಾಡಿಗೆ ಇಬ್ಬರು ಮುಖ್ಯಮಂತ್ರಿ ಗಳನ್ನು ನೀಡಿದ ಕುಟುಂಬದ ಕುಡಿಯಿದು!

ಎಡಪಂಥೀಯ ಸಿದ್ಧಾಂತಿ ಎಂ.ಎನ್.ರಾಯ್ ಅವರ ಅನುಯಾಯಿಯಾಗಿದ್ದ ಎಸ್.ಆರ್.ಬೊಮ್ಮಾಯಿಯವರು ‘ರಾಯಿಸ್ಟ್’ ಎಂದೇ ಗುರುತಿಸಿಕೊಂಡಿದ್ದರು. ಹಾಗಾದರೆ ‘ರಾಯಿಸ್ಟ್ ಮಗ ರಾಯಿಸ್ಟ್ ಏಕಾಗಲಿಲ್ಲ’ ಎಂದು ತಮ್ಮ ತಂದೆಯನ್ನು ಕೇಳಬೇಕಿತ್ತಲ್ಲವೇ? ಕುಟುಂಬ ರಾಜಕಾರಣದ ಅಹಂಕಾರದಲ್ಲಿ ರಾಜಕೀಯ ಸಿದ್ಧಾಂತಗಳ ಪ್ರಾಥಮಿಕ ಅರಿವನ್ನೂ ಪಡೆಯದ, ಜನರ ಒಡನಾಟವನ್ನೂ ಹೊಂದದ ಅನನುಭವಿಗಳನ್ನು ಮತದಾರರು ಸಹಿಸಬೇಕಾಗಿದೆ!

ಈ ಮಧ್ಯೆ ಮಳೆಯ ಆರ್ಭಟಕ್ಕೆ ನಾಡು ತತ್ತರಿಸಿದೆ. ನಗರಗಳ ಜನರ ಪರದಾಟ ಒಂದು ಬಗೆಯದಾದರೆ, ಗ್ರಾಮೀಣ ಭಾಗದ ಬವಣೆ ಹೇಳತೀರದು. ಅತಿಮಳೆಗೆ ಮುಂಗಾರು ಬೆಳೆ ಬಲಿಯಾಗಿ, ಹಿಂಗಾರಿಗೆ ಸಿದ್ಧಗೊಳ್ಳಲೂ ಸವುಡಿಲ್ಲದೆ ಬಹುತೇಕ ರೈತರು ಬಸವಳಿದಿದ್ದಾರೆ. ಮೂರೂ ಪಕ್ಷಗಳು ಉಪಚುನಾವಣೆಯ ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿರುವಾಗ ರೈತರ ಸೋಲಿನ ಲೆಕ್ಕ ಕೇಳುವವರಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.